ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ

ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ

ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿರುವುದರ ಜೊತೆಗೆ ಅದರ ಪಾರಂಪರಿಕ ಸೊಗಡು ಸಂಸ್ಕೃತಿಗಳೂ ಕ್ರಮೇಣ ಮಾಯವಾಗುತ್ತಿವೆ. ನಗರ ಸಾರಿಗೆ ಬಸ್ಸುಗಳ ಆಮೆವೇಗ, ಸಮಯಕ್ಕೆ ಸರಿಯಾಗಿ ಸಿಗದಿರುವಿಕೆ, ಸುತ್ತುಬಳಸಿನ ಹಾದಿ ಇತ್ಯಾದಿಗಳ ಅಸಮರ್ಪಕ ನಿರ್ವಹಣೆಯಿಂದ ರೋಸಿದ ಜನರು ಸಿಟಿ ಬಸ್ಸುಗಳಿಂದ ವಿಮುಖರಾಗಿ ತಮ್ಮದೇ ಸ್ವಂತ ವಾಹನಗಳ ಮರೆ ಹೊಕ್ಕಿದ್ದು ಇತಿಹಾಸ.
ಇತ್ತೀಚೆಗೆ ವಲಸಿಗೆ ಹೆಚ್ಚಳದಿಂದ ಬಸ್ಸುಗಳ ಸಂಖ್ಯೆ ಬೆಳೆದಿದ್ದರೂ ಸ್ವಂತ ವಾಹನಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಅಲ್ಲದೆ ದ್ವಿಚಕ್ರ ವಾಹನಗಳ ಸಂಖ್ಯೆಯನ್ನೂ ಮೀರಿಸುವಂತೆ ಕಾರುಗಳ ಸಂಖ್ಯೆಯೂ ಏರುತ್ತಿದೆ. ಈ ಕಾರಣದಿಂದ ವಾಹನದಟ್ಟಣೆ ಇನ್ನೂ ಮಿತಿಮೀರುತ್ತಿದೆ. ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಪರಿಸರದ ಮೇಲೂ ಪ್ರತಿಕೂಲದ ಪರಿಣಾಮ ಉಂಟಾಗಿದೆ.
ಇನ್ನು ಆಂಬುಲೆನ್ಸ್ ಪಾಡಂತೂ ಹೇಳಲು ಸಾಧ್ಯವಿಲ್ಲ. ಕುಟುಕು ಜೀವ ಹೊತ್ತ ರೋಗಿಗಳು ರಸ್ತೆಯಲ್ಲೇ ಪ್ರಾಣ ನೀಗುವ ಅಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಅವುಗಳು ಚಿಮ್ಮಿಸುವ ನೀಲಿ ಕಾಂತಿ ಹಾಗೂ ಹೊಮ್ಮಿಸುವ ಸೈರನ್ ಶಬ್ದಕ್ಕೆ ಯಾವ ವಾಹನವೂ ಕ್ಯಾರೇ ಎನ್ನದೆ ತಟಸ್ಥರಾಗಿ ನಿಲ್ಲುತ್ತವೆಂದರೆ ಮಾನವೀಯ ಮೌಲ್ಯಗಳು ಎಷ್ಟು ಅಧೋಗತಿಗೆ ಇಳಿದಿದೆ ಎಂದು ಊಹಿಸಿ. ಕೆಂಪುದೀಪದ ಕಾರುಗಳಿಗೆ ಸಂಚಾರ ಸುಗುಮಗೊಳಿಸುವ ಪೊಲೀಸರು ನೀಲಿ ದೀಪದ ಆಂಬುಲೆನ್ಸ್ಗೆ ತಾತ್ಸಾರ ತೋರುತ್ತಾರೆ.
ಸಂಚಾರ ಸುಗಮಗೊಳಿಸುವ ಕಾರಣ ನೀಡಿ ಕೆಲವೆಡೆ ಬಸ್ಸುನಿಲ್ದಾಣಗಳನ್ನು ರದ್ದುಮಾಡಿರುವ ಪೊಲೀಸರು ವೃದ್ಧರಿಗೂ ಮಕ್ಕಳಿಗೂ ಇತರ ಅಸಹಾಯಕರಿಗೂ ಕೇಡು ಬಗೆದಿದ್ದಾರೆ. ಎಷ್ಟೋ ಕಡೆ ರಸ್ತೆ ದಾಟಲು ಸಾಧ್ಯವಾಗದ ಪರಿಸ್ಥಿತಿ ಇದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿವೇಶನಗಳ ಯೋಜನೆ ರೂಪಿಸುವಾಗ ಹೆದ್ದಾರಿಗಳಿಗೆ ಹಾಗೂ ಬಸ್ನಿಲ್ದಾಣಗಳಿಗೆ ಸ್ಥಳಾವಕಾಶ ನೀಡದೆ ಸೋತಿದೆ. ಕಿರಿದಾದ ಹಾಗೂ ಹದಗೆಟ್ಟ ರಸ್ತೆಗಳು ಇವುಗಳ ಜೊತೆಗೆ ಪರ್ಯಾಯ ಮಾರ್ಗವಿಲ್ಲದ ದುಃಸ್ಥಿತಿಗಳಿಂದ ಗಾಯದ ಮೇಲೆ ಬರೆಯಿಟ್ಟಂತಾಗಿದೆ. ಉದಾಹರಣೆಗೆ ಎಚ್ಎಎಎಲ್ ವಿಮಾನನಿಲ್ದಾಣ ರಸ್ತೆಗೆ ಸಮಾನಾಂತರದಲ್ಲಿ ಮತ್ತೊಂದು ರಸ್ತೆಯೇ ಇಲ್ಲ. ದಿನದ ಎಲ್ಲ ಸಮಯದಲ್ಲೂ ಈ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಭರ್ತಿಯಾಗಿರುತ್ತವಲ್ಲದೆ ಅಲ್ಪಸ್ವಲ್ಪ ಅಡೆತಡೆಯುಂಟಾದರೂ ಚಲನೆಯು ಗಂಟೆಗಟ್ಟಲೆ ಸ್ಥಗಿತವಾಗುತ್ತದೆ.
ಕಾಯಿದೆಗಳನ್ನು ರೂಪಿಸುವವರು ಬೆಂಗಳೂರಿನ ರಸ್ತೆಗಳಲ್ಲಿ ನಡೆದಾಡುವ ಕೃಪೆ ಮಾಡಬೇಕು.

Rating
No votes yet

Comments