ಸಂಪದ ನನಗೇಕೆ ಮುದ ನೀಡಬೇಕು?

Submitted by asuhegde on Wed, 06/17/2009 - 09:16

ಸಂಪದ ಎಂದರೆ ನಾವು. ಸಂಪದ ನಮ್ಮದು.ಅದು ನಮಗೆ ಮುದ ನೀಡುವುದು ಹೇಗೆ?

ಅದು ನಮಗೆ ಮುದ ನೀಡುವ ಸಾಧನವಲ್ಲ. ಸಂಪದಕ್ಕೆ ನಾವು ಮುದ ನೀಡಬೇಕು.

ಒಳ್ಳೆಯ ಲೇಖನಗಳು ಬರುತ್ತಿಲ್ಲ ಅನ್ನುವ ಮಾತೂ ಇದೆ. ಒಳ್ಳೆಯ ಕೆಲಸ ನಾನೇ ಏಕೆ ಮಾಡಬಾರದು? ಎಲ್ಲವನ್ನೂ ಅನ್ಯರೇ ಮಾಡಬೇಕೆಂಬ ನಿರೀಕ್ಷೆ ಏಕೆ?

ಯಾರೇ ಆದರೂ, ತಮ್ಮ ಮಾನಸಿಕ ಸ್ಥಿತಿಯ ಮತ್ತು ಭಾವನೆಗಳ ಏರಿಳಿತಗಳಿಗೆ ಸಂಪದವನ್ನು ದೂಷಿಸಬೇಡಿ.

ನಾನು ಎಂದಿನವರೆಗೆ ಪರರಿಂದ ನಿರೀಕ್ಷಿಸುತ್ತಿರುತ್ತೇನೋ ಅಲ್ಲಿಯವರೆಗೆ ನನಗೆ ಯಾರೂ ಮುದ ನೀಡುತ್ತಿಲ್ಲ ಅನ್ನುವ ಯೋಚನೆ ಮನದಲ್ಲಿ ಮೂಡಬಹುದು.

ನಾವು ಏನಾದರೂ ಬರೆದು, ಅನ್ಯರಿಗೆ ಮುದನೀಡಿ ಆ ತೃಪ್ತಿಯಲ್ಲಿ ಮುದ ಪಟ್ಟುಕೊಂಡರೆ ಹೇಗೆ? ನಿಜವಾಗಿ ಹೇಳಬೇಕೆಂದರೆ ನನಗೆ ಮುದ ನೀಡುವ ಸಂಗತಿ ಇದೇ ಆಗಿದೆ.

ಮನಸ್ಸಿಗೆ ಬೇಸರವಾದಾಗ ಮನೆಬಿಟ್ಟು ಹೋಗುವರೇ? ಕಟ್ಟಿಕೊಂಡವರ ಬಿಟ್ಟು ಹೊರಡುವುದುಂಟೇ? ಹೆತ್ತ ಮಕ್ಕಳ ತೊರೆಯುವುದುಂಟೇ?

ಹಾಗೊಮ್ಮೆ ಹೋಗೇ ಹೋಗುವವರ ತಡೆಯಲು ನಾವ್ಯಾರು? ನಾ ತೆರಳಲು ಮರಳಿ ಕರೆದು ಕೂರಿ ಎನ್ನಲು ನನಗೆ ನೀವ್ಯಾರು?

ನನ್ನ ಪಾಲಿಗಂತೂ ಸಂಪದ ಸಂಪದ್ಭರಿತವಾಗಿದೆ.

ನಾನು ಮನಬಂದಾಗ ಬರೆಯುತ್ತೇನೆ.

ನನ್ನ ಮನ ಬಯಸಿದ್ದನ್ನು ಓದುತ್ತೇನೆ.

ಪ್ರತಿಕ್ರಿಯಿಸಬೇಕೆನಿಸಿದಾಗ ಪ್ರತಿಕ್ರಿಯಿಸುತ್ತೇನೆ.

ತಪ್ಪುಗಳು (ಬರಹದ ಕನ್ನಡದಲ್ಲಿ - ಬರಹಗಾರನ ಭಾವನೆಗಳಲ್ಲಿ ಅಲ್ಲ) ಕಂಡು ಬಂದಾಗ ಲೇಖಕರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ತಿದ್ದುತ್ತೇನೆ. ಒಪ್ಪಿದರೆ ಸಂತೋಷ. ಒಪ್ಪದಿದ್ದರೆ, ಬೇಸರವೂ ಇಲ್ಲ.

ನಾನಿಲ್ಲಿ ಬರೆದಾಗ ಕೊಂಡಾಡುವವರಿರಬಹುದು. ನಾನು ಬರೆಯುವುದನು ನಿಲ್ಲಿಸಿದಾಗ, ಅಳುವವರು ಯಾರೂ ಇಲ್ಲ. ನನಗೆ ಕರೆ ಮಾಡಿ "ದಯವಿಟ್ಟು ಬನ್ನಿ, ಏನಾದರೂ ಬರೆಯಿರಿ ಸ್ವಾಮೀ," ಎನ್ನುವವರಿಲ್ಲ.

ಏಕೆಂದರೆ ಯಾರೇ ಆಗಲಿ ಇಲ್ಲಿ ಅನಿವಾರ್ಯರಲ್ಲ.

ಸಂಪದ ನನಗೆ ಅನಿವಾರ್ಯ ಆಗಿರಬಹುದು. ಸಂಪದಕ್ಕೆ ನಾನಲ್ಲ.

ಇದ್ದಷ್ಟು ದಿನ ಇರೋಣ ಒಂದಾಗಿ, ಹೋಗುವ ಮಾತೇಕೆ?

ಮುಂದೊಂದು ದಿನ ಕಾಲನ ಕರೆ ಬಂದಾಗ, ಹೇಳದೇ ಹೋಗಬೇಕು.

ಆಗ ಯಾರಿಗೂ ಹೇಳದೇ ಹೋಗೋಣ, ಒಬ್ಬೊಬ್ಬರಾಗಿ.

ಬ್ಲಾಗ್ ವರ್ಗಗಳು

Comments