ನೆನಪಿನ ಬುತ್ತಿಯಿಂದ ಒಂದಷ್ಟು-೨ :)

ನೆನಪಿನ ಬುತ್ತಿಯಿಂದ ಒಂದಷ್ಟು-೨ :)

ನನ್ನ ಜಿರಳೆ ಓಡಾಡಿದಾಗ.. :)
*******************

ನಾನು ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಕಾಲ.ಅಂದು ವಾರದ ಮಧ್ಯ ದಿನ. ಜೀವಶಾಸ್ತ್ರ ಪ್ರಯೋಗ ಮುಗಿಸಿ ಮನೆಗೆ ತಲುಪಿದಾಗ ಸಂಜೆಯಾಗಿತ್ತು. ಮನೆ ಒಳಗೆ ಕಾಲಿಟ್ಟಿದ್ದೇ ತಡ,ನನ್ನ ಲೌಡು ಸ್ಪೀಕರ್ನಲ್ಲೊಂದು ಬೊಬ್ಬಿಟ್ಟೆ.. "ಅಮ್ಮಾ ನಾಳೆ ಎಂಗೊಗೆ ಜೆರಳೆ ಕೊರವಲಿದ್ದು.."(ಅಮ್ಮಾ ನಾಳೆ ನಮಗೆಲ್ಲಾ ಜೆರಳೆಯನ್ನು ಕುಯ್ಯಲಿಕ್ಕಿದೆ) ಎಂದು. ತಂಗಿ ಆಗ ಹತ್ತನೆ ತರಗತಿ. ನನ್ನ ಈ ಮಾತು ಕೇಳಿ ಅವಳು ನನಗೆ ಮುಂದಿನ ವರ್ಷ ಜೀವಶಾಸ್ತ್ರ ಬೇಡ.ಜಿರಳೆ ಕೊರೆಯಬೇಕೇ.. ಹೆಕ್.. ಅಂದಳು. ಇನ್ನೇನು ನಾನು ತೆಕ್ಕೊಂಡಾಗಿತ್ತು ನಾಳೆ ಕುಯ್ಯಲೇಬೇಕಿತ್ತು. ಅಮ್ಮನಲ್ಲಿ ಜಿರಳೆ ಹಿಡಿಯಬೇಕಲ್ಲ ಎಂದು ಅದರ ಬಗ್ಗೆ ಮಾತಾಡುತ್ತ ಕುಳಿತೆ. ಅಮ್ಮ, ಅಪ್ಪ ಬಂದ ನಂತರ ಅವರಲ್ಲಿ ಹೇಳು. ಬಚ್ಚಲು ಮನೆಯಲ್ಲಿ ರಾತ್ರೆ ಬರುತ್ತೆ ಆಗ ಪ್ಲಾಸ್ಟಿಕ್ ಕವರ್ಗೆ ಹಾಕಿ ತೆಕ್ಕೊಂಡು ಹೋಗು ಅಂತ ಹೇಳಿದ್ರು.ಆಯ್ತು ಅಂತ ತಲೆ ಆಡಿಸಿ, ಅಪ್ಪನಿಗಾಗಿ ಇಬ್ಬರೂ ಕಾಯುತ್ತಿದ್ದೆವು. ಅಪ್ಪ ಇನ್ನೇನು ಮೆಟ್ಟಿಲು ಹತ್ತಬೇಕು, ಆಗಲೆ ತಂಗಿ ಅಲ್ಲಿಗೆ ಹೋಗಿ ಪೂರ್ತಿ ವಿವರಿಸಿ ಆಗಿತ್ತು ಕತೆಯ!.ಅಪ್ಪ ಎಷ್ತೂ ಜಿರಳೆ ಬರುತ್ತೆ , ಒಂದು ಅಲ್ವಾ ಬೇಕದ್ದು . ಅಮೇಲೆ ಹಿಡಿದು ಕೊಡುವೆ ಎಂದರು.

ರಾತ್ರಿ ೧೦ ಗಂಟೆಯಿಂದಲೇ ಹೋಗಿ ,ಹೋಗಿ ನೋಡುತ್ತಾ ಇದ್ದೆ ಬಚ್ಚಲು ಮನೆಯ. ಎಲ್ಲಾದರೂ ಜಿರಳೆ ಓಡಾಡುತ್ತಿದೆಯಾ? ಎಂದು! ಅಂತೂ ೧೧ ದರ ಹೊತ್ತಿಗೆ ಕಣ್ಣಿಗೊಂದು ಬಿತ್ತು. ಅಪ್ಪನನ್ನು ಕೂಗಿ ಕರೆದೆ. ಪ್ಲಾಸ್ಟಿಕ್ ಕವರ್ ಜೊತೆ ಅಪ್ಪ ರೆಡಿ! :). ಅಂತೂ ಜಿರಳೆ ಕವರ್ ಒಳಗೆ ಸೇರಿ ಆಯ್ತು. ಕವರ್ ಮೇಲೆ ಗ್ಲಾಸ್ ಅನ್ನು ಬೋರಲು ಹಾಕಿದೆ.. ಒಳಗಿರುವ ಜಿರಳೆ ಉಸಿರುಗಟ್ಟಿ ಸಾಯಲಿ ಎಂದು! :). ರಾತ್ರೆ ತಲೆಯಲ್ಲೆಲ್ಲಾ.. ಬರಿ ಜಿರಳೆ ಕತ್ತರಿಸೋ ಯೋಚನೆನೇ ಆಯ್ತು!! ಬೆಳಗ್ಗೆ ಎದ್ದು ನೋಡಿದೆ,ಜಿರಳೆ ಸತ್ತಂತೆ ಇತ್ತು. ಹ್ಮ್ಮ್ ಸತ್ತಿದೆ ,ಎಂದು ಸುಮ್ಮನಾದೆ. ಕಾಲೇಜ್ಗೆ ಹೋಗೋ ಸಮಯ ಆಯ್ತು, ಪಕ್ಕದ ಮನೆ ಗೆಳತಿ ಬಾ ಎಂದು ಒಂದು ಕೂಗಿಟ್ಟಳು. ನಾನು ಹೊರಟೆ, ಆಗ ಅಮ್ಮ ಜಿರಳೆ.. ಜಿರಳೆ.. ಎಂದು ನೆನಪಿಸಿದರು. ಓಡಿ ಹೋಗಿ, ಪ್ಲಾಸ್ಟಿಕ್ ಕವರ್ ಅನ್ನು ಬ್ಯಾಗ್ಗೆ ತುಂಬುವಾಗ ಜಿರಳೆ ಸರ ಸರ ಎಂದು ಕವರ್ ಒಳಗೆ ಓಡಾಡಿತು. :( ಇನ್ನೇನು ಮಾಡಲಿ ಸಾಯಿಸಬೇಕಿತ್ತಲ್ಲಾ ಎಂದು ಅಲ್ಲೇ ಇದ್ದ ಪೊರಕೆ ತೆಗೆದು ಕವರ್ ಮೇಲೆ ಸರ್ಯಾಗ್ ಹೊಡೆದೆ.. ಕವರ್ ಒಡೀತೆ ಹೊರ್ತು, ಜಿರಳೆ ಸಾಯ್ಲಿಲ್ಲ!! ಅದು ಹೊರ ಓಡಿತು. ಅದನ್ನು ಸಾಹಸ ಮಾಡಿ ಇನ್ನೊಂದು ಕವರ್ ಒಳಗೆ ಹಾಕಿ ಪೊರಕೆಯಲ್ಲಿ ನಾಲ್ಕು ಒದೆ ಕೊಟ್ಟೆ. ನಂತರ ಜಿರಳೆ ಅಲ್ಲಾಡಿಲ್ಲ. ಸತ್ತಿತು ಎಂದು ಬ್ಯಾಗ್ಗೆ ತುಂಬಿ ಕಾಲೇಜ್ ಸೇರಿದೆ.

ಎಲ್ಲರೂ ತಂದ ಜಿರಳೆ ತೋರಿಸ್ತಿದ್ರು. ಬಾಟಲ್ ಅಲ್ಲಿ ಕವರ್ ಅಲ್ಲೆಲ್ಲಾ ತುಂಬಿ ಬಂದಿದ್ರು..!!
ಎಲ್ಲರ ಜಿರಳೆಯೂ ಹರಿದಾಡುತ್ತಿತ್ತು.. ಆದರೆ ನನ್ನದು..!! ಅಬ್ಬಾ ಬೇಸರವಾಯ್ತು.. ಸುಮ್ಮನೆ ಕೊಂದೆ. ಇಲ್ಲೆ ಕೊಲ್ಲಬಹುದಿತ್ತು ಎಂದು.ಮನೆಯಲ್ಲಿ ಯಾರಿಗು ಜಿರಳೆಯನ್ನು ಜೀವಂತ ತಕ್ಕೊಂಡು ಹೋಗೂದು ಅಂತ ಗೊತ್ತಿರಲಿಲ್ಲ, ನಾನು ಯಾರ ಬಳಿಯೂ ವಿಚಾರಿಸಿರಲಿಲ್ಲ.!! ಮ್ಯಾಡಮ್ ಬಂದು ಎಲ್ಲರಿಗು ಮರದ ಹಲಿಗೆ ಕೊಟ್ಟು, ಜಿರಳೆಗಳಿಗೆಲ್ಲ ಕ್ಲೋರೋಫಾರ್ಮ್ ಹಾಕ್ತಾ ಬಂದ್ರು. ಇನ್ನು ಇಬ್ಬರು ನನ್ನಂತೆಯೇ ಜಿರಳೆ ಸಾಯಿಸಿ ತಂದಿದ್ದರು. ಈಗ ಸತ್ತಿದ್ದು ಎಂದಾದಲ್ಲಿ ಕುಯ್ಯಬಹುದು ಎಂದರು. ಅಬ್ಬ ಈಗಷ್ಟೆ ಕೊಂದು ತಂದಿದ್ದಲ್ಲ. ಕವರಿಂದ ಹೊರ ತೆಗೆದು ಹಲಗೆಯಲ್ಲಿಟ್ಟೆ! ಜಿರಳೆ ..ಸರ್.. ರ್... ಎಂದು ಓಡಬೇಕೆ!! ಅಯ್ಯೋ ಎಲ್ಲಿ ಹೋಯ್ತೋ ಎಂದು ಹುಡುಕುತ್ತಿದ್ದಾಗ, ಒಬ್ಬನು ಅದರ ಮೀಸೆ ಹಿಡಿದು ಸಿಕ್ಕಿತು ಎಂದು ನನ್ನ ಎದುರೆ ಹಿಡಿದ. :) ಮ್ಯಾಡಮ್ ಬಂದು ಅದಕ್ಕೂ ಒಂದು ಹನಿ ಹಾಕಿದರು.ಜಿರಳೆ ಸುಮ್ಮನಾಯಿತು. ಎಲ್ಲರೂ ಸಾಮೂಹಿಕ ಜಿರಳೆ ಹತ್ಯೆ ಮಾಡಿದೆವು.. ಎಲ್ಲರದಕ್ಕಿಂತ ನನ್ನ ಜಿರಳೆಯು ಹೈಬ್ರಿಡ್ ನಂತೆ ಜೀರ್ಣಾಂಗವ್ಯೂಹ ದೊಡ್ಡದಾಗಿ ಕಾಣತ್ತಿತ್ತು. ಮ್ಯಾಡಮ್ ಇದು ಸರಿಯಾಗಿ ತೋರುತ್ತಿದೆ ಎಂದು ಹಲಗೆಯನ್ನು ಎಲ್ಲರೆದುರಿಗೂ ಹಿಡಿದು ತೋರಿಸುತಿದ್ದಾಗ ಮನದಲ್ಲೇನೋ ಖುಶ್ ಅನ್ನಿಸಿತು.. :)

Rating
No votes yet

Comments