ಮೊದಲ ಪ್ರೀತಿ

ಮೊದಲ ಪ್ರೀತಿ

ಇಂದು ಸಿಡಿಲಿನ ಆರ್ಭಟ ಬಹಳ ಜೋರಾಗಿ ಇತ್ತು. ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಕಿಟಕಿಯಲ್ಲಿ ನೋಡುತ್ತಾ ಕುಳಿತಿದ್ದ ವಸುಧಾಳಿಗೆ ಬೇಡ ಬೇಡವೆಂದರೂ ಮನಸ್ಸು ಹಿಂದಕ್ಕೆ ಓಡಿತು.

ನನಗೆ ಚಿಕ್ಕಂದಿನಿಂದಲೂ ಗುಡುಗು, ಸಿಡಿಲೆಂದರೆ ಭಾರೀ ಭಯ. ಸ್ವಲ್ಪ ಮಿಂಚಿದರೂ ಸಾಕು, ಅಮ್ಮನನ್ನು ಹುಡುಕಿಕೊಂಡು ಹೋಗಿ ಅವಳ ಸೆರಗಿನಲ್ಲಿ ಅವಿತುಕೊಳ್ಳುತ್ತಿದ್ದೆ. ಮಳೆ ನಿಲ್ಲುವವರೆಗೂ ಅಮ್ಮನನ್ನು ಬಿಟ್ಟು ಕದಲುತ್ತಿರಲಿಲ್ಲ. ಅಪ್ಪನನ್ನು ನೋಡಿದ ನೆನಪೇ ಇರಲಿಲ್ಲ ನನಗೆ. ನನಗೆ ೪ ವರ್ಷವಿದ್ದಾಗಲೇ ಅಪ್ಪ ಕ್ಷಯ ಬಂದು ತೀರಿಹೋಗಿದ್ದರಂತೆ. ಅಪ್ಪನ ಸಂಪಾದನೆಯಲ್ಲಿ ಉಳಿತಾಯ ಮಾಡಿದ ಹಣವೆಲ್ಲಾ ಅವರ ಕಾಯಿಲೆಗೆ ಖರ್ಚಾಗಿತ್ತಂತೆ. ಅಮ್ಮ ಟೈಲರಿಂಗ್ ಅಲ್ಪ ಸ್ವಲ್ಪ ಕಲಿತಿದ್ದಳು. ಅಕ್ಕ ಪಕ್ಕದ ಮನೆಯವರಿಗೆ ರವಿಕೆ, ಪೆಟಿಕೋಟ್ ಮುಂತಾದವುಗಳನ್ನು ಹೊಲೆದು ಕೊಟ್ಟು ಸಂಪಾದಿಸುತ್ತಿದ್ದಳು. ಅಣ್ಣ, ಅಕ್ಕಪಕ್ಕದ ಮಕ್ಕಳಿಗೆ ಮನೆ ಪಾಠ ಹೇಳಿಕೊಡುತ್ತಾ, ಹೇಗೋ ಕಷ್ಟ ಪಟ್ಟು ಡಿಪ್ಲೋಮಾ ಮುಗಿಸಿ ಕೆಲಸಕ್ಕೆ ಸೇರಿಕೊಂಡಿದ್ದ.

ನನಗೆ ಅಮ್ಮ ಹಾಗೂ ಅಣ್ಣನೇ ಪ್ರಪಂಚ. ನಾನು ಕೂಡಾ ಚಿಕ್ಕಂದಿನಿಂದಲೇ ನನಗಿಂತ ಸಣ್ಣ ಮಕ್ಕಳಿಗೆ ಮನೆ ಪಾಠ ಮಾಡುವುದು, ಅಮ್ಮ ಹೊಲೆಯುತ್ತಿದ್ದ ರವಿಕೆಗಳಿಗೆ ಗುಂಡಿ ಹಾಕುವುದು, ಹೆಮ್ಮಿಂಗ್ ಮಾಡುವುದು ಮಾಡುತ್ತಲೇ ಬೆಳೆದಿದ್ದೆ. ಮನೆಯ ಪರಿಸ್ಥಿತಿ ಅರಿವಿದ್ದದ್ದರಿಂದ ಸ್ವಲ್ಪ ಕೀಳರಿಮೆ, ಸಂಕೋಚದಿಂದ ಕೂಡ ಬಳಲುತ್ತಿದ್ದೆ. ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ನಮ್ಮ ಮನೆ ಸಿಟಿ ಬಸ್ ನಿಲ್ದಾಣದ ಹತ್ತಿರವಿದ್ದದ್ದರಿಂದ, ನಾವು ಬಡವರಾಗಿದ್ದರೂ, ನೆಂಟರು ಬಂದು ಹೋಗುವವರಿಗೆ ಕಡಿಮೆಯಿರಲಿಲ್ಲ. ಬಂದ ನೆಂಟರೆಲ್ಲಾ ನಮ್ಮ ಮನೆಯಲ್ಲಿ ಲಗೇಜ್ ಇಟ್ಟು, ಅಮ್ಮ ಮಾಡಿಕೊಟ್ಟ ಕಾಫಿ ಕುಡಿದು ಅವರವರ ಕೆಲಸಗಳಿಗೆ ಹೊರಡುತ್ತಿದ್ದರು. ಮನೆಯಲ್ಲಿ ಅಷ್ಟು ಬಡತನವಿದ್ದರೂ, ಮಕ್ಕಳಿಗೆ ಕೊರತೆ ಮಾಡಿಯಾದರು ಸರಿ, ಅಮ್ಮ ಬಂದವರಿಗೆ ತೃಪ್ತಿಯಾಗುವಂತೆ ತಿಂಡಿ, ಅಡುಗೆ ಮಾಡಿ ಬಡಿಸುತ್ತಿದ್ದಳು. ಮನೆಗೆ ಯಾರಾದರೂ ಬಂದರೆ ಅವತ್ತು ನಮಗಿಬ್ಬರಿಗೆ ಕಾಫಿಗೆ ಖೋತಾ! ಅಣ್ಣ ಎಲ್ಲರೊಂದಿಗೂ ಸರಾಗವಾಗಿ ಬೆರೆಯುತ್ತಿದ್ದ. ಆದರೆ ನಾನು ಮನೆಗೆ ಯಾರೂ ಬಂದರೂ ಎದುರಿಗೆ ಬರುತ್ತಿರಲಿಲ್ಲ.

ನಾನಾಗ ಒಂಭತ್ತನೇ ಕ್ಲಾಸಿನಲ್ಲಿದ್ದೆ. ಒಂದು ದಿನ, ಅಮ್ಮ ತಾನು ಹೊಲಿದಿದ್ದ ಬಟ್ಟೆಗಳನ್ನು ಕೊಟ್ಟು ಬರುವೆನೆಂದು ಹೇಳಿ ಮಾರ್ಕೆಟ್ಟಿಗೆ ಹೋಗಿದ್ದಳು. ಅಣ್ಣನು ಕೆಲಸಕ್ಕೆ ಹೋಗಿದ್ದ. ಮಳೆ ಬರುವ ಹಾಗಿತ್ತು. ಅಮ್ಮನಿಗೆ ಹೋಗಬೇಡವೆಂದರೂ, ಅಂದೇ ಕೊಡದಿದ್ದರೆ, ಹಣ ಸಿಗುವುದಿಲ್ಲವೆಂದು ಹಾಗೂ ಬೇಗ ಬರುವುದಾಗಿಯೂ ಹೇಳಿ ಹೋಗಿದ್ದಳು. ಮಳೆ ಶುರುವಾಗಿಯೇ ಬಿಟ್ಟಿತು. ಜೊತೆಗೆ ಮಿಂಚು, ಗುಡುಗು, ಸಿಡಿಲಿನ ಆರ್ಭಟ ಬೇರೆ. ಭಯದಿಂದ ನಡುಗುತ್ತಾ ಕುಳಿತಿದ್ದ ನನಗೆ, ಕರೆಗಂಟೆ ಸದ್ದು ಕೇಳಿಸಿತು. ಅಮ್ಮ ಬಂದಿರಬೇಕೆಂದು ಖುಶಿಯಿಂದ ಓಡಿದ ನನಗೆ ಕಂಡದ್ದು ಬಾಗಿಲಲ್ಲಿ ಮಳೆಯಲ್ಲಿ ನೆಂದು ತೊಪ್ಪೆಯಾಗಿ ನಸುನಗುತ್ತಾ ನಿಂತಿದ್ದ ಯುವಕ. ಆತನ ಕಣ್ಗಳಲ್ಲಿ ಏನೋ ಆಕರ್ಷಣೆ. ಮಳೆಯ ಆರ್ಭಟಕ್ಕೆ ಬೆದರಿದ್ದ ನನಗೆ ಆತನನ್ನು ಕಂಡೊಡನೆಯೇ ದೇವರನ್ನು ಕಂಡಷ್ಟು ಸಂತೋಷವಾದದ್ದು ಸುಳ್ಳಲ್ಲ. ಹೀಗಿತ್ತು ನನ್ನ ಹಾಗೂ ಪ್ರಸಾದನ ಮೊದಲ ಭೇಟಿ. ಆತನೋ ಸಿ.ಇ.ಟಿ. ಪರೀಕ್ಷೆಗಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಬಂದಿದ್ದ. ಅಮ್ಮ ಮನೆಗೆ ಬಂದೊಡನೆಯೇ ಅವಳನ್ನು ತಬ್ಬಿಕೊಂಡು ಆತನಿರುವುದನ್ನು ಮರೆತು ಅಳಲು ಶುರು ಮಾಡಿಬಿಟ್ಟೆ. ಅದೇನೋ ಮೊದಲ ಬಾರಿಗೆ ಅವನಿದ್ದರೂ ನನಗೆ ಸಂಕೋಚವೆನಿಸಲಿಲ್ಲ.

ಅಣ್ಣ ಬಂದೊಡನೆಯೇ ಅಮ್ಮ ನನ್ನ ಕಥೆ ಹೇಳಿ ತಮಾಷೆ ಮಾಡಿ ನಕ್ಕಳು. ಅಣ್ಣ ನನ್ನ ಜಡೆ ಎಳೆದು ತಮಾಷೆ ಮಾಡಿದಾಗ ಅಂದೇಕೋ ಕೆನ್ನೆ ಕೆಂಪಾಗಿದ್ದು ಸುಳ್ಳಲ್ಲ. ಓರೆಗಣ್ಣಿನಿಂದ ಪ್ರಸಾದ್ ನನ್ನು ನೋಡಿದರೆ, ಅವ ಕೂಡಾ ನಗುತ್ತಿದ್ದ. ಅವನನ್ನು ನೋಡುತ್ತಿದ್ದರೆ ನೋಡುತ್ತಲೇ ಇರಬೇಕೆಂಬ ಆಸೆಯಾಗುತ್ತಿತ್ತು. ಅಣ್ಣ, ಪ್ರಸಾದ್ ಹೆಚ್ಚು ಕಮ್ಮಿ ಒಂದೇ ವಯಸ್ಸಿನವರಾದ್ದರಿಂದ ಬಲು ಬೇಗ ಕ್ಲೋಸಾಗಿಬಿಟ್ಟರು. ಇಬ್ಬರೂ ಸೇರಿ ನನ್ನನ್ನು ತಮಾಷೆ ಮಾಡುವಾಗ, ಅದೇನೊ ಹಿತವಾದ ಭಾವನೆ. ಸಿ.ಇ.ಟಿ. ಪರೀಕ್ಷೆ ಮುಗಿಸಿ, ಇನ್ನೆರಡು ದಿವಸ ಬೆಂಗಳೂರೆಲ್ಲಾ ನೋಡಿದ ಪ್ರಸಾದ್ ವಾಪಾಸ್ಸು ದಾವಣಗೆರೆಗೆ ಹೋದಾಗ ಮನಸ್ಸಿಗೇನೋ ಚುಚ್ಚಿದ ಹಾಗನ್ನಿಸಿತು. ಅವನ ಕಣ್ಣುಗಳು ಕೂಡಾ ನನಗೇನೋ ಹೇಳುತ್ತಿರುವಂತೆ ಭಾಸವಾಯಿತು. ಅವನು ಬಸ್ಸಿನಲ್ಲಿ ಕುಳಿತಾಗ ಹೇಳಲೋ ಬೇಡವೋ ಎಂದು ಯೋಚಿಸುತ್ತಾ ‘ನನ್ನನ್ನು ಮರೆಯಬೇಡಿ’ ಎಂದು ಹೇಳಿದೆ. ಎಂದೂ ಯಾರೊಡನೆಯೋ ಮಾತಾಡದಿದ್ದ ನಾನು, ಅಂದು ಹಾಗ್ಯಾಕೆ ಹೇಳಿದೇನೋ ಗೊತ್ತಿಲ್ಲ. ಪ್ರಸಾದ್ ಹೋದ ಮೇಲೆ ಮನೆ ಬಿಕೋ ಎನ್ನಿಸುತ್ತಿತ್ತು. ಅಮ್ಮ, ಅಣ್ಣನಿಗೂ ಕೂಡಾ ಹಾಗೆ ಅನ್ನಿಸುತ್ತಿತ್ತು.

..........ಮುಂದುವರೆಯುವುದು

Rating
No votes yet

Comments