ಬದುಕೆಂಬ ಪಾಠ

ಬದುಕೆಂಬ ಪಾಠ

ಬದುಕೆಂಬ ಪಾಠಶಾಲೆ
ಜೀವನವು ಸುಖಕರವಾಗಿರಲು ಏನೆಲ್ಲ ಬೇಕೆಂದು ಕೇಳಿದರೆ ಕೈ ತುಂಬ ಹಣ,ಒಳ್ಳೆಯ ಸಾಂಸಾರಿಕ ಜೀವನ ,ಸಂತೃಪ್ತಿ ಕೊಡುವಂತಹ ಕೆಲಸ ,ಸುಂದರ ಊರು ಎಂದೆಲ್ಲ ಆರಂಭವಾಗುವ ಪಟ್ಟಿನೆರೆಕೆರೆಯವರ ಜತೆ ಸೌಹಾರ್ದಯುತ ಸಂಬಂಧ,ಉತ್ತಮ ಸ್ನೇಹಿತರು,ದೊಡ್ಡದಾದ ಒಂದು ಮನೆ,ಮನೆಗೆ ತಕ್ಕುದಾದ ಕಾರು,ಕಾರಿಗೆ ತಕ್ಕ ಡ್ರೈವರ್, ಮನೆಯಲ್ಲಿ ಕೈಗೊಂದು ಕಾಲಿಗೊಂದರಂತೆ ಆಳುಕಾಳುಗಳು, ವರ್ಷಕ್ಕೆರಡು ಫಾರಿನ್ ಪ್ರವಾಸ…….ಇತ್ಯಾದಿ ಬೆಳೆದು ನಮ್ಮ ಹನುಮಂತಪ್ಪನ ಬಾಲಕ್ಕೇ ಸ್ಪರ್ಧೆ ನೀಡೀತು. ಆದರೆ ಜೀವನದಲ್ಲಿನಮಗಿರುವ ಒಂದೊಂದು ವಿಷಯಗಳನ್ನೂ ಅನುಭವಿಸಿ ತೃಪ್ತಿ ಪಡೆಯುವ ಗುಣ ನಮಗೆ ಬಂದರೆ ನಮ್ಮ ಸುಖಕ್ಕೆ ಎಣೆಯಿದೆಯೇ?
ಅದಾಗಲೇ ನನ್ನ ಓದು ಮುಗಿಸಿದಾಗ ನನ್ನ ಗಂಡನಿಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ[BHU]ದಲ್ಲಿ ಕೆಲಸ ಸಿಕ್ಕಿತ್ತು. ಮದುವೆಯ ನಂತರವೂ ಎರಡು ವರ್ಷ ಹಾಸ್ಟೆಲ್ ವಾಸ ಅನುಭವಿಸಿದ್ದ ನಾನು ’ಯಾವೂರಾದರೇನು,ಗಂಡನೊಡನೆ ಸುಖವಾಗಿದ್ದೇನು’ಎಂಬ ಹುಂಬ ಧೈರ್ಯದಿಂದ ಕಾಶೀನಗರ ಸೇರಿದ್ದೆ. ಉಜಿರೆಯ ಹಚ್ಚಹಸಿರು ಪರಿಸರದಲ್ಲಿ ಮಳೆಗಾಲದ ಆನಂದ ಅನುಭವಿಸಿ ವಾರಾಣಸಿಗೆ ಕಾಲಿಟ್ಟಾಗ ಇಲ್ಲಿ ಸುಮಾರು 44-45 ಡಿಗ್ರಿ ಸೆಂಟಿಗ್ರೇಡ್ ತಾಪಮಾನ. BHU campus ನಲ್ಲಿ ಮನೆ ಸಿಗುವವರೆಗೂ ನಮ್ಮ ವಾಸ ಪಟ್ಟಣದ ಮಧ್ಯದಲ್ಲಿರುವ ಒಂದು ಮನೆಯಲ್ಲಿ ಎಂದು ತಿಳಿಯಿತು…ಸರಿ….ಎಷ್ಟೇ ಕಷ್ಟವಾದರೂ ಪತಿಗೆ ಬೇಜಾರಾಗಬಾರದೆಂದು ಸೆಕೆ ಸಹಿಸುತ್ತಾ ಒಂದು ತಿಂಗಳು ಕಳೆದಂತೆ ನಮ್ಮ ಮುದ್ದುಮಗನ ಆಗಮನದ ಸೂಚನೆ..ಮೂರು ತಿಂಗಳು ಸೆಕೆಯಿಂದ ಸವೆದೆನೋ ವಾಕರಿಕೆಯಿಂದ ನಲುಗಿದೆನೋ ..ಈಗಲೂ ಜ್ಞಾಪಿಸಿದರೆ ಒಂದು ಸಲ ಮೈಕಂಪಿಸಿದಂತಾಗುತ್ತದೆ.ಪಕ್ಕದ ಬಂಗಾಲಿ ಮನೆಯವರ ಸಾಸಿವೆ ಎಣ್ಣೆಯಲ್ಲಿ ಕರಿಯುವ ಮೀನಿನ ವಾಸನೆ,ಕೆಳಮನೆಯವರ ಬೆಳ್ಳುಳ್ಳಿ-ಶುಂಠಿ ಒಗ್ಗರಣೆಯೋ..ಅಬ್ಬಬ್ಬಾ!!ಈ ಜನ್ಮದಲ್ಲಿ ಸಾಸಿವೆ ಎಣ್ಣೆ,ಬೆಳ್ಳುಳ್ಳಿ ಹಾಗೂ ಶುಂಠಿ ನಮ್ಮ ಮನೆಗೆ ಬಾರವು ಎಂದು ನಿರ್ಧರಿಸಿದ್ದೆ.
ದಕ್ಷಿಣ ಕನ್ನದ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ನನಗೆ space ತುಂಬ ಮುಖ್ಯವಾದದ್ದು.ಆದರೆ ಇಲ್ಲಿ ಒಂದೊಂದು ಕಿಟಿಕಿ ತೆರೆದರೂ ಒಂದೊಂದು ಮನೆಯ ದರ್ಶನ ಸೌಭಾಗ್ಯ.ಪಿಸುಮಾತಾಡಿದರೂ ಅವರಿವರಿಗೆ ಕೇಳುವುದು ಖಚಿತ..{ಹಾಗಂತ ಬೊಬ್ಬೆ ಹೊಡೆದು ಮಾತಾಡಿದರೂ ನಮ್ಮ ಭಾಷೆ ಅವರಿಗೆಲ್ಲಿ ಅರ್ಥವಾಗಬೇಕು ಬಿಡಿ!} ಇರುವ ಮರಗಳನ್ನೂ ಚಳಿಗಾಲದಲ್ಲಿ ಸೂರ್ಯನ ಶಾಖ ಬರಲೆಂದು ಕಡಿದು ಹಾಕುವ ಬನಾರಸಿಗಳಿಗೆ ಮರಕ್ಕೂ ಜೀವವಿದೆ,ಅದಕ್ಕೂ ನೋವಾಗುತ್ತದೆ ಎಂದೇನಾದರೂ ಹೇಳಿದರೆ ಆಶ್ಚರ್ಯದಿಂದ ಪಾನ್ ತಿನ್ನುವುದನ್ನು ಒಂದು ಕ್ಷಣಕ್ಕೆ ಮರೆತೇ ಬಿಡುವರೇನೋ??!!ಕಾಂಕ್ರೀಟ್ ಕಾಡು ಕಂಡು ಬೇಸರವಾಗಿ ನನಗೆ ನಮ್ಮೂರಿನ ಪಂಚಾರ್ಬಿಗೆ ಹೋಗಿ ಒಂದು ದಿನ ಪೂರ್ತಿ ಯಾವ ನರಮನುಷ್ಯನ ಮುಖವನ್ನೂ ಕಾಣದ ಹಾಗೆ ಇರಬೇಕೆಂಬ ಆಸೆ.ನಮ್ಮ ತವರುಮನೆಯ ಎಕರೆಗಟ್ಟಲೆ ಹೂತೋಟದಲ್ಲಿ ನೂರಾರು ತರಹದ ಹೂವುಗಳು..ಆದರೆ ಇಲ್ಲಿ ಹೂವು ಬಿಡಿ ,ಒಂದು ಎಲೆಯನ್ನೂ ನೋಡಿ ಆನಂದಿಸುವ ಭಾಗ್ಯವಿಲ್ಲ..ಕೆಲಸಕ್ಕೆ ಹೋಗುವೆನೆಂದರೆ ಇಲ್ಲಿನ ಅತಿದೊಡ್ದ ಆಸ್ಪತ್ರೆಯಲ್ಲಿ ಕೆಲಸವೇನೋ ಸಿಕ್ಕಿತು,ಆದರೆ ಸ್ವಲ್ಪ ಸಮಯದ ನಂತರ ಸ್ವಾತಂತ್ರ್ಯದ ಪ್ರಾಮುಖ್ಯತೆಯೂ ,ಇಲ್ಲಿನ ವೈದ್ಯರೂ ’ ಊರಿಗ ತಕ್ಕಂತೆ ಜನ’ ಎನ್ನುವಂತೆ ಹೇಗೆ ನೈತಿಕತೆ ಬಿಟ್ಟು ಕೆಲಸ ಮಾಡುತ್ತಾ ,ಎಷ್ಟು ಸುಖವಾಗಿದ್ದಾರೆಂಬ ಅನುಭವ ಸಿಕ್ಕಿತು.
ಅಂತೂ ಇಂತೂ ಏಳು ತಿಂಗಳು ಮುಗಿಸಿ ಮನೆಗೆ ಹೊರಟಾಗ “ ಟ್ರೈನಿಗೆ ಬದಲಾಗಿ ನಾನು ಹರಿಸಿದ ಕಣ್ಣೀರಿನ ನದಿಯಲ್ಲಿ ದೋಣಿಯಲ್ಲಿ ಕುಳಿತು ಹೋಗಬಹುದೇನೋ”ಅನ್ನಿಸಿತ್ತು.
ಎಲ್ಲ ಮಾತೆಯರಂತೆಯೇ ಕಂದನ ಆಗಮನವು ನನ್ನ ಜೀವನದ ಅತ್ಯಂತ ಸುಂದರ ದಿನ. ತವರುಮನೆಯಲ್ಲಿ ಮಗುವಿನ ಜೊತೆ ನಗುತ್ತ ,ಅಳುತ್ತ ದಿನಗಳು ಕಳೆದದ್ದೇ ತಿಳಿಯಲಿಲ್ಲ.ಆದರೆ ಇನ್ನೊಮ್ಮೆ ಕಾಶಿಯಾತ್ರೆ ನನಗೆ ಅನಿವಾರ್ಯವಲ್ಲವೆ?!ಇನ್ನೊಮ್ಮೆ ಆ ಗಾಳಿಯೂ ಆಡದ ಮನೆಗೆ ನಾನು ಬರುವುದೇ ಇಲ್ಲವೆಂದು ಪತಿಗೆ blackmail ಮಾಡಿದ್ದರಿಂದ ವಾರಾಣಸಿಯ ಎರಡನೇ ಮನೆಗೆ ನನ್ನ ಆಗಮನ. ಮನೆಯೇನೋ ಪರವಾಗಿಲ್ಲ.ಆದರೆ ಉತ್ತರ ಭಾರತದಲ್ಲಿ ವಿದ್ಯುತ್ ಅಭಾವ ಬಹಳ. ಸೆಕೆಗಾಲದಲ್ಲಿ ದಿನಕ್ಕೆ ಕೇವಲ 3-4 ಗಂಟೆ ಕರೆಂಟ್ ಇರುವ ಕ್ರಮ. ಇನ್ವರ್ಟರ್ ಇದ್ದರೂ ಅದು ಚಾರ್ಜ್ ಆಗುವಷ್ಟೂ ಕರೆಂಟ್ ಇಲ್ಲದಿದ್ದರೆ?ತಿಂಗಳುಗಟ್ಟಲೆ ಇದೇ ಗೋಳು..
BHU campus ತುಂಬ ಸುಂದರ.ವಾರಾಣಸಿಗೆ ಬಂದು ಒಂದು ವರ್ಷದ ನಂತರ ನಮಗೆ quarter ಸಿಕ್ಕಿತು.ಇಲ್ಲಿ ಸಾಕಷ್ಟು ದೊಡ್ಡ ಮನೆಗಳು,ಮನೆ ಮುಂಭಾಗ ಹಾಗೂ ಹಿಂಭಾಗದಲ್ಲೂ ಸಾಕಷ್ಟು ಜಾಗ.ಈ ಮನೆಯ ಸೌಂದರ್ಯವನ್ನು ಮೈ ಮನಗಳಲ್ಲಿ ತುಂಬಿಕೊಳ್ಳುತ್ತಿರುವಂತೆಯೇ ಪಕ್ಕದ ಮನೆಯಲ್ಲಿಯೇ ಇದ್ದ ಸಹೊದ್ಯೋಗಿ ನೇತ್ರತಜ್ನೆಯೊಬ್ಬಳು ಸಣ್ಣ ವಯಸ್ಸಿಗೇ cancer ಗೆ ಬಲಿಯಾದ ಸುದ್ದಿ… ಮೆಡಿಕಲ್ ಕಾಲೇಜಿನಲ್ಲಿ ನಾವು ಮಿತಿಯಿಲ್ಲದಷ್ಟು ಸಾವು ನೋವನ್ನು ನೋಡಿದರೂ ಯಾವಾಗಲೂ ಅವರೆಲ್ಲರನ್ನು’ಪೇಷೆಂಟ್ಸ್’ ಎಂಬ ನಿರ್ಲಿಪ್ತತೆಯಿಂದ ನೋಡಲು ಪ್ರಯತ್ನಿಸಿದ್ದ ನನಗೆ ಒಬ್ಬ ವೈದ್ಯೆಯ ಅಸಹಾಯಕತೆಯನ್ನು ಅದೇ ನಿರ್ಲಿಪ್ತತೆಯಿಂದ ನೋಡಲು ಸಾಧ್ಯವಾಗಲಿಲ್ಲ..ವಿಧಿಯ ಆಟ ನಿಜಕ್ಕೂ ವಿಚಿತ್ರ…ಹಾಗೆಯೇ ಮನುಷ್ಯನ ಬದುಕೂ!!!
ದಿನಗಳು ಕಳೆದಂತೆ ಎಲ್ಲವೂ ಮರೆಯುವುದು ದೇವರು ನಮಗಿತ್ತ ಬಹುದೊಡ್ಡ ವರ.ನನ್ನ ಹೊಸಮನೆಯು ನನಗೀಗ ಬಹಳ ಆಪ್ತ.ಅಷ್ಟೇ ಅಲ್ಲದೇ ವಾರಾಣಸಿಯನ್ನು ಅದರ ಎಲ್ಲ ಪಾಸಿಟಿವ್ ಹಾಗೂ ನೆಗಟಿವ್ ಅಂಶಗಳ ಜೊತೆಗೆ ಸ್ವೀಕರಿಸಿಬಿಟ್ಟಿದ್ದೇನೆ.
ಇದು ನನ್ನ ಕಥೆ.
ಸುಖವೆಂದರೇನೆಂದು ನಾನು ಬಹಳ ಸಲ ponder ಮಾಡಿದ್ದಿದೆ. ನಾನು ದ್ವಿತೀಯ ಪಿಯುಸಿ ಆದ ಮೇಲೆ engineering ಮಾಡಿದ್ದರೆ ಕೈತುಂಬ ಸಂಪಾದನೆ ಮಾಡಿಕೊಂಡು ಸುಖವಾಗಿರುತ್ತಿದ್ದೆ ಎಂದು ಎಷ್ಟು ಸಲ ಹಲುಬಿದ್ದೇನೆಂದು ಆ ದೇವರು ಖಂಡಿತವಾಗಿ ಲೆಕ್ಕವಿಟ್ಟಿರಬೇಕು .ಹಾಗಾಗಿ ಇವಳಿಗೆ ಜೀವನವೆಂದರೇನು ಎಂದು ಒಂದು ಸಲ ಕಲಿಸಿಯೇಬಿಡುತ್ತೇನೆಂದು ಪಣ ತೊಟ್ಟ ಆ ಈಶ್ವರ, ಕಾಶಿ ವಿಶ್ವನಾಥನ ರೂಪದಲ್ಲಿ ನನಗೆ ಚೆನ್ನಾಗಿಯೇ practical class ಗಳನ್ನು ತೆಗೆದುಕೊಂಡ…ಹಾಗೂ ಇನ್ನೂ ತೆಗೆದುಕೊಳ್ಳುತ್ತಲೇ ಇದ್ದಾನೆ..
ನಾನು ಕಂಡುಕೊಂಡ ಕೆಲವು ವಿಷಯಗಳು…
•ಪ್ರತಿಯೊಂದು ಹೊಸದಿನವೂ ದೇವರು ನಮಗೆ ಕೊಡುವ ವರ.ನಮ್ಮ ಬದುಕೇ ದೇವರು ನಮಗೀಯುವ ಒಂದು opportunity.
.ನನ್ನ ಮನೆಯ ಸುತ್ತಮುತ್ತ ಇರುವ ಒಂದೊಂದು ಮರ ,ಗಿಡ, ಎಲೆ ,ಬಳ್ಳಿ ,ಹೂವೂ ನನಗೆ ಬಹಳ ಸಂತೋಷವನ್ನು ಕೊಡುತ್ತವೆ.ಅವುಗಳೆಡೆಗೂ ನಾನು ಅಷ್ಟೇ ಪ್ರೀತಿಯನ್ನು ತೋರುತ್ತೇನೆ.
•ಒಂದೊಂದು ತಂಗಾಳಿಯ ಅಲೆಯೂ ನಾನು ಅದಕ್ಕಾಗಿ ಹಂಬಲಿಸಿದ್ದನ್ನು ನೆನಪಿಸಿ ನನಗೆ ಸ್ವಲ್ಪ ಜಾಸ್ತಿಯೇ ತಂಪನ್ನೀಯುತ್ತದೆ.
•ದಿನದ 24 ಗಂಟೆ ವಿದ್ಯುತ್,ನೀರಿನ ವ್ಯವಸ್ಥೆಯೇನು ಸಣ್ಣ ವಿಷಯವೇ?
•ವಾರಾಣಸಿಗೆ ಬಂದವರೆಲ್ಲ ಇಲ್ಲಿ ನಗರದ ಅವ್ಯವಸ್ಥೆಯನ್ನು ಕಂಡು ಅಸಹ್ಯಪಡುವುದು ಸಹಜ.ಈ ಊರನ್ನು ಬಯಸಿದರೆ ಕೇವಲ ವಿಶ್ವನಾಥನು ಸ್ವಚ್ಛಗೊಳಿಸಬಹುದೇನೋ..ಆದರೆ ನನ್ನ ಮನವನ್ನು ಶುದ್ಧವಾಗಿಟ್ಟುಕೊಂಡರೆ ಸ್ವಿಟ್ಜರ್ ಲ್ಯಾಂಡ್ ಆದರೇನು ಈ ಊರಾದರೇನು ನಾನು ಸುಖವಾಗಿರಬಲ್ಲೆ.
•ನನಗೆ ನೈತಿಕವಾಗಿ ಸರಿಯೆನಿಸುವುದನ್ನು ಮಾತ್ರ ಮಾಡುತ್ತ ನನ್ನದೇ clinic ನಡೆಸುತ್ತ ಸ್ವಾತಂತ್ರ್ಯದ ಅನುಭವವನ್ನೂ ಸವಿಯುತ್ತಿದ್ದೇನೆ.
ಇವೆಲ್ಲ ಯಾರಿಗೂ ಗೊತ್ತಿರದ ವಿಷಯಗಳೇನಲ್ಲ..ಆದರೆ ಇವನ್ನು ನಾನು ನನ್ನ ಅನುಭವದಿಂದ rediscover ಮಾಡಿದ ವಿಷಯಗಳು..
ನನ್ನ ಕಲಿಕೆ ಸಾಗುತ್ತಲೇ ಇದೆ….
{ಕನ್ನಡ ಮಾಧ್ಯಮದಲ್ಲಿ ಕಲಿತ ನನಗೆ ಚಿಕ್ಕಂದಿನಲ್ಲಿ ಕನ್ನಡದಲ್ಲಿ ಅಭಿವ್ಯಕ್ತಿಸುವ ಸಾಮರ್ಥ್ಯ ಇತ್ತೆನ್ನಬಹುದು.ಕಾಲೇಜು ಸೇರಿದ ಮೇಲೆ ದೇಶ ವಿದೇಶಗಳ ವಿದ್ಯಾರ್ಥಿಗಳ ಜೊತೆ mingle ಆಗಿ ಅವರಂತೇ ಆಗುವ ಪ್ರಯತ್ನದಲ್ಲಿ ಕನ್ನಡದ ಮೇಲಿನ ಹಿಡಿತವು ಕೈತಪ್ಪಿ ಹೋದದ್ದು ತಿಳಿಯಲೇ ಇಲ್ಲ.ಇಲ್ಲಿ ಹಿಂದಿ ಭಾಷೆ ಕೇಳಿ ಸುಸ್ತಾದಾಗ ಕನ್ನಡಭಾಷೆಯು ಕಿವಿಗಳಿಗೂ,ಓದುವ ಕಂಗಳಿಗೂ ,ಮನಸ್ಸಿಗೂ,ಹಾಗೂ last not but the least ಬರೆಯುವ ಕೈಗಳಿಗೂ ಮುದ ನೀಡುತ್ತದೆ.ಹಾಗಾಗಿ ಇದು ನನ್ನ ಕನ್ನಡ ಮರುಕಲಿ[ಳಿ]ಕೆಯ ಪ್ರಯತ್ನ.’ಬೊಗಳಿ ಬೊಗಳಿ ರಾಗ’ ಎಂಬಂತೆ ಬರೆದು ಬರೆದು ನನ್ನ ಕನ್ನಡ ಸ್ವಲ್ಪ improve ಆದರೆ ನನಗೆ ಬಹಳ ಖುಷಿ}
ಯಾರಾದರೂ ಕೊನೆಯ ತನಕ ಓದಿದ್ದರೆ ಈ ಶಬ್ದಗಳಿಗೆ ಸರಿಯಾದ ಕನ್ನಡ ಶಬ್ದಗಳನ್ನು ತಿಳಿಸಬಲ್ಲಿರಾ?
Ponder,space,opportunity,mingle,charge,improve,last but not the least,clinic,rediscover,blackmail,campus,

Rating
No votes yet

Comments