ಕಣ್ಣು: ಪದ ಹಳತು, ಬಳಕೆ ಹೊಸತು

Submitted by olnswamy on Wed, 08/03/2005 - 13:24
ಕನ್ನಡದಲ್ಲಿ ಪದಗಳನ್ನು ಸೇರಿಸಿ ಹೊಸಪದಗಳನ್ನು ಸೃಷ್ಟಿಮಾಡಿಕೊಳ್ಳುತ್ತೇವೆ. ಈಗೀಗ ಇಂಥ ಸಾಮರ್ಥ್ಯ ಭಾಷೆಗೆ ಕಡಮೆಯಾಗುತ್ತಿದೆಯೋ ಎಂಬ ಅನುಮಾನ ಕೆಲವರಲ್ಲಿಯಾದರೂ ಮೂಡಿದೆ. ಈ ಕಾಲಮ್ಮಿನಲ್ಲಿ ಕನ್ನಡದಲ್ಲಿ ಬಳಕೆಯಲ್ಲಿದ್ದ, ಈಗಿನ ಬರವಣಿಗೆಯಲ್ಲಿ ಕಾಣದಾಗಿರುವ ಕೆಲವು ಪದಗಳನ್ನು ನಿಮ್ಮ ಗಮನಕ್ಕೆ ತರುವ, ಆ ಮೂಲಕ ಮತ್ತೆ ಚಾಲ್ತಿಗೆ ತರುವ ಪ್ರಯತ್ನ. ಬೇರೆ ಬೇರೆ ಸಂದರ್ಭದ ಬರವಣಿಗೆಯಲ್ಲಿ ಬಳಸಬಹುದಾದ ಇಂಥ ಪದಗಳನ್ನು ನೀವೂ ಸೂಚಿಸಿ. ಸದ್ಯಕ್ಕೆ ಕಣ್ಣು ನನ್ನ ಆಸಕ್ತಿಯ ಪದ. ಕಣ್ಣು ಎಂಬುದರೊಡನೆ ಸೇರಿ ಸುಮಾರು ನೂರಕ್ಕೂ ಹೆಚ್ಚು ನುಡಿಬಳಕೆಗಳು ಕನ್ನಡದಲ್ಲಿವೆ. ಕಣ್ಗಾಣು (ಕಣ್+ಕಾಣ್) = ಮನಗಾಣು ಎಂಬುದಕ್ಕೆ ವಿರುದ್ಧವಾಗಿ ಕೇವಲ ಕಣ್ಣಿಂದ ಮಾತ್ರ, ನೋಟದಿಂದ ಮಾತ್ರ ಅರಿಯುವುದು. ಮನಗಾಣುವುದು ಅನುಭವದ ಸತ್ಯ, ಕಣ್ಗಾಣುವುದು ಕೇವಲ ತೋರಿಕೆಯ ಸತ್ಯ. ಉದಾ: ಅವನ ಪ್ರೀತಿಯನ್ನು ಮನಗಂಡೆ ಎಂದುಕೊಂಡಳು. ಆದರೆ ಅವನ ಪ್ರೀತಿ ಕೇವಲ ಕಣ್ಗಾಣುವ ಪ್ರೀತಿ. ಕಣ್ಚಲ್ಲ = ಸರಸಾಲೋಕನ. ಕಣ್ಣಿನಲ್ಲಿ ತೋರುವ ಮುಗುಳು ನಗು. ಉದಾ. ಹುಡುಗಿಯರ ಕಣ್ಚಲ್ಲಾಟಕ್ಕೆ ಮರುಳಾಗದವರು ಯಾರು? ಕಣ್ಗಿಚ್ಚು = ಕೋಪ ತುಂಬಿದ ದೃಷ್ಟಿ. ಕಣ್ಣಿನಲ್ಲಿ ಕಿಡಿ ಸುರಿಸಿದ ಎಂಬ ಮಾತು ಕೇಳಿಲ್ಲವೆ, ಅದರಂಥದು, ಆದರೆ ಹೊಸತು ಅನ್ನಿಸೀತು. ಉದಾ. ಅಪ್ಪನ ಕಣ್ಗಿಚ್ಚಿಗೆ ಮನೆಯೆಲ್ಲ ಸುಟ್ಟುಹೋಗುತ್ತದೆ ಅನಿಸಿತು.

Comments