ರಕ್ಕಸನ ಪ್ರೇಮಕಥೆ !!! -೩

ರಕ್ಕಸನ ಪ್ರೇಮಕಥೆ !!! -೩

ಮೊದಲ ಕಂತು : http://www.sampada.net/blog/thesalimath/19/05/2009/20427
ಎರಡನೆಯ ಕಂತು : http://www.sampada.net/blog/thesalimath/21/05/2009/20507
ದಿಂದ ಮುಂದುವರಿದಿದೆ ...

ಅವಳ ಅಣ್ಣ ನನ್ನ ಕೈಗೆ ಲಗ್ನ ಪತ್ರಿಕೆ ಇಡುತ್ತಿದ್ದಂತೆ ನನ್ನ ಮನಸ್ಸು ಯಾಕೋ ನಾಲ್ಕು ತಿಂಗಳ ಹಿಂದೆ ಸರಿಯಿತು.

ಎಂದಿನಂತೆ ಮುಂಗೈ ಬೆರಳ ಲಟಿಕೆ ತೆಗೆಯುತ್ತಾ ಕೇಳಿದ್ದಳು "ನಾನು ನಿನ್ನ ಕನಸಲ್ಲಿ ಬರುತ್ತೀನಾ?"

"ಇಲ್ಲ"

"ಥೂ! ರಾಕ್ಷಸ, ನೀನು ನನ್ನ ಕನಸಲ್ಲಿ ದಿನಾ ಬರ್ತೀಯಾ ಗೊತ್ತಾ?"

"ಅದ್ರಲ್ಲೇನು? ನನ್ನ ಕನಸಲ್ಲಿ ನನ್ನ ಅಮ್ಮ, ಅಪ್ಪ, ತಂಗಿ ಯಾರೂ ಬರಲ್ಲ."

"ಅವರು ಯಾವಾಗ್ಲೂ ನಿನ್ನ ಜೊತೆಗೆ ಇರ್ತಾರೆ ಕಣೋ! ಅದಕ್ಕೆ ಬರಲ್ಲ"

"ನೀನೂ ಅಷ್ಟೇ ಯಾವಾಗಲೂ ನನ್ನ ಜೊತೆಗೆ ಇರ್ತೀಯಾ!"

ಅವಳ ಬಾಯಿ ತೆರೆದುಕೊಂಡ ಹಾಗೇ ನಿಂತು ಬಿಟ್ಟಿತು. ಏನು ಹೇಳಲು ತೋಚದೇ ಮುಖವನ್ನೇ ನೋಡುತ್ತಿದ್ದವಳು ಹಾಗೇ ಬಾಯಗಲಿಸಿ ನಕ್ಕಳು. ಲಜ್ಜೆ ಅವಲ ಸಹಜ ಆಭರಣ. ಈಗ ಆ ಆಭರಣದ ಹೊಳಪು ಹೆಚ್ಚಿತ್ತು.

"ಆಹಾ! ಇಷ್ಟು ದಿನಕ್ಕೆ!..... ಇರಲಿ ಈ ಮಾತನ್ನ ಯಾವತ್ತೂ ಮರೀಬೇಡ"

ನಾನದನ್ನ ಮರೀಲಿಕ್ಕೆ ಸಾಧ್ಯವೇ ಇರಲಿಲ್ಲ.

"ಮುಂದಿನ ಸೋಮವಾರ ಮದುವೆ!’ ಅವಳಣ್ಣನ ದನಿ ವಾಪಸು ನನ್ನನ್ನು ಈ ಲೋಕಕ್ಕೆ ಕರೆತಂದಿತು. "ಹಿಂದಿನ ದಿನಾನೇ ನಿಶ್ಚಿತಾರ್ಥ. ಅವತ್ತೇ ಬರಬೇಕಂತೆ. ನೇತ್ರಾ ಹೇಳಿದ್ದಾಳೆ." ಮಾತಿನಲ್ಲಿ ವ್ಯಂಗ್ಯವಿತ್ತು, ಕುಹಕವಿತ್ತು. ನೀನೇನು ಸಾಧಿಸಿದೆ ಎಂಬಂತಹ ಅಸಡ್ಡೆಯ ನೋಟವಿತ್ತು. ಬೇಕೆಂತಲೇ ಕರೆಯಲು ಬಂದಿದ್ದಾನೆ ಅಣಕಿಸಲಿಕ್ಕೆ! ನನ್ನನ್ನು ಕಂಡರೆ ಆಗದವನು ಅಷ್ಟು ದೂರ ಏಕೆ ಬರಬೇಕಿತ್ತು? ನೇತ್ರಾಳ ಮದುವೆ ಆಗೋದು ನನಗೆ ಗೊತ್ತಾಗಬೇಕು. ನಾನು ಹೊಟ್ಟೆ ಉರಿದುಕೊಳ್ಳಬೇಕು. ಅದನ್ನು ನೋಡಲೆಂದೇ ಬಂದಿದ್ದಾನೆ. ನಿಜಕ್ಕೂ ಹಾಗಿತ್ತೊ ಅಥವಾ ನನಗೆ ಹಾಗನಿಸುತ್ತಿತ್ತೊ!

ಮದುವೆಯ ಹಿಂದಿನ ದಿನ ಸಂಜೆ ಕಲ್ಯಾಣ ಮಂಟಪಕ್ಕೆ ಹೋದೆ. ನಿಶ್ಚಿತಾರ್ಥದ ಶಾಸ್ತ್ರಗಳು ಜರುಗತೊಡಗಿದ್ದವು. ಅವರಮ್ಮ ಆತ್ಮೀಯವಾಗಿ ಕರೆದು ಕುರ್ಚಿಯ ಮೇಲೆ ಕುಳ್ಳಿರಿಸಿದರು. ಹಸಿರು ಸೀರೆ, ಕೈತುಂಬ ಹಸಿರು ಬಳೆಗಳ ಮಧ್ಯೆ ಮಧ್ಯೆ ಎಣಿಸಿ ಎಣಿಸಿ ಸಮನಾದ ಸಂಖ್ಯೆಯ ಬಳೆಗಳ ನಡುವೆ ಹೊಳೆಯುತ್ತಿದ್ದ ಬಂಗಾರದ ಬಳೆಗಳು! ಶಾಸ್ತ್ರದ ಸಾಮಾನು ಮತ್ತು ರಾಡಿಯ ನಡುವೆ ಮಹಾಲಕ್ಷ್ಮಿಯಂತೆ ಕಂಗೊಳಿಸುತ್ತಿದ್ದಳು ನೇತ್ರಾ! ನನ್ನನ್ನು ಕಂಡು ಅಲ್ಲೇ ಕುಳಿತು ಚಿಕ್ಕದಾಗಿ ನಸುನಕ್ಕಳು ನನ್ನ ನಿರೀಕ್ಷೆಯಲ್ಲೇ ಇರುವಂತೆ! ಕಣ್ಣಲ್ಲಿ ನನ್ನೊಡನೆ ಮಾತಾಡುವ ತವಕ ಇತ್ತು ಅಥವಾ ನನಗೆ ಹಾಗನ್ನಿಸಿತ್ತು!

ಶಾಸ್ತ್ರಗಳು ಮುಗಿದ ಕೂಡಲೇ ನನ್ನ ಬಳಿ ಓಡಿ ಬಂದಳು.

"ಹುಡುಗ ಚೆನ್ನಾಗಿ ಇದ್ದಾನೆ!" ಅಂದೆ.

"ನಿನ್ನಷ್ಟು ಚೆಂದ ಇಲ್ಲ. ಆದರೆ ನಿನ್ನ ಥರಾ ಗೂಬೆ ಅಲ್ಲ."

ಯಾಕೋ ಮನದಲ್ಲಿ ಸಮಾಧಾನದ ಗಾಳಿ ಸುಳಿದಂತಾಯಿತು. ನಮ್ಮ ಮುಂದಿನಿಂದ ಎಲ್ಲೋ ತೆರಳುತ್ತಿದ್ದ ಮದುವೆ ಗಂಡನ್ನು ಕರೆದು ಪರಿಚಯಿಸಿದಳು. ಕೈಕುಲುಕಿ ಸಣ್ಣ ನಗೆ ನಕ್ಕ. ಮೃದುವಾದ ಅಂಗೈ. ಸರಳವಾದ ನಗೆ. ಮಾತೂ ನೇತ್ರಾಳಷ್ಟೇ ಸಿಹಿ! ಹಳೆಯ ಪರಿಚಯ ಎಂಬಂತೆ ಮಾತನಾಡಿದ್ದ. ಏನೋ ಕರೆ ಬಂದು ಆ ಕಡೆ ಹೊರಟ. "ಇವತ್ತು ಇಬ್ರು ಒಟ್ಟಿಗೇ ಊಟ ಮಾಡೋಣ" ಎಂದಳು. ಹುಡುಗನ ಅನುಮತಿ ಪಡೆದು ಬಂದಳು.

ಒಟ್ಟಿಗೆ ಅದೂ ಇದೂ ಮಾತನಾಡುತ್ತಾ ಊಟ ಮಾಡಿದೆವು. ಕಳಿಸಲೊಸುಗ ಮೆಟ್ಟಿಲವರೆಗೆ ಬಂದಳು.

"ನಿಂಗೆ ಇನ್ನೂ ಏನೂ ಅನ್ನಿಸ್ತಿಲ್ವೇನೊ?"

"ಏನು ಅನ್ನಿಸಬೇಕು?"

"ನೋಡು. ಈಗಲೂ ಹೇಳು ಈಗಲೂ ನಾನು ನಿನ್ನ ಜೊತೆ ಬರ್ತೀನಿ. ಈಗಲೂ ನೀನೆ ಬೇಕು ಅನ್ನಿಸ್ತಿದೆ ನನಗೆ. ಈಗಲೂ ಬೇಕಿದ್ರೆ ಮದುವೆ ಬೇಡ ಅಂತ ಹೇಳಿ ನಿನ್ನ ಜೊತೆ ಬರ್ತೀನಿ. ನಂಗೆ ಇದು ಯಾವುದೂ ಬೇಡ ನೀನು ಇದ್ರೆ ಸಾಕು. ಹೇಳು. ನಿಂಗೆ ನನ್ನ ಬಗ್ಗೆ ಒಂಚೂರು ಪ್ರೀತಿ ಇಲ್ವಾ? ಒಂದು ಸಾರಿ ಪ್ರೀತಿಸ್ತೀನಿ ಅಂತ ಹೇಳು. ಎಲ್ಲಾ ಬಿಟ್ಟು ಬರ್ತೀನಿ. ನೋಡು ನಾಳೆ ಬೆಳಿಗ್ಗೆ ಅವನು ನನ್ನ ಗಂಡ ಆಗ್ತಾನೆ. ಅವನ ಜೊತೆ ಮದುವೆ ಆಯ್ತು ಅಂದ್ರೆ ನಾನು ಅವನಿಗೇ ಮೀಸಲು. ನಿನ್ನ ಜೊತೆ ನಂಗೆ ಯಾವ ಸಂಬಂಧನೂ ಇರಲ್ಲ. ನಿನ್ನ ಬಗೆಗಿನ ಎಲ್ಲಾ ಭಾವನೇನೂ ನಾನೇ ಕೊಂದುಕಾಕಿಬಿಡ್ತೀನಿ. ದಾರೀಲಿ ಹೋಗೋ ಮನುಷ್ಯನ ಬಗ್ಗೆ ಎಷ್ಟು ನಿರ್ಲಿಪ್ತವಾಗಿ ಇರ್ತೀನೋ ಅಷ್ಟೇ ನಿನ್ನ ಬಗ್ಗೆನೂ ಇರ್ತೀನಿ. ಇದೇ ಕಡೇ ಅವಕಾಶ. ಹೇಳಿಬಿಡು. ನಾಳೆಯಿಂದ ನಾನ್ಯಾರೋ ನೀನ್ಯಾರೋ!" ಅವಳ ದನಿಯಲ್ಲಿ ಬಿಕ್ಕಳಿಕೆಗಳು ಕೇಳತೊಡಗಿದ್ದವು. ನಡುನಡುವೆ ಉಸಿರು ಭಾರವಾಗತೊಡಗಿತ್ತು. ಮಾತು ತೊದಲತೊಡಗಿತು.

ತಲೆ ತಗ್ಗಿಸಿ ನಿಂತಿದ್ದೆ.

"ತಲೆ ಎತ್ತೋ. ನನ್ನ ನೋಡು. ಕಣ್ಣಲ್ಲಿ ಕಣ್ಣಿಟ್ಟು ಮಾತಾಡು. ನೀನೆ ಅಲ್ವಾ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಬೇಕು ಅಂತಾ ನಂಗೆ ಹೇಳಿಕೊಟ್ಟೋನು? ಈಗ ಯಾಕೆ ಕಣ್ಣಿಗೆ ಕಣ್ಣು ಬೆರೆಸಲ್ಲ? ಹೇಳೋ ನನ್ನ ಬಗ್ಗೆ ಒಂದು ಚೂರು ಪ್ರೀತಿ ಮೂಡಿಲ್ವಾ ನಿನಗೆ?" ಒಮ್ಮೆ ಮೂಗಿನಿಂದ ದ್ರವವನ್ನು ಒಳಗೆಳೆದುಕೊಂಡಂತೆ ’ಸೊಡರ್’ ಎಂಬ ಶಬ್ದ ಬಂತು.

ತಲೆ ಎತ್ತಲು ಪ್ರಯತ್ನಿಸಿದೆ. ನೂರು ಮೂಟೆಗಳ ಭಾರ ಹೊತ್ತಂತೆ ಕತ್ತು ತಲೆಯನ್ನು ನಿಧಾನಕ್ಕೆ ಮೇಲೆ ನೂಕಿ ಸೋತು ತಲೆ ಕೆಳಗೆ ಬಂದು ಮತ್ತೆ ನನ್ನ ಕಣ್ಣುಗಳು ಅವಳ ಕಾಲ ಹೆಬ್ಬೆರಳಿನಲ್ಲಿ ಸ್ಥಿರಗೊಂಡವು.

"ನಾನು ಕಾಯ್ತಾ ಇದ್ದೀನಿ. ಹೇಳು ನನ್ನ ಬಗ್ಗೆ ಪ್ರೀತಿ ಹುಟ್ಟಲೇ ಇಲ್ವಾ?" ಅವಳು ಇಷ್ಟು ಹಠಮಾರಿ ಅಂತ ನನಗೆ ಗೊತ್ತಿರಲಿಲ್ಲ. ಪ್ರೀತಿಯ ವಿಷಯದಲ್ಲಿ ಹೆಣ್ಣುಮಕ್ಕಳು ಹೀಗೆಯೇ ಹಠಮಾರಿಯಾಗುತ್ತಾರೇನೋ!

ನಿಧಾನಕ್ಕೆ ತಲೆಯನ್ನು ಬಲಕ್ಕೆ ಎಡಕ್ಕೆ ಎರಡು ಸಾರಿ ಆಡಿಸಿದೆ. ಮತ್ತೆ ನೋಟ ಅವಳ ಕಾಲ ಹೆಬ್ಬೆರಳಿಗೆ ನೆಟ್ಟಿತು.

"ರಾಕ್ಷಸ ಕಣೋ ನೀನು ರಾಕ್ಷಸ.... ರಾಕ್ಷಸ!" ಜೋರಾಗಿ ಉಸಿರೆಳೆದುಕೊಂಡ ಶಬ್ದ. ಬಿಕ್ಕಳಿಸಿದ ದನಿ ಇನ್ನೂ ಜೋರಾಯಿತು. ಅಳುತ್ತಿದ್ದಳಾ? ತಲೆಯೆತ್ತಿ ನೋಡುವ ಧೈರ್ಯ ಸಾಲಲಿಲ್ಲ. ನನ್ನ ನೋಟದಿಂದ ಅವಳ ಹೆಬ್ಬೆರಳು ಮರೆಯಾಯಿತು. ನೆಲದ ಮೊಸಾಯಿಕ್ ಮೇಲಿನ ಧೂಳಲ್ಲಿ ಮೂಡಿದ ಹೆಜ್ಜೆ ಗುರುತುಗಳು ಈಗ ನನ್ನ ನೋಟದ ಪರಿಧಿಯೊಳಗೆ ಬಂದವು. ಅವಳ ಗೆಜ್ಜೆಯ ದನಿ ನಿಧಾನವಾಗಿ ಕ್ಷೀಣವಾಗುತ್ತಾ ಹೋಗಿ ಕೇಳದಂತಾಯಿತು. ದನಿ ಕ್ಷೀಣವಾದ ವೇಗವನ್ನು ಎಣಿಸಿದರೆ ಓಡಿ ಹೋಗಿರಬೇಕು. ನಿಧಾನಕ್ಕೆ ನನ್ನ ನೋಟದ ಗುರಿಯಾಗಿದ್ದ ಅವಳ ಪಾದದ ಗುರುತು ಮಂಜಾಗುತ್ತಾ ಬಂತು. ಬಹುಷಃ ನನ್ನ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ ಇದೆ. ಹಾಗೆ ತಲೆಯೆತ್ತಿ ನೋಡಿದೆ. ಸುತ್ತಲೂ ನೀರು ಬಿದ್ದ ಪೇಂಟಿಂಗ್‍ನಂತೆ ಮುಸುಕು ಮುಸುಕಾಗಿ ಕದಡಿದ ಬಣ್ಣಗಳು. ಕೆಲವು ಬಣ್ಣಗಳು ಅತ್ತಿಂದಿತ್ತ ಓಡಾಡುತ್ತಿದ್ದವು! ನಿಧಾನವಾಗಿ ರಸ್ತೆಯ ಕಡೆಗೆ ತಿರುಗಿದೆ. ಯಾವಾಗಲೂ ಹಲ್ಲು ಕಿಸಿಯುತ್ತಿದ್ದ ಚಂದ್ರ ಮೋಡದೊಳಕ್ಕೆ ಅಡಗಿಬಿಟ್ಟಿದ್ದ. ಕತ್ತಲಲ್ಲಿ ಧೋ ಎಂದು ಮಳೆ ಸುರಿಯುವ ಸದ್ದು ಕೇಳುತ್ತಿತ್ತು.

ಇನ್ನು ನನ್ನ ಕೆಲಸ ಮುಗಿದಿತ್ತು. ನೇತ್ರಾ ನನಗಿಂತ ಒಳ್ಳೆಯ ಹುಡುಗನನ್ನು ಮದುವೆಯಾಗಿದ್ದಳು. ಹುಡುಗನ ಬಗ್ಗೆ ಎಲ್ಲಾ ಮಾಹಿತಿ ಸಂಗ್ರಹ ಮಾಡಿದ್ದೆ. ಕೇಂದ್ರ ಸರ್ಕಾರದ ಕೆಲಸ. ಬಹುಷಃ ಗೆಜೆಟೆಡ್ ಪಟ್ಟ ಇರಬೇಕು. ಮನೆಯಲ್ಲಿ ಜನ ತುಂಬಾ ಸೌಮ್ಯ. ಸೊಲ್ಲೆತ್ತಿ ಯಾರೊಡನೆಯೂ ಜಗಳ ಮಾಡಿದವರಲ್ಲ. ಹುಡುಗ ಬಂಗಾರ. ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ, ಕಾಯುತ್ತಾನೆ. ವಿಶಾಲ ಮನೊಭಾವದವನು. ನನ್ನೊಡನೆ ನೇತ್ರಾಳನ್ನ ಊಟಕ್ಕೆ ಕಳಿಸಿದ್ದೇ ಸಾಕ್ಷಿ. ಇಲ್ಲಿಗೆ ಅವಳ ಕಷ್ಟಗಳು ಕೊನೆಯಾದವು. ಅವಳು ಗಂಡನಿಗೆ ಹೊಂದಿಕೊಂಡದ್ದು ನನಗೆ ಸಮಾಧಾನವೇ! ಎಲ್ಲಿ ಅವನನ್ನು ದೂರ ಮಾಡಿಕೊಂಡು ಬಿಡುತ್ತಾಳೋ ಎಂಬ ಆತಂಕ ನನಗೆ! ಹಾಗಾಗಿ ನನ್ನ ಒಡನಾಟ ದೂರವಾಗಲಿ ಎಂದು ಬಯಸಿದ್ದೆ. ಈಗ ಅವನೊಡನೆ ಇರುವುದಾಗಿ ತಾನೇ ಹೇಳಿಕೊಂಡಿದ್ದಾಳೆ. ನನ್ನೊಡನೆ ಏನು ಸುಖ ಕಂಡಾಳು? ಕೆಳಮಧ್ಯಮ ವರ್ಗದ ಕುಟುಂಬ ನನ್ನದು. ಓದು ಮುಗಿಸಿ ಕೆಲಸ ಹಿಡಿಯಲು ಮೂರು ವರ್ಷಗಳೇ ಬೇಕು. ಅದೂ ಸಿಕ್ಕುವ ಗ್ಯಾರಂಟಿ ಇಲ್ಲ. ಅಲ್ಲಿಯವರೆಗೆ ಅಣ್ಣನ ಕೈಯ್ಯಲ್ಲಿ ಅವಳು ಕಷ್ಟಪಡಬೇಕಿತ್ತಾ? ಅದಾದ ಮೇಲೂ ನನ್ನೊಡನೆ ಮದುವೆಯಾಗಿ ಸುಖವಾಗಿರುತ್ತಾಳೆ ಎಂಬ ಗ್ಯಾರಂಟಿ ಏನು ? ಮೊದಲೇ ನಾನು ಕೋಪಿಷ್ಟ. ಆಗಲೇ ಅವಳ ಮೇಲೆ ಹಲವಾರು ಬಾರಿ ರೇಗಿದ್ದೇನೆ. ಎಂದಾದರೂ ಹೊಡೆದುಬಿಟ್ಟರೆ? ಅಣ್ಣನ ಕೈಯಲ್ಲಿ ಅನುಭವಿಸಿದ್ದನ್ನೇ ನನ್ನೊಡನೆಯೂ ಅನುಭವಿಸಬೇಕಾ? ಮತ್ತೆ ಕೊರಗಬೇಕಾ? ಬೇಡ. ಉಪ್ಪರಿಗೆಯಷ್ಟು ಮೇಲಕ್ಕೆ ನಿಲುಕದಂತಿದ್ದ ಸುಖ ಇನ್ನು ಮುಂದೆ ಅವಳಿಗೆ ಸುಪ್ಪತ್ತಿಗೆಯಾಗುತ್ತದೆ. ನಿಧಾನಕ್ಕೆ ನನ್ನನ್ನು ಮರೆಯುತ್ತಾಳೆ. ಇನ್ನೂ ಸುಖವಾಗಿರುತ್ತಾಳೆ. ಅದೆಂಥದೋ ಅಂತಾರಲ್ಲ "Infatuation" ಅಂತ ಅದೇ ಗುಂಗಿನಲ್ಲಿ ನನ್ನೊಡನೆ ಇರುವುದೇ ಸುಖ ಎಂದುಕೊಂಡು ಬಿಟ್ಟಿದ್ದಳು! ಆ ಭ್ರಮೆ ದೂರವಾಗಲು ಹೆಚ್ಚು ದಿನಗಳು ಬೇಕಾಗುತ್ತಿರಲಿಲ್ಲ ಅನ್ನಿಸುತ್ತದೆ. ನನ್ನ ಜೊತೆಗೆ ಇರುವುದಕ್ಕಿಂತ ಅವಳು ಸುಖವಾಗಿ ಇರುವುದು ಮುಖ್ಯ. ಏಕೆಂದರೆ ನಾನು ಅವಳನ್ನು ನನಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ!

ಕೊಡೆ ಏರಿಸಿಕೊಳ್ಳುವ ಮನಸ್ಸಾಗಲಿಲ್ಲ. ಚಂದಪ್ಪ ಯಾಕೆ ಮೋಡದೊಳಗೆ ಹೋಗಿರಬಹುದು ಎಂದು ಅರಿವಾಯಿತು. ನಮ್ಮಿಬ್ಬರನ್ನು ಬೇರೆಬೇರೆ ನೋಡಲು ಅವನಿಗೂ ಮನಸ್ಸಿಲ್ಲ. ಸರಿಯಾದ ಸಮಯಕ್ಕೆ ಬಿದ್ದು ಉಪಕಾರ ಮಾಡಿದ್ದ ಮಳೆರಾಯ! ಮುದುರಿ ಹೋದ ಮನಸ್ಸಿನೊಂದಿಗೆ ಮಳೆಯಲ್ಲಿ ನೆನೆಯುತ್ತಾ ನಡೆದರೆ ಕಣ್ಣೀರು ಮಳೆಯ ನೀರಿನ ಜೊತೆಗೆ ಹರಿದು ನೆಲಕ್ಕೆ ಸೋಸಿಬಿಡುತ್ತದೆ. ನಾನು ಅಳುತ್ತಿರುವುದು ಯಾರಿಗೂ ಕಾಣುವುದಿಲ್ಲ! ಕಣ್ಣೀರ ಜೊತೆಗೆ ದುಃಖವನ್ನೂ ನೆಲಕ್ಕೆ ಬಸಿದುಬಿಡುತ್ತಾನಲ್ಲ ಈ ಮಳೆರಾಯ. ಎಂಥ ಶಕ್ತಿ ಅವನದು ! ಇಷ್ಟು ದಿನ ನೇತ್ರಾಳಿಗೆ ನಾನು ಮಳೆರಾಯನಾಗಿದ್ದೆ. ಇನ್ನು ನನ್ನ ಅವಶ್ಯಕತೆ ಅವಳಿಗೆ ಬೀಳದು! ನನ್ನ ಅವಶ್ಯಕತೆಗಳ ಚಿಂತೆ ನನಗಿಲ್ಲ.

ಅವಳ ಅಣ್ಣನ ದವಡೆಯನ್ನು ಒಡೆದು ಹಾಕುವ ಮಹತ್ವಾಕಾಂಕ್ಷೆಯೊಂದು ಹಾಗೆಯೇ ಉಳಿಯಿತು! ಮದುವೆಯಾಗಿದ್ದರೆ ಯವುದಾದರೂ ಕಾರಣ ಹುಡುಕಿ ಗುದ್ದಬಹುದಿತ್ತು. ಈಗೇನಾಯಿತು? ಯಾವಾಗಲಾದರೂ ರಸ್ತೆಯಲ್ಲಿ ಚಿಲ್ಲರೆ ಜಗಳ ತೆಗೆದು ಗುದ್ದಿದರಾಯಿತು!

(ಅಬ್ಬ ಮುಗಿಯಿತು!!!)

(ಕಥೆ ಓದಿದ ಮೇಲೆ ಏನಾದರೂ ಅನ್ನಿಸಿಯೂ ಏನೂ ಹೇಳದವರ ತಲೆ ಸಾವಿರ ಹೋಳಾಗುವುದು ಎಚ್ಚರಿಕೆ! ಅಂತ ನಮ್ಮ ಮಹಾರಾಜರಾದ ಬೇತಾಳರಾಯ ಮಹಾಪ್ರಭುಗಳು ಅಪ್ಪಣೆ ಕೊಡಿಸಿರುತ್ತಾರೆ. )

Rating
No votes yet

Comments