ನನಗನ್ನಿಸಿದ್ದನ್ನ ಹೇಳ್ತಿದ್ದೀನಿ... ಒಪ್ಪಿದರೆ ಒಪ್ಕೋ ...ಇಲ್ಲಾಂದ್ರೆ ಬಿಡು

ನನಗನ್ನಿಸಿದ್ದನ್ನ ಹೇಳ್ತಿದ್ದೀನಿ... ಒಪ್ಪಿದರೆ ಒಪ್ಕೋ ...ಇಲ್ಲಾಂದ್ರೆ ಬಿಡು

ಯಾಕೋ ಗೊತ್ತಿಲ್ಲ, ಈ ವಿಚಾರ ಗೊತ್ತಾಗಿ ಇಷ್ಟು ದಿನಾಗಳಾದ್ರೂ ನನ್ನ ಮನಸಲ್ಲಿ ಬಂದ ಭಾವನೆಗಳನ್ನು ಹಂಚಿಕೊಳ್ಳದೆ , ನಿನ್ನೊಂದಿಗೆ ಹೇಳದೆ ಇರೋಕಾಗ್ತಿಲ್ಲ ನಂಗೆ . ಚಿತ್ರರಂಗಕ್ಕೆ ಮಾತ್ರವಲ್ಲ, ನಮ್ಮೆಲ್ಲರ ಮನೆಯ ಮಗಳಂತಿದ್ದವಳು ನೀನು... ಚಿತ್ರದಲ್ಲಿ ಪಾತ್ರ ಮಾಡುವವರ ಬಗ್ಗೆ ಯಾವತ್ತಿಗೂ ಜನಮಾನಸದಲ್ಲಿ ಒಂದು ತಾತ್ಸಾರದ ಭಾವನೆ ಇದ್ದಿರುತ್ತಾದರೂ ನಿನ್ನ ಬಗ್ಗೆ ಎಂದೂ ನಮಗೆ ಹಾಗೆ ಅನ್ನಿಸಲೇ ಇಲ್ಲ. ನಮ್ಮ ಮನೆಯ ಹುಡುಗಿ ಈಕೆ ಅಂತನ್ನಿಸುವ ಮಟ್ಟಿಗೆ ನಾವೆಲ್ಲಾ ನಿನ್ನ ಅಭಿಮಾನಿಗಳು, ನಿನ್ನನ್ನು ಮೆಚ್ಚಿಕೊಂಡುಬಿಟ್ಟಿದ್ದೆವು. ಚಿತ್ರರಂಗಕ್ಕೆ ಮೊದಮೊದಲು ಬಂದ ನೀನು ನಿನ್ನ ಹೆಸರನ್ನು ಬದಲಿಸಿಕೊಂಡು ಹೊಸ ಹೆಸರಿನ ಚಿತ್ರದಲ್ಲಿ ಪಾತ್ರ ಮಾಡಿದಾಗಿನಿಂದಲೂ ನಿನ್ನ ಅಪ್ಪಟ ಅಭಿಮಾನಿಯಾಗಿಟ್ಟೆ ನಾನು. ಅದೆಷ್ಟು ಚೆನ್ನಾಗಿ ಭಾವ ತುಂಬಿ ಅಭಿನಯಿಸ್ತಾ ಇದ್ದೆ ನೀನು ? ಪ್ರತೀ ಪಾತ್ರಗಳಲ್ಲಿ ತಲ್ಲೀನಳಾಗಿಬಿಡ್ತಿದ್ದೆ. ನಾವೆಲ್ಲ ನಿನಗೋಸ್ಕರವೇ, ನಿನ್ನ ಅಭಿನಯ ನೋಡ್ಲಿಕ್ಕೋಸ್ಕರವೇ ಚಿತ್ರಮಂದಿರಕ್ಕೆ ಬರ್ತಾ ಇದ್ದೆವು ಅಂದ್ರೂ ತಪ್ಪಲ್ಲ.. ಚಿತ್ರರಂಗದಲ್ಲಿ ಉಳಿಯೋ ತನಕ ಕೂಡಾ ಯಾವತ್ತೂ ಸಹ್ಯವಲ್ಲ ಅನ್ನಿಸೋ ಪಾತ್ರವನ್ನು ಮಾಡಲೇ ಇಲ್ಲ ನೀನು. ಅದೇ .. ಅದೇ... ನಮಗೆ ಮೆಚ್ಚುಗೆಯಾದದ್ದು. ನಾವು ನಿನ್ನನ್ನು ಒಬ್ಬ ನಟಿ ಅಂತ ನೋಡ್ಲಿಲ್ಲ. ಒಬ್ಬ ಅಭಿನೇತ್ರಿ ಅಂತ ಕಂಡೆವು. ಆರಾಧಿಸಿದೆವು. ನಿನ್ನ ಹುಟ್ಟುಹಬ್ಬದ ದಿನ ಪ್ರತೀ ವರ್ಷ ರೋಗಿಗಳಿಗೆ , ಅನಾಥರಿಗೆ, ನಿರ್ಗತಿಕರಿಗೆ ಹಣ್ಣು ಹಂಪಲು ಹಂಚಿದ್ದೆವು. ನಿನ್ನ ವಯಸ್ಸಿನಷ್ಟೇ ತೂಕದ ಕೇಕನ್ನು ನಾವೇ ಕತ್ತರಿಸಿ ಸಂಭ್ರಮಿಸಿದ್ದೆವು. ನಿನ್ನ ಮೇಲಿನ ನಮ್ಮ ಅಭಿಮಾನ ಕೇವಲ ಇಷ್ಟೇ ಆಗಿರಲಿಲ್ಲ. ದೊಡ್ಡ ಮಟ್ಟದಲ್ಲಿ ಅಭಿಮಾನಿಗಳ ಸಂಘ ಅಂತ ಕಟ್ಟಿಕೊಳ್ಳದಿದ್ದರೂ ನಮ್ಮದೇ ತಾಣಗಳಲ್ಲಿ , ಫ್ಯಾನ್ ಕ್ಲಬ್ಬುಗಳನ್ನು, ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡೆವು. ಅಷ್ಟೇ ಯಾಕೆ, ಹೆಸರಾಂತ ನಿರ್ದೇಶಕರೂ, ನಿನ್ನದೇ ಚಿತ್ರಗಳಿಗೆ ನಿರ್ದೇಶನ ಮಾಡ್ತಾ ನಿನ್ನ ಕೈಯಲ್ಲಿ ಒಳ್ಳೆ ಒಳ್ಳೆಯ ಪಾತ್ರ ಮಾಡಿಸಿದಾತನೂ , ಸಜ್ಜನನೂ, ಸಭ್ಯನೂ ಆದ ಆತನನ್ನು ನೀನು ಮದುವೆಮಾಡಿಕೊಂಡೆ. ಆಗಲೂ ನಿನ್ನ ಸ್ಪಷ್ಟ ನಿರ್ಧಾರ ನೋಡಿ ನಮಗೆಲ್ಲ ಅತೀವ ಸಂತಸವಾಗಿತ್ತು. ಇಬ್ಬರೂ ಯಶಸ್ಸಿನ ಉತ್ತುಂಗದಲ್ಲಿದ್ದವರೇ. ಹೇಳಿ ಮಾಡಿಸಿದ ಜೋಡಿಯ ಹಾಗಿದ್ದಿರಿ. ಎಷ್ಟು ಚೆನ್ನಿತ್ತು ನಿಮ್ಮ ಸಂಸಾರ...ಮದುವೆಯಾದ ನಂತರ ಮಾಧ್ಯಮಗಳಲ್ಲಿ ನೀನು ಕೊಟ್ಟ ಮೊದಲ ಸಂದರ್ಶನವನ್ನು ಬೀದಿಯವರೆಲ್ಲ ಕುಳಿತು ನೋಡಿದ್ದೆವು. ಆಗಲೇ ನಮಗೆ ಗೊತ್ತಾಗಿದ್ದು. ನೀನು ಮತ್ತು ಆತನೂ ಮಾಧ್ಯಮದವರ ಕಣ್ಣು ತಪ್ಪಿಸಿಯೂ ಕೆಲ ವರ್ಷಗಳ ಹಿಂದಿನಿಂದಲೇ ಪ್ರೀತಿಸುತ್ತಿದ್ದಿರಿ ಅಂತ. ತಪ್ಪೇನಿರಲಿಲ್ಲ ಬಿಡು.. ನಿನ್ನಿಂದ ಅಂಥಾ ಭಾವುಕ ಪಾತ್ರಗಳನ್ನು ಮಾಡಿಸುವಾಗ, ನಿನ್ನ ಅಭಿನಯವನ್ನು ನೋಡುವಾಗ ಒಬ್ಬ ನಿರ್ದೇಶಕನಾಗಿ ಅವನಿಗೆ ನಿನ್ನ ಮೇಲೆ ಪ್ರೀತಿ ಹುಟ್ಟಿದ್ದು ಸಹಜವೇ ! ಹಾಗೆ ನೋಡಿದರೆ ಚಿತ್ರ ನೋಡಿದ ಮಾತ್ರಕ್ಕೇ ನಿನ್ನನ್ನು ನಾವಿಷ್ಟು ಪ್ರೀತಿಸುತ್ತೇವೆ ಅಂದ ಮೇಲೆ ! ಅಲ್ಲವೇ? ನಾವುಗಳೆಲ್ಲ ನೀನಂದ್ರೆ ಹೀಗೇ... ಅಂತ ನಮ್ಮ ಮನಸ್ಸುಗಳಲ್ಲಿ ಒಂದು ಚೌಕಟ್ಟಿನ ಚಿತ್ರವನ್ನು ಸ್ಥಾಪಿಸಿಕೊಂಡುಬಿಟ್ಟಿದ್ದೆವು.... ಈ ಘಟನೆ ಆಗುವವರೆಗೆ.........
ಇರಲಿ ವಿಷಯಕ್ಕೆ ಬರೋಣ.. ಇನ್ನು ಕಾಯಿಸುವುದು ಬೇಡ . ಅಲ್ಲಾ ... ಅಂತಾದ್ದೇನಾಗಿತ್ತೇ ನಿಂಗೇ ? ಅವನಿಗೆ ವಿಚ್ಛೇದನ ಕೊಡುವಂಥ ತೀರ್ಮಾನ. ನೀನೇ ಹೇಳಿಕೊಂಡ ಹಾಗೆ ಅವನೂ ನೀನೂ ಒಬ್ಬರನ್ನೊಬ್ಬರು ಅಷ್ಟೊಂದು ಪ್ರೀತಿ ಮಾಡಿದ್ರಿ ಅದೂ... ಸಾಕಷ್ಟು ಸಮಯ ! ಮದುವೆ... ತಿರುಗಾಟ... ಹನಿಮೂನು ಇವೆಲ್ಲಾ ಇನ್ನೇನು ಮುಗೀತು ಅನ್ನುವಷ್ಟರಲ್ಲಿ ನಿಮಗೊಬ್ಬ ಮುದ್ದಾದ ಪುಟ್ಟ ಮಗಳೂ ಹುಟ್ಟಿದಳು. ನೀನೂ... ನಿನ್ನ ಗಂಡ ...ನಿನ್ನ ಮಗಳು.. ಇದೇ ರಂಗದಲ್ಲಿ ವೃತ್ತಿಯಲ್ಲಿದ್ದ ನಿನ್ನ ತಂದೆ, ಇಬ್ಬರು ಅಮ್ಮಂದಿರು... ( ನಾವು ಯಾವ ಅಮ್ಮನ ಮಕ್ಕಳು ಅಂತ ತಿಳಿಯದ ಹಾಗೆ ಇಬ್ಬರೂ ನಮ್ಮನ್ನು ಬೆಳೆಸಿದ್ದರು ಅಂತ ನೀನೇ ಎಲ್ಲೋ ಒಂದೆಡೆ ಹೇಳಿದ್ದ ನೆನಪು.) ಇದೇ ವೃತ್ತಿಗೆ ಕಾಲಿರಿಸಿದ್ದ ನಿನ್ನ ತಮ್ಮ .. ದೊಡ್ಡ ಕುಟುಂಬದ ಪುಟ್ಟ ಮುತ್ತೈದೆ ನೀನು... ಯಾರಾದರೂ ಹೊಟ್ಟೆಕಿಚ್ಚುಪಡುವಷ್ಟು ಸುಖವಾಗಿತ್ತು ನಿನ್ನ ಸಂಸಾರ..
ಹ್ಮ್ಮ್.... ಬರೋಬ್ಬರಿ ಹತ್ತು ವರ್ಷ... ನೀನು ರಾಜಕೀಯಕ್ಕೆ ಬಂದು ಒಂದು ದೊಡ್ಡ ಪಕ್ಷದ ನಿಗಮ ಮಂಡಲಿಯಲ್ಲಿ ಅಧ್ಯಕ್ಷೆಯ ಗಾದಿಯಲ್ಲಿ ಕುಳಿತುಕೊಳ್ಳುವ ತನಕ.... ಆ ಹುದ್ದೆಯಾದರೂ ಎಂಥದ್ದು ? ಮಹಿಳೆಯರ ಅಭಿವೃದ್ಧಿಗಾಗಿ ನಿನಗೆ ಸಿಕ್ಕ ಅವಕಾಶ ! ಜವಾಬ್ದಾರಿ ದೊಡ್ಡದಿತ್ತು. ನಮಗೆ ನಂಬಿಕೆಯೂ ಇತ್ತು. ನೀನದನ್ನು ಸಮರ್ಥವಾಗಿ ನಿಭಾಯಿಸಬಲ್ಲೆ ಅಂತ.
ಆದರೆ ಮೊನ್ನೆ ಮೊನ್ನೆ ಮಾಧ್ಯಮಗಳಲ್ಲಿ ನೀನು ನಿನ್ನ ಗಂಡನಿಗೆ ವಿಚ್ಛೇದನ ಕೊಡ್ತಿದ್ದಿ ಅಂತ ತಿಳಿದ ಮೇಲೆ ಬೇಸರವಾಯ್ತು. ಜಗತ್ತಿನಲ್ಲಿ ನಡೆಯದ್ದೇನಲ್ಲಾ ಇದು . ಆದರೆ.... ಅಂಥಾ ತಪ್ಪೇನಾಗಿತ್ತು ಆತನಿಂದ . ನೀನೇ ಹೇಳಿದ ಪ್ರಕಾರ ಅವನಿಗೆ ಮಗಳ ಭವಿಷ್ಯಕ್ಕೆ ಕೊಡುವಷ್ಟು ಹಣವಿಲ್ಲ ಅಂತಾ... ಎಂಥಾ ವಿಪರ್ಯಾಸ ನೋಡು.. ಲಕ್ಷಗಟ್ಟಲೆ ದುಡಿಯುವಾಗ ಹುಟ್ಟಿದ ಪ್ರೀತಿ ಹಣವಿಲ್ಲ ಅಂದಾಗ ಮುಗಿದು ಹೋಯ್ತೆ ? ಹಾಗಾದರೆ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ? ಅಲ್ಲದೇ ಅವನು ನಿನ್ನ ಹೆಸರಿಗೆ ಮನೆ ಕೊಡಿಸಿದ್ದು .. ಜಮೀನು ಕೊಡಿಸಿದ್ದು ಎಲ್ಲವೂ ಸುಳ್ಳೇ? ಹೌದು , ಇತ್ತೀಚೆಗೆ ಅವನೂ ಕೂಡ ಚುನಾವಣೆಗೆ ನಿಂತು ಸೋತಿದ್ದನು. ಕಾಸು ಖರ್ಚಾಗಿದ್ದಿರಬಹುದು... ಕೈಯಲ್ಲಿ ಚಿತ್ರಗಳೂ ಕಡಿಮೆಯಾಗಿದ್ದವು. ಹಾಗಂತ ವಿಚ್ಛೇದನ ಕೊಡುವಂಥದ್ದೇನಿತ್ತು ? ನಿನಗೇ ಒಳ್ಳೆಯ ಸ್ಥಾನಮಾನ ಸಿಕ್ಕಿತ್ತಲ್ಲಾ... ! ನಿನ್ನ ಸಂಪಾದನೇನೆ ಚೆನ್ನಾಗಿತ್ತಲ್ಲಾ .. ನೀನೇ ಭರಿಸಬೇಕಿತ್ತು ಹಣವನ್ನ ಮಗಳ ಭವಿಷ್ಯಕ್ಕೆ !! ನೋಡು ಬಾ ಇಲ್ಲಿ ನಮ್ಮ ಹಳ್ಳಿ ಕಡೆ ಹೆಣ್ಣುಮಕ್ಕಳು ಇವತ್ತಿಗೂ ಕುಡುಕ ಗಂಡನ ಜೊತೆ... ಸೋಮಾರಿ ಗಂಡನ ಜೊತೆ...ಕೆಟ್ಟ ಗಂಡನ ಜೊತೆ... ದಿನಾ ರಾತ್ರಿ ಬಂದು ಹೊಡೆಯೋ ಗಂಡನ ಜೊತೆಸಂಸಾರ ಮಾಡ್ತಾ ... ಕೂಲಿ ನಾಲಿ ಮಾಡಿ ತನ್ನ ಗಂಡನನ್ನೇ ಹಿರೀಮಗನ ಹಾಗೆ ನೋಡಿಕೊಳ್ತಿದ್ದಾರೆ. ಕಟ್ಟಿದ್ದ ತಾಳಿಗೋಸ್ಕರ, ಹುಟ್ಟಿದ ಮಕ್ಕಳಿಗೋಸ್ಕರ, ಮೆಟ್ಟಿದ ಮನೆಗೋಸ್ಕರ ತಮ್ಮ ಇಡೀ ಜೀವಮಾನವನ್ನೇ ಬಲಿ ಕೊಟ್ಟು, ಕೊನೇ ಉಸಿರಿರುವ ತನಕ ಅಂಥವರ ಸಂಗಡ ಬಡಿದಾಡ್ತಾರೆ. ಅಂಥಾದ್ದಾಗಿತ್ತೇ ನಿಂಗೇ ? ಇಲ್ಲವಲ್ಲಾ ... ಚಿತ್ರಗಳಲ್ಲಿ ಬರೀ ತ್ಯಾಗಮಯೀ ಹೆಣ್ಣಿನ ಪಾತ್ರಗಳ್ನ ಮಾಡಿ ಶಿಳ್ಳೆ ಹಾಕಿಸಿಕೊಂಡ್ರೆ ಸಾಲದವ್ವಾ ! ನಿಜ ಜೀವನದಲ್ಲೂ ಒಂದಷ್ಟು ತ್ಯಾಗ ಮಾಡೋದನ್ನ ಕಲೀಬೇಕು. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರೋ ನೀನು ನಮ್ಮಂಥ ಅಭಿಮಾನಿಗಳಿಗೆ ಮಾದರಿಯಾಗಿರ್ಬೇಕು.. ಅದು ಬಿಟ್ಟು ಛೇ! ಅಲ್ಲಾ ಇನ್ನೊಂದ್ ವಿಷ್ಯ ನಿನ್ನನ್ನು ಕೇಳಬೇಕು ಅಂತಿದ್ದೆ ..ನೋಡು ಈ ಅಮ್ಮಂದಿರ ದಿನಕ್ಕೆ ನಿನ್ನ ಮಗಳು ನಿಂಗೆ ಶುಭಾಶಯ ಕೋರುವ ಹೊತ್ತಿಗೆ ಒಬ್ಬ ತಾಯಿಯಾಗಿ ಆಕೆಗೆ ಏನು ಉಡುಗೊರೆ ಕೊಡ್ತಾ ಇದ್ದೀ ? ಅವಳಪ್ಪನನ್ನ ಅವಳಿಂದ ದೂರ ಮಾಡ್ತಾ ಇರೋ ಉಡುಗೊರೆ . ಇದೇನಾ ? ಅವಳು ನಿನ್ನನ್ನ ಹೇಗೆ ಅಮ್ಮಾ ಅಂತ ಹಚ್ಚಿಕೊಂಡಿದ್ದಾಳೋ ಹಾಗೆ ಅವಳಪ್ಪನನ್ನೂ ಹಚ್ಚಿಕೊಂಡಿರ್ತಾಳೆ. ನೀನೇನೆ ತಂದುಕೊಟ್ರೂ ಕೊನೆಗೆ ( ಹೊಸಾ ಅಪ್ಪನನ್ನು ಕೊಟ್ರೂ ) ಏನೇ ಆಟಿಕೆಗಳನ್ನು ತಂದು ಮುಂದೆ ಇಟ್ರೂ ಅವಳ ಅಪ್ಪನ ಪ್ರೀತಿಯನ್ನ, ಆ ಸೆಳೆತವನ್ನ , ಆ ಬಾಂಧವ್ಯವನ್ನ ತಂದು ಕೊಡೋಕೆ ಸಾಧ್ಯವೇ? ಇವತ್ತಲ್ಲಾ ನಾಳೆ ಅವಳಿಗೆ ನಿನ್ನ ಬಗ್ಗೆ ಬೇಸರ ಹುಟ್ಟೊದಿಲ್ವೆ ? ಕಣ್ಣೆದುರಿದ್ದೂ ಅಪ್ಪನೊಂದಿಗೆ ದಿನ ಕಳೆಯಲಾಗದ ಆ ಮಗುವಿನ ದುರ್ದೈವಕ್ಕೆ ಏನೆನ್ನಬೇಕು ? ಇಷ್ಟಕ್ಕೂ ಆತನ ಬಗ್ಗೆ ನಿನ್ನ ಮಗಳಿಗೆ ಏನಂತ ದೂರು ಹೇಳೋಕೆ ಸಾಧ್ಯ ? ನನಗೆ ಆತ ಒಳ್ಳೆ ಗಂಡ ಅಲ್ಲ ಅದಕ್ಕೇ ನಿನಗೂ ಅವನು ಬೇಡ ಅಂತೀಯ ? ಸಂಬಂಧಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ತಿರೋದು ಇಂಥದ್ದೇ ಕಾರಣಗಳಿಗೆ . ಅಷ್ಟೆಲ್ಲಾ ಯಾಕೆ .. ನಿನ್ನ ಇಬ್ಬರು ಅಮ್ಮಂದಿರೂ ಇಷ್ಟೂ ವರ್ಷ ಒಬ್ಬನೇ ಪತಿಯ ಜೊತೆ ನೆಮ್ಮದಿಯ ಸಂಸಾರವನ್ನ ಅನ್ಯೋನ್ಯವಾಗಿ ಸಾಗಿಸ್ತಾ ಇಲ್ವೇನು ? ಅದಕ್ಕಿಂತ ಉದಾಹರಣೆ ಬೇಕೇನು ನಿಂಗೆ ? ನಿನ್ನ ಈ ದಿಟ್ಟ ? ನಿರ್ಧಾರ ಅವರಿಗೂ ಇಷ್ಟ ಆಗಿರಲಿಕ್ಕೆ ಸಾಧ್ಯವೇ ಇಲ್ಲ.
ಕೂತ್ಕೊಂಡು ನಿಧಾನವಾಗಿ ಯೋಚ್ನೆ ಮಾಡು ಅಂತ ಹೇಳೋಕು ಕಾಲ ಮೀರಿ ಹೋಗಿದೆ. ಎಲ್ಲಾ ಮುಗಿದು ಹೋದ ಮೇಲೆ ಏನು ತಾನೆ ಮಾಡೋಕೆ ಸಾಧ್ಯ ಹೇಳು . ಆತ ಯಾವತ್ತಿಗೂ ಒಬ್ಬ ಸಭ್ಯ ವ್ಯಕ್ತಿಯೇ . ನಿನ್ನ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದವನು. ಮಾಧ್ಯಮದೆದುರು ಈ ವಿಷಯವನ್ನು ಹೇಳಿಕೊಳ್ಳಲಿಕ್ಕೂ ನಾಚಿಕೆಯಾಗಿ ಎಲ್ಲರಿಂದ, ಮಾಧ್ಯಮಗಳಿಂದ ದೂರವಿರಲು ಬಯಸಿದವನು. ಆದರೆ ನೀನು ಗಟ್ಟಿಗಿತ್ತಿ. ನಿನ್ನ ಧೈರ್ಯ ಅವನಿಗೆ ಬರದೇ ಹೋಯ್ತು ನೋಡು ! ಇಷ್ಟೆಲ್ಲಾ ಆಗಿದ್ರೂ ಧೈರ್ಯವಾಗಿ ಅದು ನನ್ನ ವೈಯಕ್ತಿಕ ವಿಷಯ ಅಂತ ಹೇಳಿ ಜಾರಿಕೊಳ್ಳೋಕೆ ನೋಡ್ತಾ ಇದ್ದೀ .. ಹಾಗೆ ನೋಡಿದರೆ ನಿನ್ನ ವೃತ್ತಿರಂಗದಲ್ಲಿ ಪ್ರತಿಯೊಂದು ಮೆಟ್ಟಿಲು ಏರಿ ನಿಂತಾಗಲೂ ನಾವು ಸಂಭ್ರಮ ಪಟ್ಟೆವಲ್ಲ... ನಮ್ಮ ಹುಟ್ಟಿದ ದಿನ ನೆನಪಿಲ್ಲದಿದ್ದರೂ ನಿನ್ನ ಬರ್ತ್ ಡೇಗೆ ಎಲ್ಲರೂ ಸೇರಿ ಸಂಭ್ರಮಿಸಿದೆವಲ್ಲಾ .. ಕುಣಿದು ಕುಪ್ಪಳಿಸಿದೆವಲ್ಲಾ .. ಅವತ್ತೂ ನೀನು ಹೇಳ್ಬೇಕಿತ್ತು ಇದು ನನ್ನ ವೈಯಕ್ತಿಕ ವಿಷಯ .. ನೀವು ಖುಷಿ ಪಡಬೇಡಿ ಅಂತ .. ಸರಿ ಬಿಡು ಎಷ್ಟು ಮಾತಾಡಿದರೂ ಪ್ರಯೋಜನವಿಲ್ಲ ಅಂತ ಗೊತ್ತಿದ್ದೂ ಮಾತ್ನಾಡ್ತಾ ಇದ್ದೇನೆ.
ಅಲ್ಲವ್ವಾ ...ಈ ಜೀವ ಎಷ್ಟು ದಿನ ಇರುತ್ತೋ ತಿಳೀದು . ನೀನು ಮಾಡಿದ ಕೆಲ್ಸದಿಂದ ಜನ ನಿನ್ನನ್ನ ಮೆಚ್ಚಿ ನೆನೆಯಬೇಕೆ ಹೊರತು ಯಾರೂ ದೂಷಿಸಬಾರದು ಅಲ್ಲವೇ ? ಯಾಕಿಷ್ಟೆಲ್ಲಾ ಹೇಳ್ತೀನಿ ಅಂದ್ರೆ ನಾವೆಲ್ಲಾ ನಿನ್ನ ಮೇಲೆ ಅಷ್ಟೊಂದು ಅಭಿಮಾನ ಇಟ್ಟಿದ್ವು.. ಎಲ್ಲಾ ನಟಿಯರೂ ಒಂದೇ ರೀತಿಯಾದರೂ ನೀನು ಮಾತ್ರ ಹಾಗಿರಲಿಕ್ಕಿಲ್ಲ ಅಂತ ಅಂದುಕೊಂಡಿದ್ದೆವು.
ಆದ್ರೂ ನಿನ್ನದೇ ವೃತ್ತಿರಂಗದಲ್ಲಿ ಮಕ್ಕಳೇ ಇಲ್ಲದಿದ್ರೂ ಅದೇ ಸಂಗಾತಿಗಳನ್ನ ಉಳಿಸಿಕೊಂಡು ಒಬ್ಬರಿಗೊಬ್ಬರು ನೆಮ್ಮದಿಯಾಗಿ ಸಂಸಾರ ಮಾಡ್ತಾ ಇರೋ ಅದೆಷ್ಟು ಜೋಡಿಗಳಿಲ್ಲ ? ಇರ್ಲಿ ಬಿಡು. ಅನ್ಸಿದ್ದು ಹೇಳಿದ್ದೀನಿ . ನನ್ನ ಹಾಗೆ ಎಷ್ಟೋ ಮಂದಿಗೂ ಅನ್ನಿಸಿರುತ್ತೆ . ಆದ್ರೆ ಅವರ್ಯಾರೂ ಹೇಳಲ್ಲ ಅಷ್ಟೆ. ಇಷ್ಟಕ್ಕೂ ನನ್ನ ಮಾತಿನಿಂದ ನಿಂಗೆ ಬೇಸರ ಆಗಿದ್ರೆ ಕ್ಷಮಿಸಿಬಿಡು.

ಇಂತಿ ನಿನ್ನ ಮಾಜಿ ಅಭಿಮಾನಿ

Rating
No votes yet

Comments