ಬೆಂಗಳೂರು ನಗರ ಸಾರಿಗೆಯಲ್ಲಿ ಕನ್ನಡವನ್ನು ಅಳಿಸುತ್ತಿರುವುದು ಯಾರು?

ಬೆಂಗಳೂರು ನಗರ ಸಾರಿಗೆಯಲ್ಲಿ ಕನ್ನಡವನ್ನು ಅಳಿಸುತ್ತಿರುವುದು ಯಾರು?

Comments

ಬರಹ

ಈ ಚರ್ಚೆಯನ್ನು ಓದುತ್ತಿದ್ದೀರ ಅಂದರೆ ನೀವು ಕನ್ನಡಿಗರೇ. ಬೆಂಗಳೂರಿನ ಬಗ್ಗೆ ಒಂದು ಚರ್ಚೆ ನಡೀತಿದೆ, ಪಾಲ್ಗೊಳ್ಳಣ ಅಂತ ಇಲ್ಲಿಗೆ ಬಂದು ಚರ್ಚೆಯಲ್ಲಿ ಭಾಗವಹಿಸುತ್ತಿದ್ದೀರಿ ಅಂದರೆ ನಿಮಗೆ ಬೆಂಗಳೂರಿನ ಬಗ್ಗೆ ಅದ್ಯಾವುದೋ ಒಂದು ಬಗೆಯ ಕಾಳಜಿಯಂತೂ ಇದೆ ಅನ್ನುವುದು ಖಂಡಿತ.

ಇಷ್ಟು ಸಾಕು ನೀವು ಈ ಚರ್ಚೆಯಲ್ಲಿ ಪಾಲ್ಗೊಳ್ಳಲು, ಮತ್ತು ಈ ಲೇಖನವನ್ನು ಮುಂದೆ ಓದಲು!

"ಕನ್ನಡ ಕಾಮಧೇನು, ಕರ್ನಾಟಕ ಕಲ್ಪವೃಕ್ಷ" - ಹೀಗೆನ್ನುವ ಮುದ್ರಣ ಬೆಂಗಳೂರಿನ ಬಸ್ಸುಗಳಲ್ಲಿ ಪ್ರಯಾಣ ಮಾಡಿರುವ ಎಲ್ಲರಿಗೂ ಪರಿಚಯ ಇದ್ದೇ ಇರುತ್ತೆ. ಅದರಲ್ಲೂ ಬೆಂಗಳೂರು ಮಹಾನಗರ ಸಾರಿಗೆಯ ವೋಲ್ವೋ ಬಸ್ಸುಗಳಲ್ಲಿ ಇದು ಕಂಡೇ ಕಂಡಿರುತ್ತೆ. ನೀವೂ ನೋಡೇ ಇರ್ತೀರ..

ಆದ್ರೆ ಹಾಗಂದ್ರೇನು ಅಂತ ನನಗೆ ಹಲವು ಬಾರಿ ಕುತೂಹಲದ ಪ್ರಶ್ನೆ ಕಾಡಿದೆ. ಬೆಂಗಳೂರಿನಲ್ಲಿ ಸುಮಾರು ೨೬೦ ವೋಲ್ವೋ ಬಸ್ಸುಗಳಿವೆಯಂತೆ. ಒಂದು ಬಸ್ಸಿನ ಬೆಲೆ ಸುಮಾರು ೮೦ ಲಕ್ಷ ರೂಪಾಯಿ! ಅಂದರೆ ಒಟ್ಟಾರೆ ಸುಮಾರು ೨೧೦ ಕೋಟಿ ರೂಪಾಯಿ ಬೆಲೆ. ಬರುವ ತಿಂಗಳುಗಳಲ್ಲಿ ಇನ್ನು ೩೦೦ ವೋಲ್ವೋ ಬಸ್ಸುಗಳನ್ನು ಸೇರಿಸುವ ಯೋಜನೆ ಇದೆಯಂತೆ, ಅಂದರೆ ಇನ್ನೊಂದು ೨೫೦ ಕೋಟಿ ರೂಪಾಯಿ ಕರ್ಚು. ಒಟ್ಟಾರೆ ಹೆಚ್ಚು ಕಡಿಮೆ ಕನ್ನಡ ನಾಡಿನ ತೆರಿಗೆ ಹಣದಲ್ಲಿ ೪೫೦ ಕೋಟಿ ರೂಪಾಯಿ ಬೆಂಗಳೂರಿನಲ್ಲಿ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕರ್ಚಾಗ್ತಿದೆ.

ಇದುವರೆಗು ಚೆನ್ನ. ಆದರೆ ಆ ಮುದ್ರಣದ ಅರ್ಥ ಏನು ಅಂತ ಯೋಚನೆ ಮಾಡುತ್ತಿರುವಾಗ್ಲೇ, ಬಸ್ಸಿನೊಳಗಿನ ಶಬ್ದ-ಪೆಟ್ಟಿಗೆಗಳಿಂದ ಜೋರಾಗಿ ಹಿಂದಿ ಹಾಡುಗಳ ರವ ಕೇಳಿಬರುವುದೇ!? ಎಂತಹ ವಿಪರ್ಯಾಸ? ಇದು ತಿಂಗಳುಗಳಿಂದ ನಡೀತಿರೋ ಘಟನೆ ಅಂತ ನೀವೆಲ್ಲಾ ಈಗಾಗಲೇ ಹೇಳ್ತಿರಬಹುದು! ಆದರೆ ಅದೇ ತಾನೆ ಸಮಸ್ಯೆ! ಬೆಂಗಳೂರಿನ ಸಾರ್ವಜನಿಕ ವ್ಯವಸ್ಥೆ, ಅದರಲ್ಲೂ ಕನ್ನಡಿಗರ ಅಷ್ಟೋಂದು ಹೆಚ್ಚು (ಕೋಟಿಗಟ್ಟಲೆ) ಹಣ ಕರ್ಚು ಮಾಡಿಸಿರುವ ವ್ಯವಸ್ಥೆಯಲ್ಲಿ ಈ ನಾಡಿನ ಹಾಡುಗಳನ್ನೂ ಹಾಕಲು ಹಿಂಜರಿಕೆಯೇ? ಕನ್ನಡದ ಕಾಮಧೇನುತ್ವವನ್ನು ಮುದ್ರಣ ಮಾಡಿದ ಮರುಕ್ಷಣವೇ ಮರೆತ ಹಾಗಿದೆಯಲ್ಲ ಈ ವ್ಯವಸ್ಥೆಯಲ್ಲಿ! ಇದರ ಹಿಂದಿನ ನಿಜಾಂಶ ಏನಿರಬಹುದೆಂದು ನೀವು ಯೋಚನೆ ಮಾಡಿದ್ದೀರ?

ಆ ಬಸ್ಸಿನ ಚಾಲಕ-ನಿರ್ವಾಹಕರು ಕನ್ನಡದಲ್ಲೇ ಮಾತಾಡುತ್ತಿದ್ದರೂ ರೇಡ್ಯೋದಲ್ಲಿ ಮಾತ್ರ ಹಿಂದಿ ಹಾಡು ಹಾಕ್ತಾರೆ!ಬಸ್ಸಿನೊಳಗೆ ಅದ್ಯಾರೋ ಕಾಣದ ಪ್ರಯಾಣಿಕರು ಹಿಂದಿ ಹಾಡು ಹಾಕಿ ಅಂತ ಕೇಳಿದರಂತೆ ನಟಿಸುತ್ತಾರೆ! ಇವೆಲ್ಲಾ ಏಕೆ ಅಂತ ಕೇಳುವ ಯೋಚನೆ ನೀವು ಮಾಡಿದ್ದೀರ? ನಮ್ಮ ನಗರ ಬಸ್ಸಿನೊಳಗೆ ಹೀಗೆ ಹಿಂದಿ ಹಾಡುಗಳಿಗೆ ರತ್ನಗಂಬಳಿ ಹಾಸಿ, ಕನ್ನಡ ಮನರಂಜನಾ ವಸ್ತುವನ್ನು ಕಿಟಕಿಯಿಂದ ಹೊರ ದೂಕುವುದರಿಂದ ನಮ್ಮೆಲ್ಲರ ಮೇಲೇ ಏನು ಪ್ರಭಾವ ಇರಬಹುದು ಎಂದು ಎಣಿಸಿದ್ದೀರಾ? ವಿಮಾನ ಅಥವಾ ರೈಲು ನಿಲ್ದಾಣದಿಂದ ಹಿಡಿದು, ಬೆಂಗಳೂರಿನೊಳಗೆ ಎಲ್ಲೇ ಓಡಾಡಿದರೂ ಕನ್ನಡದ ಸುಳಿವೇ ಸಿಗದ ಹಾಗೆ ಅವಿತು ಇಡುವಂತ ಭಾಷೆಯಾಗೋಗಿದೆಯೇ ನಮ್ಮ ಈ ಸಿಹಿ ಕನ್ನಡ ನುಡಿ? ಅದು ನಿಜವೆಂದು ನಾವೇ ಈ ಬಸ್ಸಿನಲ್ಲಿ ಒಪ್ಪಿಕೊಂಡರೆ ಮುಂದೆ ನಾವು ಇತರ ಭಾಷಿಕರ ನಡುವೆ ನಮ್ಮ ಭಾಷೆಯ ಗೇಲಿಗೆ ಹೇಗೆ ಉತ್ತರ ಕೊಡಬಲ್ಲೆವು?

ಬೆಂಗಳೂರಿನ ಶೇಕಡ ೯೦ ರಷ್ಟು ರೇಡ್ಯೋ ವಾಹಿನಿಗಳು ದಿನ ಪೂರ್ತಿ ಕನ್ನಡ ಸಂಗೀತವೇ ಪ್ರಸಾರ ಮಾಡುವಾಗ, ಇಲ್ಲಿ ಏಕೆ ವಿಪರ್ಯಾಸ ತಲೆದೋರುತ್ತಿದೆ ಅಂತ ಯೋಚನೆ ಮಾಡಿದ್ದೀರ? ವರ್ಷಕ್ಕೆ ಸುಮಾರು ೫೦೦ ಕೋಟಿ ರೂಪಾಯಿಯಷ್ಟು ಚಲನ ಚಿತ್ರ ಮನರಂಜನೆ ವಸ್ತು ಹುಟ್ಟಿಸುತ್ತಿರುವ ಭಾಷೆ ಕನ್ನಡವಾಗಿದ್ದು, ನಮ್ಮ ನಾಡಿನ ಬಸ್ಸಿನೊಳಗೇಕೆ ಮನರಂಜನೆ ನೀಡಲು ನಮ್ಮ ಜನ ಬೇರೊಂದು ಭಾಷೆಯ ವಸ್ತುಗೆ ಮೊರೆ ಹೋಗಬೇಕು ಅಂತ ಯೋಚನೆ ಮಾಡೀದ್ದೀರಾ? ಅಥವಾ "ಯಾವುದೋ ಒಂದು ಹಾಡು ರೀ, ಹಾಡಲಿ ಬಿಡಿ, ನನಗೇನು ವ್ಯತ್ಯಾಸ ಮಾಡುತ್ತೆ" ಅಂತ ಮೂಢರಾಗಿ ಕಿವಿ/ಕಣ್ಣು ಮುಚ್ಚಿಕೊಳ್ಳುತ್ತಿದ್ದೀರೋ? 

ಅಂತಹ ಬಸ್ಸಿನೊಳಗೆ ಕನ್ನಡ ಹಾಡನ್ನೇ ಹಾಕಲು ಒತ್ತಾಯ ಮಾಡುವ ಹೆಜ್ಜೆ ಎತ್ತಿದ್ದೀರ? ಹಾಗೆ ಮಾಡುವವರಿಗೆ ಬೆಂಬಲವಾದರೂ ತೋರಿಸಿದ್ದೀರಾ? ಅಥವಾ "ಹೆಚ್ಚು ದರದ ಬಸ್ಸುಗಳಲ್ಲಿ ಮಾತ್ರ ಕನ್ನಡ ಇರಲ್ಲ, ಕಡಿಮೆ ದರದ ಇತರೆ ಬಸ್ಸುಗಳಲ್ಲಿ ಕನ್ನಡ ಇದ್ದೇ ಇರುತ್ತೆ" ಅನ್ನುವ ಮಾತಿನಿಂದ ಏನಾದರು ಸಂತೈಸಿಕೊಂಡಿದ್ದೀರೋ? ಹಾಗೇನಾದರು ಇದ್ದರೆ ಅದಕ್ಕಿಂತ ಅವಮಾನಕಾರಿ ಸಮ್ಜಾಯಿಷಿ ಇನ್ನೊಂದಿಲ್ಲ ಅಂತ ತಿಳಿಯೋಣ! ದರ ಹೆಚ್ಚೇ ಇರಲಿ, ಕಡಿಮೆಯೇ ಇರಲಿ, ಒಳಗೆ ಮನರಂಜನೆ ಇರಬೇಕೆಂದರೆ ಅದು ಕನ್ನಡದ ಮನರಂಜನಾ ವಸ್ತುವೇ, ಬೇರ್ಯಾವುದೂ ಅಲ್ಲ ಅಂತ ಅರ್ಥ ಮಾಡಿಕೊಳ್ಳೋಣ, ಹಾಗೆ ಒತ್ತಾಯವೂ ಮಾಡೋಣ. ಕನ್ನಡ ನಾಡಿನಲ್ಲಿ ಕನ್ನಡದ ವಾತಾವರಣದಿಂದಲೇ ಸಮಾನತ್ವವನ್ನು ಹುಟ್ಟಿಸಲು ಸಾಧ್ಯವೆಂಬುದನ್ನು ನಂಬಿ ಇಂತಹ ಹೆಜ್ಜೆಯನ್ನು ನಾವೆಲ್ಲಾ ಇಡಲೇಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet