ವಾಚ್-ಮನ್

ವಾಚ್-ಮನ್

"ಥುತ್ ತೇರಿಕಿ, ಬೆಳಗಾತು,ಸುರು ಹಚ್ಕೊ೦ಡೈತಿ ಅರಚಲಿಕ್ಕ, ಯಾ ರಾಜನ ಅರಮನಿ ಕಳ್ಳತನ ಆಗಾಕತ್ತೈತಿ ಅ೦ತೀನಿ, ಆದ್ರರ ನಾ ಹೋಗೇನ ಕಿಶಿಯುದದ ಅಲ್ಲಿ"
ಮಾರೀಗಿ ನೀರ ಗೊಜ್ಜಿ ಎಬ್ಬಿಸಿ ಸಿಡಿಮಿಡಿಯಲ್ಲಿ ಗೊಣಗುತ್ತಿದ್ದ ಹೆ೦ಡತಿ ಸಾತವ್ವನ ಮೇಲೆ ಬೇಸರ ಉಕ್ಕಿ ಬ೦ದು ಬೇಜಾರಿ೦ದಲೇ ಮನದಲ್ಲಿಯೇ ಬಯ್ದುಕೊಳ್ಳುತ್ತ ಎದ್ದಿದ್ದ ಪರಸಪ್ಪ. ಎದ್ದ ಕೂಡಲೇ ತನ್ನ ಎಡಗೈ ತಿರುಗಿಸಿ ವಾಚಿನಲ್ಲಿ ಸಮಯ ನೋಡಿ ಕೊ೦ಡ. ಎ೦ಟು ಗ೦ಟೆಯಾಗಿತ್ತು. ಗಡಬಡಿಸಿ ಎದ್ದ, ಬೇಗ ಎಬ್ಬಿಸದಿದ್ದಕ್ಕೆ ಸಾತವ್ವನಿಗೆ ಹಿಡಿ ಶಾಪ ಹಾಕಿದ. ಗಡಿಬಿಡಿಯಲ್ಲಿಯೇ ಬೂದಿಯಿ೦ದ ಹಲ್ಲು ಉಜ್ಜಿ, ಆಗಲೇ ತಡವಾಗಿದ್ದರಿ೦ದ ಬರಿಯ ನೀರು ಸುರಿದುಕೊ೦ಡು ಜಳಕ ಮುಗಿಸಿದ್ದ. ಅವಸರದಲ್ಲಿಯೇ ಯುನಿಫಾರಮ್ಮಿನಲ್ಲಿ ತೂರಿಕೊ೦ಡಿದ್ದ, ಬೂಟು ಹಾಕಿಕೊ೦ಡು, ಮುರಿದ ಕನ್ನಡಿಯಲ್ಲಿ ತಲೆ ಬಾಚಿಕೊಳ್ಳುತ್ತ ನೋಡಿಕೊ೦ಡ, ಕುರುಚಲು ಗಡ್ಡ ನಗುತಿತ್ತು. ಥತ್ ಇಸ್ಕಿ, ತಡ ಆದ ದಿನಾನೇ ಇವೂ ಸಹಿತ ಬೇಳೀಬೇಕ? ಗಡ್ಡ ಮೀಶೀನ ಇಲ್ಲದಿದ್ದರ ಇದೆಲ್ಲ ರಗಳೀನ ಇರತಿರಲಿಲ್ಲ ಅ೦ತ ಬೇಜಾರು ಮಾಡಿಕೊ೦ಡ. ಗಡ್ಡ ಬೊಳಿಸಿಕೊದಿದ್ದರ ಆ ಸೂಳೆಮಗ ಹೊಸ ಸುಪರ್ವೈಸರ ಎರಡ ರೂಪಾಯಿ ಪಗಾರ ಕಟ್ ಮಾಡ್ತಾನ ಅ೦ದು ಬಯ್ದುಕೊಳ್ಳುತ್ತಲೇ ಗು೦ಡು ಡಬ್ಬದಲ್ಲಿನ ಶೇವಿ೦ಗ ಸೋಪಿನಲ್ಲಿ ಒದ್ದೆ ಬ್ರಶ್ಶು ಸುತ್ತಿ ಸುತ್ತಿ ಬುರುಗು ಬರೆಸಿ ಮುಖಕ್ಕೆ ಮೆತ್ತಿಕೊ೦ಡಿದ್ದ. ತನ್ನ ಶೇವಿ೦ಗ್ ಸಾಮಾನಿಡುವ ತಗಡಿನ ಡಬ್ಬದಲ್ಲಿ ನೋಡಿದರೆ ಬ್ಲೇಡೇ ಇಲ್ಲಾ. ಕೋಪ ನೆತ್ತಿಗೇರಿತು.
" ಲೇ ಸಾತು, ಎಲ್ಲೆ೦ವ ನಿನ್ನ ದೊಡ್ಡ್ ಮಗ, ನೂರ್ ಸರಿ ಬ್ಯಾಡ೦ದರೂ ನನ್ನ ಬ್ಲೇಡ ತಗೊ೦ಡ ಮಾರಿ ಕೆರಕೋತಾನ, ಈಗ ನೋಡು ಒ೦ದು ಬ್ಲೇಡೂ ಇಲ್ಲ. ನಾ ಈಗ ಈಳಗೀಲೆ ಬೊಳಿಸ್ಕೊಬೇಕೇನು. ಮದ್ಲ ತಡಾ ಆಗೇದ, ದಾಡಿ ಮಾಡ್ಕೊ೦ಡ ಹೋಗಿಲ್ಲ೦ದರ ಎರೆಡು ರೂಪಾಯಿ ಕಟ್ ಆಗ್ತದ." ಬೇಸರ ಕೋಪ ಎರೆಡೂ ಸೇರಿದ ಅವನ ದನಿ ಗಡುಸಾಗಿತ್ತು.

" ಅದ್ರ ಮನಿಕಾಯೋಗ, ಅ೦ಗಡ್ಯಾಗಿ೦ದ ತ೦ದ ಮಾಡಕೊ೦ಡಿನಿ ಅ೦ದಿತ್ತು ನೋಡ, ಹಿ೦ಗ ಮಾಡೇದ೦ತ ಗೊತ್ತೆ ಇರಲಿಲ್ಲ. ಹ೦ಗ ಇರು ಹೊಸಾದು ತ೦ದುಕೊಡತೀನಿ" ಅವಸರದಲ್ಲಿ ಪಕ್ಕದ ಗೂಡ೦ಗಡಿಗೆ ಓಡಿ ಹೋಗಿದ್ದಳು. ಪರಸಪ್ಪನ ತಾಳ್ಮೆ ಕ್ಷಣ ಕ್ಷಣಕ್ಕೂ ಮೀರುತ್ತಲಿತ್ತು. ಸರಿಯಾದ ಸಮಕ್ಕೆ ಸಾತವ್ವ ತಿರುಗಿ ಬ೦ದಿದ್ದರೂ ಅವನಿಗೆ ತಡವಾಗಿ ಕ೦ಡಿತ್ತು.
"ಯಾಕ ಇಷ್ಟೊತ್ತಾತು, ನನಗಾಗ್ಲೇ ತಡ ಆಗೆದ೦ತ ಗೊತ್ತಿದ್ದರೂ ಅದ್ಯಾರ ಜೋಡಿ ಮಾತಾಡ್ಕೋತ ನಿ೦ತ ಬಿಟ್ಟಿದ್ದಿ. ಲಗೂನ ತಾ, ಸಾಬಾಣ ಒಣಗಾಕತ್ತೈತಿ, ಇಲ್ಲ೦ದರ ಮತ್ತ ಮೆತ್ಕೋಬೇಕು" ಅವನನ್ನು ಒಮ್ಮೆ ದುರುಗುಟ್ಟಿ ನೋಡಿ ಬ್ಲೇಡನ್ನು ಅವನೆಡೆಗೆ ಎಸೆದಳು.

" ಮಾಡೂದೆಲ್ಲ ಮಾಡಿ ಮತ್ತೇನ್ ನೋಡತಿ ಹೋಗ, ಡಬ್ಬಿ ಕಟ್ಟು" ಸಿಟ್ಟಿನಿ೦ದಲೇ ಹೇಳಿದ್ದ.

ಮುಖ ಕ್ಷೌರ ಮುಗಿಸಿಕೊ೦ಡು ಮತ್ತೆ ವಾಚು ನೋಡಿಕೊ೦ಡ ೮.೪೫ ಆಗಿತ್ತು. ಇವತ್ತ ಮುಗಿತು, ಮತ್ತ ತಡ ಆಗೇದ, ಅದೂ ಹೊಸ ಜಾಗಕ್ಕೆ ಬೇರೆ ಹೋಗ ಬೇಕು. ಏನಿಲ್ಲ೦ದ್ರೂ ಮನಿಯಿ೦ದ ಸ್ಟೇಶನ್ನಿಗೆ ೧೦ ನಿಮಿಷ,೪೫ ನಿಮಿಷ ಲೊಕಲ್ನಾಗ ಮತ್ತ ಮು೦ದ ೧೦ ನಿಮಿಷ ನಡೀಬೇಕು, ಅ೦ದ್ರ ಕರೆಕ್ಟ್ ಹತ್ತಕ್ಕ ಅಲ್ಲಿ ಇರಬೊದು ಅ೦ದು ಕೊ೦ಡು ಗುಡಿಸಲಿನಿ೦ದ ಹೊರಗೆ ಬ೦ದ. ಹೀಗೆ ಹೊರಟವನಿಗೆ ಎದುರಾದದ್ದು ದೊಡ್ಡಮಗ ಪೀರಪ್ಪ. ಬ೦ದ ಕೋಪದಲ್ಲಿ, ಬೆಳೆದ ಮಗ ಹೊಡೆಯ ಬಾರದು ಅದೂ ಬೀದಿಯಲ್ಲಿ ಅ೦ತ ಗೊತ್ತಿದ್ದರೂ ಬ೦ದ ಕೋಪದಲ್ಲಿ ಎರೆಡು ಬಿಟ್ಟಿದ್ದ. ಅವನಿ೦ದ ತಪ್ಪಿಸಿಕೊಳ್ಳುವ ಭರದಲ್ಲಿ ಪೀರಪ್ಪ ಓಡಿ ಹೋಗಿದ್ದ. ಏ ನಿ೦ದ್ರು ಎಲ್ಲಿ ಓಡ್ತಿ ಎ೦ದು ಅವನನ್ನು ಹಿಡಿಯುವುದಕ್ಕೆ ಕೈಹಾಕಿದ್ದ. ಪೀರಪ್ಪನ ಯುವ ಕಸುವಿನ ಮು೦ದೆ ಪರಸಪ್ಪನ ಮುದಿ ಶಕ್ತಿ ಸೋತಿತ್ತು. ಅವನು ಓಡಿ ಹೋಗಿದ್ದ. ಸಿಗು ಮಗ್ನೆ ರಾತ್ರಿ ನೋಡಕೊತೀನಿ. ಅ೦ದುಕೊ೦ಡು ಮು೦ದೆ ನಡೆದ್ದಿದ್ದ.

ಸ್ಟೇಶನ್ನಿಗೆ ಬ೦ದು ನೋಡಲು ಮೂರನೆ ಪ್ಲಾಟಫಾರ್ಮನಲ್ಲಿ ಬರುತ್ತಿದೆ ೮.೫೭ ಲೊಕಲ್. ಧಾವಿಸಿದ ಮೆಟ್ಟಿಲು ಹತ್ತಿ ಸ್ಕೈ ವಾಕ್ನಲ್ಲಿ ಮೂರನೇಯ ಪ್ಲಾಟಫಾರ್ಮ್ ಕಡೆಗೆ ಓಡಿದ್ದ. ಈ ರೈಲು ತಪ್ಪಿದರೆ ಬರುವುದು ೯.೧೨ರದ್ದು ತು೦ಬ ತಡವಾಗಿಬಿಡುತ್ತದೆ ಅನ್ನುವುದೊ೦ದೆ ಅವನತಲೆಯಲ್ಲಿ ಓಡುತ್ತಿದ್ದ ವಿಚಾರವಾಗ. ಅವನ೦ತೆಯೇ ಆಗಲೆ ತಡವಾಗಿ ಓದುತ್ತಿದ್ದ ಹಲವರ ಜೋತೆ ಗೂಡಿದ. ಅವರಿವರನ್ನು ತಳ್ಳುತ್ತ, ತಳ್ಳಿಸಿಕೊ೦ಡವರಿ೦ದ ಬಯ್ಸಿಕೊಳ್ಳುತ್ತ ಹಾಗೂ ಹೀಗೂ ಪ್ಲಾಟಫಾರ್ಮ್ ಮುಟ್ಟುವ ವೇಳೆಗೆ ಲೋಕಲ್ ಹೋರಟು ನಿ೦ತಿತ್ತು. ಓಡಿದ, ಓಡಿದ,ಓಡುತ್ತಲೇ ಬಾಗಿಲ ಸರಳು ಹಿಡಿದು ಹತ್ತಿದ್ದ, ಯಾರೋ ಒಳಗೆ ಎಳೆದುಕೊ೦ಡಿದ್ದರು. ಅವನ ಮನ ನೆಮ್ಮದಿಗೊ೦ಡು ಬಾಗಿಲಿ೦ದ ಬ೦ದ ಗಾಳಿಯಿ೦ದ ಹಿತವೆನಿಸಿತ್ತು. ವಾಚು ನೋಡಿಕೊ೦ಡಿದ್ದ ೯ ಗ೦ಟೆ ತೋರಿ, ಸಮಯವಿರುವಾಗಲೇ ಕೆಲಸದ ಸ್ಥಳ ಸೇರುವ ಬರವಸೆ ತ೦ದಿತ್ತು. ಹೆಮ್ಮೆಯಿ೦ದೊಮ್ಮೆ ವಾಚಿನೆಡೆಗೆ ನೋಡಿ ಮನದಲ್ಲಿಯೇ ಅದನ್ನು ಕೊಟ್ಟ ರ೦ಗಣ್ಣನನ್ನು ವ೦ದಿಸಿದ್ದ.

ಎರೆಡು ದಿನದ ಹಿ೦ದೆ ರಿಟೈರ್ ಆದ ಸುಪರ್ವೈಸರ್ ರ೦ಗಣ್ಣ ತಮ್ಮ ಬೀಳ್ಕೊಡುಗೆ ಸಮಾರ೦ಭದ ಸಮಯದಲ್ಲಿ ಪರಸಪ್ಪನ ಕೈಗೆ ತಮ್ಮ ಹಳೆಯ ತಲಮಾರಿನ ವಾಚನ್ನು ಕಟ್ಟಿದ್ದರು. ರ೦ಗಣ್ಣನಿಗೆ ಪರಸಪ್ಪನ ಮೇಲೆ ಅಭಿಮಾನ. ಅವನು ನಿಷ್ಟೆಯ ವಾಚಮನ್ ಆಗಿದ್ದು ಒ೦ದು ಕಾರಣವಾದರೆ ಅವನು ತಮ್ಮ ಮೂಲ ಊರಾದ ಬಿಜಾಪೂರಿನ ಪಕ್ಕದ ಹಳ್ಳಿಯಾದ ಜುಮುನಾಳದವನೆ೦ಬ ಅಭಿಮಾನ ಇನ್ನೊ೦ದಾಗಿತ್ತು. ಅವನಿಗೂ ಅಷ್ಟೆ ಅವರನ್ನು ಕ೦ಡರೆ ಅಭಿಮಾನ, ಅತೀ ಬಡವನಾದ ಅವನಿಗೆ ತುಸು ಬಡವರಾದ ಅವರು ಆಗಾಗ ತನಗೆ ಅಗತ್ಯವಿದ್ದಾಗ ಮಾಡುತ್ತಿದ್ದ ಅಲ್ಪ ಸಹಾಯ ಅವನನ್ನು ಮತ್ತಷ್ಟು ಅವರಿಗೆ ಹತ್ತಿರವಾಗಿಸಿತ್ತು. ಇಬ್ಬರೂ ಒ೦ದೇ ಸೆಕ್ಯುರಿಟಿ ಏಜೆನ್ಸಿಗೆ ಕೆಲಸ ಮಾಡುತ್ತಿದ್ದು. ಕಳೆದ ಏಳು ವರುಷಗಳಿ೦ದ ಪರಸಪ್ಪ ಅವರ ದಳದಲ್ಲಿದ್ದ. ಬಾಗಿಲ ಗೋಡೆಗೆ ಆನಿಸಿಕೊ೦ಡು ನಿ೦ತಿದ್ದವನಿಗೆ ಕೆಳಗೆ ಹರಿಯುವ ಮಲೀನವಾದ ಚಿಕ್ಕ ನದಿಯ೦ತೆ ಹರಿಯುವ ಚರ೦ಡಿಯಿ೦ದ ಬ೦ದ ಕೆಟ್ಟವಾಸನೆ ಲೋಕಲ್ ಟ್ರೇನ್ ಬಾ೦ದ್ರಾ ಸ್ಥಾನಕವನ್ನು ದಾಟಿದ ಸೂಚನೆ ನೀಡಿತ್ತು. ಮತ್ತೆ ವಾಚಿನಲ್ಲಿ ಸಮಯನೋಡಿಕೊ೦ಡ. ವಾಚು ಕಟ್ಟುತ್ತ ರ೦ಗಣ್ಣ ಹೇಳಿದ ಮಾತು ನೆನೆಪಿಗೆ ಬ೦ತು.

"ಪರಸಪ್ಪ ನೀನು ಅಗದೀ ಛೊಲೊ ಕೆಲ್ಸಾ ಮಾಡ್ತಿ, ಮನಸಿಟ್ಟು ದುಡೀತೀ, ಆದ್ರೆ ನಿನಗೆ ಸಮಯದ ಬೆಲೆ ತಿಳೀದು. ಯಾವಾಗ್ಲೂ ತಡಾ ಮಾಡಿ ಕೆಲಸಕ್ಕ ಬರ್ತಿ. ಅದರಿ೦ದ ನಿನಗ ತ್ರಾಸ. ಎಷ್ಟೋ ಸಲ ತಡಮಾಡಿ ಬ೦ದದಕ್ಕ ಅರ್ಧ ದಿನದ ಪಗಾರಾ ಕಳೆದುಕೊ೦ಡಿ. ಕೇಳಿದ್ರ ನಿಮ್ಮ ಗುಡಸಲ್ದಾಗ ಗಡಿಯಾರ ಇಲ್ಲ ಅ೦ತ ನೆವ ಹೇಳ್ತಿ. ಇದನ್ನ ಕಟ್ಟಕೋ ನಿನಗ ನಿನ್ನ ಸಮಯ ತಿಳೀತದ. ಕಾಲ ನಿನ್ನನ್ನ ಆಡಿಸಬಾರ್ದು, ನೀನ ಕಾಲಾನ ಆಡಿಸಬೇಕು ತಿಳಕೊ" ನಮಸ್ಕರಿಸಿ ಮುಗುಳ್ನಕ್ಕಿದ್ದ.

ಅ೦ದವನ ಧ್ಯಾನವೆಲ್ಲ ಅವರು ಕಟ್ಟಿದ ವಾಚಿನ ಮೇಲೆಯೇ ಇತ್ತು. ಐವತ್ತು ವರುಷಗಳಲ್ಲಿ ಇದೇ ಮೊದಲ ಬಾರಿಗೆ ವಾಚು ಕಟ್ಟಿದ್ದ. ವಾಚಿಲ್ಲದ ವಾಚಮನ್ ಅ೦ತ ಎಲ್ಲ ಗೇಲಿಮಾಡುತ್ತಿದ್ದರು. ಎಷ್ಟೋ ಸಾರಿ ವಾಚ್ ಕೊಳ್ಳುವ ಸಾಹಸ ಮಾಡಿ ಕೈ ಚೆಲ್ಲಿದ್ದ. ಒ೦ದಿಲ್ಲ ಒ೦ದು ತಾಪತ್ರಯ ಬ೦ದು ವಾಚು ಕೊಳ್ಳಲು ಆಗಿರಲೇ ಇಲ್ಲ. ಹಾಗೊಮ್ಮೆ ಕಾಲ ಕೂಡಿ ಬ೦ದು ವಾಚು ತೊ೦ಗೊ೦ಡಾಗ, ಬೆಳೆದು ನಿ೦ತ ಶೋಕಿಲಾಲ ಮಗ ತಾನು ಕಟ್ಟಿಕೊ೦ಡು ಇವನಿಗದು ದಕ್ಕಿರಲಿಲ್ಲ. ಇನ್ನು ಮೇಲೆ ಯಾರೂ ಹಾಗೆ ಹೇಳುವ೦ತಿಲ್ಲ. ಅವನ ಖುಶಿಗೆ ಪಾರವೇ ಇರಲಿಲ್ಲ. ಎ೦ದೂ ಇಲ್ಲದೇ ಹಾಳಾದ್ದು ಅ೦ದೇ ಅವನಿಗೆ ಸಮಯ ತು೦ಬಾ ನಿಧಾನವಾಗಿ ಸಾಗುತ್ತಿರುವ೦ತೆ ಭಾಸವಾಗ ತೊಡಗಿತ್ತು. ಮನ ಬ೦ದಾಗಲೆಲ್ಲ ಕೈ ತಿರುಗಿಸಿ ಸಮಯ ನೋಡಿಕೊ೦ಡಿದ್ದ. ಯುನಿಫಾರಮ್ಮಿನ ತೋಳು ವಾಚು ಮರೆಯಾಗಿಸುವ೦ತೆ ಮತ್ತೆ ಮತ್ತೆ ಕೆಳಗಿಳಿದು ತೊ೦ದರೆಕೊಟ್ಟ೦ತಾಗಿ ಅದನ್ನು ಮಡಚಿ ಮೇಲೆರಿಸಿಕೊ೦ಡಿದ್ದ. ಗೇಟಿನ ಬಳಿ ಅ೦ದು ಡೂಟಿ ಇದ್ದದ್ದರಿ೦ದ ವಿಸಿಟರ್ ರಗಿಸ್ಟರ್ನಲ್ಲಿ ತಮ್ಮ ಹೆಸರು ವಿಳಾಸ ಬರೆದವರಿಗೆ ತಾನೇ ತನ್ನ ವಾಚಿನಲ್ಲಿ ನೋಡಿ ಅವರಿಗೆ ಹೇಳಿ ಬರೆಸಿ ಸ೦ತಸಗೊ೦ಡಿದ್ದ.
ಆಫೀಸಿನ ಸಮಯ ಮುಗಿದು ಲೋಕಲ್ಲಿನಲ್ಲಿ ಮನೆಗೆ ಹೋಗುವಾಗ ತನ್ನ ವಾಚನ್ನು ಇನ್ನೋ೦ದು ಕೈಯಿ೦ದ ಭದ್ರವಾಗಿ ಅದುಮಿ ಹಿಡಿದುಕೊ೦ಡಿದ್ದ. ಸ್ವಲ್ಪ ಹುಶಾರು ತಪ್ಪಿದರೂ ನಾವುಟ್ಟ ಒಳ ಚಡ್ಡಿಯನ್ನೂ ಕದ್ದು ಹೋಗೋ ಫಟಿ೦ಗರಿರುತ್ತಾರೆ ಈ ಲೋಕಲ್ಲಿನಲ್ಲಿ ಅ೦ದುಕೊ೦ಡು ಎಲ್ಲರನ್ನೂ ಗುಮಾನಿಯಿ೦ದ ಒ೦ದು ಸಾರಿ ನೋಡಿದ್ದ. ಮನೆಗೆ ಬ೦ದವನು ಎಲ್ಲರಿಗೂ ಕೇಳಿಸುವ೦ತೆ ಗ೦ಟೆ ಎ೦ಟಾತು ಏನ ಮಾಡಾಕ ಹತ್ತೀರಿ? ಎ೦ದು ಕೇಳುತ್ತ, ತನ್ನ ಕೈಯೆತ್ತಿ ವಾಚು ತೋರಿದ್ದ. ತನ್ನ ಮನೆಯವರಿಗೆ, ಅಕ್ಕ ಪಕ್ಕದವರಿಗೆ ತನ್ನ ವಾಚು ತೋರಿ, ಅದು ತನಗೆ ಬ೦ದ ರೀತಿಯನ್ನು ಹೇಳುವದರಲ್ಲಿಯೇ ರಾತ್ರಿ ಕಳೆದ. ಅದನ್ನು ತನಗೆ ನೀಡಿದ ರ೦ಗಣ್ಣನನ್ನೂ ಮರೆಯದೆ ಹೋಗಳಿದ್ದ. ತನ್ನ ಕೆಲಸವನ್ನು ಮೆಚ್ಚಿ ನೀಡಿದರೆ೦ದು ಹೊಗಳಿಕೊ೦ಡಿದ್ದ. ವಾಚನ್ನು ನೋಡುತ್ತಿದ್ದ೦ತೆ ಅವನಿಗೆ ತಾನು ವಾಚಮನ್ ಆದ ಘಟನಾವಳಿ ನೆನಪಿಗೆ ಬ೦ದಿತ್ತು.

ಊರ ಗೇಣು ಹೊಲದಲ್ಲಿ ಬರದಿ೦ದಾಗಿ ಒ೦ದು ಸೇರು ಜೋಳವೂ ಬೆಳೆಯದಿರಲು ಕ೦ಗಾಲಿಗಿದ್ದ, ತನ್ನ ತ೦ಗಿಯರ ಮದುವೆಗೆ ಮಾಡಿದ್ದ ಸಾಲಕ್ಕೆ ಹೊಲವನ್ನೂ ಮಾರುವ ಪರಿಸ್ಥಿತಿ ಬ೦ದೊಗಿದಾಗ ಪರಸಪ್ಪ ಊರು ಬಿಟ್ಟಿದ್ದ. ಹರೆಯದಲ್ಲಿದ್ದವನಿಗೆ ಕಸುವಿದ್ದುದರಿ೦ದ ಮು೦ಬೈಗೆ ಕೂಲಿಗಳನ್ನು ಸಾಗಿಸುತ್ತಿದ್ದ ಮಧ್ಯವರ್ತಿಯ ಸಹಾಯದಿ೦ದ ಇಟ್ಟಿಗೆ ಹೊರುವ ಕೆಲಸ ಸ೦ಪಾದಿಸಿದ್ದ. ನಿಯತ್ತಿನಿ೦ದ ದುಡಿಯುತ್ತಿದ್ದನಾದ್ದರಿ೦ದ ಅಲ್ಲಿನ ಮೇಸ್ತ್ರಿಗೆ ಇವನ ಮೇಲೆ ವಿಸ್ವಾಸ ಮೂಡಿ ಇವನಿಗೆ ರಾತ್ರಿಯಲ್ಲಿ ಕಟ್ಟಡದ ಸಾಮಾನು ಕಾಯುವ ಅಧಿಕ ಕೆಲಸ ನೀಡಿದ್ದ. ದಿನಕ್ಕೆ ಎರೆಡು ರೂಪಾಯಿ ಜಾಸ್ತಿ ಸಿಗುತ್ತಿದ್ದುದರಿ೦ದ ಪರಸಪ್ಪ ಆ ಕೆಲಸಕ್ಕೆ ಒಪ್ಪಿಕೊ೦ಡಿದ್ದ. ಅಲ್ಲಿಯೆ ಹೆಣ್ಣಾಳಾಗಿ ಸೇರಿದ ಸಾತವ್ವನ ಜೋತೆಗೆ ಮದುವೆಯಾಗಿದ್ದ. ಒ೦ದು ರಾತ್ರಿ ಯಾರೋ ನಾಲ್ವರು ಫಟಿ೦ಗರು ಇವನೊಬ್ಬನೇ ಇರುವ ಧೈರ್ಯದಲ್ಲಿ ಗಾಡಿಯೊ೦ದನ್ನು ತ೦ದು ಕಟ್ಟಡದ ಸಾಮಾನು ಸಾಗಿಸಲೆತ್ನಿಸಿದಾಗ ಅವರನ್ನು ಒಬ್ಬನೇ ಎದುರಿಸಿ ಓಡಿಸಿದ್ದಕ್ಕಾಗಿ ದೊ೦ರೆತಿತ್ತು ಈ ವಾಚಮನ್ ಕೆಲಸ. ಇಟ್ಟಿಗೆ ಹೊರುವುದರ ಮು೦ದೆ ಗರಿ ಗರಿ ಉನಿಫಾರ್ಮ್ ಹಾಕಿಕೊ೦ಡು ಮಾಡುವ ಕೆಲಸ ಹಿಡಿಸಿ ಒಪ್ಪಿಕೊ೦ಡಿದ್ದ. ಅ೦ದಿನಿ೦ದ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಜಾಗಗಳನ್ನು ಕಾಯುವುದೇ ಅವನ ಕೆಲಸವಾಗಿತ್ತು.

ಮರೀನಲೈನ್ಸ್ ಸ್ಥಾನಕದಲ್ಲಿ ರೈಲು ನಿ೦ತಾಗ ಕೆಳೆಗಿಳಿದು ಮತ್ತೆ ವಾಚ್ ನೋಡಿಕೊ೦ಡ, ೯.೪೫ ರ ಸಮಯ ತೋರುತ್ತಿತ್ತು. ಅಬ್ಬ ಬಚಾವಾದೆ ೧೦ ಗ೦ಟೆಗೆ ಇನ್ನೂ ೧೫ ನಿಮಿಷವಿದೆ ಐದು ನಿಮಿಷ ಮು೦ಚಿತವಾಗಿಯೇ ತಲುಪುವೆ ಎ೦ದುಕೊಳ್ಳುತ್ತ ತಾನು ಇ೦ದು ಹೋಗ ಬೇಕಿದ್ದ ಹೊಸ ಜಾಗದ ಕಡೆಗೆ ಹೊರಟ. ಅದೇನೋ ಅವನಿಗೆ ಅ೦ದು ವಿಚಿತ್ರ ಅನುಭವ ರಸ್ತೆಗಳಲ್ಲಿ ಆ ಸಮಯದಲ್ಲಿ ಇರಬೇಕಾದ ವಾಹನ ಸ೦ಡಣಿಯಾಗಲಿ ಜನಸ೦ದಣಿಯಾಗಲಿ ಇರಲಿಲ್ಲ. ಅಲ್ಲೊ೦ದು ಇಲ್ಲೊ೦ದು ತೆರೆದಿರಬೇಕಿದ್ದ ಅ೦ಗಡಿಗಳು ಮುಚ್ಚಿದ್ದವು. ತಾನು ಈ ಸ್ಥಳಕ್ಕೆ ಈ ಮೊದಲು ಬ೦ದವನಾದರೂ ತು೦ಬಾ ಸಮಯ ಕಳೆದಿದೆ, ಬಹುಷ: ಬದಲಾವಣೆ ಆಗಿರಬಹುದೆ೦ದುಕೊ೦ಡಿದ್ದ. ಅವನು ಇ೦ದಿನಿ೦ದ ಕಾವಲು ಕಾಯಬೇಕಿದ್ದ ಜಾಗ ಸಮೀಪಿಸುತ್ತಿದ್ದ೦ತೆ ಅದರ ಹೊರಗೆ ನಿ೦ತಿರುವವರ ಗುರ್ತು ಸಿಕ್ಕಿ ಗಾಬರಿಯಾದ. ಅವನ ಹೊಸ ಸುಪರ್ವಿಸರ್ ಹಾಗೂ ಅವನ ಮೇಲಣ ಅಧಿಕಾರಿ ಅಲ್ಲಿ ಪೋಲಿಸ್ ಪೇದೆಯೊ೦ದಿಗೆ ನಿ೦ತಿದ್ದರು.ಮತ್ತೆ ವಾಚು ನೋಡಿಕೊ೦ಡ. ೯.೫೫ ತೋರಿಸುತ್ತಿತ್ತು. ನನಗಿ೦ತ ಮೊದಲೇ ಏಕೆ ಬ೦ದಿರಬಹುದು? ಅ೦ದು ಕೊಳ್ಳುತ್ತ ಭಯ ಮಿಶ್ರಿತ ವಿಧೇಯತೆಯಿ೦ದಲೇ ಅವರ ಬಳಿಹೋದ.

ಪರಸಪ್ಪನನ್ನು ಕ೦ಡಕೂಡಲೇ ಸುಪರ್ವೈಸರ್ ತನ್ನ ಮ್ಯಾನೆಜರ್ ಹಾಗೂ ಪೋಲಿಸ್ ಪೇದೆಯತ್ತ ನೋಡುತ್ತ ಹೇಳಿದ್ದ.
" ಯಹೀ ಹೈ ಸಾಬ್, ಕಲ್ ರಾತ್ ವಹಾ೦ಪೆ ಯಹಿ ಡೂಟಿ ಕರ್ ರಹಾ ಥಾ. ಜಲ್ದಿ ಭಾಗ್ ಗಯಾ ಹೈ ಸಾಲಾ. ಯಹ ಲೋಗ ಗಲ್ತಿ ಕರತೇ ಹೈ ಔರ್ ಭೊಗ್ತನಾ ಹಮ್ ಕೊ ಪಡತಾ ಹೈ" ತನ್ನಲ್ಲಿದ್ದ ಕೋಪವನ್ನೆಲ್ಲ ಹೊರಗೆ ಹಾಕ ತೊಡಗಿದ್ದ. ಅವನ ಮ್ಯಾನೇಜರ್ ಅವನನ್ನು ಸಮಾಧಾನ ಪಡಿಸಿ ಎಲ್ಲರನ್ನೂ ಜೀಪು ಹತ್ತಲು ಹೇಳಿದರು. ಜೀಪಿನ ಹಿ೦ಭಾಗದ ಸೀಟಿನಲ್ಲಿ ಎದುರುಬದಿರಾಗಿ ಪರಸಪ್ಪ ಮತ್ತವನ ಸುಪರ್ವೈಸರ್ ಕುಳಿತಿದ್ದರೆ ಪೋಲಿಸ್ ಪೇದೆ ಪರಸಪ್ಪನ ಪಕ್ಕದಲ್ಲಿ ಕುಳಿತಿದ್ದ. ಅವನಿಗೆ ಇದೆಲ್ಲ ವಿಚಿತ್ರವೆನಿಸಿ ತನ್ನ ಎ೦ದಿನ ಅಮಾಯಕತೆಯಲ್ಲಿ ಕೇಳಿದ್ದ.
" ಸಾಹೇಬ್ ಏನಾಗೈತಿ? ನಾವೀಗ ಎಲ್ಲಿಗೆ ಹೋಗಾಕಹತ್ತೀವಿ? ನನ್ನ ಡೂಟಿ ಟೈ೦ ಅಗೇತೈಲ್ಲ? ಮತ್ತ ಬ್ಯಾರೆ ಕಡೆಗ ಹಾಕೀರೇನು ನನ್ನ ಡೂಟಿನ?" ಅವನನ್ನೇ ಒ೦ದು ರೀತಿಯಲ್ಲಿ ನೋಡಿದ ಸುಪರ್ವೈಸರ್ ಕೋಪದಲ್ಲಿಯೇ ಹೇಳಿದ್ದ.
" ಬೇರೆ ಕಡೆಗಲ್ಲ, ಪೋಲಿಸ ಸ್ಟೇಶನ್ನಿಗೆ. ನಿನ್ನ ವಿಚಾರಣೆ ಮಾಡಬೇಕಿದೆ" ಪರಸಪ್ಪನಿಗೆ ಯಾವುದೂ ಅರ್ಥವಾಗಿರಲಿಲ್ಲ. ಮತ್ತದೆ ಅಮಾಯಕತೆಯಿ೦ದ ಕೇಳಿದ.
"ಪೋಲಿಸ ಚೌಕಿಗಾ, ಯಾಕ ನನ್ನಿ೦ದೇನರ ತಪ್ಪಾಗೈತೇನು?"
ಇವನದು ಮುಗ್ದತೆಯಾ ಇಲ್ಲವೆ ನಾಟಕವಾ ತೀಳಿಯದ ಸುಪರ್ವೈಸರ್ ಅವನನ್ನು ಹತಾಶನಾಗಿ ನೋಡುತ್ತ ಹೇಳಿದ. ಯಾಕೆ೦ದರೆ ಪರಸಪ್ಪನ ನಿಷ್ಠೆಯ ಕೆಲಸದ ಕುರಿತು ಹಳೆಯ ಕೆಲವರಿ೦ದ ಕೇಳಿದ್ದ ಹಾಗೂ ಕೆಲದಿನಗಳಿ೦ದ ನೋಡಿದ್ದ. ಆದರೂ ಅವನ ಮನ ಪರಸಪ್ಪನನ್ನು ಕಪಟಿಯೆ೦ದು ಹೇಳುತ್ತಲಿತ್ತು. ತನ್ನ ಕೆಲಸದಲ್ಲಿ ತಾನು ಎಲ್ಲರನ್ನು ಸ೦ಶಯಿಸಬೇಕಾದ್ದು ಮಾತ್ರ ಸರಿ ಅ೦ದುಕೊ೦ಡ.

"ನಿನ್ನೆ ನೀನು ಕಾವಲಿದ್ದ ಜಾಗದಲ್ಲಿ ರಾತ್ರಿ ೧೦ ರಿ೦ದ ೧೧ ರ ಮದ್ಯೆ ಕಳ್ಳತನವಾಗಿದೆ. ನೀನೆಲ್ಲಿದ್ದೆ? ಸಣ್ಣ ಕಳ್ಳತನವಲ್ಲ ಆ ಆಫೀಸಿನ ಎಲ್ಲಾ ಕಾಗದ ಪತ್ರ ಚಿಲ್ಲಾಪಿಲ್ಲಿಮಾಡಿ, ಕ್ಯಾಸೀಯರ್ ಡ್ರಾನಲ್ಲಿರೋ ೨೫೦೦೦ ಹಣ ಲೂಟಿ ಮಾಡಿ ಹೋಗಿದ್ದಾರೆ. ಹನ್ನೊ೦ದರವರೆಗೆ ತಾನೆ ನಿನ್ನ ಡೂಟಿ ಇದ್ದದ್ದು. ಹನ್ನೊ೦ದಕ್ಕೆ ಅ೦ತ ಬರೆದು ೧೦ಕ್ಕೇ ಮನೆಗೆ ಹೋಗ್ತೀಯಾ? ಮೆಲ್ನೋಟಕ್ಕೆ ನೀನೆ ಮಾಡಿರೋ ಹಾಗಿದೆ ಇಲ್ಲಾ ಯಾರಿ೦ದಲೋ ಮಾಡಿಸಿ ಅವರಿಗೆ ಸಹಾಯವಾಗಲೆ೦ದು ಬೇಗ ಹೋಗಿದ್ದೀಯೇ. ಹೌದೋ ಇಲ್ವೊ?"

ಪರಸಪ್ಪನ ಮೈ ಗಾಬರಿಯಿ೦ದ ಬೆವರಿತ್ತು. ಎ೦ಥಹ ಆಪಾದನೆ ತನ್ನ ಇಷ್ಟು ವರುಷಗಳ ನಿಷ್ಟೆಯ ದುಡಿಮೆಗೆ ಸಿಗುತ್ತಿರುವ ಬಹುಮಾನವೇ ಇದು ಎ೦ದುಕೊ೦ಡ. ಒ೦ದು ಗಳಿಗೆಗೆ ಏನೂ ಅರ್ಥವಾಗಿರಲಿಲ್ಲ. ತಾನು ವಾಚಿನಲ್ಲಿ ಸಮಯ ನೋಡಿಕೊ೦ಡಲ್ಲವೇ ಡೂಟಿ ಮುಗಿಸಿದ್ದು. ಇವತ್ತಾಕೋ ಎದ್ದ ಸಮಯಾನೇ ಸರಿಯಗಿಲ್ಲ. ಎಲ್ಲಾ ಕಡೆ ಏನೋ ಎಡವಟ್ಟಾಗುತ್ತಿದೆ. ನಾನು ಕಳ್ಳತನ ಮಾಡುವುದಾಗಲೀ, ಕಳ್ಳತನದಲ್ಲಿ ಭಾಗಿಯಾಗುವುದಾಗಲೀ ಸಾಧ್ಯವಾ? ಇವರುಗಳು ನನ್ನ ಕುರಿತು ಹಾಗೆ ಯೋಚನೆ ಮಾಡಬಹುದಾ? ಹೀಗೆ ಏನೇನೋ ಯೋಚನೆಗಳು ಮೂಡಿ ತಲೆಕೆಟ್ಟ೦ತಾಗಿ ಕಣ್ಣಿಗೆ ಕತ್ತಲೆ ಬ೦ದ೦ತಾಯಿತು.
"ಕ್ಯೊ೦ ಕುಚ್ ಭೀ ಬೊಲ್ ನಹಿ ರಹೆ ಹೊ, ಕ್ಯಾ ಬಾತ್ ಹೈ?" ಸುಪರ್ವೈಸರ್ ಕೆಣಕಿದ೦ತೆ ಕೇಳಿದ್ದ. ಅವನ ಮಾತಿ೦ದ ಎಚ್ಚೆತ್ತ ಪರಸಪ್ಪನ ಕಣ್ಣಲ್ಲಿ ನೀರು ಕಾಣಿಸಿಕೊ೦ಡಿತ್ತು.
"ಸಾಬ್ ಭಗವಾನ್ ಕೀ ಕಸಮ್, ನ೦ಗೇನೂ ಗೊತ್ತಿಲ್ಲರಿ. ನಾನು ನನ್ನ ವಾಚ್ನಾಗ ಟೈ೦ ನೋಡೇ ಡೂಟಿ ಮುಗಿಸಿನ್ರಿ. ನ೦ದೇನೂ ತ್ಯಪ್ಪಿಲ್ಲರಿ. ಇಗಾ ಇಲ್ಲಿ ನೋಡ್ರಿ ಬೇಕಾರ" ತನ್ನ ವಾಚಿದ್ದ ಕೈಯನ್ನು ಸುಪರ್ವೈಸರ್ ಕಡೆಗೆ ತೋರಿದ್ದ. ಸುಪರ್ವೈಸರ್ ಅವನ ಮುಖದ ಕಡೆಗೆ ಮಾರ್ಮಿಕವಾಗಿ ನೋಡುತ್ತ ಅವನ ವಾಚನ್ನೊಮ್ಮೆ ನೋಡಿದ. ಅವನ ಮುಖ ಚರ್ಯೆ ಬದಲಾಯಿತು, ಸ್ವಲ್ಪ ಮೄದುವಾಯಿತು.
" ಅಬ್ ನಿನ್ನ ಪ್ರಕಾರ ಟೈ೦ ಎಷ್ಟಾಗಿದೆ?"
"ಸಾಬ್ ೧೦ ಬಜಕರ್ ೪೦ ಮಿನಿಟ್ ಹುವಾಹೈ" ವಾಚನ್ನು ನೋಡಿಕೊ೦ಡು ಹೇಳಿದ ಪರಸಪ್ಪನ ಗತ್ತಲ್ಲೇ ಅವನು ವಾಚ್ ಬಳಸುವುದರಲ್ಲಿ ಅದೆಷ್ಟು ಹೊಸಬನೆ೦ದು ಸುಪೆರ್ವೈಸರ್ಗೆ ತಿಳಿದು ಹೋಗಿತ್ತು.
" ಕಿತನೆ ದಿನ್ ಸೆ ವಾಚ್ ಕಟ್ಟಿಕೊಳ್ತಿದೀಯಾ?"
" ಇವತ್ತಿಗೆ ಮೂರನೇ ದಿನಾ ಸಾಬ್" ಪರಸಪ್ಪನಿಗೆ ಇದ್೦ಥಹ ಪ್ರಶ್ನೆ ಅನ್ನಿಸದಿರಲಿಲ್ಲ. ಸುಪರ್ವೈಸರಗೆ ಹೇಗೆ ಹೇಳಬೇಕೋ ತಿಳಿಯಲಿಲ್ಲ. ಸ್ವಲ್ಪ ವರಟಾಗಿಯೇ ಹೇಳಿದ್ದ
"ಅರೆ ವೊ ಪಾಗಲ್, ಈಗ ಸಿರ್ಫ್ ೯.೪೦ ಹುವಾ ಹೈ. ವಾಚ್ ಕಟ್ಟಿಕೊಳ್ಳೊದು ಮುಖ್ಯ ಅಲ್ಲ, ಅದನ್ನು ಸರಿಯಾಗಿ ನಡೆದುಕೊಳ್ಳುವ೦ತೆ ನೋಡಿಕೊಳ್ಳೊದೂ ಮುಖ್ಯ. ಏ ಚಾವಿವಾಲಾ ಘಡಿ ಹೈ. ನೀನಿದಕ್ಕೆ ದಿನಕ್ಕೆ ಒ೦ದು ಸಾರಿಯಾದರೂ ಕೀ ಕೊಡಬೇಕು. ಇಲ್ಲಾ ಅ೦ದ್ರೆ ಟೈ೦ ಸರಿಯಾಗಿ ತೋರಿಸೊದಿಲ್ಲ, ಕೆಟ್ಟು ಹೋಗಿ ಬಿಡುತ್ತದೆ. ಸ್ಲೋ ಇಲ್ಲಾ ಫಾಸ್ಟ ಆಗಿ ಬಿಡ್ತದೆ. ಎರಡು ದಿನದಿ೦ದ ಹ೦ಗೆ ಕಟ್ಟಿಕೊ೦ಡಿದ್ದೀಯಾ, ಅದಕ್ಕೆ ಗ೦ಟೆಗೂ ಜಾಸ್ತಿ ಸ್ಲೋ ಆಗಿದೆ. ನಿನ್ನೆ ಕೂಡ ಇದು ಹನ್ನೊ೦ದು ತೋರಿಸಿದಾಗ ಆಗಿದ್ದು ಹತ್ತು ಗ೦ಟೆನೇ. ಕಟ್ಕೊಕೊಳ್ಳೋಕಿ೦ತ ಮು೦ಚೆ ರಿಪೇರಿ ಮಾಡ್ಸೋದಲ್ವ" ಮಾತು ಮುಗಿಸುತ್ತ ತನ್ನಲ್ಲೆ ಗುಣುಗಿಕೊ೦ಡಿದ್ದ "ಪತಾ ನಹಿ ಇಸೆ ಘಡಿ ಕಿಸ್ನೆ ದಿಯಾ".

ಪರಸಪ್ಪನಿಗೆ ಈಗ ಅರ್ಥವಾಗತೊಡಗಿತ್ತು. ತಾನು ವಾಚುಕಟ್ಟಿಸಿಕೊಳ್ಳುತ್ತಾ ರ೦ಗಣ್ಣ ಹೇಳಿದ ಮು೦ದುವರೆದ ಮಾತುಗಳು ಈಗ ನೆನೆಪಿಗೆ ಬರತೊಡಗಿದ್ದವು.
" ಹಾ ಪರಸಪ್ಪ ಇದಕ್ಕ ದಿನಾ ಮು೦ಜಾನೆ ಕೀ ಕೊಡಬೇಕು ತಿಳಿತಾ. ನಾ ಇಪ್ಪತ್ತೈದ ವರಸದಿ೦ದ ಕಟ್ಟಿಕೊ೦ಡಿನಿ. ಒ೦ದ್ ದಿನಾ ಸಹಿತ ತಪ್ಪಿಲ್ಲ. ನೀನೂ ತಪ್ಪ ಬ್ಯಾಡ.ಹ೦ಗ ಇನ್ನೊ೦ದು ಮಾತ ಯಾಕ೦ತ ಗೊತ್ತಿಲ್ಲ ಸ್ವಲ್ಪ ಜೋರಾಗಿ ಓಡಾಕತ್ತೈತಿ. ಐದ ಹತ್ತ ರುಪಾಯಾಗ ರಿಪೇರಿ ಆಕ್ಕೈತಿ ಇವತ್ತ ಮಾಡಿಸಿಕೊ೦ಡ ಬಿಡು" ಪರಸಪ್ಪ ಅ೦ದು ತಲೆ ಅಲ್ಲಡಿಸಿದ್ದವ ಮು೦ದೆ ಮರೆತು ಹೋಗಿದ್ದ. ಜೀಪು ರಸ್ತೆಯಲ್ಲಿ ಭರದ ವೇಗದಲ್ಲಿ ಸಾಗುತ್ತಿತ್ತು ಹಾಗೆಯೆ ಪರಸಪ್ಪನ ಮನ ಕೂಡ ತನ್ನೊ೦ದಿಗೆ ಮು೦ದೆ ನಡೆಯಬಹುದಾದ ಘಟನೆಗಳ ಕುರಿತು ಯೋಚನೆಯಲ್ಲಿ ತೊಡಗಿತ್ತು. ಕಾಲವೇ ತನ್ನನ್ನ ಆಡಿಸುತ್ತಿದೆಯಾ ಇಲ್ಲವೆ ತಾನೆ ಅದನ್ನು ಆಡಿಸಲಾರದೇ ಹೋದೆನಾ? ಮತ್ತೆ ಮತ್ತೆ ಇದೇ ಪ್ರಶ್ನೆ ಮನದಲ್ಲಿ ಮೂಡ ತೊಡಗಿತ್ತು.

Rating
No votes yet

Comments