"ಭವದ ಎಲ್ಲೆ ಮೀರಿ....?"

"ಭವದ ಎಲ್ಲೆ ಮೀರಿ....?"

"ಭವದ ಎಲ್ಲೆ ಮೀರಿ .......?"

ಇಳಿ ಸಂಜೆ ಹೊತ್ತಲ್ಲಿ ಸೌಗಂಧಿತ ವನ ಪಾರ್ಕಿನ ಮೂಲೆಯಲ್ಲಿ ಕೂತು ’ ಏನ್ ಅನ್ಕೊಂಡಿದ್ದಾರೆ ನನ್ನ.... ಕೈಲಾಗದವನು ಅಂತಾನಾ..... ಥೂ... ದರಿದ್ರದವರು....’ ಹೀಗೆ ತನ್ನಷ್ಟಕ್ಕೆ ತಾನು ಮಣಮಣ ಅಂತ ಗೊಣಗಿಕೊಳ್ಳುತ್ತಿರುವವನು ಎಲ್ಲರಿಂದ ವಿಬು ಎನಿಸಿಕೊಂಡರೂ ನಿಜನಾಮದಲ್ಲಿ ವಿಭವನಾಗಿದ್ದ....
ಅವರೆಲ್ಲಾ ಸೇರಿ ಆ ಜ್ಯೂನಿಯರ್‍ ಹುಡ್ಗಿನ ರೇಗಿಸೋವಾಗ ’ಲೋ ಹಿಂಗೆಲ್ಲಾ ಮಾಡ್ಬೇಡ್ರೋ...’ ಅಂದದ್ದೇ ದೊಡ್ಡ ತಪ್ಪಾಗಿ ಹೋಯ್ತಲ್ಲಾ...
ಒಬ್ಬಬ್ರೂ ಒಂದೊಂದು ರಾಗ ತೆಗೆದ್ಬಿಟ್ರು...
’ಹುಡ್ಗಿ ರೇಗಿಸೋದು ಅಂದ್ರೆ ಹುರುಗಡ್ಲೆ ತಿಂದಂಗೆ ಅಂನ್ಕೋಂಡ್ಯಾ ಮಗ್ನೇ...’ಅಂತ ಒಬ್ಬ,
’ಆವನ್ದು ಹೆಂಗರಳು .... ಕಣ್ರೋ.... ಮಿಡಿತಾಯ್ತೆ ಪಾಪಾ...’ ಅಂತಾ ಇನ್ನೊಬ್ಬ
’ಮಗಾ ಅವನ್ದೇನು ತಪ್ಪಿಲ್ಲ್ರೋ... ಅವನು ಅವರ ಅಕ್ಕನ ಜೊತ್ ಜೊತೇಲಿ ಇಡೀ ಮೈಸೂರಲ್ಲಿರೋ ಬಟ್ಟೆ ಅಂಗಡಿ, ಬ್ಯಾಂಗಲ್ ಸ್ಟೋರ್‍ಗಳ ಸುತ್ತಿ ಸುತ್ತಿ ಹೆಂಗಸ್ರು ಬುದ್ಧಿ ಅಂಟ್ಕೋಂಡೈತೆ..’ ಅಂತ ಬಾಯಿಬಡುಕ ಅಂದ್ರೆ..... ಮೂರೂ ಬಿಟ್ಟವನೊಬ್ಬ ’ಲೋ ಗಂಡಸರ ಮ್ಯಾಟ್ರರಲ್ಲಿ ಇವನ್ದೇನು ಮಧ್ಯ.... ಬಿಡ್ರೋ ಲೇ ಬಿಡ್ರೋ ’... ... ಅನ್ನೋದೇ....ಥೂ....
" ಲೋ ಸುಮ್ನೆ ರೇಗಿಸ್ತೀರಪ್ಪಾ.... ನೋಡ್ರೀ ಬೇಕಿದ್ರೆ ಅಲ್ಲಿ ಬರ್ತಾವ್ಳಲ್ಲ ರೆಡ್ ಡ್ರೆಸ್ಸು... ಅವಳ ಜಡೆ ಬೇಕಿದ್ರು ಎಳೆದು ಬರ್ತಾನೆ ನಮ್ ವಿಬು... ಏನೋ" ಅಂದ ಪಾಪಿಯೊಬ್ಬನ ಮಾತಿಗೆ ಸಿಕ್ಕಿ ಎರಡು ಹೆಜ್ಜೆ ಇಟ್ಟ ಮೇಲೆನೆ ’ ಛೇ.... ಎಂತಾ ಅಡಕಸಬಿ ಕೆಲಸಕ್ಕೆ ಒಪ್ಕೋಬಿಟ್ಟೇ’ ಅಂತಾ ಗೊತ್ತಾದದ್ದು.... ವಿಧಿಯಿಲ್ಲದೆ ಅವಳೆಡೆಗೆ ಇನ್ನೂ ನಾಲ್ಕಾರು ಹೆಜ್ಜೆಯಿಟ್ಟು ಎದುರಾಬದುರಾಗಿ ನಿಂತ ಕ್ಷಣದಲ್ಲೇ, ಅವಳೇ ಮೊದಲಾಗಿ
"Excuse me ... my name is Arila.... (ಅಂತ ಗೊತ್ತಿದಷ್ಟು ಇಂಗ್ಲೀಸು ಮುಗಿಸಿ) ಫಸ್ಟ್ ಬಿಎಸ್ಸಿ ಕ್ಲಾಸ್ ರೂಂ ಯಾವ್ ಕಡೆ ?" ಅಂತ ಅರ್ಧ ಭಯ ,ಅರ್ಧ ಲಜ್ಜೆಯ ಮಿಳಿತದಲ್ಲಿ ಉಲಿದಳು....
ಇವನು ಕೈದೋರಿದೆಡೆಗೆ ಬಿರಬಿರನೆ ನಡೆದು ಹೋದ ಅವಳ ನಡಿಗೆಯಲ್ಲಿ ದಿಟ್ಟಿನೆಟ್ಟ ಇವನಿಗೆ, ಬಹುತೇಕ ಸೊಂಟದ ಸೀಮಾರೇಖೆಯನ್ನು ದಾಟಿದ , ನಡುವಿನ ಬಳುಕಿಗೆ ಸಮೀಕರಿಸಿ ತಾನೂ ಲಯಬದ್ಧವಾಗಿ ಬಳುಕುತ್ತಾ ಸಾಗಿದ ಜಡೆಯ ಡೊಂಕು ’ಸಿಗೊಲ್ಲಾ ಹೋಗೋ’ ಎಂದು ಕೊಂಕಿಸಿದಂತಾಯಿತು.... ಅಸಹಾಯಕನ ಹಾಗೆ ನಿಂತದ್ದು ಅಲ್ಲದೆ ಮುಂದಿನ ನಿಮಿಷದಲ್ಲೇ ’ನಿಂಗೆ ಇನ್ನೂ ಒಂದ್ವರ್ಷ ಟೈಮ್ ಕೊಡ್ತೀವಿ ...ಎಳೆಯೋ ನೋಡೋಣ ’ ಅಂದವರ ಮಾತನ್ನೂ ಪ್ರತಿಭಟಿಸಿಲಾಗದ ಅಸಹಾಯಕತೆಗೆ ಮತ್ತೇ ಸಿಲುಕಿದ ವಿಬು, ಸದ್ಯ ಕತ್ತಲಾಗುತ್ತಿದ್ದು ತಾನು ಮನೆಗೆ ಹೋಗದೆ ಇರಲಾಗದ ತನ್ನ ಅಸಹಾಯಕ ಸ್ಥಿತಿಯನ್ನೇ ಮತ್ತೊಮ್ಮೆ ನೆನೆದು, ಹಳಿದು ಮನೆ ಸೇರಿದ....

’ಯಾಕೋ ಲೇಟೂ..’ ಅಂದ ಅಕ್ಕನ ಕಡೆಗೆ ತಿರುಗಿ ’ನಿನ್ನ ಜೊತೆ ಜಗಳ ಕೂಡ ಬೇಡಕಣೇ’ ಎನ್ನುವವನ ಹಾಗೆ ನೋಡಿ ತನ್ನ ರೂಮಿನೆಡೆಗೆ ನಡೆಯುವಷ್ಟರಲ್ಲೇ " ಎಲ್ಲೋಗಿದ್ದೋ ಇಷ್ಟು ಹೊತ್ತು....? ಸೀರೆ ಫಾಲ್ಸ್ ಹಾಕೋಕೆ ಕೊಟ್ಟಿದ್ದನಲ್ಲ ತಂದ್ಯಾ" ಅಂದ ಅಮ್ಮನ ಮಾತು ಕೇಳಿದಾಕ್ಷಣ ....’ ಇನ್ಮೇಲೆ ನಿಮ್ ಕೆಲ್ಸ ನೀವೆ ಮಾಡ್ಕೋಳಿ... ಹೆಂಗಸರ ಕೆಲ್ಸಕ್ಕೆಲ್ಲಾ ನನ್ ಕರೀಬೇಡಿ’ ಅಂದವನೇ ರೂಮಿನ ಬಾಗಿಲು ಧಡಾರ್‍ ಎನಿಸಿದ ....
ರಾತ್ರಿ ಬಹಳ ಹೊತ್ತಿನವರೆಗೆ ಯೋಚಿಸಿದವನೇ ತನ್ನ ಡೈರಿ ತೆಗೆದು....
೧) ಅಕ್ಕ, ಅಮ್ಮ ಹೇಳೋ ಹೆಂಗಸರ ಕೆಲ್ಸ ಒಂದೂ ಮಾಡಬಾರ್ದು....ಅವ್ರು ಕರೆದ ಕಡೆಗೆಲ್ಲಾ ಜೊತೆಲೀ ಹೋಗ್ಬಾರ್ದು...
೨) ಜಡೆ ಎಳೆಯೋ ಉದ್ದೇಶ ಇರೋರು ಮುಂದಿನಿಂದ ಹೋಗಬಾರ್ದು......
೩) Practice make a man perfect.... ಎಂದು ಗೀಚಿ ಮಲಗಿಕೊಂಡ....

ಮಾರನೆ ದಿನ ತನ್ನ ೩ನೇ ನಿರ್ಧಾರವನ್ನು ಕಾರ್ಯಗತಗೊಳಿಸುವುದಗೋಸುಗ ಜಡೆಯಿರೋ ಚಿಕ್ಕ ಹುಡುಗಿಯರ ಹುಡುಕಲು ಶುರು ಮಾಡಿದ...
’ ಛೇ ... ಎಲ್ಲಾ ಬರೀ ಬಾಯ್,ಬಾಬ್,ಮಶರೂಮ್,ಮಂಕಿ ಕಟ್ಟುಗಳೇ ಅಂದುಕೊಳ್ಳುವಾಗಲೇ ಅವಳು ಕಂಡದ್ದು... ಅವಳು ಅಂದ್ರೆ..? ಅವಳು ಅಂದ್ರೆ ಅವಳೇ... ಜಡೆಯಿರೋಳು....!
ಮೊದಲೇ ಪರಿಚಯಯಿದ್ದರಿಂದ style ಆಗಿ smile ಮಾಡಿಹೋದ ಚೋಕರಿಯ ಹಿಂದಿಂದೆ ಹೋಗಿ ಜಡೆ ಎಳೆದದ್ದೇ ತಡ ಇಡೀ ಬೀದಿ ಒಂದು ಮಾಡೋಳೋ ಹಾಗೆ ವರಾತ ಶುರುವಿಟ್ಟಳು... ಯಾವುದಕ್ಕೂ ಇರಲಿ ಅಂತ ತಂದಿದ್ದ munch ಚಾಕ್ಲೇಟ್ ಕೂಡ ಅವಳ ಅಳು ತಡೆಯೋದು ಇರಲೀ ಕಡಿಮೆ ಕೂಡ ಮಾಡ್ಲಿಲ್ಲ.... ಅವರ ಅಮ್ಮ ಬರ್ತಾಯಿರೋ ಸೂಚನೆ ಸಿಕ್ಕಿದೊಡೆನೆ ಇದ್ದುಬದ್ದ ಶಕ್ತಿನ್ನೆಲ್ಲಾ ಬಳಸಿ ಬಿಕ್ಕಿ ಬಿಕ್ಕಿ ಅತ್ತಳು.... ಸದ್ಯ ಅಸಲಿ ವಿಚಾರ ಗೊತ್ತಾದಾಕ್ಷಣ ಅವರಮ್ಮ ಜೋರಾಗಿ ನಕ್ಕು... ’ಆಗ್ಲೇ ಜಡೆ ಎಳೆಸ್ಕೋಳೋವಷ್ಟು ದೊಡ್ಡೋಳಾದ ನೀನು.... ಸುಮ್ನಿರೇ ಸಾಕು...’ ಅಂತ ಮುದ್ದು ಮಾಡಿ ಕರೆದೊಯ್ಯುವ ಮುನ್ನ ’ಯಾಕೋ ವಿಬು..’ ಎಂದು ಹುಬ್ಬು ಹಾರಿಸಿ ನಕ್ಕು ಹೋದರು...
’ಛೇ... ಈ ಬಜಾರಿ ಜಡೆ ಎಳೆಯೋದರ ಬದಲು ಇವರಮ್ಮನ ಜಡೆ ಎಳೆದ್ದಿದ್ರೆ ವಾಸಿಯಿತ್ತು....’ಎನಿಸಿತು..
ತನ್ನ ತಾಲೀಮನ್ನ ಇಷ್ಟಕ್ಕೆ ನಿಲ್ಲಿಸೋದು ಉಂಟೇ...? ಮನೆಗೆ ಬಂದವನೇ ಅಕ್ಕನ ಜಡೆಯ ಜೋರಾಗಿ ಜಗ್ಗಿ ಕುಶಾಲಿಗೆ ತಲೆಯ ಮೇಲೊಂದು ಪೆಟ್ಟು ಕೊಟ್ಟ..... ಡ್ರೆಸ್ ಕೊಡಿಸದ ಅಪ್ಪನ ಜೊತೆ ಆಗಷ್ಟೇ ಜಗಳ ಕಾಯ್ದಿದ್ದವಳು ತನ್ನೆಲ್ಲಾ ಸಿಟ್ಟನ್ನ ಅಳುವಿನ ಮೂಲಕ ತೀರಿಸಿಕೊಂಡಳು....... ನೋಡಿ ಇಂತಾ ಸಮಯದಲ್ಲೇ ನಮ್ಮಪ್ಪನಿಗೆ ನನ್ನ ಡಿಗ್ರಿ,ಮಾರ್ಕ್ಸ್,future ಎಲ್ಲಾ ನೆನಪಾಗೋದು ಬೈಯೋಕೆ ಕಾರಣ ಬೇಕಲ್ಲಾ.... ಅಮ್ಮ ಏನೂ ಕಮ್ಮಿ ಇಲ್ಲ.. ’ಬೆಳಿಗ್ಗೆ ನನ್ ಜಡೆನೂ ಎಳೆದ ಜೀವ ಜುಳ್ ಅಂತು.. ಏನ್ ವಿಚಾರ್‍ಸಿ....’ ಅಂತ ಬೆಂಕಿಗೆ ತುಪ್ಪ ಸುರಿದಳು...

ಇದೆಲ್ಲಾಕ್ಕಿಂತ ಅರಿಲಳ ಜಡೆ ಎಳೆಯ ಹೋಗಿ ಕೈ ಮೊದಲಾಗಿ ಇಡೀ ದೇಹವೇ ಜಡೆಯ ಸಿಕ್ಕಿನಲ್ಲಿ ಬಂಧಿಸಿದಂತೆ ಕನಸು ಕಂಡು .......ಗಂಟಲು ಒಣಗಿ ಜೀವ ಹೋದಷ್ಟು ಹೆದರಿಕೆ ಉಂಟಾಗಿ.. ಇದು ನಿಜವಲ್ಲ ಬರಿ ಕನಸು ಅನ್ನೋದನ್ನ ತಿಳಿಯೋಕೆ ಸಲ್ಪ ಸಮಯ ಬೇಕಾಯ್ತು... ಇಷ್ಟೆಲ್ಲಾ ಕಾಟಕೊಟ್ಟ ಜಡೆಯ ಎಳೆಯೋದಲ್ಲಾ ಕತ್ತರಿಸಿಯೇ ಸೈ ... ಎಂದುಕೊಂಡು ವಿಬು ಮತ್ತೆ ಮಲಗಿದ...

ಬೆಳಿಗ್ಗೆ ಎದ್ದವನೇ ಕತ್ತರಿಗಾಗಿ ಹುಡುಕಿದ, ಸಿಕ್ಕಿದ ಚಿಕ್ಕ ಕತ್ತರಿಯಲ್ಲಿ ಜುಟ್ಟು ಕತ್ತರಿಸಲು ಗಂಟೆಯಾದರೂ ಬೇಕು..... ಸುಮ್ನೆ ಕೂರೋಕೆ ಅದು ಬ್ಯೂಟಿ ಪಾರ್ಲರ್‍ರಾ...? ನಡೂ ಬೀದಿ...
ಇನ್ನೂ ದೊಡ್ಡ ಕತ್ತರಿನ ಜೇಬಲ್ಲಿ ಇಡೋಕೆ ಆಗೊಲ್ಲ... ಛೇ ವೆಪನ್ ಪ್ರಾಬ್ಲಮ್ಮು...!!!!
ಈ ವೆಪನ್ ಒಂದು ಸರೀ ಇದ್ದಿದ್ರೆ ಆ ಘೋರಿ,ಘಜಿನಿಗಳಿಗೆ ಅಷ್ಟು ಸಾರಿ ದಾಳಿ ಮಾಡೋಕೆ ಬಿಡ್ತಿದ್ರಾ ನಮ್ಮೋರು..... ಆ ಪರಂಗೀರು ಅಷ್ಟು ವರ್ಷ ಆಳೋಕೆ ಆಗ್ತಾಯಿತ್ತಾ ಎಂತೆಲ್ಲಾ ಯೋಚಿಸಿ ತನ್ನ ಸಮಸ್ಯೆನ ರಾಷ್ಟ್ರೀಕರಣ ಮಾಡ್ಬಿಟ್ಟ..ಸರಿ ಹಿಂತೆಗೆಯೋದು ಬೇಡಾಂತ ಜೇಬಲ್ಲಿ ಚಿಕ್ಕದ್ದನ್ನು ಬ್ಯಾಗಲ್ಲಿ ದೊಡ್ಡದನ್ನು ತುರುಕಿಕೊಂಡು ಅವಳು ಆದಷ್ಟು ಏಕಾಂತದಲ್ಲಿ ಸಿಗೋ ಜಾಗ ಊಹಿಸಿ ಕುಳಿತ...

ಇವನ ಎಣಿಕೆ ತಪ್ಪಲಿಲ್ಲ ಸದ್ಯ ಒಬ್ಳೆ ಬರ್ತಾಯಿದ್ದಾಳೆ ..ಅವಳು ಮುಂದೆ ಹೋದ ಮೇಲೆ ಹಿಂದಿನಿಂದ ಹೋಗಿ ಕತ್ತರಿಸೋದು ಅಂದವನ ಎಣಿಕೆ ಈ ಸಾರಿ ಉಲ್ಟಾ ಹೊಡೀತು... ಅವಳಾಗೆ ಇವನ ಹತ್ರ ಬಂದು " ಹಾಯ್ ಮೊನ್ನೆ ನಿಂಮ್ಗೆ ಥ್ಯಾಂಕ್ಸ್ ಕೂಡ ಹೇಳೋಕಾಗ್ಲಿಲ್ಲ....ಸ್ವಲ್ಪ ನರ್ವ್‌ಸ್ ಆಗಿದ್ದೇ... ಸ್ಸಾರಿ.. ನಿಮ್ ಹೆಸರೇನು..? ವಿಭವ್... ಹಾಂ.... ವಿಬು ಅಂದ್ರೆ ಚೆನ್ನಾಗಿರುತ್ತೆ ... ಅಲ್ವಾ ..."ಎಷ್ಟೋ ವರ್ಷದ ಗೆಳೆತಿಯಂತೆ ನಿಸ್ಸಂಕೋಚವಾಗಿ ಮಾತಾಡಿ ಹೋದ ಹುಡುಗಿ ಇವನ ಮನಸ ತುಂಬಾ ನೂರು ಬಣ್ಣದ ಹೋಕುಳಿ ಚೆಲ್ಲಿ ಹೋದಳು...

ವಿಬು ಈವತ್ತಿನ ಡೈರಿಯಲ್ಲಿ ಬರೆದದ್ದು ಒಂದೇ ಸಾಲು.... "ಮನದ ಮೌನ ಭಾವಗಳಿಗೆ ಮಾತು ಕಲಿಸಿದವಳು-ಅರು......!!!!!"
ಇತ್ತೀಚೆಗೆ ಇವನಿಗೆ ಅವಳು... ಅವಳಿಗೆ ಇವನು ಬಸ್ಸ್ಟಾಪಿನಲ್ಲೋ .. ಲೈಬ್ರರೀಲೋ... ಕಡೆಗೆ ಕ್ಯಾಂಟೀನಲ್ಲೋ ಸಿಗೋದು ನಗೋದು ಕಡ್ಡಾಯ ಆಗೋಯ್ತು.... ಯಾರ ಟೈಮಿಗೆ ಯಾರು ತಮ್ಮ ಟೈಮ್ ಅಡ್ಜಸ್ಟ್ ಮಾಡ್ಕೋಂಡ್ರೋ ಗೊತ್ತಿಲ್ಲ...
ಅರು ಇವನೊಬ್ಬನ್ನ ಬಿಟ್ಟು ಮಿಕ್ಕೆಲ್ಲರನ್ನು ಹಾಗೆ ಹೀಗೆ ನೆಪಕ್ಕೆ ಮಾತಾಡಿಸೋದು ಇವನಿಗೆ ಹಿಡಿಸಿತು.... ಬೇರಾವ ಹುಡ್ಗಿ ಜೊತೆಗೂ ಲಲ್ಲೆಗೆರೆಯದ ಇವನ್ನ ಕಂಡ್ರೆ ಅವಳಿಗೆ ಖುಷಿ....
ಇವರ ಒಡನಾಟ ಎಲ್ಲಿಗೆ ತಲುಪಿತ್ತೆಂದರೆ.... ಅವಳ ರಂಗೋಲಿ ಕಾಂಪಿಟೇಶನ್ನಿಗಾಗಿ ಇಬ್ಬರೂ ಒಟ್ಟಿಗೆ ಚಿಕ್ಕಗಡಿಯಾರದ ಹತ್ರ ಇರೋ ಪನ್ಸಾರಿ ಅಂಗಡೀಲೀ ಬಣ್ಣ ಕೊಳ್ಳೋವಷ್ಟು..
ಕಲ್ಲರ್‍ ಕಾಂಬಿನೇಷನ್ ಇಂದಾನೆ first prize ಬಂದದ್ದು ಕ್ರೆಡಿಟ್ಟೆಲ್ಲಾ ನಿಂಗೇ... ಅಂತ ಅವಳ ಗೆಲುವಿಗೆ ಇವನ್ನ್ ಹೊಣೆ ಮಾಡೋವಷ್ಟು... ಆಮೇಲೆ.... ಖುಷಿಗೆ ರಮ್ಯ ಹೋಟೇಲಲ್ಲಿ ದೋಸೆ ತಿನ್ನೋವಷ್ಟು... ಬಿಲ್ ನಾ ಕೊಡ್ತೀನೀ... ನಾ ಕೊಡ್ತೀನೀ... ಅಂತ ಕೈ ಕೈ ಹಿಡಿದು ಜಗಳ ಆಡೋ ಅಷ್ಟು...
ಇವತ್ತಿನ ಡೈರಿಯಲ್ಲಿ ಏನನ್ನೂ ಬರೆಯಲಾಗದ ವಿಬು ಇವನ ಹೆಸರಿನೊಂದಿಗೆ ಅವಳ ಹೆಸರು ಕೂಡಿಸಿ ಹೃದಯದ ಚಿಹ್ನೆ ಬರೆದಿಟ್ಟ....

ಆ ಮುಂಜಾನೆ ಹಸಿರಾಗಿತ್ತು ಇಬ್ಬನಿಯ ತೋಯ್ತಕ್ಕೆ ಹಸಿಯಾಗಿತ್ತು.. ಮರದ ಚಪ್ಪರದಡಿಯ ತನ್ನ ರೆಗ್ಯುಲರ್‍ ಕಲ್ಬೆಂಚಿನಲ್ಲಿ ಕುಳಿತಿರೋ ಅರಿಲ.... ಅವಳ ಸುತ್ತಲೂ ಉದುರಿದ ಬಿರಿದ ಹಳದಿ ಹೂ .... ಪ್ರಕೃತಿ ಮತ್ತು ಅವಳಿಗೂ ಯಾವ ವ್ಯತ್ಯಾಸವೂ ಇಲ್ಲ ಎನಿಸಿತು ಇವನಿಗೆ....
’ಏನು ಕ್ಲಾಸ್ ಗೆ ಹೋಗಲ್ವ....?’
’ಉಹೂಂ.. ಇವತ್ತು ಇಲ್ಲೇ ಕ್ಲಾಸ್... ಕಂಪನಿ ಕೊಡ್ತಿಯಾ....?’
’ಆಯ್ತು ... ಆದ್ರೆ ಮತ್ತೆ ಮತ್ತೆ ಕ್ಲಾಸ್ ತಪ್ಪಿಸೊಲ್ಲ ಅಂದ್ರೆ ಮಾತ್ರ... ಈಯರ್‍ ಎಂಡಿಂಗ್ ಇದು.... ಮುಂದೆ ಏನ್ ಮಾಡ್ಬೇಕು ಅಂತಿದ್ದೀಯಾ..? ಎಂ.ಎಸ್ಸಿ ನಾ...?’
’ನಿಜ ಹೇಳ್ಲಾ...... ನಾನು .... ನಾನು.... ಸಾಯೋತನಕ ಒಬ್ಬರಿಂದ ಪ್ರೀತಿಸ್ಕೋಬೇಕು ಅನ್ಕೋಂಡಿದ್ದೀನಿ.... ಹೇ..... ಹೇಳು..ಹೇಳು... ಪ್ರೀತಿ ಅಂದ್ರೆ ಏನೋ? ಯಾರನಾದ್ರು ಕೊನೆತನಕ ಪ್ರೀತಿಸೋಕೆ ಸಾಧ್ಯನಾ...?
’ನಂಗೆ ಅಷ್ಟೆಲ್ಲಾ ಗೊತ್ತಿಲ್ಲ ಆದ್ರೆ .... ಪ್ರಾಕ್ಟಿಕಲ್ ಆಗಿ ಯೋಚ್ಸಿದ್ರೆ ಭಾವನೆಗಳು ರಿನ್ಯೂವ್ ಆಗ್ತಿದ್ರೆ... ಶೇರ್‍ ಆಗ್ತಿದ್ರೆ... ಸಾಧ್ಯಯಿದೆ ಅನ್ಸುತ್ತೆ... ಹಾಂ ... ಪ್ರೀತಿ ಅಂದ್ರೆ ಅರ್ಥ ಮಾಡಿಕೊಳ್ಳೋದಲ್ಲ... ಅನುಭವಿಸೋದು....’
’ಪರವಾಗಿಲ್ಲ ಚೆನ್ನಾಗಿ ಮಾತಾಡ್ತಿಯಲ್ಲ.... ನೀನೇನ್ ಮಾಡ್ಬೇಕು ಅಂತಾಯಿದ್ದಿ ಮುಂದೆ...?’
’ನಾನಾ... ನಾನಾ..... ಹೇಳ್ಲಾ...... ಹೇಳ್ಲಾ..... ಅದು ...ಅದು...ಅದೂ..... ಯಾರನ್ನಾದ್ರೂ ಕೊನೆತನಕ ಪ್ರೀತಿಸ್ಬೇಕು ಅನ್ಕೊಂಡ್ಡಿದ್ದೀನಿ...!!!!’
’ನಾನೇ ಮರುಳು ಅಂದ್ರೆ..... ನೀನು ನಂಗಿಂತ ದೊಡ್ಡ ಮರುಳು... ಅಕಸ್ಮಾತ್ ಅವರು ಬೇರೆ ಯಾರನ್ನಾದ್ರು ಇಷ್ಟಪಟ್ರೆ... ಆಗ್ಲೂ ಪ್ರಿತಿಸ್ತೀಯಾ...?’
’ಹಾಂ...ಇಷ್ಟಪಟ್ರೆ ಏನು..? ಅವರ ಹೃದಯದಲ್ಲಿ ಪ್ರೀತಿ ತಾನೆಯಿದೆ ದ್ವೇಷ ಅಲ್ವಲ್ಲ.....? ಪ್ರೀತಿಸೋರ ಮನಸಲ್ಲಿ ಯಾವಾಗ್ಲೂ ದೇವರಿರ್‍ತ್ತಾನೆ ಅವನಿಗೆ ಎಲ್ಲಾ ತಿಳಿಯುತ್ತೆ ಬಿಡು...’

ಗೊತ್ತಿದ್ದದ್ದು ... ಗೊತ್ತಿಲ್ಲದ್ದು ಎಲ್ಲಾನೂ ಮಾತಾಡಿ ..ಮಾತಾಡಿ .... ಮಾತೆಲ್ಲಾ ಮುಗಿದವು ಅನ್ನಿಸಿಯೋ ಏನೋ... ಇನ್ನೇನೋ ಬಸ್ ಹತ್ತೋ ಟೈಮ್ ನಲ್ಲಿ
"ನಿಂಗೆ ಈ ಉದ್ದಾ ಜಡೆ ರಿಸ್ಕ್ ಅಲ್ವಾ..? ಸ್ನಾನ ಮಾಡೋದು.... ಸಿಕ್ಕು ಬಿಡಿಸೋದು... ಮತ್ತೇ ಹೆಣಿಯೋದು.. ಅದೇ ದೊಡ್ಡ ತಲೆನೋವ್ ಆಗೋಗುತ್ತೇ ಅಲ್ಲಾ...?" ಅಂದು ಬೈ ಹೇಳಿದನು....
’ಏನಿದ್ರೂ ಅವನು ಡೈರೆಕ್ಟ ಆಗಿ ಹೇಳ್ಬೇಕಿತ್ತು.... ಉದ್ದ ಜಡೆ ಇಷ್ಟ ಇಲ್ಲಾಂತ.. ಛೇ... ಈ ಹುಡ್ಗರು ಯಾವ್ದನ್ನು ನೇರವಾಗಿ ಹೇಳ್ಳಲ್ಲ....’ಅಂದುಕೊಂಡವಳು... ತನ್ನಮ್ಮ ತನ್ನಜ್ಜಿಯರ ಕೂರಿಸಿ ಕೇಳಿದಳು ’ನನ್ ಜಡೆ ಚೆನ್ನಾಗಿಲ್ವಾ...?’ .... ಉತ್ತರ ಸಮಾಧಾನ ಕೊಡಲಿಲ್ಲ ಅವಳಿಗೆ.... ಸಾವಿರ ಸುಳ್ಳಿನ ಗೆಳತಿ ಕನ್ನಡಿಗೆ ಇವತ್ತಾದ್ರೂ ನಿಜಾ ಹೇಳೇ.... ’ಉದ್ದ ಜಡೆ ನಂಗೆ ಹೊಂದಲ್ಲವೇನು...?’ ಅಂತ ಪಟ್ಟು ಹಿಡಿದು ಕೇಳಿದಳು... ಕೊನೆಗೆ ಯಾವುದೋ ನಿರ್ಧಾಕ್ಕೆ ಬಂದು ಸುಮ್ಮನಾದಳು....

ಮಧ್ಯರಾತ್ರಿಯವರೆಗೂ ಅವಳನ್ನ ಅವಳ ನೀಳ ಜಡೆಯನ್ನ ಧ್ಯಾನಿಸಿಕೊಂಡು... ...’ಈ ಹುಡ್ಗೀರು ತಾವಾಗೆ ಏನೂ ಹೇಳಲ್ಲವಲ್ಲ..... ಎಲ್ಲಾನೂ ನಾವೇ ಬಾಯಿ ಬಿಡ್ಬೇಕು.... ಆದದ್ದು ಆಗ್ಲಿ.. ನಾಳೆ ಅವಳ ಜಡೆ ಎಳೆದು ಹೇಳ್ಬಿಡ್ಬೇಕು.... ಪ್ರೀತಿಸ್ತೀನಿ ಅಂತ....’ ಅಂದುಕೊಂಡು ಮಲಗಿದ....

ಅಂದಿನ ದಿನ ಏನಾದರೊಂದು ಘಟಿಸಲೇ ಬೇಕಿತ್ತು ಸೃಷ್ಠಿ ಅಥವಾ ಲಯ...

ತನ್ನ ನಿರ್ಧಾರವನ್ನು ಕಾರ್ಯಗತ ಮಾಡಿಕೊಂಡು ಬಂದಿದ್ದ ಅರಿಲ ಇವನ ಹತ್ತಿರ ಬಂದದ್ದೇ ತಡ.... ಇವನಿಗೆ ತಿಳಿದೋಯಿತು.... ತಾನು ಕ್ಷಣ ಕ್ಷಣವೂ ಪರಿತಪಿಸಿ ಕಾಯುತ್ತಿದ್ದ ಕಾರ್ಯ ಮಣ್ಣಾಗಿ ಹೋಗಿದೆ... ಹಾಂ ಅವಳ ಜಡೆ ಅರ್ಧದಷ್ಟು ಉದ್ದ ಕಳೆದುಕೊಂಡು ಇವನ ಕನಸು ನುಚ್ಚು ನೂರಾಗಿದೆ...

ತಡೆಯಲಾರದ ಸಿಟ್ಟು ,ದುಖ: ಒಟ್ಟಿಗೆ ಬಂದು.."ನಿಂಗ್ಯಾರೆ ಜಡೆ ಕತ್ತರಿಸೋಕೆ ಹೇಳಿದ್ದು...? ನಿಂತ್ಕೋ ನಿನ್ನ...." ಎಂದು ಕೂಗಿಕೊಂಡು ಬೆನ್ನಟ್ಟಿದ ....
ಇವನ ಕೈಗೆ ಸಿಗದ ವೇಗದಲ್ಲಿ ಅವಳೂ ಓಡಿಯೇ ಓಡಿದಳು....
ಇವರೀರ್ವರ ಓಟಕ್ಕೆ ಇಡೀ ಮೈಸೂರೇ ಚಿಕ್ಕದ್ದಾಯ್ತು ... ಡಿ.ಸಿ. ಆಫೀಸಿನಿಂದ ಅರಸು ರೋಡನ್ನ ಒಂದೇ ಹೆಜ್ಜೆಗೆ ಮುಟ್ಟಿದರು ಅಂದ್ರೆ ಊಹಿಕೊಳ್ಳಿ ಓಟದ ಬಿರುಸನ್ನ.....
ಅವಳದೋ.. ಇವನದೋ ಕಾಲಿಗೆ ಸಿಕ್ಕಿ ಫಿಲೋಸ್ ಚರ್ಚು, ಜುಮ್ಮಾ ಮಸೀದಿ , ಗಾಳಿ ಆಂಜನೇಯನ ಗುಡಿ ಒಟ್ಟಿಗೆ ಪುಡಿಗಟ್ಟಿ ಹೋದವು...ಎಷ್ಟೋ ಬ್ಯಾಂಕುಗಳು,ಬಿಲ್ಡಿಂಗುಗಳು, ಮದುವೆ ಛತ್ರಗಳು... ನೆಲಸಮವಾಗಿ ಹೋದವು....
ಇವರ ಓಟ ಚಾಮುಂಡಿ ಬೆಟ್ಟದ ತಪ್ಪಲು ತಲುಪುವಲ್ಲಿಗೆ ಸಂಜೆಯ ಮಬ್ಬು ಕೂಡ ಮೆಲ್ಲಗೆ ಕರಗುತಿತ್ತು...
"ವಿಭವ್...ವಿಬು.....ವಿ......."
"ಅರಿಲ..... ಅರು.....ಅ......" ಎಂದು ಅನುರಣಿಸಿದ ಧ್ವನಿಗಳು ಕೂಡ ಸ್ತಬ್ಧವಾದವು... ಬಹುಷ: ಹೆಸರುಗಳೂ ಮರೆತುಹೋಯಿತ್ತೇನೋ... ತಂತಮ್ಮ ಹೆಸರುಗಳನ್ನೇ ಕಳೆದು ಕೊಂಡವರು ಆ ಕಡುಗತ್ತಲಲ್ಲಿ ಆ ತಪ್ಪಲಲ್ಲಿ..... ಹೇಗೆ ಹುಡುಕಿಕೊಂಡಾರು..? ಸಾವಿರ ಕ್ಯಾಂಡಲ್ಲಿನ ಸರ್ಚ್‌ಲೈಟ್ ಕೂಡ ಕಡಿಮೆಯಾಯ್ತು ಅನ್ನುವಷ್ಟು ಕತ್ತಲಲ್ಲಿ ಅವರವರ ಅಂತಕರಣದ ಒಲವ ದೀವಿಗೆಯಲ್ಲಿ ಅವನಲ್ಲಿ ಅವಳನ್ನು ..... ಅವಳಲ್ಲಿ ಅವನ್ನು ಹುಡುಕಿ ಕೊಂಡರು..... ಕೂಡಿಕೊಂಡರು...

ಅವನ ತೋಳ್ ತೆಕ್ಕೆಯಿಂದ ಬಿಡಿಸಿಕೊಂಡು ಹಣೆಗೆ ಮುತ್ತಿಟ್ಟು ಮಗ್ಗುಲಾದಳು....."ಅವಳು........!!!!!!"
ನೀಳವೂ ಅಲ್ಲದ ... ಸಾವಿರ ಗುಟ್ಟುಗಳ ಗಂಟುಕಟ್ಟಿಕೊಂಡ ಹೆಣಿಕೆಗಳಿಲ್ಲದಂತೆ ಹರವಿದ.... ಜಡೆಯನ್ನು ನಯವಾಗಿ ನೇವರಿಸುವುದರಲ್ಲೇ ಬದುಕ ಕಂಡುಕೊಂಡ ..."ಅವನು.....!!!!"

"ನಿನ್ನೊಲವ ಧಾರೆಯಿಂದ ಪದಪಂಕ್ತಿ ಮಿಲನವಾಯ್ತು...."

ಯಶವಂತ್....

Rating
No votes yet

Comments