ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ

ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ

(ಅಚಿನ್ ವನಾಯಕ್ ಅವರ ನಿಲುವುಗಳು ಮತ್ತು ವಿಚಾರ - ನನ್ನ ಗ್ರಹಿಕೆಯಲ್ಲಿ)

ನುಡಿದರೆ ಮುತ್ತಿನಂತಿರಬೇಕು ಎನ್ನುತ್ತಾರೆ. ನೀವು ಅಚಿನ್ ವನಾಯಕ್ ಮಾತುಗಳನ್ನು ಒಮ್ಮೆ ಕೇಳಬೇಕು. "ಭಾರತದ ಕೋಮುವಾದೀ ಇತಿಹಾಸ: ಸಾರ್ವಜನಿಕ ತಿಳುವಳಿಕೆಯಲ್ಲಿ ಉಂಟಾಗಿರುವ ಬದಲಾವಣೆಗಳು" ಎಂಬ ವಿಚಾರದ ಬಗ್ಗೆ ಮಾತನಾಡಲು ಅವರು ಮಂಗಳೂರಿಗೆ ಬಂದಿದ್ದರು. ಕರೆಸಿದವರು ಕರ್ನಾಟಕ ಕೋಮುಸೌಹಾರ್ದ ವೇದಿಕೆಯವರು. ಎರಡು ದಿನಗಳ ಕಾರ್ಯಾಗಾರದಲ್ಲಿ ಪೇಪರ್ ಪ್ರೆಸೆಂಟ್ ಮಾಡಲೆಂದು ಬಂದವವರಲ್ಲಿ ಹೆಚ್ಚಿನವರು ನಿರ್ದಿಷ್ಟ ಹಂದರವಿಲ್ಲದ ಮಾತುಕತೆಯಲ್ಲೆ ಸಮಯ ಕಳೆದರು. ಆದರೆ ಅಚಿನ್ ಹಾಗೆ ಮಾಡಲಿಲ್ಲ. ಅವರೇನೂ ಪೇಪರ್ ಬರೆದು ತಂದಿರಲಿಲ್ಲ. ಅದು ಬಿಡಿ, ಪಾಯಿಂಟ್ಸ್ ಕೂಡ ಬರೆದುಕೊಂಡಿರಲಿಲ್ಲ ಅವರು. ಆದರೆ ಸುಮಾರು ಒಂದು-ಒಂದೂವರೆ ಗಂಟೆ ಕಾಲ ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿಯ ಬಗ್ಗೆ ನಿರರ್ಗಳವಾಗಿ ತಮ್ಮ ವಿಚಾರಧಾರೆಯನ್ನು ಹರಿಸಿದ ಅವರ ಮಾತುಗಳನ್ನು ನೋಡಿ:

ಭಾರತದ ಕೋಮುವಾದೀ ಇತಿಹಾಸ: ಸಾರ್ವಜನಿಕ ತಿಳುವಳಿಕೆಯಲ್ಲಿ ಉಂಟಾಗಿರುವ ಬದಲಾವಣೆಗಳ ನಕ್ಷೆ. (ಅಚಿನ್ ವನಾಯಕ್ ಅವರ ಮಾತುಗಳ ಕುರಿತ ನನ್ನ ಗ್ರಹಿಕೆ)

ಕೋಮುವಾದದ ಬಗ್ಗೆ ಮಾತನಾಡುವಾಗ ಅದಕ್ಕೆ ಸಂಬಂಧಿಸಿದಂತೆ ನಾವು ಬಳಸುವ ಕೆಲವು ಪಾರಿಭಾಷಿಕ ಶಬ್ದಗಳ ಬಗ್ಗೆ ಎಚ್ಚರ ಮತ್ತು ಸರಿಯಾದ ತಿಳುವಳಿಕೆ ಇಟ್ಟುಕೊಂಡಿರುವುದು ಅಗತ್ಯ. ನಾವು ಇಡೀ ಜಗತ್ತಿನಾದ್ಯಂತ ನಡೆದ ಧರ್ಮ ಸಂಬಂಧೀ ಚಳುವಳಿ, ಅಭಿಯಾನಗಳನ್ನು ಗಮನಿಸಬಹುದು. ಎಲ್ಲೆಲ್ಲೂ ಧರ್ಮಕ್ಕೆ ಸಂಬಂಧಿಸಿದಂತೆ ಸಾರ್ವತ್ರಿಕ ಅಭಿಯಾನಗಳು ನಡೆದಿದ್ದು ಇದೆ. ಆದರೆ ಅವುಗಳಿಗೆ ಈಗ ನಾವು ಚರ್ಚಿಸಲು ಉದ್ದೇಶಿಸಿರುವ ಧರ್ಮ ಸಂಬಂಧೀ ಅಭಿಯಾನವನ್ನು ಹೋಲಿಸಲು ಸಾಧ್ಯವಿಲ್ಲ. ಇದು ರಾಜಕೀಯ ಉದ್ದೇಶ, ಆಸಕ್ತಿ ಇರುವ ಧಾರ್ಮಿಕ ಅಭಿಯಾನ.

ಇದನ್ನು ನಾನು ಧಾರ್ಮಿಕ ಮೂಲಭೂತವಾದಿಗಳ ಅಭಿಯಾನ ಎಂದೂ ಹೇಳಲಾರೆ. ಧಾರ್ಮಿಕ ಮೂಲಭೂತವಾದಿಗಳಿಗೆ ರಾಜಕೀಯ ಉದ್ದೇಶಗಳಿರಲೇ ಬೇಕೆಂದಿಲ್ಲ. ಅಂಥ ಉದ್ದೇಶಗಳಿಲ್ಲದೆಯೂ ಮೂಲಭೂತವಾದಿಗಳು ಕೆಲಸ ನಡೆಸಬಹುದು. ಆದರೆ ಇವತ್ತು ನಾವು ಕಾಣುತ್ತಿರುವುದು ರಾಜಕೀಯ ಸ್ವರೂಪಗಳಿರುವ ಹಿಂದೂತ್ವ, ರಾಜಕೀಯ ಸ್ವರೂಪಗಳಿರುವ ಇಸ್ಲಾಂ, ರಾಜಕೀಯ ಸ್ವರೂಪಗಳಿರುವ ಕ್ರಿಶ್ಚಿಯಾನಿಟಿ. ಇವು ತಮ್ಮ ರಾಜಕೀಯ ಉದ್ದೇಶಗಳ ಈಡೇರಿಕೆಗಾಗಿ ಧರ್ಮವನ್ನು ಮುಂದೊಡ್ಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ ಅಷ್ಟೇ.

ಇಂಥ ಹೊಸ ಯುಗದ ಆಧುನಿಕವೂ, ರಾಜಕಾರಣ ಬೆರೆತದ್ದೂ ಆಗಿರುವ ಧಾರ್ಮಿಕ ಸನ್ನಿವೇಶದಲ್ಲಿ ನಮ್ಮ ಬದುಕು ಹೇಗೆ ಎಂಬುದನ್ನು ಕುರಿತು ಚಿಂತಿಸಬೇಕಿದೆ.

ಇಲ್ಲಿಯೇ ನಾವು ತಿಳಿದುಕೊಳ್ಳ ಬೇಕಾಗಿರುವ ಇನ್ನೊಂದು ಸಂಗತಿ ರಾಷ್ಟ್ರೀಯತೆಯ ಪ್ರಚಾರದ ಕುರಿತಾದ್ದು. ಇವತ್ತು ಹಿಂದೂ ರಾಷ್ಟ್ರೀಯತೆಯ ಮಾತು ಕೇಳಿಬರುತ್ತಿದೆ. ಅರಬಿಂದೋ, ಗಾಂಧಿ ಕೂಡ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಹೊಂದಿದ್ದರು ಎಂಬುದನ್ನು ಗಮನಿಸಿ. ಆದರೆ ಇದು ಅದಲ್ಲ.

ಧಾರ್ಮಿಕ ತಳಹದಿಯ ರಾಜಕಾರಣವನ್ನು ಜಾತ್ಯಾತೀತ ಮತ್ತು ಅದಲ್ಲದ ಎಂದು ವಿಂಗಡಿಸಿದರೆ ಕೋಮುವಾದಿ ತಳಹದಿಯ ರಾಜಕಾರಣ ತನ್ನ ಕೋಮಿನವರು ಮತ್ತು ಅದಲ್ಲದವರು ಎಂದು ಜನರನ್ನು ವಿಂಗಡಿಸುವುದನ್ನು, ಹಾಗೆ ಜನರನ್ನು ಕಾಣುವುದನ್ನು ಆಚರಿಸುತ್ತದೆ.

ಧರ್ಮ ಎಂಬುದು ಅಕ್ಷರಮಾಲೆಯಾಗಿದ್ದರೆ ಕೋಮುವಾದ ಎಂಬುದು ವಾಕ್ಯವೊಂದರ ಸಂರಚನೆ ಎಂದು ತಿಳಿದು ಅದನ್ನು ನೋಡಬಹುದು. ಇದು ಪೂರ್ತಿಯಾಗಿ ಸರಿಯಾದ ಪರಿಕಲ್ಪನೆಯೇನಲ್ಲ, ನಿಜ. ಆದರೂ ಸೀಮಿತ ಉದ್ದೇಶಕ್ಕೆ ಹಾಗೆ ನೋಡಬಹುದು. ವಾಕ್ಯ ತಪ್ಪಾಗಿದ್ದರೆ ಅದು ಅಕ್ಷರಮಾಲೆಯ ತಪ್ಪೆನ್ನಲು ಬರುವುದಿಲ್ಲ. ಕೋಮುವಾದ ಎಂಬುದು ಧರ್ಮವನ್ನು ತಪ್ಪಾಗಿ ಬಳಸಿ ಅದರಿಂದ ಅದು ಒಂದು ಕೊಳಕಾದ, ಭೀಬತ್ಸ ಜಗತ್ತನ್ನು ನಿರ್ಮಿಸಿದೆ ಎನ್ನುವಷ್ಟರ ಮಟ್ಟಿಗೆ ಈ ಪರಿಕಲ್ಪನೆ ಸರಿಯಾಗಿದೆ, ಪೂರ್ತಿಯಾಗಿ ಅಲ್ಲವಾದರೂ.

ನೀವು ಗಮನಿಸಿ, ಈ ಎಲ್ಲಾ ರಾಜಕೀಯ ಉದ್ದೇಶದ ಧಾರ್ಮಿಕವಾದಗಳು ಪ್ರಮುಖವಾಗಿ ಎರಗುವುದು ಸಾಂಸಾರಿಕ ಮತು ಶೈಕ್ಷಣಿಕ ನೆಲೆಗಟ್ಟಿನ ಮೇಲೆಯೇ. ಸಾಂಸಾರಿಕ ನೆಲೆಗಟ್ಟು ಎಂದರೆ ಮಹಿಳೆಯ ಹಕ್ಕು ಮತ್ತು ಸ್ವಾತಂತ್ರ್ಯದ ಮೇಲೆ. ಧರ್ಮವನ್ನು ಬಿಟ್ಟು ಬಿಡಿ, ಈ ಎರಡು ಪ್ರಮುಖ ಸಂಗತಿಗಳನ್ನು ನಿಯಂತ್ರಿಸಿ, ಅದು ಉಳಿದ ಎಲ್ಲವನ್ನೂ ಮಾಡುತ್ತದೆ.

ಎರಡನೆಯದಾಗಿ ಸೆಕ್ಯುಲರ್ ಆದ ಒಂದು ಪ್ರಭುತ್ವದ ವ್ಯವಸ್ಥೆಯಲ್ಲಿ ವ್ಯಕ್ತಿ, ಪ್ರಭುತ್ವ ಮತ್ತು ಧರ್ಮಗಳ ನಡುವೆ ಕಾನೂನು ಬದ್ಧ ಸಂಬಂಧಗಳ ಒಂದು ನೇಯ್ಗೆ ಇರುತ್ತದೆ. ವ್ಯಕ್ತಿ ಮತ್ತು ಧರ್ಮ, ವ್ಯಕ್ತಿ ಮತ್ತು ಪ್ರಭುತ್ವ, ಧರ್ಮ ಮತ್ತು ಪ್ರಭುತ್ವ -ಗಳ ನಡುವಿನ ಸಂಬಂಧಗಳನ್ನು ನಿಯಂತ್ರಿಸುವ ಹಂತದಲ್ಲಿ ನಮಗೆ ಧಾರ್ಮಿಕ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯ ಕೂಡಾ ಇದೆ. ವ್ಯಕ್ತಿ ತನಗೆ ಬೇಕಾದ ಧರ್ಮವನ್ನು, ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಲು ಅಥವಾ ತನಗೆ ಯಾವುದೇ ಧರ್ಮ ಬೇಡವಿದ್ದಲ್ಲಿ ಧರ್ಮವಿಲ್ಲದೆಯೂ ಬದುಕಲು ಅದು ಸ್ವಾತಂತ್ರ್ಯ ನೀಡುತ್ತದೆ.

ಹಾಗೆಯೇ ಪ್ರಭುತ್ವಕ್ಕೆ ಎಲ್ಲಾ ಧರ್ಮಗಳೂ, ಎಲ್ಲ ವ್ಯಕ್ತಿಗಳೂ ಸಮಾನರು ಎಂಬ ಸಮಾನತೆಯ ಪರಿಕಲ್ಪನೆಯೂ ಈ ವ್ಯವಸ್ಥೆಯಲ್ಲಿದೆ.

ಧರ್ಮ ನಿರಪೇಕ್ಷತೆ ಮೂರನೆಯ ಪರಿಕಲ್ಪನೆ. ಜಾತ್ಯಾತೀತ ಅಥವಾ ಸೆಕ್ಯುಲರ್ ರಾಷ್ಟ್ರವೊಂದು ಧರ್ಮ ನಿರಪೇಕ್ಷತೆಯನ್ನು ತನ್ನ ಪರಿಕಲ್ಪನೆಯಲ್ಲಿ ಅನಿವಾರ್ಯವಾಗಿ ಹೊಂದಿರುತ್ತದೆ. ಅದು ಯಾವುದೇ ಧರ್ಮದೊಂದಿಗೆ ತನ್ನನ್ನು ಗುರುತಿಸಿಕೊಳ್ಳುವುದಿಲ್ಲ. ಹೀಗೆ ಪ್ರಭುತ್ವ ಧರ್ಮದಿಂದ ದೂರ ಇರಬೇಕಾಗುತ್ತದೆ. ಒಂದು ರಾಷ್ಟ್ರ ಧರ್ಮನಿರಪೇಕ್ಷ ರಾಷ್ಟ್ರವಾಗಲು ಅಲ್ಲಿ ಪ್ರಜಾಪ್ರಭುತ್ವವೇ ಇರಬೇಕೆಂದಿಲ್ಲ. ಆದರೆ ಯಾವುದೇ ರಾಷ್ಟ್ರ ಪ್ರಜಾಪ್ರಭುತ್ವವನ್ನು ಸ್ವೀಕರಿಸಿದ್ದಾದರೆ ಅಲ್ಲಿ ಅದು ಧರ್ಮನಿರಪೇಕ್ಷ ರಾಷ್ಟ್ರ ಕೂಡ ಆಗಿರಲೇ ಬೇಕಾಗುತ್ತದೆ ಎಂಬುದನ್ನೂ ಗಮನಿಸಿ.

ಅದೇ ಧರ್ಮನಿರಪೇಕ್ಷವಲ್ಲದ ಒಂದು ರಾಷ್ಟ್ರ ತನ್ನದಲ್ಲದ ಧರ್ಮವನ್ನು ಆಚರಿಸುವ ವ್ಯಕ್ತಿಯನ್ನು ಎರಡನೆಯ ದರ್ಜೆಯ ಪ್ರಜೆಯನ್ನಾಗಿ ಪರಿಗಣಿಸಲು ಸಾಧ್ಯವಿದೆ. ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ಅಥವಾ ಕ್ರಿಶ್ಚಿಯನ್ ಎರಡನೆಯ ದರ್ಜೆಯ ಪ್ರಜೆ. ಹಾಗೆ ಪರಿಗಣಿಸುವುದು ಅಲ್ಲಿ ಕಾನೂನು ಬದ್ಧ. ಆದರೆ ಭಾರತ ಧರ್ಮ ನಿರಪೇಕ್ಷ ಮತ್ತು ಜಾತ್ಯತೀತ ರಾಷ್ಟ್ರವಾಗಿರುವುದರಿಂದಲೇ ಇಲ್ಲಿ ಯಾರೂ ಎರಡನೆಯ ದರ್ಜೆಯ ಪ್ರಜೆಗಳಲ್ಲ ಎಂಬುದನ್ನು ನೆನಪಿಡಬೇಕು.

ಈಗ ನಾವು ರಾಷ್ಟ್ರೀಯತೆಯ ಪರಿಕಲ್ಪನೆಯ ಕುರಿತು ಚರ್ಚಿಸಬಹುದು. ರಾಜನೊಬ್ಬನ ಆಡಳಿತೆಯಲ್ಲಿ ರಾಷ್ಟ್ರೀಯತೆಯ ಕಲ್ಪನೆ ಹೆಚ್ಚು ಎದ್ದು ಕಾಣುವ, ಅಗತ್ಯವಾಗಿ ಒಗ್ಗೂಡಿಸಬಲ್ಲ ಭಾವನೆಯಾಗಿರುತ್ತದೆ. ಆದರೆ ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ ರಾಷ್ಟ್ರೀಯತೆ ಎಂಬುದು ಎಲ್ಲವೂ ಇಲ್ಲಿ ಸಮಷ್ಟಿಯ ಹಿತಕ್ಕಾಗಿ ಎನ್ನುವ ಒಂದು ಪರಿಕಲ್ಪನೆಯಾಗಿರುತ್ತದೆ.

ಈ ರಾಷ್ಟ್ರೀಯತೆಯ ಪರಿಕಲ್ಪನೆ ನಾನು ಹೇಳಿದ ಅರ್ಥದಲ್ಲಿ ಧರ್ಮಕ್ಕಿಂತ ಅಥವಾ ಹಿಂದೂತ್ವಕ್ಕಿಂತ ಹೆಚ್ಚು ಪ್ರಬಲವಾದದ್ದು. ಉದಾಹರಣೆಗೆ ಇವತ್ತು ನೇಪಾಲದಲ್ಲಿ, ಶ್ರೀಲಂಕಾದಲ್ಲಿ ಕೂಡ ಅಲ್ಲೇ ಹುಟ್ಟಿ ಬೆಳೆದ ಹಿಂದೂಗಳಿದ್ದಾರೆ. ಹಿಂದೂ ರಾಷ್ಟ್ರೀಯತೆಯ ಪರಿಕಲ್ಪನೆಯ ಅಡಿ ಅವರನ್ನೆಲ್ಲ ಸೇರಿಸಿಕೊಂಡು ಒಂದು ಮಹಾ ಹಿಂದೂ ರಾಷ್ಟ್ರ ರಚಿಸಲು ಸಾಧ್ಯವಾಯಿತೆ? ಅಥವಾ ಮುಸ್ಲಿಂ ರಾಷ್ಟ್ರೀಯವಾದಕ್ಕೆ ಎಲ್ಲಾ ಮುಸ್ಲಿಂ ರಾಷ್ಟ್ರಗಳನ್ನು ಒಗ್ಗೂಡಿಸಿ ಒಂದು ಮಹಾ ಮುಸ್ಲಿಂ ರಾಷ್ಟ್ರ ರಚಿಸಿಕೊಳ್ಳಲು ಸಾಧ್ಯವಾಗಿದೆಯೆ? ಇಲ್ಲ. ಅದು ಸಾಧ್ಯವಿಲ್ಲ. ಯಾಕೆಂದರೆ, ರಾಷ್ಟ್ರೀಯತೆಯ ಪ್ರಶ್ನೆಯ ಎದುರು ಧರ್ಮ ಎರಡನೆಯ ಪ್ರಾಶಸ್ತ್ಯವಾಗಿಯೇ ಉಳಿದಿದೆ ಎಂಬ ಬಹು ಮುಖ್ಯ ಅಂಶವನ್ನು ನಾವು ಗಮನಿಸಬೇಕು. ನೇಪಾಳಿಯೊಬ್ಬನಿಗೆ ಮೊದಲು ತಾನು ನೇಪಾಳಿ, ಅಮೇಲೆ, ತಾನು ನೇಪಾಳಿಯಾಗಿರುವುದರಿಂದಲೇ ತಾನೊಬ್ಬ ಹಿಂದೂ ಕೂಡ ಎಂಬುದು ತಿಳಿದಿರುತ್ತದೆ. ಇದೇ ಅರ್ಥದಲ್ಲಿ ನಾನು ಭಾರತೀಯ ಮತ್ತು ಭಾರತೀಯನಾಗಿರುವುದರಿಂದಲೇ ನಾನೊಬ್ಬ ಮಣಿಪುರಿ, ಅಥವ ಬೆಂಗಾಲಿ ಅಥವಾ ಕನ್ನಡಿಗ ಎಂಬುದು ಅರ್ಥವಾಗುವುದು ಮುಖ್ಯ.

ಕೋಮುವಾದ ಎಂಬುದು ಇವತ್ತು ಒಂದು ಅಂತರ್ರಾಷ್ಟ್ರೀಯ ವಿದ್ಯಮಾನ. ಇದು ಸಾಂಸ್ಕೃತಿಕ ಭಿನ್ನತೆಯನ್ನು ಮುಂದೊಡ್ಡುವ ಮೂಲಕ ವಿಶ್ವಾದ್ಯಂತ ಕಂಡುಬರುತ್ತಿದೆ. ನನ್ನ ಸಂಸ್ಕೃತಿ ಮತ್ತು ನಿನ್ನ ಸಂಸ್ಕೃತಿ ಭಿನ್ನ ಎಂಬ ಪ್ರಜ್ಞೆ ಇಂಥ ಕೋಮುವಾದದ ಹಿಂದೆ ಕೆಲಸ ಮಾಡುತ್ತಿದೆ. ಯು.ಎಸ್.ಎಸ್.ಆರ್ ಹೇಗೆ ಛಿದ್ರವಾಯಿತು ಎಂಬುದನ್ನು ಗಮನಿಸಿ. ಅಲ್ಲಿದ್ದ ರಾಷ್ಟ್ರೀಯತೆಯಲ್ಲಿ ಸಾಂಸ್ಕೃತಿಕ ಭಿನ್ನತೆ ಇತ್ತು. ಅದನ್ನೇ ದೊಡ್ಡದು ಮಾಡಲಾಯಿತು. ಹಾಗೆಯೇ ಬಿಳಿಯರು ಕರಿಯರ ಮೇಲೆ ನಡೆಸಿದ ದೌರ್ಜನ್ಯ ಮತ್ತು ಅವರು ಬಿಳಿಯರ ದೇಶದಲ್ಲಿ ಇರಬಾರದು ಎಂಬಂತೆ ವರ್ತಿಸಿದ ರೀತಿಯ ಹಿನ್ನೆಲೆಯಲ್ಲಿ ಇಂಥದೇ ಪರಿಕಲ್ಪನೆ ಕೆಲಸಮಾಡಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಪೌರಾತ್ಯ ವಲಸೆಗಾರರರನ್ನು, ವಲಸೆಯನ್ನೂ ವಿರೋಧಿಸಿದ ವಲಸೆ ವಿರೋಧಿ ನೀತಿಯ ಹಿಂದೆಯೂ ಇರುವ ಮನೋಭಾವ ಇದೇ ಆಗಿದೆ.

ಹೀಗೆ ಯುರೋಪ್ ಮತ್ತು ಅಮೆರಿಕಾದಲ್ಲೂ ಕೋಮುವಾದಿ ಭಾವನೆ ಇದ್ದೇ ಇದೆ. ಆದರೆ ನಮ್ಮಲ್ಲಿ ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಬೆರಕೆ ಮಾಡಿ ರಾಜಕೀಯ ಧಾರ್ಮಿಕತೆಯನ್ನು ಮುಖ್ಯಭೂಮಿಕೆಗೆ ತರಲಾಗುತ್ತಿದೆ. ಇದನ್ನೇ ನಾನು ರಾಜಕೀಯವಾದ ಹಿಂದೂತ್ವ, ರಾಜಕೀಯವಾದ ಇಸ್ಲಾಂ, ರಾಜಕೀಯವಾದ ಕ್ರಿಶ್ಚಿಯಾನಿಟಿ, ರಾಜಕೀಯವಾದ ಬೌದ್ಧ ಧರ್ಮ ಎಂದೆಲ್ಲ ಕರೆದಿದ್ದು.

ಇದಕ್ಕೆ ಸಾಮಾಜಿಕವಾದ ಮತ್ತು ಆರ್ಥಿಕವಾದ ಆಯಾಮಗಳಿರುವುದನ್ನೂ ನಾವು ಗಮನಿಸಬೇಕಿದೆ. ನೆಹರೂ ಯುಗದ ಆಧುನಿಕ ಅಭಿವೃದ್ಧಿಪರ ಯೋಜನೆಗಳ ವೈಫಲ್ಯ ಮತ್ತು ರಾಜಕೀಯವಾಗಿ ಸಮಾಜವಾದೀ ನಿಲುವಿನ ಪ್ರಜಾಪ್ರಭುತ್ವ ಅದರ ಆದರ್ಶ ಮತ್ತು ಆಶಯಗಳೆರಡರಲ್ಲೂ ಕಂಡುಕೊಂಡ ಹಿನ್ನಡೆ ಬಹುಷಃ ಈ ಬಗೆಯ ಬೆಳವಣಿಗೆಗೆ ಕಾರಣವೆಂದು ನನಗನಿಸುತ್ತದೆ. ಹೊರತು ಕಾಂಗ್ರೆಸ್ ಪಕ್ಷದ ಅವನತಿಯಿಂದ ಹಿಂದೂವಾದಿ ಬಿಜೆಪಿ ಬಲಗೊಂಡಿದ್ದಲ್ಲ. ಕಾಂಗ್ರೆಸ್ ಸರಕಾರ ನಂಬಿದ್ದ ತತ್ವಗಳ ಸೋಲಿನಲ್ಲೇ ಇಂಥ ತತ್ವಗಳ ಹುಟ್ಟು ಮತ್ತು ಬೆಳವಣಿಗೆಯ ಬೀಜಗಳಿದ್ದವು ಅನಿಸುತ್ತದೆ.

೧೯೪೭ರಿಂದ ೧೯೭೦ರ ಮಧ್ಯಭಾಗದವರೆಗೆ ಚಾಲ್ತಿಯಲ್ಲಿದ್ದ ದೇಶ ಕಟ್ಟುವ ಬ್ರಹತ್ ಯೋಜನೆಗಳು ಕ್ರಮೇಣ ಸಮಸ್ಯೆಗಳ ಆಗರವಾಗತೊಡಗಿದವು. ಸಾರ್ವಜನಿಕ ರಂಗದ ಉದ್ಯಮಗಳು ನಷ್ಟ ತಡೆಯಲಾರದ ಸ್ಥಿತಿಗೆ ತಲುಪಿದ್ದವು. ಅಲ್ಲಿನ ದೌರ್ಬಲ್ಯಗಳು ಮತ್ತು ಸೋಲು ಪರ್ಯಾಯ ಯೋಜನೆಗಳತ್ತ, ಮಾರ್ಗಗಳತ್ತ ನೋಡುವಂತೆ ಮಾಡಿತ್ತು. ಇದು ಹಿಂದೂತ್ವದ ಬೆಳವಣಿಗೆಗೆ ಪ್ರೇರಕವಾಗಿ ಒದಗಿತು. ಗಮನಿಸಿ ನೋಡಿ, ಆರ್.ಎಸ್.ಎಸ್ ೧೯೨೫ರಿಂದ ಏನು ಹೇಳುತ್ತಿದೆಯೋ ಅದನ್ನೇ ಇವತ್ತಿಗೂ ಹೇಳುತ್ತ ಬಂದಿದೆ. ಅದರ ರೀತಿ ನೀತಿಗಳಲ್ಲಿ, ತತ್ವಗಳಲ್ಲಿ ಏನೂ ಬದಲಾವಣೆಯಾಗಿಲ್ಲ. ಆಗಿರುವುದು ನೆಹರೂ ಆದರ್ಶಗಳ ಸೋಲಿನ ಹಿನ್ನೆಲೆಯಲ್ಲಿ ಅದು ತನ್ನ ಅವೇ ಹಳೆಯ ತತ್ವಗಳಲ್ಲಿ ಮಾಡಿಕೊಂಡ ಪುನರ್ನವೀಕರಣ, ದೃಢೀಕರಣ ಅಷ್ಟೇ. ಆದರೆ ಕಾಂಗ್ರೆಸ್ಸಿನ ಸರಕಾರ ಅವಲಂಬಿಸಿದ ತತ್ವಗಳ, ಯೋಜನೆಗಳ ಅವನತಿಯಾಗಿರುವುದು, ಅದರ ಆದರ್ಶ, ಅದರ ಪ್ರಣಾಳಿಕೆ ಎಲ್ಲವೂ ಸೋತಿರುವುದು ನಿಜ. ಆದರೆ ಇದು ಬಿಜೆಪಿಯ ಉತ್ಕರ್ಷಕ್ಕೆ, ಹಿಂದೂತ್ವದ ಉನ್ನತಿಗೆ ಕಾರಣವಾಗಲಿಲ್ಲ ಎಂಬುದನ್ನು ನಾವು ಗಮನಿಸಬೇಕು. ಬಿಜೆಪಿಯ ಉನ್ನತಿಗೆ, ಹಿಂದೂತ್ವದ ಪರಿಕಲ್ಪನೆ ಮುಂಚೂಣಿಗೆ ಬರಲು ಕಾರಣವಾದದ್ದು ನಮ್ಮ ಸಾಮಾಜಿಕ ಆರ್ಥಿಕ ರಂಗಗಳಲ್ಲಿ ನೆಹರೂ ಮತ್ತು ಕಾಂಗ್ರೆಸ್‌ನ ಅಭಿವೃದ್ಧಿಪರ ಪರಿಕಲ್ಪನೆಗಳು ಹೀನಾಯವಾಗಿ ಸೋತಿದ್ದು.

ನೆಹರೂ ಏನು ಹೇಳಿದ್ದರು? ಒಂದು, ಅಲಿಪ್ತ ನೀತಿ. ಇವತ್ತು ಇದು ಎಲ್ಲಿದೆ? ಯಾರಿಗೆ ಬೇಕಿದೆ ಇದು ಇವತ್ತು? ಎರಡನೆಯದು, ಸಮಾಜವಾದ. ಸಾಮಾಜಿಕ ನ್ಯಾಯ. ಇಂದು ಇದು ಪ್ರಸ್ತುತವಾಗಿ ಉಳಿದಿದೆ ಅನಿಸುತ್ತದೆಯೆ ನಿಮಗೆ? ಸಮಾಜವಾದ ಎಲ್ಲಿದೆ ಇವತ್ತು? ಸಮಾಜವಾದದ ಪರಿಕಲ್ಪನೆ ಏನಿತ್ತು, ಅದು ಇವತ್ತು ಏನಾಗಿದೆ ಎಂಬುದನ್ನು ಸ್ವಲ್ಪ ಗಮನಿಸಿ. ಇನ್ನು ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ನಿಲುವು ಅವರ ಮೂರನೆಯ ಮತ್ತು ನಾಲ್ಕನೆಯ ತತ್ವ ಆಗಿತ್ತು. ಸರಿ, ಇವೆರಡನ್ನೂ ಬಿಜೆಪಿ ಮತ್ತು ಆರ್.ಎಸ್.ಎಸ್ ತನ್ನದೇ ಆದ ರೀತಿಯಲ್ಲಿ ಅಳವಡಿಸಿಕೊಂಡು ಅವಕ್ಕೆ ತನ್ನದೇ ಆದ ಹೊಸ ಅರ್ಥ ಮತ್ತು ಪರಿಕಲ್ಪನೆಗಳನ್ನು ಕೊಡುತ್ತಿದೆ.

ಬಹುಸಂಖ್ಯಾತರ ಆಶೋತ್ತರಗಳೇ ಪ್ರಜಾಪ್ರಭುತ್ವದ ಆಶೋತ್ತರಗಳು ಎಂಬುದೇ ಆ ಅರ್ಥ ಮತ್ತು ಪರಿಕಲ್ಪನೆ. ಯಾರು ಈ ಬಹುಸಂಖ್ಯಾತರು? ಖಂಡಿತವಾಗಿಯೂ ಹಿಂದೂಗಳೇ. ಸರಿ. ಹಿಂದೂಗಳ ಆಶೋತ್ತರಗಳಿಗೆ ಸರಿಯಾಗಿ ಇಲ್ಲಿರುವ ಉಳಿದವರೂ ಇರಬೇಕಾಗುತ್ತದೆ ಮತ್ತು ಹಾಗೆ ಇರುವುದು, ಇರುವಂತೆ ಮಾಡುವುದೇ ಪ್ರಜಾಪ್ರಭುತ್ವ ಮತ್ತು ಸೆಕ್ಯುಲರಿಸಂ ಎನ್ನುತ್ತದೆ ಇದು.

ಏನು ಬಹುಸಂಖ್ಯಾತ ನಿಲುವು ಎಂದರೆ? ಬಹುಸಂಖ್ಯಾತ ನಿಲುವಿಗೆ ಮಾನ್ಯತೆ ಸಿಗಬೇಕಾದರೆ ಅದು ಯಾವತ್ತಿಗೂ ಸ್ಥಿರವಾದ ಒಂದು ಸಂಗತಿಯೊಂದಿಗೆ ತಳುಕು ಹಾಕಿಕೊಂಡಿರುವಂತಿಲ್ಲ. ಕಾಲ-ದೇಶದ ಹಿನ್ನಲೆಯಲ್ಲಿ, ಸಂದರ್ಭ ಮತ್ತು ಅಗತ್ಯಗಳಿಗೆ ತಕ್ಕಂತೆ ಬದಲಾಗಬಲ್ಲ ಮೆಜಾರಿಟಿ ನಿಲುವು ಬಹುಸಂಖ್ಯಾತ ನಿಲುವು ಎನ್ನಬಹುದಾದ ನಿಲುವಿನ ಪ್ರಧಾನ ಗುಣವಾಗಿರಬೇಕು. ಈ ಬಹುಸಂಖ್ಯಾತ ನಿಲುವು ಸದಾ ಕಾಲಕ್ಕೂ ಸ್ಥಿರವಾದ ಒಂದು ವರ್ಗದ ಹಿಡಿತದಲ್ಲಿರುವುದಾದರೆ ಅದಕ್ಕೆ ಬೆಲೆಯಿಲ್ಲ.

ಗಂಡಸರ ಬಹುಸಂಖ್ಯಾತತನ ಎಂಬುದು ಹೆಂಗಸರನ್ನು ತುಳಿಯುವುದಕ್ಕೆ ಸಕಾರಣ ಬಹುಮತವಾಗುವುದಾದರೆ ಅದು ಎಂದಾದರೂ ಬದಲಾಗುವುದಿದೆಯೆ? ಗಂಡಸರು ಯಾವತ್ತಿದ್ದರೂ ಗಂಡಸರಾಗಿಯೇ ಇರುತ್ತಾರೆ. ಅದೇ ನಿಲುವುಗಳ ಮಾತು ಬೇರೆ. ಅವು ಬದಲಾಗುತ್ತಿರುತ್ತವೆ. ನಿನ್ನೆ ನಿಮಗಿದ್ದ ನಿಲುವು ಇವತ್ತು ಬದಲಾಗಬಹುದು ಅಥವಾ ಬೇರೆ ಬೇರೆ ವಿಚಾರಗಳ ವಿಷಯದಲ್ಲಿ ನಿಮ್ಮ ನಿಲುವು ವಿಭಿನ್ನವಾಗಿರಲು ಸಾಧ್ಯ. ಆದರೆ ಸ್ಥಿರವಾದ ವಸ್ತುಸ್ಥಿತಿಗಳಿಗೆ ನಿಮ್ಮ ಬಹುಸಂಖ್ಯಾತ ಸ್ಥಿತಿ ತಳುಕು ಹಾಕಿಕೊಂಡಿದ್ದೇ ಆದಲ್ಲಿ ಅದು ಎಂದೆಂದಿಗೂ ಸ್ಥಿರವಾಗಿಯೇ ಉಳಿಯುತ್ತ ಇನ್ನೊಂದು ಕಡೆಯ ಅಲ್ಪಸಂಖ್ಯಾತರಿಗೆ ಎಂದೆಂದಿಗೂ ಅನ್ಯಾಯವಾಗುತ್ತಿರುವುದೇ ನ್ಯಾಯ ಎಂಬ ನಿಲುವಿಗೆ ನಾವು ಬರಬೇಕಾಗುತ್ತದೆ. ಇಂಥದನ್ನು ಒಪ್ಪಲು ಸಾಧ್ಯವೆ? ಪ್ರಜೆಗಳ ಬಹುಸಂಖ್ಯಾತತನ ಬದಲಾಗಬಹುದಾದ ಚಲನಶೀಲ ಚರ ವಿದ್ಯಮಾನ ಆಗಿರಬೇಕಿರುವುದು ಈ ಕಾರಣಕ್ಕೆ. ಆಗ ಮಾತ್ರ ಅದು ಪ್ರಜಾಪ್ರಭುತ್ವ ಆಗುತ್ತದೆ. ಅದಕ್ಕೆ ಬದಲಾಗಿ ಸಾರ್ವಕಾಲಿಕವಾಗಿ ಒಂದೇ ವರ್ಗದ ಆಸ್ತಿಯಾದ ಬಹುಸಂಖ್ಯಾತ ನಿಲುವೇ ಪ್ರಭುತ್ವವಾಗುವುದಾದರೆ ಅದನ್ನು ಪ್ರಜಾಪ್ರಭುತ್ವ ಎನ್ನಲಾದೀತೆ? ಹಿಂದೂ ರಾಷ್ಟ್ರೀಯತೆಯ ಹಿಂದೆ ಇರುವ ಪರಿಕಲ್ಪನೆ ಇಂಥದು. ಹಿಂದೂಗಳ ಬಹುಸಂಖ್ಯಾಕ ಪ್ರಜಾಪ್ರಭುತ್ವದಲ್ಲಿ ಹಿಂದೂಗಳಲ್ಲದವರಿಗೆ ಯಾವ ಸ್ಥಾನವೂ, ಧ್ವನಿಯೂ ಇಲ್ಲ.

ಎಂಎ ವಿದ್ಯಾರ್ಥಿಗಳನ್ನೇ ಒಮ್ಮೆ ಕೇಳಿದೆ, ನಿಮಗೆ ಅಲ್ಪಸಂಖ್ಯಾತರ ನಿಲುವಿಗೆ ಬೆಲೆ ಇದೆ, ಅವುಗಳನ್ನು ಗೌರವಿಸಬೇಕು ಅನಿಸುತ್ತದೆಯೆ ಎಂದು. ಸ್ಪಷ್ಟವಾಗಿ ಇಲ್ಲ ಎನ್ನುವ ಉತ್ತರ ಸಿಕ್ಕಿತು! ಅಲ್ಪಸಂಖ್ಯಾತರ ಕಡೆ ಗಮನ ನೀಡಬೇಕಾದುದಿಲ್ಲ, ಬಹುಮತದ ಮಾರ್ಗ ಸರಿ ಎಂಬ ನಿಲುವು ಅವರಲ್ಲಿತ್ತು. ಆಗ ನಾನು ಅವರಿಗೆ ಬೇರೆ ರೀತಿಯ ಪ್ರಶ್ನೆಗಳನ್ನು ಕೇಳಬೇಕಾಯಿತು. ನಿಮಗೆ ಮಕ್ಕಳ ಬಗ್ಗೆ, ಅವರ ಅಗತ್ಯಗಳ ಬಗ್ಗೆ ನಾವು ವಿಶೇಷ ಗಮನ ನೀಡುವ ಅಗತ್ಯ ಇದೆ ಅನಿಸುತ್ತದೆಯೆ? ಹೌದು, ಇದೆ. ಹೆಂಗಸರ ಬಗ್ಗೆ ಕೆಲವೊಂದು ಸಂಗತಿಗಳಲ್ಲಿ ವಿಶೇಷವಾದ ಗಮನ ಕೊಡುವುದು ಅಗತ್ಯವಿದೆ ಅನಿಸುತ್ತದೆಯೆ? ಹೌದು, ಅಗತ್ಯ ಇದೆ. ಹಾಗೆಯೇ ಅಂಗವಿಕಲರ ಬಗ್ಗೆ, ವಯಸ್ಸಾದವರ ಬಗ್ಗೆ ಎಂದೆಲ್ಲ ಕೇಳುತ್ತ ಹೋದೆ. ಎಲ್ಲ ಪ್ರಸಂಗದಲ್ಲೂ ಅವರಿಗೆ ಅಂಥವರ ವಿಚಾರದಲ್ಲಿ ತಾವು ವಿಶೇಷ ಗಮನ ನೀಡುವುದು, ಅಗತ್ಯ ಸೌಕರ್ಯ ನಿರ್ಮಿಸಿಕೊಡುವುದು, ಸಹಾಯ ಸಹಕಾರ ನೀಡುವುದು ಸರಿ ಮತ್ತು ಅಗತ್ಯ ಅನಿಸುತ್ತಿತ್ತು. ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಇರುವ ತಪ್ಪು ಪರಿಕಲ್ಪನೆಯನ್ನು ಕೂಡ ನಾವು ಎಚ್ಚರದಿಂದ ಗಮನಿಸಬೇಕಿದೆ.

ಎಲ್ಲಾ ಕೋಮುವಾದಗಳೂ ಸಮಾನವಾಗಿ ಕೆಟ್ಟವು ಮತ್ತು ಕೇಡುತರುವಂಥವು. ಅದು ಹಿಂದೂ ಕೋಮುವಾದವಿರಲಿ ಮುಸ್ಲಿಂ ಕೋಮುವಾದವಿರಲಿ ಅಥವಾ ಯಹೂದಿಗಳ ಕೋಮುವಾದವೇ ಇರಲಿ. ಎಲ್ಲವೂ ಸಮಾನವಾಗಿ ಅಪಾಯಕಾರಿ. ಆದರೆ ಬಹುಸಂಖ್ಯಾತರ ಕೋಮುವಾದ ಇದೆಯಲ್ಲ, ಅದು ಹೆಚ್ಚು ಅಪಾಯಕಾರಿ ಮತ್ತು ವಿಧ್ವಂಸಕ. ಹಾಗಾಗಿ ಆ ದೃಷ್ಟಿಯಿಂದ ಅಲ್ಪಸಂಖ್ಯಾತರ ಕೋಮುವಾದ ಸಹ್ಯ ಎನ್ನಬೇಕಾಗುತ್ತದೆ. ಇದನ್ನು ಸ್ವಲ್ಪ ವಿವರಿಸಬೇಕಿದೆ.

ಹಿಂದೂ ಕೋಮುವಾದ ಎಂಬುದು ಇಲ್ಲಿ ಬಹುಸಂಖ್ಯಾತ ಕೋಮುವಾದವಾಗಿದೆ. ಇದು ರಾಷ್ಟ್ರೀಯತೆಯನ್ನು ತನಗೆ ಅರೋಪಿಸಿಕೊಂಡಿರುವುದನ್ನು ಗಮನಿಸಿ. ೧೯೪೭ರ ನಂತರ ಹಿಂದೂ ಕೋಮುವಾದಿಗಳ ಸಂಘಟನೆಗಳು ರಾಷ್ಟ್ರವ್ಯಾಪಿ ಜಾಲವಾಗಿ ಹರಡಿದೆ. ಆದರೆ ಅದೇ ಅಲ್ಪ ಸಂಖ್ಯಾತರ ಕೋಮುವಾದಕ್ಕೆ ಇಂಥ ಜಾಲವಿಲ್ಲ. ಅದು ಏನಿದ್ದರೂ ಸ್ಥಳೀಯ ಜಗಳಗಳಲ್ಲಿ, ಅವರವರ ಮಧ್ಯಸ್ತಿಕೆಯಲ್ಲಿ ಮುಗಿದುಬಿಡುತ್ತದೆ.

ರಾಷ್ಟ್ರೀಯತೆಯಲ್ಲಿ ಏನಿದೆ ತಪ್ಪು? ಸಾವರ್ಕರ್ ಹೇಳಿದ್ದೇನು, ಹಿಂದೂಗಳನ್ನು ಒಗ್ಗೂಡಿಸಿ. ಹಿಂದೂಗಳನ್ನು ಹೋರಾಟಕ್ಕೆ ಸಜ್ಜುಗೊಳಿಸಿ. ಆಗ ದೇಶ ಸದೃಢವಾಗುತ್ತದೆ. ಹಿಂದೂಗಳೇ ಬಹುಸಂಖ್ಯಾತರು. ಅವರು ಬಲಶಾಲಿಯಾದರೆ ದೇಶ ಬಲಶಾಲಿಯಾಗುವುದರಲ್ಲಿ ಸಂದೇಹವೇ ಇಲ್ಲ. ಇದರಲ್ಲಿ ಏನಿದೆ ತಪ್ಪು?

ತಪ್ಪು ಈ ತತ್ವದಲ್ಲಿಲ್ಲ. ಇದನ್ನು ಸಾಧಿಸಲು ಬಳಸುವ ಮಾರ್ಗೋಪಾಯಗಳಲ್ಲಿದೆ. ಹಿಂದೂಗಳನ್ನು ಒಗ್ಗೂಡಿಸಲು ಏನು ಮಾಡಬೇಕು ಹಾಗಾದರೆ? ಅದಕ್ಕೆ ಎರಡೇ ಮಾರ್ಗಗಳಿರುವುದು.

ಮೊದಲನೆಯದು ಸರಳವಾದದ್ದು, ನೇರವಾದದ್ದು ಮತ್ತು ನಿರಪಾಯಕಾರಿಯಾದದ್ದು. ಹಿಂದೂ ಧರ್ಮದಲ್ಲೇ ಆಂತರಿಕವಾಗಿ ಲಭ್ಯವಿರುವ ಆ ಧರ್ಮದ ಎಲ್ಲಾ ವರ್ಗಕ್ಕೂ ಸಮಾನವಾಗಿ ಅನ್ವಯವಾಗಬಲ್ಲ, ಸಮಾನತೆಯನ್ನು ನೀಡುವ ಯಾವುದಾದರೂ ಒಂದು ತಿರುಳನ್ನು ಹಿಡಿದು ಅದರ ಎಳೆಯಲ್ಲಿ ಅವರೆಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುವುದು.

ಇದು ಸಾಧ್ಯವೇ ಇರಲಿಲ್ಲ! ಯಾಕೆಂದರೆ, ಹಿಂದೂ ಧರ್ಮದಲ್ಲೆ ಅಂಥ ಎಲ್ಲರಿಗೂ ಸಮಾನವಾದ ಒಂದು ತಿರುಳಿನಂಥದು ಇದ್ದರಲ್ಲವೆ ಅದನ್ನು ಒಗ್ಗೂಡಿಸಲು ಬಳಸುವುದು? ಜಾತೀಯತೆಯನ್ನು ಬಿಟ್ಟರೆ ಹಿಂದೂ ಧರ್ಮವೇ ಇಲ್ಲದಂಥ ಪರಿಸ್ಥಿತಿ ಇರುವಾಗ ಒಗ್ಗಟ್ಟಿನ ಎಳೆ ಎಲ್ಲಿತ್ತು?

ಆಗ ಎರಡನೆಯ ಹಾದಿ ಅನಿವಾರ್ಯವಾಗುತ್ತದೆ. ಆಂತರಿಕವಾಗಿ ಸಿಗದಿದ್ದರೆ ಹಿಂದೂ ಧರ್ಮದ ಹೊರಗೆ ಎಲ್ಲಾ ಹಿಂದೂಗಳನ್ನೂ ಒಂದೇ ನೆಲೆಯಡಿ ತರಬಲ್ಲ ಯಾವುದಾದರೂ ಸಂಗತಿಯನ್ನು ಹುಡುಕಿಕೊಳ್ಳುವುದು ಆ ಎರಡನೆಯ ಮಾರ್ಗೋಪಾಯ. ಅದು ಯಾವುದು? ಅವರಿಗೆಲ್ಲ ಏನನ್ನಾದರೂ ದ್ವೇಷಿಸಲಿಕ್ಕೆ ಒಂದು ಆಕೃತಿಯನ್ನು ಕಲ್ಪಿಸಿಕೊಡುವುದು! ಅವರಿಗೆ ಮುಸ್ಲಿಮರನ್ನು ದ್ವೇಷಿಸಲಿಕ್ಕೆ ಕಲಿಸುವುದು ಆ ಹಾದಿ. ಮುಸ್ಲಿಮರು ಹಿಂದೂಗಳನ್ನು ತುಳಿಯುತ್ತಿದ್ದಾರೆಂದೂ ಅವರು ತಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆಂದೂ ಹುಯಿಲಿಡುವುದು.

ಆದರೆ ಇದು ಕೂಡ ಕಷ್ಟವೇ ಆಗಿತ್ತು. ಯಾಕೆಂದರೆ, ಅಲ್ಪ ಸಂಖ್ಯಾಕರೂ, ಬಡವರೂ, ಹೊಟ್ಟೆಪಾಡೇ ಸಮಸ್ಯೆಯಾಗಿರುವ ತಮ್ಮದೇ ಊರಿನ ಮುಸ್ಲಿಮರನ್ನು ನಿತ್ಯ ನೋಡುತ್ತಿರುವ ಜನರಿಗೆ ಅವರು ಮೇಲೇರಿ ಬರುತ್ತಾರೆ, ದೌರ್ಜನ್ಯ ಮಾಡುತ್ತಾರೆ ಎಂದರೆ ಯಾರು ನಂಬುತ್ತಾರೆ? ವಸ್ತುಸ್ಥಿತಿಯ ಅರಿವು ಇರುವಾಗ ಇಂಥ ಸುಳ್ಳುಗಳನ್ನು ನಂಬಲಾಗುವುದಿಲ್ಲ. ಆಗ ಇವತ್ತು ನಾವು ಕೇಳುತ್ತಿರುವಂಥ ಆರೋಪಗಳ ಅಗತ್ಯ ಅನಿವಾರ್ಯವಾಗುತ್ತದೆ. ಏನವು?

ಸರಕಾರ ಮುಸ್ಲಿಮರನ್ನು ತುಷ್ಟೀಕರಿಸುತ್ತಿದೆ. ಮುಸ್ಲಿಮರಿಗೆ ಪರವಾಗಿರುವ ಸರಕಾರ, ಅವರ ಮನವೊಲಿಸಿಕೊಳ್ಳಲು ಏನೇನೋ ಮಾಡುತ್ತಿದೆ. ಇದು ವರ್ತಮಾನದ ತಿರುಚುವಿಕೆಯಾದರೆ ಭೂತ ಮತ್ತು ಭವಿಷ್ಯತ್ ಕಾಲದ ವಿದ್ಯಮಾನಗಳ ತಿರುಚುವಿಕೆ ಕೂಡ ನಡೆಸಲಾಗುತ್ತಿದೆ. ಅವುಗಳಲ್ಲಿ ಒಂದು, ಈಗಲ್ಲದಿದ್ದರೂ ಹಿಂದೆ, ಮುಸ್ಲಿಮರದ್ದೇ ಪ್ರಭುತ್ವ ಇದ್ದ ಕಾಲದಲ್ಲಿ ಅವರು ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ, ಹಿಂದೂಗಳ ದೇವಾಲಯ ಪುಡಿಮಾಡಿದ್ದಾರೆ, ಹಿಂದೂ ಹೆಂಗಸರನ್ನು ಕೆಡಿಸಿದ್ದಾರೆ, ಮತಾಂತರ ಮಾಡಿದ್ದಾರೆ ಎಂಬುದನ್ನು ಕೆದಕಿ, ಆ ಮೂಲಕ ಇವತ್ತಿನ ಹಿಂದೂ ಮನಸ್ಥಿತಿಯನ್ನು ಕೆಡಿಸಿ, ಅವರನ್ನು ಮುಸ್ಲಿಂ ದ್ವೇಷದ ತಳಹದಿಯ ಮೇಲೆ ಒಗ್ಗೂಡಿಸುವುದು. ಇನ್ನೊಂದು, ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ. ಇದೇ ಗತಿಯಲ್ಲಿ ಅವರ ಜನಸಂಖ್ಯೆ ವೃದ್ಧಿಯಾದಲ್ಲಿ ಇನ್ನು ಹತ್ತು ಹದಿನೈದು ವರ್ಷಗಳಲ್ಲೇ ಈ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಸಾಧ್ಯತೆ ಇದೆ ಎಂಬ ಭೀತಿ ಹರಡುವುದು.

ವರ್ಗಸಂಘರ್ಷದ ಸಮಯದಲ್ಲಿ ಯುರೋಪಿನಲ್ಲಿ ಇಂಥದೇ ಆರೋಪಗಳು, ವದಂತಿಗಳು ಕೆಲಸ ಮಾಡಿದ್ದನ್ನು ನಾವು ಗಮನಿಸಬಹುದು. ಕರಿಯರ ಸಂಖ್ಯೆ ಹೆಚ್ಚುತ್ತಿದೆ ಎಂಬ ಆರೋಪ, ವಲಸೆಗಾರರ ಸಂಖ್ಯೆ ಹೆಚ್ಚುತ್ತಿದೆ ಎಂಬ ಆರೋಪಗಳೆಲ್ಲ ಇದೇ ಬಗೆಯವು.

ಹಿಂದೆ ಅವರು ನಮ್ಮನ್ನು ಆಳಿದರು, ಮೇಲ್ಗೈ ಸಾಧಿಸಿದ್ದರು ಎಂಬುದನ್ನೇ ಇವತ್ತಿನ ನಮ್ಮ ದುಃಖ, ದುಮ್ಮಾನಗಳಿಗೆ ಕಾರಣ ಎಂಬಂತೆ ಬಿಂಬಿಸುವುದು ಮತ್ತು ಅಂದಿನ ತಪ್ಪುಗಳನ್ನು ಇಂದು ಸರಿಪಡಿಸುವ ಕಾರ್ಯಕ್ರಮಗಳನ್ನು ಪ್ರೇರೇಪಿಸುವುದು. ಬಾಬರಿ ಮಸೀದಿ ಘಟನೆ ಇದಕ್ಕೊಂದು ಉದಾಹರಣೆ.

ಸಮಾನ ಕಾನೂನು ಸಂಹಿತೆಯ ಜಾರಿಗಾಗಿ ನಡೆದ ಆಗ್ರಹ ಕೂಡ ಇದೇ ಬಗೆಯದ್ದು. ಏಕೆ ಮತ್ತು ಯಾರಿಗೆ ಅಗತ್ಯವಾಗಿದ್ದ ಸಂಗತಿ ಈ ಸಮಾನ ಕಾನೂನಿನ ವ್ಯವಸ್ಥೆ? ಎಲ್ಲ ಧರ್ಮೀಯರಿಗೂ ವೈಯಕ್ತಿಕ ಕಾನೂನಿನ ಅನುಕೂಲ ಇರುವಾಗ ಅದನ್ನೇಕೆ ಇವರು ಪ್ರಮುಖವಾಗಿ ಎತ್ತಿಕೊಂಡರು? ಮತ್ತೆ ಇವತ್ತು ಯಾಕೆ ಅದನ್ನು ಹೆಚ್ಚಾಗಿ ಒತ್ತಾಯಿಸುತ್ತಿಲ್ಲ ಇವರು? ಇವರ ಕಾಳಜಿ ಎಷ್ಟರ ಮಟ್ಟಿಗೆ ನೈಜವಾಗಿತ್ತು ಎನ್ನುವುದನ್ನು ಇದು ತೋರಿಸುವುದಿಲ್ಲವೆ?

ಕೇವಲ ಮುಸ್ಲಿಮರ ಭಾವನೆಗಳನ್ನು ಕೆರಳಿಸುವ ಉದ್ದೇಶವಿತ್ತು ಅದರಲ್ಲಿ. ಇವರ ತ್ರಿಶೂಲ ಸಂಕೇತಿಸುವ ಮೂರು ಪ್ರಮುಖ ಅಜೆಂಡಾಗಳೇ ಕಾಶ್ಮೀರ, ಸಮಾನ ಕಾನೂನು ಜಾರಿ ಮತ್ತು ಬಾಬರೀ ಮಸೀದಿಯ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ.

ಇಷ್ಟಾಗಿಯೂ ಸಂಘ ಪರಿವಾರದ ಅಹವಾಲಿಗೆ ಜನರಲ್ಲಿ ಪ್ರತಿಸ್ಪಂದನವಿದೆ. ಇದು ಮಧ್ಯಮವರ್ಗದಲ್ಲಿದೆ ಎನ್ನಲಾಗುತ್ತದೆ. ಆದರೆ ಈ ಮಧ್ಯಮವರ್ಗ ಎಂದರೆ ಯಾವುದು ಎನ್ನುವಲ್ಲಿ ತಪ್ಪುಕಲ್ಪನೆ ಇದೆ. ಸಾಧಾರಣವಾಗಿ ಮೇಲ್ವರ್ಗದ ೧೦-೨೦% ಮಂದಿ ಮತ್ತು ತೀರಾ ಕೆಳವರ್ಗದ ೩೫-೪೦% ಮಂದಿಯನ್ನು ಹೊರತು ಪಡಿಸಿದ ವರ್ಗ ಮಧ್ಯಮವರ್ಗ ಎಂದು ತಿಳಿಯಲಾಗುತ್ತದೆ. ಆದರೆ ಸಂಘ ಪರಿವಾರದ ಆಶಯಗಳನ್ನು ಪ್ರತಿಸ್ಪಂದಿಸುತ್ತಿರುವ ಮಧ್ಯಮವರ್ಗ ಇದಲ್ಲ. ಅದು ಕೆನೆಪದರದ ೧೫-೨೦% ಮಂದಿ. ಇವರು ಹೆಚ್ಚು ಹೆಚ್ಚು ಅತಂತ್ರರೂ, ಆತಂಕದಲ್ಲಿರುವವರೂ, ಸಿನಿಕರೂ ಆದ ಮೇಲ್ವರ್ಗದ ಜನ.

ಇವರು ಈ ದೇಶದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗವನ್ನೂ ಸೇರಿ ಇಲ್ಲಿನ ಆಡಳಿತಶಾಹಿ, ವ್ಯಾಪಾರ ವ್ಯವಹಾರ, ಅಭಿವೃದ್ಧಿ, ಎಲ್ಲವನ್ನೂ ನಿಯಂತ್ರಿಸಬಲ್ಲ ಶಕ್ತಿ ಹೊಂದಿದವರು. ಆದರೆ ಈ ವರ್ಗ ಒಂದು ವಿಚಾರದಲ್ಲಿ ಮಾತ್ರ ಯಾವುದೇ ಹಿಡಿತ ಹೊಂದಲು ಸಾಧ್ಯವಾಗಿಲ್ಲ. ಅದು ಚುನಾವಣಾ ಪ್ರಕ್ರಿಯೆ. ಇದೇ ಈ ವರ್ಗದ ಮೂಲಭೂತ ಆತಂಕಕ್ಕೆ, ಅಭದ್ರ ಸ್ಥಿತಿಗೆ ಕಾರಣ. ಇವರಿಗೆ ಈ ದೇಶದ ಪ್ರಜಾಪ್ರಭುತ್ವದ ಸ್ವಭಾವ, ಅದು ಕೆಲಸ ಮಾಡುವ ಬಗೆ ಅರ್ಥವಾಗಿಲ್ಲ ಮತ್ತು ಅದು ಇವರ ಹಿಡಿತಕ್ಕೆ ಸಿಕ್ಕಿಲ್ಲ. ಜನಸಾಮಾನ್ಯರು ಚುನಾವಣೆಯಲ್ಲಿ ಯಾವರೀತಿಯಲ್ಲಿ ಪ್ರತಿಸ್ಪಂದಿಸುತ್ತಾರೆ, ಹೇಗೆ ತಮ್ಮ ನಿರ್ಣಯ ನೀಡುತ್ತಾರೆ ಎಂಬುದು ಇವರಿಗೆ ಒಂದು ಬಗೆಯ ಭಯ, ಅತಂತ್ರಸ್ಥಿತಿ, ಆತಂಕ ತರುತ್ತಿರುತ್ತದೆ. ಇದರಿಂದ ಪಾರಾಗುವುದಕ್ಕಾಗಿಯೇ ಇವರು ಈ ಹಿಂದೂತ್ವದ ರಕ್ಷಣೆಗೆ ಒಳಪಡಲು ಬಯಸುತ್ತಾರೆ. ಹಿಂದೂತ್ವ ಇಲ್ಲಿ ಹೀಗೆ ಇವರ ಅಸ್ತ್ರವಾಗುತ್ತದೆ.

ರಾಜಕೀಯ ಪಕ್ಷಗಳು ಯಾವತ್ತೂ ಮೇಲ್ವರ್ಗವನ್ನೇ ಓಲೈಸುತ್ತ ಬಂದಿರುವಂಥವು. ಅವುಗಳಿಗೆ ನಿಜವಾಗಿ ಬಡಜನತೆಯ ಬಗ್ಗೆ, ಶ್ರೀಸಾಮಾನ್ಯನ ಬಗ್ಗೆ ಯಾವುದೇ ಕಾಳಜಿ ಇಲ್ಲ.

ಈ ಹಿನ್ನೆಲೆಯಲ್ಲಿ ಬಿಜೆಪಿ ಕರೆ ನೀಡುತ್ತದೆ. ಭಾರತ ಬಲಿಷ್ಠ ರಾಷ್ಟ್ರವಾಗಬೇಕು. ಸರಿ, ಯಾರು ಅಲ್ಲವೆನ್ನುತ್ತಾರೆ? ಭಾರತ ಬಲಿಷ್ಠ ರಾಷ್ಟ್ರವಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಭಾರತ ಸಾಂಸ್ಕೃತಿಕವಾಗಿ ಭವ್ಯವಾಗಬೇಕೆಂದು ಅವರು ಕರೆ ಕೊಡುತ್ತಾರೆ. ಖಂಡಿತ. ಯಾರಿಗೆ ಇದೆಲ್ಲ ತಪ್ಪು, ಸರಿಯಲ್ಲ ಅನಿಸುತ್ತದೆ? ಆದರೆ, ಯೋಚಿಸಬೇಕಾಗಿರುವುದು, ಈ ರಾಷ್ಟ್ರ ಎಂದು ಇವರು ಏನನ್ನು ಹೇಳುತ್ತಿದ್ದಾರೆ? ಇವರ ಸಂಸ್ಕೃತಿಯ ಪರಿಕಲ್ಪನೆ ಏನು?

ಸಾಂಸ್ಕೃತಿಕ ರಾಷ್ಟ್ರೀಯತೆ ಎಂದರೆ ಏನು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇವರ ಸಂಸ್ಕೃತಿ ಎಂದರೆ ಹಿಂದೂತ್ವ ಮತ್ತು ಸ್ಥಿರವಾದ ಮೌಲ್ಯಗಳ ಸಂಸ್ಕೃತಿ.

ಏನು ನಿಜವಾಗಿ ಸಂಸ್ಕೃತಿ ಎಂದರೆ? ಸಂಸ್ಕೃತಿಗೆ ಐದು ಪ್ರಮುಖ ಲಕ್ಷಣಗಳಿರಬೇಕು. ಅದಿಲ್ಲದ್ದು ಸಂಸ್ಕೃತಿಯಾಗಲಾರದು, ನೆನಪಿಡಿ. ಸ್ಥಿರವಾದ ಮೌಲ್ಯಗಳ ಹಿಂದೂತ್ವವನ್ನು ಇವರು ಈ ದೇಶದ ಸಂಸ್ಕೃತಿ ಎಂದು ಬಿಂಬಿಸುವಾಗ ಇದನ್ನು ನಾವು ಅರಿತುಕೊಳ್ಳುವುದು ಅವಶ್ಯವಿದೆ.

ಮೊದಲನೆಯದಾಗಿ, ಸಂಸ್ಕೃತಿ ಮೂಲಭೂತವಾಗಿ ಬಹುಮುಖಿಯಾದದ್ದು. ಒಬ್ಬನೇ ಮನುಷ್ಯನಿಗೆ ಒಬ್ಬ ರೈತನಾಗಿ ತನ್ನದಾದ ಸಂಸ್ಕೃತಿ ಇದೆ. ಹಿಂದೂವಾಗಿ ತನ್ನ ಸಂಸ್ಕೃತಿ ಇದೆ. ಒಬ್ಬ ಒಳ್ಳೆಯ ತಂದೆಯಾಗಿ, ಗಂಡನಾಗಿ, ಕುಟುಂಬದ ಸದಸ್ಯನಾಗಿ ಒಂದು ಸಂಸ್ಕೃತಿ ಇದೆ. ಆತ ಒಂದು ಊರಿಗೆ ಸೇರಿದವನಾಗಿ ಆ ಊರಿನ ನಡಾವಳಿಗೆ ಸೇರಿದ ಸಂಸ್ಕೃತಿ ಇದೆ. ಹುಬ್ಬಳಿಯವನ ಸಂಸ್ಕೃತಿ, ಮೈಸೂರಿನವನ ಸಂಸ್ಕೃತಿ ಎಂಬುದಿದೆ. ಒಬ್ಬ ಅಧ್ಯಾಪಕನಿಗೆ, ವಿದ್ಯಾರ್ಥಿಗೆ, ಒಬ್ಬ ಮೆಕಾನಿಕ್‌ಗೆ ತನ್ನದಾದ ಸಂಸ್ಕೃತಿ ಇದೆ. ಅದನ್ನೆಲ್ಲ ತಿಳಿದುಕೊಳ್ಳದ, ಅದನ್ನೆಲ್ಲ ಅಡಕಗೊಳ್ಳದ ಒಂದೇ ಅಂಶದ ಸಂಸ್ಕೃತಿ ಎಲ್ಲರಿಗೂ ಅನ್ವಯವಾಗುವ ಸಂಸ್ಕೃತಿಯನ್ನು ಸಂಸ್ಕೃತಿ ಎನ್ನಲಾಗದು.

ಎರಡನೆಯದಾಗಿ ಸಂಸ್ಕೃತಿ ಸದಾ ಹೊಸತಿಗೆ ತೆರೆದಿರುವಂಥದ್ದು. ನಮ್ಮಲ್ಲಿ ಎಲೈಟ್ ಸಂಸ್ಕೃತಿ ಎಂಬುದಿದೆ, ತಳ ಮಟ್ಟದ ಸಂಸ್ಕೃತಿ ಇದೆ, ಜನಪ್ರಿಯ ನೆಲೆಯ ಸಂಸ್ಕೃತಿ ಇದೆ, ಸಮೂಹ ಮಾಧ್ಯಮಗಳ ಸಂಸ್ಕೃತಿಗಳಿವೆ, ಸಿನಿಮಾ, ಸಂಗೀತ, ಕ್ರೀಡೆ ಎಲ್ಲಕ್ಕೂ ಸಂಬಂಧಿಸಿದಂತೆ ತಮ್ಮದೇ ಆದ ಸಾಂಸ್ಕೃತಿಕ ಪರಂಪರೆ ಇದ್ದೇ ಇದೆ. ಅದು ಎಲ್ಲದಕ್ಕೂ ತೆರೆದಿರುತ್ತದೆ. ಇದು ಇರಬೇಕಾದ್ದು, ಇದು ಇರಬಾರದ್ದು ಎಂದು ಯಾರೂ ವಿಧಿಸುವಂತಿಲ್ಲ. ಎಲ್ಲವೂ ಇದ್ದರೇ, ಇರುವಾಗಲೇ ಅದು ಸಂಪನ್ನ ಸಂಸ್ಕೃತಿಯಾಗಿರಲು ಸಾಧ್ಯ.

ಮೂರನೆಯದಾಗಿ, ಸಂಸ್ಕೃತಿ ಸಾಮಾನ್ಯವಾಗಿರುತ್ತದೆ. ನಮ್ಮ ನಿಮ್ಮ ಸಾಮಾನ್ಯ ಬದುಕಿನೊಂದಿಗೇ ಅದು ಹರಿಯುತ್ತಿರುತ್ತದೆ. ಅರ್ಥಪೂರ್ಣತೆಯನ್ನೂ, ವೈರುಧ್ಯವನ್ನೂ, ಅಧಿಕೃತತೆಯನ್ನೂ ಅದು ಹೊಂದಿರುತ್ತದೆ.

ನಾಲ್ಕನೆಯದಾಗಿ ಸಂಸ್ಕೃತಿ ಬದಲಾಗುತ್ತಿರುತ್ತದೆ. ಅದು ನಿಂತ ನೀರಲ್ಲ. ಕಾಲಕಾಲಕ್ಕೆ ಅದು ಬದಲಾಗುತ್ತ, ಹೊಸದನ್ನು ಒಳಗೊಳ್ಳುತ್ತ, ಹಳೆಯದನ್ನು, ಅನಗತ್ಯವಾದುದನ್ನು ಬಿಟ್ಟುಕೊಡುತ್ತ ಬದಲಾಗುತ್ತಿರುತ್ತದೆ.

ಐದನೆಯದಾಗಿ ಸಂಸ್ಕೃತಿ ಸದಾ ಬೆಳೆಯುತ್ತಿರುತ್ತದೆ. ಅದು ವಿಸ್ತಾರವಾಗುತ್ತ, ಆಳವಾಗುತ್ತ ಹೋಗುತ್ತದೆ. ಅದು ತನ್ನ ಬೆಳವಣಿಗೆಯನ್ನು, ಬದಲಾವಣೆಯನ್ನು ಒಪ್ಪಿಕೊಳ್ಳುವುದರ ಮೂಲಕವೇ ಸಾಧಿಸುವುದರಿಂದ ಅದು ಸದಾ ಪುರೋಗಾಮಿಯಾಗಿ ಬೆಳೆಯುತ್ತಿರುತ್ತದೆ.

ಹೀಗಿರುತ್ತ ಸಾಂಸ್ಕೃತಿಕ ದೌರ್ಜನ್ಯ ಮತ್ತು ಶೋಷಣೆಗೆ ಅವಕಾಶ ನೀಡುವ ಯಾವುದನ್ನಾದರೂ ಸಂಸ್ಕೃತಿ ಎಂದು ಒಪ್ಪಿಕೊಳ್ಳಲು ಸಾಧ್ಯವೆ? ರಾಷ್ಟ್ರೀಯತೆ ಎಂಬುದು ಪಾರಂಪರಿಕವಾಗಿ ಬರಬೇಕಾದದ್ದು, ಹಿಂದೂಗಳೇ ಅದರ ಒಡೆಯರು ಮತ್ತು ಹಾಗಾಗಿ ಮುಸ್ಲಿಮರು ಹೊರಗಿನವರು, ಅವರಿಗೆ ಈ ದೇಶದಲ್ಲಿ ಯಾವ ಹಕ್ಕೂ ಇರುವುದಿಲ್ಲ ಎನ್ನುವುದನ್ನು ಒಪ್ಪಲು ಸಾಧ್ಯವೆ?

ರಾಷ್ಟ್ರೀಯತೆ ಎಂಬುದು ಒಂದು ಸದಾಕಾಲವೂ ನಡೆಯುತ್ತಲೇ ಇರುವ ಅಭಿಯಾನ. ಅಮೆರಿಕವನ್ನು ಗಮನಿಸಿ. ಅದೃಷ್ಟವಶಾತ್ ಅಲ್ಲಿರುವುದು ವಲಸೆಗಾರ ಸಮಾಜವೇ ಎನ್ನಬಹುದು. ಅದೇ ಹೊರಗಿನಿಂದ ಬಂದಿರುವ ಸಮಾಜ. ಹಾಗಾಗಿಯೇ ಅಲ್ಲಿ ಒಳಗೊಳ್ಳುವ ರಾಷ್ಟ್ರೀಯತೆಯ ಒಂದು ಆರೋಗ್ಯಕರ ಸಮಾಜವಿದೆ. ಹಾಗೆ ಒಳಗೊಳ್ಳುವ ಸಮಾಜ, ರಾಷ್ಟ್ರೀಯತೆ ಅಗತ್ಯ.

ಜಗತ್ತಿನ ಅತ್ಯಂತ ವೈವಿಧ್ಯಮಯ ಸಂಸ್ಕೃತಿಯ, ಭಾಷೆಯ, ಕಲೆಗಳ, ಪರಿಸರದ, ಸುಂದರವಾದ ಈ ನಾಡು ಭಾರತದ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ, ಪ್ರೀತಿ ಇದೆ. ಅನೇಕ ವಿಚಾರಗಳಲ್ಲಿ ಜಗತ್ತಿನ ಇನ್ನೆಲ್ಲೂ ಇಲ್ಲದ ಸಮೃದ್ಧಿ ಇಲ್ಲಿದೆ. ಅದನ್ನೆಲ್ಲ ಉಳಿಸಿ ಬೆಳೆಸುವ ಹೊಣೆಗಾರಿಕೆಯೂ ನಮ್ಮ ನಿಮ್ಮೆಲ್ಲರ ಮೇಲಿದೆ. - ಇದಿಷ್ಟು ಅಚಿನ್ ವನಾಯಕ್ ಅವರ ನಿಲುವುಗಳು ಮತ್ತು ವಿಚಾರ - ನನ್ನ ಗ್ರಹಿಕೆಯಲ್ಲಿ.

Rating
No votes yet

Comments