ರಕ್ಕಸನ ಪ್ರೇಮಕಥೆ !!!!!

ರಕ್ಕಸನ ಪ್ರೇಮಕಥೆ !!!!!

ಪಡುವಣವನ್ನು ಕೆಂಪಗೆ ಕಾಯಿಸಿ ವಿದಾಯ ಹೇಳುತ್ತಿದ್ದ ಸೂರ್ಯ, ಹರಿತ್ತಿನಿಂದ ಬೀಗುತ್ತಿದ್ದ ಮರಗಳನ್ನು ತೊಯ್ದಾಡಿಸಿ ಸಣ್ಣಕೆ ಸದ್ದು ಮಾಡುತ್ತಿದ್ದ ತಂಗಾಳಿ ಆ ಸಂಜೆಗೆ ವಿಶೇಷ ರೊಮ್ಯಾಂಟಿಕ್ ಕಳೆಯನ್ನೇ ತಂದು ಕೊಟ್ಟಿದ್ದವು. ಎದುರಿಗೆ ಹರಿಯುತ್ತಿದ್ದ ಝರಿಯನ್ನು ಹೇಗೆ ದಾಟಬೇಕೆಂದು ದಾರಿ ಕಾಣದೆ ಯೋಚನೆಗೆ ಬಿದ್ದಿದ್ದಳು ನೇತ್ರಾ. ನನಗೆ ಯೋಚಿಸುವ ಅಗತ್ಯವೇ ಕಂಡುಬರಲಿಲ್ಲ. ಅನಾಮತ್ತಾಗಿ ಎರಡೂ ಮುಂಗೈಗಳಲ್ಲಿ ಆಕೆಯನ್ನು ಎತ್ತಿಕೊಂಡು ಪಾದ ಮುಳುಗುವಷ್ಟಿದ್ದ ಝರಿಯನ್ನು ದಾಟಿಬಿಟ್ಟಿದ್ದೆ. ನೇತ್ರಾ ನಾಚಿ ಮುಖವನ್ನೆಲ್ಲಾ ಕೆಂಪಗಾಗಿಸಿಕೊಂಡಿದ್ದಳು. ಝರಿ ದಾಟಿ ನಿಧಾನವಾಗಿ ಅವಳನ್ನು ಕೆಳಗೆ ಇಳಿಸಿದೆ. ಝರಿಯ ಕರೆಯಲ್ಲಿದ್ದ ಬೆಣಚು ಕಲ್ಲನ್ನು ಸಲ್ಪ ಹೊತ್ತು ತಲೆ ತಗ್ಗಿಸಿ ನೋಡುತ್ತಲೇ ಇದ್ದವಳು ನಿಧಾನಕ್ಕೆ ನನ್ನೆಡೆಗೆ ತಿರುಗಿದಳು. ಅವಳ ಮುಖದ ಕೆಂಪು ಇನ್ನೂ ಇಳಿದಿರಲಿಲ್ಲ. ದನಿ ಎತ್ತರಿಸಲಾಗದೆ ಎತ್ತರಿಸಿ ಕೇಳಿದ್ದಳು "ನನ್ನನ್ನು ಮುಟ್ಲಿಕ್ಕೆ ಎಷ್ಟೋ ಧೈರ್ಯ ನಿನಗೆ?"

ನನ್ನ ಎರಡೂ ಕೈಗಳನ್ನು ಮಾರು ಅಳೆಯುವವನಂತೆ ಅಗಲಿಸಿ ಹೇಳಿದೆ "ಇಷ್ಟು! ಆದರೆ ನಿನ್ನ ಮುಟ್ಲಿಕ್ಕೆ ಅಷ್ಟೊಂದು ಬೇಕಾಗಿಲ್ಲ." ಎಂದು ಅವಳ ಬಲ ಅಂಗೈಯನ್ನು ನನ್ನ ಎಡಗೈಯಲ್ಲಿ ಹಿಡಿದು ಮೃದುವಾಗಿ ಒತ್ತಿದೆ. ಜೋರಾಗಿ ಒಮ್ಮೆ ಉಸಿರು ಎಳೆದುಕೊಂಡವಳ ಗಂಟಲಲ್ಲೇ ಆ ಉಸಿರು ಸಿಕ್ಕಿಕೊಂಡಂತಾಗಿ ಮತ್ತೆ ಅದೇ ಉಸಿರನ್ನು ಹೊರಹಾಕಿದಳು. ತಂಗಾಳಿಯ ಸದ್ದಿಗೆ ಅವಳ ಬಿಸಿಯುಸಿರ ಸದ್ದು ಸೇರಿ ಕಿವಿಗೆ ವಿಚಿತ್ರ ಇಂಪನ್ನು ಉಂಟು ಮಾಡಿದ್ದವು. ಕೈಯನ್ನು ಬಿಡಿಸಿಕೊಳ್ಳಲು ಪ್ರಯತ್ನ ಮಾಡದೇ ತನ್ನ ಎಡಗೈಯಿಂದ ನನ್ನ ಅರೆಗಡ್ಡದ ಕೆನ್ನೆಯನ್ನು ಚಿವುಟಿ "ರಾಕ್ಷಸ..ರಾಕ್ಷಸ" ಎಂದಿದ್ದಳು.

ನೇತ್ರಾ ಅಲಿಯಾಸ್ ನೇತ್ರಾವತಿ ನನ್ನನ್ನು ಕರೆಯುತ್ತಿದ್ದುದೇ ಹಾಗೆ. ಆ ದಿನ ಬೆಳಿಗ್ಗೆ ಈಳಿಗೆ ಮಣೆಯ ಮೇಲೆ ಆಕಸ್ಮಿಕವಾಗಿ ಕಾಲಿಟ್ಟು ಅವಳ ಕಾಲು ಹೆಚ್ಚಿ ಹೋಗಿತ್ತು. ರಕ್ತ ಸಾಕಷ್ಟು ಹರಿದು ಹೊಗಿತ್ತು. ನಮ್ಮೊಡನೆ ಇದ್ದ ಯೊಗ ಶಿಬಿರದ ಸ್ವಯಂಸೇವಕರು ಪಟ್ಟಿ ಬಿಗಿದು ರಕ್ತ ನಿಲ್ಲಿಸಿದ್ದರು. ಸಂಜೆಯ ವಾಕಿಂಗ್‍ಗೆ ಬೇಡವೆಂದರೂ ಕೇಳದೇ ಹಠ ಮಾಡಿ ಹೊರಟಿದ್ದಳು. ಅವಳನ್ನು ಕರೆದೊಯ್ದು ತರುವ ಜವಾಬ್ದಾರಿ ನನಗೆ ವಹಿಸಿದ್ದರು. ನಾವಿಬ್ಬರೂ ಯೋಗ ಶಿಬಿರದಲ್ಲಿ ಸ್ವಯಂ ಸೇವಕರಾಗಿದ್ದುದು ಇದೇ ಮೊದಲಲ್ಲ. ಹಾಗಾಗಿ ನಮ್ಮ ಸ್ನೇಹವನ್ನು ಅರಿತಿದ್ದ ಇತರರು ನನ್ನೊಡನೆ ಅವಳನ್ನು ಜೊತೆ ಮಾಡಿ ಕಳಿಸಿದ್ದರು. ಶಿಬಿರಾರ್ಥಿಗಳೊಡನೆ ಗುಡ್ಡದ ಬುಡವನ್ನು ಮುಟ್ಟಿ ಒಂದು ಸುತ್ತು ಭಜನೆ ಮುಗಿಸಿ ಹಿಂದಿರುಗುವಾಗ ನೇಸರ ಇಳಿಮುಖನಾಗತೊಡಗಿದ್ದ. ಹಿಂದಿರುಗಲು ಹೋದ ದಾರಿಯನ್ನು ಹಿಡಿಯದೇ ಬೇರೆ ದಾರಿ ಹಿಡಿಯುವುದು ವಾಡಿಕೆ. ಹಿಂದಿರುಗುವ ದಾರಿಯಲ್ಲಿ ಝರಿಯೊಂದು ಎದುರಾಗಿತ್ತು. ಕುಂಟುತ್ತಿದ್ದ ಅವಳ ನಡಿಗೆಯ ವೇಗದಿಂದಾಗಿ ಇತರ ಶಿಬಿರಾರ್ಥಿಗಳು ಮತ್ತು ಸ್ವಯಂಸೇವಕರಿಂದ ಸಾಕಷ್ಟು ಹಿಂದೆ ಉಳಿದು ಬಿಟ್ಟಿದ್ದೆವು. ಮುಂದೆ ಹೋದವರು ನಮಗೆ ಅವರ ಬಟ್ಟೆಗಳ ಬಣ್ಣದ ರೂಪದಲ್ಲಿ ಮಾತ್ರ ಕಾಣುತ್ತಿದ್ದರು. ಕಾಲಿನ ಗಾಯವನ್ನು ನೀರಿಗೆ ತಾಗಿಸದೇ ಹೇಗೆ ಝರಿಯನ್ನು ದಾಟುವುದು ಎಂದು ಚಿಂತೆ ಮಾಡುತ್ತಾ ನಿಂತಿದ್ದಳು ನೇತ್ರಾ. ಸಮಯವನ್ನು ಸದು(ರು)ಪಯೋಗಪಡಿಸಿಕೊಂಡಿದ್ದೆ.

ನೇತ್ರಾ ಪರಿಚಯವಾಗಿದ್ದು ಇದೇ ಯೊಗ ಶಿಬಿರದಲ್ಲಿ. ಆಗ ಇಬ್ಬರೂ ಶಿಬಿರಾರ್ಥಿಗಳಾಗಿದ್ದೆವು. ಸಾಕಷ್ಟು ಹುಡಿಗಿಯರಿದ್ಧರೂ ಈ ಹುಡುಗಿಯ ಮುಖದಲ್ಲಿ ಏನೊ ಕಳೆ. ಮಾತುಗಳು ತುಂಬಾ ಕಡಿಮೆ. ಆಡಿದವಷ್ಟೂ ಸಿಹಿ ಸಿಹಿ! ಒಂಥರಾ ಅವಳು "ಸಿಮ್‍ಟಿಸೀ ಶರಮಾಯಿಸೀ" ! ಆ ಸಂಕೋಚವೇ ಆಕೆಯ ವ್ಯಕ್ತಿತ್ವಕ್ಕೆ ಒಂದು ತೂಕ ತಂದುಕೊಟ್ಟಿತ್ತು. ಅದು ಹೇಗೆ ನನ್ನೊಡನೆ ಅಷ್ಟು ಒಡನಾಟ ಹೆಚ್ಚಿಸಿಕೊಂಡಳೋ ತಿಳಿಯದು. ಮೊದಲ ಶಿಬಿರದಲ್ಲಿ ಸಂಜೆಯ ವಿಹಾರಕ್ಕೆಂದು ತೆರಳಿದಾಗ ಬಂಡೆಯೊಂದನ್ನು ಹತ್ತಿ ತೆರಳಬೇಕಿತ್ತು. ನಾನು ಹತ್ತಿ ಮುಂದೆ ಹೋದೆ. ನನ್ನ ಹಿಂದೆಯೇ ನೇತ್ರಾ ಇದ್ದಳು. "ಲೋ ಹಂಗೆ ಹೊರಟಿದ್ದೀಯಲ್ಲ ಎಳೆದುಕೋ" ಅಂತ ಕೂಗಿದಳು. ಮೊದಲ ಬಾರಿಗೆ ಹುಡುಗಿಯೊಬ್ಬಳು ನನಗೆ "ಲೋ’ ಎಂದು ಸಂಬೋಧಿಸಿದ್ದು. ಅದೂ ಯಾರು? ಅಂಥ ’ಸಿಮಟೀಸಿ ಶರಮಾಯಿಸಿ’ ನೇತ್ರಾ! ಏನು ಹೇಳಲೂ ತೋಚದೇ ಕೈ ಚಾಚಿ ಅವಳನ್ನು ಮೇಲಕ್ಕೆ ಎಳೆದುಕೊಂಡಿದ್ದೆ. ಅವಳ ದೇಹ ಅವಳ ವ್ಯಕ್ತಿತ್ವದಷ್ಟು ತೂಕದ್ದಾಗಿರಲಿಲ್ಲ. "ಅಬ್ಬಾ! ಎಷ್ಟು ಜೋರಾಗಿ ಎಳೀತಿಯಲ್ಲೊ. ಸಲ್ಪನೂ ನಾಜೂಕಿಲ್ಲ. ರಾಕ್ಷಸ..ರಾಕ್ಷಸ!". ಮೊದಲ ಬಾರಿಗೆ ನನ್ನನ್ನು ’ರಾಕ್ಷಸ’ ಅಂತ ಕರೆದಿದ್ದಳು!

ಅವಳದು ನನ್ನ ಕಾಲೇಜಿಗಿಂತ ಅನತಿ ದೂರದಲ್ಲಿದ್ದ ಡಿಗ್ರೀ ಕಾಲೇಜು. ಸಲ್ಪ ದೂರದವರೆಗೆ ನನ್ನ ಮತ್ತು ಅವಳ ದಾರಿ ಒಂದೇ ಆಗಿತ್ತು. ಬೆಳಿಗ್ಗೆ ಕಾಲೇಜಿಗೆ ಹೋಗುವಾಗ ಇದ್ದಂತಹ ಚೇತೋಹಾರಿ ಮುಖವೇ ಸಂಜೆ ತೆರಳುವಾಗಲೂ ಇರುತ್ತಿತ್ತು. ಅವಳ ಮುಖದಲ್ಲಿ ಗೆಲುವು ಮಾಸಿದ್ದನ್ನು ಎಂದಿಗೂ ಕಂಡಿರಲಿಲ್ಲ ನಾನು. ಮಾತುಮಾತಿಗೊಮ್ಮೆ ಕನಿಷ್ಟ ಮೇಲಿನ ಆರು ಕೆಳಗಿನ ಆರು, ಹನ್ನೆರಡು ಹಲ್ಲುಗಳು ಆಕೆಯ ಬಾಯೊಳಗಿಂದ ಕಾಣುತ್ತಿದ್ದವು; ಸದಾ ನಗುತ್ತಿದ್ದರಿಂದಲೋ ಏನೂ! ಆಕೆ ತನ್ನ ದುಃಖಗಳನ್ನು ಯಾರೊಡನೆಯೂ ಹಂಚಿಕೊಂಡದ್ದಿಲ್ಲ. ಹಾಗಾಗಿ ಆಕೆಗೆ ಯಾವುದೇ ಕಷ್ಟಗಳಿಲ್ಲ. ಸರ್ವಸಂತೋಷಗಳೂ ಅವಳ ಕಾಲ ಬುಡದಲ್ಲಿ ಬಿದ್ದಿವೆ ಅಂದುಕೊಂಡುಬಿಟ್ಟಿದ್ದರು. ಅವಳಿಗೆ ತನ್ನ ಕಷ್ಟಗಳನ್ನು ಹೇಳಿಕೊಳ್ಳಲು ಹೆಗಲು ಸಿಗುತ್ತಿದ್ದುದೇ ನಂದು. ಭುಜದ ಮೇಲೆ ಹಣೆಯಿಟ್ಟು ಶರಟು ತೋಯುವವರೆಗೆ ಅತ್ತು ಕಡೆಗೆ ಕಣ್ಣೀರು ಒರೆಸಿಕೊಳ್ಳುತ್ತಿದ್ದಳು.
ತನ್ನ ಕಷ್ಟಗಳನ್ನು ಯಾರಾದರೂ ನಮ್ಮೊಡನೆ ಹೇಳಿಕೊಳ್ಳುತ್ತಿದ್ದರೆ ಸಮಾಧಾನ ಹೇಳಬಾರದಂತೆ. ಸುಮ್ಮನೆ ಅವರು ಹೇಳುವುದನ್ನು ಕೇಳುತ್ತಿರಬೇಕು. ಮನಸ್ಸಿನಲ್ಲಿದ್ದದ್ದು ಹೊರಬಂದಾಗ ಅವರೇ ಹಗುರಾಗುತ್ತಾರೆ. ನಮ್ಮ ಎರಡು ಕಿವಿಗಳು ಮಾಡುವಷ್ಟು ದಕ್ಷ ಕೆಲಸವನ್ನು ಒಂದು ಬಾಯಿ ಮಾಡಲಾರದು. ಇದೇನೂ ಆಗ ನನಗೆ ಗೊತ್ತಿರಲಿಲ್ಲ. ಹೇಗೆ ಸಮಾಧಾನ ಮಾಡಬೇಕೆಂದು ತಿಳಿಯದೇ ಸುಮ್ಮನೆ ಕೂತಿರುತ್ತಿದ್ದೆ ಅಷ್ಟೇ ! ಒಮ್ಮೆ ಅತ್ತು ಹಗುರಾದರೆ ಮುಗಿಯಿತು. ಮತ್ತೆ ನನ್ನನ್ನು ಅಡಿಕೊಳ್ಳಲು ಶುರು ಮಾಡುತ್ತಿದ್ದಳು. ನನ್ನ ಹಾವಭಾವ, ಎದುರಿನವರೊಡನೆ ಸಂಭಾಷಿಸುವ ಒರಟು ವೈಖರಿ ಎಲ್ಲವೂ ಅವಳ ಹಾಸ್ಯದ ಪರಿಧಿಯೊಳಗೆ ಹೊಕ್ಕಿರುತ್ತಿತ್ತು. ಏನು ಕಾರಣವೋ ಗೊತ್ತಿಲ್ಲ ಆಕೆ ಹಾಗೆ ಕಾಲೆಳೆಯುತ್ತಿದ್ದುದನ್ನು ನಾನೂ ಖುಶಿಯಿಂದ ಆಸ್ವಾದಿಸುತ್ತಿದ್ದೆ.

ಒಮ್ಮೆ ಹೀಗೇ ಅಳೋದು ಮುಗಿದಿತ್ತು. ನನ್ನನ್ನು ಗೋಳುಹೊಯ್ದುಕೊಳ್ಳುವ ನಡುವೆ ಕೈಯೊಳಗೆ ಕೈ ಬೆಸೆದು ಶರಟಿನ ಮುಂದೋಳಿನ ಗುಂಡಿಯನ್ನು ತಿರುವುತ್ತಾ ಇದ್ದಕ್ಕಿದ್ದಂತೆ ಕೇಳಿದಳು.

"ನಿಂಗೆ ನನ್ನ ಬಗ್ಗೆ ಏನನ್ನಿಸುತ್ತೆ?"

"ಏನನ್ನಿಸ್ಬೇಕು?"

"ಹಂಗಲ್ಲ. ಇಷ್ಟ, ಕಷ್ಟ, ತಲೆ ತಿಂತಾಳೆ, ಬೋರು, ಒಳ್ಳೆಯವಳು ಕೆಟ್ಟವಳು... ಆ ಥರ"

"ಮೊಸ್ಟ್‍ಲಿ ಇಷ್ಟ"

"ಅದೆಂಥದು ಮೊಸ್ಟ್‍ಲಿ? ಇಷ್ಟ ಇರುತ್ತೆ ಅಥವಾ ಇಲ್ಲ ಅಂತ ಇರುತ್ತೆ. ಸರಿಯಾಗಿ ಹೇಳು"

"ಇಲ್ಲ ಅಂಥಾನೇ ಇಟ್ಗೊ...ಅಥವಾ ಇದೆ ಅಂತ ಇಟ್ಟುಗೊ ಏನೀಗ?"

"ಥೂ...ಹೋಗೊ ನಾನು ನಿಂಜೊತೆ ಮಾತಾಡಲ್ಲ" ಎಂದವಳೇ ಎದ್ದು ಹೊರಟಳು. ಯಾಕೋ ಪಕ್ಕದ ಜಾಗ ಖಾಲಿಯಾದಂತೆನಿಸಿತು. ಅವಳನ್ನು ಬೆಂಬತ್ತಿ ಹೊರಟೆ. "ನಿಲ್ಲು ಯಾಕೆ ಹೊರಟಿದ್ದಿಯಾ? ಏನಾಯ್ತು?"

"ನಿನ್ ತಲೆ!...ಹೆಣ್ಣುಮಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳೋ ಯೋಗ್ಯತೆ ಇಲ್ವಲ್ಲೊ ನಿಂಗೆ. ನೀನೂ ಒಬ್ಬ ಗಂಡಸಾ?"

ಮೊದಲ ಬಾರಿಗೆ ನನ್ನ ಗಂಡಸುತನಕ್ಕೇ ಯಾರೋ ಸವಾಲು ಹಾಕಿದ್ದರು. ಸವಾಲು ಹಾಕಿದವನು ಹುಡುಗನಾಗಿದ್ದರೆ ತದುಕಿ ’ಗಂಡಸುತನ’ ತೋರಿಸುತ್ತಿದ್ದೆನೇನೋ! ಆದರೆ ಇದು ಹುಡುಗಿ. ತದುಕಲು ಹೊರಟರೆ ಹೆಂಗೆ ಗಂಡಸಾದೇನು? ಏನೂ ಹೇಳಲು ತೋಚದೇ ಪೆಚ್ಚಾಗಿ ನಿಂತೆ. ಅವಳು ಉತ್ತರ ನಿರೀಕ್ಷಿಸುತ್ತಾ ಹಾಗೆಯೇ ನಿಂತಿದ್ದಳು. ಹಾಗೆ ತಲೆ ತಗ್ಗಿಸಿ "ಇಲ್ಲ. ನಾನು ಗಂಡಸೇ!" ಅಂತ ಹೇಳಿದೆ.

" ಅದು ಹೆಂಗೆ ಹೇಳ್ತಿಯಾ? " ಮಜಾ ತಗೊಳ್ಳಲು ತಯಾರಾಗಿ ನಿಂತು ಬಿಟ್ಟಿದ್ದಳು ಹುಡುಗಿ!

ಸಲ್ಪ ಹೊತ್ತು ಹಾಗೆ ಯೋಚಿಸಿ ಕಡೆಗೆ ಏನೊ ಹೊಳೆದಂತಾಗಿ "ನೋಡು ಮೂಗಿನ ಕೆಳಗೆ ಸಣ್ಣಕೆ ಮೀಸೆ ಬರ್ತಿದೆ!" ಅಂದೆ.

ಜೋರಾಗಿ ನಕ್ಕುಬಿಟ್ಟಳು. "ಎಷ್ಟು ಮುಗ್ಧ ಇದ್ದಿಯೋ... ರಾಕ್ಷಸ ರಾಕ್ಷಸ" ಎಂದು ಎಂದಿನಂತೆ ಕೆನ್ನೆ ಚಿವುಟಿದಳು.

ಅವಳು ಆಕೆ ಹಾಗೆ ಕೇಳಿದ್ದಳೊ ಅದು ಈಗ ಅರ್ಥ ಆಗುತ್ತಿದೆ. ಅವಳು ನನ್ನ ಯಾಕೆ ರಾಕ್ಷಸ ಅಂತ ಕರೀತಿದ್ದಳೋ ಈಗೀಗ ಅರಿವಿಗೆ ಬರುತ್ತಾ ಇದೆ. ಮುಂದೊಂದು ದಿನ ಅವಳು ನನಗೆ ಅಷ್ಟು ಇನ್‍ಫ಼ಾರ್ಮಲ್ ಆಗಿ ಪ್ರಸ್ತಾಪ ಇಡಬಹುದು.ಅವಳ ಪ್ರೀತಿಯ ರಾಕ್ಷಸ ಅದೊಂದು ದಿನ ಅವಳ ಪ್ರೇಮಕ್ಕೆ ಅಷ್ಟು ಮೃಗೀಯವಾಗಿ ತಿಲಾಂಜಲಿ ಇಡಬಹುದು ಎಂದೂ ಅವಳಿಗೆ ಗೊತ್ತಿರಲಿಲ್ಲ ಅನ್ನಿಸುತ್ತದೆ.

(ಓದುಗರ ಅಣತಿಯಿದ್ದರೆ ಮುಂದುವರಿಸುವ ಆಸೆಯಿದೆ....)

Rating
No votes yet

Comments