ಮೊದಲ ಪ್ರೀತಿ - ಭಾಗ ೩

ಮೊದಲ ಪ್ರೀತಿ - ಭಾಗ ೩

http://sampada.net/blog/inchara123/21/05/2009/20519  

http://sampada.net/blog/inchara123/22/05/2009/20559

ಚಿರಾಗ್ ಮನೆಗೆ ಬಂದಾಗ ಅವನೊಟ್ಟಿಗೆ ಏಕಾಂತದಲ್ಲಿ ಮಾತನಾಡಲು ಬಯಸಿದೆ. ಆತನು ಅಮ್ಮ, ಅಣ್ಣನ ಬಳಿ ಒಪ್ಪಿಗೆ ಪಡೆದು ಹತ್ತಿರದಲ್ಲಿದ್ದ ಪಾರ್ಕಿಗೆ ಕರೆದುಕೊಂಡು ಹೋದ. ಅವನ ಬಳಿ ಪ್ರಸಾದ್ ನ ವಿಷಯವೆಲ್ಲಾ ಹೇಳಿ ಅತ್ತೆ. ಚಿರಾಗ್ ನನ್ನನ್ನು ಮದುವೆಯಾಗ ಬಯಸಿದ ಮೇಲೆಯೇ ನನಗೆ ಪ್ರಸಾದ್ ನನ್ನು ನಾನೆಷ್ಟು ಪ್ರೀತಿಸುತ್ತಿದ್ದೇನೆಂದು ತಿಳಿದದ್ದು ಎಂದೆಲ್ಲಾ ಹಲುಬಿದೆ. ಆದರೆ ಇದೆಲ್ಲಾ ತಿಳಿದ ಮೇಲೆಯೂ ಚಿರಾಗ್ ನಿಗೆ ನನ್ನ ಮೇಲಿನ ಪ್ರೀತಿ ಸ್ವಲ್ಪವೂ ಕಡಿಮೆಯಾಗಲಿಲ್ಲ. ಬದಲಿಗೆ ನನ್ನ ಮುಗ್ಧತೆ ನೋಡಿ ಇನ್ನೂ ಹೆಚ್ಚು ಪ್ರೀತಿಸುವೆನೆಂದು ಹೇಳಿದ! ಕೊನೆಯದಾಗಿ ಉಳಿದ ಉಪಾಯವೆಂದರೆ ಪ್ರಸಾದ್ ನಿಗೆ ನಾನವನನ್ನು ಪ್ರೀತಿಸುತ್ತಿರುವೆನೆಂದು ಹೇಳಿಬಿಡುವುದು, ಆಮೇಲೆ ಬಂದದ್ದನ್ನು ಎದುರಿಸುವುದೆಂದು ನಿಶ್ಚಯಿಸಿದೆ. ಪ್ರಸಾದ್ ನಿಗೆ ಕಾಗದ ಬರೆದೆ. ನಾನವನನ್ನು ಪ್ರೀತಿಸುವುದಾಗಿಯೂ, ಅವನ ಅಭಿಪ್ರಾಯವನ್ನು ತಿಳಿಸಲು ಹೇಳಿದೆ. ಜೊತೆಗೆ ಚಿರಾಗ್ ನ ವಿಷಯ ಕೂಡಾ ಅದರಲ್ಲಿ ಬರೆದೆ. ನಾನೆಂದು, ಯಾವ ವಿಷಯವನ್ನೂ ಪ್ರಸಾದನ ಬಳಿ ಮರೆಮಾಚಿರಲಿಲ್ಲ.
ಅದೇನೆಂದುಕೊಂಡನೋ ಪ್ರಸಾದ್ ಗೊತ್ತಿಲ್ಲ. ಬಹುಶಃ ನನಗೆ ಪ್ರಸಾದ್ ನ ನಕಾರ ಬಂದರೆ, ಚಿರಾಗ್ ನನ್ನು ಮದುವೆಯಾಗುವೆನೆಂದು ತಿಳಿದುಕೊಂಡನೋ ಗೊತ್ತಿಲ್ಲ! ಅವನ ದೀರ್ಘ ಪತ್ರ ನನಗೆ ತಲುಪಿತು. ಅದರಲ್ಲಿ ಈ ಪ್ರೀತಿಯ ವಿಷಯವಾಗಲೀ, ಚಿರಾಗ್ ನ ವಿಷಯವಾಗಲೀ ಏನೂ ಇರಲೇ ಇಲ್ಲ! ಅದರ ಬದಲಿಗೆ, ನನ್ನ ವಯಸ್ಸನ್ನು ನೆನಪಿಸಿ, ಪ್ರೀತಿ, ಪ್ರೇಮದಲ್ಲಿ ಮುಳುಗುವ ವಯಸ್ಸಲ್ಲವೆಂದು, ಹಾಗೂ ಈಗ ನನ್ನ ವಿದ್ಯಾಭ್ಯಾಸದ ಕಡೆಗೆ ಹಾಗೂ ನನ್ನ ಕೆರಿಯರ್ ರೂಪಿಸುವ ಕಡೆಗೆ ಗಮನವಿಡಬೇಕೆಂದು ಹೇಳಿದ್ದ. ಜೀವನವೆಂದರೆ ಹೂವಿನ ಹಾಸಿಗೆಯಲ್ಲ. ಈ ವಯಸ್ಸಿನಲ್ಲಿ ಕಾಣುವ ಕನಸುಗಳು ವಿದ್ಯಾಭ್ಯಾಸದ ಹಾಗೂ ಜೀವನವನ್ನು ರೂಪಿಸುವುದರ ಬಗೆಗಿರಬೇಕೆಂದು ಕೂಡಾ ತಿಳಿಸಿದ್ದ. ಪತ್ರವು ಕೂಡಾ ಯಾವುದೋ ಮೂರನೇ ವ್ಯಕ್ತಿಗೆ ಬರೆದ ಹಾಗಿತ್ತು. ಎಲ್ಲಿಯೂ ಕೂಡಾ ನನ್ನ, ಪ್ರಸಾದನ ಇಲ್ಲವೇ ಚಿರಾಗ್ ನ ಹೆಸರಿನ ಪ್ರಸ್ತಾಪವೇ ಇರಲಿಲ್ಲ. ಪತ್ರ ಓದಿದ ಮೇಲೆ ಅಳು ಉಕ್ಕಿಬಂತು. ಅಮ್ಮನ ಮಡಿಲಲ್ಲಿ ಮಲಗಿ ಅತ್ತೆ. ಅಮ್ಮನಿಗೆ ಗಾಬರಿಯಾಯಿತು. ಅಮ್ಮ ನನಗೆ ಚಿರಾಗ್ ನೊಟ್ಟಿಗೆ ಮದುವೆ ಇಷ್ಟ ಇಲ್ಲವೆಂದಾದರೆ ಬೇಡವೇ ಬೇಡವೆಂದಳು. ನಾನು ಹಾಗಲ್ಲವೆಂದು, ನನ್ನ ಪರೀಕ್ಷೆ ಮುಗಿಸಿ, ನಾನು ನನ್ನ ಕಾಲ ಮೇಲೆ ನಿಲ್ಲುವವರೆಗೂ ನನಗೆ ಸಮಯ ಬೇಕೆಂದೆ. ಅಮ್ಮ, ಅಣ್ಣ ಮತ್ತು ಚಿರಾಗ್ ನನ್ನು ಒಪ್ಪಿಸಿದಳು. ಚಿರಾಗ್ ಎಷ್ಟು ದಿವಸಗಳು ಬೇಕೆಂದರೂ ಕಾಯಲು ಸಿದ್ಧ ಎಂದ. ಪ್ರಸಾದ್ ನಕಾರ ವ್ಯಕ್ತ ಪಡಿಸಿರದ ಕಾರಣ ನನಗಿನ್ನೂ ಆಶಾಕಿರಣ ಕಾಣುತ್ತಿತ್ತು.
ಕೊನೆಯ ವರ್ಷದ ಡಿಪ್ಲೋಮಾ ಪರೀಕ್ಷೆಗೆ ೨ ತಿಂಗಳು ಮಾತ್ರವಿತ್ತು. ಹಗಲು ರಾತ್ರಿ ಕಷ್ಟಪಟ್ಟು ಓದಿದೆ. ಪ್ರಸಾದ್ ಗಾಗಿ, ಅವ ಹೇಳಿದಕ್ಕಾಗಿಯೇ ಓದಿದೆ. ನನ್ನ ಜನ್ಮ ದಿನದಂದೇ ಪರೀಕ್ಷೆಯ ರಿಸಲ್ಟ್ ಕೂಡಾ ಬಂತು. ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಬಂದಿತ್ತು. ಪ್ರಸಾದ್ ನ ನನಗೆ ಆ ರೀತಿ ಕಾಗದ ಬರೆಯದಿದ್ದರೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ ಎಂದು ಅವನ ಬಗ್ಗೆಯೇ ಯೋಚಿಸುತ್ತಿದ್ದಾಗ ಪಕ್ಕದ ಮನೆಯ ಫೋನ್ ರಿಂಗುಣಿಸಿತು. ಆ ಕರೆ ನನಗೆ ಆಗಿತ್ತು! ಆಶ್ಚರ್ಯವೆಂದರೆ ಪ್ರಸಾದ್ ಜನ್ಮದಿನದ ಶುಭಾಶಯಗಳನ್ನು ಹೇಳಲು ಫೋನ್ ಮಾಡಿದ್ದ. ಸಂತೋಷದಲ್ಲಿ ಮೈ ಮನ ಹಾಡಿತು. ನನ್ನ ಪರೀಕ್ಷೆಯ ರಿಸಲ್ಟ್ ಹೇಳಿದೆ. ನನ್ನಷ್ಟೇ, ಇಲ್ಲಾ ನನಗಿಂತ ಕೂಡಾ ಹೆಚ್ಚು ಸಂತೋಷ ಅವನ ಧ್ವನಿಯಲ್ಲಿ ನಾ ಕಂಡೆ. ಮರುದಿವಸ ಪ್ರಸಾದ್ ನಮ್ಮ ಮನೆಯ ಮುಂದೆ ಹಾಜರಿದ್ದ, ನನ್ನ ಮುಂದಿನ ಭವಿಷ್ಯದ ಬಗ್ಗೆ ಮಾತನಾಡಲು. ರಾಜ್ಯಕ್ಕೆ ಪ್ರಥಮ ಸ್ಥಾನ ಲಭಿಸಿದ್ದರಿಂದ ಕಂಪೆನಿಗಳು ನಾ ಮುಂದು, ತಾ ಮುಂದು ಎಂದು ಕೆಲಸ ಕೊಡಲು ತಯಾರಿದ್ದವು. ಆದರೆ ನನಗೆ ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಆಸಕ್ತಿಯಿತ್ತು. ಪ್ರಸಾದ್ ನ ಅಭಿಪ್ರಾಯವೇ ಬೇರೆ ಇತ್ತು. ಕೆಲಸಕ್ಕೆ ಸೇರಿ, ಸ್ವತಂತ್ರವಾಗಿ ನನ್ನ ಕಾಲ ಮೇಲೆ ನಿಂತು, ಮುಂದಿನ ಅಭ್ಯಾಸವನ್ನು ಮುಂದುವರಿಸಬಹುದೆಂದು ಹೇಳಿದ. ಪ್ರಸಾದ್ ಹೇಳಿಬಿಟ್ಟ ಮೇಲೆ ಮುಂದಿನ ಮಾತೆಲ್ಲಿ? ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಸಿಕ್ಕೇ ಬಿಟ್ಟಿತು. ಜೊತೆಗೆ ಸಂಜೆ ಕಾಲೇಜಿಗೆ ಕೂಡ ಸೇರಿಕೊಂಡು ಬಿಟ್ಟೆ. ಪ್ರಸಾದ್ ಆಗಲೀ, ಚಿರಾಗ್ ಆಗಲೀ ಯಾವ ವಿಷಯವನ್ನೂ ಪ್ರಸ್ತಾಪಿಸಲೇ ಇಲ್ಲ. ಚಿರಾಗ್ ಎಂದಿನಂತೆ ಮನೆಗೆ ಬರುತ್ತಿದ್ದ. ನಾನು ಆಗೀಗ ಅವನೊಂದಿಗೆ ಮಾತನಾಡುತ್ತಿದ್ದೆ.
ಒಂದು ದಿನ, ಅಣ್ಣ ಒಂದು ಹುಡುಗಿಯನ್ನು ಮನೆಗೆ ಕರೆತಂದು, ಅಮ್ಮ ಒಪ್ಪಿದರೆ ಅವಳನ್ನು ಮದುವೆಯಾಗ ಬಯಸಿದ್ದೇನೆ ಎಂದ. ಅಮ್ಮನಿಗೆ ಕೂಡಾ ಅವಳು ಇಷ್ಟವಾದಳು. ನನ್ನ ಮದುವೆ ಗೊತ್ತಾದ ಮೇಲೆಯೇ ಅಣ್ಣ ಮದುವೆಯಾಗುವೆನೆಂದ. ಆದರೆ ನಾನು ಈಗ ತಾನೇ ಕೆಲಸಕ್ಕೆ ಸೇರಿದ್ದರಿಂದ ಆಗುವುದಿಲ್ಲ ಎಂದೆ. ಒಳ ಮನಸ್ಸು ಮಾತ್ರ ಇನ್ನೂ ಪ್ರಸಾದ್ ನನ್ನೇ ಪ್ರೀತಿಸುತ್ತಿದ್ದೇನೆ ಎನ್ನುತ್ತಿತ್ತು. ಎಲ್ಲರೆದುರಿಗೆ ಅದನ್ನು ಹೇಳಲು ಹಿಂಜರಿಯುತ್ತಿದ್ದೆ. ಏಕೆಂದರೆ ಪ್ರಸಾದನ ಮನಸ್ಸಿನಲ್ಲಿ ಏನಿತ್ತು ಎನ್ನುವುದೇ ಗೊತ್ತಿರಲಿಲ್ಲ. ನಾನವನಿಗೆ ಪ್ರೇಮಪತ್ರ ಬರೆದ ನಂತರ ಪ್ರಸಾದ್ ನ ಕಾಗದಗಳು ಇನ್ನೂ ಹೆಚ್ಚಿಗೆ ಬರತೊಡಗಿತ್ತು, ಜೊತೆಗೆ ಫೋನ್ ಕಾಲ್ ಗಳು ಕೂಡಾ. ಒಂದೆರಡು ಭಾರಿ ನನ್ನ ಅವನ ಭೇಟಿಯಾದಾಗ, ನಾನು ಈ ಬಗ್ಗೆ ಕೇಳಲು ಹೊರಟು, ಹಿಂಜರಿದಾಗ ಕೈ ಹಿಡಿದು ಕೇಳಿದ್ದ. ನನ್ನೊಟ್ಟಿಗೆ ಕೂಡ ನಿನಗೆ ಸಂಕೋಚವೇಕೆ? ಹೇಳಬೇಕೆಂದಿರುವುದನ್ನು ಕಾಗದದಲ್ಲಿ ಬರೆಯುವುದಕ್ಕಿಂತ ಮುಖತಃ ಹೇಳಿದರೆ, ಹೇಳುವವನ ಭಾವ ಇನ್ನೂ ಚೆನ್ನಾಗಿ ಅರ್ಥವಾಗುವುದೆಂದು, ನನಗೆ ಮಾತನಾಡಲು ಒತ್ತಾಯಿಸಿದ್ದ. ಊಹುಂ, ನನಗೆ ಹೇಳಲು ಸಾಧ್ಯವಾಗಿರಲಿಲ್ಲ. ಏನೋ ಹಿಂಜರಿಕೆ. ಅವನು ನಿರಾಕರಿಸಿಬಿಟ್ಟರೆ ಎನ್ನುವ ಭಯ ನನ್ನನ್ನೂ ಬಹಳವಾಗಿ ಕಾಡುತ್ತಿತ್ತು.
ಅಣ್ಣನ ಮದುವೆ ಗೊತ್ತಾಗಿಬಿಟ್ಟಿತು. ಮದುವೆಗೆ ಆಮಂತ್ರಣ ನೀಡಲು ಪ್ರಸಾದ್ ನ ಮನೆಗೆ ನಾನೇ ಹೋದೆ. ನಾನು ಬರುವೆನೆಂದು ಮೊದಲೇ ತಿಳಿಸಿದ್ದರಿಂದ ಪ್ರಸಾದ್ ಮನೆಯಲ್ಲೇ ಇದ್ದ. ಅವನ ಅಮ್ಮನಿಗೆ ಯಾಕೋ ನಾ ಬಂದದ್ದು ಅಷ್ಟು ಇಷ್ಟವಾಗಿಲ್ಲವೆನ್ನುವಂತೆ ಭಾಸವಾಗುತ್ತಿತ್ತು. ಅವರ ಮನೆಯ ಹತ್ತಿರ ಸ್ವಲ್ಪ ದೂರದಲ್ಲಿದ್ದ ನಮ್ಮ ಸಂಬಂಧಿಯೊಬ್ಬರ ಮನೆಗೂ ಆಮಂತ್ರಣ ನೀಡಬೇಕಿತ್ತು. ಅವರ ಮನೆಯ ಅಡ್ರೆಸ್ ನನಗೆ ಸರಿಯಾಗಿ ಗೊತ್ತಿಲ್ಲದ ಕಾರಣ, ತಾನೇ ಬಿಟ್ಟು ಬರುವೆನೆಂದು ಪ್ರಸಾದ್ ಸಿದ್ಧನಾದ. ನಾವಿಬ್ಬರೂ ಮನೆಯಿಂದ ಹೊರಗೆ ಬಂದ ಮೇಲೆ, ಅವನ ಅಮ್ಮ ಅವನನ್ನು ಒಳಗೆ ಕರೆದರು. ಒಳಗೆ ಏನೋ ವಾದಗಳು ನಡೆದಂತೆ ತೋರಿತು. ಸ್ವಲ್ಪ ಹೊತ್ತಿನ ನಂತರ ಅವನ ತಮ್ಮ ಬಂದು ತಾನು ಮನೆ ತೋರಿಸುವೆನೆಂದ. ಅಮ್ಮನ ಮಾತು ಮೀರಿ ನನ್ನೊಂದಿಗೆ ಪಕ್ಕದ ಮನೆಗೆ ಬರದ ಆತ, ಜೀವನದಲ್ಲಿ ನನ್ನೊಟ್ಟಿಗೆ ಬರುವನೇ ಎಂಬ ಸಂಶಯ ಕಾಡಿತು. ನನಗೆ ಬಹಳ ಅವಮಾನವಾಯಿತು. ಮನಸ್ಸು ಪೆಚ್ಚಾಯಿತು. ನಾನೇನಾದರೂ ಎಡವುತ್ತಿರುವೆನೆಯೇ ಎಂದೆನಿಸಿತು. ಮೊದಲ ಬಾರಿಗೆ ನಾನು ಪ್ರಸಾದ್ ನನ್ನು ಮನಸ್ಸಿಂದ ಬಲವಂತವಾಗಿ ಬದಿಗಿಟ್ಟು ಚಿರಾಗ್ ನ ಬಗ್ಗೆ ಯೋಚಿಸತೊಡಗಿದೆ. ಇದು ತಪ್ಪೇ?
(ಅಯ್ಯೋ, ಮುಗಿತಾನೇ ಇಲ್ಲ. ಯಾರೂ ಬೈಬೇಡ್ರೀ ನನಗೆ :-) ) ಮುಂದುವರೆಯುವುದು.........

Rating
No votes yet

Comments