ಅಮೃತವರ್ಷಿಣಿ

ಅಮೃತವರ್ಷಿಣಿ

ಸ್ವಲ್ಪ ದಿವಸಗಳ ಹಿಂದೆ ಉದಯ ಟೀವೀನಲ್ಲಿ ಈಚೆಗೆ ತೆರೆಕಂಡ ಒಂದು ಸಿನಿಮಾ ತಂಡದವರ ಜೊತೆ ಮುಖಾಮುಖಿ ಮಾತುಕತೆ ಬರ್ತಾ ಇತ್ತು. ನಿರೂಪಕಿ ನಡುವೆ ಈಗ ಒಂದು ಹಾಡು ಕೇಳೋಣ್ವಾ ಅಂತ ಒಂದು ಹಾಡು ಹಾಕಿದರು. ಆ ಹಾಡು ನನಗಂತೂ ಕೂಡಲೆ ಹಿಡಿಸಿಬಿಡ್ತು.

ನೀವೂ ಆ ಹಾಡನ್ನ ಇಲ್ಲಿಂದ ಕೇಳಬಹುದು ನೋಡಿ. ಇದಕ್ಕೆ ಸಂಗೀತ ಕೊಟ್ಟಿರೋದು ಎ.ಟಿ.ರವೀಶ್. ಹಾಡಿರೋದು ಹರಿಹರನ್ ಮತ್ತೆ ಚಿತ್ರಾ. ಚಿತ್ರ - ಸೀನ.


ಜೀವ ಮಿಡಿಯುತಿದೆ ಒಲವಿನ ಸ್ವರಗಳಲಿ

ಈ ಹಾಡು ನನಗೆ ಹಿಡಿಸೋದಕ್ಕೆ ಅದು ನನಗೆ ಇಷ್ಟವಾಗೋ ಒಂದು ರಾಗದಲ್ಲಿ ಇರೋದೂ ಒಂದು ಕಾರಣ ಇರಬಹುದು. ಸಾಧಾರಣವಾಗಿ ಚಿತ್ರಗೀತೆಗಳು ಇಂತಹದ್ದೇ ಶಾಸ್ತ್ರೀಯ ರಾಗದಲ್ಲಿ ಇರಬೇಕು ಅಂತ ಏನೂ ಇಲ್ಲ. ಆದ್ರೆ ಈ ಹಾಡು ಮಾತ್ರ ಪೂರ್ತಿ ಅಮೃತವರ್ಷಿಣಿ ರಾಗದಲ್ಲೇ ಯೋಜಿತವಾಗಿದೆ.

ಹಾಗಂತ ಇದೇನು ಚಿತ್ರಗೀತೆಗಳಲ್ಲಿ ಅಮೃತವರ್ಷಿಣಿ ರಾಗವನ್ನ ಬಳಸಿರೋದು ಇದೇನೂ ಮೊದಲೇನಲ್ಲ. ಉದಾಹರಣೆಗೆ ಆನಂದ ಭೈರವಿ ಅನ್ನೋ ಚಿತ್ರದ ಚೈತ್ರದ ಕುಸುಮಾಂಜಲಿ ಅನ್ನೋ ಹಾಡು. ಇದೂ ಕೂಡ ಪೂರ್ತಿ ಈ ರಾಗದಲ್ಲೇ ಇರೋದು.

ಈಗ ಕೇಳಿ: ಚೈತ್ರದ ಕುಸುಮಾಂಜಲಿ ಅನ್ನೋ ಹಾಡನ್ನ. ಚಿತ್ರ ಆನಂದಭೈರವಿ. ಹಾಡಿರೋದು ಎಸ್.ಪಿ.ಬಾಲಸುಬ್ರಹ್ಮಣ್ಯಂ.

(ಅಂದ್ ಹಾಗೆ, ನೀವು ಕೇಳಿಲ್ದಿದ್ರೆ, ಈ ಚಿತ್ರದ ಬೇರೆ ಹಾಡುಗಳನ್ನೂ ಕೇಳಿ, ಸುಮಾರು ಎಲ್ಲವೂ ಚೆನ್ನಾಗಿವೆ!)

ಅಮೃತ ವರ್ಷಿಣಿ ಅನ್ನೋದು ಹೆಸರಿಂದಲೇ ಮಳೆಗೆ ಸಂಬಂಧಿಸಿರೋ ರಾಗ. ಅದಕ್ಕೇ ಅಂತಲೇ ಈ ಮುತ್ತಿನ ಹಾರ ಚಿತ್ರದ ಈ ಚಿತ್ರಗೀತೆಯಲ್ಲಿ ಮೇಘವು ಮೇಘವು ಅಂತ ಮೊದಲಾಗೋ ಮಳೆಗಾಲದ ವರ್ಣನೆ ಬರುವ ಚರಣಕ್ಕೆ ಬಳಸಿರೋದು ಅಮೃತವರ್ಷಿಣಿ ರಾಗವನ್ನೇ.

ಇನ್ನು ಈ ರಾಗದ ಹಿನ್ನೆಲೆ ತಿಳೀಬೇಕಾದ್ರೆ, ಇದು ತೀರಾ ಹಳೆಯ ರಾಗವೇನಲ್ಲ. ನಮ್ಮ ಶಾಸ್ತ್ರೀಯ ಸಂಗೀತಕ್ಕೆ ಇದು ಬಂದಿದ್ದು ಸುಮಾರು ೧೭೫೦ರ ಆಸುಪಾಸಿನಲ್ಲಿ ಅಂತ ಹೇಳಬಹುದು. ಅಂದರೆ ಸುಮಾರು ಇನ್ನೂರೈವತ್ತು ವರ್ಷಗಳಾದವು ಅಷ್ಟೇ. ಐನೂರು ಸಾವಿರ ವರ್ಷಗಳ ಇತಿಹಾಸವಿರೋ ಕೆಲವು ರಾಗಗಳ ಮುಂದೆ ಇದು ಇನ್ನೂ ಹರೆಯದ ಯುವತಿ ಅಂತ ಅನ್ನಬಹುದು ಬೇಕಾದರೆ. ಮೊದಮೊದಲಿಗೆ ಇದರ ಹೆಸರು ಕಾಣೋದು ತುಳಜಾಜಿಯ ಸಂಗೀತ ಸಾರಾಮೃತದಲ್ಲಿ. ಸುಮಾರು ಅದೇ ಕಾಲದ ಚತುರ್ದಂಡಿ ಪ್ರಕಾಶಿಕೆಯ ರಾಗಲಕ್ಷಣ ಅನುಬಂಧದಲ್ಲಿ ಈ ರಾಗವನ್ನು "ರಿಧವರ್ಜ್ಯಾ ಹಿ ಗಾತವ್ಯಾ ಹ್ಯೌಡುವ್ಯಮೃತವರ್ಷಿಣೀ" - ಅಂದರೆ, ರಿ, ಮತ್ತು ಧ ಸ್ವರಗಳನ್ನು ಬಿಟ್ಟು ಹಾಡಬೇಕಾದ ರಾಗ ಎಂದು ಚತುರಂಗಿಣೀ ಮೇಳದ ಅಡಿಯಲ್ಲಿ ಬರುವ ರಾಗವಾಗಿ ಅಮೃತವರ್ಷಿಣಿಯನ್ನು ಹೆಸರಿಸಿದೆ.

ಅಂದರೆ ಈ ರಾಗಕ್ಕೆ ಬರುವ ಸ್ವರಗಳು ಹೀಗೆ:

ಸ ಗ೩ ಮ೨ ಪ ನಿ೩ ಸ
ಸ ನಿ೩ ಪ ಮ೨ ಗ೩ ಸ

ಅಂದರೆ, ಷಡ್ಜ, ಪಂಚಮಗಳಲ್ಲದೇ ಅಂತರ ಗಾಂಧಾರ, ಪ್ರತಿ ಮಧ್ಯಮ ಮತ್ತೆ ಕಾಕಲಿ ನಿಷಾದ ಈ ರಾಗಕ್ಕೆ ಬರುವ ಸ್ವರಗಳು.

ಈ ರಾಗದ ಬಗ್ಗೆ ಮುತ್ತುಸ್ವಾಮಿ ದೀಕ್ಷಿತರಿಗೆ ಸಂಬಂಧಿಸಿದ ದಂತಕತೆಯೊಂದು ಪ್ರಚಲಿತದಲ್ಲಿದೆ. ಎಟ್ಟಿಯಾಪುರಂ ಗೆ ಅವರು ಒಮ್ಮೆ ಹೋದಾಗ, ಅಲ್ಲಿ ಬರಗಾಲವಿದ್ದು, ಅಲ್ಲಿ ಜನರ ಕಷ್ಟವನ್ನು ನೋಡಲಾರದ ದೀಕ್ಷಿತರು ದೇವಿಯನ್ನು ಕುರಿತು ಆನಂದಾಮೃತಕರ್ಷಿಣಿ ಎಂಬ ರಚನೆಯನ್ನು ಅಲ್ಲೇ ರಚಿಸಿ ಹಾಡಿದ ನಂತರ ಮಳೆ ಬಂತೆಂದೂ, ಮತ್ತೆ ನಿಲ್ಲದ ಮಳೆಗೆ ಮತ್ತೆ ಅವರು ಹಾಡಿನಲ್ಲಿ ’ವರ್ಷಯ ವರ್ಷಯ’ ಎಂದಿದ್ದ ಸಾಲನ್ನು ’ಸ್ತಂಭಯ ಸ್ತಂಭಯ’ ಅಂತ ಹಾಡಿದ ಮೇಲೆ ಮಳೆಯು ನಿಂತಿತು ಎಂದೂ ಪ್ರತೀತಿ.

ಮುತ್ತುಸ್ವಾಮಿ ದೀಕ್ಷಿತರು ಮುದ್ದುವೆಂಕಟಮಖಿಯ ಶಿಷ್ಯಪರಂಪರೆಯವರೇ. ಹಾಗಾಗಿ, ಆತನ ರಾಗಲಕ್ಷಣದಲ್ಲಿ ಹೆಸರಿಸಿರುವ ರಾಗಗಳಿಗೆಲ್ಲ ಲಕ್ಷ್ಯವನ್ನು ರಚಿಸಿದ ದೀಕ್ಷಿತರು ಅಮೃತವರ್ಷಿಣಿಯಲ್ಲಿ ರಚಿಸಿರುವುದು ತಕ್ಕದಾಗೇ ಇದೆ. ದೀಕ್ಷಿತರು ರಚನೆಯ ಪಲ್ಲವಿಯಲ್ಲೇ ರಾಗ ಮುದ್ರೆ ಯನ್ನೂ ಇಟ್ಟಿದ್ದಾರೆ. - ಇಲ್ಲಿ ನೋಡಿ - ಆನಂದಾಮೃತಕರ್ಷಿಣಿ ಅಮೃತವರ್ಷಿಣಿ.ಹಾಡಿಕೊಂಡು, ಜೊತೆಗೇ ವೈಯೊಲಿನ್ ನುಡಿಸಬಲ್ಲ ಕಲಾವಿದರಂತೂ ಬಹಳ ಅಪರೂಪ!

ಇನ್ನು ಈ ರಾಗದಲ್ಲಿ ತ್ಯಾಗರಾಜರದ್ದೆಂದು ಹೇಳಲ್ಪಡುವ ರಚನೆಯೂ ಒಂದಿದೆ. ಆದರೆ,ಅದರ ಶೈಲಿಯನ್ನು ನೋಡಿದ ಕೆಲವರು ಬಲ್ಲವರು ಇದು ತ್ಯಾಗರಾಜರದ್ದಲ್ಲದೇ, ಅವರ ನಂತರ ಯಾರೋ ತ್ಯಾಗರಾಜ ಮುದ್ರೆಯನ್ನು ಹಾಕಿ ರಚಿಸಿರಬಹುದೆಂದು ಅಭಿಪ್ರಾಯ ಪಡುತ್ತಾರೆ. ಅದೇನೇ ಇರಲಿ - ಕೇಳಲು ಚೆನ್ನಾಗಿದೆ. ಸಂಸ್ಕೃತ ಭಾಷೆಯಲ್ಲಿರುವ ಈ ರಚನೆ, ತ್ಯಾಗರಾಜರ ರಚನೆಗಳಲ್ಲಿ ಅಪರೂಪವಾದ ರಾಗಮುದ್ರೆಯನ್ನೂ ಹೊಂದಿದೆ.

ಕೇಳಿ - ಸರಸೀರುಹನಯನೇ ಸರಸಿಜಾಸನೇ - ನುಡಿಸುತ್ತಿರುವುದು ಕದ್ರಿ ಗೋಪಾಲನಾಥ್

ಇನ್ನು ನಂತರದ ತಲೆಮಾರಿನ ವಾಗ್ಗೇಯಕಾರರಲ್ಲಿ, ಮುತ್ತಯ್ಯ ಭಾಗವತರು ಅಮೃತವರ್ಷಿಣಿಯಲ್ಲಿ ರಚಿಸಿರುವ ಸುಧಾಮಯೀ ಸುಧಾಮಯಿ ಸುಧಾನಿಧಿ ಎಂಬ ರಚನೆ ಸುಪ್ರಸಿದ್ಧವಾಗಿದೆ. ಕನ್ನಡದಲ್ಲಿರುವ ಈ ರಚನೆಯ ಸಾಹಿತ್ಯ ಮೈಸೂರಿನ ದೇವೋತ್ತಮ ಜೋಯಿಸರದ್ದು.

ಇನ್ನು ಇವರ ನಂತರ ಬಂದರೆ ಅಮೃತವರ್ಷಿಣಿಯಲ್ಲಿ ಡಾ.ಬಾಲಮುರಳಿಕೃಷ್ಣ ಅವರು ರಚಿಸಿರುವ ಆಬಾಲಗೋಪಾಲಮು ಎಂಬ ವರ್ಣ ಬಹಳ ಸೊಗಸಾಗಿದೆ. ಕೊಂಡಿಯನ್ನು ಚಿಟಕಿಸಿ, ಮ್ಯೂಸಿಕ್ ಇಂಡಿಯಾ ತಾಣದಲ್ಲಿ ನೀವು ಅದನ್ನು ಕೇಳಬಹುದು.

ಇನ್ನು ಬಾಲಮುರಳಿ ಅವರದ್ದೇ ಸಿದ್ಧಿನಾಯಕೇನ ಸಫಲೀಕೃತೋಹಂ ಎನ್ನುವ ರಚನೆಯನ್ನು ಇಲ್ಲಿ ನೋಡಿ.

ಸಂಗೀತದಲ್ಲಿ ಒಂದು ರಾಗವು ಇನ್ನೊಂದು ರಾಗದ ಹುಟ್ಟಿಗೆ ಕಾರಣವಾಗುವುದು ಹೊಸದೇನಲ್ಲ. ಹಾಗೇ, ೨೦ನೇ ಶತಮಾನದ ವಾಗ್ಗೇಯಕಾರಲ್ಲೊಬ್ಬರಾದ ಜಿ.ಎನ್.ಬಿ. ಅವರು ಅಮೃತ ವರ್ಷಿಣಿ ರಾಗದಿಂದ ಪ್ರೇರಿತರಾಗಿ, ’ಅಮೃತಬೇಹಾಗ್’ ಎನ್ನು ಹೊಸ ರಾಗವೊಂದನ್ನು ಕಲ್ಪಿಸಿದರು.

ಈ ರಾಗದ ಸಂಚಾರ ಹೀಗೆ - ಸ ಮ೨ ಗ೩ ಪ ನಿ೩ ಸ - ಸ ನಿ೩ ದ೨ ಮ೨ ಗ೩ ಸ - ಈಗ ಈ ರಾಗದಲ್ಲಿ ಜಿ.ಎನ್.ಬಿ. ಅವರ ಕಮಲಚರಣೇ ಕನಕಾರುಣೇ ಅನ್ನುವ ರಚನೆಯನ್ನು ಕೇಳಿ. ಅಮೃತ ವರ್ಷಿಣಿಯ ನೆರಳನ್ನು ಗುರುತಿಸಿದ್ರಾ?

-ಹಂಸಾನಂದಿ

Rating
No votes yet

Comments