ಮಡಿವಾಳ

ಮಡಿವಾಳ

ತಲೆಬರಹ ಓದಿ, ಬೆಂಗಳೂರಿನ ಮಡಿವಾಳದ ಬಗ್ಗೆ ಬರೆಯಲಿಕ್ಕೆ ಹೊರಟೆ ಅಂದುಕೊಳ್ಳಬೇಡಿ. ಮಡಿವಾಳ ಹಕ್ಕಿಯ ಕೆಲವು ಚಿತ್ರಗಳನ್ನ ತೋರಿಸೋಣ ಅಂತ. ಕಳೆದವಾರ ಊರಿಗೆ ಹೋಗಿದ್ದಾಗ ಮಧ್ಯಾಹ್ನ ಗಡದ್ದಾಗಿ ಪತ್ರೊಡೆ ತಿಂದು, ಹಾಗೇ ತೂಕಡಿಸ್ತಾ ಇರಬೇಕಾದರೆ ಕಿಟಕಿಯಿಂದ ಹಳೇ ದೋಸ್ತಿಗಳ ಕಿರುಚಾಟ. ಕಿಟಕಿಯಿಂದ ನೋಡಿದಾಗ ಮಡಿವಾಳದ ದಂಪತಿಗಳಿಬ್ಬರು ತುಂಬಾ ಸಂತೋಷದಿಂದ ತನ್ನ ಹೊಸ ಹೆಣ್ಣು ಮಗಳನ್ನು ತೋರಿಸ್ತಾ ಇದ್ವು. ನಾನೂ ನೋಡಿ ಹೀಗೇ ವಾಪಾಸ್ ಬಂದು ಮಲಗಿಕೊಳ್ಳೋಣ ಅಂತಿದ್ದೆ.

ಅಷ್ಟರಲ್ಲಿ ಅಪ್ಪ ಹಕ್ಕಿ ಬಂದು "ಕೆಲಸಕ್ಕೆ ಬಾರದ ಕೀಟಗಳ ಫೋಟೋ ಎಲ್ಲಾ ತೆಗೀತೀಯ, ನನ್ನ ಮಗಳ ಫೋಟೋ ತೆಗೆಯೋದಿಲ್ವ ಅಂತ ಕೇಳ್ತು". ಅದಕ್ಕುತ್ತರವಾಗಿ ನಾನು "ದಿನ ಪೂರ್ತಿ ಆರಿಸ್ಕೊಂಡು ಹೊಟ್ಟೆ ತುಂಬ ತಿಂದು ತೇಗೋ ಕೀಟಗಳು ನಿನಗೆ ಕೆಲಸಕ್ಕೆ ಬರದೇ ಇರೋವಾ" ಅಂತ ಗದರಿಸಿದೆನಾದರೂ ಕ್ಯಾಮರಾ ಹಿಡಿದುಕೊಂಡು ಹೊರಗೆ ಹೋದೆ.

ಇವ್ರೇ ನಂಜೊತೆ ಮಾತಾಡಿದ ತಂದೆ ಹಕ್ಕಿ

ಹಕ್ಕಿ, ಹೂಗಳು ವರ್ಣರಂಜಿತವಾಗಿರುವುದರಿಂದ ಅವುಗಳ ಬಣ್ಣದ ಚಿತ್ರ ತೆಗೆದೇ ರೂಢಿ. ಈ ಹಕ್ಕಿ ಬಣ್ಣವೇ ಕಪ್ಪು ಬಿಳುಪಾದ್ದರಿಂದ, ಬಣ್ಣದ ಚಿತ್ರ ತೆಗೆದೇನು ಫಲ ಎಂಬ ಭಾವನೆ ಮನವನ್ನಾವರಿಸಿತು. ಹೆಣ್ಣು ಗಂಡಿನಂತೆ ಕಡು ಕಪ್ಪು ಬಣ್ಣ ಇಲ್ದೇ ಚುಕ್ಕೆಗಳಿರುವ ಬೂದಿ ಬಣ್ಣ ಇದ್ರೂ, ಕಪ್ಪು ಬಿಳುಪೇ ಸಾಕು ಅಂದುಕೊಂಡು ಪೋಸ್ ಕೊಡೋಕೆ ಹೇಳಿದೆ.

ಹಂಗೆ ಆ ಟೊಂಗೆ ಮೇಲೆ ಕೂತ್ಕೋ, ಕತ್ತು ಸ್ವಲ್ಪ ಎಡಕ್ಕೆ ತಿರ್ಸು

ಈಗ ಬಲಕ್ಕೆ ತಿರ್ಸು ಕತ್ತನ್ನ

ನೋಡೋಣ ಕುತ್ಕೆ ಒಂಚೂರು ಮೇಲಕ್ಕೆತ್ತು

ಬಾಲ ಎತ್ತಿ ಹಾಡ್ತೀಯಂತಲ್ಲ, ಹೆಂಗೆ ನೋಡೋಣ

ಬೆನ್ನು ತೋರ್ಸು

ಟೊಂಗೆ ಹೆಂಗೆ ಹಿಡ್ಕೊಂತೀಯ

ಇಷ್ಟರಲ್ಲೇ ಮರಿಹಕ್ಕಿಗೆ ಬೇಸರ ಬಂದಿರ್ಬೇಕು. ಅದಕ್ಕೇ ನನ್ನನ್ನುದ್ದೇಶಿಸಿ "ಬಣ್ಣ ಬಣ್ಣವಾಗಿ ಚೆನ್ನಾಗಿ ಬಂತಾ ಫೋಟೋ ಎಲ್ಲಾ"
ನಾನದಕ್ಕೆ ಉತ್ತರವಾಗಿ "ನೀನಿರೋದೆ ಕಪ್ಪು-ಬಿಳಿ, ಬಣ್ಣ ಎಲ್ಲಿಂದ ತರ್ಲಿ.

ಹೋಗು ಹಾಗಾದ್ರೆ ನಾನು ನಿಂಗೆ ಪೋಸ್ ಕೊಡೋದಿಲ್ಲ

ತಪ್ಪಾಯ್ತಮ್ಮ, ಬೇಜಾರ್ ಮಾಡ್ಕೋಬೇಡ, ಬಣ್ಣದ್ದೇ ತೆಗೀತೀನಿ ಬಾ

ಅದಕ್ಕೆ ಬೇಜಾರಾಗಬಾರದು ಅಂತ ಮೇಲಿನ ಬಣ್ಣದ ಚಿತ್ರ ತೆಗೆದು, ಮಲಗಿಕೊಳ್ಳೋಕೆ ಹೊರಟೆ. "ನನ್ನ ಕಥೆ ಹೇಳ್ತೀನಿ", ಅಂತ ಹಕ್ಕಿ ಕರೆದ್ರೂ ತೇಜಸ್ವಿಯವರ "ಹಕ್ಕಿ ಪುಕ್ಕ"ದ ೮೨ನೇ ಪುಟದಲ್ಲಿ ನಿನ್ನ ಬಗ್ಗೆ ಇದೆ, ಆಮೇಲೆ ಸಿಕ್ತೀನಿ ಅಂತ ಹೇಳಿ ಮಲಗೋಕೆ ಹೊರಟೆ.

ಹಕ್ಕಿ ಪುಸ್ತಕಕ್ಕೆ ೩೦೦ರೂ. ಕೊಟ್ಟು ಯಾರು ಓದ್ತಾರೆ ಅಂತ ನಿಮಗನ್ನಿಸಿದರೆ ಈ ಕೊಂಡಿನ ಓದ್ಕೊಳಿ: Oriental Magpie Robin. ಇಂಗ್ಲೀಷಲ್ಲಿದೆ, ನಿಮ್ಮ ಹಣೇಬರಹ!

Rating
No votes yet

Comments