ಮೊದಲ ಪ್ರೀತಿ - ಭಾಗ ೪

ಮೊದಲ ಪ್ರೀತಿ - ಭಾಗ ೪

http://sampada.net/blog/inchara123/21/05/2009/20519
http://sampada.net/blog/inchara123/22/05/2009/20559
http://sampada.net/blog/inchara123/27/05/2009/20770

ಅಣ್ಣನ ಮದುವೆ ಬಂದೇ ಬಿಟ್ಟಿತು. ಪ್ರಸಾದ್ ನ ಮನೆಯವರಾರು ಬಂದಿರಲಿಲ್ಲ. ಪ್ರಸಾದ್ ಮಾತ್ರ ಬಂದಿದ್ದ. ಎಲ್ಲರಿಗಿಂತಲೂ ಆಸಕ್ತಿಯಿಂದ, ಬಹು ಮುತುವರ್ಜಿಯಿಂದ, ಜವಾಬ್ದಾರಿಯಿಂದ ಮದುವೆಯ ಕೆಲಸ ಕಾರ್ಯಗಳೆಲ್ಲವನ್ನೂ ನಿರ್ವಹಿಸುತ್ತಿದ್ದ. ನನ್ನನ್ನು ನೋಡಿದಾಗೊಮ್ಮೆ ಅವನ ಕಣ್ಣುಗಳು ಮಿಂಚುತ್ತಿದ್ದದ್ದು ಸುಳ್ಳಲ್ಲ. ಅವನು ಬಂದರೆ ಸಾಕು, ಕುಣಿದಾಡುತ್ತಿದ್ದ ಮನಸ್ಸು, ಅಂದೇಕೋ ಅವನ ಹಿಂದೆ ಹೋಗಲಿಲ್ಲ. ಎಷ್ಟು ಬೇಕೋ ಅಷ್ಟೇ ಮಾತು ಅವನೊಂದಿಗೆ ಆಡುತ್ತಿದ್ದೆ. ಬೇಕಂತಲೇ ಚಿರಾಗ್ ನೊಟ್ಟಿಗೆ ನಗುನಗುತ್ತಾ ಇದ್ದೆ. ಅವನಿಗೆ ಸ್ವಲ್ಪ ಇರಿಸುಮುರಿಸಾದಂತೆ ತೋರುತ್ತಿತ್ತು. ಒಳಮನಸ್ಸು ಮಾತ್ರ ಈಗಲಾದರೂ ಅವನು ನನ್ನನ್ನು ಪ್ರೀತಿಸುತ್ತಿರುವೆ ಎಂದು ಹೇಳಲಿ ಎನ್ನುತ್ತಿತ್ತು. ನಾನು ಚಿರಾಗ್ ನೊಟ್ಟಿಗೆ ಇದ್ದದ್ದನ್ನು ಕಂಡು, ಅವನು ಸ್ವಲ್ಪ ಪೆಚ್ಚಾದಂತೆ ಕಂಡು ಬಂದನೇ ಹೊರತು ಬಾಯಿ ಬಿಟ್ಟು ಏನನ್ನೂ ಹೇಳಲಿಲ್ಲ. ಅವನ ಮನಸ್ಸಿನಲ್ಲಿ ಏನಿತ್ತೋ ಯಾರಿಗೆ ಗೊತ್ತು?

ಪ್ರಸಾದ್ ನಿಗೆ ದೂರದ ಪುಣೆಯಲ್ಲಿ ಕೆಲಸ ಸಿಕ್ಕಿತ್ತು. ಅಮ್ಮನ ಆಶೀರ್ವಾದ ಪಡೆದು, ನನಗೆ ತಿಳಿಸಿ ಹೋಗಲು ಮನೆಗೆ ಬಂದ. ಅಣ್ಣನ ಮದುವೆಯ ದಿವಸ, ನಾನು ಸರಿಯಾಗಿ ಮಾತಾಡಲಿಲ್ಲವೆಂದು ಹಾಗೂ ನನ್ನ ಫ್ರೆಂಡ್ಸ್ ಗಳೊಂದಿಗೆ ಇದ್ದನೆಂದು ನನ್ನನ್ನು ಆಕ್ಷೇಪಿಸಿದ. ನನಗೆ ಯಾರು ಗೆಳತಿಯರಿದ್ದರು? ನಾನು ಮಾತಾಡುತ್ತಿದ್ದದ್ದು ಚಿರಾಗ್ ನೊಟ್ಟಿಗೆ! ಆತನೇ ನನ್ನನ್ನು ಪ್ರೀತಿಸುವೆನೆಂದು ಹೇಳಲಿ ಎಂದು ಕಾದೆ. ಊಹುಂ, ಬಾಯಿ ಬಿಡಲೊಲ್ಲ. ಅವನ ಕಣ್ಣುಗಳಲ್ಲಿ ನನಗೆ ಪ್ರೀತಿ ಕಾಣಿಸುತ್ತಿತ್ತು. ಆದರೂ ಹೀಗೇಕೆ ಬಿಗುಮಾನ? ಅಥವಾ ನನಗೆ ಹೇಳಲಾರದಂತಹ ಕಾರಣವೇನಿರಬಹುದು? ಮನಸ್ಸಿನ ಗೊಂದಲಕ್ಕೆ, ತಳಮಳಕ್ಕೆ ಕೊನೆಯೇ ಇರಲಿಲ್ಲ. ಕೊನೆಗೊಮ್ಮೆ ಹೋಗುವ ಮುನ್ನಾ ಒಂದು ಬಾರಿ ಕೈ ಹಿಡಿದು, "ಏನಾದರೂ ಹೇಳುವುದಿದೆಯೇ" ಎಂದ. ನನ್ನ ಕಣ್ಣು ಹನಿಗೂಡಿತು. ನಾನೇನನ್ನೂ ಹೇಳಲಿಲ್ಲ. ಅವನು ತಾನೇ ಹೇಳಬೇಕಿದ್ದುದ್ದು? ನಿಟ್ಟುಸಿರುಬಿಟ್ಟು ಹೊರಟೇ ಹೋದ. ನನ್ನನ್ನೇ ನಾನು ಕಳೆದುಕೊಂಡೆ. ತೀರಾ ಒಂಟಿಯಾಗಿಬಿಟ್ಟೆ. ಮದುವೆಯಾದ ಮೇಲೆ ಅಣ್ಣನೂ ಸ್ವಲ್ಪ ಬದಲಾದಂತೆ ಅನಿಸುತ್ತಿತ್ತು.

ಮೊದಲ ಬಾರಿಗೆ ಪ್ರಸಾದನನ್ನು ಕೇಳದೇ ನನ್ನ ಜೀವನದ ಅತ್ಯಮೂಲ್ಯ ನಿರ್ಣಯವನ್ನು ನಾನೊಬ್ಬಳೇ ತೆಗೆದುಕೊಂಡುಬಿಟ್ಟೆ. ಚಿರಾಗ್ ನನ್ನು ಮದುವೆಯಾಗಲೂ ನಿಶ್ಚಯಿಸಿದೆ. ಅದು ಆದಷ್ಟು ಬೇಗನೇ ನಡೆಯಲಿ ಎಂದು ಕೂಡ ಅಮ್ಮನಿಗೆ ಹೇಳಿದೆ. ತಡವಾದರೆ ಮನಸ್ಸು ಹಿಂಜರಿಯುವುದು ಎನ್ನುವ ಭಯವಿತ್ತೇನೋ? ನಿಶ್ಚಿತಾರ್ಥ ಬೇಡವೇ ಬೇಡ, ಮದುವೆಯೇ ಅಗಿಬಿಡಲಿ ಎಂದು ಹಟಕ್ಕೆ ಬಿದ್ದೆ. ಚಿರಾಗ್ ಅವನ ಮನೆಯವರನ್ನು ಒಪ್ಪಿಸಿ ಹುಡುಗಿ ನೋಡುವ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದ. ಸ್ವಲ್ಪ ಅವನ ಅಮ್ಮನಿಗೆ ನಾವು ಬಡವರೆಂಬ ಅಸಮಾಧಾನವೋ ಇಲ್ಲವೇ ಮಗನೇ ಆರಿಸಿಕೊಂಡ ಅನ್ನುವ ಕೋಪವೋ ಇತ್ತೆಂದು ಕಾಣುತ್ತದೆ. ಬಂದವರೇ ಸ್ವಲ್ಪ ಅಸಮಾಧಾನದಿಂದ ಅಷ್ಟು ಬಂಗಾರ, ಬೆಳ್ಳಿ ಕೊಡಬೇಕು ಎಂದೆಲ್ಲಾ ಲೆಕ್ಕ ಹಾಕಿದರು. ಚಿರಾಗ್ ನಿಗೆ ಇವರ ವರ್ತನೆ ಸ್ವಲ್ಪ ಬೇಸರ ತಂದಿತು. ಅವನು ಇದನ್ನು ನಿರೀಕ್ಷಿಸಿರಲಿಲ್ಲ. ಎಲ್ಲರೂ ಹೋದ ಮೇಲೆ ಅಮ್ಮನ ಪರವಾಗಿ ಕ್ಷಮೆ ಕೇಳಿ, ಮದುವೆ ಆದಷ್ಟು ಸರಳವಾಗಿರಲಿ ಎಂದು ನನಗೆ ಹೇಳಿ ಹೋದ. ಅವನಿಗೂ ನನ್ನನ್ನು ಮದುವೆಯಾಗುವ ಆತುರವಿತ್ತೇನೋ?

ಇಷ್ಟೆಲ್ಲಾ ಮನೆಯಲ್ಲಿ ನಡೆಯುತ್ತಿದ್ದರೂ, ಪ್ರಸಾದ್ ನಿಗೆ ನಾನು ಕಾಗದ ಬರೆಯುತ್ತಿದ್ದೆ. ಆದರೆ ನನ್ನ ಮದುವೆಯ ವಿಷಯವನ್ನು ಮಾತ್ರ ಗುಟ್ಟಾಗಿಟ್ಟೆ. ಹಾಗೇಕೆ ಮಾಡಿದೆ? ಅನ್ನುವ ಪ್ರಶ್ನೆಗೆ ಈಗಲೂ ನನ್ನಲ್ಲಿ ಉತ್ತರವಿರಲಿಲ್ಲ. ಬಹುಶಃ ಅವನ ಉತ್ತರಕ್ಕೆ ಕಾಯುತ್ತಿದ್ದೇನಾ? ಗೊತ್ತಿಲ್ಲ! ಮದುವೆಯ ದಿವಸ ಹತ್ತಿರ ಬರುತ್ತಿದ್ದಂತೆ ಮನಸ್ಸಿನ ಕಳವಳ ಹೆಚ್ಚಾಯಿತು. ಚಿರಾಗ್ ನ ಮನೆಯಲ್ಲಿ ಅದ್ಭುತ ಸ್ವಾಗತವಿರುವುದಿಲ್ಲ ಅನ್ನುವುದು ಅವನ ಅಮ್ಮನ ವರ್ತನೆಯಿಂದ ಗೊತ್ತಾಗಿತ್ತು. ಹಿಂದಿನಂತೆ ಇಲ್ಲಿ ಅಮ್ಮನ ಮಾತಿಗೆ ಅಷ್ಟು ಬೆಲೆಯಿರಲಿಲ್ಲ. ನನ್ನ ನಿರ್ಣಯದ ಬಗ್ಗೆ ಬಹಳ ಗೊಂದಲವಿತ್ತು. ಪರಿಹರಿಸುವವರು ಯಾರು? ಧೈರ್ಯ ಮಾಡಿ ಪ್ರಸಾದ್ ನಿಗೆ ಆಮಂತ್ರಣ ಪತ್ರಿಕೆಯನ್ನು ಕಳಿಸಿದೆ. ಅವನು ಅದಕ್ಕೆ ಉತ್ತರವಾಗಿ ಚೆಂದದ ಶುಭಾಶಯ ಪತ್ರವನ್ನು ಕಳಿಸಿದ. ಮೊದಲ ಬಾರಿಗೆ ಪತ್ರದಲ್ಲಿ ಏನು ಬರೆದಿರಲಿಲ್ಲ. ನಿರಾಶೆಯಾಯಿತಾ ಅವನಿಗೆ? ಗೊತ್ತಿಲ್ಲ. ನನ್ನನ್ನು ಅವನು ನಿರಾಕರಿಸಿದ್ದರೂ ನನಗೆ ಅಷ್ಟು ನೋವಾಗುತ್ತಿರಲಿಲ್ಲ. ಆದರೆ ಏಕೆ ಏನನ್ನು ಹೇಳಲೇ ಇಲ್ಲ? ಜೀವದ ಜೀವವೇ ಆಗಿದ್ದ ಅವನು ದೂರವಾಗಿಬಿಟ್ಟನಲ್ಲಾ ಎಂದೆನಿಸಿ ಅತ್ತೆ. ನನ್ನನ್ನು ಸಂತೈಸುವವರು ಯಾರು? ಯಾರೊಂದಿಗೆ ನನ್ನ ನೋವನ್ನು ಹೇಳಿಕೊಳ್ಳಲಿ? ಅದೇ ಅವನ ಕಡೆಯ ಪತ್ರವಾಗಿತ್ತು.

ಮನೆಗೆ ಬಂದ ನೆಂಟರೊಬ್ಬರಿಂದ ಪ್ರಸಾದ್ ನ ಮದುವೆಯೂ ನಿಶ್ಚಯವಾಗಿದ್ದು ತಿಳಿಯಿತು. ಅವನು ಕೂಡ ನಿಶ್ಚಿತಾರ್ಥವೇನೂ ಬೇಡವೆಂದು ಹೇಳಿದನೆಂದು, ಮದುವೆ ಸರಳವಾಗಿ ದೇವಸ್ಥಾನದಲ್ಲಿ ಆದಷ್ಟು ಬೇಗ ನಡೆಯುವುದಾಗಿಯೂ ಹೇಳಿದರು. ಅವನ ಮನೆಯ ಕಡೆಯಿಂದ ನಮಗೆ ಅವನ ಮದುವೆಯ ಆಮಂತ್ರಣ ಪತ್ರಿಕೆ ಬಂತು. ನಾನದನ್ನು ನೋಡಲೂ ಇಲ್ಲ. ಹೀಗೇಕೆ ಮಾಡಿದ? ನನಗೆ ಕಾಗದ ಕಳಿಸಿರಲೇ ಇಲ್ಲ! ಕೊನೆಯ ಆಸೆಯೂ ಕಮರಿ ಹೋಯಿತು. ಆದಂತಾಗಲಿ ಎಂದು ಮನಸ್ಸನ್ನು ಕಠಿಣಗೊಳಿಸಿದೆ. ನನ್ನ ಮದುವೆಗೆ ಬರುವನೇನೋ ಎಂದು ಕಾದೆ. ಊಹುಂ, ಬರಲಿಲ್ಲ. ನಮ್ಮ ಮದುವೆಯ ದಿನದಂದೂ ಚಿರಾಗ್ ನ ಅಮ್ಮ ಸ್ವಲ್ಪ ಬಿಗಿದುಕೊಂಡೇ ಇದ್ದರು. ಅದನ್ನು ನೋಡಿ ನನಗೆ ಇನ್ನೂ ಕಳವಳ ಜಾಸ್ತಿಯಾಯಿತು. ಚಿರಾಗ್ ನನ್ನು ನಾನಿನ್ನೂ ಅರ್ಥ ಮಾಡಿಕೊಂಡಿರಲಿಲ್ಲ. ಹೇಗೆ ಹೊಂದಿಕೊಂಡು ಹೋಗುವುದೆಂಬ ಚಿಂತೆ ಶುರುವಾಯಿತು. ಅದೇ ಪ್ರಸಾದ್ ಆಗಿದ್ದರೆ, ಎಷ್ಟೇ ಕಷ್ಟವಾದರೂ ತಡೆದುಕೊಳ್ಳಬಹುದಾಗಿತ್ತು. ಮದುವೆಯೂ ಆಯಿತು. ನನ್ನನ್ನು ಮನೆಗೆ ತುಂಬಿಸಿಕೊಂಡಿದ್ದು ಆಯಿತು.

ನನ್ನ ಮದುವೆಯಾದ ಕೆಲದಿನಗಳಲ್ಲೆ ಪ್ರಸಾದ್ ನ ಮದುವೆಯಾಯಿತಂತೆ. ಅಮ್ಮ ಹೋಗಿ ಬಂದವರು ಹುಡುಗಿ ಬಹಳ ಚೆಂದ ಇದ್ದಾಳೆಂದು ವರ್ಣಿಸುತ್ತಿದ್ದರೆ ಹೊಟ್ಟೆ ಉರಿಯುತ್ತಿತ್ತು!

[ನನಗೆ ಚೆನ್ನಾಗಿ ಗೊತ್ತು, ಸಂಪದಿಗರೆಲ್ಲರೂ ನನ್ನನ್ನು ಹುಡುಕಿ ಹೊಡೆಯುತ್ತೀರಿ. ದಯಮಾಡಿ ನನ್ನನ್ನು ಕ್ಷಮಿಸಿ. ೧೦೦% ಮುಂದಿನ ಕಂತಲ್ಲಿ ಕಥೆ ಮುಗಿಸಿಬಿಡ್ತೀನಿ:-)]

Rating
No votes yet

Comments