ಆ ಬೇಸಿಗೆಯ ದಿನಗಳು....

ಆ ಬೇಸಿಗೆಯ ದಿನಗಳು....

'ಇನ್ನೊಂದು ಗುಕ್ಕು ತಿನ್ಕೊಂಡು ಹೋಗೇ..' ಅಮ್ಮ ಕೂಗ್ತಾ ಇದ್ರು. 'ಇಲ್ಲಮ್ಮ, ಆಗ್ಲೇ ಲೇಟಾಗಿದೆ' ನಾನಂದೆ. 'ಸರಿ ನೀರಾದ್ರೂ ಕುಡಿ' ಅಮ್ಮ ಬಾಗಿಲಿನ ಹತ್ರ ತಂದಿದ್ದ ನೀರನ್ನ ಅಲ್ಲೇ ಅರ್ಜೆಂಟಲ್ಲಿ ಕುಡೀತಾ ಮೈಮೇಲೆ ಒಂದು ಸ್ವಲ್ಪ ಚೆಲ್ಕೊಂಡು, 'ಇನ್ನಾ ನೀರು ಕುಡಿಯೋಕೆ ಬರೋಲ್ಲ' ಅಂತ ಬೈಸ್ಕೊಂಡು, 'ಸರಿ ಬರ್ತೀನಮ್ಮ' ಅಂತ ಹೇಳಿ ಹೊರಟೆ. ಹೆಚ್ಚು ಕಡಿಮೆ ದಿನಾ ಇದೇ ಗೋಳು. ಬೆಳಿಗ್ಗೆ 6.50 ಕ್ಕೆ ಬಸ್. 4.30 ಗೇ ಎದ್ರೂ ಸಮಯ ಸಾಕಾಗಲ್ಲ.

ನಾನು ಹಚ್ಚು ಕಮ್ಮಿ ಓಡ್ಕೊಂಡೇ ಬರ್ತಾ ಇದ್ದೆ, ದಾರಿಯಲ್ಲಿ ಮಕ್ಕಳು ಜೂಟಾಟ ಆಡ್ತಾ ಇದ್ರು. ಇದೇನು ಇಷ್ಟು ಬೆಳಿಗ್ಗೆ ಎದ್ದು ಬಿಟ್ಟಿದಾವೆ ಅಂದುಕೊಳ್ತಾ ಇದ್ದೆ, ಅಷ್ಟರಲ್ಲಿ ಒಬ್ಳು ಬಂದು ನನ್ನ ಸುತ್ತೋಕೆ, ಅವಳ್ನ ಹಿಡಿಯೋಕೆ ಇನ್ನೊಬ್ಬ. ಮಧ್ಯದಲ್ಲಿ ನಾನು ಎಡ್ಬಿಡಂಗಿ. ಮೇಲಿಂದ ಅವ್ರಮ್ಮ ಕೂಗ್ಕೊಳ್ತಾ ಇದ್ರು, 'ಅವ್ರು ಆಫೀಸಿಗೆ ಹೋಗ್ತಾ ಇದಾರೆ ದಾರಿ ಬಿಡ್ರೋ'. ಅದು ಆ ಮಕ್ಕಳಿಗೆ ಕೇಳಿಸ್ತೋ ಇಲ್ವೋ ಗೊತ್ತಿಲ್ಲ, 'ಹಿಡಿಯೋ ನೋಡೋಣ ಧಡಿಯ' ಅಂತ ಇವ್ಳು, 'ಎಲ್ಲೋಗ್ತೀಯ ಸಿಗ್ತೀಯ' ಅಂತ ಇವ್ನು ಅಟ್ಟಿಸ್ಕೊಂಡು ಹೋದ. ಒಂದು ನಿಮಿಷ ಅಲ್ಲೇ ಕಳೆದು ಹೋಗಿದ್ರೂ, ಬಸ್ ನೆನಪಾಗಿ ಮತ್ತೆ ಒಡೋಕೆ ಶುರು ಮಾಡ್ದೆ. ಬಸ್ ಸಿಗ್ತು.

ಬಸ್ಸಿನಲ್ಲಿ ಕುಳಿತ ಮೇಲೆ, ದಾರಿಯ ಆ ಘಟನೆ, ನನ್ನನ್ನ ಆ ಬೇಸಿಗೆಯ ರಜಾದಿನಗಳ ನೆನಪಿನಂಗಳಕ್ಕೆ ಕರೆದೊಯ್ತು. ಆಹಾ! ಏನು ದಿನಗಳವು..

ಇನ್ನೂ ಪರೀಕ್ಷೆಗಳು ಪ್ರಾರಂಭವಾಗುವ ಮೊದಲೇ, ತಾತನ ಕಾಗದ ಬಂದಿರುತ್ತಿತ್ತು ಮಗಳಿಗೆ (ನಮ್ಮಮ್ಮನಿಗೆ). ಪರೀಕ್ಷೆ ಮುಗಿದ ಕೂಡಲೇ ಬರುವಂತೆ ಆಹ್ವಾನ. ಪ್ರೀತಿಪೂರ್ವಕ ಆಗ್ರಹ. ನನ್ನ ಪರೀಕ್ಷೆ ಮುಗಿದ ಮಧ್ಯಾಹ್ನವೇ ಪ್ರಯಾಣ. ಇದುವರೆಗೂ ಪರೀಕ್ಷೆಯ ಫಲಿತಾಂಶವನ್ನು ನಾನೇ ಖುದ್ದು ನೋಡಿದ ಅನುಭವವಿಲ್ಲ. ಪ್ರತಿವರ್ಷ ತಂದೆಯವರೇ ಏಪ್ರಿಲ್ 10 ರಂದು ಫಲಿತಾಂಶ ನೋಡಿ ಬಂದು ಕಾಗದ ಬರೆಯುತ್ತಿದ್ದರು. (ಹೌದು, ಅದೇ ನೀಲಿ ಬಣ್ಣದ 'ಇಂಗ್ಲೆಂಡ್' ಲೆಟರ್ ಆಗಿದ್ದ 'Inland' letter. ಪತ್ರದ ಸೊಗಡನ್ನು ವಿವರಿಸಲು ಇನ್ನೊಂದು ಬ್ಲಾಗ್ ಬೇಕು!) ಕಳುಹಿಸಲು ತಂದೆಯವರಿಗೆ ಸಂಕಟ. ಅವರಿಗೆಲ್ಲಿಂದ ಬರಬೇಕು 2 ತಿಂಗಳು ರಜ. ಅಡುಗೆ ಮಾಡಲು ಬರುತ್ತಿತ್ತಾದ್ದರಿಂದ, ಸ್ವಯಮ್ಪಾಕದ ಬಗ್ಗೆ ಚಿಂತೆಯಿರಲಿಲ್ಲವಾದರೂ, ಮಕ್ಕಳನ್ನು ಬಿಟ್ಟಿರಬೇಕಲ್ಲಾ ಅಂತ. ಹೊರಡುವ ಮುಂಚೆ Do's & Dont's ಗಳ ದೊಡ್ಡ ಭಾಷಣ. ಅಮ್ಮನಿಗೆ (ಹೌದು ಅಮ್ಮನಿಗೇ!) ಮಕ್ಕಳನ್ನು ನೋಡಿಕೊಳ್ಳುವ ಬಗೆ, 'ಎಲ್ಲೆಲ್ಲೋ ನೀರು ಕುಡಿಯಲು ಬಿಡಬೇಡ, ಅಲ್ಲಿ ಇಲ್ಲಿ ಹಾಳು ಮೂಳು ತಿನ್ನೋಕೆ ಬಿಡಬೇಡ'.. ಇತ್ಯಾದಿ. ಅಮ್ಮ ಕೇಳೊತನಕ ಕೇಳಿಸಿಕೊಂಡು, 'ನನಗೂ ಗೊತ್ತು' ಅಂತ ಸ್ವಲ್ಪ ದನಿಯೇರಿಸಿ ಹೇಳ್ತಾ ಇದ್ರು!

ಹಳ್ಳಿಯಲ್ಲಿ ಬಸ್ ಸ್ಟ್ಯಾಂಡ್ ಹತ್ರಾನೇ ಮನೆ. ತಾತ ರೂಮಿನ ಹೊರಗೆ ಕಟ್ಟೆ ಮೇಲೆ ಕುತ್ಕೊಂಡು ಕಾಯ್ತಾ ಇರ್ತಿದ್ರು. ಬಸ್ಸಿನಿಂದ ಇಳಿದ ತಕ್ಷಣ ಅಲ್ಲಿಗೇ ಓಟ. ತಾತನ ಕಣ್ಣಿನ ಹೊಳಪು, ಮೊಮ್ಮಗಳಿಗಾಗೋ, ಮಗಳಿಗಾಗೋ ಇನ್ನೂ ಪ್ರಶ್ನೆ! ಬಾಗಿಲ್ಲಲ್ಲಿ ಕೈಕಾಲು ತೊಳೆದುಕೊಂದು ಒಳಗೆ ಹೋದ ಮೇಲೆ ಉಭಯಕುಶಲೋಪರಿ. ನಾನು ಸೀದಾ ಅಲ್ಲಿಂದ ದನದ ಕೊಟ್ಟಿಗೆಗೆ ಹೋಗ್ತಾ ಇದ್ದೆ. ನಮ್ಮ ಕೆಂಪಿ, ಕೆಂಚಿ, ಗಂಗಿ... ಮತ್ತವರ ಮಕ್ಕಳನ್ನು ಮಾತನಾಡಿಸಿಕೊಂಡು ಬರುವಷ್ಟರಲ್ಲಿ ಅವ್ವ (ನಾವು ಅಜ್ಜಿಯನ್ನು ಹೀಗೇ ಕರೆಯೋದು) ಹಾಲು, ಮಂಡಕ್ಕಿ ರೆಡಿ ಮಾಡಿರೋರು. ಅಪ್ಪ ನಮ್ಮನ್ನು ಬಿಟ್ಟು ಅವತ್ತು ರಾತ್ರಿನೇ ವಾಪಸ್ ಹೊರಡೋರು. ಅಲ್ಲಿ ತನಕ Silent & Good Girl!

ಮೊದಲು ಸ್ವಲ್ಪ ಸಣ್ಣವರಿದ್ದಾಗ (ಇನ್ನೂ ಸ್ನೇಹಿತರು ಅಂತ ಗುಂಪು ಮಾಡಿಕೊಳ್ಳೋ ಮೊದಲು) ಬೆಳಿಗ್ಗೆ ಅವ್ವನ ಜೊತೆಗೇ ಎದ್ದು ಬಿಡ್ತಾ ಇದ್ದೆ. ಅಮೇಲೆ ಅವರ ಹಿಂದೆ ಸುತ್ತೋದು. ದನಗಳ ಬಾನಿಗೆ ಹುಲ್ಲು ಹಾಕೋದು, ಮುಸುರೆ ಹೀಗೆ ಎಲ್ಲಕೂ ಒಂದು ಕೈ ಹಾಕೋದು. ಇನ್ನ ಹಾಲು ಕರೆಯೋಕೆ ಹೋಗಿರ್ತಾರಷ್ಟೆ, ಹಾಲು ಬೇಕು ಅಂತ ಅವರ ಹಿಂದೆ ಹೋಗೋದು. ಆಗ ತಾನೆ ಕರ್ದಿದ್ದ ಬೆಚ್ಚಗಿನ ಹಾಲನ್ನ ಒಂದು ದೊಡ್ಡ ಭವಾನಿ ಲೋಟಕ್ಕೆ ಹಾಕಿ ಕೊಡೋರು.. ಒಂದು ಸಲ ಲೋಟ ಎತ್ತಿದ್ರೆ, ಪೂರ್ತಿ ಖಾಲಿ ಆಗೋ ತನಕ ಕೆಳಗೆ ಇಳಿಸುತ್ತಿರಲಿಲ್ಲ. ಅದೇನು ಹಾಗೆ 'ಗೊಟಕ್, ಗೊಟಕ್' ಅಂತ ಕುಡಿತೀಯೇ ಅಂತ ಅಮ್ಮ ಬೈತ ಇದ್ರೂ, ಅದೆಲ್ಲ ಕೇಳಿಸ್ಕೊತಾ ಇರ್ಲಿಲ್ಲ. ಎಲ್ಲ ಕುಡಿದು ಮುಗಿಸಿದ ಮೇಲೆ, ಮೂಡಿರ್ತಿದ್ದ ಆ ಮೀಸೇನ ಕೈಯಲ್ಲೇ ಒರೆಸಿಕೊಂಡು, ತಾತನಿಗೆ ಕಂಪ್ಲೇಂಟ್ ರವಾನೆ. ಅಮ್ಮನ ಕೋಪ ಅವರಿಗೆ ಹಿಂದಿರಿಗಿಸುವ ಯಶಸ್ವೀ ಪ್ರಯತ್ನ! ಆಮೇಲೆ ಮನೆಯೆಲ್ಲ ಒಂದು ರೌಂಡ್ ಹೊಡೆಯೋದು. ಸ್ವಲ್ಪ ಹೊತ್ತು ಅಟ್ಟದಲ್ಲಿ ಅನ್ವೇಷಣೆ. ದನ ಮೇಯಿಸ್ಲಿಕ್ಕೆ ಕರ್ಕೊಂಡು ಹೋಗಕ್ಕೆ ಬರ್ತಿದ್ದ ಮಂಜಣ್ಣನ ಹತ್ತಿರ ಸ್ವಲ್ಪ ಹರಟೆ. ತಾತ ಹೊರಡುವ ಮುನ್ನ ಅವರ ಹತ್ರ ಸ್ವಲ್ಪ ಕಥೆ. ಅಲ್ಲಿಂದ ಮಜ್ಜಿಗೆ ಕೋಣೆಗೆ ಸವಾರಿ. ನಾನೂ ಮಜ್ಜಿಗೆ ಕಡೀತೀನಿ ಅಂತ ಗಲಾಟೆ. ಕಡೆಗೋಲು ನನಗಿಂತಾ ಎರಡು ಪಟ್ಟು ಎತ್ತರವಾಗಿತ್ತು. ಒಂದು ಕಡೆ ಹಗ್ಗ ಎಳೆದರೆ, ಇನ್ನೊಂದರ ಜೊತೆಗೆ ನಾನೂ ಹೋಗಿ ಮಜ್ಜಿಗೆ ಕೊಳಗದಲ್ಲೇ ಬೀಳುವ ಎಲ್ಲ ಸಾಧ್ಯತೆ ಇತ್ತು. ಅವ್ವ 'ಮಾಡುವಾಗ ಎಲ್ಲಿ ಹೋಗಿರ್ತೀರೋ' ಅಂತ ಗೊಣಗ್ತಾ, ಅವರೇ ಕೈ ಹಿಡಿಸಿಕೊಂಡು ಒಂದೆರಡು ಸಲ ಕಡೆಸಿ ಕೈಬಿಡ್ತಾ ಇದ್ರು. ದನಗಳೆಲ್ಲ ಹೋದಮೇಲೆ ಕೊಟ್ಟಿಗೆ ಕ್ಲೀನಿಂಗ್. ಅವ್ವನ ಜೊತೆ ಕುಳ್ಳು ತಟ್ತೀನಿ ಅಂತ ಕುತ್ಕೋತಾ ಇದ್ದೆ. ಸಗಣಿ ಮುದ್ದೇನ ಗೋಡೆಗೆ ಬಡಿಯೋದ್ರಲ್ಲಿ ಏನೋ ಖುಷಿ. ನನ್ನ ಪುಟಾಣಿ ಕೈಯಲ್ಲಿ ಒಂದು ಕುಳ್ಳು ತಟ್ಟೊ ಹೊತ್ತಿಗೆ ಅವ್ವ ಪೂರ್ತಿ ಮಾಡಿ ಮುಗಿಸಿರ್ತಿದ್ರು! ಮತ್ತೆ ಅವ್ವ ಹೊಲಕ್ಕೆ ಬುತ್ತಿ ತಗೊಂಡು ಹೋಗುವಾಗ ಅವರ ಜೊತೆ. ಅಮ್ಮ ಸ್ಯಾಂಡಲ್ ಎಲ್ಲ ಹಾಕಿ, ಬಟ್ಟೆ ಕೊಳೆ ಮಾಡ್ಕೊಂಡ್ರೆ ನೋಡು ಅಂತೆಲ್ಲ ತಾಕೀತು ಮಾಡ್ತಾ ಇದ್ರು. ಅವ್ವ ಚಪ್ಪಲಿ ಇಲ್ಲದೇ ಬರೀ ಕಾಲಲ್ಲಿ ನಡ್ಕೊಂಡು ಬರ್ತಾ ಇದ್ರು! ಯಾವ ನೆರವಿಲ್ಲದೇ ಅವ್ವ ತಲೆಮೇಲೆ ಬುತ್ತಿನ ಬ್ಯಾಲೆನ್ಸ್ ಮಾಡ್ಕೊಂಡು ನಡಿತಾ ಇದ್ದದ್ದು ಒಂದು ಅಚ್ಚರಿಯಾಗಿತ್ತು. ಜೊತೆಗೆ ಅವರ ಸೆರಗು ನನ್ನ ತಲೆಮೇಲೆ ಇರ್ತಿತ್ತು. ನಾನೂ ಹೊತ್ಕೋತೀನಿ ಅಂತ ಹಠ ಮಾಡಿದಾಗ, ಒಂದು ಸಣ್ಣ ಚೌಕವನ್ನ ಸಿಂಬೆ ಮಾಡಿ ಪುಟ್ಟ ಹರಿವಾಣವನ್ನ (ನನ್ನ ಬುತ್ತಿ) ನನ್ನ ತಲೆ ಮೇಲೆ ಇಟ್ಟು ಕರ್ಕೊಂಡು ಹೋಗ್ತಾ ಇದ್ರು. ಸಂಜೆ ಮುಂದೆ ದನಗಳು ಮನೆಗೆ ಬರೋ ಹೊತ್ತಿಗೆ ಬಾಗಿಲಿಗೆ ನೀರು ಹಾಕಿ ಕಾಯೋದು. ಮತ್ತೆ ಅವ್ವನ ಹಿಂದೆ ಸುತ್ತೋದು, ದನ ಬಂದ್ವಲ್ಲಾ, ಹಾಲೆಲ್ಲಿ ಅಂತ! ಸಾಯಂಕಾಲ ತಾತನ ಜೊತೆ ಒಂದು ರೌಂಡ್ ವಾಕಿಂಗ್. ತಾತನ್ನ ಅದೂ ಇದೂ ಪ್ರಶ್ನೆ ಕೇಳ್ತಾ ಇದ್ದೆ, ಈಮರ ಇಲ್ಲ್ಯಾಕಿದೆ? ಚಾನೆಲ್ ನಲ್ಲಿ ನೀರು ಯಾಕೆ ಇಲ್ಲ? ಎರಡು ಎತ್ತು ಸಾಕಾಗತ್ತಾ? ಹೀಗೆ.. ತಾತ ನನ್ನ ಶಾಲೆ ಬಗ್ಗೆ, ಊರಿನ ಬಗ್ಗೆ ಕೇಳೋರು. ಕಥೆ ಹೇಳೋರು.

ಸ್ವಲ್ಪ ದೊಡ್ಡವರಾದ ಮೇಲೆ ಸ್ವಲ್ಪ ಬದಲಾವಣೆ. ಆಟ, ಆಟ,ಆಟ!! ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟ್ರೆ, ಹಿಂತಿರುಗುತ್ತಿದ್ದುದು ಸಾಯಂಕಾಲವೇ. ಅಬ್ಬಾ! ಅದೆಷ್ಟು ಆಟಗಳು! ಲಗೋರಿ, ಗೋಲಿ, ಚಿನ್ನಿದಾಂಡು, ಮರಕೋತಿ, ಕಣ್ಣಮುಚ್ಚೇ, ಜೂಟಾಟ, ಕಳ್ಳಪೋಲಿಸ್, ರತ್ತೊ ರತ್ತೋ ರಾಯನ ಮಗಳೆ.. ಬಿಡುವಿಲ್ಲದಾಟಗಳು. ಹೊಟ್ಟೆ ಹಸೀತಾ ಇದೆ ಅನ್ಸಿದ್ರೆ, ಯಾರದಾದ್ರೂ ಹೊಲಕ್ಕೆ ನುಗ್ಗೋದು. ಮಾವಿನ ಮರ, ಪೇರಲೆ ಮರ, ಪಪ್ಪಯಿ ಹಣ್ಣು, ಬೇಲಿಲಿ ಸಿಕ್ತಾ ಇದ್ದ ತೊಂಡೆ ಹಣ್ಣು, ಕಾರೆಹಣ್ಣು, ಬೋರೆ ಹಣ್ಣು.., ಹುಣಸೆಕಾಯಿ... ಆಮೇಲೆ ಒಂದು ಎಳನೀರು. ಹುಡುಗರು ಮರಹತ್ತಿ ತಮಗೆ ಬೇಕಾದ ಹಣ್ಣು ಕಿತ್ಕೊಳ್ತಾ ಇದ್ರು. ಒಂದ್ಸಲ ಅಣ್ಣ ನಾನು ಕೇಳಿದ ಹಣ್ಣು ಕಿತ್ತು ಕೊಡ್ಲಿಲ್ಲ. ಆಗ ಹಟಕ್ಕೆ ಕಲ್ತಿದ್ದು ಮರ ಹತ್ತೋದನ್ನ. ನಾನು ಮರ ಹತ್ತಿದಾಗ ಬೇಕಂತ ಮರ ಅಲ್ಲಾಡಿಸ್ತಾ ಇದ್ದ. 'ತಡಿ, ತಾತಂಗೆ ಹೇಳ್ತೀನಿ' ಅಂತಿದ್ದೆ. 'ಹೋಗೇ, ತಾತನ ಮೊಮ್ಮಗಳೇ, ನಾನು ಅವ್ವನಿಗೆ ಹೇಳ್ತೀನಿ, ಹುಡಿಗೀರನೆಲ್ಲ ಗುಂಪು ಕಟ್ಕೊಂದು ಮರ ಹತ್ತಾಳೆ ಅಂತ' ಅಂತಿದ್ದ. ಆದ್ರೆ, ನಾನು ಅಲ್ಲೇ ಯಾರ್ದಾದ್ರು ಮನೆಗೆ ನುಗ್ಗಿ, ಉಪ್ಪುಖಾರ ಹಾಕ್ಕೊಂಡು ಹದ ಮಡ್ಕೊಂಡು ಹಣ್ಣು ತಿನ್ತಾ ಇರ್ಬೇಕಾದ್ರೆ ಹಲ್ಕಿರ್ಕೊಂಡು ಬರ್ತಾ ಇದ್ದ. ಮನೆಗೆ ಹೋಗೋಶ್ಟರಲ್ಲಿ ಎಲ್ಲ ಮರೆತು ಹೋಗಿರ್ತಿತ್ತು. ಹೊಲ ಬೇಜಾರಾದಾಗ ಚಾನೆಲ್ ಗೆ ಹೋಗ್ತಾ ಇದ್ವಿ. ನೀರಲ್ಲಾಡೋಕೆ. ಈ ಹುಡುಗ್ರು ಎಲ್ಬೇಕಾದ್ರು ಈಜೋಕೆ ಹೋಗೋರು. ಆದ್ರೆ ಹುಡಿಗೀರಿಗೆ ಆ ಸ್ವಾತಂತ್ರ್ಯ ಇರ್ಲಿಲ್ಲ. ಆಗೆಲ್ಲ ದೇವ್ರನ್ನ ಚೆನ್ನಾಗಿ ಬೈಕೊಂಡಿದ್ದೀನಿ. ನಾನು ಸೈಕಲ್ ಹೊಡೆಯೋದು ಕಲೀಬೇಕಾಗಿತ್ತು. ಸುಮ್ನೆ ಹೇಳಿದ್ರೆ ಇವ್ರು ಕಲಿಸ್ತಾ ಇರ್ಲಿಲ್ಲ. ದೊಡ್ಡಪ್ಪನಿಂದ ಶಿಫಾರಸು ತಂದಿದ್ದೆ. ಅಕ್ಕನಿಗೆ ಕಲಿಸುವಾಗ ಹತ್ತಿಸಿ ಕೈಬಿಟ್ಟು, ಅವಳು ಇವರು ಹಿಡ್ಕೊಂಡಿದಾರೆ ಅನ್ಕೊಂಡೇ ಓಡಿಸ್ತಾ, ಒಂದ್ಸಲ ಹಿಂದೆ ನೋಡಿ, ಮುಂದಿದ್ದ ಮನೆಯ ಗೋಡೆಗೆ ಗುದ್ದಿ ಗದ್ದ ಗಾಯ ಮಡ್ಕೊಂಡಿದ್ಲು. ನಾನು ಸ್ವಲ್ಪ ಮುಂಜಾಗ್ರತೆ ವಹಿಸಿ Open Field ಗೆ ಕರ್ಕೊಂಡು ಹೋಗಿದ್ದೆ. ಸೈಕಲ್ ಹತ್ಕೊಂಡೆ. 'ತುಳಿಯೇ, ತುಳಿದ್ರೆ ತಾನೇ ಮುಂದಕ್ಕೆ ಹೋಗೋದು, ಎಷ್ಟು ಅಂತ ತಳ್ಳಲಿ' ಅಂತ ಬೈತಾ ಇದ್ದ. ನಾನು ಹತ್ಕೊಂಡು ಬರೀ ರೆವೆರ್ಸೆ ತುಳಿತಾ ಇದ್ದೆ, easy ಅಲ್ವ! ಕೊನೆಗೂ ಮುಂದಕ್ಕೆ ತುಳಿದೆ. ನಂಗೂ ಒಂದ್ಸಲ ಹಾಗೇ ಮಾಡಿದ್ರು. ಹಿಡ್ಕೊಂಡಿದಾರೆ ಅಂತ ತುಳಿತಾ ಇದ್ದೋಳು, ತಿರುಗಿಸಿಕೊಂಡು ಬರ್ತಾ ಇದ್ದೆ, ಅಣ್ಣ ಮುಂದೆ ನಿಂತಿದ್ದ. ಅಷ್ಟೇ! ಸೈಕಲ್ ಒಂದ್ಕಡೆ, ನಾನೊಂದ್ಕಡೆ!

ಯಾವಾಗ್ಲೂ ತಾತನ ಕಣ್ತಪ್ಪಿಸಿ ಆಟಕ್ಕೆ ಹೋಗ್ತಾ ಇದ್ದದ್ದು. ಇಲ್ಲಾಂದ್ರೆ ಬಿಸ್ಲಲ್ಲಿ ಹೋಗಿದ್ದಕ್ಕೆ ಬೈತಾ ಇದ್ರು. ಎಲ್ಲೇ ಹೋಗಿದ್ರೂ ಸಾಯಂಕಾಲ ದೀಪಮುಡ್ಸೋ ಹೊತ್ತಿಗೆ ಸರಿಯಾಗಿ ಮನೆಲಿ ಇರ್ತಾ ಇದ್ವಿ. ಆಮೇಲೆ ತಾತನವರೊಂದಿಗೆ ಪಗಡೆ, ಚಾವಂಗ, ಕವಡೆ, ಆನೆ ಮನೆ, ಹಾವು ಏಣಿ, ಅಳ್ಗುಳಿಮಣೆ, ಕಡ್ಡಿ ಆಟ, ಕಲ್ಲಾಟ, ಸೆಟ್ ಹೀಗೇ ಈನಾದ್ರೊಂದು. ಆಮೇಲೆ ಊಟ. ಆದ್ಮೇಲೆ ಎಲ್ಲರೂ ಒಟ್ಟಿಗೇ ಕುತ್ಕೊಂಡು ಏನಾದ್ರು ಹರಟೆ. ಸ್ವಲ್ಪ ಪ್ರತಿಭಾ ಪ್ರದರ್ಶನ. ಅಕ್ಕ ಚೆನ್ನಾಗಿ ಹಾಡು ಹೇಳೋಳು. ಭರತನಾಟ್ಯ ಕೂಡ. ನಂದು average. ನಮ್ಮಿಬ್ರಿಗೂ ಚೆನ್ನಾಗಿದೆ ಅಂತ ಶಭಾಷ್ಗಿರಿ ಕೊಟ್ರೆ, ಅಣ್ಣನಿಗೇನೋ ಸಂಕಟ. ನಾನೂ ಹಾಡ್ತೀನಿ, ಕುಣಿತೀನಿ ಅಂತ ನಮ್ಗೆಲ್ಲ torture ಕೊಡ್ತಾ ಇದ್ದ. ತಾತ 'ಬಾರಿಸ್ತೀನಿ' ಅಂದ್ರೆ, ನಮ್ಮಮ್ಮ 'ಬಾರೋ ರಾಜ' ಅಂತ ಮುದ್ದಾಡೋರು.

ಅಪ್ಪ ಸ್ವಲ್ಪ ದಿನ ರಜೆ ಹಾಕಿ ಬಂದಾಗ, ಸ್ವಲ್ಪ ದಿನದ ಮಟ್ಟಿಗೆ ಇನ್ನೊಂದು ತಾತನ ಮನೆಗೆ ಪಯಣ. ರಾಣೆಬೆನ್ನೂರಿನ ತನಕ ಆರಾಮವಾಗಿ ಹೋಗಿದ್ದು ತಿಳಿದಿದೆ. ಆದರೆ ಅಲ್ಲಿಂದ ಹಳ್ಳಿಗೆ ಹೋಗಿದ್ದೇ ಮೆಟಡೋರ್ ಇತ್ಯಾದಿ ವಾಹನಗಳಲ್ಲೇ. ಅದರಲ್ಲಿ ಕೆಲವೊಮ್ಮೆ ಲಂಬಾಣಿ ತಾಂಡ್ಯಾದ ಹೆಂಗಸರು ಪರಮಾತ್ಮನ್ನ ಇಳಿಸಿಕೊಂಡು, ಮೀನು ಇತ್ಯಾದಿಗಳನ್ನು ತಗೊಂಡು ಬರ್ತಾ ಇದ್ರು. ಅವರ ಭಾಷೆ, ವೇಷಗಳೆಲ್ಲವೂ ಒಂಥರಾ ಮೋಜು. ಮಲ್ನಾಡ್ ಕಡೆ ನಮ್ದೊಂಥರಾ ಗ್ರಾಂಥಿಕ ಭಾಷೆ. ದಾವಣಗೆರೆ ಭಾಷೆ ಬೇರೆ. (ಏ ಪಾಪಿ ಬಾ ಇಲ್ಲಿ ಅಂತ ಕರೆದವರನ್ನ ಬೈಯುವ ಮುನ್ನ ಸ್ವಲ್ಪ ಯೋಚಿಸಿ!) ಬ್ಯಾಡಗಿಗೆ ಹೋದ್ರೆ ಇನ್ನೊಂಥರಾ. ಆದರೆ ನನಗೆ ಇಂದಿಗೂ ಆಶ್ಚರ್ಯ ಆಗುವ ವಿಷಯವೆಂದರೆ,. ಅಲ್ಲಲ್ಲಿಗೆ ಹೋದಾಗ ಆ ಭಾಷೆ ಹಾಗೇ ಬಂದು ಬಿಡುತ್ತದೆ. (ಭಾಷೆನೂ ರಕ್ತದಲ್ಲಿರತ್ತಾ!) ಈ ಹಳ್ಳಿಯಲ್ಲಿ ಇನ್ನೊಂತರಾ ಮಜಾ. ಕಪ್ಪು ಮಣ್ಣು, ಜೋಳದ ಹೊಲ. ಮೆಣಸಿನ ಮಂಡಿ (ಜಾಸ್ತಿ ಹೋಗೋಕೆ ಬಿಡ್ತಾ ಇರ್ಲಿಲ್ಲ, ಘಾಟು ಅಂತ). ಗುಡ್ಡಕ್ಕೆ ಹೋಗೋದು. ಹೊಂಡಕ್ಕೆ ಹೋಗೋದು. ತಂದೆಯವರ ಜೊತೆ ಅವರ ಶಾಲೆಗೆ ಹೋಗೋದು. ಅವರ ಮಾಸ್ತರರನ್ನು ಮಾತನಾಡಿಸುವುದು. ಸಂತೆ, ವೀರಭದ್ರನ ಗುಡಿ ಹೀಗೆ ಸುತ್ತಾಡೋದು. ಆ ಪುಟಾಣಿ ಅಡುಗೆ ಮನೆಯಲ್ಲಿ ದೊಡ್ಡಮ್ಮ ಪಟ ಪಟ ಅಂತ ರೊಟ್ಟಿ ಬಡಿಯೋದನ್ನ ನೋಡೋದೇ ಸಂಭ್ರಮ. ಜೋಳದ ರೊಟ್ಟಿಗಳ stack. ಏನ್ ಛಂದ ಜೋಡ್ಸಿರ್ತಾರಂತ! ಅದಕ್ಕೆ ಕರಿಂಡಿ, ಬಣ್ಣಬಣ್ಣದ ಚಟ್ನಿಪುಡಿಗಳು.. ಉಳ್ಳಾಗಡ್ಡಿ, ಹಸಿಮೆಣಸಿನಕಾಯಿ.. ಆ ಕಟಿಕಟಿ ರೊಟ್ಟಿ ನನ್ಗೆ ಉಣ್ಣಾಕ್ಬರಾಂಗಿಲ್ಲಾಂತ ಬಿಸಿ ಬಿಸಿ ರೊಟ್ಟಿ ಮಾಡ್ಕೊಡ್ತಾ ಇದ್ರು. ಉಂಡ್ಕೊಂಡು ಉಡಾಳಾಗಿದ್ದೇ ಬಂತು ಇಲ್ಲಿ. ಪಾಪ ತಮ್ಮಂದ್ರು/ ಕಾಕಾ ಎಲ್ಲ ಹೊಂಡದಿಂದ, ಮತ್ತೆಲ್ಲಿಂದಲೋ ನೀರು ತರ್ತಾ ಇದ್ರು. ತುಂಗೆ ಮಡಿಲಲ್ಲಿ ಬೆಳೆದಿರೋ ನಂಗೆಲ್ಲಿಂದ ಗೊತ್ತಾಗ್ಬೇಕು ನೀರಿನ ಬವಣೆ!

ಇನ್ನೊಂದ್ ಸ್ವಲ್ಪ ದೊಡ್ಡೋರಾದ ಮೇಲೆ ಸ್ವಲ್ಪ ಜವಾಬ್ದಾರಿ. ಮನೆ ಕಸ ಮುಸುರೆ ಎಲ್ಲ ಮುಗಿಸಿದ ಮೇಲೇ ಹೊರಗೆ ಹೊಗ್ತಾ ಇದ್ದದ್ದು. ಅಷ್ಟು ದೊಡ್ಡ ಪಡಸಾಲೆ, ಅಟ್ಟ, ಅಡುಗೆ ಮನೆ, ದೇವರ ಮನೆ, ಎಲ್ಲ ಗುಡಿಸಿ ಸಾರ್ಸೋ ಅಷ್ಟು ಹೊತ್ತಿಗೆ ಒಳ್ಳೇ ವ್ಯಾಯಾಮ. ಸಾಯಂಕಾಲ ನೀರು ಬಿಡೋ ಅಷ್ಟು ಹೊತ್ತಿಗೆ ಮನೆಗೆ ಬಂದ್ಬಿಡ್ಬೇಕು. ಇಲ್ಲಾಂದ್ರೆ ಅಮ್ಮನ ಪೊರಕೆ/ಸೌಟು ಕಾಯ್ತಾ ಇರ್ತಿತ್ತು. ಬೇಕಂತಲೇ ತಾತನ ಕೋಣೆ ಮುಂದೆನೇ ಸೊಂಟದ ಮೇಲೆ ಆ ದೊಡ್ಡ ದೊಡ್ಡ ಕೊಡ ಹೊತ್ಕೊಂಡು ಬರ್ತಾ ಇದ್ದೆ. ಅವ್ವನ ಹತ್ರ ಬೈಸ್ಕೊತಾ ಇದ್ದೆ.

ಎಲ್ಲಾ ದೊಡ್ಡೋರಾಗ್ತಾ ಅಗ್ತಾ ಊರಿಗೆ ಹೋಗೋ Frequency ಕಮ್ಮಿ ಆಗೋಯ್ತು. ಅಕ್ಕ ಅಣ್ಣಂಗೆ ಪರೀಕ್ಷೆ ಅಂತ ದೊಡ್ಡಮ್ಮ ಬರ್ತಾ ಇರ್ಲಿಲ್ಲ. ಇವ್ರು ಬರಲ್ಲ ಅಂತ ಅವ್ರು, ಅವ್ರಿಗೆ ಪರೀಕ್ಷೆ ಅಂತ ಇವ್ರು, ಇವ್ರು ಬರಲ್ಲ ಅಂತ ಅವ್ರು.. ಹೀಗೇ ಆಗೋಯ್ತು...

ಇಂದಿನ ನಗರವಾಸಿ ಪೀಳಿಗೆಗೆ ಇದೆಲ್ಲ ಲಭ್ಯವಿದೆಯಾ? ಗೊತ್ತಿಲ್ಲ. ಅಥವಾ ಅವರ 'ಮಜಾ' ಪದದ ಅರ್ಥವೇ ಬೇರೆನಾ ಗೊತ್ತಿಲ್ಲ. ಏನೇ ಆದ್ರೂ, ನಿಸರ್ಗದ ಮಡಿಲಲ್ಲಿ. ಸ್ನೇಹಿತರೊಡನೆ ಆಡಿದ ಆ ದಿನಗಳು, ಹಂಚಿತಿಂದ ಆ ಹಣ್ಣಿನ, ತಿಂಡಿಗಳ ರುಚಿ, ಅವ್ವ, ತಾತರ ಅನುಭವದ ಸಾರದೊಡನೆ ಕಳೆದ ಆ ಕಾಲ ಮತ್ತೆ ಬರಲಾರದು. ಏನಿದ್ದರೂ ಸವಿ ನೆನಪುಗಳು ಮಾತ್ರ...

ಆ ಲೋಕದಿಂದ ಹೊರಬರುವಷ್ಟರಲ್ಲಿ ಆಫೀಸು ಬಂತು. ಮತ್ತದೇ ಕಚೇರಿ.. ಮತ್ತದೇ ಕೆಲಸ... ಮತ್ತವೇ ಪರೀಕ್ಷೆಗಳು.... ನಿರ್ಧರಿಸಿಬಿಟ್ಟೆ! ಈ ಕೆಲಸ, ಪರೀಕ್ಷೆಗಳು ಯಾವತ್ತಿಗೂ ಮುಗಿಯದ ಕಥೆ. ಇಂದು ಬೇರೇನಾದ್ರು ಓದಲೇಬೇಕು... (ಸಂಪದವಿದೆಯಲ್ಲ ಸಹಾಯಕ್ಕಾಗಿ..!)

[ಚಿತ್ರ]

Rating
No votes yet

Comments