ಹೀಗೊಂದು ಜೀವನಚರಿತ್ರೆ

ಹೀಗೊಂದು ಜೀವನಚರಿತ್ರೆ

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ನಾನಾಗ ಐದನೇ ತರಗತಿಯಲ್ಲಿ ಓದುತ್ತಿದ್ದಿರಬಹುದು. ಇಡೀ ಬಯಲು ಸೀಮೆಯಲ್ಲಿ ಬರಗಾಲದ ಕರಾಳ ಛಾಯೆ ಆವರಿಸಿತ್ತು. ಇತ್ತ ಸುಭಿಕ್ಷವೂ ಅಲ್ಲ; ಅತ್ತ ದುರ್ಭಿಕ್ಷವೂ ಅಲ್ಲದ ಪರಿಸ್ಥಿತಿ. ಆದರೂ ನಾಳೆ ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿತ್ತು. ಬಹುತೇಕ ಎಲ್ಲಾ ವರ್ಗದ ರೈತರೂ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರು. ಆಗ ಎಲ್ಲರ ಆಶಾಕಿರಣವಾಗಿ ಮೂಡಿಬಂದಿದ್ದೆಂದರೆ ರೇಷ್ಮೆಕೃಷಿ. ನಮ್ಮ ತಂದೆಯವರೂ ರೇಷ್ಮೆ ಬೆಳೆಯಲು ನಿರ್ಧರಿಸಿದರಾದರೂ ಅದರ ಪ್ರಾಥಮಿಕ ಜ್ಞಾನವೂ ಇಲ್ಲದ್ದರಿಂದ ಪ್ರಾರಂಭದಲ್ಲಿ ಹೆಚ್ಚು ತೊಡಕನ್ನು ಎದುರಿಸಬೇಕಾಯಿತು. ಇಂತಹ ಸಂದರ್ಭದಲ್ಲಿ ನಮ್ಮ ನೆರವಿಗೆ ಬಂದವರು ದೊಡ್ಡಣ್ಣ ಎಂಬ ರೇಷ್ಮೆ ಬೆಳೆಗಾರರು. ದೊಡ್ಡಣ್ಣ ನಮ್ಮ ಮನೆಗೆ ಪರಿಚಿತರಾಗಿದ್ದರೂ ಅಷ್ಟು ನಿಕಟವಾಗಿರಲಿಲ್ಲ. ಒಂದೆರಡು ವರ್ಷಗಳಲ್ಲಿಯೇ ರೇಷ್ಮೆಕೃಷಿಯಲ್ಲಿ ಯಶಸ್ವಿಯಾಗಿ ರೇಷ್ಮೆ ಇಲಾಖೆಯಿಂದ ಪ್ರಗತಿಪರ ರೈತರೆಂದು ಗುರುತಿಸಲ್ಪಟ್ಟಿದ್ದರು. ರೇಷ್ಮೆ ಇಲಾಖೆಯವರು ಇವರ ನೆರವನ್ನು ಪಡೆದು ರೇಷ್ಮೆಕೃಷಿಯನ್ನು ಜನಪ್ರಿಯಗೊಳಿಸಲು ಯತ್ನಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ದೊಡ್ಡಣ್ಣ ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ನಮಗೆ ಎಲ್ಲ ನೆರವನ್ನು ನೀಡಲು ಮುಂದೆ ಬಂದರು.

ನಮ್ಮ ತೋಟದಿಂದ ಎರಡು ಕಿಲೋಮೀಟರ್ ದೂರದಲ್ಲಿ ದೊಡ್ಡಣ್ಣನ ತೋಟವಿತ್ತು. ನಮ್ಮ ತೋಟದಲ್ಲಿ ಹಿಪ್ಪುನೇರಳೆ ನಾಟಿಯಾಗಿ ಅದು ಬೆಳೆಗೆ ಅನುವಾಗುವವರಗೆ ನಮ್ಮ ಮನೆಯವರು ಅಗಾಗ ದೊಡ್ಡಣ್ಣನ ತೋಟಕ್ಕೆ ಹೋಗಿ ರೇಷ್ಮೆ ಬೆಳೆಯನ್ನು ಗಮನಿಸುವುದು, ಸೊಪ್ಪು ಕೊಯ್ಯುವುದು ನಡೆಯುತ್ತಿತ್ತು. ಬಾಲಸಹಜವಾಗಿಯೂ ಹಾಗೂ ನನಗಿಂತ ಇಪ್ಪತ್ತು ವರ್ಷ ದೊಡ್ಡವನಾಗಿದ್ದ ದೊಡ್ಡಣ್ಣನ ಸ್ನೇಹ ಸಹವಾಸದಿಂದಲೂ ನಾನು ರೇಷ್ಮೆಕೃಷಿಯಲ್ಲಿ ಹೆಚ್ಚು ಹೆಚ್ಚು ಆಸಕ್ತಿ ತೋರಿಸುತ್ತಿದ್ದೆ. ಸೊಪ್ಪು ಕೊಯ್ಯುವುದು, ಹೆಚ್ಚುವುದು, ಕಸ ತಗೆಯುವುದು, ಪಾರ್ಮಲೀನ್ ದ್ರಾವಣ ಹಾಕುವುದು ಮುಂತಾದ ಕೆಲಸಗಳಲ್ಲಿ ದೊಡ್ಡಣ್ಣನಿಗೆ ನಾನು ನೆರವಾಗುತ್ತಿದ್ದೆ. ಆಗ ಬೇಸಿಗೆ ರಜಾದಿನಗಳು ಬಂದು ನಾನು ಹೆಚ್ಚಿನ ದಿನಗಳನ್ನು ಅಲ್ಲಿಯೇ ಕಳೆಯುತ್ತಿದ್ದೆ. ಅದಕ್ಕೆ ನಮ್ಮ ಮನೆಯವರ ಪ್ರೋತ್ಸಾಹವೂ ಇತ್ತು. ಒಬ್ಬರಿಗಾದರೂ ರೇಷ್ಮೆ ಬೆಳೆಯ ಬಗ್ಗೆ ತಿಳುವಳಿಕೆಯಿರುವುದು ಅಗತ್ಯವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಹತ್ತಿರದ ಬಾಗೂರಿನ ಟೆಂಟಿನಲ್ಲಿ ದೊಡ್ಡಣ್ಣ ಆಗಾಗ ತೋರಿಸುತ್ತಿದ್ದ ಸಿನೆಮಾಗಳ ಆಕರ್ಷಣೆ ಮುಖ್ಯ ಕಾರಣವಾಗಿತ್ತು ಎನ್ನಬಹುದು.

ದೊಡ್ಡಣ್ಣನ ಮನೆಯಲ್ಲಿ ರೇಷ್ಮೆ ಹುಳು ಸಾಕಿದ್ದಾಗ ಮೂರ್ನಾಲ್ಕು ಆಳುಗಳಿರುತ್ತಿದ್ದರು. ಆದರೆ ಖಾಯಮ್ಮಾಗಿ ಇರುತ್ತಿದ್ದವನೆಂದರೆ ಕೃಷ್ಣಣ್ಣ ಎಂಬ ವ್ಯಕ್ತಿ. ಆತನಿಗೆ ಸುಮಾರು ನಲವತ್ತು ವರ್ಷಗಳು ಇದ್ದಿರಬಹುದು. ನೋಡಲು ಕುಳ್ಳಾಗಿಯೂ ಅಷ್ಟೇ ಕೊಳಕಾಗಿಯೂ ಇದ್ದ ಆತನ ಎಡಗಾಲು ಸ್ವಲ್ಪ ಕುಂಟಾಗಿತ್ತು. ಯಾವಾಗಲೂ ಒಂದು ಕೊಳಕು ಪಂಚೆಯನ್ನು ಸೊಂಟಕ್ಕೆ ಸುತ್ತಿಕೊಂಡಿರುತ್ತಿದ್ದನು. ಆ ಪಂಚೆಯು ಅಲ್ಲಲ್ಲಿ ಗಾಡಿಕಪ್ಪಿನಿಂದ ವಿಕೃತವಾಗಿರುತ್ತಿತ್ತು. ಆತನಲ್ಲಿದ್ದ ಎರಡು ಮೂರು ಪಂಚೆಗಳೂ ಅದೇ ರೀತಿ ಇದ್ದುದರಿಂದ ನಾನದಕ್ಕೆ ಹೆಚ್ಚಿನ ಮಹತ್ವ ಕೊಟ್ಟಿರಲಿಲ. ಅವನ ಕಾಲು ಹುಟ್ಟಿನಿಂದ ಕುಂಟಾಗಿರಬೇಕು ಎಂದು ಕೊಂಡಿದ್ದೆ. ಆದರೆ ಯಾವಗಲೂ ಆತ ತನ್ನ ಎಡಗೈಯಿಂದ ತನ್ನ ಎಡದ ತೊಡೆಯನ್ನು ಬಡಿದುಕೊಳ್ಳುತ್ತಿದ್ದ. ಅದೇಕೆಂದು ಕೇಳಿದ ನನಗೆ ಪಂಚೆಯನ್ನು ಸರಿಸಿ ತೊಡೆಯನ್ನು ತೋರಿಸಿದ್ದ. ತೊಡೆಯಲ್ಲಿ ಅಂಗೈ ಅಗಲ ಗಾಯವಾಗಿತ್ತು. ಆದರೆ ಅದು ಕೀತುಕೊಂಡಿರಲಿಲ್ಲ. ರಸಿಕೆಯೂ ಆಗಿರಲಿಲ್ಲ. ಒಣಗಿ ಒಂದು ರೀತಿಯಲ್ಲಿ ಚಕ್ಕೆಯೆದ್ದು ಮೀನಿನ ಉರುಪಿನಂತೆ ಕಾಣುತ್ತಿತ್ತು. ಮಧ್ಯ ಭಾಗದಲ್ಲಿ ಹೆಬ್ಬೆರಳು ಗಾತ್ರದ ಗಂಟು ಇದ್ದು, ಅದು ಸಣ್ಣಗೆ ಬಾಯಿ ಬಿಟ್ಟುಕೊಂಡಿತ್ತು. ಅದಕ್ಕೆ ಗಾಡಿಚಕ್ರದಿಂದ ತಗೆದ ಕಪ್ಪನ್ನು ಬಳಿಯಾಲಾಗಿತ್ತು. ಅದನ್ನು ಯಾವಗಲೂ ತನ್ನ ಎಡಗೈನ ತೋರು ಬೆರಳಿನ ಮೇಲೆ ಮಧ್ಯದ ಬೆರಳನ್ನು ಇಟ್ಟುಕೊಂಡು ಬಲವಾಗಿ ಒತ್ತುತ್ತಾ ಆ ಗಾಯದ ಗಂಟಿನ ಮೇಲೆ ಮತ್ತು ಗಂಟಿನ ಸುತ್ತಾ ಮೀಟಿಕೊಳ್ಳುತ್ತಿದ್ದನು. ಒಮ್ಮೊಮ್ಮೆ ಬಲಗಾಲನ್ನು ಮಡಿಸಿಕೊಂಡು ಎಲ್ಲೆಂದರಲ್ಲಿ ಕುಳಿತು, ಎಡಗಾಲನ್ನು ಎಡಗೈಯಿಂದ ಸುತ್ತಿಕೊಂಡು ಬಲಗೈನ ತೋರುಬೆರಳಿನ ಉಗುರಿನಿಂದ ಕಿತ್ತುಕೊಳ್ಳುತ್ತಿದ್ದನು. ಆಗ ಯವುದೋ ಮಾದಕ ವಸ್ತುವನ್ನು ತಗೆದುಕೊಂಡು ಸುಖಿಸುವವರ ರೀತಿಯಲ್ಲಿ ಯಾವುದೋ ಲೋಕದಲ್ಲಿ ವಿಹರಿಸುತ್ತಿದ್ದನು.

ನನಗಾಗ ಆತನ ಹಿನ್ನಲೆಯಾಗಲೀ ಹೆಚ್ಚಿನ ವಿವರಗಳಾಗಲಿ ಗೊತ್ತಿರಲಿಲ್ಲ. ಕಾಲನ್ನು ಒಳಗಿನಿಂದಲೇ ಹುಳುಗಳು ತಿನ್ನುತ್ತಾ ಬಂದವೆಂದು, ಅದು ಒಳಗೊಳಗೇ ಕಡಿಯುತ್ತಿತ್ತೆಂದೂ, ಅದನ್ನು ತಡೆಯಲಾಗದೆ ಅದು ತೊಡೆಯ ಭಾಗಕ್ಕೆ ಬಂದಿದ್ದಾಗ ಸೀಮೆ ಎಣ್ಣೆ ಬಟ್ಟೆಯನ್ನು ತೊಡೆಯ ಮೇಲಿಟ್ಟು ಬೆಂಕಿ ಹಚ್ಚಿಕೊಂಡಿದ್ದಾಗಿ ಅದರಿಂದ ಗಾಯವಾಗಿದೆಯಂದು ಆತನ ಮಾತುಗಳಿಂದ ತಿಳಿದುಕೊಂಡಿದ್ದೆ. ದೊಡ್ಡಣ್ಣನ ಬಹುತೇಕ ಕೆಲಸಗಳಿಗೆ ಬಲಗೈ ಬಂಟನಾಗಿದ್ದ ಕೃಷ್ಣಣ್ಣ ರೇಷ್ಮೆ ಕೆಲಸಗಳಲ್ಲದೆ ಹೂ ಕುಯ್ಯುವುದು, ಮಾಲೆ ಕಟ್ಟಿ ಮಾರುವುದನ್ನು ಮಾಡುತ್ತಿದ್ದ. ಆತನಷ್ಟು ವೇಗವಾಗಿ ಹಿಪ್ಪುನೇರಳೆ ಸೊಪ್ಪನ್ನು ಕುಯ್ಯಲು ಬೇರಾರಿಂದಲೂ ಸಾಧ್ಯವಿಲ್ಲವೆಂದು ದೊಡ್ಡಣ್ಣ ಆಗಾಗ ಹೇಳುತ್ತಿದ್ದ. ಕೃಷ್ಣಣ್ಣನಿಗೆ ಹಾಡು ಹೇಳುವ, ಕಥೆ ಹೇಳುವ ಹುಚ್ಚು. ಈ ಹುಚ್ಚಿನಿಂದಾಗಿಯೇ ಆತ ನನಗೆ ಹತ್ತಿರನಾಗಿಬಿಟ್ಟಿದ್ದ. ಮುಂದೆ ನಮ್ಮ ಮನೆಯಲ್ಲಿ ರೇಷ್ಮೆ ಬೆಳೆ ತೆಗೆಯಲು ಪ್ರಾರಂಭಿಸಿದಾಗ ದೊಡ್ಡಣ್ಣನೇ ಆತನನ್ನು ನಮ್ಮ ಮನೆಗೆ ನೆರವಾಗಲು ಕಳುಹಿಸಿದನು. ಮುಂದೆ ದೊಡ್ಡಣ್ಣನ ಮನೆಯಲ್ಲಿ ಹಿಸ್ಸೆಯಾಗಿ ಬಹುತೇಕ ರೇಷ್ಮೆ ಬೆಳೆಯುವ ಭೂಮಿ ದೊಡ್ಡಣ್ಣನ ತಮ್ಮನಿಗೆ ಹೋಯಿತು. ದೊಡ್ಡಣ್ಣ ಊರೊಳಗೆ ಹಾಲಿನ ಡೈರಿಯನ್ನು ನಡೆಸಿಕೊಂಡು ಬೇರೆ ಬೇರೆ ಕೆಲಸಗಳಿಗೆ ಕೈಹಾಕಿದ್ದರಿಂದ ರೇಷ್ಮೆ ಬೆಳೆಯುವುದನ್ನು ಪೂರ್ತಿ ನಿಲ್ಲಿಸಿದ. ಅಷ್ಟೊತ್ತಿಗಾಗಲೆ ಕೃಷ್ಣಣ್ಣ ನಮ್ಮ ಮನೆಯಲ್ಲಿಯೇ ಇರತೊಡಗಿದ್ದ. ಹೀಗೆ ನಮ್ಮಮನೆಯನ್ನು ಸೇರಿದ ಕೃಷ್ಣಣ್ಣ ನಮ್ಮ ಮನೆಯವರಲ್ಲಿ ಒಬ್ಬನಾಗಿಹೋಗಿದ್ದ.

* ** *** **** ***** ****** ***** **** *** ** *

ಕೃಷ್ಣಣ್ಣ ನಮ್ಮ ಮನೆಯಲ್ಲಿ ಇರತೊಡಗಿದ ಮೇಲೆ ಆತನ ಹಿನ್ನಲೆ ಸ್ಪಷ್ಟವಾಗುತ್ತಾ ಹೋಯಿತು. ನಮ್ಮ ತೋಟದ ಪೂರ್ವಕ್ಕೆ ಒಂದು ಮೈಲಿ ದೂರದಲ್ಲಿ ಕುಂಬಾರಹಳ್ಳಿ ಎಂಬ ಊರಿದೆ. ಪಶ್ಚಿಮಕ್ಕೆ ಮೂಡನಹಳ್ಳಿ ಗ್ರಾಮವಿದೆ. ಬಸ್ಸು, ಅಂಗಡಿ ಮುಂತಾದವಕ್ಕೆ ನಾವು ಮೂಡನಹಳ್ಳಿಯನ್ನು ಅವಲಂಬಿಸಿದ್ದರೂ ಕುಂಬಾರಹಳ್ಳಿಯ ಬಹುತೇಕ ಜನರು ನಮಗೆ ಪರಿಚಿತರೆ. ಕೃಷ್ಣಣ್ಣ ಕುಂಬಾರಹಳ್ಳಿಯಲ್ಲಿ ಹುಟ್ಟಿ ಬೆಳೆದವನು. ಆತನ ಅಪ್ಪನಿಗೆ ಇಬ್ಬರು ಹೆಂಡತಿಯರು. ಹಿರಿಯ ಹೆಂಡತಿಯಲ್ಲಿ ಮೂವರು ಗಂಡುಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದರು ಇನ್ನೊಂದು ಮದುವೆ ಮಾಡಿಕೊಂಡ ಆತನ ಅಪ್ಪನನ್ನು ಊರಿನ ಜನ ರಸಿಕ ಎಂದು ಕರೆದು ಸುಮ್ಮನಾಗಿಬಿಟ್ಟಿದ್ದರು. ಎರಡನೆಯ ಹೆಂಡತಿಯಲ್ಲಿ ಒಂದು ಹೆಣ್ಣು ಮಗುವಿನ ನಂತರ ಎರಡು ಗಂಡು ಮಕ್ಕಳು ಆದವು. ಅದರಲ್ಲಿ ಹಿರಿಯ ಮಗನೇ ಕೃಷ್ಣಣ್ಣ. ಅಕ್ಕನನ್ನು ಬಾಗೂರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕೃಷ್ಣಣ್ಣ ನಮ್ಮ ಮನೆಯಲ್ಲಿದ್ದಾಗಲೂ ಅಕ್ಕನ ಮನೆಗೆ ಹೋಗಿ ಬರುತ್ತಿದ್ದನಾದರೂ ಅಲ್ಲಿ ಉಳಿದುಕೊಳ್ಳುತ್ತಿರಲಿಲ್ಲ. ‘ಕೆಟ್ಟು ನೆಂಟರ ಮನೆ ಸೇರಬಾರದು’ ಎಂಬುದು ಅವನ ನೀತಿಯಾಗಿತ್ತು.

ಕೃಷ್ಣಣ್ಣನ ಅಪ್ಪ ಸಾಯುವಾಗ ಇವರಿನ್ನು ಚಿಕ್ಕ ಮಕ್ಕಳು ಅಕ್ಕನ ಮದುವೆಯಾಗಿತ್ತು. ಸಾಯುವ ಮುನ್ನ ಇಡೀ ಆಸ್ತಿಯನ್ನು ಐದು ಭಾಗ ಮಾಡಿ ಐದೂ ಜನ ಗಂಡುಮಕ್ಕಳಿಗೆ ಹಂಚಿ ಹೋಗಿದ್ದ. ಸೆರೆಮನೆಯಾಗಿ ಕಂಡ ಶಾಲೆಯ ಗೊಡವೆಗೆ ಹೋಗದ ಕೃಷ್ಣಣ್ಣ ತನ್ನ ಮತ್ತು ತನ್ನ ತಮ್ಮನ ಪಾಲಿನ ಜಮೀನಿನಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿದ್ದ. ಇಡೀ ಊರಿಗೆ ಒಂದು ಒಕ್ಕಲಾಗಬೇಕು. ಒಳ್ಳೆ ಹೊಲ ತೋಟ ಮಾಡಬೇಕು. ಎತ್ತು ಗಾಡಿ ಮಾಡಬೇಕು ಇತ್ಯಾದಿ ಕನಸುಗಳನ್ನು ಕಟ್ಟಿಕೊಂಡಿದ್ದ ಕೃಷ್ಣಣ್ಣನಿಗೆ ಮಾಮೂಲಿ ರಾಗಿ ಜೋಳ ಬೆಳೆಯುವುದರಲ್ಲಿ ನಾನು ಉದ್ಧಾರವಾಗುವುದಿಲ್ಲ ಎಂದು ಅರ್ಥವಾಗಿತ್ತು. ತೋಟದಲ್ಲಿ ತೆಂಗಿನ ಫಸಲು ಚೆನ್ನಾಗಿಯೂ ಇರಲಿಲ್ಲ. ಹಿರಿಯ ಮಕ್ಕಳು ಒಳ್ಳೊಳ್ಳೆಯ ತೋಟಗಳನ್ನು ಅವರಿಟ್ಟುಕೊಂಡು ಯಾವುದೋ ಬೋರೆಯ ಮೇಲಿನ ಒಣ ಭೂಮಿಯಲ್ಲಿ ಮಾಡಿದ್ದ ತೋಟವನ್ನು ಇವರಿಬ್ಬರಿಗೆ ಕೊಟ್ಟಿದ್ದರು. ಆದರೆ ಅದು ಕೃಷ್ಣಣ್ಣನ ಉತ್ಸಾಹಕ್ಕೇನು ಭಂಗ ತರಲಿಲ್ಲ. ಪುಟ್ಟದೊಂದು ಬಾವಿ ತೋಡಿ ನೀರಿಗೆ ದಾರಿ ಮಾಡಿಕೊಂಡು ಹಣ್ಣು ತರಕಾರಿ ಹೂವು ಬೆಳೆಯಲು ಪ್ರಾರಂಭಿಸಿದ. ಎಲ್ಲವೂ ಚೆನ್ನಾಗಿಯೇ ನಡೆಯಿತು. ತರಕಾರಿಯಿಂದ ವಾರವಾರವೂ ದುಡ್ಡು ಬರಲಾರಂಭಿಸಿತು. ಬಾಗೂರು ಚೆನ್ನರಾಯಪಟ್ಟಣಕ್ಕೆ ತಗೆದುಕೊಂಡು ಹೋಗಿ ಮಾರಲಾರಂಭಿಸಿದ. ತಾಯಿ ತಮ್ಮನ ಮೈಮೇಲೆ ಒಳ್ಳೆಯ ಬಟ್ಟೆಗಳು ಕಾಣಿಸಿಕೊಂಡವು. ಕಾಕಡ, ಕನಕಾಂಬರ, ಸಂಪಿಗೆ ಹೂವು ಕೇಜಿಗಟ್ಟಲೆ ಸಿಕ್ಕಲಾರಂಭಿಸಿದಾಗ ನಿತ್ಯವೂ ಅವುಗಳನ್ನು ಚನ್ನರಾಯಪಟ್ಟಣಕ್ಕೆ ಸಾಗಿಸಿ ವರ್ತನೆ ಆಧಾರದ ಮೇಲೆ ಕೆಂಪಮ್ಮ ಎಂಬುವವಳಿಗೆ ಮಾರಲಾರಂಬಿಸಿದ.

ಆತನ ಅದೃಷ್ಟವೋ ದುರದೃಷ್ಟವೊ ಅಲ್ಲಿ ಕೆಂಪಮ್ಮನಿಗೆ ವಿರೋಧಿಯೊಬ್ಬಳಿದ್ದಳು. ಆಕೆಯ ಹೆಸರು ಭಾಗೀರತಿ ಎಂದು. ಕೃಷ್ಣಣ್ಣನ ಪರಿಚಯಮಾಡಿಕೊಂಡು ಕರ್ನಾಟಕ ಮಿಲಿಟರಿ ಹೋಟೆಲಿನಲ್ಲಿ ಬಿರಿಯಾನಿ ಕೊಡಿಸುತ್ತಾ ‘ನೀನೇಕೆ ಅಷ್ಟು ಕಡಿಮೆ ದುಡ್ಡಿಗೆ ಆ ಕೆಂಪಿಗೆ ಹೂವು ಮಾರುತ್ತೀಯ. ನೀನೆ ಕಟ್ಟಿ ಮಾರುವುದನ್ನು ಅಭ್ಯಾಸ ಮಾಡಿಕೊ. ಪ್ರಾರಂಭದಲ್ಲಿ ಕಷ್ಟವಾಗಬಹುದು. ನಾವಿರುತ್ತೇವೆ. ನಮ್ಮ ಅಂಗಡಿಯ ಪಕ್ಕದಲ್ಲೇ ನಿನಗೂ ಒಂದು ಬೆಂಚು ಹಾಕಿಸಿಕೊಡುತ್ತೇನೆ’ ಎಂದಳು. ಇಲ್ಲಿ ‘ನಾವಿರುತ್ತೇನೆ’ ಎಂದರೆ ಆಕೆಯ ತಂಗಿ ಸವಿತಳೂ ಎಂದು ಕೃಷ್ಣಣ್ಣ ಸರಿಯಾಗಿಯೇ ಅರ್ಥ ಮಾಡಿಕೊಂಡ. ತನಗೆ ವ್ಯಾಪಾರ ಕಡಿಮೆಯಾಗುವುದನ್ನೇ ಲೆಕ್ಕಿಸಿದೆ, ತನ್ನ ಅಂಗಡಿಯ ಪಕ್ಕದಲ್ಲೇ ತನಗೆ ಜಾಗ ಕೊಡುತ್ತಿರುವ ಭಾಗೀರತಿ ನಿಜವಾಗಿಯೂ ತನಗೆ ಹಿತೈಷಿ ಎಂದುಕೊಂಡು ಒಪ್ಪಿಗೆ ಕೊಟ್ಟುಬಿಟ್ಟ. ಒಂದೇ ವಾರದಲ್ಲಿ ಎಲ್ಲವೂ ಅಂದುಕೊಂಡಂತೆಯೇ ಆಯಿತು. ತಿಂಗಳೊಪ್ಪತ್ತಿನಲ್ಲಿ ಭಾಗೀರತಿಯನ್ನೂ, ಆಕೆಯ ತಂಗಿ ಸವಿತಳನ್ನೂ ಮೀರಿಸುವಂತೆ ಹೂವು ಕಟ್ಟಲಾರಂಭಿಸಿದ ಕೃಷ್ಣಣ್ಣ ನಂಬರ್ ವನ್ ಹೂವಾಡಿಗನಾಗಿಬಿಟ್ಟ. ಪ್ರಾರಂಭದಲ್ಲಿ ಕೆಲವರು ‘ಒಕ್ಕಲಿಗನಾಗಿ ಹುಟ್ಟಿ ಹೂವಾಡಿಗನಾದೆಯಲ್ಲೋ’ ಎಂದಾಗ ಮನಸ್ಸು ಮುದುಡುತ್ತಿದ್ದರೂ, ಆತ ನಮ್ಮ ಬಳಿ ಹೇಳುತ್ತಿದ್ದಂತೆ, ಭಾಗೀರತಿಯ ತಂಗಿ ಸವಿತಳ ಸೆಳತವೇ ಹೂವಿನ ವ್ಯಾಪಾರವನ್ನು ಮುಂದುವರೆಸಲು ಕಾರಣವಾಗಿತ್ತು.

ಹೊಲ ತೋಟವನ್ನು ತಮ್ಮ ತಾಯಿಯರು ನೋಡಿಕೊಳ್ಳುತ್ತಿದ್ದುದರಿಂದ ದಿನದ ಹೆಚ್ಚಿನ ಸಮಯವನ್ನು ಚೆನ್ನರಾಯಪಟ್ಟಣದಲ್ಲಿಯೇ ಕಳೆಯುತ್ತಿದ್ದ ಕೃಷ್ಣಣ್ಣನಿಗೆ ಭಾಗೀರತಿಯ ಮನೆ ತನ್ನ ಮನೆಯಾಗಲು ಹೆಚ್ಚುಕಾಲ ಬೇಕಾಗಲಿಲ್ಲ. ಅಷ್ಟೊತ್ತಿಗಾಗಲೇ ವ್ಯಾಪಾರ ಚೆನ್ನಾಗಿ ಆಗುತ್ತಿದ್ದುದರಿಂದ ಸಿಗರೇಟು, ಕುಡಿತದ ಚಟಗಳು ಕೃಷ್ಣಣ್ಣನನ್ನು ಆವರಿಸಿದ್ದವು. ಭಾಗೀರತಿ, ಸವಿತ ಇವರೇ ಅವನಿಗೆ ಕುಡಿಯಲು ಕೊಡಿಸುತ್ತಿದ್ದುದಲ್ಲದೆ ಅವರೂ ಅವನ ಜೊತೆಯಲ್ಲಿ ಕುಡಿಯುತ್ತಿದ್ದರು. ಆತನ ಮಾತಿನಲ್ಲೇ ಹೇಳುವುದಾದರೆ ‘ಮಧಿರೆ ಮೀನಾಕ್ಷಿಯರಿದ್ದರೆ ಮತ್ತೇರದಿರುತ್ತದೆಯೇ?’
ಹೂವಿನ ವ್ಯಾಪಾರ ಚೆನ್ನಾಗಿ ನಡೆಯುತ್ತಿದ್ದು ಹಾಸನ, ಮಂಡ್ಯ, ಮೈಸೂರುಗಳಿಗೆ ಹೂವನ್ನು ಕಳುಹಿಸತ್ತಿದ್ದ. ಪಟ್ಟಣದ ಗೌಡರೊಬ್ಬರ ತೋಟದಲ್ಲಿ ಬೆಳೆದ ಹೂವಿನ ಕೊಯಲನ್ನು ಭಾಗೀರತಿಯೊಡನೆ ಗುತ್ತಿಗೆ ಹಿಡಿದ್ದಿದ್ದ. ಹೂ ಕುಯ್ಯಿಸುವ ನೆಪದಲ್ಲಿ ಸವಿತಳೊಂದಿಗೆ ಗೌಡರ ತೋಟದಲ್ಲಿ ಚೆಲ್ಲಾಟವಾಡತೊಡಗಿದ. ಇದಕ್ಕೆ ಭಾಗೀರತಿಯ ವಿರೋಧವೇನಿಲ್ಲದಿದ್ದರೂ ಗೌಡರ ಮಗನ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಗೌಡರ ಮಗ, ಸಿಗರೇಟು ಸೇದುತ್ತಿದ್ದ ಕೃಷ್ಣಣ್ಣನ ಬಳಿಗೆ ಬೆಂಕಿಕಡ್ಡಿ ಕೇಳುವ ನೆಪದಲ್ಲಿ ಬಂದು, ಸವಿತಳಿಗೆ ‘ಅವನನ್ನು ಮದುವೆಯಾಗು; ನನ್ನನ್ನು ಇಟ್ಟುಕೋ’ ಎಂಬ ಭಯಂಕರ ಸಲಹೆ ಕೊಡುವಷ್ಟು ಮುಂದುವರೆದಾಗ ಸವಿತ ಮದುವೆಗೆ ಒತ್ತಾಯಿಸಿದಳು. ಈತನೂ ಒಪ್ಪಿದ. ಅದರೆ ತಾಯಿ ತಮ್ಮ ಒಪ್ಪಲಿಲ್ಲ. ಚನ್ನರಾಯಪಟ್ಟಣದ ದೇವಸ್ಥಾನದಲ್ಲಿ ಮದುವೆಯಾಗಿ ಕುಂಬಾರಹಳ್ಳಿಗೆ ಹೊಸ ಹೆಂಡತಿಯೊಂದಿಗೆ ಬಂದ. ದಿನವೊಪ್ಪತ್ತಿನಲ್ಲಿ ಮನೆ ಪಾಲಾಗಿ ಹೊಸ ಸಂಸಾರ ಹೂಡಬೇಕಾಯಿತು.

ಕೃಷ್ಣಣ್ಣ ಮತ್ತೆ ದುಡಿಮೆಗೆ ಇಳಿದ. ತರಕಾರಿ ಹೂ ಬೆಳೆಯತೊಡಗಿದ. ಮತ್ತೆ ಚನ್ನರಾಯಪಟ್ಟಣಕ್ಕೆ ಹೋಗಿಬರತೊಡಗಿದ. ನಮಗೆ ಹೇಳುತ್ತಿದ್ದಂತೆ ಆತನ ಪ್ರಕಾರ ಆಗ ಆತ ಮಾಡಿದ ಎರಡು ತಪ್ಪುಗಳೆಂದರೆ ‘ಕುಡಿತವನ್ನು ಬಿಡದೇ ಇದ್ದುದ್ದು ಮತ್ತು ಹೆಂಡತಿಯನ್ನು ಚನ್ನರಾಯಪಟ್ಟಣಕ್ಕೆ ಹೋಗಿಬರಲು ಬಿಟ್ಟಿದ್ದು’.

ಸವಿತಳಿಗೂ ಅಷ್ಟೆ. ಚನ್ನರಾಯಪಟ್ಟಣದ ಸೆಳೆತ ಬಹಳವೇ ಇತ್ತು. ಕೃಷ್ಣಣ್ಣನನ್ನು ಊರುಬಿಟ್ಟು ಸಿಟಿಯಲ್ಲಿ ನೆಲೆಸಲು ಒತ್ತಾಯಿಸಿದಳು. ಈತ ಒಪ್ಪಲಿಲ್ಲ. ಅತ್ತು ಕರೆದು ಮಾಡಿದಳು. ಚನ್ನರಾಯಪಟ್ಟಣಕ್ಕೆ ಹೋದರೆ ವಾರಗಟ್ಟಲೆ ತಿರುಗಿ ಬರುತ್ತಿರಲಿಲ್ಲ. ಇಬ್ಬರ ನಡುವೆ ಬಿರುಕು ಹೆಚ್ಚಾಗುತ್ತಾ ಹೋದಂತೆ ಅವಳ ನಡತೆಯ ಮೇಲೆ ಸಂಶಯವೂ ಈತನಲ್ಲಿ ಹೆಚ್ಚಾಗುತ್ತಾ ಹೋಯಿತು. ಒಬ್ಬಳೆ ಗೌಡರ ತೋಟಕ್ಕೆ ಹೂ ಕುಯ್ಯಿಸಲು ಹೋಗುತ್ತಾಳೆ ಎಂದು ತಿಳಿದಾಗ ಬಾಯಿಗೆ ಬಂದ ಹಾಗೆ ಬಯ್ದು ಹೊಡೆದು ಮೆರೆದಾಡಿದ. ದಿನವೂ ಕುಡಿದು ಬಂದು ಹೊಡೆಯುವುದೇ ಆತನ ಕೆಲಸವಾಯಿತು. ಇದರ ನಡುವೆ ಪ್ರಕೃತಿ ತನ್ನದೇ ಆದ ರೀತಿಯಲ್ಲಿ ಮುಂದುವರೆಯುತ್ತಿತ್ತು. ಸವಿತ ಬಸುರಿಯಾಗಿದ್ದಳು. ಆ ಮಗು ಮಾತ್ರ ತನ್ನದೇ ಎಂಬುದು ಈತನ ಅಚಲವಾದ ನಂಬಿಕೆ. ಸವಿತಳದೂ ಕೂಡ. ಏಕೆಂದರೆ ಮದುವೆಯಾಗಿ ಮೂರು ತಿಂಗಳಲ್ಲಿ ಇಷ್ಟೆಲ್ಲಾ ರಾದ್ಧಾಂತಗಳು ನಡೆದು ಹೋಗಿದ್ದವು. ಅವಳಿಗೆ ಆಗಷ್ಟೇ ಮೂರು ತಿಂಗಳಾಗಿತ್ತು.
ಹೊಟ್ಟೆಯಲ್ಲಿ ಮಗು ಬೆಳೆದಂತೆ ಇಬ್ಬರ ನಡುವಿನ ಬಿರುಕೂ ಹೆಚ್ಚುತ್ತಾ ಹೋಯಿತು. ಅದರೊಂದಿಗೆ ಆತ ಎಡಗಾಲಿನಲ್ಲಿ ಒಳಗೆ ಏನೋ ಕಡಿಯುತ್ತಿರವ ಹಾಗೆ ಅನ್ನಿಸಿ ನೋವಾಗತೊಡಗಿತು. ಆತನಿಗೆ ಗ್ಯಾಂಗ್ರೀನ್ ಆಗಿತ್ತು. ಕಾಲಿನೊಳಗೆ ಕಡಿತ ಹೆಚ್ಚಾದಂತೆ ಆತನ ಕುಡಿತದ ಹುಚ್ಚೂ ಹೆಚ್ಚಾಯಿತು. ಕುಡಿದಾಗ ಮೃಗದಂತೆ ವರ್ತಿಸಲಾರಂಭಿಸಿದ. ಸವಿತ ಮನೆಬಿಟ್ಟು ಅಕ್ಕನ ಮನೆ ಸೇರಿದಳು. ಅವಳನ್ನು ವಾಪಸ್ಸು ಕರೆದು ಇಲ್ಲವೆನಿಸಿಕೊಂಡ. ಅದೇ ಅಪಮಾನವೆಂದುಕೊಂಡು ಅವಳ ಮೇಲೆ ಇಲ್ಲ ಸಲ್ಲದ ಆರೋಪವರಿಸುತ್ತಾ ಎಲ್ಲೆಂದರಲ್ಲಿ ಕುಡಿದು ಬೀಳುತ್ತ ತೋಟ ತುಡಿಕೆಗಳನ್ನು ನಿರ್ಕಕ್ಷಿಸಿದ. ಸವಿತಳಿಗೆ ಗಂಡುಮಗು ಹುಟ್ಟಿದಾಗ ನೋಡಲೂ ಹೋಗದೆ ‘ಅದು ನನ್ನ ಮಗುವಲ್ಲ’ ಎಂದುಬಿಟ್ಟ.

ಹೀಗೆ ವರ್ಷವೊಂದು ಕಳೆಯುವಷ್ಟರಲ್ಲಿ ‘ಚಿಂತಾಮಣಿ ಸಾಬರು ಸವಿತಳನ್ನು ಇಟ್ಟುಕೊಂಡಿದ್ದಾರೆ, ಅದೂ ಸ್ವಂತಃ ಹೆಂಡತಿಯ ರೀತಿ ನೋಡಿಕೊಳ್ಳುತ್ತಿದ್ದಾರೆ’ ಎಂಬ ಸುದ್ದಿಗಳು ಸಣ್ಣಾದಾಗಿ ಪ್ರಾರಂಭವಾಗಿ ಇಡೀ ಚನ್ನರಾಯಪಟ್ಟಣದ ಜನತೆಯ ಬಾಯಿಗೆ ಎಲೆ ಅಡಿಕೆಯಾಗಿ ಜಗಿಯಲ್ಪಟ್ಟವು. ಆಗಿನ್ನು ಚನ್ನರಾಯಪಟ್ಟಣ ಇಷ್ಟು ಬೆಳೆದಿರಲಿಲ್ಲ. ಈ ರೀತಿಯ ವಿಷಯಗಳು ಹಳ್ಳಿಯಲ್ಲಿ ಹರಡಿದಷ್ಟೇ ಬೇಗ ಪ್ರಚಾರಗೊಳ್ಳುತ್ತಿದ್ದವು. ಸಾಬರು ಬಡ್ಡಿ ವ್ಯವಾಹಾರ ಮಾಡುತ್ತ, ಎಲ್ಲರಿಗೂ ಗೊತ್ತಿದ್ದನವನಾಗಿ ಶ್ರೀಮಂತನಾಗಿದ್ದ. ಕೃಷ್ಣಣ್ಣ ‘ಆಕೆ ನನ್ನ ಹೆಂಡತಿಯೇ ಅಲ್ಲ’ ಎಂದುಕೊಂಡು, ಅದರ ಬೇಜಾರಿಗೋ ಕಾಲುನೋವಿಗೋ ಇಪ್ಪತ್ತನಾಲ್ಕು ಗಂಟೆಯೂ ಕುಡಿತದ ಅಮಲಿನಲ್ಲಿಯೇ ಇರುತ್ತಿದ್ದ. ಸಾಲ ಹೆಚ್ಚಾದಾಗ ಎತ್ತುಗಾಡಿಗಳನ್ನು ಮಾರಿದ.
ಒಂದು ದಿನ ಲಾಯರಿಂದ ನೋಟೀಸ್ ಬಂತು. ಆತನ ಹೆಂಡತಿ ಡೈವೋರ್ಸ್ ಕೇಳಿದ್ದಳು. ಕೋರ್ಟಿನಲ್ಲಿ ‘ಮಗು ನನ್ನದು, ನನಗೇ ಕೊಡಿಸಿ’ ಎಂದು ಬೇಡಿಕೊಂಡ. ಆದರೆ ಆತನ ಹೆಂಡತಿ ಕೃಷ್ಣಣ್ಣನಿಗೆ ಗ್ಯಾಂಗ್ರೀನ್ ಆಗಿರುವುದನ್ನೂ, ಆತನ ಕುಡಿತದ ಗೀಳನ್ನೂ ಹೇಳಿ, ಮಗುವಿನ ಭವಿಷ್ಯದ ದೃಷ್ಠಿಯಿಂದ ಅದು ತನ್ನ ಹತ್ತಿರವೇ ಇರಬೇಕೆಂದು ವಾದಿಸಿದಳು. ನ್ಯಾಯಾಧೀಶರೂ ಅದನ್ನೆ ಸಮ್ಮತಿಸಿದರೂ ಕೂಡ. ಡೈವೋರ್ಸ್ ದೊರೆತ ತಿಂಗಳೊಳಗಾಗಿ ಸವಿತ ಚಿಂತಾಮಣಿ ಸಾಬರ ಜೊತೆಯಲ್ಲಿ ಮಗವನ್ನೂ ಕರೆದುಕೊಂಡು ಬೆಂಗಳೂರಿನ ದಾರಿ ಹಿಡಿದಳು. ಊರೂರು ಸುತ್ತಿ ವ್ಯವಹಾರ ಮಾಡುತ್ತಿದ್ದ ಚಿಂತಾಮಣಿ ಸಾಬರಿಗೆ ಊರು ಬಿಡುವುದೇನು ಕಷ್ಟವಾಗಲಿಲ್ಲ.

ಇತ್ತ ಕೃಷ್ಣಣ್ಣನ ಸ್ಥಿತಿ ಮಾತ್ರ ಚಿಂತಾಜನಕವಾಗಿತ್ತು. ಸಂಪಾದನೆಯಿಲ್ಲದೆ ಹೊತ್ತಿನ ಕೂಳಿಗಾಗಿ ಭಿಕ್ಷೆ ಬೇಡುವ ಸ್ಥಿತಿಗೆ ಇಳಿದುಬಿಟ್ಟ. ‘ಮಣಿಪಾಲಿಗೆ ಹೋದರೆ ಹುಷಾರಾಗುತ್ತದೆ’ ಎಂದು ಯಾರೋ ಹೇಳಿದ್ದರಿಂದ ಒಂದು ತುಂಡು ಹೊಲವನ್ನು ಮಾರಿ ಮಣಿಪಾಲಿನ ದಾರಿಹಿಡಿದ. ಗ್ಯಾಂಗ್ರೀನ್ ಆಗಿದ್ದರಿಂದ ಕಾಲನ್ನು ಕತ್ತರಿಸದೆ ಬೇರೆ ದಾರಿಯೇ ಇರಲಿಲ್ಲ. ವೈದ್ಯರು ಅದನ್ನು ಹೇಳಿದಾಗ ‘ನಾನು ಹೀಗೆ ಸತ್ತರೂ ಸರಿಯೇ ಕಾಲನ್ನು ಮಾತ್ರ ಕತ್ತರಿಸಿಕೊಳ್ಳುವುದಿಲ್ಲ’ ಎಂದು ಡಾಕ್ಟರಿಗೆ ಹೇಳೆದೆ ಕೇಳದೆ ಊರಿಗೆ ಬಂದುಬಿಟ್ಟ. ನಾಟಿ ಔಷಧಿ, ಮಾಟ, ಮಂತ್ರ, ದೇವರು ಎಂದುಕೊಂಡು ಇದ್ದ ಆಸ್ತಿಯಲ್ಲವನ್ನೂ ಒಂದೊಂದಾಗಿ ಮಾರುತ್ತಾ ಬಂದ ಕೃಷ್ಣಣ್ಣ ನೋವು ತಡೆಯದಾದಾಗ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ. ಅರಸೀಕೆರೆಗೆ ಹೋಗಿ ಚನ್ನಾಗಿ ಕುಡಿದು, ನಡುರಾತ್ರಿಯಲ್ಲಿ ಕೆರೆಯ ನಡುಭಾಗದವರೆಗೂ ಈಜಿಕೊಂಡು ಹೋಗಿ ಕೈಬಿಟ್ಟ. ಕೃಷ್ಣಣ್ಣನೇ ಹೇಳುತ್ತಿದ್ದಂತೆ ‘ಆಗ ಸಾವು ನನ್ನ ಹಣೆಯಲ್ಲಿ ಬರೆದಿರಲಿಲ್ಲ. ಚನ್ನಾಗಿ ಈಜು ಬರುತ್ತಿದ್ದುದರಿಂದಲೋ ಏನೋ ಬೆಳಿಗ್ಗೆ ಕಣ್ಣು ಬಿಟ್ಟಾಗ ಕೆರೆಯದಡದ ಕೊಚ್ಚೆಯಲ್ಲಿ ಬಿದ್ದಿದ್ದೆ. ಅಥವಾ ನಡುಕೆರೆಯವರೆಗೆ ನಾನು ಹೋಗಿದ್ದೆ ಸುಳ್ಳಿರಬಹುದು’.

ಅದುವರೆಗೆ ಮಾಡಿದ್ದ ಸಾಲಕ್ಕೆ ಮತ್ತು ಅದರ ಮೇಲೆ ಸ್ವಲ್ಪ ದುಡ್ಡಿಗೆ ತೋಟವನ್ನು ತನ್ನ ತಮ್ಮನಿಗೇ ಬರೆದು ಊರೂರು ತಿರುಗುತ್ತಿದ್ದ ಕೃಷ್ಣಣ್ಣ ನೆಲೆ ನಿಂತಿದ್ದು ದೊಡ್ಡಣ್ಣನ ಮನೆಯಲ್ಲಿ. ದೊಡ್ಡಣ್ಣನ ತಾಯಿ(ಈಗಲೂ ಬದುಕಿದ್ದಾರೆ. ಸುಮಾರು ತೊಂಬತ್ತು ವರ್ಷಗಳಿದ್ದಿರಬಹುದು) ಕೃಷ್ಣಣ್ಣನನ್ನು ರೋಗಿಯೆಂದು ಅಸಹ್ಯಪಟ್ಟುಕೊಳ್ಳದೆ ಉಪಚಾರ ಮಾಡಿದ್ದರು. ಊಟ ಹಾಕಿದರು. ‘ಆಕೆ ನನ್ನ ನಿಜವಾದ ತಾಯಿ’ ಎಂದು ಕೊನೆಯವರೆಗೂ ಆತ ನೆನೆಯುತ್ತಿದ್ದ. ಆ ತಾಯಿಯ ಯಾವ ನಾಟಿ ಔಷಧಿಗೂ ಆತನ ಕಾಲು ಗುಣವಾಗಲಿಲ್ಲ. ಕಾಲಿನಿಂದ ಪ್ರಾರಂಭವಾದ ಕಡಿತ ಮಂಡಿಯನ್ನೂ ದಾಟಿ ಮೇಲೆ ಬಂದಿತ್ತು. ನೋವು ವಿಪರೀತವಾಗಿತ್ತು. ನೋವು ತಡೆಯದಾದಾಗ ಒಂದು ದಿನ ಸೀಮೆ ಎಣ್ಣೆಯಲ್ಲಿ ತುಂಡು ಬಟ್ಟೆಯನ್ನು ನೆನೆಸಿ ತೊಡೆಯ ಮೇಲಿಟ್ಟು ಬೆಂಕಿ ಕಚ್ಚಿ ನೋಡುತ್ತಾ ಕುಳಿತುಬಿಟ್ಟನಂತೆ. ದೊಡ್ಡಣ್ಣನವರ ತಾಯ ಈಗಲೂ ನೆನಪಿಸಿಕೊಳ್ಳುತ್ತಾರೆ. ‘ಬೆಂಕಿ ಧಗಧಗನೆ ಉರಿಯುತ್ತಿದ್ದರೂ, ತೊಡೆಯ ಮಾಂಸ ಸುಟ್ಟು ಕಳಚಿ ಬಿದ್ದರೂ ತುಟಿ ಕಚ್ಚಿ ಸುಮ್ಮನೆ ಕುಳಿತಿದ್ದ. ಒಂದು ಹನಿ ಕಣ್ಣೀರೂ ಬಂದಿರಲಿಲ್ಲ’.

ಆರು ತಿಂಗಳು ಕಳೆಯುವುದರೊಳಗಾಗಿ ಸುಟ್ಟಗಾಯ ಮಾಯ್ದು ಹೊಸ ಚರ್ಮ ಬೆಳೆದುಕೊಂಡಿತ್ತು. ಆದರೆ ಸುಟ್ಟ ಜಾಗದಲ್ಲಿ ಉರುಪು ಉರುಪಾಗಿ ಗಂಟು ಬಂದಿತ್ತು. ಒಳಗೆ ಕಡಿಯುವುದು ನಿಂತ್ತಿತ್ತು. ಆದರೆ ಮೇಲ್ಭಾಗದಲ್ಲಿ ಗಾಯ ಮಾಯುವುದಕ್ಕೋ ಏನೋ ಸಣ್ಣದಾಗಿ ನವೆ ಬರುತ್ತಿತ್ತು. ಆಗ ಯಾವಾಗಲೂ ಕೈಯಿಂದ ಅದನ್ನು ಬಡಿಯುತ್ತಲೋ ಬೆರಳಿನಿಂದ ಮೀಟುತ್ತಲೋ ಕುಳಿತುಕೊಳ್ಳುತ್ತಿದ್ದ. ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಎಲ್ಲೆಂದರಲ್ಲಿ ಯಾವಾಗ ಬೇಕೆಂದರೆ ಆವಾಗ ನಿರ್ಧಿಷ್ಟವಾದ ನಾಲ್ಕು ಭಂಗಿಗಳಲ್ಲಿ ಕುಳಿತು ಮೀಟಿಕೊಳ್ಳುತ್ತಿದ್ದನು. ಎಡಗೈಯಲ್ಲಿ ಮೀಟಿಕೊಳ್ಳವಾಗ ಬಲಗೈನ ಬೆರಳುಗಳನ್ನು ಗದ್ದದ ಮೇಲೆ ವೀಣೆ ನುಡಿಸುವವರ ರೀತಿಯಲ್ಲಿ ಕುಣಿಸುತ್ತಿದ್ದನು. ಕೆಲವು ಕಿಡಿಗೇಡಿಗಳು ಪಿಟೀಲು ಕೃಷ್ಣಪ್ಪ, ತಬಲ ಮೇಷ್ಟರು, ಕುಂಟ ಇತ್ಯಾದಿಯಾಗಿ ಕರೆದರೂ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ. ಮಲಗುವಾಗ ಶೂನ್ಯವನ್ನು ನೋಡುತ್ತಾ, ಬಲಗಾಲನ್ನು ಮಡುಚಿ ಅದರ ಮಂಡಿಯ ಮೇಲೆ ಎಡಗಾಲನ್ನು ಇಟ್ಟುಕೊಂಡು ಎಡಗೈಯಿಂದ ಗಾಯದ ಭಾಗವನ್ನು ಸವರಿಕೊಳ್ಳುತ್ತಿದ್ದನು. ನವೆ ಹೆಚ್ಚಾದರೆ ನಾಗರಾಜನ ಶೇವಿಂಗ್ ಶಾಪಿನಲ್ಲಿ ಹಳೆಯ ಬ್ಲೇಡನ್ನು ತಗೆದುಕೊಂಡು ಅದರ ತುದಿಯಿಂದ ಗಾಯವನ್ನು ಪಟಪಟನೆ ಕಿತ್ತುಕೊಳ್ಳುತ್ತಿದ್ದನ್ನು. ಒಮ್ಮೊಮ್ಮೆ ರಕ್ತವೂ ಬರುತ್ತಿತ್ತು.

ಅವನಿಗಿದ್ದ ಇನ್ನೊಂದು ಮಹತ್ತರವಾದ ಹುಚ್ಚೆಂದರೆ ಹಾಡು ಹೇಳುವುದು. ಅದರಲ್ಲೂ ನಾಟಕದ ಹಾಡುಗಳು ಬಹಳ ಇಷ್ಟ. ಯಾವ ಊರಲ್ಲೇ ನಾಟಕವಾಗಲಿ ಅಲ್ಲಿ ಪ್ರಥ್ಯಕ್ಷವಾಗಿ, ಅವರಿವರನ್ನು ಕಾಡಿ ಮೈಕಿನ ಮುಂದೆ ನಿಂತು ಒಂದು ಹಾಡು ಹಾಡಿಯೇ ಬಿಡುತ್ತಿದ್ದ. ಚನ್ನಾಗಿ ಹಾಡು ಹೇಳಿದ ನಾಟಕದ ಪಾತ್ರಧಾರಿಗೆ ಅವನೇ ಕಟ್ಟಿದ್ದ ಹೂವಿನ ಹಾರವನ್ನು ಹಾಕಿ ‘ಚನ್ನಾಗಿ ಹಾಡಿದೆ’ ಅಂದು ಅಭಿನಂದಿಸಿ ಸಂತೋಷಪಡುತ್ತಿದ್ದ. ಒಮ್ಮೆಯಂತೂ ಮೂಡನಹಳ್ಳಿಯಲ್ಲಿ ಹಾಡು ಹೇಳುವಾಗಲೇ ತೊಡೆಯಲ್ಲಿ ನವೆ ಹೆಚ್ಚಾಗಿ ಹಾಡನ್ನು ಅರ್ಧದಲ್ಲಿಯೇ ನಿಲ್ಲಿಸಿ ಮೀಟಿಕೊಳ್ಳತೊಡಗಿ ವ್ಯವಸ್ಥಾಪಕರ ಕೋಪಕ್ಕೆ ಗುರಿಯಾಗಿದ್ದ. ರಾತ್ರಿ ವೇಳೆ ನಡೆದು ಬರುವಾಗ ಜೋರಾಗಿ ಹಾಡು ಹೇಳುತ್ತಾ ಬರುತ್ತಿದ್ದ. ಅವನು ಅರ್ಧ ದಾರಿಯಲ್ಲಿದ್ದಾಗಲೆ ನಾವು ‘ಕೃಷ್ಣಣ್ಣ ಬರುತ್ತಿದ್ದಾನೆ’ ಎಂದು ಮಾತನಾಡಿಕೊಳ್ಳುತ್ತಿದ್ದೆವು.

* ** *** **** ***** ****** ***** **** *** ** *

ನಮ್ಮ ಮನೆ ಸೇರುವಷ್ಟರಲ್ಲಿ ಒಂದಷ್ಟು ಸಾಲ, ಅದಕ್ಕೆ ಸರಿಹೊಂದುವಷ್ಟು ಮೌಲ್ಯದ ಒಂದಿಷ್ಟು ದರ್ಖಾಸು ಜಮೀನು ಇವಿಷ್ಟೇ ಕೃಷ್ಣಣ್ಣನ ಆಸ್ತಿಯಾಗಿದ್ದವು. ‘ಹದಿನೈದು ವರ್ಷ ಆಗುವವರೆಗೂ ದರ್ಖಾಸು ಜಮೀನಗಳನ್ನು ಮಾರುವಂತಿರಲಿಲ್ಲವಾದ್ದರಿಂದ ಅದು ಉಳಿದುಕೊಂಡಿದೆ’ ಎಂದು ಹೇಳುತ್ತಿದ್ದ. ನಮ್ಮ ತಂದೆಯವರಿಗೆ ಹೇಳಿ ಅದನ್ನು ಮಾರಿಸಿ ಸಾಲವನ್ನು ತೀರಿಸಿ ನಿಜವಾದ ಅರ್ಥದಲ್ಲಿ ನಿರ್ಗತಿಕನಾಗಿಬಿಟ್ಟ. ಊರಿನಲ್ಲಿದ್ದ ಮನೆಯನ್ನು ತಮ್ಮನಿಗೆ ಕೊಟ್ಟಿದ್ದ. ತಾಯಿ ಸತ್ತುಹೋಗಿದ್ದಳು. ಆತನ ವಿಚ್ಛೇಧಿತ ಹೆಂಡತಿ ಬೆಂಗಳೂರಿನಲ್ಲಿ ಶ್ರೀಮಂತ ಬದುಕು ಸಾಗಿಸುತ್ತಿದ್ದಳು. ಮಗ ದುಬಾಯಿಯಲ್ಲಿದ್ದ. ಇವೆಲ್ಲವನ್ನು ಆಗಾಗ ಕೃಷ್ಣಣ್ಣನೇ ನಮಗೆ ಹೇಳುತ್ತಿದ್ದ.

ನಮ್ಮ ಮನೆಗೆ ಬಂದು ಆರು ತಿಂಗಳ ಕಳೆಯುವುದರೊಳಗಾಗಿ ಆತನಲ್ಲಾದ ಒಂದು ಬಹುಮುಖ್ಯ ಮಾರ್ಪಾಟೆಂದರೆ ಆತ ಕುಡಿಯುವುದನ್ನು ಬಿಟ್ಟಿದ್ದು. ಅದಕ್ಕೆ ನಮ್ಮ ತಂದೆಯವರ ಒಡನಾಟವೂ ಕಾರಣವಾಗಿತ್ತು. ನಮ್ಮ ತಂದೆ ಮದ್ಯಪಾನದ ಕಟ್ಟಾವಿರೋಧಿಗಳಾಗಿದ್ದರು. ಅವರನ್ನು ಗೌಡರೆ ಎಂದು ಕರೆಯುತ್ತಿದ್ದ. ನಮ್ಮ ತಾಯಿಯವರನ್ನು ಅವ್ವ ಎನ್ನುತ್ತಿದ್ದ. ನನ್ನನ್ನು, ಅಣ್ಣಂದಿರನ್ನು ಹೆಸರಿಡಿದು ಕರೆಯುತ್ತಿದ್ದ. ನಮ್ಮ ಅಕ್ಕ ಭಾವಂದಿರೆಲ್ಲ ಅವನಿಗೆ ಪರಿಚಯವಾಗಿದ್ದರು. ನಮ್ಮ ಅಜ್ಜಿ ಮಾತ್ರ ಆಗಾಗ ಬಯ್ಯುತ್ತಿದ್ದರು. ‘ಸೋಮಾರಿ, ಕೊಳಕ’ ಇತ್ಯಾದಿಯಾಗಿ. ಅದಕ್ಕೂ ಬೇಜಾರು ಮಾಡಿಕೊಳ್ಲದೆ ‘ಅನ್ನಮ್ಮ ನೀನು ಆನ್ನದೆ ಇನ್ಯಾರು ಅಂತಾರೆ. ನೀನು ನಮ್ಮವ್ವ ಇದ್ದಂಗೆ’ ಎಂದುಬಿಡುತ್ತಿದ್ದ. ನಮ್ಮ ಅಜ್ಜಿಯ ಬೈಗುಳದ ಪರಿಣಾಮವೋ ಏನೋ ಬಟ್ಟೆಗಳನ್ನು ಮಡಿಮಾಡಿ ಹಾಕಿಕೊಳ್ಳಲು ಪ್ರಾರಂಭಿಸಿದ. ಕುದಿಯುವ ನೀರಿನಲ್ಲಿ ಅವುಗಳನ್ನು ಬೇಯಿಸುತ್ತಿದ್ದ. ಏಕೆಂದರೆ ಅವುಗಳಲ್ಲಿ ಏನುಗಳು ಹತ್ತಿಬಿಟ್ಟಿದ್ದವು. ಬೆಂಕಿ ಕಾಯಿಸುವುದೆಂದರೆ ಆತನೆಗೆ ಖುಷಿ. ಹಿತವಾದ ಶಾಖ ತೊಡೆಗೆ ತಗಲುವಂತೆ ಕುಳಿತು ಎಡಗೈಯಿಂದ ಸವರಿಕೊಳ್ಳುತ್ತಾ ಸುಖಿಸುತ್ತಿದ್ದ. ವಾರಕ್ಕೆ ನಾಲ್ಕು ಬಾರಿಯಾದರೂ ಸುಡುಸುಡುವ ಬಿಸಿನೀರನ್ನು ಹಂಡೆಗಟ್ಟಲೆ ಸುರಿದುಕೊಳ್ಳುತ್ತಿದ್ದ. ‘ಮನೆಯ ನೀರೊಲೆಯಲ್ಲಿ ಗಂಟೆಗಟ್ಟಲೆ ಬೆಂಕಿ ಉರಿಸಬೇಡ’ ಎಂದು ನಮ್ಮ ಅಜ್ಜಿ ಬಯ್ದಿದ್ದಕ್ಕೆ ತೋಟದಲ್ಲಿ ಬಾವಿಂii ಬಳಿಯೇ ಮೂರು ಕಲ್ಲುಗಳನ್ನಿಟ್ಟುಕೊಂಡು ದೊಡ್ಡ ಮಡಕೆಯೊಂದರಲ್ಲಿ ನೀರು ಕಾಯಿಸಿಕೊಳ್ಳುತ್ತಿದ್ದನು.
ದೊಡ್ಡಣ್ಣನ ತೋಟದಿಂದ ಹೂವಿನ ಗಿಡಗಳನ್ನು ತಂದು ನಮ್ಮಲ್ಲಿಯೂ ಒಂದು ಹೂವಿನ ತೋಟ ಮಾಡಿದ. ನಮ್ಮಲ್ಲಾಗಲೇ ಕನಕಾಂಬರ ಸಂಪಿಗೆ ಹೂವು ಸಿಗುತ್ತಿದ್ದವು. ಜೊತೆಗೆ ಕಾಕಡವನ್ನೂ ಬೆಳೆದು ತಾನೇ ಕುಯ್ದು ಕಟ್ಟಿ ಮಾರಲು ಹೋಗುತ್ತಿದ್ದ. ನಮಗೆ ತೂಕದ ಲೆಕ್ಕದಲ್ಲಿ ಹಣ ಕೊಡುತ್ತಿದ್ದ. ಕುಡಿಯುವುದನ್ನು ಬಿಟ್ಟಿದ್ದರಿಂದ ಒಂದಿಷ್ಟು ಹಣ ಉಳಿತಾಯ ಮಾಡಿ ಹೊಸ ಬಟ್ಟೆಬರೆಗಳನ್ನು ಕೊಂಡುಕೊಂಡಿದ್ದ. ಅವನ್ನು ಹೊಲಿಸಿ ತೊಟ್ಟುಕೊಂಡು ಬಂದ ದಿನ ನಾವೆಲ್ಲಾ ಅವನನ್ನು ‘ಸೊಗಸುಗಾರ’ ಎಂದು ತಮಾಷೆ ಮಾಡಿದ್ದೆವು. ಕುಡಿತವನ್ನು ಬಿಟ್ಟರೂ ದಿನಕ್ಕೆ ಏಳೆಂಟು ಬಾರಿ ಟೀ ಕುಡಿಯುವುದನ್ನು ಬಿಟ್ಟಿರಲಿಲ್ಲ. ಅದಕ್ಕಾಗಿ ಮೂಡನಹಳ್ಳಿಯ ಸೂರಿ ಮತ್ತು ಪ್ರಭಾಕರನ ಹೋಟೆಲ್‌ಗಳಲ್ಲಿ ಬಹುತೇಕ ಸಮಯವನ್ನು ಕಳೇಯುತ್ತಿದ್ದ. ಪ್ಲೇಟುಗಟ್ಟಲೆ ಬೋಂಡ ತಿನ್ನುತ್ತಿದ್ದ. ದುಡ್ಡಿದ್ದರೆ ಅಲ್ಲೇ ಊಟವನ್ನೂ ಮಾಡುತ್ತಿದ್ದ. ಇಲ್ಲದಿದ್ದರೆ ನಮ್ಮ ಮನೆಗೆ ಬಂದು ‘ಅವ್ವ ಏನಾದ್ರು ಇದ್ದರೆ ಕೊಡವ್ವ’ ಎಂದು ಕೇಳಿ ತಿನ್ನುತ್ತಿದ್ದ. ನಮ್ಮ ತಾಯಿ ಇದ್ದರೆ ಕೊಡುತ್ತಿದ್ದರು. ಇಲ್ಲದಿದ್ದರೆ ಒಂದೆರೆಡು ರೊಟ್ಟಿ ಹಾಕಿಕೊಡುತ್ತಿದ್ದರು. ಒಮ್ಮೆಯಂತು ಹೊಟ್ಟೆ ಹಸಿವು ತಡೆಯದೆ, ರೊಟ್ಟಿ ತಟ್ಟುವವರೆಗೂ ಕಾಯದೆ ಹಳಸಿದ್ದ ಅನ್ನವನ್ನೇ ಮಜ್ಜಿಗೆಯಲ್ಲಿ ಕಲಸಿ ತಿಂದಿದ್ದ.

* ** *** **** ***** ****** ***** **** *** ** *

ನಮ್ಮ ತಂದೆ ಮತ್ತು ಚಿಕ್ಕಪ್ಪ ಬೇರೆಯಾಗಿದ್ದರಿಂದ, ನಮ್ಮ ಚಿಕ್ಕಪ್ಪನವರ ಸಂಸಾರ ಹಾಸನದಲ್ಲಿದ್ದುದರಿಂದ ಅವರು ತೋಟವನ್ನು ವಾರಕ್ಕೊಮ್ಮೆ ಬಂದು ನೋಡಿಕೊಂಡು ಹೋಗುತ್ತಿದ್ದರು. ಅವರು ಕಾಯಿ ಕೆಡವಿದ ದಿನ ಕೃಷ್ಣಣ್ಣನೂ ಕಾಯಿ ಹೊರಲು ಹೋಗುತ್ತಿದ್ದ. ಹೀಗೆ ಅವರ ಪರಿಚಯವಾಗಿ, ಆತನಿಗೂ ಯಾರೂ ಇಲ್ಲವೆಂದು ತಿಳಿದ ನಮ್ಮ ಚಿಕ್ಕಪ್ಪ ಆತನನ್ನು ತೋಟ ನೋಡಿಕೊಳ್ಳಲು ನೇಮಿಸಿದರು. ಹೂವಿನ ವ್ಯಾಪಾರವನ್ನೂ ಮಾಡಿಕೊಂಡು, ತೋಟವನ್ನೂ ನೋಡಿಕೊಂಡಿರು ಎಂದಿದ್ದರಿಂದ ಒಪ್ಪಿಕೊಂಡ ಕೃಷ್ಣಣ್ಣನಿಗೆ ‘ಸೌದೆಗಳನ್ನು ಬೇಕಾದರೆ ಮಾರಿಕೊ. ತರಕಾರಿ ಬೇಕಾದರೆ ಬೆಳೆದುಕೊ. ಸಂಬಳ ಅಂತ ಏನು ಕೊಡದಿದ್ದರೂ ಆಗಾಗ ಏನಾದರು ಸಹಾಯ ಮಾಡುತ್ತೇನೆ’ ಎಂದಿದ್ದರು. ಇದರಿಂದಾಗಿ ಕೃಷ್ಣಣ್ಣನದು ಏನೂ ಇಲ್ಲದ ಶ್ರೀಮಂತ ಜಿವನವಾಗಿತ್ತು. ಬೀಡಿ ಸೇದುವುದನ್ನು ಬಿಟ್ಟು ಸಿಗರೇಟು ಸೇದಲು ಪ್ರಾರಂಬಿಸಿದ. ಹೂವಿನ ವ್ಯಾಪಾರವನ್ನೂ ಬಿಡಲಿಲ್ಲ. ಜೊತೆಗೆ ಹೋಟೆಲಿನವರು ಆಗಾಗ ಚನ್ನರಾಯಪಟ್ಟಣಕ್ಕೆ ತರಕಾರಿಗೋ, ಸೀಮೆ ಎಣ್ಣೆ ತರಲಿಕ್ಕೋ ಕಳುಹಿಸುತ್ತಿದ್ದರು. ಇದರ ನಡುವೆ ಚನ್ನರಾಯಪಟ್ಟಣಕ್ಕೆ ಬಂದಾಗಲೆಲ್ಲಾ ಭಾಗೀರತಿಯೂ ಕರೆದು ಮಾತನಾಡಿಸಿ ಊಟ ತಿಂಡಿ ಕೊಡುತ್ತಿದ್ದಳು. ಒಮ್ಮೆ ಯಾವುದೋ ಮದುವೆಯಲ್ಲಿ ವಿಚ್ಛೇಧಿತ ಹೆಂಡತಿ ಸವಿತಳನ್ನೂ ಭೇಟಿ ಮಾಡಿಸಿದಳು. ಅವಳು ‘ಏನೊ ಆಗಿದ್ದು ಆಗಿ ಹೋಯಿತು. ಹಳೆಯದನ್ನು ಮರೆತುಬಿಡು. ಬೆಂಗಳೂರಿಗೆ ಬಾ. ಒಂದು ಅಂಗಡಿ ಇಟ್ಟುಕೊಡುತ್ತೇನೆ. ಕೊನೆಗಾಲದಲ್ಲಾದರು ನೆಮ್ಮದಿಯಾಗಿರು’ ಎಂದಳು. ಈತ ಒಪ್ಪಲಿಲ್ಲ. ಮಗನನ್ನು ಕರೆದು ‘ಇವನೇ ನಿಮ್ಮ ಅಪ್ಪ’ ಎಂದು ನೇರವಾಗಿಯೇ ಪರಿಚಯಿಸಿದಳು. ದುಬಾಯಿ ವಾಸಿಯಾಗಿದ್ದ ಮಗನಾದರೂ ಯಾವ ಹಮ್ಮುಬಿಮ್ಮು ತೋರಿಸದೆ ‘ಅಮ್ಮ ಹೇಳಿದ ಹಾಗೆ ಮಾಡು. ಬೆಂಗಳೂರಿಗೆ ಬಾ. ಅಂಗಡಿ ಇಟ್ಟುಕೊ. ಬೇಕಾದರೆ ನಾನೂ ತಿಂಗಳು ತಿಂಗಳೂ ಹಣ ಕಳುಹಿಸುತ್ತೇನೆ’ ಎಂದು ಹುಟ್ಟಿಸಿದ ಅಪ್ಪನಿಗೆ ಹೇಳಿದ. ಆದರೆ ಕೃಷ್ಣಣ್ಣ ‘ಹೆಂಗೆ ಹೋಗಾಕಾಗುತ್ತವ್ವ. ಅವಳಿರುವಾಗ ದನ ಹೊಡೆದ ಹಾಗೆ ಹೊಡೆದೆ. ಕೋರ್ಟಲ್ಲೆ ನನ್ನ ಹೆಂಡತಿ ಅಲ್ಲ ಅಂತ ಬರ್ದು ಕೊಟ್ಟೆ. ಅವರಿಗೇನು ಒಳ್ಳೇದು ಮಾಡಲಿಲ್ಲ. ಹುಟ್ಟಿದ ಮಗನ ಮುಖ ನೋಡಲಿಲ್ಲ. ಅಂತಾದ್ರಲ್ಲಿ ಈಗ ಅವ್ರು ಕರಿತಾರೆ ಅಂತ ನಾನು ಹೋಗಾಕಾಗುತ್ತಾ?’ ಎಂದು ನಮ್ಮ ತಾಯಿಯ ಹತ್ತಿರ ಹೇಳುತ್ತಿದ್ದ.

ದಿನದಿನಕ್ಕೆ ಕುಂಟು ಹೆಚ್ಚಾಗುತ್ತಿತ್ತು. ಎಡಗಾಲಿನ ಉದ್ದವೇ ಕಡಿಮಾಯಗುತ್ತಿತ್ತು ಎಂದು ನನ್ನ ಭಾವನೆ. ಆದರೆ ಅವನಲ್ಲಿ ಬದುಕಬೇಕೆಂಬ ಆಸೆ ಇನ್ನೂ ಜೀವಂತವಾಗಿತ್ತು. ‘ಏನೋ ಇಪ್ಪತ್ತು ವರ್ಷದ ವನವಾಸ ಕಳೆದಾಯ್ತು. ಈ ಗಾಯಾನೂ ಮಾಯ್ತಾ ಇದೆ. ಇನ್ನು ಯಾವಾಳಾದ್ರು ಗಂಡ ಸತ್ತೋಳನ್ನೊ, ಗಂಡ ಬಿಟ್ಟೋಳನ್ನೋ ಮದುವೆಯಾಗಿ ಯಾವುದಾದರು ಜಗುಲಿ ಮೇಲೆ ಸಂಸಾರ ಮಾಡ್ತೀನಿ. ನನಗಿನ್ನೇನು ಆಸೆ ಇಲ್ಲ. ಏನೋ ನಾನೊಂದಿಷ್ಟು ವ್ಯಾಪಾರ ಮಾಡ್ಕೊಂಡು ಬಂದಾಗ ಒಂದಿಷ್ಟು ಹಸಿಬಿಸಿ ಮಾಡಿ ಹಾಕಿದರೆ ಸಾಕು’ ಎಂದು ಆಗಾಗ ಹೇಳುತ್ತಿದ್ದ. ಆಗ ಕುಂಬಾರಹಳ್ಳಿಯಲ್ಲಿ ಮದುವೆಗಿಂತ ಮೊದಲೇ ಗಂಡು ಮಗುವನ್ನು ಪಡೆದಿದ್ದ ಹುಡುಗಿಯನ್ನು ಒಬ್ಬ ಮದುವೆಯಾಗಿ, ನಾಲ್ಕು ವರ್ಷದ ಹುಡುಗನನ್ನೂ ಹೆಂಡತಿಯನ್ನೂ ಸಾಕಿಕೊಂಡಿದ್ದ. ಅದನ್ನು ಹೇಳಿ ‘ನೋಡವ್ವ. ಅಂತಾವ್ಳು ಯಾರದ್ರು ಒಬ್ಳು ಸಿಕ್ಕರೆ ಸಾಕು’ ಎಂದು ಯಾವ ನಾಚಿಕೆಯೂ ಸಂಕೋಚವೂ ಇಲ್ಲದೆ ಹೇಳುತ್ತಿದ್ದ.

ಕಾಲ ಹೀಗೆ ಹೋಗುತ್ತಿತ್ತು. ಆದರೆ ಕೃಷ್ಣಣ್ಣನಲ್ಲಿ ಮೊದಲಿನ ಕಸುವು ಇರಲಿಲ್ಲ. ಹೆಚ್ಚಿಗೆ ಕೆಲಸ ಮಾಡಿದರೆ ಸುಸ್ತು ಆಗುತ್ತಿತ್ತು. ಇತ್ತೀಚಿಗೆ ಉಬ್ಬಸ ಬೇರೆ ಕಾಣಿಸಿಕೊಂಡಿತ್ತು. ತೋಟದಿಂದ ಹೊರಬಹುದಾದಷ್ಟು ಸೌದೆ ಹೊತ್ತುಕೊಂಡು ಹೋಗಿ ಹೋಟೆಲ್ಲುಗಳಿಗೆ ಕೊಟ್ಟು ಅಲ್ಲೇ ಕಾಲ ಹಾಕುತ್ತಿದ್ದ. ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದುದು ದುಡ್ಡಿಲ್ಲದಾಗ ಮಾತ್ರ. ಕೊನೆಕೊನೆಗೆ ಒಂದು ರೀತಿಯಲ್ಲಿ ಭಿಕ್ಷುಕನೇ ಆಗಿ ಹೋಗಿದ್ದ. ಹೂ ಮಾರಲು ಕುಂದೂರು ಮಠಕ್ಕೆ ಹೋಗುತ್ತಿದ್ದ. ಅಲ್ಲಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಜಾತ್ರೆ ಸೇರಿದಂತೆ ಜನ ಸೇರುತ್ತಿದ್ದರು. ಅಮವಾಸೆ ಪೂರ್ಣಿಮೆಗಳಲ್ಲಂತೂ ಸಾವಿರಗಟ್ಟಲೆ ಜನ ಸೇರುತ್ತಿದ್ದರು. ಅಲ್ಲಿನ ರಕ್ತದೇವತೆಯಾದ ಮೆಳೆಯಮ್ಮನಿಗೆ ಕುರಿ, ಕೋಳಿ, ಆಡು, ಹಂದಿ ಬಲಿ ಕೊಟ್ಟು ಅಲ್ಲಿಯೇ ಅಡುಗೆ ಮಾಡಿ, ದೇವರಿಗೆ ಎಡೆ ಕೊಟ್ಟು ನೆಂಟರಿಷ್ಟರನ್ನೆಲ್ಲಾ ಕರೆದು ಊಟ ಹಾಕುತ್ತಿದ್ದರು. ಒಂದೊಂದು ದಿನ ಐನೂರು ಆರನೂರರವರಗೆ ಕುರಿ ಕೋಳಿಗಳನ್ನು ಬಲಿ ಕೊಡಲಾಗುತಿತ್ತು. ಇದು ಹಾಸನ ಜಿಲ್ಲೆಯಲ್ಲೇ ಪ್ರಸಿದ್ಧವಾದ ರಕ್ತದೇವತೆಯ ಕ್ಷೇತ್ರವಾಗಿತ್ತು. ಅಲ್ಲಿ ಕೃಷ್ಣಣ್ಣ ಹತ್ತು ಹನ್ನೊಂದು ಗಂಟೆಯವರೆಗೂ ಹೂವನ್ನು ಮಾರುತ್ತಿದ್ದ. ನಂತರ ಯಾವುದಾದರು ಒಂದು ಗಾಡಿಯ ಬಳಿ ಹೋಗಿ ಕುಳಿತು ಅವರು ಕರೆದಾಗ ಊಟ ಮಾಡುತ್ತಿದ್ದ. ಕೆಲವರು ಕರೆಯದಿದ್ದಾಗ ಬೇಸರಿಸದೆ ಇನ್ನೊಂದು ಗುಂಪಿನ ಬಳಿ ಹೋಗಿ ಕುಳಿತುಕೊಳ್ಳುತ್ತಿದ್ದ. ಯಾರಾದರೊಬ್ಬರು ಊಟ ಹಾಕಿಯೇ ಹಾಕುತ್ತಿದ್ದರು. ಕೆಲವು ದಿನ ಅಲ್ಲಿಯೇ ಉಳಿದು ಬಿಡುತ್ತಿದ್ದ. ಆಗೆಲ್ಲ ನಮ್ಮ ತೋಟದ ಹೂವುಗಳನ್ನು ಕೇಳುವವರೇ ಇರುತ್ತಿರಲಿಲ್ಲ. ಆಗ ನಮ್ಮ ಅಜ್ಜಿ ಆತನಿಗೆ ಹಿಡಿ ಶಾಪ ಹಾಕುತ್ತಿದ್ದುದ್ದೂ, ನಮ್ಮ ತಂದೆ ಹಾಗೆ ಬಯ್ಯಬಾರದೆಂದು, ‘ನಮ್ಮ ಮನೆಯಲ್ಲೇ ಇರುತ್ತೇನೆಂದು ಅತನೇನು ಬರೆದುಕೊಟ್ಟಿಲ್ಲ. ಅವನಿಗೆ ಇಷ್ಟವಾದರೆ ಇರುತ್ತಾನೆ ಇಲ್ಲದಿದರೆ ಇಲ್ಲ’ ಎನ್ನುತ್ತಿದ್ದರು. ಕೊನೆಕೊನೆಗೆ ನಡೆದಾಡುವುದೇ ಕಷ್ಟವಾಗಿತ್ತು. ಮೂಡನಹಳ್ಳಿಯಿಂದ ಒಂದು ಮೈಲಿಯಿರುವ ನಮ್ಮ ಮನೆಗೆ ಬರುವಷ್ಟರಲ್ಲಿ ಏಳೆಂಟು ಕಡೆ ಕುಳಿತುಕೊಳ್ಳಬೇಕಾಗುತ್ತಿತ್ತು. ಅವನ ಆಗಿನ ಸ್ಥಿತಿಯನ್ನು ನೋಡಿದ ಕೆಲವರಿಗೆ ‘ಈತ ಇನ್ನು ಹೆಚ್ಚು ದಿನ ಬದುಕುವುದಿಲ್ಲ’ ಎನ್ನಿಸುತ್ತಿತ್ತು.

* ** *** **** ***** ****** ***** **** *** ** *

ಒಂದು ಗುರುವಾರ ಬೆಳಿಗ್ಗೆ ನಮ್ಮ ತಂದೆ ಗಂಡಸಿ ಸಂತೆಗೆ ಹೋಗಲೆಂದು ಬಸ್ಸಿಗಾಗಿ ಮೂಡನಹಳ್ಳಿಗೆ ಬಂದಿದ್ದಾರೆ. ಆಗ ಅಲ್ಲಿ ಹೋಟೆಲ್ಲಿನ ಮರವೊಂದರ ಕೆಳಗೆ ಕೃಷ್ಣಣ್ಣ ಬಿದ್ದಿದ್ದ. ನಮ್ಮ ತಂದೆ ನೋಡಿದಾಗ ಚಳಿಯಲ್ಲಿ ಮರಗಟ್ಟಿ ಹೋಗಿದ್ದ ಆತನಿಗೆ ಉಬ್ಬಸ ಜಾಸ್ತಿಯಾಗಿತ್ತು. ಹೋಟೆಲಿನಿಂದ ನಾಲ್ಕು ಬಿಸಿ ಇಡ್ಲಿಯನ್ನೂ, ಕಾಫಿಯನ್ನೂ ತಗೆದು ಆತನಿಗೆ ತಿನ್ನಿಸಿ ‘ನಾನು ಸಂತೆಗೆ ಹೋಗಿ ಬರುವವರೆಗೂ ಇಲ್ಲಿರು. ಬಂದು ಹೇಗಾದರೂ ಮನೆಯ ಹತ್ತಿರ ಕರೆದು ಕೊಂಡು ಹೋಗುತ್ತೇನೆ’ ಎಂದು ಹೇಳಿ ಸಂತೆಗೆ ಹೋಗಿದ್ದಾರೆ. ಹನ್ನೊಂದು ಗಂಟೆಯ ಹೊತ್ತಿಗೆ ಬಂದು ನೋಡುವಷ್ಟರಲ್ಲಿ ಕೃಷ್ಣಣ್ಣ ಸತ್ತು ಹೋಗಿದ್ದ. ಅವನ ತಮ್ಮ ಅಲ್ಲಿಗೆ ಬಂದಿದ್ದನಾದರೂ ಹೆಣವನ್ನು ತಗೆದುಕೊಂಡು ಹೋಗಲು ಸಿದ್ಧನಿರಲಿಲ್ಲ. ನಮ್ಮ ಮನೆಯಲ್ಲಿ ಎತ್ತು ಗಾಡಿಯಿರಲಿಲ್ಲ. ಈಗಿನ ಹಾಗೆ ಮೂಡನಹಳ್ಳಿಯಲ್ಲಿ ಆಟೋ ಕೂಡ ಇರಲಿಲ್ಲ. ಅಲ್ಲದೆ ಅವನ ಸಂಬಂಧಿಕರು ಇರುವಾಗ ಹೇಗೆ ಹೆಣವನ್ನು ತಗೆದುಕೊಂಡು ಹೋಗುವುದು ಎಂಬ ಸಂದಿಗ್ಧ. ಮೂಡನಹಳ್ಳಿಯ ಕೆಲವರು ‘ಅವನ ಸಂಬಂಧಿಕರೇ ತಗೆದುಕೊಂಡು ಹೋಗಲಿ. ಅವನ ಒಡಹುಟ್ಟಿದ ತಮ್ಮನೇ ಇಲ್ಲವೆ? ನಿಮಗೇಕೆ ಈ ಕಷ್ಟ’ ಎಂದು ಹೇಳಿದರಂತೆ. ಅವನ ತಮ್ಮ ‘ನಾನೇಕೆ ಹೊತ್ತುಕೊಳ್ಳಲಿ ಈ ಹೊರೆ. ದುಡಿಸಿಕೊಂಡವರಿಲ್ಲವೆ?’ ಎಂದು ನಮ್ಮ ಚಿಕ್ಕಪನನ್ನು ಉದ್ಧೇಶಿಸಿ ಹೇಳಿದ್ದಾನೆ. ಹಾಸನದಲ್ಲಿದ್ದ ನಮ್ಮ ಚಿಕ್ಕಪ್ಪನಿಗೆ ವಿಷಯ ತಿಳಿದು ಬರುವಷ್ಟರಲ್ಲಿ ಸಂಜೆ ಐದು ಗಂಟೆಯಾಗಿತ್ತು. ಅವರು ಬಂದು ಕೃಷ್ಣಣ್ಣನ ತಮ್ಮನಿಗೆ ‘ಅದು ಏನು ಮಾಡಬೇಕೊ ಮಾಡು. ನಾನು ಎರಡು ಸಾವಿರ ರುಪಾಯಿ ಕೊಡುತ್ತೇನೆ’ ಅಂದಾಗ ಆತ ಗಾಡಿ ತಂದು ಹೆಣವನ್ನು ಸಾಗಿಸಿದನೆಂತೆ.

ಆ ದಿನದ ಘಟನೆಯನ್ನು ನಮ್ಮ ತಾಯಿ ನನಗೆ ಹೇಳಿದಾಗ ನನಗರಿವಿಲ್ಲದೇ ನನ್ನ ಕಣ್ಣಿನಲ್ಲಿ ನೀರು ಬಂತು. ಇಂತಾಹದ್ದೇ ಎಂದು ನಿರ್ಧಿಷ್ಟವಾಗಿ ಹೇಳಲಾಗದ ಭಾವನೆಗಳು ಮನಸ್ಸನ್ನು ತುಂಬಿಕೊಂಡವು. ಇಪ್ಪತ್ತು ವರ್ಷದ ವನವಾಸ ಮುಗಿಸಿದ ಕೃಷ್ಣಣ್ಣ ಹೊಸ ಸಂಸಾರ ಹೂಡುವ ಕನಸು ಕಾಣುತ್ತಿದ್ದ. ಹೊಸ ಸಂಸಾರ ಹೂಡಲೆಂದೇ ದೂರದ ಆದರೆ ಯಾರೂ ಕಾಣದ ಊರಿಗೆ ಪಯಣ ಬೆಳೆಸಿದ್ದ!

* ** *** **** ***** ****** ***** **** *** ** *

Rating
No votes yet

Comments