ಮುಂಜಾನೆ ಮನಸ್ಸು

ಮುಂಜಾನೆ ಮನಸ್ಸು

ದಕ್ಷಿಣ ಭೂಗೋಲಕ್ಕೆ ಚಳಿಗಾಲ ಕಾಲಿಡುತ್ತಿದ್ದಂತೆ ತಡವಾಗಿಯಾದರೂ ಸಿಡ್ನಿಯನ್ನೂ ಚಳಿ ಆವರಿಸುತ್ತಿದೆ. ದಪ್ಪ ದಪ್ಪನೆ ಬಟ್ಟೆಗಳು ಪೆಟ್ಟಿಗೆಯಿಂದ, ಗೂಡುಗಳಿಂದ ಹೊರಗೆ ಬಂದು ಮೈಗಳನ್ನು ತಬ್ಬಿಕೊಂಡು ಇನ್ನು ಮೂರು ನಾಕು ತಿಂಗಳು ನಗಾಡುತ್ತವೆ. ಅಡ್ಡಕ್ಕೆ ಬೀಳುವ ಬೆಳಗಿನ ಸೂರ್ಯನ ಬೆಳಕು ಶಾಖ ಹುಟ್ಟಿಸಲು ಮನಸ್ಸೇ ಇಲ್ಲದಂತೆ ರಸ್ತೆ, ರೈಲು ಹಳಿಗಳ ಮೇಲೆ ಬಿದ್ದುಕೊಂಡಿರುತ್ತದೆ. ಅನಾಥವಾಗಿ ಆದರೆ ತುಂಬಾ ತಾಜಾತನದಿಂದ.

ಇಂಥ ಮುಂಜಾನೆ ಆಪ್ತತೆ ಎಂದರೇನು ಎಂಬ ಪ್ರಶ್ನೆ ಮನಸ್ಸನ್ನಾವರಿಸಿತು. ಇಷ್ಟು ವರ್ಷ ಸಿಡ್ನಿಯಲ್ಲಿದ್ದರೂ ಇನ್ನೂ ಆಪ್ತವಾಗದ ಜಾಗ ಇರುವುದು ಸೋಜಿಗವಾಗುತ್ತದೆ. ಹಾಗೆಯೇ, ಈ ನೆಲಕ್ಕೆ ಕಾಲಿಟ್ಟ ಮೊದಲ ದಿನದಿಂದ ಆಪ್ತವಾದ ನಮ್ಮ ಹಳ್ಳಿಯನ್ನು ನೆನಪಿಸುವ ಮನೆಯ ಮಾಡುಗಳು ಈವತ್ತಿಗೂ ಮುದಕೊಡುವುದೂ ಸೋಜಿಗವಾಗುತ್ತದೆ. ಬೆಂಗಳೂರಿನಲ್ಲೂ ಹೀಗಾಗಬಹುದು ಅಂದುಕೊಂಡು ಸಮಾಧಾನದ ಜತೆಗೆ ಆತಂಕವಾಗುತ್ತದೆ.

ರೈಲು ಹಳಿಗಳ ಅಕ್ಕಪಕ್ಕ ಕಪ್ಪು ಕಟ್ಟಿದ ಜಲ್ಲಿ ಕಲ್ಲುಗಳನ್ನು ದಿಟ್ಟಿಸುತೀನಿ. ಒಂದೊಂದು ಕಲ್ಲಿಗೂ ತನ್ನದೇ ನಿರ್ದಿಷ್ಟ ಜಾಗ ಅಂತ ಇಲ್ಲ. ಆದರೆ ಆ ಕಲ್ಲಿನ ರಾಶಿಗೆ ತನ್ನದೇ ಜಾಗವಿದೆ, ಕೆಲಸವಿದೆ. ವ್ಯಕ್ತಿ-ಸಮಷ್ಟಿಯ ಯೋಚನೆ. ಪ್ಲಾಟ್‌ಫಾರ್ಮನಲ್ಲಿ ಅಲಂಕಾರ ಮಾಡಿಕೊಂಡು ಪಕ್ಕದಲ್ಲಿ ಬಂದು ನಿಲ್ಲುವ ತರುಣಿ, ಅಷ್ಟು ದೂರದಲ್ಲಿ ಎದೆಯುಬ್ಬಿಸಿ ನಿಂತ ಸೂಟ್‌ಧಾರಿ ಇವರೆಲ್ಲರೂ ಆ ಯೋಚನೆಯನ್ನು ಪ್ರಶ್ನೆಯಾಗಿಸುತ್ತಾರೆ.

ಬೆಂಗಳೂರಿನಲ್ಲಿ ಫ್ಯಾಕ್ಟರಿಯ ಮೊದಲ ಶಿಫ್ಟಿಗೆ ಮಂಜು ಮುಸುಕಿದ ಚಳಿಯಲ್ಲಿ ಸೈಕಲ್‌ ತುಳಿದು ಹೋಗುತ್ತಿದ್ದದ್ದು ನೆನಪಿಗೆ ಬಂತು. ಬರ್ಲಿನ್ ಗೋಡೆ ಬಿದ್ದ ಚರಿತ್ರೆಯ ಕ್ಷಣದಂತೆ ಭಾರತಕ್ಕೆ ಆರ್ಥಿಕ ಲಿಬರಲೈಸೇಶನ್‌ ಹೊಕ್ಕ ಕ್ಷಣವಿದೆಯೆ ಎಂದು ನನ್ನ ಅಲ್ಪ ತಿಳುವಳಿಕೆಯ ಬುಟ್ಟಿಯಲ್ಲಿ ಕೈಯಾಡಿಸುತೀನಿ. ವಾಸ್ತವದಲ್ಲಿ ಕ್ಷಣಗಳಿಗೆ ಹೆದರುವ, ಕ್ಷಣಗಳನ್ನು ಗುರುತಿಸಲು ಹೆದರುವ ಮನಸ್ಸು. ಹಾಗಾಗಿಯೇ ಅಮೂರ್ತವಾಗಿ ರಾಹುಕಾಲ ಗುಳಿಕಕಾಲ ಲೆಕ್ಕ ಹಾಕುವ ಮನಸ್ಸು ನನ್ನವರದು ಎಂದು ಆತಂಕ ತುಂಬಿದ ಸಮಾಧಾನ ತಾಳುತೀನಿ.

ನನ್ನನ್ನು ಬೆಚ್ಚಗಿಟ್ಟಿರುವ ಜಾಕೆಟ್ಟನ್ನು ಒಮ್ಮೆ ಸವರುತೀನಿ. ತುಂಬಾ ತಣ್ಣಗಿದೆ. ಅದಕ್ಕೂ ಚಳಿಯಾಗುತ್ತಿರಬಹುದು ಎಂದು ಮುಗಳು ನಗುತೀನಿ.

Rating
No votes yet

Comments