ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲೇನು?

ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲೇನು?

ಹಳಸಿನಹಣ್ಣು ಅಪರೂಪಕ್ಕೆ ಮನೆಗೆ ತಂದಿದ್ದೆ. ನಮ್ಮ ಪಕ್ಕದ ಮನೆ ಸೂರಿ ಬಂದ.ಅಂಕಲ್ , ಹಳಸಿನ ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ? ಅಂತಾ ಹೇಳ್ತಾ ನನ್ನ ಉತ್ತರವನ್ನೂ ಕೇಳದೆ ಪಕ್ಕದಲ್ಲಿ ಕುಳಿತು ನಾನು ಹಣ್ಣು ಕೊಯ್ದಂತೆಲ್ಲಾ ಅದರಿಂದ ತೊಳೆ ಬಿಡಿಸುತ್ತಾ, ಮಧ್ಯೆ ಮಧ್ಯೆದಲ್ಲಿ , ಒಂದು ತೊಳೆ ರುಚಿ ನೋಡ್ತೀನಿ, ಅಂತಾ ಹಣ್ಣು ಬಿಡಿಸುವುದರಲ್ಲಿ ಅರ್ಧ ಖಾಲಿ ಮಾಡಿದ್ದ.

ನನ್ನ ಮಗ " ಅಪ್ಪಾ, ಹಳಸಿನ ಹಣ್ಣು ತಿಂದ್ರೆ ಏನೂ ತೊಂದರೆ ಆಗಲ್ವಾ? ಊಟಕ್ಕಿಂತ ಮುಂಚೆ ತಿನ್ ಬೇಕೂ ಅಂತಾರೆ, ಅದರ ಬೀಜ ಸುಮ್ನೆ ಬಿಸಾಕೋದ? " ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳ್ತಾ ಕೂತಿದ್ದ. ಹಣ್ಣು ಬಿಡಿಸಿ ಮುಗಿದಮೇಲೆ ನನ್ನ ಪತ್ನಿ ಅಡಿಗೆ ಮನೆಯೊಳಗಿಂದಲೇ ಕೂಗಿ ಹೇಳಿದ್ಲು" ಪಕ್ಕದ ಮನೆಗೆ ಅರ್ಧ ಕೊಟ್ಟು ಕಳಿಸಿ, ಸೂರಿ ಅಪ್ಪಂಗೆ ಹಳಸಿನ ಹಣ್ಣು ಅಂದ್ರೆ ತುಂಬಾ ಇಷ್ಟ."

-"ಹೌದು ಅಂಕಲ್ ನಮ್ಮಪ್ಪಂಗೆ ಹಳಸಿನ ಹಣ್ಣು ಅಂದ್ರೆ ಬಲು ಇಷ್ಟ. ಆದರೆ ನಮ್ಮಮ್ಮ ಯಾವಾಗ್ಲೂ ಅವರ ಜೊತೆ ಪೇಟೆಗೆ ಹೋಗ್ದಲೇ ಇರುಲ್ಲ, ನಮ್ಮಪ್ಪ ಹಳಸಿನ ಹಣ್ಣು ತರೋದಕ್ಕೆ ಅಮ್ಮ ಬಿಡಲ್ಲ."

- ಆಯ್ತಪ್ಪ ,ಒಳಗಡೆ ಹೋಗಿ ಒಂದು ಪಾತ್ರೆ ತಗೊಂಡು ಬಾ, ಹಣ್ಣು ತಗೊಂಡು ಹೋಗು.

ಅಡಿಗೆ ಮನೆಗೆಹೋದ ಸೂರಿ ಒಂದು ಸ್ಟೀಲ್ ಬಾಕ್ಸ್ ತಂದ, ಅದಕ್ಕೆ ಎಷ್ಟು ಹಾಕಿದರೂ ಅದರ ಅರ್ಧಾನೂ ತುಂಬಲಿಲ್ಲ." ಇವು ನಾಲ್ಕು ತೊಳೆ ನಮ್ಮನೆಗಿರಲಿ, ಇದನ್ನು ತಗೊಂಡು ಹೋಗು" ಅಂತಾ ಅವನಿಗೆ ಹಣ್ಣು ಕೊಟ್ಟು ಕಳಿಸಿ ಅಂಟಾಗಿದ್ದ ನನ್ನ ಕೈ ಗೆ  ಒಂದಿಷ್ಟು ಕೊಬ್ರಿ ಎಣ್ಣೆ ಹಚ್ಚಿ ಅಂಟು ತೆಗೆದು , ಹಣ್ಣಿನ ಶಾಡೆ[ಹಣ್ಣಿನ ಸಿಪ್ಪೆ] ಯನ್ನು ಎತ್ತಿ ಹೊರಗೆ ಹಾಕಿದ್ದೇ ಬಂತು.

Rating
No votes yet

Comments