ಕಪ್ಪೆ ಕಥೆ

ಕಪ್ಪೆ ಕಥೆ

ಒಂದು ದೊಡ್ಡ ಬಾಣಲೆಯಲ್ಲಿ ಎರಡು ಕಪ್ಪೆಗಳಿದ್ವಂತೆ, ಬಹಳ ದಿನ ಅಲ್ಲೇ ಈಜಾಡಿ, ಸುಖವಾಗಿದ್ವಂತೆ. ಒಂದು ದಿನ ಯಾರೋ ಬಂದು ಆ ಬಾಣಲೆಯನ್ನ ಒಲೆ ಮೇಲಿಟ್ರಂತೆ. ನೀರು ತುಸು ಬೆಚ್ಚಗಾಗ್ತಿದ್ದ ಹಾಗೇ ಎರಡೂ ಕಪ್ಪೆಗಳಿಗೂ ತಳಮಳ ಶುರುವಾಯ್ತಂತೆ.

ಒಂದು ಕಪ್ಪೆ ಹೇಳಿತಂತೆ, “ಇದೇನು ನೀರು ಬಿಸಿ ಆಗ್ತಿದೆ, ನಂಗೆ ಇಲ್ಲಿ ಇರೋಕ್ಕೆ ಭಯ ಆಗ್ತಿದೆ, ನಾನು ಇಲ್ಲಿರಲ್ಲಪ್ಪ” ಅಂತ ತಟಕ್ಕನೆ ದೂರಕ್ಕೆ ಹೊರಕ್ಕೆ ಜಿಗಿದು, ಹೊಸ ಜಾಗ ಹುಡುಕುತ್ತಾ, ಕುಪ್ಪಳಿಸುತ್ತಾ ಓಡಿ ಹೋಯ್ತಂತೆ.

ಇನ್ನೊಂದು ಕಪ್ಪೆ “ಅಯ್ಯೋ! ಅಷ್ಟು ಹೆದರೋ ಅಗತ್ಯ ಇಲ್ಲಪ್ಪ, ನೋಡು ನೀರು ಎಷ್ಟು ಹಿತವಾಗಿ ಬೆಚ್ಚಗಿದೆ, ದಿನಾ ತಣ್ಣೀರಲ್ಲಿ ಇದ್ದೂ, ಇದ್ದೂ ಮೈ ಕೈ ನೋವು ಬಂದಿದೆ. ಹೀಗೆ ಸ್ವಲ್ಪ ಬಿಸಿ ನೀರಲ್ಲೇ ಶಾಖ ತೊಗೊಂಡು ಆರಾಮಾವಾಗಿರೋಣ, ಮತ್ತೆ ಹೊಸ ಜಾಗ ಹುಡುಕೋ ತೊಂದ್ರೆ ಯಾಕೆ ಪಡ್ಬೇಕು” ಅಂತ ಪ್ರಲಾಪಿಸುತ್ತಾ, ಖುಷಿಯಿಂದ ಅಲ್ಲೇ ಈಜಾಡತೊಡಗಿತಂತೆ.

ನೀರು ಇನ್ನೂ ಕೊಂಚ ಬಿಸಿ ಆಯ್ತಂತೆ, ಬೆಚ್ಚಗಿನ ನೀರಲ್ಲಿದ ಕಪ್ಪೆಗೆ ಅದು ಅರಿವಿಗೇ ಬರಲಿಲ್ವಂತೆ, ಇನ್ನೂ ಆರಾಮಾಗಿ ಈಜ್ತಾನೇ ಇತ್ತಂತೆ.

ನಿಧಾನವಾಗಿ ನೀರು ಕುದಿಯೋಕ್ಕೆ ಆರಂಭಿಸಿತು. ಆಗ ಕಪ್ಪೆಗೆ ತನ್ನ ತಪ್ಪಿನ ಅರಿವಾಗಲಾರಂಭಿಸಿತು. ಸರಿ ಹೊರಗೆ ಜಿಗಿಯೋಣವೆಂದರೆ ಮೇಲೆ ಹಾರಕ್ಕೆ ಆಗ್ತಿಲ್ಲ. ಒಳಗೆ ಕುದಿಯುವ ನೀರು ಹೊರಗೆ ಬೆಂಕಿಯ ಧಗೆ. ಆ ಬೇಗೆಗೆ ಚರ್ಮ ಎಲ್ಲ ಸುಟ್ಟು ಕರಗಲಾರಂಭಿಸಿತಂತೆ. “ ಆಗಲೇ ನನಗೂ ಬುದ್ಧಿ ಬಂದು, ಬದಲಾವಣೆಗೆ ಒಪ್ಪಿ ಹೊರಗೆ ಜಿಗಿದಿದ್ದರೆ ನನಗೆ ಈ ಗತಿ ಬರ್ತಿರಲಿಲ್ವಲ್ಲಾ” ಅಂತ ಹಲಬುತ್ತಾ , ಚಡಪಡಿಸುತ್ತಾ ಆ ಕಪ್ಪೆ ಅಲ್ಲೇ ಪ್ರಾಣ ಬಿಡ್ತಂತೆ.

ನೀತಿ ಏನಂದ್ರೆ, ಕಪ್ಪೆ ಆಗಲೀ ಅಥವಾ ಮನುಷ್ಯರಾಗಲೀ ಅಥವಾ ಇನ್ಯಾವುದೇ ಜೀವಿ ಆಗಲೀ ಬದಲಾವಣೆಗೆ ತಕ್ಕಂತೆ ತಾನೂ ಬದಲಾಗಬೇಕು, ಬದಲಾವಣೆ ಒಪ್ಪಿಕೊಳ್ಳಬೇಕು. ನಾನು ಇರೋ ಹಾಗೇ ಇರ್ತೀನಿ, ಪ್ರಪಂಚ ಅಡಿಮೇಲಾದ್ರೂ ಸರಿ ಅಂದ್ರೆ ವಿನಾಶ ಖಂಡಿತ. ಬದಲಾವಣೆ ಜಗದ ನಿಯಮ.

ಮ್ಯಾನೇಜ್ ಮೆಂಟ್ ಗುರುಗಳಿಂದ ಕೇಳಿದ ಕಥೆ, ನಿಮಗಾಗಿ. :-)

Rating
No votes yet

Comments