ಬೆಂಗಳೂರಿಂದ ಹುಬ್ಬಳ್ಳಿಗೆ ಹೋಗೊವಾಗ ಕಂಡ ಹಿಂದಿ ಭೂತ !

ಬೆಂಗಳೂರಿಂದ ಹುಬ್ಬಳ್ಳಿಗೆ ಹೋಗೊವಾಗ ಕಂಡ ಹಿಂದಿ ಭೂತ !

ಮೊನ್ನೆ ಮನೆಯಿಂದ ಅಮ್ಮ ಕಾಲ್ ಮಾಡಿದ್ಲು, ಅರ್ಜೆಂಟ್ ಆಗಿ ಮನೆಗೆ ಬಾ, ಅಕ್ಕನ ಮದುವೆ ವಿಷ್ಯದ ಕೆಲಸ ಇದೆ ಅಂತ. ಸರಿ ಅಂದಕೊಂಡು ರೈಲ್ವೆಯ irctc.co.in ವೆಬ್ ಸೈಟ್ ಗೆ ಹೋಗಿ ಹುಬ್ಬಳ್ಳಿಗೆ ಒಂದು ಟಿಕೇಟ್ ಬುಕ್ ಮಾಡೋಣ ಅಂದಕೊಂಡು ಹುಡುಕಿದ್ರೆ ಸೀಟ್ ಇದ್ದಿದ್ದು ಅಜ್ಮೇರ್ ಎಕ್ಸಪ್ರೆಸ್ ಅನ್ನೋ ಮಾರ್ವಾಡಿ ಎಕ್ಸಪ್ರೆಸ್ ( ಹಾಗೆ ಯಾಕ್ ಕರೆದೆ ಅಂತ ಹೇಳುವೆ) ಒಂದರಲ್ಲೇ.

ಸರಿ ಗುರುವಾರ ರಾತ್ರಿ ೯.೩೦ ಗೆ ಬೆಂಗಳೂರಿನ ರೈಲು ನಿಲ್ದಾಣಕ್ಕೆ ಹೋದ್ರೆ ಅಲ್ಲಿ ಮುಖ್ಯ ದ್ವಾರದಿಂದ ಒಳಗೆ ಹೋಗೊರಿಗೆ ಸೆಕ್ಯುರಿಟಿ ಚೆಕ್ ನಡಿತಾ ಇತ್ತು. ಅಲ್ಲಿ ಹೋದ ಕೂಡ್ಲೇ ಕಣ್ಣಿಗೆ ರಾಚಿದ್ದು ರೈಲು ನಿಲ್ದಾಣ ಅನ್ನೋದು ಒಂದು ಮಿನಿ ಬಿಹಾರ್ ಆಗಿರೋ ವಿಷ್ಯ. ಮೊದಲಿಗೆ ಸೆಕ್ಯುರಿಟಿಯವನು "ಬ್ಯಾಗ್ ಮೇ ಕ್ಯಾ ಹೈ?" ಅಂತ ಬಂದಾ, ನಾನು ಕನ್ನಡದಲ್ಲಿ ಮಾತಾಡಿದ್ದಕ್ಕೆ" ಕ್ಯಾ, ಕ್ಯಾ? " ಅಂತ ನನ್ನನ್ನೇ ದಬಾಯಿಸಿದ. "ಹಿಂದಿ, ಹಿಂದಿ " ಅಂತ ದೊಡ್ಡದಾಗಿ ಬಾಯಿ ಮಾಡಿದ. ನಾನು ಕನ್ನಡದಲ್ಲೇ ಮಾತಾಡಿ ಹಾಗೂ, ಹೀಗೂ ಅಲ್ಲಿಂದ ಪಾರಾಗಿ ನಿಲ್ದಾಣದ ಒಳಕ್ಕೆ ಹೋದೆ. ಆನ್ ಲೈನ್ ಟಿಕೇಟ್ ನಲ್ಲಿ ಪ್ಲಾಟಫಾರ್ಮ್ ನಂಬರ್ ಹಾಕಿರಲಿಲ್ಲ, ಹೀಗಾಗಿ ಅಲ್ಲೇ ನಿಂತಿದ್ದ ಇನ್ನೊಬ್ಬ ಸೆಕ್ಯುರಿಟಿಯವನಿಗೆ ಅಜ್ಮೇರ್ ಎಕ್ಸಪ್ರೆಸ್ ಯಾವ ಪ್ಲಾಟಫಾರ್ಮ್ ಸರ್ ಅಂತ ಕೇಳಿದೆ, ಅದಕ್ಕೆ ಆ ಡಬ್ಬಾ ನನ್ ಮಗಾನೂ " ಕ್ಯಾ? ಕ್ಯಾ? ಹಿಂದಿ ಮೇ ಬೋಲ್" ಅಂತಾ ಕೂಗಿದ. ನಾನು ಅವನಿಗೆ ಸೊಪ್ಪು ಹಾಕದೇ ಸುರಂಗ ಮಾರ್ಗದಲ್ಲಿ ಇಳಿದು ಅಲ್ಲಿಂದ ನೇರವಾಗಿ ೮ನೇ ಪ್ಲಾಟಫಾರ್ಮ್ ಗೆ ಬಂದೆ ( ಹುಬ್ಬಳ್ಳಿಗೆ ಯಾವತ್ತು ಅಲ್ಲಿಂದಲೇ ಹತ್ತೋದು) ಅಲ್ಲಿ ಇರೋ ಒಂದು ಜ್ಯೂಸ್ ಅಂಗಡಿ ಹತ್ರ ನಿಂತಿದ್ದೆ, ಅಲ್ಲಿ ಎಫ್.ಎಂ ರೇಡಿಯೋದಲ್ಲಿ " ಮಳೆ ಬರುವ ಹಾಗಿದೆ, ಮನವೀಗ ಹಾಡಿದೆ " ಅಂತ ಮೊಗ್ಗಿನ ಮನಸಿನ ಹಾಡು ತೇಲಿ ಬರ್ತಾ ಇತ್ತು. ಅದನ್ನ ಕೇಳಿ, ಅಬ್ಬಾ, ಕಡೆಗೂ ಕನ್ನಡದವರೊಬ್ಬರ ಅಂಗಡಿನಾದ್ರೂ ಇದೆಯಲ್ಲ ಅಂದಕೊಂಡು ಆ ಅಂಗಡಿಯವನ ಹತ್ರಾ " ಸರ್, ಅಜ್ಮೇರ್ ಎಕ್ಸಪ್ರೆಸ್ ಇಲ್ಲೇ ತಾನೇ ಬರೋದು" ಅಂದೆ, ನನ್ನ ಕರ್ಮಾನೋ, ಕನ್ನಡಮ್ಮನ ಕರ್ಮಾನೋ, ಆ ಪುಣ್ಯಾತ್ಮನೂ ಹಿಂದಿಯವನೇ " ದಸ್ ಬಜೇ, ಇದರ್ ಹೀ ಆತಾ ಹೈ" ಅಂದ, ನಾನು ಏನು? ಅಂತ ಕನ್ನಡದಲ್ಲೇ ಕೇಳಿದ್ದಕ್ಕೆ, ನನ್ನ ಮುಖಾನಾ ಕೆಕ್ಕರಿಸಿಕೊಂಡು ನೋಡ್ತಾ ಇದ್ದ. " ಟೆನ್ ಓ ಕ್ಲಾಕ್ ಹಿಯರ್" ಅಂತ ೮ನೇ ಪ್ಲಾಟಫಾರ್ಮ್ ಕಡೆ ತೋರಿಸಿ ಇನ್ನೊಮ್ಮೆ ಅಂದ. "ಇವನ್ಯಾವನಪ್ಪ ಬೆಂಗಳೂರಲ್ಲಿದ್ದು "ರಾಷ್ಟ್ರ ಭಾಷೆ (??)" ಹಿಂದಿ ಬರಲ್ಲ ಅಂತಾನೇ, ಡಬ್ಬಾ ನನ್ ಮಗಾ " ಅನ್ನೋ ತರಹ ಇತ್ತು ಅವನ ನೋಟ.

ಅಂತೂ ಇಂತೂ ೧೦.೨೦ ಕ್ಕೆ ಅಜ್ಮೇರ್ ಎಕ್ಸಪ್ರೆಸ್ ಟ್ರೈನ್ ಬಂತು. ಆಗ ನೋಡಿದ್ರೆ ಒಮ್ಮಿಂದೊಮ್ಮೆಲ್ಲೆ ಪೂರ್ತಿ ೮ನೇ ಪ್ಲಾಟಫಾರ್ಮ್ ಮಿನಿ ರಾಜಸ್ಥಾನ ಆಗಿ ಬಿಡ್ತು. ಎಲ್ಲಿ ನೋಡಿದ್ರೂ ರಾಜಸ್ಥಾನಿಗಳೇ, ಬೆಂಗಳೂರಿಗೆ ಆಗ್ತಾ ಇರೋ ಪರ ಭಾಷಿಕರ ಅವ್ಯಾವಹತ ವಲಸೆಯ ದಿವ್ಯ ದರ್ಶನ ನನಗಾಯ್ತು !. ಟ್ರೈನ್ ಹತ್ತಿ ನೋಡಿದ್ರೆ, ಟಿ.ಸಿ ಕೂಡಾ ಯಾರಾಗಿದ್ದ ಅಂತಾ ನಾ ಹೇಳೋದು ಬೇಡ ಅನ್ಸುತ್ತೆ. ಅಷ್ಟಕ್ಕೆ ನಿಲ್ಲದೇ, ಟ್ರೈನ್ ನಲ್ಲಿ ನೋಡಿದ್ರೆ ಅಲ್ಲಿನ ಎಲ್ಲ ಮಾಹಿತಿ, ಎಲ್ಲ ಸುರಕ್ಷೆಯ ಸೂಚನೆಗಳು ಇದ್ದಿದ್ದೂ ಹಿಂದಿ/ಇಂಗ್ಲೀಷನಲ್ಲೇ. ಅಂದ್ರೆ ಬರೀ ಕನ್ನಡ ಗೊತ್ತಿರೋ ಒಬ್ಬನು ಕರ್ನಾಟಕದಲ್ಲಿ ಟ್ರೈನಿಗೆ ಯಾವ ಅನಾಹುತ ಆದ್ರೂ ಸುರಕ್ಷತೆಯ ಯಾವ ಸೂಚನೆಯನ್ನು ಓದಿ ಪಾಲಿಸೋಕೆ ಆಗದೇ, ನೆಗದು ಬಿದ್ದು ಸಾಯಲಿ ಅನ್ನೋ ಹಾಗಿದೆ ರೈಲ್ವೆ ಇಲಾಖೆಯ ಧೋರಣೆ.

ಬೆಳಿಗ್ಗೆ ೬ ಗಂಟೆಗೆ ಹುಬ್ಬಳ್ಳಿಯ ನಿಲ್ದಾಣದಲ್ಲಿ ನಿಂತಾಗ " ಅಬ್ಬ, ಕೊನೆಗೂ ನಮ್ಮ ಊರು ಬಂತಲ್ಲಪ್ಪ", ಬೆಂಗಳೂರಲ್ಲಿ ಪರಭಾಷಿಕರ ಮೆರೆದಾಟ ನೋಡಿ, ನೋಡಿ ಸಾಕಾಗಿದ್ದ ನನಗೆ ಹೊಸ ಹುರುಪು ಬಂದಗಾಗಿತ್ತು. ಟ್ರೈನ್ ಇಳಿದು ಹೊರಗೆ ಬಂದು, ಆಟೋ ನಿಲ್ದಾಣಕ್ಕೆ ಬಂದೆ, ಬಂದನೋ ಇಲ್ಲ, "ಸಾಬ್, ಕಹಾ ಜಾನಾ ಹೈ ?" ಅಂತ ಆಟೋದವನೊಬ್ಬ ಬಂದ. ಎಲ್ಲಿತ್ತೋ ಸಿಟ್ಟು , " ಯಾಕಪ್ಪ ತಮ್ಮ, ಹೆಂಗ್ ಐತಿ ಮೈಯ್ಯಾಗ್? ಚಂದಂಗ್ ಕನ್ನಡಾ ಮಾತಾಡಾಕ್ ಏನ್ ತ್ರಾಸ್ ಆಗೇತಿ, ಏನ್ ಇರೋ ಬರೋರೆಲ್ಲ ಹಿಂದಿನಾಗ್ ಶುರು ಹಚ್ಚಿರಲ್ಲ ನಿಮ್ಮಾಪ್ರ ಹಡಾ" ಅಂದೆ. ಅವನು ಸಡನ್ ಆಗಿ " ಏ, ತಪ್ಪಾತ್ರಿ ಸರ್, ನಾನು ಇಲ್ಲಿಯವನ ರೀ,, ಆಟೋ ಹೊಡೆಯಾಕತ್ತ ೪ ವರ್ಷಾ ಆತ್ರಿ, ಇದಾ ಫಸ್ಟ್ ಟೈಮ್ ನೋಡ್ರಿ ಹಿಂಗ ಯಾರಾರ್ ಕೇಳಿದ್ದು, ಏನ್ ಮಾಡಲಿರಿ ಸರ್, ಮಂದಿ ಬಂದ ಕೂಡ್ಲೇ ಮೊದಲ ನನ್ನ ಕೂಡ ಹಿಂದಿನಾಗೇ ಮಾತಾಡತಾರ್, ಆಮ್ಯಾಕ್ ನೋಡಿದ್ರೆ, ಅವನೌನ್, ಆಟೋದಾಗ ಕುಂತ ಮ್ಯಾಲೆ ಅವರ ಮನಿ ಮಂದಿ ಕೂಡಾ ಕನ್ನಡದಾಗೇ ಮಾತಾಡತಾರ್" ಹಿಂಗಾಗಿ ಹಿಂದಿ ಮಾತಾಡಿದೆ ರೀ, ಇನ್ ಮ್ಯಾಲೆ ಮೊದಲು ಕನ್ನಡದಾಗೇ ಗಿರಾಕಿ ಕೂಡಾ ಮಾತಾಡತೇನ್ರಿ" ಅಂದ.

ಮನೆಗೆ ಹೋಗ್ತಾ ಅದೇ ವಿಚಾರ ಮಾಡ್ತಾ ಇದ್ದೆ. ಎಲ್ಲಿ ನೋಡಿದ್ರೂ ನಮ್ಮ ಜನರಿಗೆ ಹಿಂದಿ ಭೂತ ಮೆಟ್ಟಕೊಂಡಬಿಟ್ಟಿದೆ. ಹೇಂಗಪ್ಪ ನಮ್ಮ ಭಾಷೆ ಪರಿಸ್ಥಿತಿ ಹಿಂಗೆ ಮುಂದುವರೆದ್ರೆ ಅಂತ. ಇದಕ್ಕೆಲ್ಲ ಕಾರಣ ಏನು? ಕನ್ನಡ ಭಾಷಿಕನಿಗೆ, ತನ್ನೂರಲ್ಲೇ, ತನ್ನ ಭಾಷೆ ಕೀಳು, ಹಿಂದಿ ಮಾತಾಡಿದ್ರೆ ಲೆವೆಲ್ಲು, ಹಿಂದಿ ಗೊತ್ತಿದ್ರೆ, ತಾನು ಭಾರತೀಯ ಅನ್ನೋ ತಪ್ಪು ಕಲ್ಪನೆ ಹೇಗೆ ಬಂದಿದ್ದು? ಹಿಂದಿ ರಾಷ್ಟ್ರ ಭಾಷೆ ಅನ್ನೋ ಒಂದು ದೊಡ್ಡ ಸುಳ್ಳು ಅವನ ತಲೆಗೆ ಹೋಗಿದ್ದಾದರೂ ಹೇಗೆ? ಕಡೆಗೆ ತೋಚಿದ್ದು, ಬಾಲಿವುಡ್ಡು, ಕೇಂದ್ರ ಸರ್ಕಾರ ಎಲ್ಲ ಸೇರಿ ಕನ್ನಡದ ಮೇಲೆ, ಕನ್ನಡಿಗರ ಮೇಲೆ ಹಿಂದಿ ಹೇರೋದನ್ನ ಅವ್ಯಾವಹತವಾಗಿ ಮಾಡ್ತಾನೇ ಇದ್ದಾರೆ. ಎಲ್ಲಿವರೆಗೆ ಈ ಹೇರಿಕೆ ನಿಲ್ಲಲ್ವೋ, ಅಲ್ಲಿವರೆಗೂ ಈ ಹಿಂದಿ ಭೂತ ನಮ್ಮನ್ನ ಬಿಡಲ್ಲ ಅಂತ.

ಇದನ್ನ ಬರಿಬೇಕಾದ್ರೆ, ನಮಗಿರೋ, ನಮ್ಮ ಭಾಷೆಯ ಬಗೆಗಿನ ಕೀಳರಿಮೆ ಬಗ್ಗೆ ಓದಿದ್ದ ಈ ಬರಹ ನೆನಪಾಯ್ತು.
http://karnatique.blogspot.com/2008/04/karnatakas-linguistic-inferiority.html

Rating
No votes yet

Comments