ರಂಪಾಟ ಯಾರದು ರಮ್ಯಂದಾ !

ರಂಪಾಟ ಯಾರದು ರಮ್ಯಂದಾ !

ಪಾಪ ! ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಒಂದು ವರ್ಷದ ಸಂಭ್ರಮದಲ್ಲಿದ್ರು. ಪ್ರಚಾರಕ್ಕೋಸ್ಕರ ಏನೆಲ್ಲಾ ಕಸರತ್ತು ಮಾಡ್‌ಬಹುದು ಅದೆಲ್ಲಾ ಮಾಡಿದ್ರು. ಆದರೇನು ಮಾಡೋದು ಇವತ್ತಿನ ದಿನಾನೇ ಹಾಗಿತ್ತೋ ಏನೋ ? ಒಂದೆಡೆ ಬಿಜೆಪಿ "ನಿಷ್ಠ" ಯತ್ನಾಳ್ ಹೇಳಿದ್ದು, ಸುದ್ದಿ ಮಾಧ್ಯಮದಲ್ಲಿ ಹೆಡ್‌ಲೈನ್ ಜಾಗ ಕಸಿದುಕೊಂಡಿತು. ಬಾಕಿ ಉಳಿದಂತಾದ್ರೂ ಪ್ರಚಾರ ಸಿಗತ್ತಲ್ಲಾ ಅಂತ ಮುಖ್ಯಮಂತ್ರಿ ಮತ್ತು ಸಚಿವರು ಸಮಾಧಾನ ಪಟ್ಕೊಂಡಿರಬಹುದೇನೋ ? ಅಷ್ಟರಲ್ಲೇ ಕನ್ನಡ ಸುದ್ದಿ ಚಾನೆ‌ಲ್‌ಗಳನ್ನು ಆವರಿಸಿಕೊಂಡಿದ್ದು ಚಿತ್ರನಟಿ ರಮ್ಯ ರಂಪಾಟದ ಸುದ್ದಿ. ಅದೂ ಹೆಡ್‌ಲೈನ್‌ ಸ್ಟೋರಿ.

ಅದು ಹೇಗಿತ್ತು ಗೊತ್ತೆ !:)

ಚಿತ್ರನಟಿ ರಮ್ಯ - ಸುದ್ದಿಗೋಷ್ಠಿ ತಡವಾಗಿದ್ರೆ ಅದಕ್ಕೆ ಅಶ್ವಿನಿ ಪ್ರಸಾದ್‌ ಸಮಜಾಯಿಷಿ ಕೊಡ್‌ಬೇಕು. ನಾನು ಅದಕ್ಕೆ ರೆಸ್ಪಾನ್ಸೆಬಲ್ ಅಲ್ಲ.
ಪತ್ರಕರ್ತ ಗಣೇಶ್ ಕಾಸರಗೋಡು - ನೀವು ತಡವಾಗಿ ಬಂದಿದ್ದೇ ಪತ್ರಿಕಾಗೋಷ್ಠಿ ತಡವಾಗೋಕೆ ಕಾರಣ. ಕ್ಷಮೆ ಕೇಳಿ
ಚಿತ್ರನಟಿ ರಮ್ಯ - ನಾನ್ಯಾಕೆ ಕ್ಷಮೆ ಕೇಳ್ಲಿ, ನಾನು ಬರೋದು ತಡವಾಗತ್ತೆ ಅಂತ ಅಶ್ವನಿ ಪ್ರಸಾದ್‌ ಅವರಿಗೆ ತಿಳಿಸಿದ್ದೆ. ಕಾರ್ಯಕ್ರಮ ಮುಂದುವರಿಸೋಕೆ ತಿಳಿಸಿದ್ದೆ. ನಂಗೆ ಪತ್ರಿಕಾಗೋಷ್ಠಿ ಇದ್ದುದು ಗೊತ್ತಿರಲಿಲ್ಲ. ಅಶ್ವಿನಿ ಪ್ರಸಾದ್ ಈಗ ಉತ್ತರ ಹೇಳ್‌ಬೇಕು. ಅವರನ್ನೇ ಕೇಳಿ.
ಪತ್ರಕರ್ತ ಗಣೇಶ್‌ ಕಾಸರಗೋಡು - ಅದಕ್ಕಷ್ಟು ಕೋಪಿಸ್ಕೋಳೋದು ಏನಕ್ಕೆ. ಮೊದಲು ಸರಿಯಾಗಿ ಮಾತಾಡೋದು ಕಲೀರಿ...
ಚಿತ್ರನಟಿ ರಮ್ಯ - ಯಾರು ಕೋಪಿಸಿಕೊಂಡಿದ್ದಾರೆ. ನೀವೇ ತಾನೆ ಕೋಪಿಸ್ಕೊಂಡು ಮಾತನಾಡ್‌ತಿರೋದು. ವಾಟ್ ಡು ಯೂ ಮೀನ್‌. ನಿಮ್ಗೆ ಇಷ್ಟ ಇಲ್ಲಾಂದ್ರೆ ಬರ್‌ಬೇಡಿ. ನಿಮ್ಗೆ ಯಾರು ಬರೋಕೆ ಹೇಳಿದ್ರು ?

ಇವಿಷ್ಟು ಮೊದಲ ಹಂತದ ಮಾತುಕತೆ . ಇಲ್ಲಿ ಟಿವಿ ಮಾಧ್ಯಮದ ಕೆಮರಾಗಳು ಕೇವಲ ರಮ್ಯಾಳನಷ್ಟೇ ಫೋಕಸ್ ಮಾಡಿದ್ವು. ಈ ಸಂದರ್ಭದಲ್ಲಿ ಗಣೇಶ್ ಕಾಸರಗೋಡು ರಮ್ಯಾನ ಏಕವಚನದಲ್ಲಿ ಸಂಬೋಧಿಸಿ ಮಾತನಾಡಿದ್ರು. ರಮ್ಯಾ ಮಾತು ಕೇಳಿಸ್ಕೊಂಡು ಹೊರ ಹೋಗುತ್ತಿರುವ ಗಣೇಶ್ ಅವರನ್ನಷ್ಟೇ ತೋರಿಸಿದ್ವು. ಉಳಿದ ಮಾಧ್ಯಮ ಪ್ರತಿನಿಧಿಗಳಾರೂ ಮಾತನಾಡಿರಲಿಲ್ಲ. ಆದರೆ ಮಾಧ್ಯಮಗಳು ಎಡವಿದ್ದು ಎಲ್ಲಿ ಅಂತ ಕೇಳಿದ್ರೆ, ಸುದ್ದಿಯನ್ನು ಹೈಪ್ ಮಾಡೋ ಭರದಲ್ಲಿ ರಮ್ಯಾಳದ್ದೇ ರಂಪಾಟ ಅನ್ನೋದನ್ನ ಬಿಂಬಿಸಿದ್ರು. ಗಣೇಶ್ ಏಕವಚನದಲ್ಲಿ ಬೈದಿದ್ದು ಅಲ್ಲೇ ಮೂಲೆಗುಂಪಾಯ್ತು. ಗಣೇಶ್ ತಮ್ಮ ಬಳಗದವರು ಅಂತ ಉಳಿದ ಮಾಧ್ಯಮ ಪ್ರತಿನಿಧಿಗಳು ಹೊರ ಹೋದ್ರು, ಆದರೆ ಬಳಿಕ ಸುದ್ದಿಗೋಷ್ಠಿ ಅಟೆಂಡ್‌ ಮಾಡಿ, ಊಟ ಮಾಡ್ಕೊಂಡೆ ಬಂದ್ರು ಅಂತ ಅನ್ನಿ. ಫಸ್ಟ್ ಆಫ್ ಆಲ್ ಅದು ಸುದ್ದಿ ಮಾಡೋ ವಿಚಾರಾನ ? ಮಾಡಿದ್ರೂ ಏಕಾಕಿ ಎಲ್ಲವನ್ನೂ ರಮ್ಯಾ ತಲೆಗೆ ಕಟ್ಟಿಬಿಡೋದೆ ?
ರಮ್ಯ ಎಲ್ಲೂ ಏಕವಚನದಲ್ಲಿ ಮಾತಾಡಿಲ್ಲ. ಗಣೇಶ್ ಹಿರಿಯರಿರಬಹುದು. ಗೌರವ ಕೊಟ್ಟು ತಗೋಬೇಕು ಅಂತ ಹಿರಿಯರು ಹೇಳಿದ್ದು ಕೇಳಿದ್ದೆವು. ಆದರೆ ಇಲ್ಲಿ ಗಣೇಶ್ ಕೋಪದಲ್ಲಿದ್ರು ಅನ್ನೋದಂತೂ ವಾಸ್ತವ. ಆ ಕೋಪಕ್ಕೆ ಕಾರಣವೇನು ? ಕೇವಲ ರಮ್ಯ ತಡವಾಗಿ ಬಂದಿದ್ದಷ್ಟೇ ಕಾರಣವೇ ? ಗಣೇಶ್ ಮಾತು ರಮ್ಯಾಳನ್ನು ಕೆರಳಿಸಿತ್ತು. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವೂ ಆಯಿತು. ಹಾಗಾಂದು ವೇಳೆ ರಮ್ಯ ತಡವಾಗಿ ಬಂದಿದ್ದು ತಪ್ಪೇ ಆಗಿದ್ರೆ ಎಲ್ಲ ಪತ್ರಕರ್ತರೂ ಒಕ್ಕೊರಲಿನಿಂದ ಕ್ಷಮೆ ಕೇಳಲು ಬೇಡಿಕೆ ಇಡಬಹುದಿತ್ತಲ್ವಾ ! :) ಆದರೆ ಹಾಗಾಗಲಿಲ್ಲ. ಸುದ್ದಿ ಮಾಧ್ಯಮಗಳು ಟಿಆರ್‍ಪಿ ಹೆಚ್ಚಿಸೋ ಭರದಲ್ಲಿ ರಮ್ಯ ಮಾತಾಡಿದ್ದನ್ನು ಹಾಕಿ ಉಜ್ಜಿದ್ದೋ ಉಜ್ಜಿದ್ದು ! :) ಬಹುಶಃ ರಮ್ಯಳ ಜಗಳಗಂಟಿ ಇಮೇಜ್ ಇದಕ್ಕೆ ಕಾರಣವಾಗಿರಬಹುದು.

ಆದರೂ ಮಾಧ್ಯಮಗಳು ಈ ವಿಚಾರದಲ್ಲಿ ನಡೆದುಕೊಂಡ ರೀತಿ ಸರಿ ಇರಲಿಲ್ಲ. ಸುದ್ದಿ ಮಾಧ್ಯಮಕ್ಕೆ ಫೋನಲ್ಲಿ ಪತ್ರಿಕ್ರಿಯೆ ಕೊಡ್ತಾ ಅಶ್ವನಿ ಪ್ರಸಾದ್ ಒಂದ್‌ ಮಾತ್ ಹೇಳಿದ್ರು. ಚಿತ್ರನಟಿ ರಮ್ಯ ಮತ್ತು ಗಣೇಶ್‌ ಕಾಸರಗೋಡು ನಡುವೆ ಅದೇನು ವೈಮನಸ್ಸು ಇತ್ತೋ ? ಅಂತ. ಇದು ನಿಜ ಅಂತ ಅನಿಸತ್ತೆ ಕೆಲವೊಂದು ವಿಷಯ ಗಮನಿಸಿದಾಗ. ಎಷ್ಟೆಂದ್ರೂ ಮಾಧ್ಯಮದ ನಡುವೆಯೂ ಸ್ಪರ್ಧೆ ಇದೆಯಲ್ವಾ ? ಸಂದರ್ಶನ ಕೊಡಲು ರಮ್ಯ ನಿರಾಕರಿಸಿದ್ರೂ ಇರಬಹುದು. ಇದನ್ನೇ ಮನಸಿನಲ್ಲಿ ಇಟ್‌ಕೊಂಡು ಸಂದರ್ಭಕ್ಕಾಗಿ ಗಣೇಶ್ ಕೂಡಾ ಕಾದಿರಬಹುದು. ಇಂದು ಆ ಅವಕಾಶ ಗ್ರೀನ್ ಹೌಸ್‌ನಲ್ಲಿ ಸಿಕ್ಕಿತು ಅಂತ ಬಳಸಿಕೊಂಡಿರಬಹುದು.

ಏನೇ ಆಗ್ಲಿ ಗ್ರೀಸ್ ಹೌಸ್ ಇಫೆಕ್ಟ್ ಅಂದ್ರೆ ಇದೇನಾ ಅಂತ ಕೇಳ್‌ ಬೇಕೇನೋ ! :)

Rating
No votes yet

Comments