ಟೆಕ್ ಸುದ್ದಿ - ೪ - ಅಲ್ಲಾವುದ್ದೀನನ ಹಾರುವ ಹಾಸಿಗೆ

ಟೆಕ್ ಸುದ್ದಿ - ೪ - ಅಲ್ಲಾವುದ್ದೀನನ ಹಾರುವ ಹಾಸಿಗೆ

ಅಲ್ಲಾವುದ್ದೀನನ ಹಾರೋ ಹಾಸಿಗೆ ಗೊತ್ತಿರ್ಬೇಕಲ್ವಾ? ಅದು ಇನ್ನು ಇದೆ ಅಂದ್ರೆ ನಂಬ್ತೀರಾ? ನಂಬ್ಲೇ ಬೇಕು ಅಂತ ಸುದ್ದಿ ಬಂದಿದೆ. ಹೌದು.. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇದರ ಮೇಲೆ ಕುಳಿತು ಸವಾರಿ ಕೂಡ ಮಾಡಿರೋದನ್ನು ಜಪಾನ್ ನ ಸ್ಪೇಸ್ ಏಜನ್ಸಿ ತಿಳಿಸಿದೆ.

ಪರ್ಸಿಯನ್ ರಗ್ಗು ಗಾಳಿಗೆ ತೂರಿ ಅದರ ಮೇಲೆ ಹತ್ತಿ ಹಾರಾಡಿದ್ದೆಲ್ಲಾ ಶತಮಾನಗಳಷ್ಟು ಹಳೆಯ ವಿಷಯವಾಗಿದ್ದರೂ, ಜಪಾನಿನ ಅಂತರಿಕ್ಷಯಾತ್ರಿ ಒಬ್ಬ, ಅಂತದ್ದೇ ಒಂದು ಹಾಸಿಗೆ/ರಗ್ಗಿನ ಮೇಲೆ ಫ್ಲೈ ಮಾಡಿದ್ದು ಈಗ ಸುದ್ದಿ. ಕೊಯ್ಚಿವ್ಹಕತ(Koichi Wakata) ಅನ್ನೋ ಈ ವಿಜ್ಞಾನಿ (ಚಿತ್ರದಲ್ಲಿ ಮೊದಲ ಸಾಲಿನಲ್ಲಿ ಎಡಗಡೆಯಿಂದ ಮೊದಲನೆಯವರು) ಕ್ಯಾಮೆರಾ ಮುಂದೆ ನಾಗರೀಕರ ತಂಡ ಕಳಿಸಿದ್ದ ಶೂನ್ಯ-ಗುರುತ್ವ ಪರೀಕ್ಷೆಗಳಲ್ಲಿ ಒಂದಾಗಿದ್ದ ಈ ಪ್ರಯೋಗವನ್ನು ಮಾಡಿದ್ದಾರೆ.

ಜಪಾನಿನ ಜಕ್ಸ(Jaxa) ಸ್ಪೇಸ್ ಏಜನ್ಸಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ವ್ಹಕತ ಚೌಕಾಕಾರದ ಬಿಳಿಯ ಬಟ್ಟೆಯ ಮೇಲೆ ಕೂತು ಕ್ಯಾಮೆರಾ ಕಡೆಗೆ ಹಾರಿ ಬಂದದ್ದನ್ನು ತೋರಿಸಲಾಗಿದೆ. ಹಾಗೂ ಮತ್ತೊಮ್ಮೆ ಮಾಯಾ ಹಾಸಿಗೆಯ ಮೇಲೆ ತಲೆಕೆಳಗಾಗಿ ಮಲಗಿ ಹಾರಿದ್ದೂ ಇದರಲ್ಲಿ ಕಂಡು ಬಂದಿದೆಯಂತೆ.

ಈ ಅಂತರಿಕ್ಷಯಾತ್ರಿ ತನ್ನ ಪಾದವನ್ನು ಈ ಹಾಸಿಗೆಗೆ ಅಡೆಸಿವ್ ಟೇಪ್ ನಿಂದ ಬಿಗಿದು ಈ ಸಾಹಸ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಇದೆಲ್ಲಾ ವ್ಹಕತನ ೧೬ ಇತರೆ ಬಾಹ್ಯಾಕಾಶ ಪ್ರಯೋಗಗಳಲ್ಲೊಂದು. ಈ ಹಿಂದಿನ ವಾರಗಳಲ್ಲಿ ಬಾಹ್ಯಾಕಾಶದಲ್ಲಿ ಪುಶ್-ಅಪ್ಸ್ ಮಾಡಿದ್ದು, ತಿಂಗಳು ಅಥವಾ ವರ್ಷಗಟ್ಟಲೇ ಬದಲಿಸದೇ ಉಪಯೋಗಿಸ ಬಹುದಾದ ಬಟ್ಟೆಗಳನ್ನು ತೊಟ್ಟು ಮುಂದೆ ಭವಿಷ್ಯದಲ್ಲಿ ಉಪಯೋಗಿಸ ಬಹುದಾದ ಸ್ಪೇಸ್ ಏಜ್ ಬಟ್ಟೆಗಳ ಪರೀಕ್ಷೆ (ಟೀ-ಶರ್ಟ್, ಸಾಕ್ಸ್, ಶಾರ್ಟ್ಸ್ ಇತ್ಯಾದಿ), ವಾಟರ್ ಪಿಸ್ತೂಲಿನ ಪರೀಕ್ಷೆ, ಹೀಗೆ ಹತ್ತು ಹಲವಾರು ಪ್ರಯೋಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವ್ಹಕತ ಅತೀ ದೀರ್ಘಕಾಲದ ಪ್ರಯೊಗಗಳನ್ನು ಬಾಹ್ಯಾಕಾಶದಲ್ಲಿ ನೆಡೆಸಿದವರಲ್ಲಿ ಮೊದಲಿಗರು.. ಎಂಡೀವರ್ ಸ್ಪೆಸ್ ಷಟಲ್ ಇವರನ್ನು ಜೂನ್ ನಲ್ಲಿ ಭೂಮಿಗೆ ವಾಪಸ್ ಕರೆತರಲಿದೆ.

ಕೊನೆ ಹನಿ: ಅವರು ವಾಪಸ್ ಬಂದಾಗ ನಾವೂ ಒಂದ್ ರೌಂಡ್ ಸ್ಕೈ-ಫ್ಲೈ ಮಾಡ್ಕೊಂಡ್ ಬರೋಣ್ವಾ ಹಾರೋ ಹಾಸಿಗೆಯಲ್ಲಿ?

ಸುದ್ದಿ ಮತ್ತು ಚಿತ್ರದ ಮೂಲ: ಗಾರ್ಡಿಯನ್

Rating
No votes yet

Comments