ಕರ್ನಾಟಕ ಕ್ರಿಕೆಟ್ - ೬

ಕರ್ನಾಟಕ ಕ್ರಿಕೆಟ್ - ೬

ರೋಲಂಡ್ ಬ್ಯಾರಿಂಗ್ಟನ್: ತನ್ನ ೧೯ನೇ ವಯಸ್ಸಿನಲ್ಲಿ ೧೯೯೯-೨೦೦೦ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾದ ಬ್ಯಾರಿಂಗ್ಟನ್, ತನ್ನ ಪ್ರಥಮ ಪಂದ್ಯದಲ್ಲೇ ಕೇರಳ ವಿರುದ್ಧ ಶತಕದ ಬಾರಿಯನ್ನು ಆಡಿದರು. ಗಳಿಸಿದ್ದು ೧೦೬ ಓಟಗಳನ್ನು. ಆರಂಭಿಕ ಆಟಗಾರನಾಗಿ ಕಿರಿಯರ ಪಂದ್ಯಾಟಗಳಲ್ಲಿ ಓಟಗಳನ್ನು ಸೂರೆಗೈದ ಬ್ಯಾರಿಂಗ್ಟನ್, ರಣಜಿ ಪಂದ್ಯಗಳಲ್ಲೂ ತನ್ನ ಉತ್ತಮ ಆಟವನ್ನು ಮುಂದುವರಿಸಿದರು. ಪ್ರಥಮ ಋತುವಿನ ೬ ಪಂದ್ಯಗಳಲ್ಲಿ ೪೬.೨೫ ಸರಾಸರಿಯಲ್ಲಿ ೩೭೦ ಓಟಗಳನ್ನು ಗಳಿಸಿದರು. ೧೯ರ ಹುಡುಗನಿಗೆ ಭರವಸೆಯ ಆರಂಭ ಎನ್ನಬಹುದು. ಬ್ಯಾರಿಂಗ್ಟನ್ ನ ತಂದೆಯವರು, ೧೯೬೦ರ ದಶಕದಲ್ಲಿ ಇಂಗ್ಲಂಡ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಕೆನೆತ್ ಫ್ರಾಂಕ್ ಬ್ಯಾರಿಂಗ್ಟನ್ ಇವರ ದೊಡ್ಡ ಅಭಿಮಾನಿಯಾಗಿದ್ದರಿಂದ ತಮ್ಮ ಮಗನಿಗೂ ಅದೇ ಹೆಸರನ್ನಿಟ್ಟರು.

'ಬ್ಯಾರಿ' ಎಂದು ಸಹ ಆಟಗಾರರಿಂದ ಕರೆಯಲ್ಪಡುವ ಬ್ಯಾರಿಂಗ್ಟನ್, ಮೊದಲೆರಡು ಋತುಗಳಲ್ಲಿ ೩ನೇ ಕ್ರಮಾಂಕದಲ್ಲಿ ಆಡಿದರು. ೨೦೦೨-೦೩ ಋತುವಿನಿಂದ ಪ್ರಸಕ್ತ ಋತುವಿನವರೆಗೆ ಆರಂಭಕಾರನಾಗಿ ಆಡಿರುವ ಬ್ಯಾರಿ, ರಾಹುಲ್ ದ್ರಾವಿಡ್ ನ ಮಹಾಭಕ್ತ. ಎಡೆಬಿಡದೆ ದ್ರಾವಿಡ್ ರನ್ನು ಕಾಡಿ, ಬೇಡಿ ಬ್ಯಾಟಿಂಗ್ ಸಲಹೆಗಳನ್ನು ಪಡೆದುಕೊಂಡು ತನ್ನ ಬ್ಯಾಟಿಂಗ್ ಸುಧಾರಿಸಿಕೊಂಡರು. ದ್ರಾವಿಡ್ ಭಾರತದಿಂದ ಹೊರಗೆ ಆಡುವಾಗಲೂ ಅವರನ್ನು ಬೆನ್ನು ಬಿಡದೆ ವಿ-ಅಂಚೆ ಮೂಲಕ ಸಂಪರ್ಕಿಸಿ ತನ್ನ ಆಟವನ್ನು ಬಹಳ ಸುಧಾರಿಸಿ ಭರವಸೆ ಮೂಡಿಸಿದವರು ಬ್ಯಾರಿ.

ಸತತವಾಗಿ ೮ನೇ ಋತುವಿನಲ್ಲಿ ಬ್ಯಾರಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದು, ೧೦ ಶತಕಗಳನ್ನು ದಾಖಲಿಸಿದ್ದಾರೆ. ಎರಡನೇ ಋತುವಿನಿಂದ ೭ನೇ ಋತುವಿನವರೆಗೆ ಅವರ ಸರಾಸರಿ ಹೀಗಿತ್ತು - ೫೦.೧೧, ೮೫.೦೦, ೬೫.೦೦, ೭೭.೦೦, ೪೬.೨೩ ಮತ್ತು ೧೯.೬೦. ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿರುವ ಬ್ಯಾರಿ, ಈ ಋತುವಿನಲ್ಲೂ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಪ್ರಸಕ್ತ ಋತುವಿನಲ್ಲಿ ಕೇವಲ ೧೯.೦೦ ಸರಾಸರಿಯಲ್ಲಿ ೨೨೮ ಓಟಗಳನ್ನು ಗಳಿಸಿದ್ದಾರೆ.

ತನ್ನ ಕ್ರಿಕೆಟ್ ನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದ ಬ್ಯಾರಿಗೆ ಕಳೆದ ಋತು ಮುಗಿದ ನಂತರ ಎಲ್ಲೋ ಕೆಲವು ಮತಾಂಧರ ಸಂಪರ್ಕ ಉಂಟಾಗಿದೆ. ತನ್ನ ಆಟದ ಮೇಲಿರುವ ಗಮನ ಕಳೆದುಕೊಂಡಿದ್ದಾರೆ. ಮಾತೆತ್ತಿದರೆ 'ಹಲ್ಲೆಲ್ಲುಯಾ' ಎಂದು ಬಡಬಡಿಸುತ್ತಾರೆ. ಪ್ರಸಕ್ತ ಋತು ಆರಂಭವಾಗುವ ಮೊದಲೇ 'ರಿಲಿಜನ್ ಕಮ್ಸ್ ಫರ್ಸ್ಟ್, ದೆನ್ ಎವ್ರಿಥಿಂಗ್ ಎಲ್ಸ್' ಎಂಬರ್ಥ ಕೊಡುವ ಬೇಜವಾಬ್ದಾರಿ ಹೇಳಿಕೆಗಳು. ಮೈಸೂರಿನಲ್ಲಿ ನಡೆದ ಹರ್ಯಾನ ವಿರುದ್ಧದ ಪಂದ್ಯದ ಬಳಿಕ ಅವರು ಕೊಟ್ಟ ಹೇಳಿಕೆ - 'ಕ್ರಿಕೆಟ್ ಇಸ್ ನಾಟ್ ಎವ್ರಿಥಿಂಗ್ ಇನ್ ಲೈಫ್'. ಇದು ನಮ್ಮ ಬ್ಯಾರೀನಾ ಹೀಗೆ ಮಾತಾಡೊದು! ರಾಜ್ಯ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ. ಅದರಲ್ಲೂ ಯಾರ ಬೆಂಬಲವೂ ಇಲ್ಲದೇ ಸ್ವಂತ ಪರಿಶ್ರಮದಿಂದ ಪ್ರತಿಭೆಯಿಂದ ತಂಡದಲ್ಲಿ ಸ್ಥಾನ ಗಳಿಸಿ ಆಡುತ್ತಿರುವಾಗ ಹೆಮ್ಮೆಯಿಂದ 'ಕ್ರಿಕೆಟ್ ಇಸ್ ಎವ್ರಿಥಿಂಗ್' ಅಂದುಕೊಂಡು ಆಡಬೇಕೆ ವಿನಹ ಹೀಗಲ್ಲ.

ಈ ಋತುವಿನಲ್ಲಿ ದ್ರಾವಿಡ್ ದೂರ. ತಾನು ಓಟಗಳನ್ನು ಗಳಿಸಿದರೆ ದೇವರ ಇಚ್ಛೆ. ತಾನು ಓಟಗಳನ್ನು ಗಳಿಸದಿದ್ದರೆ ಅದೂ ದೇವರ ಇಚ್ಛೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಯೀದ್ ಅನ್ವರ್ ಮತ್ತು ಸಕ್ಲೇನ್ ಮುಶ್ತಾಕ್ ರಂತಹ ಆಟಗಾರರು ಇದೇ ರೀತಿ ಆಟದ ಮೇಲೆ ಗಮನ ಕಳಕೊಂಡು 'ರಿಲಿಜನ್' ಹಿಂದೆ ಓಡಿ ಕ್ರಿಕೆಟ್ ಜೀವನವನ್ನು ಕೆಡಿಸಿಕೊಂಡಿರುವ ಉದಾಹರಣೆ ಇರುವಾಗ ಬ್ಯಾರಿ ಹಾಗಾಗದಿರಲಿ ಎಂದು ಕನ್ನಡಿಗರ ಆಶಯ.

ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದರೂ, ಆಯ್ಕೆಗಾರರು ಬ್ಯಾರಿಯನ್ನು ಕಡೆಗಣಿಸದೆ ಅವರಲ್ಲಿರುವ ಪ್ರತಿಭೆಯನ್ನು ಅರಿತು ಮತ್ತೆ ಈ ಋತುವಿನಲ್ಲಿ ಎಲ್ಲಾ ಪಂದ್ಯಗಳಲ್ಲೂ ಆಡಿಸಿದ್ದಾರೆ. ಋತುವಿನ ಪ್ರಥಮ ಪಂದ್ಯದಲ್ಲಿ ಯೆರೆ ಗೌಡರಿಗೆ ಆಡಲಾಗದಿದ್ದಾಗ, ಆ ಪಂದ್ಯಕ್ಕೆ ಬ್ಯಾರಿಯನ್ನೇ ಆಯ್ಕೆಗಾರರು ನಾಯಕನನ್ನಾಗಿ ಮಾಡಿದ್ದರು. ಇದು ರಾಜ್ಯಕ್ಕೆ ಬ್ಯಾರಿಯಲ್ಲಿ ಎಷ್ಟು ನಂಬಿಕೆ ಮತ್ತು ಭರವಸೆ ಇದೆ ಎಂಬುದನ್ನು ತಿಳಿಸುತ್ತದೆ. ಆದರೆ ಬ್ಯಾರಿ ಆಡುತ್ತಿರುವುದನ್ನು ನೋಡಿದರೆ ಮುಂದೆ ಕರ್ನಾಟಕಕ್ಕಾಗಿ ಇನ್ನೂ ಆಡಬೇಕೆಂಬ ಇರಾದೆ ಅವರಿಗಿಲ್ಲ ಅನ್ನಿಸುತ್ತೆ.

ಈಗ ಬಂಗಾಲ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಇರುವುದಿಲ್ಲ. ಕರ್ನಾಟಕಕ್ಕೆ ಉತ್ತಮ ಆರಂಭ ನೀಡುವ ಪೂರ್ಣ ಜವಾಬ್ದಾರಿ ಬ್ಯಾರಿಯ ಮೇಲೆ ಇದೆ. ಇದನ್ನರಿತು ತನ್ನ ಬ್ಯಾಟಿಂಗ್ ನತ್ತ ಬ್ಯಾರಿ ಗಮನ ಹರಿಸಲಿ ಎಂಬ ಶುಭ ಹಾರೈಕೆಗಳು.

ಕರ್ನಾಟಕ ಈ ಋತುವಿನಲ್ಲಿ ನೀಡಿರುವ ಉತ್ತಮ ಪ್ರದರ್ಶನದಿಂದ ಬ್ಯಾರಿಯ ಸತತ ವೈಫಲ್ಯದೆಡೆ ಹೆಚ್ಚಿನ ಗಮನ ಹೋಗಿಲ್ಲ. ಆದ್ದರಿಂದ ಯಾರೂ ಅದರ ಬಗ್ಗೆ ಮಾತನಾಡುತ್ತಲೂ ಇಲ್ಲ. ಆದರೆ ಒಬ್ಬ ವ್ಯಕ್ತಿ ಮಾತ್ರ ಬ್ಯಾರಿಯ ಈ ಸತತ ವೈಫಲ್ಯಗಳನ್ನು ಗಮನಿಸುತ್ತಾ ಇರುತ್ತಾರೆ. ಅವರೇ ರಘುನಾಥ್ ಬೀರಾಲ! ಆದ್ದರಿಂದ ಬ್ಯಾರಿ, ವಾಚ್ ಔಟ್. ಗೆಟ್ ಸಮ್ ರನ್ಸ್. ಕರ್ನಾಟಕಕ್ಕೆ ನಿಮ್ಮ ಅವಶ್ಯಕತೆ ಇದೆ.

Rating
No votes yet

Comments