ರಕ್ಕಸನ ಪ್ರೇಮಕಥೆ !!! - ೨

ರಕ್ಕಸನ ಪ್ರೇಮಕಥೆ !!! - ೨

(http://www.sampada.net/blog/thesalimath/19/05/2009/20427 ದಿಂದ ಮುಂದುವರಿದದ್ದು... )

ನಮ್ಮ ದೇಶದ ಹುಡುಗಿಯರ ಕಣ್ಣುಗಳೇ ಹಾಗೆ. ಕಡಲಿನಷ್ಟು ವಿಶಾಲ. ಚುರುಕುತನ ಮಾತ್ರ ಮೀನಿನದ್ದು. ಇದಕ್ಕೆ ನೇತ್ರಾನೂ ಹೊರತಲ್ಲ. ನನ್ನನ್ನು ರಾಕ್ಷಸ ಎಂದು ಕರೆಯುವಾಗ ಅವಳ ಕಣ್ಣಲ್ಲಿ ಅದೇನೋ ಹೊಳಪು! ಅದೆಂಥದೋ ಪ್ರೀತಿ. ಆಗೆಲ್ಲಾ ಅವಳ ಕಣ್ಣನ್ನೇ ದಿಟ್ಟಿಸುತ್ತಿದ್ದೆ. ಮತ್ತೆ ಯಾವಾಗ ನನ್ನನ್ನು ಹಾಗೆ ಕರೆಯುತ್ತಾಳೋ ಎಂದು ಕಾಯುತ್ತಿದ್ದೆ.

ಅವಳಿಗೆ ಅಪ್ಪ ಇರಲಿಲ್ಲ. ಮನೆಯಲ್ಲಿ ಇದ್ದವರು ಅಮ್ಮ ಮತ್ತು ಒಬ್ಬ ಅಣ್ಣ. ಹತ್ತಕ್ಕೇ ಓದಿಗೆ ಶರಣು ಹೊಡೆದಿದ್ದವನು ಮನೆಯಲ್ಲಿ ನಾಲ್ಕಾರು ಎಮ್ಮೆಗಳನ್ನು ಸಾಕಿಕೊಂಡಿದ್ದ. ಹಾಲು ಅಳೆದು ಬಂದ ಹಣದಿಂದ ಮನೆ ನಡೆಯಬೇಕು. ಈ ಹುಡುಗಿ ಬೆಳಿಗ್ಗೆ ಬೇಗ ಎದ್ದು ಸಗಣಿ ಬಳೆಯಬೇಕು. ಎಮ್ಮೆಗಳಿಗೆ ಹುಲ್ಲು ಹಾಕಿ ಅಮ್ಮನ ಜೊತೆ ಅಡಿಗೆಗೆ ಸಹಾಯ ಮಾಡಿ ಕಾಲೇಜಿಗೆ ಹೊರಡಬೇಕಿತ್ತು. ಸಂಜೆ ಮತ್ತೆ ಬಂದು ಸಗಣಿ, ಕಸ ಅಡುಗೆ. ಅಷ್ಟು ಕೆಲಸಗಳ ನಡುವೆ ಯಾವಾಗ ಓದುತ್ತಿದ್ದಳೋ, ನನ್ನೊಡನೆ ಮಾತಾಡಲು ಸಮಯ ಹೇಗೆ ತೆಗೆಯುತ್ತಿದ್ದಳೋ ತಿಳಿಯದು. ಮನೆಯಲ್ಲಿ ಅಷ್ಟೆಲ್ಲಾ ಕೆಲಸ ಮಾಡುತ್ತಿದ್ದರೂ ಅಣ್ಣನ ಮೆಚ್ಚುಗೆ ಇರಲಿಲ್ಲ. ಆಗಾಗ ಜಗಳ ತೆಗೆದು ವಯಸ್ಸಿಗೆ ಬಂದ ತಂಗಿಯನ್ನು ಹೊಡೆಯುತ್ತಿದ್ದನಂತೆ. ತಾಯಿ ಮೂಲೆಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದರಂತೆ.

ಯಾವಾಗಲಾದರೊಮ್ಮೆ ಅವಳ ಅವಳ ಮನೆಗೆ ಹೋಗುತ್ತಿದ್ದೆ. ಮೊದಮೊದಲು ಅವಳ ತಾಯಿ ಸಲ್ಪ ಇರಿಸುಮುರುಸು ಮಾಡಿಕೊಂಡರೂ ನಂತರ ನನ್ನಲ್ಲಿ ವಿಶ್ವಾಸ ತೋರಿಸತೊಡಗಿದರು. ಅವಳ ಅಣ್ಣ ಮಾತ್ರ ಯಾವಾಗಲೂ ನನ್ನನ್ನು ಕಂಡರೆ ಉರಿದುಕೊಳ್ಳುತ್ತಿದ್ದ. ಎದುರಿಗೆ ನೆಟ್ಟಗೆ ಮಾತಾಡುತ್ತಿದ್ದನಾದರೂ ಉರಿನೋಟ ಮಾತಿನ ವ್ಯಂಗ್ಯಗಳು ನನ್ನ ಬಗೆಗಿನ ಅವನ ಅಸಹನೆಯನ್ನು ತೋರ್ಪಡಿಸುತ್ತಿದ್ದವು. ನನ್ನೆದುರಿಗೇ ನೇತ್ರಾಳನ್ನು ಒಂದೆರಡು ಬಾರಿ ಅಸಭ್ಯವಾಗಿ ಬೈದಿದ್ದ. ಹೆಚ್ಚೆಂದರೆ ಐದಡಿ ಎತ್ತರ. ಸಣಕಲು ದೇಹ. ಅವನ ಪೌರುಷವೆಲ್ಲಾ ಒಲೆಯ ಮುಂದೆಯೇ.

ನೇತ್ರಾಳನ್ನು ನೋಡಿ ನನಗೆ ಅನುಕಂಪವೋ ಪ್ರೀತಿಯೋ ಗೊತ್ತಿಲ್ಲ. ನೇತ್ರಾಳನ್ನು ನಾನೇ ಮದುವೆಯಾಗಬೇಕು. ಅವಳಣ್ಣ ಅವಳನ್ನು ಬೈಯ್ಯುವಾಗ ನನ್ನ "ಹೆಂಡತಿಯನ್ನು ಬೈಯ್ಯಲು ನೀನ್ಯಾರೊ?" ಎಂದು ಕೇಳಿ ದವಡೆ ಪುಡಿಗುಟ್ಟುವಂತೆ ಅವನ ಮೂತಿಗೆ ಗುದ್ದಬೇಕು ಎಂಬ ಯೋಚನೆಗಳು ಆಗಾಗ ಬರುತ್ತಿದ್ದವು.

ಒಂದು ದಿನ ರಂಪಾಟಗಳೂ, ಅಣ್ಣನ ಸೆಡವಿನ ದೂರುಗಳು, ಅಮ್ಮನ ಆಸೆಗಳ ಅರಿಕೆಗಳೂ ಮುಗಿದಿದ್ದವು. ಅವಳ ಮುಂಗೈಗಳು ನನ್ನ ಹೆಬ್ಬೆಟ್ಟಿನ ಲಟಿಕೆಯನ್ನು ತೆಗೆಯಲು ಹೆಣಗುತಿದ್ದವು. ಲಟಿಕೆ ತೆಗೆಯುವುದನ್ನು ಹೇಳಿಕೊಟ್ಟಿದ್ದೇ ನಾನು.

ಹಿಂಗೇ ಕೇಳಿದಳು "ನಿನ್ನ ಹೆಂಡತಿ ಆಗೋ ಹುಡುಗಿ ಹೆಂಗಿರಬೇಕು?"

"ಯೋಚನೆ ಮಾಡಿಲ್ಲ."

"ಯೋಚನೆ ಮಾಡಿ ಹೇಳು"

"ಸರಿ’

"ಯಾವಾಗ ಹೇಳ್ತೀಯ?"

"ಯೋಚನೆ ಮಾಡಿದ ಮೇಲೆ"

"ಈಗಲೇ ಮಾಡು"

"ಮೊದಲ್ನೆ ಮಾತು ಇಂಟರೆಸ್ಟ್ ಇಲ್ಲ. ನಿಂತ ಕಾಲಗೇ ಮಾಡು ಅನ್ನೋಕೆ ಅದೇನು ಕಾಗದದಿಂದ ದೋಣಿ ಮಾಡಿದ ಹಾಗೆ ಅನ್ಕೊಂಡಿದ್ದಿಯಾ?"

"ಸರಿ ಹಂಗಿದ್ರೆ. ನಾನು ಯೊಚನೆ ಮಾಡಿದ್ದೀನಿ ಕೇಳು"

ಅಲ್ಲಿತ್ತು ಪಾಯಿಂಟು! ನನಗೆ ಇಂಥ ಗಂಡು ಬೇಕು ಅಂತ ನೇರವಾಗಿ ಹೇಳಲಾರದೇ ಈ ಥರ ಸುತ್ತಿ ಸುತ್ತಿ ಹೇಳಿದ್ದಳು. ಏನ್ ಹುಡ್ಗೀರೊ...! ಅನ್ನಿಸಿದ್ದನ್ನ ಒಂದು ಏಟಿಗೆ ಹೇಳಲ್ಲ. ಸುತ್ತು ಹಾಕಬೇಕು. ಅಲ್ಲೀವರೆಗೊ ನಾವು ಬಡಪಾಯಿ ಹುಡುಗರು ಕೂತ್ಕೊಂಡು ಕೇಳಬೇಕು. ಅವರ ಅಣತಿಯನ್ನು ಅವರು ಹೇಳಲು ಸಮಯ ತೆಗೆದುಕೊಂಡದ್ದಕ್ಕಿಂತ ಬೇಗ ನಡೆಸಿಕೊಡಬೇಕು. ಅವರು ಹೇಳೊದನ್ನ ಸಹನೆಯಿಂದ ಕೇಳಿಸಿಕೊಳ್ಳಿ ಅನ್ನುವವರು ಮಾಡೋದನ್ನೂ ಅಷ್ಟೇ ಸಹನೆಯಿಂದ ಮಾಡಿ ಅನ್ನಲ್ಲ!

ಏನು ಹೇಳುತ್ತಾಳೋ ಅಂತ ಸುಮ್ಮನೆ ಕಾಯುತ್ತಿದ್ದೆ.

"ನಂಗೆ ನಿನ್ನಂಥ ಗಂಡ ಬೇಕು. ನಿನ್ನಂಥ ಏನು ನೀನೇ ಗಂಡ ಆಗಬೇಕು."

ಅಂದರೆ ಮದುವೆಗೆ ನೇರ ಬೇಡಿಕೆ ಇಟ್ಟಿದ್ದಿನಿ ಅಂತ ಅವಳಿಗೆ ಗೊತ್ತಿತ್ತೊ ಇಲ್ಲವೊ! ಅರಿಕೆ ಮಾಡಿಕೊಳ್ಳುವವರು ಪೂರ್ವಾಭ್ಯಾಸ ಮಾಡುತ್ತಾರಂತೆ. ನನ್ನ ಸ್ನೇಹಿತರನೇಕರು ಅಭ್ಯಾಸ ನಡೆಸಿದ್ದನ್ನು ಕಂಡಿದ್ದೆ. ಇವಳು ಆ ರೀತಿ ಅಭ್ಯಾಸ ನಡೆಸಿರುವ ಲಕ್ಷಣಗಳೇ ನನಗೆ ಕಾಣಲಿಲ್ಲ ಅಥವಾ ಅಷ್ಟು ಪಕ್ವವಾಗಿ ಅಭ್ಯಾಸ ಮಾಡಿದಳೋ! ವೇಗವಾಗಿ ಗಾಡಿಯಲ್ಲಿ ರಸ್ತೆಯಲ್ಲಿ ಅಡ್ಡ ಬರುವ ಹಂಪ್ಸ್‍ನಂತೆ ತೊಡರಿತು ನನಗೆ ಅವಳ ಮಾತು.

"ನಾನ್ಸೆನ್ಸ್. ನನ್ನನ್ನ ಮದ್ವೆ ಆದ್ರೆ ನೀನು ಸುಖವಾಗಿ ಇರಲ್ಲ"

"ನಾನು ಕೇಳಿದ್ದು ನಿನ್ನನ್ನ. ಸುಖಾನಲ್ಲ." ಅಂದವಳೇ ತಪ್ಪಾದಂತೆ ನಾಲಿಗೆ ಕಚ್ಚಿಕೊಂಡಳು. "ಅಂದ್ರೆ ಹಂಗಲ್ಲ. ನಿನ್ನ ಜೊತೆ ಇದ್ರೆ ಸಾಕು. ಕಷ್ಟ ಸುಖ ಅವೆಲ್ಲಾ ಯೊಚನೆ ಮಾಡೊ ಅವಶ್ಯಕತೆನೇ ಬೇಡ. ನೀನು ಜೊತೆಗಿದ್ರೆ ಸಾಕು." ನನ್ನ ತೋಳನ್ನು ಎರಡೂ ಕೈಗಳಿಂದ ಬಿಗಿಯಾಗಿ ತಬ್ಬಿ ಭುಜಕ್ಕೆ ಕೆನ್ನೆ ಕಿವಿಗಳನ್ನು ಆನಿಸಿದಳು. "ನಿನ್ನ ನೆರಳಲ್ಲಿ ಎಷ್ಟು ಸೆಕ್ಯೂರ್ ಅನ್ಸುತ್ತೆ ಗೊತ್ತಾ ನನಗೆ?"

ತುಟಿಗಳನ್ನು ಕೂಡಿಸಿ ಚಿಕ್ಕದಾಗಿ ಲೊಚಗುಟ್ಟಿದೆ. "ಬರೀ ಸಿನಿಮಾ ಡೈಲಾಗುಗಳು. ದರಿದ್ರ ಸೀರಿಯಲ್‍ಗಳನ್ನ ಏನು ಅಷ್ಟು ನೆಚ್ಚಿಕೊಂಡಿದ್ದೀಯಾ ನೀನು?"

"ಹೋಗೊ ..ರಾಕ್ಷಸ. ಹುಡುಗಿ ನೇರವಾಗಿ ಕೇಳಿದ್ರೂ ಹೆಂಗೆ ಉತ್ತರ ಕೊಡ್ತೀಯಾ ನೋಡು ಒರಟಾಗಿ. ಕೊಬ್ಬು ಕೊಬ್ಬು. ಇಷ್ಟು ದಿನ ನಿನ್ನ ಜೊತೆಗೆ ಇದ್ದೀನಿ. ನಿನ್ನ ಬೆವರಿನ ಕಮಟು ವಾಸನೆ ಮೂಗಿಗೆ ಬಡಿಯೋ ಅಷ್ಟು ಹತ್ರ ಕೂತ್ಗೋತೀನಿ. ಮನಸ್ಸಿನಲ್ಲಿ ಇರೋದೆಲ್ಲಾ ಹೇಳ್ಕೊತೀನಿ. ಏನೂ ಅನ್ಸಿಲ್ವಾ ನಿಂಗೆ? ನನ್ನ ಬಗ್ಗೆ ಒಂದು ಪ್ರೀತಿನೂ ಬೆಳೆದಿಲ್ವಾ? ಜೊತೆಗೆ ಇರ್ತಾ ಇರ್ತಾ ನಾಯೀನೂ ಹಚ್ಚಿಕೋತೀವಿ. ನೀನು ನನ್ನನ್ನು ಅಷ್ಟೂ ಹಚ್ಚಿಕೊಂಡಿಲ್ವಾ? ನನ್ನಂಥಾ ಹುಡುಗಿ ಇರೋವಾಗ?"

"ಕೇಳು. ನಮ್ಮ ಮೆದುಳಿನ ಹಿಂಬಾಗದಲ್ಲಿ ಒಂದು ಗ್ರಂಥಿ ಇರುತ್ತೆ. ಅಂದ್ರೆ ಗ್ಲಾಂಡ್. ಅದು ಆಂಡ್ರೋಫ಼ಿನ್ ಅಂತ ಹಾರ್ಮೋನ್ ಬಿಡುಗಡೆ ಮಾಡುತ್ತೆ. ಆವಾಗ ಈ ಪ್ರೀತಿ ಪ್ರೇಮ ಎಲ್ಲಾ ಆಗೋದು. ಬಹುಷಃ ಆ ಗ್ಲಾಂಡ್ ನನ್ನಲ್ಲಿ ಮಿಸ್ ಆಗಿರ್ಬೇಕು."

"ಆಹಾ! ನೀನೊ ನಿನ್ನ ವಿಜ್ಞಾನನೋ! ಎರಡಕ್ಕೂ ಎಕ್ಕಡ ತಗೊಂಡು ಹೊಡೀಬೇಕು. ಎಲ್ಲಾ ದೇಹದ ರಸಾಯನಿಕ ಆಟನೇ ಆದ್ರೆ ಮನಸ್ಸಿನದು ಏನು ಪ್ರಾಮುಖ್ಯ ಉಳೀತು? ನಿನ್ನ ಜೀವನದ ನಿರ್ಧಾರದಲ್ಲಿ ಮನಸ್ಸಿನ ಪಾತ್ರನೇ ಇಲ್ಲ ಅಂದ್ರೆ ಅದೆಂಥದು? ಹಸಿವು ನಿದ್ರೆ ಥರಾನೆ ಪ್ರೀತಿನೂ ದೇಹಕ್ಕೆ ಸಂಬಂಧಪಟ್ಟಿದ್ದು ಅನ್ನೋದಾದ್ರೆ ನಿಂಗೂ ಪ್ರಾಣಿಗಳಿಗೂ ಏನು ವ್ಯತ್ಯಾಸ ಉಳೀತು? ಈ ಮನಸ್ಸಿನ ಆಟ ಇಲ್ಲದೇ ಹಂದಿ ನಾಯಿಗಳೂ ಬದುಕುತ್ತವೆ."

ನಂಗೆ ಏನೂ ತೋಚದೇ ತಲೆ ತಗ್ಗಿಸಿ ಅವಳ ಮುಂಬೆರಳುಗಳ ತಿಣುಕಾಟವನ್ನು ನೋಡುತ್ತಾ ಕುಳಿತೆ.

ಇದಾಗಿ ಕೆಲ ದಿನ ಕಳೆದಿತ್ತು.
ಸೀದಾ ಬಂದವಳೇ ಯಾವುದೇ ಮುನ್ನುಡಿ ಇಲ್ಲದೇ "ನನ್ನ ಮದುವೆ ಫ಼ಿಕ್ಸ್ ಮಾಡಿದ ಅಣ್ಣ" ಅಂದಳು.
"ಓಹ್! ಕಂಗ್ರಾಟ್ಸ್."

"ಎಂಥದೋ ಕಂಗ್ರಾಟ್ಸ್. ನಿಂಗೆ ಗೊತ್ತಲ್ವ ನಂಗೆ ಏನು ಬೇಕು ಅಂತ? ನೀನಲ್ಲ ಅಂದ್ರೆ ಗಂಡ ಅನ್ನೋನು ನಂಗೆ ಬೇಕಾಗಿಲ್ಲ. ನಂಗೆ ವರದಕ್ಷಿಣೆ ಕೊಡೊ ತಾಕತ್ತಿಲ್ಲ. ನಿಂಗೆ ವರದಕ್ಷಿಣೆ ಬೇಡ ಅಲ್ವಾ? ನಂದು ಬೇರೆ ಜಾತಿ. ನಿಮ್ಮನೇಲಿ ಜಾತಿಗೆ ತೊಂದ್ರೆ ಇಲ್ಲ ಅಲ್ವಾ? ನನ್ನ ನೋಡೊ ಹ್ಯಾಗಿದ್ದಿನಿ. ನಾಲ್ಕು ಜನ ಹೌದು ಅನ್ನೊ ಅಷ್ಟು ಲಕ್ಷಣವಾಗಿದ್ದೀನಿ. ನಿಂಗೆ ಅಡುಗೆ ಮಾಡಿ ಹಾಕ್ತೀನಿ. ಮನೇಲಿ ಕೆಲಸದೋಳ ಥರ ಬಿದ್ದುಕೊಂಡಿರ್ತೀನಿ. ನನ್ನ ಬಿಡಬೇಡ. ಅಮ್ಮಂಗೆ ನಿನ್ನ ಕಂಡ್ರೆ ಇಷ್ಟ. ಅವಳ ಜೊತೆ ಮಾತಾಡು. ನಿನ್ನ ಬಿಟ್ಟು ಬೇರೆ ಬೇಡ ನಂಗೆ.." ಮನಸ್ಥೀಮಿತ ಕಳೆದುಕೊಂಡವರ ಹಾಗೆ ಅವಳು ಬಡಬಡಿಸುತ್ತಿದ್ದರೆ ನಾನು ಅವಳ ರಟ್ಟೆಯನ್ನು ನನ್ನ ಬಲಗೈಲಿ ಹಿಡಿದು ಎಡಗೈಲಿ ತಲೆ ಮೇಲೆ ಕೈಯ್ಯಾಡಿಸಿ ಸುಮ್ಮನಿರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದೆ.

ಅವಳ ಬೇಡಿಕೆಗೆ ಏನೂ ಉತ್ತರೆ ಕೊಡದೇ ಸುಮ್ಮನೆ ಮನೆಗೆ ಬಂದಿದ್ದೆ. ಮನದಲ್ಲಿ ಇದ್ದಕ್ಕಿದ್ದಂತೆ ಯಾಕೊ ದುಗುಡ ಶುರುವಾಗಿತ್ತು. ಅವಳು ದೂರ ಹೋಗುತ್ತಿದ್ದಾಳೆ. ಅವಳಿಲ್ಲದೇ ಬದುಕು ಎಷ್ಟು ಕಷ್ಟ ಎನ್ನಿಸತೊಡಗಿತ್ತು. ಇಷ್ಟು ದಿನ ಏನೂ ಅನ್ನಿಸಿರಲಿಲ್ಲ. ಜೊತೆಗೆ ಇರುತ್ತಾಳೆ ಬಿಡು ಎಂಬ ಅಸಡ್ಡೆ ಅನ್ನಿಸುತ್ತದೆ! ಈಗ ದೂರವಾಗುತ್ತಾಳೆ ಎಂದೊಡನೆ ಮನಸ್ಸು ದುಗುಡಕ್ಕೊಳಗಾಗಿತ್ತು. ಈ ಮನಸ್ಸೇ ಇಂಥಾದ್ದು. ನಮ್ಮದೇ ಆದರೂ ನಮ್ಮ ಅಂಕೆಗೆ ಸಿಕ್ಕೋದಿಲ್ಲ. ನಿಮ್ಮ ಕೈಗೆ ಅದನ್ನ ಸಿಕ್ಕಿಸ್ತೀನಿ ಅಂತ ಮನೋವೈದ್ಯರು ಹೆಣಗಾಡುತ್ತಾರೆ. ರಾಮಕೃಷ್ಣಾಶ್ರಮದೋರು, ಮ್ಯಾನೇಜ್‍ಮೆಂಟ್ ಗುರುಗಳು ಅದನ್ನು ಸಿಕ್ಕಿಸುವ ಉಪಾಯ ತಿಳಿಸಿ ಪುಸ್ತಕ ಬರೆಯುತ್ತಾರೆ. ಅಷ್ಟು ಸುಲಭವಾಗಿ ಸಿಕ್ಕೀತೆ ಅದು? ಸಿಗುವ ಹಾಗಿದ್ದರೆ ಅಷ್ಟೊಂದು ಪುಸ್ತಕಗಳೇಕೆ ಬರೆಯುತ್ತಿದ್ದರು? ಜನ ಆಶ್ರಮ ಯಾಕೆ ಸೇರುತ್ತಿದ್ದರು? ಆಶ್ರಮ ಸೇರಿದ ಮೇಲೆ ಮನಸ್ಸನ್ನು ನಿಯಂತ್ರಿಸಿ ಏನು ಪ್ರಯೋಜನ? ಬೇಕಾದದ್ದು ಎದುರಿಗೆ ಇರೋವಾಗ ನಿರ್ಲಕ್ಷಿಸುತ್ತದೆ. ದೂರ ಹೋದೊಡನೆ ಬೆನ್ನಟ್ಟಿ ಹೊರಡುತ್ತದೆ. ನಾವು ಅದಕ್ಕೆ ಮರ್ಯಾದೆ ಕೊಟ್ಟಷ್ಟು ನಮಗೆ ತೊಂದರೆ ಕೊಡುತ್ತದೆ. ಷರೀಫ಼್ ಸಾಹೇಬರು ಸುಮ್ನೇ ಹೇಳಿದ್ದಾರ? "ಮನಸೇ ಮನಸ್ಸಿನ ಮನಸಾ ನಿಲ್ಲಿಸುವುದು. ಮನಸ್ಸಿನ ಮನ ತಿಳಿಯುವ ಮನವ್ಯಾರೆಲೋ ಮನವೇ?". ತನ್ನ ಬಗೆಗಿನ ಪ್ರಶ್ನೆಗಳೇ ಮನಸ್ಸನ್ನು ಕಾಡತೊಡಗಿದವು. ಮನಸ್ಸಿನಲ್ಲಿಯೇ ನೆಟ್ಟಿದ್ದ ಮನಸ್ಸನ್ನು ಕಷ್ಟಪಟ್ಟು ನೇತ್ರಾಳೆಡೆಗೆ ಎಳೆತಂದದ್ದಾಯಿತು. ಕೆಲ ನಿದ್ದೆಯಿಲ್ಲದ ಇರುಳುಗಳು ಕಳೆದಂತೆ ಸ್ಪಷ್ಟವಾದ ನಿರ್ಧಾರವನ್ನು ತಳೆದು ನಿದ್ದೆ ಹೋದೆ.

ಮರುದಿನದಿಂದ ಅವಳನ್ನು ಭೇಟಿಯಾಗುವುದನ್ನು ನಿಲ್ಲಿಸಿದೆ. ಕಾಲೇಜು ರಸ್ತೆಯಲ್ಲಿ ಕಾದು ನಿಂತದ್ದು ಕಂಡರೆ ಆ ದಾರಿ ತಪ್ಪಿಸಿ ತಿರುಗತೊಡಗಿದೆ. ನಮ್ಮ ಮನೆಗೆ ಅವಳು ನನ್ನೊಡನೆಯೇ ಬರುತ್ತಿದ್ದಳು. ಹಾಗಾಗಿ ಒಬ್ಬಳೇ ಬರುವ ಪ್ರಮೇಯವೇ ಇರಲಿಲ್ಲ. ಈ ಮಧ್ಯೆ ಅವಳನ್ನು ಮದುವೆಯಾಗುವ ಗಂಡಿನ ಬಗ್ಗೆ ಸಾಧ್ಯಂತವಾದ ಮಾಹಿತಿಯನ್ನು ಸಂಗ್ರಹಿಸತೊಡಗಿದೆ. ಕೆಲಸ ಮಾಡುತ್ತಿರುವುದೆಲ್ಲಿ? ಮನೆತನ ಎಂಥದು? ಅವನ ತಾಕತ್ತು ಎಷ್ಟು, ನನಗೆ ಸರಿಸಮನಾಗಬಲ್ಲನೇ ಇತ್ಯಾದಿ. ಕೆಲ ತಿಂಗಳುಗಳು ಹೀಗೆಯೇ ಕಳೆದವು. ಒಂದು ದಿನ ಅವಳ ಅಣ್ಣ ಮನೆಗೆ ಲಗ್ನ ಪತ್ರಿಕೆ ಹಿಡಿದುಕೊಂಡು ಬಂದ.

(ಮುಂದಿನ ಕಂತಲ್ಲಿ ಗ್ಯಾರಂಟಿ ಮುಗಿಸುತ್ತೇನೆ....)

Rating
No votes yet

Comments