ಲಿನಕ್ಸಾಯಣ - ೬೦ - ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಲಿನಕ್ಸಾಯಣ - ೬೦ - ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಉಬುಂಟು ೯.೦೪ ಕೈಗೆ ಸಿಕ್ಕಾಯ್ತು ಅನ್ನಿಸುತ್ತೆ ಹಲವರಿಗೆ.. ಕೆನಾನಿಕಲ್ ಕಂಪನಿ ಅದರ ಒಂದು ಪ್ರತಿಯನ್ನ ನನಗೂ ಕಳಿಕೊಟ್ಟಿದೆ. ಸರಿ, ಕೈಗೆ ಸಿ.ಡಿ ಎನೋ ಸಿಕ್ಕಿದೆ. ಹಳೆಯ ಉಬುಂಟುವಿನಿಂದ ೯.೦೪ ಆವೃತ್ತಿಗೆ ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅನ್ನೊ ಪ್ರಶ್ನೆ ಇರಬೇಕಲ್ಲ ನಿಮ್ಮ ಮನಸಿನಲ್ಲಿ? ಈ ಲೇಖನ ಆ ಪ್ರಶ್ನೆಗೆ ಉತ್ತರ ಕೊಡಲಿದೆ. 

ನಿಮ್ಮ ಉಬುಂಟುವಿನ ಆವೃತ್ತಿ ಯಾವ್ದು ಅಂತ ಹೇಗೆ ಕಂಡು ಕೊಳ್ತೀರಾ? 

System -> About Ubuntu ಈ ಮೆನು ಆಯ್ಕೆ ನಿಮಗೆ ಅದರ ಉತ್ತರ ಕೊಡುತ್ತೆ. 

ನನ್ನ ಹತ್ರ ಉಬುಂಟು ೮.೦೪ ಇದೆ ಹ್ಯಾಗೆ ಇದನ್ನು ೯.೦೪ ಗೆ ಅಪ್ಡೇಟ್ ಮಾಡಿಕೊಳ್ಳೋದು? ಇದು ಸಾಧ್ಯಾನಾ?

ಖಂಡಿತ ಅಪ್ಡೇಟ್ ಮಾಡಿಕೊಳ್ಳಬಹುದು. ಉಬುಂಟು ಆವೃತ್ತಿಯನ್ನು ಆಗಾಗ ಅಪ್ಡೇಟ್ ಮಾಡಿಕೊಳ್ಳುತ್ತಿದ್ದರೆ ಈ ಕೆಲಸ ಸುಲಭವಾಗುತ್ತೆ. 

ಉಬುಂಟುವನ್ನು ನೇರವಾಗಿ ೮.೦೪ ಇಂದ ೯.೦೪ ಗೆ ಅಪ್ಡೇಟ್ ಮಾಡಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಮೊದಲು ಅದನ್ನು ೮.೧೦ ಗೆ ಅಪ್ಡೇಟ್ ಮಾಡಿಕೊಂಡು ನಂತರ ಅದನ್ನು ೯.೦೪ ಗೆ ಅಪ್ಡೇಟ್ ಮಾಡಿಕೊಳ್ಳಬೇಕು.

 ಸರಿ. ೮.೧೦ಗೆ ಅಪ್ಡೇಟ್ ಮಾಡಿಕೊಳ್ಳಲಿಕ್ಕೆ ಏನ್ಮಾಡ್ಬೇಕು?

 ಮೊದಲು alt+f2 ಕೀಗಳನ್ನು ಪ್ರೆಸ್ ಮಾಡಿ ಅಥವಾ Applications -> Accessories -> Terminal ತೆಗೆದುಕೊಂಡು ಕೆಳಗಿನ ಕಮ್ಯಾಂಡ್ ಟೈಪ್ ಮಾಡಿ.  

sudo update-manager -d

ಇದಾದ ನಂತರ ಮುಂಬರುವ ಅಪ್ಡೇಟ್ ಮ್ಯಾನೇಜರ್ ನಲ್ಲಿ ಸ್ವಲ್ಪ ಕಣ್ಣಾಡಿಸಿ. 

[quote]New distribution release '8.10' is available [upgrade]  [/quote]

ಕಾಣಿಸ್ತಿರಬೇಕಲ್ವಾ? ಈಗ ಅಲ್ಲಿ [upgrade]  ಮೇಲೆ ಕ್ಲಿಕ್ ಮಾಡಿ.

ಸೂಚನೆ ೧:- ಇದಕ್ಕೆಲ್ಲಾ ಇಂಟರ್ನೆಟ್ ಇರಲೇಬೇಕು ಮತ್ತೆ ಈ ಅಪ್ಗ್ರೇಡ್ ಗಳು ಎನಿಲ್ಲವೆಂದರೂ ೬೦೦ ಎಂ.ಬಿ ಇಂದ ೧ ಜಿ.ಬಿಯ ವರೆಗೆ ತಂತ್ರಾಂಶಗಳನ್ನು ಡೌನ್ಲೋಡ್ ಮಾಡಬಹುದು. ನಿಮ್ಮ ಸಿಸ್ಟಂನಲ್ಲಿ ಇನ್ಸ್ಟಾಲ್ ಆಗಿರುವ ತಂತ್ರಾಂಶಗಳು ಇದನ್ನು ನಿರ್ಧರಿಸುತ್ತವೆ. 

 ಸರಿ. ಅಪ್ರ್ಗೇಡ್ ಕೊಟ್ಟಾಯ್ತಲ್ಲ. ಅರಾಮಾಗಿ ಕೂರಿ ಅದು ಮುಗಿಯುವವರೆಗೆ :). 

ಸೂಚನೆ ೨:- ನಿಮ್ಮ ಸಿಸ್ಟಂ ನಲ್ಲಿ 3rd party ಸೋರ್ಸ್ ಗಳನ್ನು ಅಳವಡಿಸಿಕೊಂಡರೆ, ಈ ಅಪ್ಡೇಟ್ ಆಗದೇ ಹೋಗಬಹುದು.  System -> Administration -> Software Sources ಇಲ್ಲಿ ಉಬುಂಟುವಿನ ಸೋರ್ಸ್ ಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಬೇರೆಯವನ್ನು ಡಿಸೇಬಲ್ ಮಾಡಿ ನಂತರ ಅಪ್ಡೇಟ್ ಮಾಡಿದರೆ ಈ ತೊಂದರೆ ತಪ್ಪುತ್ತದೆ. 

ಸೂಚನೆ ೩:-  ಅಯ್ಯೋ ಕರೆಂಟ್ ಹೊರಟೋಯ್ತು ಮಧ್ಯದಲ್ಲಿ. ಈಗೇನು ಮಾಡೋದು? ಹೆದರಬೇಡಿ. ಇನ್ಸ್ಟಾಲೇಷನ್ ಸುರುವಾಗದ, ತಂತ್ರಾಂಶಗಳು ಇನ್ನೂ ಡೌನ್ಲೋಡ್ ಆಗ್ತಿತ್ತು ಅಂತಂದ್ರೆ ತೊಂದರೆ ಏನಿಲ್ಲ. ಮತ್ತೆ ಮೊದಲಿನಿಂದ ಅಪ್ಡೇಟ್ ಶುರುಮಾಡಿಕೊಳ್ಳಿ ಮೇಲೆ ಹೇಳಿದ ಹಾಗೆ. ಈಗಾಗಲೇ ಡೌನ್ಲೋಡ್ ಆಗಿರೋ ಪ್ಯಾಕೇಜ್ಗಳು ಮತ್ತೆ ಡೌನ್ಲೋಡ್ ಆಗಲ್ಲ. ಮಿಕ್ಕವನ್ನು ಮಾತ್ರ ಡೌನ್ಲೋಡ್ ಮಾಡಿಕೊಳ್ಳಲಾಗುತ್ತೆ. 

ಸೂಚನೆ ೪:-  ಸೂಚನೆ ೩ ರಲ್ಲಿ ಹೇಳಿದಂತೆ ಮಧ್ಯದಲ್ಲಿ ಅಪ್ಗ್ರೇಡ್ ಆಗದೇ ಉಳಿದ ಸಿಸ್ಟಂ ನಲ್ಲಿ ಜಿ.ಯು.ಐ ಬರದೆ ಬರಿ ಕನ್ಸೋಲ್ ಕಂಡರೆ ಮುಂದೇನು ಮಾಡೋದು? 

ಇದಕ್ಕೆ ಅಪ್ಗ್ರೇಡ್ ಮುಂದುವರೆಸಿ ಬೇಕು.  ಹೌದು ಕಮ್ಯಾಂಡ್ ಪ್ರಾಂಪ್ಟ್ ನಲ್ಲೇ. ಲಾಗಿನ್ ಆಗಿ ನಂತರ ಕೆಳಗಿನ ಕಮ್ಯಾಂಡ್ ಟೈಪ್ ಮಾಡಿ.

[quote]sudo aptitude dist-upgrade [/quote]

 ಇದು ಮುಗಿದ ನಂತರ ಸಿಸ್ಟಂ ರೀಸ್ಟಾರ್ಟ್ ಮಾಡಿದರಾಯಿತು. 

ಈಗ ಮತ್ತೆ ನಿಮ್ಮ ಉಬುಂಟುವಿನ ಆವೃತ್ತಿ ಯಾವುದೆಂದು ನೋಡಿ. ಇಷ್ಟರಲ್ಲೇ ಅದು ೮.೧೦ ಆಗಿರಬೇಕಲ್ಲವೇ? ಸಕತ್! ಸರಿ ಹಾಗಿದ್ರೆ ಇದನ್ನು ೯.೦೪ ಗೆ ಅಪ್ಡೇಟ್ ಮಾಡಿಕೊಂಡು ಬಿಡಿ. 

೯.೦೪ ಗೆ ಹ್ಯಾಗೆ ಅಂದ್ರಾ?

ಮೇಲೆ ಹೇಳಿದ ಕಥೆಯನ್ನೇ ಮತ್ತೆ ಹೇಳ್ಬೇಕಾಗುತ್ತೆ :) ಗೊತ್ತಾಯ್ತಲ್ಲ?

 ಈ ರೀತಿ ಅಪ್ಡೇಟ್ ಮಾಡಿಕೊಳ್ಳಬೇಕಾದಲ್ಲಿ ಕೆಲವೊಂದು 3rd party ತಂತ್ರಾಂಶಗಳು ಕೆಲಸ ಮಾಡದೇ ಹೋಗಬಹುದು. ಆ ತಂತ್ರಾಂಶದ ವೆಬ್ಸೈಟ್ ನಲ್ಲಿ ಹೊಸ ಉಬುಂಟು ಆವೃತ್ತಿಗೆ ಬೇಕಾದ Software Soures ನ ಮಾಹಿತಿ ಕೊಟ್ಟಿರುತ್ತಾರೆ. ಅದನ್ನು ಮತ್ತೆ ಸೇರಿಸಿಕೊಂಡರಾಯಿತು. 

ಸೂಚನೆ ೫:- ನಿಮ್ಮ ಇಂಟರ್ನೆಟ್ ಕನೆಕ್ಷನ್ ಸೀಮಿತ ಡೌನ್ಲೋಡ್ ವ್ಯವಸ್ಥೆ ಹೊಂದಿದ್ದರೆ ಹುಷಾರು ಟೆಲಿಫೋನ್ ಬಿಲ್ ಮುಗಿಲು ಮುಟ್ಟೀತು..

ಇದು ಬೇಡ ಅಂದ್ರೆ, ಹೊಸ ಉಬುಂಟು ಆವೃತ್ತಿಯ ಸಿ.ಡಿಯನ್ನ http://ubuntu.com ನಿಂದ ತರಿಸಿಕೊಳ್ಳಿ ನಂತರ ಹೊಸದಾಗಿ ಉಬುಂಟು ಇನ್ಸ್ಟಾಲ್ ಅಥವಾ ಸಿ.ಡಿ ಇಂದಲೇ ಅಪ್ಗ್ರೇಡ್ ಮಾಡಿಕೊಳ್ಳಬಹುದು. 

ಕೊನೆ ಮಾತು:-  ನಮ್ಮ ಸಂಪದದ ಚಿಗುರು ಗ್ನು/ಲಿನಕ್ಸ್ ಅಪ್ಡೇಟ್ ಮಾಡೋದು ಕೂಡ ಹೀಗೆ ಗೊತ್ತಾ? ಆದ್ರೆ ಅದರಲ್ಲಿ ಉಬುಂಟುವಿನ ತರ ೬ ತಿಂಗಳಿಗೊಮ್ಮೆ ಹೊಸ ಆವೃತ್ತಿ ಬರೋದಿಲ್ಲ. ಇದರ ಬಗ್ಗೆ ಮೊದಲೊಮ್ಮೆ ಬರೆದಿದ್ದೆ. ಡೆಬಿಯನ್ ಆವೃತ್ತಿ ೫ ಹೊರಬಂದಾಗ ಅದನ್ನೊಮ್ಮೆ ಓದಿ. 

ಈಗ ಉಬುಂಟು ೯.೦೪ ನೊಂದಿಗೆ ಮಜಾ ಮಾಡಿ. 

Rating
No votes yet

Comments