ನನ್ನ ಪ್ರಥಮಗಳು - ಈಜು ಕಲಿತಿದ್ದು - 1

ನನ್ನ ಪ್ರಥಮಗಳು - ಈಜು ಕಲಿತಿದ್ದು - 1

ಹಿಂಗೆ ನಾನ್ಮೊದಲ್ನೆ ಸಲ ಮಾಡಿದ ಕೆಲವು ಸಾಧನೆ(!)ಗಳ್ನ ಜ್ನಾಪಿಸ್ಕಳಾನ ಅನ್ನಿಸ್ತು. ಯಾವುದ್ರದೂ ಡೇಟ್ ಜ್ನಾಪಕ ಇಲ್ಲ. ಒಂದೊಂದು ಸಾಧನೇದೂ ಒಂದೊಂದು ಕಥೆ. ಆದಷ್ಟೂ ಚಿಕ್ಕದಾಗಿ ಇಲ್ಲಿ ಬರೀತಿದೀನಿ.

ನಮ್ಮೂರಲ್ಲಿ ಒಂದು ಕಟ್ಟೆ ಇದೆ. ಕೆರೆ ಅಲ್ಲ, ಹರಿಯೊ ನೀರಿಗೆ ಕಟ್ಟೆ ಕಟ್ಟಿದಾರೆ;ಬಲಮುರಿ ಟೈಪು. ನಮ್ಮೂರಲ್ಲಿ ಅದನ್ನ 'ಕಟ್ಟಡ' ಅಂತ ಕರೀತಾರೆ. ವಿಚಿತ್ರ! ಯಾಕೆ ಕಟ್ಟಡ ಅಂತಾರೆ ಅಂತ ನಂಗೂ ಗೊತ್ತಿಲ್ಲ.ಇದು ಊರಿಂದಾಚೆ ಮಾದೇಸ್ವರನ ದೇವಸ್ಥಾನದ ಪಕ್ಕ ಇದೆ. ಅಕ್ಕಪಕ್ದಲ್ಲಿ ಮಾವಿನ ತೋಪ್ಗಳು. ಬೇಸ್ಗೆ ರಜ ಬಂದ್ರೆ ಸಾಕು. ಹಳ್ಳಿ ಗಂಡು ಹೈಕ್ಳೆಲ್ಲ ಅಲ್ಲೇ! ಬೆಳಿಗ್ಗೆಯಿಂದ ಸಂಜೆವರ್ಗೆ. ಮಾವಿನ ಕಾಯಿ ಕೀಳೊದು, ತಗೊಂದು ಕಟ್ಟಡದಲ್ಲಿ ಬಿಸಾಕೊದು. ಮತ್ತೆ ಪೈಪೋಟಿ ಮಾಡಿ ಈಜ್ಕೊಂಡ್ ಹೋಗಿ ಯಾರು ಮಾವಿನ್ಕಾಯಿ ಮೊದಲು ಮುಟ್ತಾರೊ ಅವ್ರು ತಿನ್ನೋದು.

ನಾನು ಮೂರು-ನಾಕ್ನೇ ಕ್ಲಾಸ್ ಆಗೋವರ್ಗು ಆ ಕಡೆ ಹೋಗಿರ್ಲಿಲ್ಲ. ನಮ್ಮಣ್ಣ ಹೋಗ್ತಿದ್ದ, ನಂಗೂ ಹೋಗ್ಬೇಕು ಅನ್ನಿಸ್ತಿತ್ತು. ಆದ್ರೆ ಭಯದಿಂದ ಹೋಗ್ತಿರ್ಲಿಲ್ಲ. ನಮ್ಮಣ್ಣ, ಅವನ ಜೊತೆ ಬೇಸ್ಗೆ ರಜಕ್ಕಂತ ಟಿ.ನರಸೀಪುರದಿಂದ ನಮ್ಮೂರಿಗ್ ಬರ್ತಿದ್ದ ನಂ ದೊಡ್ಡಮ್ಮನ ಮಗ ಮಹೇಶ ಇಬ್ರೂ ಮಜ ಮಾಡೊರು. ಸಂಜೆ ಬಂದು ನಂಗೆ ಸಾಸಹಗಳನ್ನೆಲ್ಲ ಹೇಳೊರು. ನಾನೂ ಬತ್ತೀನಿ ಕರ್ಕೋಂಡೊಗುರ್ಲಾ ಅಂತ ಕೇಳಿದ್ರೆ, "ಅಣ್ಣ(ಅಪ್ಪ),ಅಮ್ಮ ಬೈತಾರೆ ಅವ್ರಿಗೆ ಗೊತ್ತಿಲ್ದಂಗೆ ಕರ್ಕೊಂಡೋಯ್ತೀವಿ ಆದ್ರೆ ಅವ್ರಿಗೆ ಗೊತ್ತಾಗ್ದಂಗೆ ನೀನೂ ನೊಡ್ಕೊಬೇಕು" ಅಂತ ಹೇಳಿ ನನ್ನ ಹತ್ರ ಒಂದೊ ಎರಡೊ ರೂಪಾಯಿ ಫೀಸ್ ಕೂಡ ತಗೋಳೊರು. ಆದ್ರೆ ನನ್ ಕಣ್ ತಪ್ಸಿ ಅವ್ರಿಬ್ರೇ ಕಟ್ಟಡಕ್ಕೆ ಹೋಗ್ಬಿಡೊರು.ಆದ್ರೆ ಒಂದ್ಸಲ ನಾನ್ ಅವ್ರನ್ನ ಫಾಲೊ ಮಾಡ್ಕೊಂಡ್ ಹೋದೆ. ದಾರಿ ತಿಳ್ಕೊಂಡೆ. ಅಲ್ಲೆ ಇದ್ದ ನನ್ನ ಓರಗೆಯ ಗೆಳೆಯರ ಜೊತೆ ಈಜು ಕಲಿಯೋಕೆ ಶುರು ಮಾಡಿದೆ.

ನಮ್ಮಣ್ಣ(ಅನಿಲ್ ಕುಮಾರ್ ದಿ ಗ್ರೇಟ್):

ನಮ್ಮಣ್ಣ ಹೊಡ್ದ,ಬಡ್ದ, ನೀರಿಂದಾಚೆ ಎಳ್ಕಂಡು ಸರೀಗ್ ಬಾರ್ಸಿ, ಪುನ ನೀರ್ಗೆಸ್ದು ಉಸ್ರು ಕಟ್ಟಂಗೆ ಮುಳುಗಿಸಿ ಕೊಡ್ಬಾರದ ಕಷ್ಟ ಕೊಟ್ಟ. ಅವ್ನು ಹೋಗೊ ಜಾಗಗಳಿಗೆ ನಾನು ಹೋಗೋದ್ ಅವ್ನಿಗೆ ಇಷ್ಟ ಇರ್ಲಿಲ್ಲ. ಯಾಕಂದ್ರೆ ಅವ್ನಾಗ್ಲೆ ಪೋಲಿ ಅಂತ ಮನೇಯವರು ಡಿಕ್ಲೇರ್ ಮಾಡ್ಬಿಟ್ಟಿದ್ರು, ಆದ್ರೆ ನನ್ಮೇಲೆ ನಮ್ಮನೇಲಿ ಸ್ಕೂಲಲ್ಲಿ ತುಂಬ ಹೋಪ್ಸ್ ಇತ್ತು.ಮತ್ಯಾರೊ ಅಲ್ಲಿ ನನ್ನೋಡಿ ಮನೇಗೆ ಅಥ್ವಾ ಸ್ಕೂಲ್ಗೆ ಕಂಪ್ಲೇಂಟ್ ಹೋದ್ರೆ "ಒಳ್ಳೆ ಹುಡುಗ್ರುನೂ ಹಾಳು ಮಾಡ್ತೀಯ" ಅಂತ ಅವಂಗೆ ಇನ್ನೊಂದ್ ರೌಂಡು ಒದೆ ಬೀಳತ್ತೆ ಅನ್ನೋದು ಅವ್ನಿಗ್ಗೊತ್ತಿತ್ತು. ಅನಿ ಅಲ್ಲಿ ಬಿದ್ದ, ನಡ್ಕೊಂಡೆ ಮಳವಳ್ಳಿಗೆ(ನಮ್ಮೂರಿಂದ 7 ಕಿ.ಮಿ) ಹೊರಟೊಗಿದ್ದ, ಮಾಮ್ಸ ತಿನ್ನೋರ ಮನೇಲಿ ಊಟ ಮಾಡ್ದ, ಸ್ಕೂಲ್ ಚಕ್ಕರ್ ಹಾಕಿ ಟೆಂಟಲ್ಲಿ ಫಿಲಮ್ ನೋಡಕ್ಕೋಗಿದ್ದ.. ಹಿಂಗೆ ಅವನ ಮೇಲೆ ದಿನಾಲೂ ಕಂಪ್ಲೇಟ್ಸ್ ಬರ್ತಿದ್ವು.

6 ನೇ ಕ್ಲಾಸ್ ಬರೋವಷ್ಟ್ರಲ್ಲಿ ನಮ್ಮೂರಲ್ಲಿ ನಮ್ಮಣ್ಣ ವರ್ಲ್ಡ್ ಫೇಮಸ್ ಅಗ್ಬಿಟ್ಟಿದ್ದ. ಅವ್ನಿಗೆ ಆ ವಯಸ್ಸಲ್ಲಿ ಹೊಂಗೆ ಕಾಯಿ ಕಿತ್ತು ಮಾರೊ ಹಾಬಿ ಇತ್ತು. ಒಂದಿನ ಹಿಂಗೆ ದೊಡ್ಡ ಹೊಂಗೆ ಮರ ತುತ್ತ ತುದಿಗೆ ಹತ್ತಿ ಹೊಂಗೆಕಾಯಿ ಕೀಳೊವಾಗ ಕೊಂಬೆ ಮುರಿದು ಕೊಂಬೆ ಸಹಿತ ನೆಲಕ್ಕೆ ಬಿದ್ದಿದ್ದ. ಬದುಕಿದ್ದೇ ಪುಣ್ಯ. ಇವ್ನಿಗೆ ಬರೀ ಕಾಲು ಉಳುಕಿತ್ತು ಅಷ್ಟೆ.

ಇದಾದ ಮೇಲೆ ಅವನು ಮನೆಯಿಂದ ಆಚೆ ಹೋಗೋ ಹಂಗಿರ್ಲಿಲ್ಲ. ನಂಗ್ಸಿಕ್ಕಿದ್ದೇ ಚಾನ್ಸು, ಮಹೇಶನ್ಜೊತೆ ಕಟ್ಟಡಕ್ಕೆ ಹೋಗೋಕ್ ಶುರು ಮಾಡ್ದೆ. ಅವ್ನು ಆಗ್ತಾನೆ ಅಲ್ಪಸ್ವಲ್ಪ ಈಜು ಕಲಿತಿದ್ದ. ಅವ್ನು ನನ್ ಉಡುದಾರ ಹಿಡ್ಕೊಳ್ಳೊನು, ನಾನು ಹಂಗೆ ನೀರಲ್ಲಿ ಕಾಲು ಬಡ್ಕೊಂಡ್, ಕೈ ಬೀಸ್ಕೋಂಡ್ ಈಜು ಕಲೀತಿದ್ದೆ. ಆ ಬೇಸ್ಗೆ ರಜ ಮುಗಿಯೋದ್ರೊಳ್ಗೆ ಸ್ವತಂತ್ರವಾಗಿ ಈಜೊವಷ್ಟು ಕಲಿತಿದ್ದೆ.

ಸಶೇಷ!

Rating
No votes yet

Comments