ಮೊದಲ ಪ್ರೀತಿ ಭಾಗ ೨

ಮೊದಲ ಪ್ರೀತಿ ಭಾಗ ೨

http://sampada.net/blog/inchara123/21/05/2009/20519 (ಮೊದಲ ಭಾಗ)

ಹೀಗೆ ೨ ತಿಂಗಳು ಕಳೆಯಿತು. ಪ್ರಸಾದ್ ನಿಗೆ ಹಾಸನ್ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಸೀಟು ಸಿಕ್ಕಿತೆಂದು ಯಾರೋ ಬಂದಾಗ ತಿಳಿಯಿತು. ನಮಗೆ ತಿಳಿಸಲಿಲ್ಲವೆಂದು ಮನ ಪೆಚ್ಚಾಯಿತು. ಹಿಂದೆಲ್ಲಾ ಬಹಳ ಮಂದಿ ಹೀಗೆ ಬಂದು ಹೋದವರು ಇದ್ದರು. ಆದರೂ ಇವನಂತೆ ಮನಸ್ಸಿನಲ್ಲಿ ಯಾರೂ ನಿಂತಿರಲಿಲ್ಲ. ಉತ್ತರ ತಿಳಿಯಲೊಲ್ಲದು. ಹೀಗಿರುವಾಗ ಒಂದು ದಿನ ಶಾಲೆಯಿಂದ ಮನೆಗೆ ಬಂದಾಗ ಅಮ್ಮ ಪತ್ರವೊಂದನ್ನು ಕೈಗಿತ್ತಳು. ನನಗೆ ಆಶ್ಚರ್ಯ! ಕುತೂಹಲ! ಯಾರಿರಬಹುದು? ನನಗೆ ಪತ್ರ ಬರೆಯುವವರು. ಬರೆದವರ ಅಡ್ರೆಸ್ ಇರಲಿಲ್ಲ. ಪತ್ರವನ್ನು ಓದಲು ಶುರು ಮಾಡಿದೆ. ನನ್ನ ಕಣ್ಣನ್ನು ನನಗೆ ನಂಬಲು ಸಾಧ್ಯವಾಗಲಿಲ್ಲ. ಪ್ರಸಾದ್ ನನಗೆ ಕಾಗದ ಬರೆದಿದ್ದ. ಅವನ ಹಾಸ್ಟೆಲ್ ಬಗ್ಗೆ, ಕಾಲೇಜಿನ ಬಗ್ಗೆ, ಸುದೀರ್ಘವಾಗಿ ಬರೆದಿದ್ದ. ಕೊನೆಯಲ್ಲಿದ್ದ ವಾಕ್ಯ ಮಾತ್ರ ಇಂದಿಗೂ ಮರೆಯಲು ನನಗೆ ಸಾಧ್ಯವಾಗಿಲ್ಲ. ‘ನನ್ನನ್ನು ಮರೆಯಬೇಡಿ ಎಂದಿದ್ದ ನಿನಗೆ ನನ್ನ ನೆನಪಿದೆಯೇ’? ಹೇಗೆ ಮರೆಯಲಿ ನಾನು?

ಅಣ್ಣನಿಗೆ ಕಾಗದವನ್ನು ತೋರಿಸಿದೆ. ನಾನು ಪ್ರಸಾದನಿಗೆ ಮರು ಕಾಗದ ಬರೆಯಲು ಅಣ್ಣ ಸಮ್ಮತಿಸಿದ. ಶುರುವಾಯಿತು ಕಾಗದಗಳ ಓಡಾಟ. ಇಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗೆ. ಶುದ್ಧ ಗೆಳೆತನ. ನನಗನ್ನಿಸಿದ್ದೆನೆಲ್ಲಾ ಕಾಗದದಲ್ಲಿ ಮುಗ್ಧತೆಯಿಂದ ಬರೆಯುತ್ತಿದ್ದೆ. ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅವನು ಅಷ್ಟೇ ಪ್ರಬುದ್ಧತೆಯಿಂದ ಉತ್ತರಿಸುತ್ತಿದ್ದ. ಇತ್ತೀಚೆಗೆ ಅಣ್ಣ ಕೂಡಾ ಸಂಜೆ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ್ದ. ಹಾಗಾಗಿ ನನ್ನೊಟ್ಟಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ನೋಡುನೋಡುತ್ತಿರುವಂತೆ ನನ್ನ ೧೦ನೇ ತರಗತಿಯ ಪರೀಕ್ಷೆ ಬಂದೇ ಬಿಟ್ಟಿತು. ಎರಡು ತಿಂಗಳ ಕಾಲ ಪ್ರಸಾದ್ ಗೆ ಕಾಗದ ಬರೆಯದೆ, ಹಗಲು ರಾತ್ರಿ ನಿದ್ದೆ ಗೆಟ್ಟು ಓದಿದೆ, ಪರೀಕ್ಷೆ ಬರೆದೆ. ರಿಸಲ್ಟ್ ನಾನೆಣಿಸಿದಂತೆ ಆಗಿತ್ತು. ಶಾಲೆಗೆ ಮೊದಲಿಗಳಾಗಿದ್ದೆ. ಅಕ್ಕ ಪಕ್ಕದ ಮನೆಯವರೆಲ್ಲರೂ ಮಗಳನ್ನು ಡಾಕ್ಟರ್ ಮಾಡಿ, ಇಂಜಿನಿಯರ್ ಮಾಡಿ ಎನ್ನುತ್ತಿದ್ದರೆ, ನಾನು ಮಾತ್ರ ಡಿಪ್ಲೋಮಾ ಕಾಲೇಜಿಗೆ ಸೇರಿದೆ. ನನಗೆ ಮನೆಯ ಪರಿಸ್ಥಿತಿಯ ಅರಿವಿತ್ತು. ಅಣ್ಣನ ಸಂಬಳಕ್ಕೆ ಅವನ ಕಾಲೇಜಿನ ಖರ್ಚುಗಳ ಜೊತೆಗೆ ನನ್ನನ್ನು ಡಾಕ್ಟರ್ ಮಾಡುವಷ್ಟು ಶಕ್ತಿಯಿರಲಿಲ್ಲ. ಪ್ರಸಾದ್ ಕೂಡಾ ನನ್ನ ಅಭಿಪ್ರಾಯಕ್ಕೆ ಅನುಮೋದನೆ ನೀಡಿದ.

ಪ್ರಸಾದ್ ನ ತಂದೆಗೆ ಬೆಂಗಳೂರಿಗೆ ವರ್ಗವಾಗಿತ್ತು. ರಜೆ ಬಂದಾಗಲೆಲ್ಲಾ ಹಾಸನದಿಂದ ಪ್ರಸಾದ್ ಬೆಂಗಳೂರಿಗೆ ಬರುತ್ತಿದ್ದ. ಬಂದೊಡನೆಯೇ ಅವನ ಮನೆಯಲ್ಲಿ ಲಗೇಜ್ ಇಟ್ಟು, ನನ್ನನ್ನು ನೋಡಲು ಬರುತ್ತಿದ್ದ. ನಾವಿಬ್ಬರೂ ಕುಳಿತು ಮಾತನಾಡದ ವಿಷಯವೇ ಇರಲಿಲ್ಲ. ಸಿನೆಮಾದಿಂದ ಹಿಡಿದು ಅವನ ಕಾಲೇಜಿನ ಕಥೆಗಳು, ಅವನ ಗೆಳೆಯರ ಬಗ್ಗೆ ಮಾತನಾಡುತ್ತಲೇ ಇರುತ್ತಿದ್ದ. ನನಗಂತೂ ಅವನನ್ನು ನೋಡುತ್ತಲೇ ಇರುವ ಆಸೆಯಾಗುತ್ತಿತ್ತು. ಕಾಲೇಜಿನಲ್ಲಿ ನಾನು ಯಾರನ್ನೂ ಪರಿಚಯಿಸಿಕೊಂಡಿರಲಿಲ್ಲ. ಪ್ರಸಾದ್ ಈ ಬಗ್ಗೆ ನನಗೆ ಯಾವಾಗಲೂ ಬೈಯುತ್ತಲೇ ಇರುತ್ತಿದ್ದ. ಎಲ್ಲರನ್ನೂ ಮಾತನಾಡಿಸು, ಪರಿಚಯ ಮಾಡಿಕೋ, ನಿನಗೆ ಎಷ್ಟು ವಿಷಯಗಳು ಗೊತ್ತಾಗುತ್ತದೆ ಹೀಗೆ...... ಉಹುಂ, ನನಗೆ ಸಾಧ್ಯವಾಗಿರಲಿಲ್ಲ. ನನ್ನ ಪ್ರಪಂಚ ಅಮ್ಮ, ಅಣ್ಣ, ಪ್ರಸಾದ್ ಆಗಿತ್ತು. ಇನ್ನಾರೂ ಗೊತ್ತಿರಲಿಲ್ಲ.

ಪ್ರಸಾದ್ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದ. ಅವನ ಅಣ್ಣನ ಮದುವೆ ಗೊತ್ತಾಯಿತು. ನಾವು ಅವರ ದೂರದ ಸಂಬಂಧಿಗಳಾದ್ದರಿಂದ ನಮಗೂ ಕೂಡ ಮದುವೆಗೆ ಆಮಂತ್ರಣ ಬಂದಿತು. ನಾನು ಮದುವೆಗೆ ಹೋಗಲು ಒಪ್ಪಲಿಲ್ಲ. ಅಮ್ಮ, ಅಣ್ಣ ಇಬ್ಬರೇ ಹೊರಟರು. ಸ್ವಲ್ಪ ಹೊತ್ತಿನಲ್ಲಿ ಮನೆಯ ಮುಂದೆ ಬೈಕ್ ನಿಂತ ಶಬ್ಧವಾಯಿತು. ಹೋಗಿ ನೋಡಿದರೆ ಪ್ರಸಾದ್ ನಸುನಗುತ್ತಾ ನಿಂತಿದ್ದ. ನನ್ನ ಕೀಳರಿಮೆಯ ಕಾರಣ ಗೊತ್ತಿದ್ದ ಅವ ನನ್ನನ್ನು ಮದುವೆಗೆ ಕರೆದೊಯ್ಯಲು ಬಂದಿದ್ದ. ಬರುವುದಿಲ್ಲವೆಂದು ಹಟ ಮಾಡಿದರೂ, ಅವನ ಕಣ್ಣುಗಳಲಿದ್ದ ಶಕ್ತಿಗೆ ಸೋತೆ. ಅವನ ಹಿಂದೆ ಬೈಕ್ ನಲ್ಲಿ ಕೂಡುವಾಗ ಮೊದಲ ಬಾರಿಗೆ ಮೈ ಮನ ತಲ್ಲಣಿಸಿತು. ಹೃದಯ ನರ್ತಿಸಿತು. ನಾನಿವನನ್ನು ಪ್ರೀತಿಸುತ್ತಿರುವೆನೇ ಎಂಬ ಭಾವವೊಂದು ಎದೆಯಲ್ಲಿ ಮೂಡಿ ಮರೆಯಾಯಿತು. ಮರುಕ್ಷಣವೇ ನಾನೆಲ್ಲಿ, ಅವನೆಲ್ಲಿ ಎಂಬ ಭಾವವು ಮೂಡಿ ಮನಸ್ಸಿಗೆ ಬೇಸರವು ಬಂದಿತು. ಮದುವೆ ಮನೆಯಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ನನ್ನೊಟ್ಟಿಗೆ ಇದ್ದ ಪ್ರಸಾದ್. ಒಂದು ಕ್ಷಣವೂ ನನ್ನನ್ನು ಬಿಟ್ಟು ಅಲುಗಾಡಿರಲಿಲ್ಲ. ಪ್ರಸಾದ್ ನ ಅಮ್ಮ ಹಾಗೂ ಅಕ್ಕನಿಗೆ ನನ್ನ ಮೇಲೆ ಕೋಪವಿರುವ ಹಾಗೆ ತೋರುತ್ತಿತ್ತು. ನನ್ನ ಭ್ರಮೆಯೋ! ಗೊತ್ತಾಗಲಿಲ್ಲ. ಇಬ್ಬರೂ ನನ್ನಿಂದ ಪ್ರಸಾದ್ ನನ್ನು ಬಿಡಿಸಬೇಕೆಂದು, ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದರೆಂದು ನನ್ನ ಚಿಕ್ಕಪ್ಪನ ಮಗಳು ನನಗೆ ಆಮೇಲೆ ಹೇಳಿದಳು. ಅವನೆಂದೂ ನನ್ನೊಟ್ಟಿಗೆ ಸಭ್ಯತೆ ಮೀರಿ ವರ್ತಿಸಿರಲಿಲ್ಲ. ಅವರ ವರ್ತನೆಯ ಬಗ್ಗೆ ಸ್ವಲ್ಪ ಬೇಸರ ಮೂಡಿತು.

ಪ್ರಸಾದ್ ನ ಅಣ್ಣನ ಮದುವೆ ಮುಗಿಸಿ ಮನೆಗೆ ಬಂದಾಗ ಸಾಯಂಕಾಲ ಕಳೆದಿತ್ತು. ಅಂದೇನೋ ಮನದಲ್ಲಿ ಸ್ವಲ್ಪ ದುಗುಡ, ಬೇಸರ ಮನೆ ಮಾಡಿತ್ತು. ಅಮ್ಮ ಪಕ್ಕದ ಮನೆಗೆ ಹೋಗಿದ್ದಳು. ಅಂದೇನೋ ಮನೆಗೆ ಎಂದೂ ಬರದಿದ್ದ ಅಣ್ಣನ ಸಹಪಾಠಿ ಮನೆಗೆ ಬಂದ. ಸುಂದರ, ಅಷ್ಟೇ ಮೃದುವಾಗಿ ಮಾತಾಡುತ್ತಿದ್ದ. ಅಣ್ಣನಿಗೆ ಬಹಳ ಆತ್ಮೀಯ ಗೆಳೆಯನಾಗಿದ್ದ. ಚಿರಾಗ್ ನನ್ನ ಬಾಳಿನಲ್ಲಿ ಬಂದಿದ್ದು ಹೀಗೆ! ಅಂದಿನಿಂದ ಸಂಜೆ ಮನೆಗೆ ದಿವಸವೂ ಬರಹತ್ತಿದ. ನಾನು ಮುಜುಗರದಿಂದ ಎದುರಿಗೆ ಬರುತ್ತಿರಲಿಲ್ಲ. ನನಗೆ ಇಷ್ಟವೂ ಇರಲಿಲ್ಲ. ಈ ನನ್ನ ಮೌನ ಅವನನ್ನು ಆಕರ್ಷಿಸುವುದೆಂದು ತಿಳಿದಿರಲಿಲ್ಲ! ಅಣ್ಣನ ಹತ್ತಿರ ಡೈರೆಕ್ಟಾಗಿ ನನ್ನನ್ನು ಪ್ರೀತಿಸುತ್ತಿರುವುದಾಗಿಯೂ, ನಮ್ಮೆಲ್ಲರ ಅಭಿಪ್ರಾಯವನ್ನೂ ತಿಳಿಸಿದರೆ ಮನೆಯಲ್ಲಿ ಕೂಡಾ ಮಾತನಾಡುವೆನೆಂದು ಹೇಳಿದ. ಅಣ್ಣ ಹಾಗೂ ಅಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ನಾನು ಯಾವುದೇ ವಿಷಯಕ್ಕೂ ನನ್ನ ಅಭಿಪ್ರಾಯ ತಿಳಿಸಬೇಕೆಂದರೆ ಪ್ರಸಾದ್ ನನ್ನು ಕೇಳದೇ ಹೇಳುತ್ತಿರಲಿಲ್ಲ. ಅವನು ಅಷ್ಟು ಪ್ರಭಾವ ನನ್ನ ಮೇಲೆ ಬೀರಿದ್ದ. ಆದರೆ ಈ ವಿಷಯವನ್ನು ಮಾತ್ರ ಪ್ರಸಾದ್ ನನ್ನು ಕೇಳಲಾಗಲಿಲ್ಲ. ನನಗೆ ಪ್ರಸಾದ್ ಮೇಲೆ ಪ್ರೀತಿಯುಂಟಾಗಿದೆ ಎನ್ನುವ ಭಾವನೆ ಬಹಳ ಪ್ರಬಲವಾಗಿ ಮೂಡತೊಡಗಿತು.

..............ಮುಂದುವರೆಯುವುದು

Rating
No votes yet

Comments