ಹುಡುಗರೇ ಹುಶಾರ್...!!!

ಹುಡುಗರೇ ಹುಶಾರ್...!!!

ಹುಡುಗಿಯರ ಹಿಂದೆ ಲವ್ ಲವ್ ಅಂತ ಗಂಟು ಬೀಳೋ ಮಜ್ನುಗಳಿಂದ ತಪ್ಪಿಸಿ ಕೊಳ್ಳಲು ಹುಡುಗಿಯರ ಹತ್ರ ಹಲವಾರು ಅಸ್ತ್ರಗಳಿರುತ್ತವೆ. ಒಂದೋ ರಾಖಿ ಕಟ್ಟಿ ಬಿಡುವುದು ಇಲ್ಲವೇ ಮೊದಲ ಪರಿಚಯದಲ್ಲೇ ಅಣ್ಣ ಅಂದು ಬಿಡುವುದು!... ರಾಖಿ ಕಟ್ಟುವ ಪ್ರಯೋಗ ಎಲ್ಲ ಟೈಮಲ್ಲೂ ಯೂಸ್ ಅಗುತ್ತೆ ಅಂತ ಏನೂ ಇಲ್ಲ. ಯಾಕೆಂದರೆ ರಾಖಿ ಕಟ್ಟಲು ಹೋದ ಮೂಮೆಂಟನ್ನೇ ಪ್ರಪೋಸ್ ಮಾಡೋ ಅವಕಾಶವಾಗಿ ಪರಿವರ್ತಿಸಿಕೊಂಡ ಹೈಕಳ ಪಟ್ಟಿ ದೊಡ್ಡದಿದೆ. ಹೀಗಾಗಿ ರಾಖಿ ಕಟ್ಟೊ ವಿಷಯ ಬಿಟ್ಟು ಹುಡುಗಿಯರು ಅಯ್ದುಕೊಂಡ ಮತ್ತೊಂದು ಹಾದಿಯೇ ಮೊದಲ ಪರಿಚಯದಿಂದ ಕಂಡ ಕಂಡಲ್ಲಿ ಆತನನ್ನು ಅಣ್ಣನೆಂದು ಕರೆದು ಪ್ರತಿಷ್ಠಾಪಿಸಿ ಬಿಡುವುದು. ಹೀಗೆ ಹೇಳಿದ ಮೇಲೆ ಹುಡುಗ ಬಾಯಿ ಬಿಡೊ ಹಾಗಿಲ್ಲ. ಅಂತಹ ಅಣ್ಣ ಬ್ಲಾಕ್ 'ಮೇಲ್' ತಂತ್ರವಿದು. ಅದನ್ನು ಮೀರಿ ಹೊರಟನೋ ಪೋಲಿ ಅನ್ನೋ ಇಮೇಜ್ ಜತೆಗೆ ಹುಡುಗಿಯ ಸಂಪರ್ಕವೂ ತಪ್ಪಿ ಹೋಗುತ್ತೆ. ಇಂಥ ಸಂದರ್ಭದಲ್ಲಿ ಹುಡುಗನಿಗೆ ಉಳಿಯೋ ಆಯ್ಕೆ ಅಂದ್ರೆ ಈ ಮೊದಲು ಇದೇ ತಂತ್ರಕ್ಕೆ ಬಲಿಯಾದಾಗ(?!) ದೊರಕಿರುವ ಹತ್ತಾರು ತಂಗಿಯರ ಜತೆಗೆ ಹನ್ನೊಂದನೆಯದ್ದು ಸೇರಿಸಿ ತಮ್ಮ ಮುಂದಿನ ಬೇಟೆಗೆ ಹೊರಡುವುದು.

ಇನ್ನು ನಮ್ಮ ಹುಡುಗರೋ ಕಂಡ ಎಲ್ಲ ಹುಡುಗಿಯರನ್ನು ಲವ್ ಮಾಡುವಷ್ಟು ವಿಶಾಲ ಹೃದಯಿಗಳು. ಅದಕ್ಕಾಗಿಯೇ ' ಏನಮ್ಮಾ/ ಏನ್ ಮಗ (?) ನಿನ್ನ ತಂಗಿಯರೆಲ್ಲ ಹೇಂಗಿದ್ದಾರೆ' (ಇದು ಅವನ ಕ್ಲಾಸ್ನಲ್ಲಿರುವ ಹುಡುಗಿಯರ ಬಗ್ಗೆ ಕೇಳೊ ಸ್ಟೈಲು. ನಿಜ ತಂಗಿಯ ಬಗ್ಗೆ ಕೇಳಿದರೆ ತನ್ನ ಬೆನ್ನಿಗೆ ಮೂಲ ಅನ್ನೊವ ವಿಷಯ ಆತನಿಗೆ ತಿಳಿಯದೆ?) ಆಂತ ಮಾತು ಪ್ರಾರಂಭಿಸುವ ಮೂಲಕ ಸ್ನೇಹಿತನಲ್ಲಿ ಸೋದರ ಭಾವನೆ ಬಿತ್ತುವ ಮತ್ತು ತನ್ನ ಆಯ್ಕೆಯನ್ನು ಸ್ವತಂತ್ರವಾಗಿಡುವ ತಂತ್ರವಿದು. ಬಹುಶ: ಬೆಂದಕಾಳೂರಿನ ಹುಡುಗರ ಬಾಯಲ್ಲಿ ಯಾವಾಗಲೂ ಕೇಳಿ ಬರುವ 'ಮಚ್ಚ' (ಬಾವ) ಎಂಬ ಶಬ್ದ ಇದೇ ಹಿನ್ನೆಲೆಯಿಂದ ಬಂದಿರಬಹುದೇ ಎಂಬುದನ್ನು ನಮ್ಮ ಸಂಶೋಧಕರು ದೃಢಪಡಿಸಿಲ್ಲ.

ಇದೆಲ್ಲ ಏನೇ ಇರಲಿ ಹುಡುಗಿಯರ ಬತ್ತಳಿಕೆಯಲ್ಲಿ ಇಂತದ್ದೇ ಬಾಣ ಇರುತ್ತೆ ಅಂತ ಸ್ಪಷ್ಟವಾಗಿ ಯಾರು ಹೇಳಲಿಕ್ಕೆ ಸಾಧ್ಯವಿಲ್ಲ. ಇಂತದ್ದೇ ಒಂದು ಘಟನೆಯೊಂದನ್ನು ಹೇಳುತ್ತೇನೆ. ನಾನು ಡಿಗ್ರಿಯಲ್ಲಿ ಇರುವಾಗ ನಾಟಕ ಮಾಡಬೇಕೆಂದು ತೀರ್ಮಾನಿಸಿದ್ದೆವು. ನಾನು ಆ ನಾಟಕದ ನಿರ್ದೇಶಕನಾಗಿ ಆಯ್ಕೆಯಾಗಿದ್ದೆ. ಎಲ್ಲ ಪಾತ್ರಗಳಿಗೆ ಜನ ಸಿಕ್ಕರೂ ಹಿರೋಯಿನ್ ಅಪ್ಪನ ಪಾತ್ರ ಮಾಡಲೂ ಯಾರು ಸಿದ್ಧವಿಲ್ಲ. ಯಾರನ್ನೇ ಕೇಳೀದ್ರು' ನೋಡು, ಬಾವಿಗೆ ಬೀಳು ಅನ್ನು, ಬೀಳ್ತಿನಿ. ಅದೊಂದು ಪಾತ್ರ ನನ್ನಿಂದ ಸಾಧ್ಯವಿಲ್ಲ' ಅಂತ ಖಡಕ್ ಆಗಿ ಹೇಳಿದರು. ಕಡೆಗೆ ಅಪ್ಪನ ಪಾತ್ರ ನಾನೇ ಮಾಡಬೇಕಾಯಿತು. ನಾಟಕ ಪ್ರಾಕ್ಟೀಸ್ ಮಾಡೊವಾಗ ಹೀರೋಯಿನ್ ನನ್ನನ್ನು ಡ್ಯಾಡಿ,ಡ್ಯಾಡಿ... ಅಂತ ಕರೆಯುತ್ತಿದ್ದಳು. ಇದನ್ನು ನೋಡಿದ ಮಿಕ್ಕ ಹುಡುಗಿಯರು (ನನ್ನ ಜ್ಯೂನಿಯರ್ಸ್) ಕೂಡ ಡ್ಯಾಡಿ ಡ್ಯಾಡಿ ಅಂತ ಕರೆಯೋಕೆ ಶುರು ಮಾಡಿದರು. (ಯಾಕೆ ಹೀಗೆ ಕರೆಯಲು ಪ್ರಾರಂಭಿಸಿದರು ಎಂಬುದು ನನಗೆ ಇನ್ನೂ ತಿಳಿದಿಲ್ಲ. ಯಾಕೆಂದರೆ ನೀನು ತುಂಬಾ ಪಾಪದ ಹುಡುಗ ಅಂತ ತುಂಬ ಜನ ಸ್ನೇಹಿತೆಯರು ಹೇಳ್ತಾರೆ) ಇದೇನಪ್ಪ ಗ್ರಹಚಾರ ಗಣಪತಿ ಮಾಡೊಕೆ ಹೋಗಿ ಅವರಪ್ಪನನ್ನು ಮಾಡಿದ ಹಾಗೆ ಆಯ್ತಲ್ಲ, ಇರಲಿ ನಾಟಕ ಮುಗಿಯೋ ತನಕ ಅಲ್ವಾ ಅಂತ ಸಹಿಸಿಕೊಂಡೆ.

ನಾಟಕ ಮುಗಿಯಿತು. ಒಳ್ಳೆ ಪ್ರಶಂಸೆಯ ಮಾತುಗಳು, ಬಹುಮಾನ ಎಲ್ಲ ಸಿಕ್ತು. ಮಾರನೆಯ ದಿನ ಕಾಲೇಜಿನ ಕ್ಯಾಂಪಸ್ ಕಾಲಿಟ್ಟ ತಡ ನನ್ನ ಪ್ರೆಂಡ್ಸ್ 'ಏನು ಮಾವ ನಿಮ್ಮ ನಾಟಕ ಪ್ರೈಜ್ ಹೊಡಿತಂತೆ ಅನ್ನೋದೆ?!!! ನಾನು ಕರೆಂಟ್ ಹೊಡೆದ ಕಾಗೆ ತರಹ ಆಗಿ ಹೋದೆ. ಶಿವ ಶಿವ.. ಒಂದು ಕಡೆ ಹುಡುಗಿಯರು ಡ್ಯಾಡಿ ಡ್ಯಾಡಿ ಅನ್ನೋದು ಇನ್ನೊಂದು ಕಡೆ ಹುಡುಗರು ಆ ಹುಡುಗಿಯರ ಎದುರಲ್ಲೇ ಮಾವ ಮಾವ ಅನ್ನೋದು.. ಈ ಸಂದಿಗ್ಧದಲ್ಲಿ ನನಗೂ ಸಿಟ್ಟೂ ಬಂದು - ಏಯ್ ಕಮಂಗಿಗಳೇ.. ಮೊದಲು ನಿಮ್ಮ ಅತ್ತೆನಾ ಹುಡುಕಿಕೊಂಡು ಬನ್ನಿ. ಆಮೇಲೆ ನನ್ನ ಮಾವ ಅನ್ನಿ ಅಂತ ಸವಾಲು ಹಾಕಿದೆ. ಅವತ್ತು ಹೋದವರು ಇವತ್ತಿಗೂ ಸುಳಿವಿಲ್ಲ.

Rating
No votes yet

Comments