ದೇವರು, ದೆವ್ವಗಳು ಮೈ ಮೇಲೆ ಬರುತ್ತವೆಯೆ?

ದೇವರು, ದೆವ್ವಗಳು ಮೈ ಮೇಲೆ ಬರುತ್ತವೆಯೆ?

ದೇವರು, ದೆವ್ವಗಳು ಮೈ ಮೇಲೆ ಬರುತ್ತವೆಯೆ? 

ಮನುಷ್ಯನಿಗೆ, ಮನುಷ್ಯ ಎಂಬ ಹೆಸರು ಬರಲು ಕಾರಣ, ಮನಸ್ಸು. ಇತರ ಯಾವ ಜೀವರಾಶಿಯಲ್ಲೂ ಕಂಡುಬರದ ವಿಶಿಷ್ಠ ಹಾಗೂ ಅದ್ಭುತ ಮನಸ್ಸು ಮನುಷ್ಯನಲ್ಲಿದೆ. ವಾಸ್ತವದಲ್ಲಿ ಮನುಷ್ಯನೂ ಒಂದು ಪ್ರಾಣಿ. ಮನುಷ್ಯನು ತನ್ನ ಮನಸ್ಸಿನ ನೆರವಿನಿಂದ, ಮನಸ್ಸಿಗೆ ಕಾರಣವಾದ ಬುದ್ಧಿಶಕ್ತಿಯ ನೆರವಿನಿಂದ ವಿಚಾರ ಮಾಡಿದನು.  ದೇವರನ್ನು ಹಾಗೂ ದೆವ್ವವನ್ನು ಸೃಜಿಸಿದನು.

ಅಗ್ನಿಪರ್ವತಗಳಿಂದ ಭುಗಿಲೇಳುವ ಜ್ವಾಲೆ. ಕಲ್ಲುಮಣ್ಣು ಕರಗಿ ಹರಿಯುವ ಲಾವಾರಸ. ನೀಲ ಬಾನ ತುಂಬ ಕಪ್ಪು ಮೋಡ. ಗುಂಡಿಗೆ ಮಿಡಿತವೇ ನಿಲ್ಲುವಂತಹ ಗುಡುಗು. ಫಳಿಫಳಿರೆಂದು ಬಾನಿನಿಂದ ಭುವಿಯತ್ತ ಎರಗಿ ಎಲ್ಲವನ್ನು ಸುಟ್ಟುಹಾಕುವ ಸಿಡಿಲು. ಮುಸಲಧಾರೆಯ ಮಳೆ. ತುಂಬಿ ಹರಿಯುವ ನದಿ. ಭೋರ್ಗರೆಯುವ ಸಾಗರ...ಎಲ್ಲವೆಲ್ಲವನ್ನು ಬೀಸಿ ಒಗೆಯುವ ಚಂಡಮಾರುತ...

ಈ ಪ್ರಾಕೃತಿಕ ರೌದ್ರ ಶಕ್ತಿಗಳನ್ನು ನೋಡಿದ ನಮ್ಮ ಪೂರ್ವಜರಲ್ಲಿ ಭೀತಿ ಮೂಡಿತು. ಇವನ್ನೆಲ್ಲ ನಡೆಸುವ, ನಿಯಂತ್ರಿಸುವ ಯಾವುದೋ ಒಂದು ಶಕ್ತಿ ಇರಬೇಕು ಎಂದು ಗ್ರಹಿಸಿದರು.

ಮಳೆಗಾಲ. ನೆಲದ ತೇವವನ್ನು ಸೀಳಿಕೊಂಡು ಹೊರಬರುವ ಮೊಳಕೆ. ನೋಡ ನೋಡುತ್ತಿರುವಂತೆಯೇ ಮೊಳಕೆಯು ಗಿಡವಾಯಿತು. ಗಿಡವು ಬೆಳೆದು ಹೂವನ್ನು ತಳೆಯಿತು. ಹೂವು ಉದುರಿ ಕಾಯಿ ಕಾಣಿಸಿಕೊಂಡಿತು. ಕಾಯಿ ಹಣ್ಣಾಯಿತು. ಹಣ್ಣಾದ ಕಾಯಿ ನೆಲಕ್ಕುದುರಿತು. ಮಣ್ಣನ್ನು ಸೇರಿದ ಬೀಜ ಮತ್ತೆ ಮೊಳಕೆಯೊಡೆಯಿತು. ಆ ಮೊಳಕೆ ಮತ್ತೆ ಗಿಡವಾಗಿ....ಒಂದು ಜೀವ ಚಕ್ರವನ್ನು ಮಾನವ ಪೂರ್ವಜರು ಗಮನಿಸಿದರು. 

ಸೂರ್ಯ, ಚಂದ್ರ, ಮಳೆ, ಗಾಳಿ, ನೀರು, ಬೆಂಕಿ ಎಲ್ಲವೂ ತನ್ನ ಅಸ್ತಿತ್ವಕ್ಕೆ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಕಾರಣವಾಗಿರುವುದನ್ನು ಮನಗಂಡರು. ಅವರ ಮನಸ್ಸಿನಲ್ಲಿ ಕೃತಜ್ಞತೆ ಮೂಡಿತು.

ನಮ್ಮ ಪೂರ್ವಜರ ಮನಸ್ಸಿನಲ್ಲಿ ಎರಡು ಭಾವನೆಗಳು ಮೂಡಿದವು.

ಪ್ರಕೃತಿಯಲ್ಲಿ ನಮಗೆ ಒಳ್ಳೆಯದನ್ನು ಮಾಡುವ ಪ್ರಾಕೃತಿಕ ಸೌಮ್ಯ ಶಕ್ತಿಯಿದೆ. ಹಾಗೆಯೇ ನಮಗೆ ಕೆಟ್ಟದನ್ನು ಮಾಡಬಲ್ಲ ರೌದ್ರ ಶಕ್ತಿಗಳೂ ಇವೆ. ನಮ್ಮ ಪೂರ್ವಜರು ಒಳ್ಳೆಯ ಶಕ್ತಿಗಳಿಗೆ ‘ದೇವರು‘ ಎಂದು ಹೆಸರನ್ನು ನೀಡಿದರು. ತಮಗೆ ಅಪಾಯವನ್ನು ಉಂಟು ಮಾಡುವ ಪ್ರಾಕೃತಿಕ ಶಕ್ತಿಯನ್ನೂ, ಆರಂಭದಲ್ಲಿ ದೇವರ ಒಂದು ರೂಪ ಎಂದೇ ಪರಿಗಣಿಸಿದರು. ಈ ಶಕ್ತಿಗೆ ನಮಿಸಲು ಕೃತಜ್ಞತೆಗಿಂತ ಭಯ, ಭೀತಿಗಳು ಪ್ರಮುಖ ಕಾರಣಗಳಾಗಿದ್ದವು. ಈ ನೇತ್ಯಾತ್ಮಕ ಶಕ್ತಿಯನ್ನು ‘ರುದ್ರ‘ ಎಂದು ಕರೆದರು. ಇವನು ವೇದಪೂರ್ವಕಾಲದ ದೇವತೆ. ರುದ್ರನ ಅಧೀನದಲ್ಲಿ ಜಗತ್ತಿನ ಎಲ್ಲ ಕೆಡುಕುಗಳು ಇರುತ್ತವೆ ಎಂದು ಭಾವಿಸಿದರು. ಆ ಕೆಡುಕುಶಕ್ತಿಗಳನ್ನು ದೆವ್ವ, ಭೂತ, ಪ್ರೇತ, ಪೀಡೆ, ಪಿಶಾಚಿಗಳೆಂದು ಕರೆದರು. ಇವೆಲ್ಲವು ರುದ್ರನ ಗಣಗಳು ಎಂದು ಕರೆಸಿಕೊಂಡವು.

ರುದ್ರನು ಮೂಲತಃ ಭಯಂಕರ ದೇವತೆ. ಕಾಲಕ್ರಮೇಣ ನಮ್ಮ ಹಿರಿಯರು ರುದ್ರನ ಶಾಂತ ಸ್ವರೂಪವನ್ನು ಕಲ್ಪಿಸಿಕೊಂಡರು. ಅವನನ್ನು ‘ಶಿವ (ಮಂಗಳ) ಎಂದು ಕರೆದರು. ಪುರಾಣಗಳ ಕಾಲಕ್ಕೆ ವೇದಕಾಲದ ರುದ್ರನು ಶಿವನಾಗಿ ತ್ರಿಮೂರ್ತಿಗಳಲ್ಲಿ ಒಬ್ಬನಾಗಿ ಲಯಕರ್ತನೆಂದು ಹೆಸರನ್ನು ಪಡೆದನು. ಆದರೂ ಅವನನ್ನು ಭೂತನಾಥ ಎಂದು ಕರೆಯುವುದನ್ನು ಬಿಡಲಿಲ್ಲ.

ಇದುವರೆಗಿನ ಎಲ್ಲ ವಿವರಣೆಯ ಸಾರಾಂಶವನ್ನು ಒಂದು ವಾಕ್ಯದಲ್ಲಿ ಸಂಗ್ರಹಿಸಬಹುದು. ಪ್ರಕೃತಿಯ ಇತ್ಯಾತ್ಮಕ ಮುಖ ದೇವರು, ನೇತ್ಯಾತ್ಮಕ ಮುಖ ದೆವ್ವ- ಎಂದು ಹೇಳಬಹುದು.

ಧರ್ಮ-ವಿಜ್ಞಾನ:

ಮನುಷ್ಯನು ತನ್ನನ್ನು ತಾನು ‘ಮತಿವಂತ ಮಾನವ‘ ಎಂದು ಕರೆದುಕೊಂಡನು. ಇತರ ಜೀವರಾಶಿಯಲ್ಲಿ ಇರದ ‘ಮನಸ್ಸು, ಬುದ್ಧಿಶಕ್ತಿ, ವಿಚಾರ ಶಕ್ತಿ‘ ಈತನಲ್ಲಿದ್ದವು. ಮತಿವಂತ ಮಾನವನು ತನ್ನ ಸುತ್ತಮುತ್ತಲಿನ ನಿಸರ್ಗವನ್ನು (ವಿಶ್ವ) ನೋಡಿದನು. ಅದನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಿದನು. ಈ ಅಧ್ಯಯನದ ಫಲವಾಗಿ ಅವನಿಗೆ ‘ಜ್ಞಾನ ಬಂದಿತು. ನಿಸರ್ಗದಲ್ಲಿ ವ್ಯವಸ್ಥಿತವಾಗಿ ನಡೆಯುವ ಕೆಲಸ ಕಾರ್ಯಗಳನ್ನು ಅರಿತುಕೊಳ್ಳುವ ಜ್ಞಾನವನ್ನು ‘ವಿಶೇಷವಾದ  ಜ್ಞಾನ ಅಥವ ‘ವಿಜ್ಞಾನ ಎಂದು ಕರೆದನು.

ವಿಜ್ಞಾನವು ಯಾವಾಗಲು ವಸ್ತುನಿಷ್ಠವಾದದ್ದು ಹಾಗೂ ಸಾರ್ವತ್ರಿಕವಾದದ್ದು. ನಿಸರ್ಗದ ಕ್ರಿಯೆಗಳನ್ನು ವ್ಯವಸ್ಥಿತವಾಗಿ, ವಸ್ತುನಿಷ್ಠವಾಗಿ, ವಾಸ್ತವ ದೃಷ್ಠಿಯಿಂದ ನೋಡಿ, ಅರ್ಥೈಸುವ ಮನಃಸ್ಥಿತಿಯನ್ನು ‘ವೈಜ್ಞಾನಿಕ ಮನೋಧರ್ಮ ಎಂದು ಕರೆದನು. ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳಲು ವಿಚಾರ ಮಾಡುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು; ಇದುವೇ ವೈಚಾರಿಕತೆ ಅಥವ ವೈಜ್ಞಾನಿಕತೆ ಎಂದು ಹೇಳಿದನು.

ಸರಳವಾಗಿ ಹೇಳುವುದಾದರೆ, ಪ್ರಶ್ನೆಯನ್ನು ಮಾಡಿ ಸರಿಯಾದ ಉತ್ತರವನ್ನು ಪಡೆದು, ಆ ನಂತರ ಒಪ್ಪಿ ಆಚರಿಸುವುದೇ ವಿಜ್ಞಾನದ ಮೂಲ ಆಶಯ ಎನ್ನಬಹುದು.

ಈಗ ಮೂಲ ಪ್ರಶ್ನೆಗೆ ಮತ್ತೆ ಬರೋಣ. ದೇವರು ಇದ್ದನೆಯೆ? ದೆವ್ವ ಇದೆಯೆ?

ಧರ್ಮವು ದೇವರು ಇದ್ದಾನೆ; ಅವನೇ ಈ ಜೀವರಾಶಿ, ಭೂಮಿ, ಸೌರಮಂಡಲ ಹಾಗೂ ಬ್ರಹ್ಮಾಂಡವನ್ನು ಸೃಷ್ಟಿಸಿದ ಎನ್ನುತ್ತದೆ ಧರ್ಮ. ವಿಜ್ಞಾನವು ಈ ಎಲ್ಲ ಅಸ್ತಿತ್ವಕ್ಕೆ ಪ್ರಕೃತಿ ಕಾರಣ ಎನ್ನುತ್ತದೆ. ಈ ಪ್ರಕೃತಿಯನ್ನು ಯಾರು ಸೃಜಿಸಿದರು ಎಂದು ಕೇಳಿದರೆ ಅದಕ್ಕೆ ವಿಜ್ಞಾನವು ಮೌನವಾಗುತ್ತದೆ. ಅದು ಮೊದಲಿನಿಂದಲೂ ಇತ್ತು ಎನ್ನುತ್ತದೆ.

ವಾಸ್ತವದಲ್ಲಿ ದೇವರು ಮತ್ತು ದೆವ್ವ ಇವೆರಡೂ ನಮ್ಮ ಕಲ್ಪನೆಗಳು.

ನಂಬಿಕೆಗಳು:

ನಂಬಿಕೆಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ನಾವು ಬದುಕಲು ನಂಬಿಕೆಗಳು ಬೇಕು. ನಂಬಿಕೆಗಳ ಬಗ್ಗೆ ವಿಜ್ಞಾನದ ಆಕ್ಷೇಪವೇನಿಲ್ಲ. ಆದರೆ ಮೂಢನಂಬಿಕೆಗಳ ಬಗ್ಗೆ ವಿಜ್ಞಾನವು ಆಕ್ಷೇಪಿಸುತ್ತದೆ.

ವಿಜ್ಞಾನವು ನಂಬಿಕೆಗಳನ್ನು ಒಪ್ಪುತ್ತದೆ. ಆದರೆ ವಿಜ್ಞಾನವು ತರ್ಕದ ಆಧಾರವನ್ನು ಹೊಂದಿರುವ ನಂಬಿಕೆಗಳಲ್ಲಿ ವಿಶ್ವಾಸವನ್ನು ಇಡುತ್ತದೆ. ಉದಾ: ಆವರ್ತಕ ಕೋಷ್ಠಕ (ಪೀರಿಯಾಡಿಕ್ ಟೇಬಲ್). ನಮ್ಮ ಪ್ರಕೃತಿಯಲ್ಲಿ ದೊರೆಯುವ ೯೨ ಮೂಲವಸ್ತುಗಳ ಸ್ಥಾನಮಾನಗಳು ವಿಜ್ಞಾನಿಗಳಿಗೆ ತಿಳಿದಿರಲಿಲ್ಲ. ಕೆಲವೇ ಕೆಲವು ಮೂಲವಸ್ತುಗಳ ಸ್ಥಾನ ಮಾತ್ರ ತಿಳಿದಿದ್ದವು. ಆದರೆ ಉಳಿದ ಮೂಲವಸ್ತುಗಳು ಇಂತಿಂತಹ ಸ್ಥಾನದಲ್ಲಿ ಬರಬೇಕು ಎಂದು ವಿಜ್ಞಾನಿಗಳು ಹೇಳಿದರು. ಬರುತ್ತದೆ, ಬರಲೇಬೇಕು ಎಂದು ಅವರು ನಂಬಿದ್ದರು. ಅವರು ನಂಬಿದ ಹಾಗೆ ಕಾಲಕ್ರಮೇಣ ವಿಜ್ಞಾನಿಗಳು ಒಂದೊಂದೇ ಮೂಲವಸ್ತುವನ್ನು ಕಂಡುಹಿಡಿಯುತ್ತಾ ಆವರ್ತಕ ಕೋಷ್ಠಕವನ್ನು ಪೂರ್ಣಗೊಳಿಸಿದರು. ಒಂದು ಕ್ರಮಬದ್ಧವಾದ ಅಧ್ಯಯನದಿಂದ ಅವರಿಗೆ ಎಲ್ಲ ಮೂಲವಸ್ತುಗಳ ಸ್ಥಾನವನ್ನು ತುಂಬಲು ವಿಜ್ಞಾನಿಗಳಿಗೆ ಸಾಧ್ಯವಾಯಿತು. 

ಮೂಢನಂಬಿಕೆಗಳಿಗೆ ಇಂತಹ ತರ್ಕಬದ್ಧ ಆಧಾರಗಳು ಇರುವುದಿಲ್ಲ. ಅವು ಪರಂಪರಾನುಗತವಾಗಿ ಬಂದಿರುತ್ತವೆ. ನಮ್ಮ ಹಿರಿಯರಿಂದ ಬಂದಿದೆ ಎಂಬ ಒಂದೇ ಒಂದು ಕಾರಣಕ್ಕಾಗಿ, ಅವನ್ನು ಪ್ರಶ್ನಿಸದೆ ಒಪ್ಪಬೇಕಾಗುತ್ತದೆ. ಪಾಲಿಸಬೇಕಾಗುತ್ತದೆ. ಹೀಗೆ ಒಪ್ಪುವುದನ್ನು ವಿಜ್ಞಾನವು ವಿರೋಧಿಸುತ್ತದೆ.

ವಾಸ್ತವದಲ್ಲಿ ದೇವರು ಇದ್ದಾನೆ ಎನ್ನುವುದು ಒಂದು ನಂಬಿಕೆ. ದೆವ್ವ ಇದೆ ಎನ್ನುವುದೂ ಒಂದು ನಂಬಿಕೆ. ಇಂತಹ ನಂಬಿಕೆಗಳಲ್ಲಿ ವಿಶ್ವಾಸ ಇಡುವವರು ನಮ್ಮ ಸಮಾಜದಲ್ಲಿ ಹೆಚ್ಚಿದ್ದಾರೆ ಎನ್ನುವ ಯಾವುದೇ ಅತಿಶಯೋಕ್ತಿಯಿಲ್ಲ.

ಮನಸ್ಸು:

ಮನುಷ್ಯನಿಗೆ ಮನಸ್ಸು ಇದೆ. ಈ ಮನಸ್ಸು ಮುಖ್ಯವಾಗಿ ಎರಡು ಭಾಗಗಳನ್ನು ಹೊಂದಿದೆ. ಮೊದಲನೆಯದು ಹೊರಮನಸ್ಸು. ನಮ್ಮ ದೈನಂದಿನ ಬದುಕಿನಲ್ಲಿ ಭಾಗವಹಿಸುತ್ತದೆ. ಎರಡನೆಯದು ಒಳಮನಸ್ಸು. ಇದನ್ನು ಸುಪ್ತಮನಸ್ಸೂ ಎಂದೂ ಕರೆಯುವರು. ನಂಬಿಕೆಗಳು ಹೊರಮನಸ್ಸಿಗಿಂತ ಸುಪ್ತಮನಸ್ಸಿನ ಮೇಲೆ ಹೆಚ್ಚು ಪ್ರಭಾವವನ್ನು ಬೀರಬಲ್ಲವು. ಸುಪ್ತಮನಸ್ಸು ದೇಹದ ಮೇಲೆ, ದೈಹಿಕ ಕೆಲಸ ಕಾರ್ಯಗಳ ಮೇಲೆ ಪ್ರಭಾವ ಬೀರಬಲ್ಲವು.

ನಮ್ಮ ದೇಹದಲ್ಲಿ ಶಕ್ತಿಯಿದೆ. ಒಬ್ಬನ ದೇಹದಲ್ಲಿ ಎಷ್ಟು ಶಕ್ತಿಯಿದೆ ಎನ್ನುವುದನ್ನು ಅಂದಾಜು ಮಾಡಿ ಹೇಳಲು ಸಾಧ್ಯವಿದೆ. ಆದರೆ ಹಾಗೆ ಅಂದಾಜು ಮಾಡಿದ ಶಕ್ತಿ ವಾಸ್ತವದಲ್ಲಿ ನಿಖರವಾಗಿರುವುದಿಲ್ಲ. ನಮ್ಮ ದೇಹದಲ್ಲಿ ಯಾವಾಗಲೂ ಒಂದು ಮೀಸಲು ಶಕ್ತಿ (ರಿಸರ್ವ್ ಎನರ್ಜಿ) ಇರುತ್ತದೆ. ಈ ಮೀಸಲು ಶಕ್ತಿಯನ್ನು ನಮ್ಮ ಹೊರಮನಸ್ಸಿಗಿಂತ ಒಳಮನಸ್ಸು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಲ್ಲುದು.

ಕಲ್ಪನೆಗಳು:

ದೇವರು ಮತ್ತು ದೆವ್ವಗಳು ನಮ್ಮ ಮನಸ್ಸಿನ ಕಲ್ಪನೆಗಳು.

ದೇವರು ಮತ್ತು ದೆವ್ವದ ಬಗ್ಗೆ ನಮ್ಮ ಸಮಾಜದಲ್ಲಿ ಇರುವ ಕಲ್ಪನೆಗಳನ್ನು ಒಮ್ಮೆ ಪರಾಮರ್ಶಿಸಿ.  ಒಬ್ಬರು ದೇವರು ಅಥವ ದೆವ್ವದಲ್ಲಿ ನಂಬಿಕೆಯನ್ನು ಇಡಬೇಕಾದರೆ, ಅವನು ವಾಸಿಸುವ ಸಮಾಜ ಹಾಗೂ ಆ ಸಮಾಜದಲ್ಲಿ ಪ್ರಚಲಿತದಲ್ಲಿರುವ ನಂಬಿಕೆಗಳು ದೇವರು ಅಥವ ದೆವ್ವವನ್ನು ಒಪ್ಪಬೇಕಾಗುತ್ತವೆ. ನಂಬಬೇಕಾಗುತ್ತವೆ. ಅವನ್ನು ಪಾಲಿಸಬೇಕಾಗುತ್ತವೆ. ಆಗ ಮಾತ್ರ, ದೇವರು ಹಾಗೂ ದೆವದ ಪರಿಕಲ್ಪನೆ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹರಿದು ಬರಲು ಸಾಧ್ಯವಾಗುತ್ತದೆ.

ನನ್ನ ಬಾಲ್ಯದಲ್ಲಿ ನನ್ನ ಅಮ್ಮ ಸಂಜೆಯಾಗುತ್ತಿದ್ದಂತೆ ‘ಹೊರಗೆ ಹೋಗಬೇಡ. ಅಲ್ಲಿ ಗುಮ್ಮನಿದ್ದಾನೆ ಎಂದು ಹೆದರಿಸುತ್ತಿದ್ದರು. ನಾನು ಕತ್ತಲೆಯಲ್ಲಿ ಹೋಗಲು ಹೆದರುತ್ತಿದ್ದೆ. ಆ ಹೆದರಿಕೆ ಈಗಲೂ ಇದೆ.

ನನ್ನ ಅಮ್ಮ ಹುಣಸೇ ಮರದಲ್ಲಿ ದೆವ್ವಗಳಿರುವ ನಾನಾ ಕಥೆಗಳನ್ನು ನನಗೆ ಹೇಳುತ್ತಿದ್ದಳು. ‘ಅಮ್ಮಾ ನೀನು ಹುಣಸೇ ಮರದಲ್ಲಿ ದೆವ್ವವನ್ನು ನೋಡಿದ್ದೆಯಾ? ಎಂದು ಕೇಳಿದೆ. ‘ನಾನು ಹುಣಸೇ ಮರದಲ್ಲಿ ದೆವ್ವವನ್ನು ನೋಡಿಲ್ಲ. ನಿಮ್ಮ ತಾತ ನೋಡಿದ್ದಾರಂತೆ. ನಮಗೆ ಹೇಳುತ್ತಿದ್ದರು ಎಂದರು.  ‘ಹೋಗಮ್ಮ...ಯಾವ ದೆವ್ವವೂ ಇಲ್ಲ‘ ಎಂದು ನಾನು ಹೇಳಿದೆ. ಆಗ ನನ್ನಮ್ಮ ‘ಹಾಗೆಲ್ಲ ಹೇಳಬೇಡವೋ...ನಿಮ್ಮ ತಾತ ಯಾವತ್ತೂ ಸುಳ್ಳು ಹೇಳಿದವರಲ್ಲ. ನಮ್ಮ ಬಂಧುಗಳಲ್ಲಿ ಯಾರನ್ನು ಬೇಕಾದರೂ ಕೇಳಿನೋಡು ಎಂದರು. ನನ್ನ ಅಮ್ಮ ಹೇಳಿದ್ದು ನಿಜ. ನಮ್ಮ ಅಜ್ಜ ಸತ್ಯವಂತರೆಂದು ಹೆಸರನ್ನು ಪಡೆದಿದ್ದರು ಎಂಬ ಕಥೆಯನ್ನು ಹಲವರಿಂದ ಕೇಳಿದ್ದೆ.

ಆದರೆ....ಈಗ ನನಗೆ ಹುಣಸೇ ಮರದಲ್ಲಿ ಯಾವ ದೆವ್ವವೂ ಇಲ್ಲ ಎಂದು ತಿಳಿದಿದೆ. ಆದರೂ ಸಹಾ, ರಾತ್ರಿಯಲ್ಲಿ ಒಬ್ಬನೇ ಹುಣಸೇ ಮರದ ಕೆಳಗೆ ನಡೆದು ಬರುವಾಗ ನನ್ನ ಅಮ್ಮ ಹೇಳಿದ ದೆವ್ವದ ಕಥೆಗಳು ನೆನಪಿಗೆ ಬರುತ್ತವೆ. ಏನೋ ಒಂದು ರೀತಿಯಾದ ಭಯ ಆವರಿಸುತ್ತದೆ. ಈ ವಿವರಣೆಯನ್ನು ದೇವರ ವಿಷಯಯಕ್ಕೂ ಅನ್ವಯಿಸಬಹುದು.  

ದೇವರನ್ನು ಯಾರೂ ನೋಡಿಲ್ಲ. ದೇವರು ಹೇಗಿರುತ್ತಾನೆ ಎನ್ನುವುದು ಗೊತ್ತಿಲ್ಲ. ಹಿಂದೂ ಧರ್ಮವು, ದೇವರನ್ನು ಅವರವರ ಬುದ್ಧಿಶಕ್ತಿಗೆ ಅನುಗುಣವಾಗಿ ವಿವರಿಸುತ್ತದೆ. ನಿರಾಕಾರ ಬ್ರಹ್ಮನಿಂದ ಹಿಡಿದು, ರಸ್ತೆಯಲ್ಲಿ ಬಿದ್ದಿರುವ ಕಲ್ಲಿನಲ್ಲಿಯೂ ದೇವರನ್ನು ಕಾಣಬಹುದು ಎನ್ನುತ್ತದೆ.   ಇಂದು ನಾವು ಪೂಜಿಸುವ ದೇವಾನುದೇವತೆಗಳು ನಮ್ಮ ಕಲ್ಪನೆಯ ರೂಪಗಳು ಎನ್ನುವುದನ್ನು ಪ್ರಾಜ್ಞರು ಒಪ್ಪುತ್ತಾರೆ. ಈ ವಿಷಯದಲ್ಲಿ ಋಗ್ವೇದವು ‘ಏಕಂ ಸತ್ ವಿಪ್ರಾಃ ಬಹುದಾ ವದಂತಿ ಎಂದು ಅಂತಿಮ ತೀರ್ಪನ್ನು ಕೊಡುತ್ತದೆ. ಹಾಗೆಯೇ

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಚತಿ ಸಾಗರಂ|

ಸರ್ವ ದೇವ ನಮಸ್ಕಾರಾಃ ಕೇಶವಂ ಪ್ರತಿಗಚ್ಚತಿ||

‘ಅಕಾಶದಿಂದ ಸುರಿವ ಮಳೆಯು ಹೇಗೆ ಅಂತಿಮವಾಗಿ ಸಾಗರವನ್ನು ಸೇರುವುದೋ, ಹಾಗೆಯೇ ಯಾವ ದೇವರನ್ನು ಪೂಜಿಸಿದರೂ ಅದು ಅಂತಿಮವಾಗಿ ಕೇಶವನನ್ನು ತಲುಪುತ್ತದೆ ಎಂದು ಬಹು ರೂಪ ದೇವತೆಗಳನ್ನು ಮಾನ್ಯ ಮಾಡಿದೆ.

ದೇವರನ್ನು ನಮ್ಮ ನಮ್ಮ ಕಲ್ಪನಾ ಸಾಮರ್ಥ್ಯಕ್ಕೆ ಅನುಗುಣವಾಗಿ ನಾವು ಪೂಜಿಸುವ ಅಪರೂಪದ ಅವಕಾಶವನ್ನು ಹಿಮ್ಧೂ ಧರ್ಮ ನೀಡಿದೆ.

ದೇವರು ನಮ್ಮನ್ನು ರಕ್ಷಿಸುತ್ತಾನೆ ಎನ್ನುವ ನಂಬಿಕೆ ನಮ್ಮದು. ಹುಣಸೇಮರದ ಕೆಳಗೆ ಬರುವಾಗ ನಿನ್ನ ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟನ್ನು ಕೈಯಲ್ಲಿ ಹಿಡಿದುಕೊಂಡು ಗಾಯತ್ರಿ ಮಂತ್ರವನ್ನು ಹೇಳುತ್ತಾ ಬಾ. ಯಾವ ದೆವ್ವವೂ ನಿನಗೇನು ಮಾಡುವುದಿಲ್ಲ ಎಂದು ನನ್ನಮ್ಮ ನನಗೆ ಹೇಳಿದ್ದರು. ಈ ಉಪಾಯ ನನಗೆ ಧೈರ್ಯವನ್ನು ಕೊಡುತಿತ್ತು ಎನ್ನುವುದನ್ನು ನಾನು ಒಪ್ಪಿಕೊಳ್ಳೂತ್ತಿದ್ದೇನೆ.

ನನ್ನ ಅಮ್ಮ ನನ್ನನ್ನು ಬೆಳೆಸಿದ ಹಾಗೆ ನಾನು ನನ್ನ ಮಗನನ್ನು ಬೆಳೆಸಲಿಲ್ಲ. ಅವನಿಗೆ ಗುಮ್ಮನ ಕಥೆಯನ್ನು ಹೇಳಲಿಲ್ಲ. ಹುಣಸೇಮರದಲ್ಲಿ ದೆವ್ವ ಇರುತ್ತದೆ ಎಂದು ಪರಂಪರಾನುಗತವಾಗಿ ನಮ್ಮಮ್ಮ ನಂಬಿ ಪಾಲಿಸಿಕೊಂಡು ಬಂದಿದ್ದ ಕಲ್ಪನೆಯನ್ನು ನನ್ನ ಮಗನಿಗೆ ವರ್ಗಾಯಿಸಲಿಲ್ಲ. ದೆವ್ವದ ಕಲ್ಪನೆಯನ್ನು ನೀಡಲೇ ಇಲ್ಲ. ಹಾಗಾಗಿ ಅವನಿಗೆ ಇದುವರೆಗೂ ದೆವ್ವದ ಬಗ್ಗೆ ಯಾವ ಭಯವೂ ಇಲ್ಲ. ಮನೆಯಲ್ಲಿ ಒಬ್ಬನೇ ಇರುತ್ತಾನೆ. ಕತ್ತಲೆಯಲ್ಲಿ ಒಬ್ಬನೇ ಓಡಾಡಿಕೊಂಡು ಬರುತ್ತಾನೆ.

ಬಾಲ್ಯದಲ್ಲಿ ಅಪ್ಪ, ಅಮ್ಮ, ಅಜ್ಜ, ಅಜ್ಜಿಯರು ದೇವರು ಹಾಗೂ ದೆವ್ವದ ಬಗ್ಗೆ ಯಾವ ನಂಬಿಕೆಯನ್ನು ಮೂಡಿಸುತ್ತಾರೆಯೋ, ಆ ನಂಬಿಕೆಗಳಿಗೆ ಅನುಗುಣವಾಗಿ ಮಕ್ಕಳು ಬೆಳೆಯುತ್ತಾರೆ. ಒಂದು ವೇಳೆ ನಮ್ಮ ಮಕ್ಕಳಿಗೆ ದೇವರು ಹಾಗೂ ದೆವ್ವದ ಬಗ್ಗೆ ಏನನ್ನು ಹೇಳದಿದ್ದರೆ, ಅವರು ದೇವರು ಹಾಗೂ ದೆವ್ವದ ಕಲ್ಪನೆಯಿಲ್ಲದೇ ಹಾಗೆಯೇ ಬೆಳೆಯುತ್ತಾರೆ. ಅಂತಹವರ ಮೈ ಮೇಲೆ ದೇವರು ಬರುವುದಿಲ್ಲ, ದೆವ್ವವೂ ಬರುವುದಿಲ್ಲ.

ಭಾವನಾ ಪ್ರಪಂಚ:

ನಮ್ಮ ಪ್ರೀತಿಪಾತ್ರರಾದವರು ಮರಣಿಸಿದಾಗ ಅದನ್ನು ಭರಿಸಿಕೊಳ್ಳುವ ಶಕ್ತಿ, ನಮಗೆ ಒಮ್ಮೆಲೆ ಬರುವುದಿಲ್ಲ. ಅವರ ನೆನಪು ಸದಾ ಕಾಡುತ್ತಿರುತ್ತದೆ. ಸಾವು ನಮ್ಮ ಪ್ರೀತಿಪಾತ್ರರನ್ನು ಸದಾ ಕಾಲಕ್ಕೂ ನಮ್ಮಿಂದ ದೂರ ಕೊಂಡೊಯ್ಯುತ್ತದೆ ಎಂಬುದು ನಮಗೆ ಗೊತ್ತು. ಆದರೆ ಅದು ನಮ್ಮ ಅನುಭವಕ್ಕೆ ಬಂದಿರುವುದಿಲ್ಲ. ನಮ್ಮ ಪ್ರೀತಿಪಾತ್ರರ ಸಾವು ನಿಜವಾಗಿ ಸಂಭವಿಸಿದಾಗ, ಅದು ನಮ್ಮನ್ನು ಭಯ ಹಾಗೂ ಭ್ರಮೆಯಲ್ಲಿ ನೂಕುತ್ತದೆ. ಸತ್ತ ಗಂಡನು ಬಾಗಿಲನ್ನು ಬಡಿದು ತನ್ನ ಹೆಸರನ್ನು ಕೂಗಿದಂತೆ...ನಡುಮನೆಯಲ್ಲಿ ಕುಳಿತು ಪೇಪರು ಓದುತ್ತಿರುವಂತೆ...ಉಯ್ಯಾಲೆಯಲ್ಲಿ ಕುಳಿತು ತೂಗಿದಂತೆ...ತಾಂಬೂಲವನ್ನು ಹಾಕಿಕೊಂಡು ಮೆಲ್ಲುತ್ತಿರುವಂತೆ... ಹೀಗೆಲ್ಲ ಹರಯದ ವಿಧವೆಯ ಅನುಭವಕ್ಕೆ ಬರುವುದು ಅಪರೂಪವಲ್ಲ.

ಹೆತ್ತ ತಾಯಿಗೆ ಸತ್ತ ಮಗುವು ಅಂಗಳದಲ್ಲಿ ಬಿದ್ದು ಅತ್ತಂತೆ, ಹಾಲಿಗಾಗಿ ಪೀಡಿಸಿದಂತೆ, ಕಿಲ ಕಿಲ ನಕ್ಕಂತೆ ಅನಿಸುವುದು ಅಸಹಜವಲ್ಲ.

ಅತ್ತೆಯ ಕಾಟದಿಂದ ಸತ್ತ ಸೊಸೆಯು ದೆವ್ವವಾಗಿ  ಬಂದಂತೆ, ಅತ್ತೆಯ ಕುತ್ತಿಗೆಯನ್ನು ಹಿಸುಕಿದಂತೆ, ಆಕೆಯ ಎದೆಯ ಮೇಲೆ ಕುಳಿತಂತೆ ಆಕೆಯ ಅಪರಾಧಿ ಮನೋಭಾವಕ್ಕೆ ಅನಿಸುವುದು ಅಸಹಜವಲ್ಲ.

ಒಬ್ಬ ವ್ಯಕ್ತಿ ದೆವ್ವವನ್ನು ನಂಬಬೇಕಾದರೆ, ಅವನು ಬೆಳೆದ ಬಂದ ಮನೆಯ ಹಿನ್ನೆಲೆ, ಅವನು ಬೆಳೆದ ಸಮಾಜದ ಹಿನ್ನೆಲೆ, ಆ ವ್ಯಕ್ತಿ ಹಿಂದೆ ಕೇಳಿದ ದೆವ್ವದ ಕಥೆಗಳು ಹಾಗೂ ಪಾರಂಪರಿಕವಾಗಿ ಬಂದ ನಂಬಿಕೆಗಳು ಪ್ರಧಾನವಾಗಿ ಕೆಲಸ ಮಾಡುತ್ತವೆ.

ದೆವ್ವ ಮೆಟ್ಟುವುದು/ದೇವರು ಬರುವುದು:

ಆಧುನಿಕ ವೈದ್ಯವಿಜ್ಞಾನವು ಮೈಮೇಲೆ ದೆವ್ವ ಬರುವುದನ್ನು ‘ಮೆಟ್ಟಿಕೊಳ್ಳುವ ಲಕ್ಷಣಾವಳಿ (ಪೊಸೆಶನ್ ಸಿಂಡ್ರೋಮ್) ಎಂದು ಕರೆಯುತ್ತದೆ. ಈ ಹೆಸರನ್ನು ೧೯೬೦ರಲ್ಲಿ ಪಿ.ಎಂ.ಯಾಪ್ ಎಂಬ ವೈದ್ಯನು ಮೊದಲ ಬಾರಿಗೆ ಪ್ರಯೋಗಿಸಿದನು.

ಮೆಟ್ಟಿಕೊಳ್ಳುವುದನ್ನು ಮೂರು ಮಟ್ಟದಲ್ಲಿ ನೋಡಬಹುದು.

. ಮೊದಲ ಮಟ್ಟ ಅಥವ ಪರಿಪೂರ್ಣ ಮೆಟ್ಟಿಕೊಳ್ಳುವಿಕೆ:

ಒಬ್ಬ ವ್ಯಕ್ತಿಯ ಮೇಲೆ ದೆವ್ವ ಅಥವ ದೇವರು ಪರಿಪೂರ್ಣವಾಗಿ ಮೆಟ್ಟಿದಾಗ, ಆ ವ್ಯಕ್ತಿಯ ಮೇಲೆ ಪರಿಪೂರ್ಣ ಹಿಡಿತವನ್ನು ಹೊಂದಿರುತ್ತದೆ. ಆಗ

ವ್ಯಕ್ತಿಯು ತನ್ನ ಸ್ವಂತಿಕೆಯನ್ನು ಪೂರ್ಣ ಕಳೆದುಕೊಂಡಿರುತ್ತಾನೆ.

ವ್ಯಕ್ತಿಯು ಎಂತಹ ನೋವಿಗೂ ಪ್ರತಿಸ್ಪಂದಿಸುವುದಿಲ್ಲ.

ಅವನ ಧ್ವನಿ, ಭಾಷೆ, ಮಾತು, ನಡವಳಿಕೆಗಳೆಲ್ಲ ಬದಲಾಗಿರುತ್ತದೆ.

ವ್ಯಕ್ತಿಯು ಆ ದೆವ್ವ ಅಥವ ದೇವರ ಎಲ್ಲ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುತ್ತಾನೆ. ಇದರಿಂದ ನೋಡುವವರಿಗೆ, ವ್ಯಕ್ತಿಯ ಮೇಲೆ ಬಂದಿರುವ ದೆವ್ವ ಇಲ್ಲವೇ ದೇವರ ಪರಿಚಯ ಸುಲುಭವಾಗಿ ಆಗುತ್ತದೆ.

ಇಂತಹ ಅವಧಿಯಲ್ಲಿ ವ್ಯಕ್ತಿಯನ್ನು ಎಚ್ಚರಿಸುವುದಕ್ಕೆ ಆಗವುದಿಲ್ಲ.

ವ್ಯಕ್ತಿಯನ್ನು ಮೆಟ್ಟಿರುವ ದೆವ್ವ ಇಲ್ಲವೇ ದೇವರು ನಿಮಿಷಗಳಿಂದ ಹಿಡಿದು ಗಂಟೆಗಳ ಒಳಗೆ ಬಿಟ್ಟು ಹೋಗುತ್ತದೆ.

ದೆವ್ವ ಬಿಟ್ಟು ಹೋದ ನಂತರ ವ್ಯಕ್ತಿ ತೀರಾ ದಣಿದಿರುತ್ತಾನೆ.

ತನಗೇನಾಯಿತು, ತಾನೇನು ಮಾತನಾಡಿದೆ, ಏನು ಮಾಡಿದೆ ಎಂಬ ಪರಿವೆ ಆತನಿಗಿರುವುದಿಲ್ಲ.

ಪೂರ್ಣ ಚೇತರಿಸಿಕೊಂಡು ಮೊದಲಿನಂತಾಗಲು ಕೆಲವು ಗಂಟೆಗಳು ಬೇಕಾಗುತ್ತವೆ.

. ಎರಡನೆಯ ಮಟ್ಟ ಅಥವ ಭಾಗಶಃ ಮೆಟ್ಟಿಕೊಳ್ಳುವಿಕೆ:

ದೆವ್ವ ಅಥವ ದೇವರು, ವ್ಯಕ್ತಿಯನ್ನು ಭಾಗಶಃ ಮಾತ್ರ ಮೆಟ್ಟಿಕೊಳ್ಳುತ್ತದೆ. ಅಂದರೆ ವ್ಯಕ್ತಿಯ ಸ್ವಂತಿಕೆಯ ಮೇಲೆ ದೆವ್ವವು ಪೂರ್ಣ ಹಿಡಿತವನ್ನು ಹೊಂದಿರುವುದಿಲ್ಲ. ವ್ಯಕ್ತಿಯು ಹೊರಗಿನಿಂದ ನೀಡುವ ಪ್ರಚೋದನೆಗಳಿಗೆ ಸ್ವಲ್ಪ ಮಟ್ಟಿಗೆ ಪ್ರತಿಸ್ಪಂದಿಸಬಲ್ಲ. ತನ್ನ ಸುತ್ತಮುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಬಲ್ಲ. ಆತನ ಧ್ವನಿ ಅಷ್ಟಾಗಿ ಬದಲಾಗಿರುವುದಿಲ್ಲ. ದೆವ್ವ/ದೇವರು ಪೂರ್ಣ ಬಿಟ್ಟು ಹೋದ ಮೇಲೆ, ವ್ಯಕ್ತಿಗೆ ದೆವ್ವ ಬಂದಿದ್ದಾಗ ತಾನೇನು ಮಾಡಿದೆ, ಮಾತನಾಡಿದೆ ಎಂಬುದರ ಬಗ್ಗೆ ಅಲ್ಪ ಸ್ವಲ್ಪ ನೆನಪಿರುತ್ತದೆ.

. ಮೂರನೆಯ ಮಟ್ಟ ಅಥವ ನಾಟಕೀಯ (ಹಿಸ್ಟ್ರಿಯಾನಿಕ್) ಮೆಟ್ಟಿಕೊಳ್ಳುವಿಕೆ:

ವಾಸ್ತವದಲ್ಲಿ ದೆವ್ವವಾಗಲಿ, ದೇವರಾಗಲಿ ಮೈ ಮೇಲೆ ಬಂದಿರುವುದಿಲ್ಲ. ಬಂದ ಹಾಗೆ ನಟಿಸುತ್ತಿರುತ್ತಾನೆ. ಈ ವ್ಯಕ್ತಿಗೆ ಎಲ್ಲ ರೀತಿಯ ನೋವಿನ ಅನುಭವವಾಗುತ್ತದೆ. ತನ್ನ ಸುತ್ತಮುತ್ತಲೂ ಏನಾಗುತ್ತಿದೆ ಎಂಬುದರ ಪರಿವೆಯಿರುತ್ತದೆ. ಹಾಗಾಗಿ ಹೊರಗಿನ ಪ್ರಚೋದನೆಗಳಿಗೆ ಈ ವ್ಯಕ್ತಿ ಪ್ರತಿಸ್ಪಂದಿಸಬಲ್ಲ. ಇತರರ ಸೂಚನೆಯನ್ನು ಅನುಸರಿಸಿ ಪ್ರಜ್ಞಾಪೂರ್ವಕ ತೀರ್ಮಾನವನ್ನು ನೀಡಬಲ್ಲ. ದೆವ್ವ ಬಿಟ್ಟು ಹೋದ ಮೇಲೂ, ದೆವ್ವ ಮೆಟ್ಟಿದ್ದಾಗ ಏನೇನಾಯಿತು ಎಂಬುದು ಈತನಿಗೆ ನೆನಪಿರುತ್ತದೆ.

ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ಎರಡನೆಯ ಹಾಗೂ ಮೂರನೆಯ ಮಟ್ಟದ ಮೆಟ್ಟಿಕೊಳ್ಳುವಿಕೆಯನ್ನು ನಾವು ಕಾಣಬಹುದು.

ಮೈಮೇಲೆ ದೆವ್ವ ಅಥವ ದೇವರು ಬರುವುದನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ಕಾಣಬಹುದು.

೧. ವ್ಯಕ್ತಿಗತ ಮೆಟ್ಟಿಕೊಳ್ಳುವಿಕೆ: ದೆವ್ವ ಇಲ್ಲವೇ ದೇವರು, ಒಬ್ಬ ವ್ಯಕ್ತಿಯ ಮೇಲೆ ಮಾತ್ರ ಕಾಣಿಸಿಕೊಳ್ಳುತ್ತದೆ.

೨. ಸಾಮೂಹಿಕ ಮೆಟ್ಟಿಗೊಳ್ಳುವಿಕೆ: ದೆವ್ವ ಅಥವ ದೇವರು, ಒಮ್ಮೆಲೆ ಹಲವಾರು ಜನರ ಮೇಲೆ ಕಾಣಿಸಿಕೊಳ್ಳಬಹುದು.

೧೯೮೦ರಲ್ಲಿ ಕಾಲೆನ್ ವಾರ್ಡ್ ಎಂಬಾಕೆಯು ಮೆಟ್ಟಿಕೊಳ್ಳುವುದರಲ್ಲಿ ಎರಡು ಬಗೆಯನ್ನು ಗುರುತಿಸಿದಳು.

. ಆಚರಣಾ ಮೆಟ್ಟಿಕೊಳ್ಳುವಿಕೆ (ರಿಚುವಲ್ ಪೊಸೆಶನ್): ನಮ್ಮ ಕರ್ನಾಟಕದ ಬಹುಭಾಗಗಳಲ್ಲಿ ನಡೆಯುವ ಜಾತ್ರೆ, ರಥೋತ್ಸವ, ಉತ್ಸವ, ವಿಶೇಷ ಕಾರ್ಯಗಳಲ್ಲಿ ಆಚರಣಾ ಮೆಟ್ಟಿಕೊಳ್ಳುವಿಕೆಯ ಉದಾಹರಣೆಗಳನ್ನು ಕಾಣಬಹುದು.

ದೇವರನ್ನು ಮೈ ಮೇಲೆ ಬರಿಸಿಕೊಳ್ಳುವ ವ್ಯಕ್ತಿ ಇರುತ್ತಾನೆ. ಈತ ಸಾಮಾನ್ಯವಾಗಿ ಆ ದೇವರ ಪೂಜಾರಿಯಾಗಿರುತ್ತಾನೆ. ಕೆಲವು ಕಡೆ ಇವರನ್ನು ಪಾತ್ರಿ ಎಂದೂ ಕರೆಯುವುದುಂಟು. ವಿಶೇಷ ರೀತಿಯಲ್ಲಿ ಅಲಂಕೃತನಾದ ಈತನನ್ನು ವಿಧಿ ವಿಧಾನಗಳಿಂದ ಅರ್ಚಿಸಿ, ದೇವರು ಮೈ ಮೇಲೆ ಬರುವಂತೆ ಪ್ರಾರ್ಥಿಸುತ್ತಾರೆ. ಆಗ ಪೂಜಾರಿ/ಪಾತ್ರಿ ಆವೇಶಕ್ಕೆ ಒಳಗಾಗುತ್ತಾನೆ. ದೈವ ಮೈಮೇಲೆ ಬಂದಿರುತ್ತದೆ. ಜನರು ತಮ್ಮ ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಾರೆ. ಮೈಮೇಲೆ ಬಂದಿರುವ ದೈವ ಅದಕ್ಕೆ ಪರಿಹಾರಗಳನ್ನು ಸೂಚಿಸುತ್ತದೆ. ಹಾಗೆಯೇ ದೈವವು ತನಗೆ ಭಕ್ತರಿಂದ ಇಂತಿಂಥಹ ಸೇವೆ ಆಗಬೇಕು ಎಂದೂ ಅಪ್ಪಣೆ ಕೊಡಿಸುವುದುಂಟು.

. ಪರಿಧೀಯ ಮೆಟ್ಟಿಕೊಳ್ಳುವಿಕೆ (ಪೆರಿಫೆರಲ್ ಪೊಸೆಶನ್): ಇದು ಆಚರಣಾ ಮೆಟ್ಟಿಕೊಳ್ಳುವ ವಿಧಾನಕ್ಕೆ ವಿರುದ್ಧವಾದದ್ದು. ಇಲ್ಲಿ ಕೆಲವರ ಮೇಲೆ ಇದ್ದಕ್ಕಿದ್ದ ಹಾಗೆ ದೆವ್ವ ಇಲ್ಲವೇ ದೇವರು ಅನಪೇಕ್ಷಿತವಾಗಿ ಬರುತ್ತದೆ. ಆ ವ್ಯಕ್ತಿಯ ಮೇಲೆ ದೇವರು ಬರಲಿ ಎಂದು ಯಾರೂ ನಿರೀಕ್ಷಿಸಿರುವುದಿಲ್ಲ. ಜೊತೆಗೆ ಅನೇಕ ಸಂದರ್ಭಗಳಲ್ಲಿ ಹೀಗೆ ಮೈಮೇಲೆ ಬರುವುದು ಮನೆಮಂದಿಯವರಿಗೆ ಬೇಕಾಗಿರುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ, ವ್ಯಕ್ತಿಯು ಕ್ಲೇಶಕ್ಕೆ ತುತ್ತಾದಾಗ ಮಾತ್ರ, ಅವನ ಮೈ ಮೇಲೆ ದೆವ್ವ/ ದೇವರು ಬರುವುದನ್ನು ಗಮನಿಸಬಹುದು.

ವಿವರಣೆ:

ದೇವರು ಅಥವ ದೆವ್ವ ಮೈಮೇಲೆ ಏಕೆ ಬರುತ್ತದೆ ಎಂಬುದಕ್ಕೆ ಮೂರು ಕಾರಣಗಳನ್ನು ತಜ್ಞರು ನೀಡಿರುವರು.

. ಉನ್ಮಾದ ವಿಘಟನಾ ಪ್ರತಿಕ್ರಿಯೆ (ಹಿಸ್ಟಿರಿಕಲ್ ಡಿಸೋಸಿಯೇಶನ್ ಥಿಯರಿ): ಮಾನವರಲ್ಲಿ ಸುಪ್ತ ಮನಸ್ಸಿರುತ್ತದೆ ಹಾಗೂ ಜಾಗೃತ ಮನಸ್ಸಿರುತ್ತದೆ. ಸುಪ್ತ ಮನಸ್ಸಿನ ಆಸೆ ಆಕಾಂಕ್ಷೆಗಳು ಜಾಗೃತ ಮನಸ್ಸಿಗೆ ತಿಳಿಯುವುದಿಲ್ಲ. ಆದರೆ ಸುಪ್ತ ಮನಸ್ಸು ದೆವ್ವ ಅಥವ ದೇವರ ಮೂಲಕ ತನ್ನ ಅಭಿಲಾಷೆಗಳನ್ನು ಪೂರೈಸಿಕೊಳ್ಳಬಹುದು.

ಒಬ್ಬ ವ್ಯಕ್ತಿ ವಿಪರೀತ ಮನೋಕ್ಲೇಶಗಳಿಗೆ ತುತ್ತಾಗಿದ್ದಾನೆ ಎಂದು ಭಾವಿಸೋಣ. ಅವನು ತನ್ನ ಸಮಸ್ಯೆಗಳನ್ನು ಇತರರ ಬಳಿ ಹೇಳಿಕೊಳ್ಳಲಾರ. ಹಾಗೆ ಹೇಳ ಹೊರಟರೆ ಅದನ್ನು ಕೇಳಲು ಯಾರೂ ಸಿದ್ಧವಿರುವುದಿಲ್ಲ. ಕೇಳಿದರೂ ಅದಕ್ಕೆ ಪರಿಹಾರವನ್ನು ನೀಡುವ ಇಲ್ಲವೇ ಮಾರ್ಗದರ್ಶನವನ್ನು ನೀಡುವ ಉದಾರತೆಯನ್ನು ತೋರುವುದಿಲ್ಲ. ಸಹಾನುಭೂತಿಯನ್ನು ತೋರುವುದಿಲ್ಲ. ಬದಲಿಗೆ ಉದಾಸೀನತೆಯನ್ನು ತೋರಬಹುದು ಅಥವ ನಿರ್ಲಕ್ಷಿಸಬಹುದು. ಆದರೆ ಆ ವ್ಯಕ್ತಿ, ಸಂಬಂಧಪಟ್ಟವರು ತನ್ನನ್ನು ಆದರಿಸಲಿ, ಮಾತನಾಡಿಸಲಿ, ಕಕ್ಕುಲತೆಯನ್ನು ತೋರಲಿ ಎಂದು ಬಯಸುತ್ತಿರುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಆಗ ಆತನ ಮನಸ್ಸು ತುಂಬಾ ಹಿಂಸೆಯನ್ನು ಪಡುತ್ತಿರುತ್ತದೆ.

ಹೀಗೆ ನೊಂದಿರುವ ಸುಪ್ತ ಮನಸ್ಸು, ‘ಉನ್ಮಾದದ ರಕ್ಷಣೆಯನ್ನು ಪಡೆಯುತ್ತದೆ. ಮೈಮೇಲೆ ದೆವ್ವ ಅಥವ ದೇವರನ್ನು ಬರೆಸಿಕೊಳ್ಳುತ್ತದೆ. ದೆವ್ವ ಅಥವ ದೇವರು ಮೈಮೇಲೆ ಬಂದಾಗ, ವ್ಯಕ್ತಿಯು ತನ್ನ ಮನಸ್ಸಿನ ಒಳಗೆ ಮಡುಗಟ್ಟಿದ್ದ ಎಲ್ಲ ಭಾವನೆಗಳನ್ನು ಪ್ರಕಟಿಸುತ್ತಾನೆ. ಇದರಿಂದ ಸುಪ್ತ ಮನಸ್ಸಿನಲ್ಲಿ ಮೂಡಿದ್ದ ಒತ್ತಡವು (ಪ್ರೆಶರ್ ಕುಕರಿನಲ್ಲಿ ಮೂಡಿರುವ ಪ್ರೆಶನ್, ವಾಲ್ವ್ ತೆಗೆದ ಕೂಡಲೇ ಹೊರಬರುವಂತೆ) ಹೊರಹರಿಯುತ್ತದೆ. ಒತ್ತಡವು ಪೂರ್ಣ ಇಳಿಯುತ್ತದೆ. ಆಗ ಸುಪ್ತ ಮನಸ್ಸಿಗೆ ನೆಮ್ಮದಿಯುಂಟಾಗುತ್ತದೆ. ನೊಂದ ಸುಪ್ತಮನಸ್ಸಿಗೆ ದೊರೆಯುವ ಈ ನೆಮ್ಮದಿಯನ್ನು ಪ್ರಾಥಮಿಕ ಲಾಭ (ಪ್ರೈಮರಿ ಗೇಯಿನ್) ಎನ್ನುತ್ತಾರೆ.

ವ್ಯಕ್ತಿಯ ಮೈಮೇಲೆ ದೆವ್ವ/ದೇವರು ಬಂದಾಗ, ಸಹಜವಾಗಿ ಎಲ್ಲರ ಗಮನವು ಆ ವ್ಯಕ್ತಿಯ ಕಡೆಗೆ ಹರಿಯುತ್ತದೆ. ಆಗ ವ್ಯಕ್ತಿಗೆ ಎಲ್ಲರೂ ತನ್ನ ಕಡೆಗೆ ಗಮನವನ್ನು ಕೊಡುತ್ತಿದ್ದಾರೆ, ಎಲ್ಲರೂ ತನ್ನನ್ನು ಆಲಿಸುತ್ತಿದ್ದಾರೆ, ಭಯಮಿಶ್ರಿತ ಕುತೂಹಲದಿಂದ ಗಮನಿಸುತ್ತಿದ್ದಾರೆ, ತಾನು ಏನೇ ಹೇಳಿದರೂ, ಏನೇ ಮಾಡಿದರೂ ಜನರು ನೋಡುತ್ತಾರೆ, ಒಪ್ಪುತ್ತಾರೆ ಎನ್ನುವುದು ತಿಳಿದಿರುತ್ತದೆ. ಹಾಗಾಗಿ ಸುಪ್ತಮನಸ್ಸು ತನ್ನಲ್ಲಿರುವ ಎಲ್ಲ ಅನಿಸಿಕೆಗಳನ್ನು ಹೊರಚೆಲ್ಲುತ್ತದೆ. ಇದನ್ನು ನೋಡಿದ ಕೆಲವರು ಹೆದರಬಹುದು. ಕೆಲವರು ಸಹಾನುಭೂತಿಯನ್ನು ವ್ಯಕ್ತಪಡಿಸಬಹುದು. ಕೆಲವರು ಗೌರವವನ್ನು ನೀಡಬಹುದು. ಎಷ್ಟೋ ಸಲ, ಒಂದು ಸಲ ದೆವ್ವ/ದೇವರು ಬಂದ ಮೇಲೆ ಮನೆಮಂದಿಯವರ ಬದಲಾವಣೆಯಾಗುತ್ತದೆ. ಇದನ್ನು ಕಂಡ ಸುಪ್ತಮನಸ್ಸಿಗೆ ಒಂದು ರೀತಿಯಾದ ತೃಪ್ತಿಯಾಗುತ್ತದೆ. ಇದನ್ನು ದ್ವಿತೀಯಕ ಲಾಭ (ಸೆಕಂಡರಿ ಗೇಯಿನ್) ಎಂದು ಕರೆಯುವರು.

ಸುಪ್ತಮನಸ್ಸು ಹಾಗೂ ಜಾಗೃತ ಮನಸ್ಸಿನ ನಡುವೆ ಒಂದು ತೆರೆಯಿರುತ್ತದೆ. ಹಾಗಾಗಿ ಸುಪ್ತಮನಸ್ಸಿನ ಅನಿಸಿಕೆಗಳು ಜಾಗೃತ ಮನಸ್ಸಿಗೆ ತಿಳಿಯುವುದಿಲ್ಲ. ಮೈಮೇಲೆ ದೆವ್ವ/ದೇವರು ಬಂದಿದ್ದಾಗ ಮಾಡಿದ ಕೆಲಸಗಳಾಗಲಿ, ಆಡಿದ ಮಾತುಗಳಾಗಲಿ ನೆನಪಿಗೆ ಬರುವುದಿಲ್ಲ.

ಸುಪ್ತಮನಸ್ಸು ನಿರೀಕ್ಷಿಸಿದ ಬದಲಾವಣೆಗಳು ಮನೆಮಂದಿಯರಲ್ಲಿ ಕಂಡುಬರದಿದ್ದರೆ, ವ್ಯಕ್ತಿಯ ಮೇಲೆ ದೆವ್ವ/ದೇವರು ಮತ್ತೆ ಮತ್ತೇ ಕಾಣಿಸಿಕೊಳ್ಳಬಹುದು.

. ಸಂವಹನ ಸಿದ್ದಾಂತ (ಕಮ್ಯುನಿಕೇಶನ್ ಥಿಯರಿ):  ನಮ್ಮ ಸಮಾಜದಲ್ಲಿ ಕೆಲವು ವಿಷಯಗಳನ್ನು ಕೆಲವರು ನೇರವಾಗಿ ಹೇಳಲಾರರು. ಹೇಳಲು ಧೈರ್ಯವಿಲ್ಲದಿರಬಹುದು ಅಥವ ಹೇಳುವಂತಹ ಸ್ಥಾನದಲ್ಲಿ ಇರದಿರಬಹುದು. ಅಂತಹವರು ತಮ್ಮ ಮೇಲೆ ದೆವ್ವ/ದೇವರನ್ನು ಬರೆಸಿಕೊಂಡು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು.

ಸೊಸೆಯು ಗರ್ಭವನ್ನು ಧರಿಸದಿದ್ದಾಗ, ಅತ್ತೆಯೆನಿಸಿಕೊಂಡವಳು ಮಗನಿಗೆ ಎರಡನೆಯ ಮದುವೆಯನ್ನು ಮಾಡ ಹೊರಟಾಗ, ಮೊದಲ ಹೆಂಡತಿಗೆ ಅತ್ತೆಯನ್ನು ನೇರವಾಗಿ ಎದುರಿಸಿ ನಿಲ್ಲುವ ಧೈರ್ಯವಿರುವುದಿಲ್ಲ. ಆಗ ಆಕೆಯ ಮೇಲೆ ದೇವರು ಇಲ್ಲವೇ ದೆವ್ವವು ಕಾಣಿಸಿಕೊಳ್ಳುತ್ತದೆ. ಆ ದೆವ್ವ ಅಥವ ದೇವರು ‘ಈ ಹುಡುಗಿಯಲ್ಲಿ ದೋಷವೇನಿಲ್ಲ. ಹುಡುಗನಲ್ಲಿಯೇ ದೋಷವಿದೆ. ಇನ್ನೊಂದು ಮದುವೆಯನ್ನು ಮಾಡಿದರೆ, ಅವಳಿಗೂ ಮಕ್ಕಳಾಗದು ಎಂದು ನುಡಿಯಬಹುದು.

ಗ್ರಾಮೀಣ ಪ್ರದೇಶಗಳಲ್ಲಿ ಮೈಮೇಲೆ ಬರುವ ದೇವರುಗಳು ಇಲ್ಲವೇ ದೈವಗಳು ‘ನನ್ನ ಗುಡಿ ಬಿದ್ದುಹೋಗುತ್ತಿದೆ. ಈ ಬಗ್ಗೆ ನೀವ್ಯಾರು ಗಮನವನ್ನೇ ನೀಡುತ್ತಿಲ್ಲ. ಮುಂದಿನ ಮಳೆಗಾಲದ ಹೊತ್ತಿಗೆ ಗುಡಿಯ ಜೀರ್ಣೋದ್ಧಾರ ಮಾಡದಿದ್ದರೆ ಊರನ್ನೇ ನಾಶ ಮಾಡಿಬಿಡುವೆ ಎಂದು ಹೆದರಿಸಿದರೆ, ಆಗ ಊರಿನವರು ಹೆದರಿ ಕೂಡಲೇ ಗುಡಿಯ ಜೀರ್ಣೋದ್ದಾರ ಕೆಲಸವನ್ನು ಆರಂಭಿಸುತ್ತಾರೆ.

. ಸಾಮಾಜಿಕ-ಸಾಂಸ್ಕೃತಿಕ ನಿರೀಕ್ಷೆಯ ಸಿದ್ಧಾಂತ (ಸೋಶಿಯೋ ಕಲ್ಚುರಲ್ ಎಕ್ಸ್ಪೆಕ್ಟೇಶನ್ ಥಿಯರಿ): ೧೯೬೧ರಲ್ಲಿ ಡಾ.ಕೀವ್ ಎಂಬ ತಜ್ಞರು ‘ಯಾವ ಸಂಸ್ಕೃತಿಯಲ್ಲಿ ಪ್ರತಿಯೊಂದು ಮಗುವು ತನ್ನ ಬಾಲ್ಯದಿಂದಲೇ ದೇವಸ್ಥಾನ, ಉತ್ಸವ, ಜಾತ್ರೆ, ವಿಶೇಷ ಪೂಜೆ ಮುಂತಾದವಲ್ಲಿ ಪೂಜಾರಿಯ ಮೈ ಮೇಲೆ ದೇವರು/ದೆವ್ವ ಬರುವುದನ್ನು ನೋಡುತ್ತಾ ಬೆಳೆಯುತ್ತದೆಯೋ, ಆಗ ಆ ಮಗುವು ದೇವರು ಹಾಗೂ ದೆವ್ವದಲ್ಲಿ ನಂಬಿಕೆಯನ್ನು ಇಡುತ್ತದೆ. ದೆವ್ವ/ದೇವರು ಬರುವುದು ಒಂದು ಸಹಜ-ಸ್ವಾಭಾವಿಕ-ಸಾಮಾಜಿಕ-ಸಾಂಸ್ಕೃತಿಕ ನಡವಳಿಕೆ ಎಂದು ನಂಬುತ್ತದೆ. ಒಂದಲ್ಲ ಒಂದು ಸಲ ತನ್ನ ಮೇಲೋ ದೆವ್ವ/ದೇವರು ಬಂದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಯೋಚಿಸುತ್ತದೆ. ಇಂತಹ ಆಲೋಚನೆ ಪದೇ ಪದೇ ಬರುತ್ತಿದ್ದರೆ ಅಥವ ನಿರಂತರವಾಗಿ ಬರುತ್ತಿದ್ದರೆ ಆ ಯೋಚನೆಯು ಒಂದು ನಿರೀಕ್ಷೆಯಾಗಿ ಮಾರ್ಪಡುತ್ತದೆ. ದೇವಸ್ಥಾನ/ಜಾತ್ರೆ/ಪೂಜೆಯ ವೇಳೆಯಲ್ಲಿ ಗಂಟೆ, ಜಾಗಟೆ, ಚಂಡೆ, ಮದ್ದಳೆಗಳ ಶಬ್ಧಗಳ ನಡುವೆ, ಭಕ್ತರ ಜಯಜಯಕಾರಗಳ ನಡುವೆ ಒಬ್ಬನ ಮೇಲೆ ದೇವರು ಬಂದಿತೆಂದು ಕೂಗಿದರೆ ಸಾಕು, ಆಗ ನಿರೀಕ್ಷೆಯಲ್ಲಿರುವ ವ್ಯಕ್ತಿಯ ಮೈಯಲ್ಲಿ ವಿದ್ಯುತ್ ಸಂಚಾರವಾಗುತ್ತದೆ. ದೇವರು ಬಂದಿರುವ ಸೂಚನೆಯನ್ನು ಸುಲುಭವಾಗಿ ಸ್ವೀಕರಿಸುತ್ತಾನೆ. ತನ್ನ ಮೈ ಮೇಲೂ ‘ದೇವರು ಬಂದಂತೆ ವರ್ತಿಸುತ್ತಾನೆ ಎಂದು ಹೇಳಿದ್ದಾರೆ.

೧೯೭೯ರಲ್ಲಿ ಕ್ಲಾಸ್ ಎನ್ನುವ ತಜ್ಞನು ‘ಮೈಮೇಲೆ ದೆವ್ವ/ದೇವರು ಬರುವುದು ಒಂದು ನಿರೀಕ್ಷಿತ, ಐಚ್ಛಿಕ ನಡವಳಿಕೆ ಎಂದು ಸ್ಪಷ್ಟವಾಗಿ ಹೇಳುತ್ತಾನೆ. ‘ದೆವ್ವ/ದೇವರು ತನ್ನ ಮೇಲೆಯೂ ಬರುತ್ತದೆ ಎಂದು ನಂಬುವ ವ್ಯಕ್ತಿ ತನಗರಿವಿಲ್ಲದಂತೆಯೇ ಸೂಕ್ತ ಸಂದರ್ಭದಲ್ಲಿ, ಸೂಕ್ತ ಪ್ರಚೋದನೆ ದೊರೆತರೆ ಸಾಕು, ದೆವ್ವ/ದೇವರನ್ನು ತನ್ನ ಮೈ ಮೇಲೆ ಬರಿಸಿಕೊಳ್ಳಬಲ್ಲ.  ಹಾಗೆಯೇ ಒಂದು ಗುಂಪಿನಲ್ಲಿ ಒಬ್ಬರನ್ನು ನೋಡಿ ಹಲವರು ತಮ್ಮ ಮೇಲೆ ದೆವ್ವ/ದೇವರನ್ನು ಬರಿಸಿಕೊಳ್ಳಬಲ್ಲರು.

ಈ ಹಿನ್ನೆಲೆಯಲ್ಲಿ ಕೀವ್ ಮಹಾಶಯನು ಹೇಳಿರುವ ‘ಮೈಮೇಲೆ ದೆವ್ವ/ದೇವರು ಬರುವುದು ಒಂದು ಬಲವಾದ ಸಾಂಸ್ಥಿಕ ವಿಶೇಷ. ಅದಕ್ಕೆ ಸಮಾಜ, ಸಂಸ್ಕೃತಿಯ ಉತ್ತೇಜನ ಹಾಗೂ ಪ್ರೋತ್ಸಾಹವಿರುತ್ತದೆ ಎಂದಿರುವ ಮಾತು ಹೆಚ್ಚು ಅರ್ಥಪೂರ್ಣವಾಗುತ್ತದೆ.

ಭೂತಗಣಗಳು:

೧೯೭೭.

ಡಾ.ವಿ.ವೆಂಕಟರಾಮಯ್ಯನವರು ನಿಮ್‌ಹಾನ್ಸಿನ ಆರ್.ಎಂ.ಓ ಹಾಗೂ ಒಂದು ವಿಭಾಗದ ಮುಖ್ಯಸ್ತರಾಗಿದ್ದರು. ಒಂದು ದಿನ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಅವರನ್ನು ಬರಹೇಳಿದರು. ‘ಚಂದ್ರಶೇಖರ್... ಮುಂದಿನ ವಾರ ನೀವು ನಮ್ಮೊಂದಿಗೆ ಶೃಂಗೇರಿಗೆ ಬರಬೇಕು. ಅಲ್ಲಿ ಕೆಲವರ ಮೈ ಮೇಲೆ ಭೂತಗಣಗಳು ಬರುತ್ತವೆಯಂತೆ. ಆ ಕುರಿತು ಸರ್ವೇ ಮಾಡುತ್ತಿದ್ದೇವೆ ಎಂದರು. ‘ಆ ಸರ್ವೆಗೆ ಸಂಬಂಧಿಸಿದ ಮಾಹಿತಿಯೆಲ್ಲ ಈ ಫೈಲಿನಲ್ಲಿದೆ. ಒಮ್ಮೆ ಓದಿ‘ ಎಂದು ಫೈಲನ್ನು ನೀಡಿದರು. ಸಿ.ಆರ್.ಸಿಯವರು ಡಾ.ವೆಂಕಟರಾಮಯ್ಯನವರ ಆಹ್ವಾನವನ್ನು ಒಪ್ಪಿಕೊಂಡು ಫೈಲನ್ನು ತೆಗೆದುಕೊಂಡು ಹೋದರು.

ಶೃಂಗೇರಿಯ ಶ್ರೀ ಲಕ್ಷ್ಮೀನಾರಾಯಣ ಎನ್ನುವವರು ಪ್ರಜಾವಾಣಿ ಹಾಗೂ ಉದಯವಾಣಿ ಪತ್ರಿಕೆಯ ವಾಚಕರವಾಣಿ ವಿಭಾಗದಲ್ಲಿ ಒಂದು ಪತ್ರ ಬರೆದಿದ್ದರು. ಆ ಪತ್ರದ ಸಾರಾಂಶವನ್ನು ಹೀಗೆ ಸಂಗ್ರಹಿಸಬಹುದು.

ಶೃಂಗೇರಿ ಸಮೀಪದ ತ್ಯಾವಣ ಎಂಬ ಗ್ರಾಮ.

ಅಲ್ಲೊಂದು ಪ್ರಾಥಮಿಕ ಶಾಲೆ. ಆ ಶಾಲೆಯ ಮಕ್ಕಳು ಇದ್ದಕ್ಕಿದ್ದ ಹಾಗೆ ಪ್ರಜ್ಞೆ ತಪ್ಪಿ ಬೀಳುತ್ತಿದ್ದರು.

ಹೀಗೆ ಪ್ರಜ್ಞೆ ತಪ್ಪಿ ಬೀಳುವುದು ಸುಮಾರು ಒಂದು ವರ್ಷದಿಂದ ನಡೆಯುತ್ತಿತ್ತು.

ಮಕ್ಕಳು ಮನೆಯಲ್ಲಿದ್ದಾಗ ಪ್ರಜ್ಞೆ ತಪ್ಪುತ್ತಿರಲಿಲ್ಲ. ಶಾಲೆಗೆ ಬಂದಾಗ ಮಾತ್ರ ಪ್ರಜ್ಞೆ ತಪ್ಪಿ ಬೀಳುತ್ತಿದ್ದರು.

ಅದರಲ್ಲೂ ಬೆಳಗಿನ ಜಾವದ ಪ್ರಾರ್ಥನಾ ಅವಧಿಯಲ್ಲಿ ಪ್ರಜ್ಞೆ ತಪ್ಪುವುದು ಹೆಚ್ಚು.

ಪ್ರಜ್ಞೆ ತಪ್ಪಿ ಬೀಳುವುದಕ್ಕೆ ಕಾರಣ ಸ್ಥಳೀಯ ವೈದ್ಯರಿಗೆ ತಿಳಿದಿರಲಿಲ್ಲ.

ಮಕ್ಕಳು ಪ್ರಜ್ಞೆ ತಪ್ಪಿ ಬೀಳಲು ಭೂತಗಣಗಳ ಉಪದ್ರವ ಕಾರಣವಿರಬಹುದೆಂದು ಹರಕೆ, ಪೂಜೆ, ಪುನಸ್ಕಾರಗಳನ್ನು ಮಾಡಿದ್ದರು. ಆದರೂ ಮಕ್ಕಳು ಪ್ರಜ್ಞೆ ತಪ್ಪಿ ಬೀಳುವುದು ಕಡಿಮೆಯಾಗಿರಲಿಲ್ಲ.

ಅನೇಕ ತಂದೆ ತಾಯಂದಿರನ್ನು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿರುವ ಕಾರಣ ಮಕ್ಕಳ ಹಾಜರಾತಿ ಕಡಿಮೆಯಾಗಿತ್ತು.

ಶಾಲೆಯನ್ನು ಮುಚ್ಚಬೇಕಾದ ಪರಿಸ್ಥಿತಿ ಬಂದಿದ್ದ ಕಾರಣ, ಈ ವಿಚಿತ್ರ ಸಮಸ್ಯೆಯನ್ನು ಬಿಡಿಸಲು ಪ್ರಾಜ್ಞರ ನೆರವನ್ನು ಕೋರಿದ್ದರು.

ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯು ಈ ಪ್ರಕರಣವನ್ನು ಅಧ್ಯಯನ ಮಾಡಿ ಪರಿಹಾರವನ್ನು ಸೂಚಿಸುವಂತೆ ನಿಮ್‌ಹಾನ್ಸಿನ ವೈದ್ಯರನ್ನು ಕೇಳಿಕೊಂಡಿತ್ತು.

ಡಾ.ವೆಂಕಟರಾಮರಾಮಯ್ಯನವರ ತಂಡವು ಶಾಲಾ ಮುಖ್ಯೋಪಾಧ್ಯಾಯರು, ಇತರ ಶಿಕ್ಷಕರು ಹಾಗೂ ಕೆಲವು ಪಾಲಕರನ್ನು ಸಂದರ್ಶಿಸಿ, ಸಂಗ್ರಹಿಸಿದ ಮಾಹಿತಿಯ ಸಾರಾಂಶವನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು.

ಬೆಳಗಿನ ಜಾವ.

ಮಕ್ಕಳೆಲ್ಲ ಪ್ರಾರ್ಥನೆಗೆಂದು ಶಾಲೆಯ ಆವರಣದಲ್ಲಿ ಸೇರಿದ್ದರು. ಲಕ್ಷ್ಮಿ ಎಂಬ ಹುಡುಗಿ. ನಿಂತಲ್ಲಿಯೇ ಕುಸಿದು ನೆಲಕ್ಕೆ ಉರುಳಿದಳು. ಅವಳಿಗೆ ಪ್ರಜ್ಞೆ ಇರಲಿಲ್ಲ. ಕೂಡಲೇ ಆಕೆಯನ್ನು ಅಧ್ಯಾಪಕರು ಶಾಲೆಯ ಆವರಣಕ್ಕೆ ಸಾಗಿಸಿದರು. ಅವಳಿಗೆ ಶೈತ್ಯೋಪಚಾರವನ್ನು ಮಾಡಿದರು. ಸ್ವಲ್ಪ ಹೊತ್ತಿನ ಮೇಲೆ ಲಕ್ಷ್ಮಿ ಕಣ್ಣು ತೆರೆದಳು.

‘ನನಗೆ ತಲೆ ಸುತ್ತು ಬಂತು. ಕಣ್ಣು ಕತ್ತಲಿಟ್ಟಿತು. ಆಮೇಲೆ ನನಗೇನಾಯಿತೆಂದು ಗೊತ್ತಿಲ್ಲ ಎಂದಳು ಲಕ್ಷ್ಮಿ. ‘ನಿನಗೆ ಹಸಿವಾಗಿದೆಯೇನಮ್ಮ? ತಿನ್ನಲು ಇಲ್ಲವೇ ಕುಡಿಯಲು ಏನಾದರೂ ಬೇಕೆ?‘ ಎಂದು ಕೇಳಿದರು. ಆಗ ಆಕೆ ಬೇಕು ಎಂದಳು. ಕೂಡಲೇ ಆಕೆಗೆ ತಿನ್ನಲು ಹಣ್ಣು ಹಾಗೂ ಕುಡಿಯಲು ಹಾಲನ್ನು ನೀಡಿದರು.

ಎರಡು ದಿನದ ನಂತರ ಮತ್ತೊಬ್ಬ ಹುಡುಗಿ ಹೀಗೆ ಬಿದ್ದಳು.

ಈ ಸುದ್ದಿಗೆ ರೆಕ್ಕೆ ಪುಕ್ಕ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಸಾರವಾಯಿತು. ಮಕ್ಕಳು ಪ್ರಜ್ಞೆ ತಪ್ಪಿ ಬೀಳುತ್ತಾರಂತೆ. ಹಸಿವು ಎನ್ನುತ್ತಾರಂತೆ. ತಿನ್ನಲು ಏನಾದರೂ ಕೊಟ್ಟಾರೆ ಗಬ ಗಬ ತಿನ್ನುತ್ತಾರಂತೆ. ಈ ಹಿಂದೆ ಈ ಎಲ್ಲ ಮಕ್ಕಳು ಆರೋಗ್ಯವಾಗಿದ್ದರು. ಈಗ ಈ ರೀತಿ ಆಗಬೇಕಾದರೆ ಇದು ಭೂತಗಣಗಳ ಆಟವೇ ಇರಬೇಕು ಎಂದು ಮಾತನಾಡಿಕೊಂಡರು. ಇಷ್ಟ ದೈವಕ್ಕೆ ಹರಕೆ ಹೊತ್ತು ತಮ್ಮ ಮಕ್ಕಳನ್ನು ರಕ್ಷಿಸುವಂತೆ ಪ್ರಾರ್ಥನೆಯನ್ನು ಮಾಡಿದರು.

ಪ್ರಾರ್ಥನೆಯಿಂದ ಮಕ್ಕಳು ಪ್ರಜ್ಞೆ ತಪ್ಪಿ ಬೀಳುವುದು ಕಡಿಮೆಯಾಗಲಿಲ್ಲ. ಜೊತೆಗೆ ಕೆಳಕ್ಕೆ ಬಿದ್ದ ಮೇಲೆ ತುಂಬಾ ನೋವನ್ನು ಅನುಭವಿಸುತ್ತಿರುವಂತೆ ನರಳುತ್ತಿದ್ದರು. ಮುಲುಗುತ್ತಿದ್ದರು. ಇದನ್ನು ಕಂಡ ಕೆಲವರು ‘ಯಾರು ನೀವು? ನಿಮಗೇನು ಬೇಕು? ನೀವೇಕೆ ಮಕ್ಕಳನ್ನು ಹಿಡಿದುಕೊಂಡಿದ್ದೀರಿ? ಎಂದು ಪ್ರಶ್ನಿಸಿದಾಗ ಕೆಲವು ಹುಡುಗಿಯರು ‘ನಾನು ಕಾಂತಿಬಲೆ...ನಾನು ಬಲೇವತಿ ಎಂದು ಉತ್ತರವನ್ನು ನೀಡಿದರು. ‘ನಮ್ಮಿಂದ ಏನು ತಪ್ಪಾಗಿದೆ, ನಿಮಗೇನು ಬೇಕು ಎಂದು ಕೇಳಿದಾಗ ‘ನಮಗೆ ತುಂಬಾ ಹಸಿವು‘ ಎಂದು ಮಕ್ಕಳು ಉತ್ತರವನ್ನು ಕೊಟ್ಟರು. ಆಹಾರವನ್ನು ನೀಡಿದಾಗ, ಅದನ್ನು ಗಬ ಗಬ ತಿಂದರು.

ತ್ಯಾವಣದ ಶಾಲೆಯನ್ನು ಕಟ್ಟಿ ೧೫ ವರ್ಷಗಳಾಗಿದ್ದವು. ಶಾಲೆಯನ್ನು ಕಟ್ಟಿದ್ದ ಸ್ಥಳದಲ್ಲಿ  ಇಬ್ಬರ ಶವಗಳನ್ನು ಹೂತಿದ್ದರಂತೆ. ಅದರ ಮೇಲೆಯೆ ಶಾಲೆಗಳನ್ನು ಕಟ್ಟಿದ್ದರಿಂದ, ಆ ಆತ್ಮಗಳಿಗೆ ಕೋಪ ಬಂದು ಹೀಗೆ ಮಕ್ಕಳನ್ನು ಕಾಡುತ್ತಿರಬಹುದು ಎಂದು ಕೆಲವರು ತರ್ಕಿಸಿದರು. ಕೂಡಲೇ ದೈವ-ಭೂತಗಳಿಗೆ ಹರಕೆ ಹೊತ್ತರು. ಹರಕೆ ಹೊತ್ತಮೇಲೆ ಕೆಳಕ್ಕೆ ಬೀಳುವ ಮಕ್ಕಳ ಸಂಖ್ಯೆ ಹೆಚ್ಚಿತೇ ಹೊರತು ಕಡಿಮೆಯಾಗಲಿಲ್ಲ.

ಈ ಪ್ರಕರಣ ಶೃಂಗೇರಿಯ ಸ್ವಾಮಿಗಳ ತನಕವೂ ಹೋಯಿತು. ಸ್ವಾಮಿಗಳು ಶಾಲೆಯ ಆವರಣದಲ್ಲಿ ಯಜ್ಞ-ಹೋಮಗಳನ್ನು ಮಾಡಿದರು. ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ತ್ಯಾವಣ ಶಾಲೆಯು ದೆವ್ವಗಳ ಶಾಲೆ ಎಂದು ಹೆಸರಾಯಿತು. ಕೆಲವು ಪಾಲಕರು ಮಕ್ಕಳನ್ನು ಶಾಲೆಯಿಂದ ಬಿಡಿಸಿದರು. ಬೇರೆ ಶಾಲೆಗೆ ಹಾಕಿದರು. ಹೊಸ ಶಾಲೆಯಲ್ಲಿ ಮಕ್ಕಳು ಆರೋಗ್ಯವಾಗಿದ್ದರು. ಪ್ರಜ್ಞೆ ತಪ್ಪಿ ಬೀಳುತ್ತಿರಲಿಲ್ಲ.

ಡಾ.ವೆಂಕಟರಾಮಯ್ಯ ತಂಡದ ಸದಸ್ಯರು ಪ್ರಜ್ಞೆ ತಪ್ಪಿಬೀಳುತ್ತಿದ್ದ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಿದರು. ನಂತರ ಮಕ್ಕಳನ್ನು ಒಬ್ಬೊಬ್ಬರನ್ನಾಗಿ ಸಂದರ್ಶಿಸಿದರು. ಎಲ್ಲ ಮಕ್ಕಳು ‘ನಮಗೇನೂ ನೆನಪಿಲ್ಲ. ಪ್ರಾರ್ಥನೆ ಮಾಡುವಾಗ ನಮಗೆ ತಲೆ ಸುತ್ತಿ ಬರುತ್ತದೆ. ಕಣ್ಣು ಕತ್ತಲಿಡುತ್ತದೆ. ಕೆಳಕ್ಕೆ ಬೀಳುತ್ತೇವೆ. ಆಮೇಲೆ ನಮಗೇನು ಆಗುತ್ತದೆ ಎನ್ನುವುದು ತಿಳಿಯುವುದಿಲ್ಲ‘ ಎಂಬ ಉತ್ತರವನ್ನೇ ನೀಡಿದರು. ಮಕ್ಕಳ ಶೈಕ್ಷಣಿಕೆ ಹಿನ್ನೆಲೆಯನ್ನು ವಿಚಾರಿಸಿದಾಗ, ಈ ಮಕ್ಕಳು ಕಲಿಕೆಯಲ್ಲಿ ಉಳಿದ ಮಕ್ಕಳಿಗಿಂತ ಸ್ವಲ್ಪ ಹಿಂದಿರುವುದು ತಿಳಿದು ಬಂದಿತು.

ಡಾ.ವೆಂಕಟರಾಮಯ್ಯ ತಂಡದವರು ‘ಭಾವವಿರೇಚನ‘ (ಅಬ್‌ರಿಯಾಕ್ಷನ್) ಎಂಬ ಚಿಕಿತ್ಸೆಯನ್ನು ನೀಡಲು ನಿರ್ಧರಿಸಿದರು. ಮನಸ್ಸಿನ ಒಳಗೆ ಹೆಪ್ಪುಗಟ್ಟಿದ ಭಾವನೆಗಳನ್ನು ಪ್ರಚೋದಿಸಿ, ಅವು ಹೊರಹರಿಯುವಂತೆ ಮಾಡುವುದೇ ಭಾವ ವಿರೇಚನ ಚಿಕಿತ್ಸೆಯ ತಿರುಳು.

ಭಾವವಿರೇಚನೆಯನ್ನು ಒಂದು ಉದಾಹರಣೆಯೊಂದಿಗೆ ವಿಷದಪಡಿಸಬಹುದು. ಒಂದು ಕುರು ಇದೆ ಎಂದು ಭಾವಿಸೋಣ. ಕುರುವಿನಲ್ಲಿ ಕೀವು ತುಂಬಿ ತುಂಬಾ ನೋಯುತ್ತಿರುತ್ತದೆ. ಈ ನೋವನ್ನು ನಿಲ್ಲಿಸಲು ವೈದ್ಯರು ತಮ್ಮ ಸ್ಕ್ಯಾಲ್‌ಪೆಲ್ ಎಂಬ ಕಿರುಗತ್ತಿಯಿಂದ, ಕುರುವನ್ನು ಛೇದಿಸಿ, ಒಳಗಿರುವ ಕೀವನ್ನೆಲ್ಲ ಹೊರಹರಿಯಬಿಡುತ್ತಾರೆ. ಆಗ ನೋವು ತನಗೆ ತಾನೆ ಕಡಿಮೆಯಾಗುತ್ತದೆ. ಕುರು ಸ್ವಯಂ ಮಾಯುತ್ತದೆ. ಹಾಗೆಯೇ ಮನಸ್ಸಿನ ಒಳಗೆ ಯಾವುದಾದರೂ ಕಾರಣದಿಂದ ಭಾವನೆಗಳು ಒತ್ತಡದಲ್ಲಿದ್ದರೆ, ಅವನ್ನು ಭಾವವಿರೇಚನದಿಂದ ಹೊರಬರುವಂತೆ ಮಾಡಿ, ಅವರನ್ನು ಗುಣಪಡಿಸಬಹುದು.

ವೈದ್ಯರು ಮಕ್ಕಳ ರಕ್ತನಾಳದ ಒಳಗೆ ಇಂಟ್ರಾವಾಲ್ ಸೋಡಿಯಂ ಎಂಬ ಔಷಧವನ್ನು ಚುಚ್ಚಿದರು. ಈ ಔಷಧ ಪ್ರಭಾವದಡಿಯಲ್ಲಿ ಮಕ್ಕಳು ಸುಪ್ತಾವಸ್ಥೆಗೆ ಹೋದರು. ಆಗ ವೈದ್ಯರು ಮಕ್ಕಳ ಸುಪ್ತ ಮನಸ್ಸಿನೊಡನೇ ನೇರವಾಗಿ ವ್ಯವಹರಿಸಲು ಸಾಧ್ಯವಾಯಿತು. ಮಕ್ಕಳ ಮನಸ್ಸಿನಲ್ಲಿ ಹೆಪ್ಪುಗಟ್ಟಿದ್ದ ಭಾವನೆಗಳನ್ನು ಕೆದಕಲಾರಂಭಿಸಿದರು.

ಮಕ್ಕಳು ನೀಡಿದ ಉತ್ತರಗಳು ವೈದ್ಯರನ್ನು ಆಶ್ಚರ್ಯಚಕಿತರನ್ನಾಗಿಸಿತು.

‘ನಾವು ಇದನ್ನು ತಮಾಷೆಗಾಗಿ ಮಾಡಿದೆವು.  ಇತರರು ಬೀಳುವುದನ್ನು ನೋಡಿ ನಾವೂ ಬಿದ್ದೆವು. ಏಕೆಂದರೆ ಬಿದ್ದ ಮೇಲೆ ನಮಗೆಲ್ಲ ತಿನ್ನಲು ತಿಂಡಿ ಸಿಗುತ್ತಿತ್ತು. ನಂತರ ಶಾಲೆಯಿಂದ ಮನೆಗೆ ಕಳುಹಿಸಿಬಿಡುತ್ತಿದ್ದರು. ನೀವು ಯಾರು ಎಂದು ಜನರು ಪೀಡಿಸಿದಾಗ, ಅವರ ಕಾಟವನ್ನು ತಪ್ಪಿಸಿಕೊಳ್ಳಲು ನಾವು ಶಕ್ತಿದೇವತೆಗಳು ಎಂದು ಹೇಳಿದೆವು. ಬಾಯಿಗೆ ಬಂದ ಬಲೇವತಿ, ಕಾಂತಿಬಲೆ ಎಂಬ ಹೆಸರನ್ನು ಹೇಳಿದೆವು. ಅದನ್ನು ಕೇಳಿದ ಜನರು ಭಯದಿಂದ ನಡುಗುವುದನ್ನು ನೋಡಿ ನಾವು ಮಜಾ ತಗೋತ್ತಿದ್ದೆವು ಎಂದರು.

ಮೊದಲ ಸಲ ಪ್ರಜ್ಞೆಯನ್ನು ಕಳೆದುಕೊಂಡ ಹುಡುಗಿಯನ್ನು ಪ್ರಶ್ನಿಸಿದಾಗ ಆಕೆ ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ ಹಳ್ಳಿಯಿಂದ ನಡೆದು ಬರುತ್ತಿದ್ದಳು. ಕೆಲವು ದಿನ ಬರೀ ಹೊಟ್ಟೆಯಲ್ಲಿ ನಡೆದು ಬರುತ್ತಿದ್ದಳು. ಪ್ರಾರ್ಥನೆಯನ್ನು ಮಾಡಲು ಬಿಸಿಲಲ್ಲಿ ನಿಲ್ಲುತ್ತಿದ್ದಳು. ಆಗ ಆಕೆಗೆ ಹಸಿವೆಯನ್ನು ತಡೆಯಲಾಗುತ್ತಿರಲಿಲ್ಲ. ಬಹುಶಃ ಆಕೆಗೆ ‘ರಕ್ತಗ್ಲೂಕೋಸ್ ಕೊರೆ (ಹೈಪೋಗ್ಲೈಸೀಮಿಯ) ಉಂಟಾಗುತ್ತಿತ್ತು ಎಂದು ಕಾಣುತ್ತದೆ. ಪ್ರಜ್ಞೆ ತಪ್ಪಿ ಕೆಳಕ್ಕೆ ಬಿದ್ದಳು. ಆಗ ಅಧ್ಯಾಪಕ ವರ್ಗದವರು ಆಕೆಗೆ ತಿನ್ನಲು, ಕುಡಿಯಲು ಹಣ್ಣು ಹಾಲನ್ನು ನೀಡಿ ಆರೈಕೆ ಮಾಡಿದರು. ಆಕೆಯನ್ನು ಉಪಚರಿಸಿದರು. ಮನೆಗೆ ಕಳುಹಿಸಿಕೊಟ್ಟರು.  ಇದನ್ನು ಇತರ ಮಕ್ಕಳು ನೋಡಿದರು. ಪ್ರಜ್ಞೆ ತಪ್ಪಿ ಬೀಳುವುದರಿಂದ ಅನೇಕ ಅನುಕೂಲತೆಗಳಿರುವುದನ್ನು ಮನಗಂಡರು. ತಾವೂ ಪ್ರಜ್ಞೆ ತಪ್ಪಿ ಬಿದ್ದರೆ ತಮಗೂ ಇಂತಹ ಅನುಕೂಲತೆಗಳು ಒದಗಿ ಬರುವುದೆಂದು ಲೆಕ್ಕ ಹಾಕಿದರು. ಕೂಡಲೇ ಅಂತಹ ಲಕ್ಷಣಗಳನ್ನು ತೋರಲಾರಂಬಿಸಿದರು. ಅವರು ನಿರೀಕ್ಷಿಸಿದಂತೆಯೇ ಹಾಲು, ಹಣ್ಣು, ಆಹಾರಗಳು ದೊರೆತವು. ಶಾಲೆಯಿಂದ ವಿನಾಯತಿ ದೊರೆತವು.

ಡಾ.ವೆಂಕಟರಾಮಯ್ಯ ತಂಡದವರು ಸುಪ್ತಾವಸ್ಥೆಯಲ್ಲಿದ್ದ ಮಕ್ಕಳ ಸುಪ್ತ ಮನಸ್ಸಿಗೆ ಹೀಗೆಲ್ಲ ಮಾಡಬಾರದು. ಬೇಕಾಗಿರುವುದನ್ನು ನೇರವಾಗಿ ಕೇಳಿ ತೆಗೆದುಕೊಳ್ಳಬೇಕು ಎಂದು ಸೂಚನೆಯನ್ನು ನೀಡಿದರು. ಆ ಸೂಚನೆಗಳನ್ನು ಮಕ್ಕಳು ಒಪ್ಪಿದವು. ಆ ನಂತರ ಆ ಮಕ್ಕಳ ಮನೆಯವರನ್ನು ಕಂಡು ಮಕ್ಕಳ ಮುಂದೆ, ಯಾವುದೇ ರೀತಿಯ ಭೂತಗಣಗಳ ಬಗ್ಗೆ ಮಾತನಾಡದಿರುವಂತೆ ಸೂಚನೆಯನ್ನು ನೀಡಿದರು.

ನಂತರ ಮಕ್ಕಳು ಬರುವ ಹಳ್ಳಿಗಳಿಗೆ ಹೋಗಿ ಸರ್ವೇ ಮಾಡಿದರು. ಒಂದು ಪ್ರಶ್ನಾವಳಿಯನ್ನು ಸಿದ್ಧಪಡಿಸಿದರು. ೧೮೨ ಕುಟುಂಬಗಳನ್ನು ಭೇಟಿ ಮಾಡಿದರು. ಒಟ್ಟು ೧೧೫೮ ಜನರನ್ನು ಸಂದರ್ಶಿಸಿ ಮಾಹಿತಿಯನ್ನು ಕಲೆ ಹಾಕಿದರು. ಇವರಲ್ಲಿ ೪೩ ಜನರ ಮೈಮೇಲೆ ದೈವವೋ, ಗಣವೋ, ದೆವ್ವವೋ ಬರುತ್ತದೆ ಎಂಬ ಸತ್ಯ ತಿಳಿಯಿತು. ಇವರಲ್ಲಿ ೩೨ ಜನರು ಹೆಂಗಸರಾಗಿದ್ದರು. ಸಂದರ್ಶಿಸಿದ ೯೦% ಜನರು ತಮಗೆ ದೆವ್ವ / ದೇವರು ಮೈಮೇಲೆ ಬರುವ ಬಗ್ಗೆ ನಂಬಿಕೆಯಿದೆ ಎಂದು ಹೇಳಿದರು. ಹಾಗೆ ಬರುವುದಕ್ಕೆ ಸಾಧ್ಯವಿದೆ ಎಂದರು.

ಜನಸಾಮಾನ್ಯರು ದೈವ ಅಥವ ಭೂತಗಣವನ್ನು ಜನರು ಸ್ವಾಗತಿಸುತ್ತಿದರು. ಆದರೆ ದೆವ್ವವನ್ನು ಮಾತ್ರ ಇಷ್ಟ ಪಡುತ್ತಿರಲಿಲ್ಲ.

ತ್ಯಾವಣದ ಸುತ್ತಮುತ್ತಲಿನ ಗ್ರಾಮದ ಜನರಿಗೆ ದೈವ/ಭೂತಗಣಗಳಲ್ಲಿ ನಂಬಿಕೆಯಿತ್ತು. ದೈವ/ಭೂತಗಣಗಳನ್ನು ಮೈಮೇಲೆ ಬರಿಸಿಕೊಳ್ಳುವ ಜನರೂ ಇದ್ದರು. ಆ ದೈವ /ಭೂತಗಣಗಳು ಬಂದಾಗ ಭಕ್ತಿ, ಗೌರವವನ್ನು ತೋರುತ್ತಿದ್ದರು. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಪರಿಹಾರಗಳನ್ನು ಪಡೆಯುತ್ತಿದ್ದರು. ಕಾಣಿಕೆಗಳನ್ನು ನೀಡುತ್ತಿದ್ದರು.

ಮಕ್ಕಳು ದೈವ-ಭೂತಗಣಗಳು ಅಸ್ತಿತ್ವದಲ್ಲಿ ಪರಿಸರದಲ್ಲಿ ಬೆಳೆದಿದ್ದರು. ಹಾಗಾಗಿ ಅವರು ತಮ್ಮ ಮೈಮೇಲೆ ಗಣಗಳನ್ನು ಬರಿಸಿಕೊಳ್ಳುವುದು ಕಷ್ಟವಾಗಲಿಲ್ಲ. ಲಕ್ಷ್ಮಿಯೇನೋ ಹಸಿವಿನಿಂದ ತಲೆ ತಿರುಗಿ ಬಿದ್ದಿರಬಹುದು. ಆದರೆ ತಲೆ ತಿರುಗಿ ಬೀಳುವುದರಿಂದ ದೊರೆಯುವ ಹಾಲು ಹಣ್ಣು ಹಾಗೂ ಶಾಲೆಗೆ ರಜೆ ಇತ್ಯಾದಿಗಳನ್ನು ಇತರ ಮಕ್ಕಳು ಗಮನಿಸಿದರು. ತಮ್ಮ ಮೇಲೆಯೂ ಗಣಗಳು ಬರುವಂತೆ ಮಾಡಿಕೊಂಡರು. ಸರಿಯಾದ ಸಲಹೆ ಸೂಚನೆಗಳನ್ನು ಮಕ್ಕಳ ಸುಪ್ತಮನಸ್ಸಿಗೆ ನೀಡುತ್ತಿರುವಂತೆಯೇ ಮೈಮೇಲೆ ಗಣಗಳು ಬರುವುದು ನಿಂತಿತು.

ದೇವರು/ದೆವ್ವ ಮೈಮೇಲೆ ಬರುವ ಪ್ರಕರಣಗಳನ್ನು ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದ ಎಲ್ಲ ರಾಜ್ಯಗಳಲ್ಲಿ ನೋಡುತ್ತೇವೆ. ಆದರೆ ಈ ಬಗೆ ವೈಜ್ಞಾನಿಕ ಅಧ್ಯಯನಗಳು ಅಷ್ಟಾಗಿ ನಡೆದಿಲ್ಲ. ನಡೆದಿರುವ ಕೆಲವು ಅಧ್ಯಯನಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

೧೯೭೧ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋಟ ಗ್ರಾಮದಲ್ಲಿ ಡಾ.ಆರ್.ಎಲ್.ಕಪೂರ್, ಡಾ.ಜಿ.ಎಂ.ಕಾರ್‌ಸ್ಟೇರ್ಸ್ ಮುಂತಾದವರ ನಡೆಸಿದ ಅಧ್ಯಯನವು, ಆ ಪ್ರದೇಶದ ೨.೮% ಜನರ ಮೈಮೇಲೆ ದೆವ್ವ ಇಲ್ಲವೇ ದೇವರು ಬರುತ್ತದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

ತ್ಯಾವಣದಲ್ಲಿ ಡಾ.ವೆಂಕಟರಾಮಯ್ಯ, ಸಿ.ಆರ್.ಸಿ ಮುಂತಾದವರ ನಡೆಸಿದ ಅಧ್ಯಯನದ ಅನ್ವಯ ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ೩.೭% ಜನರ ಮೇಲೆ ದೇವರು ಅಥವ ದೆವ್ವ ಮೈಮೇಲೆ ಬರುತ್ತಿದ್ದವು.

ಶ್ರೀಲಂಕಾದಲ್ಲಿ ಡಾ.ಸಿ.ಪಿ.ವಿಜೇಸಿಂಘೆ ಹಾಗೂ ಸಂಗಡಿಗರು ನಡೆಸಿದ ಅಧ್ಯಯನಗಳ ಅನ್ವಯ ಅಲ್ಲಿನ ಅರೆನಗರ ಪ್ರದೇಶಗಳಲ್ಲಿ ೦.೫% ಜನರ ಮೈಮೇಲೆ ಇಂತಹ ದೆವ್ವ/ದೇವರುಗಳು ಬರುತ್ತಿದ್ದವು ಎಂಬುದು ತಿಳಿಯುತ್ತದೆ.

೧೯೮೦ರಲ್ಲಿ ಉತ್ತರ ಕರ್ನಾಟಕದಲ್ಲಿ ನಡೆದ ಬಾನಾಮತಿ ಪ್ರಕರಣಗಳು ಕರ್ನಾಟಕ ವಿಧಾನಸಭೆಯಲ್ಲಿ ಪ್ರಸ್ತಾಪವಾಯಿತು. ನಂತರ ಡಾ.ಎಚ್.ನರಸಿಂಹಯ್ಯನವರ ಅಧ್ಯಕ್ಷತೆಯಲ್ಲಿ ಬಾನಾಮತಿ ಸತ್ಯ ಶೋಧನ ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಯಲ್ಲಿ ಸಿ.ಆರ್.ಸಿಯವರೂ ಇದ್ದರು. ಸಮಿತಿಯು ಸುಮಾರು ೩ ವಾರಗಳ ಕಾಲ ಉತ್ತರ ಕರ್ನಾಟಕದ ವಿವಿಧ ಪ್ರದೇಶಗಳಿಗೆ ಭೇಟಿಯನ್ನು ನೀಡಿ ಅಲ್ಲಿ ನಡೆಯಿತೆನ್ನಲಾದ ಬಾನಾಮತಿ ಪ್ರಕರಣಗಳನ್ನು, ಸಮೂಹ ಸನ್ನಿ ಪ್ರಕರಣಗಳನ್ನು ಅಧ್ಯಯನ ಮಾಡಿತು. ನಂತರ ಈ ಬಗ್ಗೆ ವರದಿಯನ್ನು ಸಲ್ಲಿಸಿತು.

ಸಿ.ಆರ್.ಸಿಯವರು ತಮ್ಮ ಈ ಎಲ್ಲ ಅನುಭವ-ಅಧ್ಯಯನಗಳನ್ನು ಆಧರಿಸಿ ‘ದೇವರು ದೆವ್ವ ಮೈಮೇಲೆ ಬರುವವೆ?‘ ‘ದೇವರು ದೆವ್ವ ಇರುವವೆ, ಮೈಮೇಲೆ ಬರುವವೆ?‘ ‘ಸಾಮಾಜಿಕ ನಂಬಿಕೆಗಳು ಹಾಗೂ ಮಾನಸಿಕ ಆರೋಗ್ಯ‘ ‘ಬಾನಾಮತಿ‘ ಮುಂತಾದ ಪುಸ್ತಕಗಳನ್ನು ಜನಸಾಮಾನ್ಯರಿಗಾಗಿ ಬರೆದರು.

ದೇವರು ಹಾಗೂ ದೆವ್ವ ಮೈಮೇಲೆ ಬರುವ ಅನೇಕ ಪ್ರಸಂಗಗಳನ್ನು ಅಧ್ಯಯನ ಮಾಡಿ ತಜ್ಞರು ಅಂತಿಮವಾಗಿ ಈ ಕೆಳಗಿನ ತೀರ್ಮನಗಳಿಗೆ ಬಂದಿದ್ದಾರೆ.

ದೇವರು/ದೆವ್ವಗಳು ಮೈಮೇಲೆ ಬರುವ ಪ್ರಕರಣಗಳು, ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಬಹುಪಾಲು ರಾಷ್ಟ್ರಗಳಲ್ಲಿ ಕಂಡುಬರುತ್ತವೆ.

ದೇವರು, ದೆವ್ವಗಳ ಬಗ್ಗೆ ನಂಬಿಕೆ ಇರುವ ಸಮುದಾಯದಲ್ಲಿ ಮಾತ್ರ, ಮೈಮೇಲೆ ದೇವರು ಇಲ್ಲವೇ ದೆವ್ವಗಳು ಬರುತ್ತವೆ.

ಧಾರ್ಮಿಕ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಮೈಮೇಲೆ ‘ದೇವರು‘ ಬರುತ್ತಾರೆ. ದೆವ್ವ ಬರುವುದಿಲ್ಲ.

ದೇವರು, ದೆವ್ವ ವ್ಯಕ್ತಿಯ ಇಚ್ಛಾನುಸಾರ ಬರಬಹುದು; ಅನೈಚ್ಛಿಕವಾಗಿಯೂ ಬರಬಹುದು.

ದೇವರು ಇಲ್ಲವೇ ದೆವ್ವಗಳು ಸಾಮಾನ್ಯವಾಗಿ ಕೆಳವರ್ಗ ಇಲ್ಲವೇ ಕೆಳ ಮಧ್ಯಮ ವರ್ಗದವರ ಮೇಲೆ ಮಾತ್ರ ಬರುತ್ತವೆ. ಶ್ರೀಮಂತರ ಮೈ ಮೇಲೆ ಬಂದ ಉದಾಹರಣೆಗಳಿಲ್ಲ.

ದೇವರು, ದೆವ್ವಗಳು ಹೆಚ್ಚು ಅನಕ್ಷರಸ್ಥರ ಮೈ ಮೇಲೆ ಬರುತ್ತವೆ. ಅವರು ನಡೆಸಿದ ಅಧ್ಯಯನದಲ್ಲಿ ಎಸ್.ಎಸ್.ಎಲ್.ಸಿ ಗಿಂತ ಹೆಚ್ಚು ಓದಿದವರು ಒಬ್ಬರೂ ಇರಲಿಲ್ಲ.

ದೇವರು ದೆವ್ವಗಳು ಗಂಡಸರಿಗಿಂತ, ಹೆಂಗಸರ ಮೈ ಮೇಲೆ ಹೆಚ್ಚು ಬರುತ್ತವೆ.

ಸ್ತ್ರೀಯರ ಮೈಮೇಲೆ ದೇವರಿಗಿಂತ ದೆವ್ವ ಬರುವುದೇ ಹೆಚ್ಚು.

ದೇವರು, ದೆವ್ವ ಬರುವವರ ವಯಸ್ಸು, ಸಾಮಾನ್ಯವಾಗಿ ೨೫-೩೫ ವರ್ಷಗಳ ನಡುವೆ ಇರುತ್ತದೆ.

೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅಥವ ೫೦ ವರ್ಷ ಮೀರಿದವರ ಮೈ ಮೇಲೆ ದೆವ್ವ, ದೇವರು ಬಂದ ಒಂದೇ ಒಂದು ಉದಾಹರಣೆಯಿರಲಿಲ್ಲ.

ದೇವರು, ದೆವ್ವ ಬರುವವರು, ಅವರ ಸಹಾಯಕರು ನೀಡುವ ಸಲಹೆ, ಸೂಚನೆಗಳನ್ನು ಪಾಲಿಸುತ್ತಿದ್ದರು.

ದೆವ್ವ ಮೆಟ್ಟಿಕೊಳ್ಳುವ ಮೊದಲ ಮಟ್ಟದ ಪ್ರಕರಣಗಳು ಅಪರೂಪ. ಇಂತಹವರು ಅತಿಮಾನುಷ ಪ್ರದರ್ಶನಗಳನ್ನು ನೀಡಬಲ್ಲರು. ಒಬ್ಬರಿಂದ ಎತ್ತಲು ಸಾಧ್ಯವಿಲ್ಲದ ಬಂಡೆಗಲ್ಲನ್ನು ಅನಾಯಾಸವಾಗಿ ಎತ್ತಿ ಎಸೆಯಬಲ್ಲರು. ಇಂತಹ ಅತಿಮಾನುಷ ಕಾರ್ಯಗಳನ್ನು ಮಾಡಬಲ್ಲರು. ಇದಕ್ಕೆ ದೇಹ-ಮನಸ್ಸಿನ ಸುಪ್ತ ಮೀಸಲು ಶಕ್ತಿ ಬಳಕೆಯಾಗುತ್ತದೆ. ವ್ಯಕ್ತಿಯ ನಡೆ, ನುಡಿಗಳೆಲ್ಲ ಬದಲಾಗಿರುತ್ತದೆ. ಆದರೆ ಸಾಮಾನ್ಯವಾಗಿ ೨ ನೆಯ ಮಟ್ಟದ ಇಲ್ಲವೇ ೩ ನೆಯ ಮಟ್ಟದ ಪ್ರಕರಣಗಳೇ ಹೆಚ್ಚು.

ಎರಡು ಹಾಗೂ ಮೂರನೆಯ ಮಟ್ಟದ ಪ್ರಕರಣಗಳಲ್ಲಿ ದೆವ್ವ, ದೇವರು ಮೈ ಮೇಲೆ ಬರುವವರು, ಹಾಗೆ ಬರುವುದರಿಂದ ದೊರೆಯುವ ಹಣ, ಕೀರ್ತಿ, ಸ್ಥಾನಮಾನಗಳಿಗೆ ಆಕರ್ಷಿತರಾಗಿರುತ್ತಾರೆ.

ಎರಡನೆಯ ಹಾಗೂ ಮೂರನೆಯ ಮಟ್ಟದ ಪ್ರಕರಣಗಳು ಕೆಲವು ಕಾಲ ಮಾತ್ರ ನಡೆಯುತ್ತವೆ. ಬಹುಶಃ ಜನರು ನಂಬಿಕೆಯನ್ನು ಕಳೆದುಕೊಳ್ಳುತ್ತಿರುವಂತೆಯೇ ಮೈಮೇಲೆ ಬರುವುದೂ ಕಡಿಮೆಯಾಗುತ್ತಿತ್ತು. ಆದರೆ ಮೊದಲ ಮಟ್ಟದ ಮೆಟ್ಟುವಿಕೆಗೆ ಒಳಗಾದವರ ಮೇಲೆ ಮಾತ್ರ ವರ್ಷಾನುಗಟ್ಟಲೇ ದೆವ್ವ/ದೇವರು ಬರಬಹುದು.

ದೇವರು ಹಾಗೂ ದೆವ್ವ, ಒಬ್ಬನೇ ವ್ಯಕ್ತಿಯ ಮೇಲೆ ಬರುವುದಿಲ್ಲ. ಹಾಗೆಯೇ ಒಬ್ಬ ವ್ಯಕ್ತಿಯ ಮೈ ಮೇಲೆ ಹಲವು ದೇವರು ಇಲ್ಲವೇ ದೆವ್ವಗಳು ಬರುತ್ತಿರಲಿಲ್ಲ.

ಒಂದು ಸಮುದಾಯಕ್ಕ ಪರಿಚಿತವಾಗಿರುವ ದೇವರು ಅಥವ ದೆವ್ವ ಮಾತ್ರ ಬರುತ್ತಿದ್ದವು. ಆ ಸಮುದಾಯಕ್ಕೆ ಅಪರಿಚಿತವಾದ ದೇವರು ಅಥವ ದೆವ್ವ ಬಂದ ಉದಾಹರಣೆಗಳಿಲ್ಲ.

 

ತೀರ್ಮಾನ: ದೇವರು ಅಥವ ದೆವ್ವ ಮೈಮೇಲೆ ಬರುವುದಕ್ಕೆ ಮನಸ್ಸು ಹಾಗೂ ಮನಸ್ಸಿನ ವ್ಯಾಪಾರಗಳೇ ಕಾರಣ.

-----------

(ಗ್ರಂಥಋಣ: ಡಾ.ಸಿ.ಆರ್.ಚಂದ್ರಶೇಖರ್ ಅವರು ಬರೆದಿರುವ ಹಿತ-ಅಹಿತ ಮತ್ತು ‘ದೇವರು ದೆವ್ವ ಇರುವವೆ, ಮೈಮೇಲೆ ಬರುವವೆ?‘)

Rating
Average: 3 (1 vote)

Comments