ತುದಿಗಳೆರಡು - ಚೂಪು, ಬಡ್ಡು

ತುದಿಗಳೆರಡು - ಚೂಪು, ಬಡ್ಡು

ನನ್ನ ಹತ್ತಿರ ಎರಡು ತುದಿಗಳು ಇವೆ. ಯಾವಾಗಿಂದ ಇದೆ, ಎಲ್ಲಿ ಸಿಕ್ಕಿತು ಅನ್ನೋದೆಲ್ಲ ಮರೆತುಹೋಗಿದೆ. ನಾನು ಹೇಳಬೇಕಂತಿರೋದಕ್ಕೆ ಅದು ಮುಖ್ಯಾನೂ ಅಲ್ಲ ಬಿಡಿ. ಯಾಕೆಂದರೆ ಎಲ್ಲರಿಗೂ ಅಂಥವು ಎಲ್ಲೆಲ್ಲೋ ಯಾವಾವಾಗಲೋ ಸಿಕ್ತವೆ. ಆದರೆ ನನಗಂತೂ ಈ ತುದಿಗಳು ತುಂಬಾ ಕಷ್ಟಕೊಡ್ತಾವೆ. ಅವು ಇಲ್ಲದೆ ಇದ್ದರೆ ಆಗಲ್ಲ. ಇದ್ದಾಗ ಏನು ಮಾಡಬೇಕು ಅಂತ ಹೊಳೆಯೋದಿಲ್ಲ. ಯಾವ ತುದೀನ ಎಲ್ಲಿ ಕೈಗೆತ್ತಿಕೋಬೇಕು ಅನ್ನೋದೆ ಗೊತ್ತಾಗಲ್ಲ. ಮೊನ್ನೆ ನಡೆದಿದ್ದು ಕೇಳಿ ಏನು ಹೇಳ್ತಾ ಇದೀನಿ ಅನ್ನೋದು ಗೊತ್ತಾಗತ್ತೆ.

ಯಾರನ್ನೋ ಸ್ವಲ್ಪ ಘಾಸಿ ಮಾಡಬೇಕಾದಂತ ಪ್ರಸಂಗ ಬಂತು. ಘಾಸಿ ಅಂದರೆ ಸಾಯೋ ಹಾಗೆ ಅಲ್ಲ ಅಂತಿಟ್ಕೊಳ್ಳಿ. ಸುಮ್ಮನೆ ಬೆದರಸಿ ನನ್ನ ತಂಟೆಗೆ ಬರದೇ ಇರೋ ಹಾಗೆ ಮಾಡೋದು ಅಷ್ಟೆ. ಒಂದು ತಿಂಗಳಿಂದ ತುಂಬಾ ಯೋಚನೆ ಮಾಡಿ ಯಾವ ತುದಿ ತಗೊಂಡು ಹೋದರೆ ಒಳ್ಳೇದು, ಎದುರು ಬಂದಾಗ ಹೇಗೆ ತುದಿಯಿಂದ ತಿವಿಯೋದು, ಎದುರಾಳಿ ಹತ್ತಿರಾನೂ ತುದಿ ಇದ್ದರೆ ಅದನ್ನು ಹೊಡೆದು ಹೇಗೆ ನೆಲಕ್ಕೆ ಬೀಳ್ಸೋದು, ಎಲ್ಲ ಚೆನ್ನಾಗಿ ತಲೆಯೊಳಗೆ ಚಿತ್ರ ಕಟ್ಟಿಕೊಂಡು ಹೋದೆ.

ನನ್ನ ಮಿಕ ಸಿಕ್ಕಿತು. ಕೈಕುಲುಕಿ, ಕ್ಷೇಮ ಸಮಾಚಾರ ಎಲ್ಲ ವಿಚಾರಿಸಿ, ಹಲ್ಲು ಕಿರಿದು, ಮಳೆ ಬೆಳೆ ಬಗ್ಗೆ ಎಲ್ಲ ಲೋಕಾರೂಢಿ ಮಾತಾಡಿ ತುಂಬಾ ಹೊತ್ತು ಹಾಳಾಯ್ತು. ಹೊತ್ತು ಹಾಳಾಯ್ತು ಅಂತ ಯಾಕೆ ಹೇಳಿದೆ ಅಂದರೆ, ಉಭಯಕುಶಲೋಪರಿ ನಡೀತಿದ್ದಾಗ ನನ್ನ ತಲೆ ಒಳಗೆ ಕಟ್ಟಿಕೊಂಡಿದ್ದ ಚಿತ್ರದ ಕೈಕಾಲು ಕಳಚಿಕೊಳ್ಳೋಕೆ ಶುರು ಆಗ್ತಿತ್ತು. ಕಳವಳ ಅಲ್ಲದಿದ್ದರೂ ದಾರಿ ಕಾಣಿಸದೆ ಈ ಪ್ರಾಣಿನ ಹ್ಯಾಗೆ ತಿವಿಯೋದು ಅನ್ನೋದೇ ಮರೆತುಹೋದ ಹಾಗಾಯ್ತು. ಮಹಾಭಾರತದಲ್ಲಿ ಅದ್ಯಾವನಿಗೋ ಸರಿಯಾದ ಹೊತ್ತಿಗೆ ಎಲ್ಲ ಮರೆತು ಹೋಗೋ ಶಾಪ ಇತ್ತಂತಲ್ಲ, ಹಾಗೆ. ಒಳ್ಳೆ ಪಜೀತಿಗಿಟ್ಟುಕೊಂಡ್ತಲ್ಲ ಅಂತ ಪರದಾಡೋ ಹೊತ್ತಿಗೆ ನನ್ನ ಮಿಕ ತಟ್ಟಂತ ನನಗೇ ಪೆಟ್ಟು ಮಾಡಿಬಿಡ್ತು. ಇನ್ನು ಹೀಗಿದ್ದರೆ ಆಗಲ್ಲ ಅಂತ ಮೂಟೇಲಿದ್ದ ತುದಿ ತೆಗೆದು ನಾನೂ ಚುಚ್ಚಿದೆ. ಎದುರಾಳಿಗೆ ಏನೂ ಆದ ಹಾಗೇ ಕಾಣಲಿಲ್ಲ. ಅಷ್ಟೆ ಅಲ್ಲ, ನಾನು ಚುಚ್ಚಿದಾಗ ನೋವಾಗೋದಿರಲಿ ಜೋರಾಗಿ ನಗ್ತಾ ಇದೆ ಪ್ರಾಣಿ! ಇದೇನಾಯ್ತು ಅಂತ ಮೆಲ್ಲನೆ ತಿರುಗಿ ನಿಂತು ನೋಡ್ಕೊಂಡರೆ, ತುದಿ ನುಣ್ಣಗೆ ಬಡ್ಡಾಗಿ ಗುಂಡಾಗಿ ಹೋಗಿದೆ! ನಾನು ತಿವಿದಾಗ ನೋವಾಗೋ ಬದಲು ಕಚಕುಳಿ ಇಟ್ಟಂಗಾಗಿರಬೇಕು! ಏನು ಮಾಡೋದು ಅಂತ ಯೋಚಿಸೋ ಅಷ್ಟರಲ್ಲಿ, ಹಿಂದಿಂದ ಒಂದು ಪೆಟ್ಟು ನನ್ನ ಬೆನ್ನಿಗೆ ಸರಿಯಾಗೇ ಬಿತ್ತು. ಇದು ಯಾಕೆ ಹೀಗಾಯ್ತು ಅಂತ ಗೊತ್ತಾಗಲಿಲ್ಲ. ತಪ್ಪು ತುದಿ ತಂದನಾ ಅಂದರೆ, ಇಲ್ಲ ಸರಿಯಾದ ತುದೀನೆ. ಹಾಗಾದರೆ, ನನ್ನ ಲೆಕ್ಕಾಚಾರಾನೆ ತಪ್ಪಾಗಿ ಹೋಯ್ತ? ಇಷ್ಟೆಲ್ಲ ಮನಸ್ಸಲ್ಲೇ ಮಂಡಿಗೆ ತಿನ್ನೋಷ್ಟರಲ್ಲಿ ನಾನು ತಿವಿಯೋಕೆ ಹೋಗಿದ್ದ ಪ್ರಾಣಿ ನನ್ನ ಮೈಯೆಲ್ಲಾ ಚೆನ್ನಾಗಿ ತಿವಿದು ಕೈಕಾಲು ಆಡದ ಹಾಗಿ ಮಾಡಿ ಮಾಯ ಆಗಿತ್ತು. ಎದುರಾಳಿಯಿಂದಾನಾದರೂ ಕಲಿಯೋಣ ಅಂದರೆ ತನ್ನ ಕೆಲಸ ಮುಗಿಸಿದ ಪ್ರಾಣಿ ಅಲ್ಲಿದ್ದರೆ ತಾನೆ?

ಗೊತ್ತಾಯ್ತ ನನ್ನ ಈ ತುದಿಗಳ ಸಂಕಟ? ಚೂಪು ಮಾಡಿಕೊಂಡು ಹೋದ ತುದಿ ಸರಿಯಾದ ಹೊತ್ತಿಗೆ ಬಡ್ಡಾಗಿ ಬಿಟ್ಟಿರತ್ತೆ. ಆದರಾಗಲೀ ದೊಣ್ಣೇಲಿ ಬಡಿದ ಹಾಗೆ ಬಡಿಯೋಣ ಅಂದರೆ ಇದ್ದಕಿದ್ದ ಹಾಗೆ ತುದಿ ಚೂಪಾಗಿಬಿಟ್ಟು ಎದುರಾಳಿ ರಕ್ತ ಬಂದು ಸತ್ತೇ ಹೋದರೇನು ಗತಿ ಅಂತ ಹೆದರಿಕೆ ಆಗತ್ತೆ. ಅದಕ್ಕೆ ಹೇಳಿದ್ದು ಈ ತುದಿಗಳು ಬೇಕೇ ಬೇಕು. ಆದರೆ ಸರಿಯಾದ ಹೊತ್ತಿಗೆ ಸರಿಯಾದ ತುದೀನ ಸರಿಯಾಗಿ ಬಳಸದಿದ್ದರೆ ಒಂದೋ ತುದಿಗಳು ಇರೋದೇ ವ್ಯರ್ಥ, ಇಲ್ಲ ತುದಿಗಳು ಜಾಸ್ತಿ ಅಪಾಯ ಮಾಡಿಬಿಡ್ತಾವೆ. ಎರಡೇ ತುದಿಯಿರೋದು ಈ ಎಲ್ಲಾ ಕಷ್ಟಕ್ಕೂ ಕಾರಣ ಇರಬೇಕು ಅನ್ನೋ ನಿರ್ಧಾರಕ್ಕೆ ಬಂದು ಈಗ ಹಲವಾರು ತುದಿಗಳನ್ನ ಕಲೆ ಹಾಕೋದಕ್ಕೆ ಶುರು ಮಾಡಿದೀನಿ.

Rating
No votes yet

Comments