ಬುದ್ಧಿಜೀವಿ ಅಂದ್ರ ಬೈದಂಗಾಯ್ತಾ?

ಬುದ್ಧಿಜೀವಿ ಅಂದ್ರ ಬೈದಂಗಾಯ್ತಾ?

ಮೊನ್ನೆಯ ಘಟನೆ : ನನ್ನ ಮಿತ್ರನೊಬ್ಬನನ್ನು ಒಬ್ಬ ಸರಿಕರಿಗೆ ಪರಿಚಯಿಸುವಾಗ "ನಮ್ಮ ಗ್ರುಪ್ ನಾಗೇ ಇವ್ರು ಬುದ್ಧಿಜೀವಿ, ಸಿಕ್ಕಾಪಟ್ಟಿ ಓದ್ಯಾರ.." ಇತ್ಯಾದಿ ಹೇಳ್ಲಿಕತ್ತಿದ್ದೆ. ಆಗ ತಕ್ಷಣ ನನ್ನ ಮಿತ್ರ ಸ್ವಲ್ಪ ಲಘುವಾಗಿ "ಅಣ್ಣಾ ನಿಂಗ ನನ್ನ ಮ್ಯಾಲೆ ಸಿಟ್ಟಿದ್ರ, ಕಾಲಾನ ಮೆಟ್ಟ ತೊಗೊಂಡ ನಾಕ ಬಾರ್ಸು, ಅದ್ರ ಹಿಂಗ ಬುದ್ಧಿಜೀವಿ ಪದ್ದಿಜೀವಿ ಅಂಥ್ಹೇಳಿ ಬ್ಯಾರೆವ್ರ ಮುಂದ ಅಸಂಹ್ಯ ಮಾಡ್ಬ್ಯಾಡ" ಅಂದ. ನನಗನಿಸುವಂತೆ..ಅವನು ತಾನು ಬುದ್ಧಿಜೀವಿಯಲ್ಲ, ಅಷ್ಟೊಂದು ದೊಡ್ಡವನಲ್ಲ ಎಂಬ ವಿನಯದಿಂದೇನೂ ಆ ಮಾತು ಹೇಳ್ಲಿಲ್ಲ. ಅವನ ಮಾತಿನಲ್ಲಿ ಆ ಪದದ ಬಗ್ಗೆ ಒಂದು ರೀತಿಯ ತಿರಸ್ಕಾರವಿತ್ತು. ಹಾಂಗಂದ್ರ ಬುದ್ಧಿಜೀವಿ ಅಂದ್ರ ಬೈದಂಗಾಯ್ತಾ?

ಇನ್ನೊಂದು ಪ್ರಸಂಗ : ಬೆಂಗಳೂರಿನಲ್ಲಿಯೆ ಕಾರ್ಯಕ್ರಮವೊಂದರಲ್ಲಿ ಅತಿಥಿಗಳನ್ನು ಪರಿಚಯಿಸುವಾಗ "ಇವರು ಬುದ್ಧಿಜೀವಿ, ಸಾಹಿತ್ಯೋಪಾಸಕ.." ಇತ್ಯಾದಿ ಹೇಳಿದ್ದಕ್ಕೆ.."ದಯವಿಟ್ಟು ಬುದ್ಧಿಜೀವಿ, ಸುದ್ದಿಜೀವಿ ಕೆಟಗರಿಗೆ ಸೇರಿಸಿಬೇಡಿ ನನ್ನ" ಎಂದು ವಿನಂತಿಸಿಕೊಂಡಿದ್ದರು!

ಈಗ ನನ್ನ ಪ್ರಶ್ರೆ. ಹೀಗೇಕೆ ಶಬ್ದಗಳು ತಮ್ಮ ನಿಜವಾದ ಅರ್ಥವನ್ನು ಕಳೆದುಕೊಂಡು ಅಪಮೌಲ್ಯಗೊಳ್ಳುತ್ತಿವೆ? ನಿನ್ನೆಯ ವಿಕದ ಓದುಗರು ಪ್ರತಿಕ್ರಿಯೆಯಲ್ಲಿಯೂ ಕೂಡ ’ಬುದ್ಧಿಜೀವಿ’ ಎಂಬ ಪದವನ್ನು ಹೀಯಾಳಿಕೆಯ ಶಬ್ದವನ್ನಾಗಿ ಉಪಯೋಗಿಸಿದ್ದರು. ವಿಕ ಮಾತ್ರವಲ್ಲ..ಅನೇಕ ಕಡೆ ನಾನು ಈ ರೀತಿಯ ಪದ ಪ್ರಯೋಗವನ್ನು ನೋಡಿದ್ದೇನೆ. ಬುದ್ದಿಜೀವಿ ಪದವನ್ನು ಸುದ್ದಿಜೀವಿ, ಬುದ್ಧಿಗೇಡಿ ಜೀವಿ ಇತ್ತ್ಯಾದಿ ಹಿಂಜಿದ್ದನ್ನು ನೋಡಿದ್ದೇನೆ. ಇದಕ್ಕೆ ಯಾರು ಕಾರಣ? ಅವುಗಳ ಅಸಾಂದರ್ಬಿಕ ಬಳಕೆಯೇ? ಅಥವಾ ಹೆಚ್ಚು ಹೆಚ್ಚು ಬಳಸಿ ಕ್ಲೀಷೆಯೆನಿಸುತ್ತಿದೆಯೇ?

ಇದೇ ರೀತಿ ಅರ್ಥ ಕಳೆದುಕೊಳ್ಳುತ್ತಿರುವ ಕೆಲವು ಪದಗಳು : ವಿಚಾರವಾದಿ ( now a days rhymes with ವಿಚಾರವ್ಯಾಧಿ), ಕೋಮುವಾದಿ, ಸಂಸ್ಕೃತ, ಸೆಕ್ಯುಲರ್. ಇನ್ನೂ ಕೆಲವು ಇವೆ. ಈಗ ಹೇಳ್ರಿ ಬುದ್ಧಿಜೀವಿ ಅಂತ ಕರದ್ರ ನಿಮ್ಗೂ ಸಿಟ್ಟ ಬರ್ತದೇನು ಮತ್ತ?

Rating
No votes yet

Comments