"ರಾಜ" ಕಾರಣದಲ್ಲಿ ಕುಮಾರಸ್ವಾಮಿ

"ರಾಜ" ಕಾರಣದಲ್ಲಿ ಕುಮಾರಸ್ವಾಮಿ

ದೇವೇಗೌಡರ ರಾಜಕೀಯ ಲೆಕ್ಕಾಚಾರದ ಬಗ್ಗೆ ರಾಜಕೀಯ ವಲಯ ಮಾತನಾಡತ್ತೆ. ಹಾಗಾದ್ರೆ ಈ ಸಲದ ಲೆಕ್ಕಾಚಾರ ಏನು ? ದೇವೇಗೌಡರು ತಮ್ಮ ಮಗನನ್ನೇಕೆ ಮುಂದೆ ಬಿಟ್ಟರು ? ಹಿಂದೆ ರಾಜ್ಯದಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದಾಗಲೂ ಇದೇ ನಡೆಯನ್ನು ದೇವೇಗೌಡರು ಅನುಸರಿಸಿದ್ದರು. ಏನೀ ಲೆಕ್ಕಾಚಾರ ಕೊಂಚ ಇತಿಹಾಸದ ಜೊತೆ ಸಮೀಕರಿಸಿ ನೋಡಿ...

ದೇವೇಗೌಡ ಚಾಣಕ್ಷ ರಾಜಕಾರಣಿ. ಕುಟುಂಬ ರಾಜಕಾರಣಕ್ಕೆ ಹೆಸರುವಾಸಿ. ಅವಕಾಶವಾದಿ ರಾಜಕಾರಣ ಅದರಲ್ಲೂ ಸ್ವಾರ್ಥ ತುಂಬಿರತ್ತೆ ಅನ್ನೋ ಮಾತುಗಳಿಗೇನೂ ರಾಜಕೀಯವಲಯದಲ್ಲಿ ಕೊರತೆ ಇಲ್ಲ. ಹೀಗೆ ರಾಜಕೀಯ ಲೆಕ್ಕಾಚಾರ ಹಾಕಿದ್ದರಿಂದಲೇ ಅವರು ಭಾರತದ ಪ್ರಧಾನಿಯೂ ಆದರು. ಕಿಂಗ್ ಆಗಬೇಕು ಇಲ್ಲಾ ಕಿಂಗ್ ಮೇಕರ್ ಆಗಬೇಕು ಅನ್ನೋದು ದೇವೇಗೌಡರ ಹಂಬಲ. ದೇವೇಗೌಡರ ರಾಜಕೀಯ ಜೀವನ ನೋಡಿದರೆ, ಅವರ ನಡವಳಿಕೆಯಿಂದ ಬೇಸತ್ತು ಪಕ್ಷ ತ್ಯಜಿಸಿದವರೇ ಹೆಚ್ಚಾಗಿ ಕಾಣಿಸುತ್ತಾರೆ. ಕುಟುಂಬ ರಾಜಕಾರಣಕ್ಕಾಗಿ ಪಕ್ಷವನ್ನೇ ಹೈಜಾಕ್ ಮಾಡಿದವರು ಅನ್ನೋ ಆರೋಪ ಕೂಡಾ ಅವರ ಮೇಲಿದೆ. ಈ ಆರೋಪಕ್ಕೆ ತಕ್ಕಂತೆ ಅವರು ಪಕ್ಷದಲ್ಲಿ ಬೇರೆ ಯಾವ ನಾಯಕನನ್ನೂ ಬೆಳೆಯಗೊಡಲಿಲ್ಲ. ಕುಮಾರಸ್ವಾಮಿ ಬಿಟ್ಟರೆ ಬೇರಾವ ನಾಯಕರೂ ಅಲ್ಲಿ ಮಿಂಚಲಿಲ್ಲ. ಈ ಎಲ್ಲ ಹಿನ್ನೆಲೆ ಇರಿಸಿಕೊಂಡು ಈಗ ಯಾವ ರೀತಿ ರಾಜಕಾರಣ ನಡೆಯೊತ್ತೆ ಅನ್ನೋದನ್ನ ಗಮನಿಸೋಣ.

ಈಗೇನು ರಾಜಕೀಯ ?

ಈಗ ಕೇಂದ್ರದಲ್ಲಿ ಸ್ಥಿರ ಸರಕಾರ ನೀಡೋದಕ್ಕಾಗಿ ಯುಪಿಎಗೆ ೨೬೧ ಸೀಟುಗಳನ್ನು ಮತದಾರ ಪ್ರಭು ಕರುಣಿಸಿದ್ದಾರೆ. ಇಲ್ಲಿ ಸರಳ ಬಹುಮತ ನಿರೂಪಿಸೋದಕ್ಕೆ ಯುಪಿಎಗೆ ಬೇಕಾದ ಸೀಟುಗಳ ಸಂಖ್ಯೆ ೧೧. ಇದನ್ನು ನಿಭಾಯಿಸೋದು ಕಾಂಗ್ರೆಸ್‌ಗೇನೂ ಕಷ್ಟವಾಗಲ್ಲ.
ಚುನಾವಣಾ ಪೂರ್ವದಲ್ಲಿ ಲೋಕಸಭೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತೃತೀಯರಂಗಕ್ಕೇ ಹೆಚ್ಚು ಅವಕಾಶ ಅನ್ನೋ ವಾದ ಇತ್ತು. ಇದಕ್ಕೆ ಪೂರಕವಾಗಿ ಮಾರ್ಚ್ ತಿಂಗಳಲ್ಲಿ ಡಾಬಸ್‌ಪೇಟೆಯಲ್ಲಿ ತೃತೀಯರಂಗದ ಸಮಾವೇಶ ನಡೆಸಿ ರಾಷ್ಟ್ರಮಟ್ಟದಲ್ಲಿಲ ರಾಜಕೀಯ ಗಮನಸೆಳೆದವರೇ ದೇವೇಗೌಡರು. ದೇವೇಗೌಡರ ಸಾರಥ್ಯ ಎಂದರೆ ಕೇಳಬೇಕೆ ? ರಾಜಕೀಯ ಚದುರಂಗದಾಟ ಅರೆದು ಕುಡಿದವರು ದೇವೇಗೌಡ. ಹೀಗಾಗಿ ತೃತೀಯರಂಗ ಮತ್ತೆ ಚಿಗುರಿ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಏರತ್ತೆ ಅನ್ನೋ ಮಾತೇ ಕೇಳಿತ್ತು.ರಾಜ್ಯದಲ್ಲಿ ಚುನಾವಣೆಗೆ ಎರಡು ಕಡೆ ತೃತೀಯರಂಗದ ಮಿತ್ರಪಕ್ಷ ಎಡಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ನೆರವಾಯಿತು. ಇದೇ ವೇಳೆ ಬಳ್ಳಾರಿ, ಶಿವಮೊಗ್ಗ ಸೇರಿದಂತೆ ಕೆಲವೆಡೆ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲು ಅವಕಾಶ ಮಾಡಿಕೊಟ್ಟಿತು. ಇನ್ನೇನು ಚುನಾವಣಾ ಫಲಿತಾಂಶಕ್ಕೆ ನಾಲ್ಕುದಿನ ಬಾಕಿ ಇದೆ ಎಂದಾಗ ರಾಜಕೀಯದಲ್ಲೊಂದು ಸಂಚಲನ ಕಾಣಿಸಿಕೊಂಡಿತು.

ಸೋನಿಯಾ ಭೇಟಿ

ಅಂದು ಮೇ ೧೨. ರಾತ್ರಿ ೮ರ ಸಮಯ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೆಹಲಿಯಲ್ಲಿ ಸೋನಿಯಾ ಮನೆ ಮುಂದೆ ಕಾಣಿಸಿಕೊಂಡಿದ್ದರು. ಜೊತೆಯಲ್ಲಿ ಬಳ್ಳಾರಿಯ ಹಿರಿಯ ಕಾಂಗ್ರೆಸ್ ನಾಯಕರೊಬ್ಬರೂ ಇದ್ದರು. ಆದ್ರೇನು ಕಾಲ ಮಿಂಚಿಹೋಗಿತ್ತು. ಕುಮಾರಸ್ವಾಮಿ ಮಾಧ್ಯಮ ಕೆಮರಾ ಕಣ್ಣಿಗೆ ಬಿದ್ದಿದ್ರು. ಬೇರೆ ವಿಧಿ ಇಲ್ದೇ ಮಾಧ್ಯಮದ ಮುಂದೆ ಬಾಯ್ಬಿಡಬೇಕಾಯಿತು.

ಅಂದು ಅವರು ಹೇಳಿದ್ದೇನು ಗೊತ್ತೆ ? ರಾಜ್ಯದಲ್ಲಿ ಬಿಜೆಪಿ ಸರಕಾರದ ದುರಾಡಳಿತ ಹೆಚ್ಚಾಗಿದೆ. ಇದರ ಬಗ್ಗೆ ಸೋನಿಯಾ ಜೊತೆ ಚರ್ಚಿಸಬೇಕಿತ್ತು. ಅದಕ್ಕೆ ಬಂದೆ. ತೃತೀಯ ರಂಗಕ್ಕೆ ಇದರಿಂದ ಏನೂ ತೊಂದರೆ ಇಲ್ಲ. ಇದರ ಬಗ್ಗೆ ಎಡಪಕ್ಷದ ನಾಯಕರಾದ ಡಿ.ರಾಜಾ ಮತ್ತು ಪ್ರಕಾಶ್ ಕಾರಟ್ ಅವರಿಗೂ ಮನವರಿಕೆ ಮಾಡಲಾಗಿದೆ ಅಂತ ದೆಹಲಿಯಲ್ಲಿ ಲಿಖಿತ ಹೇಳಿಕೆ ಕೂಡಾ ನೀಡಿದ್ರು.

ದೇವೇಗೌಡರ ಪತ್ರಿಕಾಗೋಷ್ಠಿ

ಇದರ ಬೆನ್ನಲ್ಲೇ ಅಂದ್ರೆ ಮರುದಿನ ಬೆಂಗಳೂರಿನಲ್ಲಿ ದೇವೇಗೌಡರು ಇನ್ನೊಂದು ಪತ್ರಿಕಾಗೋಷ್ಠಿ ಕರೆದಿದ್ರು. ಅದೂ ತಮ್ಮ ನಿವಾಸ ಅಮೋಘದಲ್ಲಿ. ಮನೆಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ ಅಂದ್ರೆ ಅಲ್ಲಿ ಏನೋ ರಾಜಕೀಯ ವಿಶೇಷ ಇದೆ ಎಂದೇ ಅರ್ಥ ಮಾಡಿಕೊಳ್ಬೇಕು ಅಂತ ಹೇಳ್ತಾರೆ ಜೆಡಿಎಸ್ ನಿಷ್ಠರು.

ಮೇ ೧೩ ಮಧ್ಯಾಹ್ನ ೨ ಗಂಟೆ. ದೇವೇಗೌಡರು ಮಾಧ್ಯಮದ ಮುಂದೆ ಹೇಳಿದ್ದಿಷ್ಟು

" ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ. ರಾಜ್ಯದ ರಾಜಕೀಯದ ಬಗ್ಗೆ ಸೋನಿಯಾ ಜೊತೆ ಮಾತುಕತೆ ನಡೆಸಿದ್ದಾರೆ. ಅದನ್ನು ಲಿಖಿತವಾಗಿಯೇ ಹೇಳಿದ್ದಾರೆ. ಆದರೆ ತನಗೆ ಈ ಭೇಟಿ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕೋಮುವಾದಿ ಬಿಜೆಪಿ ದೂರ ಇಡೋದಕ್ಕೆ ನಾನು ಓಪನ್ ಕಾಲ್ ಕೊಟ್ಟಾಗ ಇಷ್ಟು ಸುದ್ದಿ ಮಾಡಿರಲಿಲ್ಲ. ಕುಮಾರಸ್ವಾಮಿ ಮುಖ ಮರೆಸಿರಲಿಲ್ಲ. ಆತ ಹೋದಾಗ ಅಲ್ಲಿ ೪೮ ಡಿಗ್ರಿ ಸೆಲ್ಸಿಯಸ್ ಇತ್ತು. ಹಾಗಾಗಿ ಸೆಕೆಗೆ ಗಾಳಿ ಬೀಸ್ತಿದ್ದ. ಅದನ್ನೇ ಮುಖ ಮರೆ ಮಾಚಿದ ಅಂತ ಪ್ರಚಾರ ಮಾಡಿದ್ರಲ್ಲಾ ?
ಕುಮಾರಸ್ವಾಮಿಗೆ ಬಿಜೆಪಿಯವರು ಕೊಟ್ಟ ಕಷ್ಟ ಏನ್ ಕಡಿಮೇನಾ ? ಜೆಡಿಎಸ್‌ಗೂ ಕಷ್ಟ ಕೊಟ್ಟಿದ್ದಾರೆ. ಅದಕ್ಕೂ ಹೆಚ್ಚಾಗಿ ರಾಜ್ಯದ ರೈತಾಪಿ ಜನರು... ಈಗ ಹೇಳಿ ಭೇಟಿ ಮಾಡಿದ್ದು ತಪ್ಪಾ ?
ಇಷ್ಟಕ್ಕೂ ತೃತೀಯ ರಂಗದ ಸಮಾವೇಶ ನಡೆಸಿದ್ದೇ ಜೆಡಿಎಸ್. ಹೀಗಾಗಿ ಜೆಡಿಎಸ್ ತೃತೀಯ ರಂಗದ ಆಧಾರ ಸ್ತಂಭವಾಗಿಯೇ ಉಳಿಯುತ್ತದೆ. ಈ ಭೇಟಿಯಿಂದ ತೃತೀಯರಂಗಕ್ಕೇನೂ ಮುಳುವಿಲ್ಲ. ಟಿಆರ್‌ಎಸ್ ತೃತೀಯ ರಂಗ ಬಿಟ್ಟಿಲ್ಲ. ತೆಲುಗುದೇಶಂ ವಿಚಾರ ಬಂದಾಗ ಪಕ್ಷದ ನಿಲುವನ್ನು ಸಮರ್ಥಿಸಬೇಕಾಗುತ್ತದೆ ಎಂಬುದನ್ನು ಟಿಆರ್‌ಎಸ್ ನಾಯಕರು ತಿಳಿಸಿದ್ದರು. ಇದನ್ನು ತೃತೀಯ ರಂಗದ ನಾಯಕರು ಒಪ್ಪಿದ್ದರು. ಟಿಆರ್‌ಎಸ್ ನಾಯಕರು ಲೋಕಸಭೆ ಫಲಿತಾಂಶದ ಬಳಿಕ ನಡೆಯುವ ತೃತೀಯ ರಂಗದ ಮೊದಲ ಸಭೆಯಲ್ಲೂ ಭಾಗವಹಿಸುತ್ತಾರೆ. ನಾನು ಕೂಡಾ ಅದರಲ್ಲಿ ಪಾಲ್ಗೊಳ್ಳುತ್ತೇನೆ"

ಕುಮಾರಸ್ವಾಮಿ ಸುದ್ದಿಗೋಷ್ಠಿ

ಇದಾದ ಎರಡೇ ದಿನಕ್ಕೆ ಅಂದ್ರೆ ಮೇ ೧೫. ಮಧ್ಯಾಹ್ನ ೨ ಗಂಟೆ ಸಮಯ. ಸ್ಥಳ ಸದಾಶಿವನಗರದ ಕುಮಾರಸ್ವಾಮಿ ಗೆಸ್ಟ್ ಹೌಸ್. ಅಲ್ಲಿ ಮಾಧ್ಯಮಕ್ಕೆ ಕುಮಾರಸ್ವಾಮಿ ಹೇಳಿದ್ದಿಷ್ಟು... "ಕಾಂಗ್ರೆಸ್ ಆಹ್ವಾನ ಇಲ್ಲದೇ ಸೋನಿಯಾ ಭೇಟಿ ಮಾಡುತ್ತಿರಲಿಲ್ಲ. ಭೇಟಿಯ ವಿವರಗಳನ್ನು ಶೀಘ್ರವೇ ಸೂಕ್ತ ಸಂದರ್ಭದಲ್ಲಿ ಬಹಿರಂಗಗೊಳಿಸುವೆ. ಬಿಜೆಪಿಯಿಂದ ತನಗ್ಯಾವುದೇ ತೊಂದರೆ ಆಗಿಲ್ಲ. ಈ ವಿಚಾರದಲ್ಲಿ ದೇವೇಗೌಡರ ಹೇಳಿಕೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ.
ತಮ್ಮ ಭೇಟಿಯಿಂದ ತೃತೀಯರಂಗಕ್ಕೆ ಯಾವುದೇ ತೊಂದರೆ ಆಗಲಾರದು. ಲೋಕಸಭೆ ಫಲಿತಾಂಶದ ಬಳಿಕ ನಡೆಯೋ ತೃತೀಯ ರಂಗದ ಸಭೆಯಲ್ಲಿ ದೇವೇಗೌಡರೇ ಖುದ್ದು ಭಾಗವಹಿಸುತ್ತಾರೆ "
ನೋಡಿದ್ರಲ್ಲಾ ಹೇಗೆ ಹೇಳಿಕೆಗಳು ಬದಲಾಗ್ತಾ ಹೋಗ್ತವೆ ಅಂತ. ನೋಡು ನೋಡುತ್ತಿದ್ದಂತೆ ಚುನಾವಣೆ ಫಲಿತಾಂಶ ಹೊರಬಿತ್ತು. ಎಡಪಕ್ಷಗಳು ತೀರಾ ಎಡಕ್ಕೆ ಸರಿದವು. ತೃತೀಯರಂಗಕ್ಕೆ ಇನ್ನಿಲ್ಲದಂತೆ ಮುಖಭಂಗವಾಯಿತು. ಇತ್ತ ರಾಜ್ಯದಲ್ಲಿ ಜೆಡಿಎಸ್ ನಿರೀಕ್ಷೆಯಷ್ಟು ಫಲಿತಾಂಶ ಸಿಗಲೇ ಇಲ್ಲ. ಆದರೂ ಜೆಡಿಎಸ್‌ಗೆ ಸಿಹಿಸುದ್ದಿ ಕಾದಿತ್ತು.

ಟೆಲಿಫೋನ್ ಕರೆ

ಮೇ ೧೬. ಸಂಜೆ ಕುಮಾರಸ್ವಾಮಿ ಮೊಬೈಲ್ ರಿಂಗಣಿಸಲು ಪ್ರಾರಂಭಿಸಿತ್ತು. ಯಾರ್‍ದು ಅಂತ ನೋಡಿದ್ರೆ... ರಾಜ್ಯ ಕೆಪಿಸಿಸಿ ಉಸ್ತುವಾರಿ ಗುಲಾಂ ನಬಿ ಆಜಾದ್ ಅವರದು. ಸರಿ... ಫೋನಾಯಣ ಶುರು. ರಾಜ್ಯದಲ್ಲಿ ಲೋಕಸಭೆ ಫಲಿತಾಂಶ. ೧೯ ಬಿಜೆಪಿ ಜೆಡಿಎಸ್ ಮೂರು, ಕಾಂಗ್ರೆಸ್ ಆರು. ಇನ್ನೇನು ಆಲ್‌ಮೋಸ್ಟ್ ಮಾತುಕತೆ ಸಕ್ಸಸ್... ಮತ್ತೆ ಮಾಮೂಲಿ... ಮೇ ೧೭. ಬೆಳಗ್ಗೆ ದೇವೇಗೌಡರ ನಿವಾಸಕ್ಕೆ ಕುಮಾರಸ್ವಾಮಿ ಭೇಟಿ. ಅಪ್ಪ ಮಗ ಮಾತುಕತೆ. ಜೊತೆಗೆ ಹೊಸ ಸಂಸದ ಚೆಲುವರಾಯಸ್ವಾಮಿ. ರಾಜಕೀಯ ಲೆಕ್ಕಾಚಾರ ಹಾಕಿದ್ದಾಗಿದೆ. ಹಾಗಾದ್ರೆ ಮುಂದೇನು?ದೇವೇಗೌಡರ ದೆಹಲಿ ಭೇಟಿ ರದ್ದು. ಅನಾರೋಗ್ಯ ಕಾರಣ. ಕುಮಾರಸ್ವಾಮಿ ಚೆಲುವರಾಯಸ್ವಾಮಿ ದೆಹಲಿಗೆ ದೌಡು. ತೃತೀಯ ರಂಗದ ಸಭೆಗೆ ದೇವೇಗೌಡರ ಗೈರು... ಕುಮಾರಸ್ವಾಮಿ- ಚೆಲುವರಾಯಸ್ವಾಮಿ ತೃತೀಯರಂಗದ ಸಭೆಗೆ ಹೋಗೋ ನಿರ್ಧಾರ.

ಸಮರ್ಥನೆ ಹೇಗೆ ?

ಈಗಾಗಲೇ ಹೇಳಿದಂತೆ ಕುಮಾರಸ್ವಾಮೀನೇ ರಾಜಕೀಯ ಆಟದ ಸಾರಥ್ಯ ವಹಿಸಿದ್ದಾರೆ. ಅವರಿಗೆ ಮಂತ್ರಿಗಿರಿ ಗ್ಯಾರೆಂಟಿ ಅನ್ನೋದು ಪಕ್ಷದ ಲೆಕ್ಕಾಚಾರ. ಹಿಂದೆ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ದೇವೇಗೌಡರು ಇದೇ ರೀತಿಯ ಮಾತುಗಳನ್ನಾಡಿದ್ದರು. ಮಗ ಮುಖ್ಯಮಂತ್ರಿ ಆದ. ಅಧಿಕಾರ ಹಸ್ತಾಂತರದ ವಿಚಾರ ಬಂದಾಗ ಬಿಜೆಪಿ ಕೋಮುವಾದಿ ಅನ್ನೋದು ನೆನಪಾಯ್ತು. ಈಗ ಮತ್ತೆ ಅಂತದ್ದೇ ನಾಟಕೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಮಗನಿಗೆ ಮಂತ್ರಿಗಿರಿ ಕೊಡಿಸೋದು ಗೌಡರ ಒಂದಂಕಿಯ ಅಜೆಂಡಾ.

ಜೆಡಿಎಸ್‌ನ ಈ ನಿಲುವಿನೊಂದಿಗೆ ತೃತೀಯ ರಂಗದ ಮಿತ್ರಪಕ್ಷಗಳಿಗೆ ಪ್ರಥಮ ಆದ್ಯತೆ ಪ್ರಾದೇಶಿಕತೆ ಎಂಬುದನ್ನು ಮತ್ತೆ ನೆನಪಿಸಿದ್ದಾರೆ ದೇವೇಗೌಡರು. ಟಿಆರ್‌ಎಸ್ ತೃತೀಯ ರಂಗ ಬಿಟ್ಟಾಗಲೂ ಇದನ್ನೇ ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತೃತೀಯ ರಂಗದ ನಾಯಕರು ಒಪ್ಪಲಿ.. ಬಿಡಲಿ.. ಜೆಡಿಎಸ್ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಬೆಂಬಲ ನೀಡುವುದು ಖಚಿತ.

Rating
No votes yet

Comments