ದೇವರು ಹೊಸೆದ ಪ್ರೇಮದ ದಾರ

ದೇವರು ಹೊಸೆದ ಪ್ರೇಮದ ದಾರ

ಮುತ್ತಿನ ಹಾರ ಚಿತ್ರದ ಹಾಡನ್ನ ನೀವು ಕೇಳೇ ಇರ್ತೀರ - ದೇವರು ಹೊಸೆದ ಪ್ರೇಮದ ದಾರ,ದಾರದ ಜೊತೆಗೆ ಋತುಗಳ ಹಾರ ಅಂತ ಶುರುವಾಗತ್ತೆ ಅದು. ಚಿಕ್ಕವರಾಗಿದ್ದಾಗ ಅಜ್ಜ ಬಾಯಿಪಾಠ ಹೇಳಿಕೊಡುವಾಗ ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಇವು ಮೂರು ಕಾಲಗಳು. ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಇವು ಆರು ಋತುಗಳು ಇವೆಲ್ಲ ಹೇಳಿಕೊಡುತ್ತಿದ್ದ ನೆನಪು. ಹಾಗೇ. ಚೈತ್ರ ವೈಶಾಖ ವಂಸಂತ ಋತು ಅಂತ ಯಾವ ಋತುವಿಗೆ ಯಾವ ತಿಂಗಳು ಅಂತಲೂ ಹೇಳಿಕೊಡುತ್ತಿದ್ದರು ಅವರು.

ಹಿಂದಿ ಹಾಡೊಂದರಲ್ಲಿ ’ಪತ್ ಝಡ್ ಸಾವನ್ ಬಸಂತ್ ಬಹಾರ್, ಏಕ್ ಬರಸ್ ಮೇ ಮೌಸಮ್ ಚಾರ್, ಪಾಂಚವಾ ಮೌಸಮ್ ಪ್ಯಾರ್ ಕಾ ಇಂತಜಾರ್’ ಅಂತ ಹಾಡೋದನ್ನ ಕೇಳಿ ಇದೇನಪ್ಪ ನಮಗಿರೋ ಮೂರುಕಾಲಗಳು ಹಿಂದಿಯವರಿಗೆ ನಾಕು ಯಾಕಾಯ್ತು ಅಂತ ತಲೆ ಕೆರ್ಕೊಂಡಿದ್ದೇನೋ ನಿಜ. ಆದರೆ, ಭೂಮಧ್ಯರೇಖೆ ಇಂದ ದೂರಕ್ಕೆ ಹೋಗ್ತಾ ಹೋಗ್ತಾ  ನಾಲ್ಕು ಕಾಲಗಳಾಗುತ್ತವೆ ಅನ್ನೋದು ನಿದಾನಕ್ಕೆ ತಿಳೀತು ಬಿಡಿ.

ಈ ದೇಶಕ್ಕೆ ಬಂದಮೇಲೆ, ಕೆಲವು ಊರಿನವರು ಜಂಭದಿಂದ "We have four distinct seasons" ಅಂತ ಹೇಳ್ಕೊಳೋದು ಕೇಳಿದ್ದೆ. ಆ ಮೇಲೆ ಅದರ ಮರ್ಮ ತಿಳೀತು. ಹಾಗೆ ಹೇಳ್ಕೊಳೋವ್ರ ಊರಲ್ಲೆಲ್ಲ  ಉಸಿರೇ ಮರಗಟ್ಟಿ ಹೋಗೋ ಅಂತಹ ಚಳಿ - ಮತ್ತೆ, ಬೆಂದು ಹೋಗೋ ಅಂತಹ ಸೆಖೆ ಎರಡೂ ಇರತ್ತೆ, ಅಂತ!

ನಾನಿರೋ ಕಡೆ ಎಷ್ಟು ಕಾಲಗಳಿವೆ ಅಂತ ಒಂದೊಂದು ಸಲ ಲೆಕ್ಕ ಹಾಕೋಕೆ ಹೋದ್ರೆ, ಲೆಕ್ಕವೇ ತಪ್ಪತ್ತೆ. ಬೇಸಿಗೆಕಾಲ - ಇದೆ. ಚಳಿಗಾಲ - ಇದೆ. ಮಳೆಗಾಲ? ಇಲ್ಲಿ ಮಳೆಗಾಲವೇ ಚಳಿಗಾಲ, ಅಥವಾ ಚಳಿಗಾಲವೇ ಮಳೆಗಾಲ. ಇನ್ನು ಹಾಗಾಗಿ ಕರ್ನಾಟಕದ ಹಾಗೆ, ಬೇಸಿಗೆ ಮಳೆ ಚಳಿ ಅನ್ನೋ ಲೆಕ್ಕ ಆಗೋದಿಲ್ಲ. ಮತ್ತೆ ಇಲ್ಲಿ ಸಿಕ್ಕಾಪಟ್ಟೆ ಎಲೆ ಉದುರೋದೂ ಆಗೋದಿಲ್ಲ ಹಾಗಾಗಿ, ಸ್ಪ್ರಿಂಗ್-ಸಮರ್-ಫಾಲ್-ವಿಂಟರ್ ಅನ್ನೋ ಲೆಕ್ಕಕ್ಕೂ ಅಷ್ಟಾಗಿ ಒಪ್ಪೋದಿಲ್ಲ. ಆದರೂ ಸ್ಪ್ರಿಂಗ್ ನಲ್ಲಿ ಎಲೆ ಚಿಗುರೋದ್ರಿಂದ, ಫಾಲ್ ನಲ್ಲಿ ಅಷ್ಟೋ ಇಷ್ಟೋ ಎಲೆ ಉದುರೋದ್ರಿಂದ, ಎಲೆಗೆ ಬಣ್ಣ ಬರೋದ್ರಿಂದ  ವಸಂತಕಾಲ, ಬೇಸಿಗೆಕಾಲ, ಉದುರೆಲೆಕಾಲ, ಚಳಿಗಾಲ ಅಂತ ಹೇಳೋದೇ ಸರಿಯೇನೋ ಅನ್ನಿಸತ್ತೆ.

ಇಲ್ಲಿನ ಕಾಲಗಳ ಕೆಲವು ಚಿತ್ರಗಳು ಇಲ್ಲಿವೆ:

ವಸಂತ ಕಾಲ - ಎಲ್ಲೆಲ್ಲೂ ಚಿಗುರು, ಹೂವು!

ಬೇಸಿಗೆ ಕಾಲ- ಹುಲ್ಲೆಗೆ ಒಣ ಹುಲ್ಲೇ ಗತಿ :)

ಉದುರೆಲೆ ಕಾಲ - ಬಣ್ಣಗಳದ್ದೇ ಹಬ್ಬ

ಉದುರೆಲೆಕಾಲ

 

ಚಳಿಗಾಲ - ಬಿಳಿ ಇಲ್ಲವೇ ಮಬ್ಬು, ಎರಡೇ ಬಣ್ಣಗಳು

.ಚಳಿಗಾಲ

ಮೋಜಿಗೊಬ್ಬ ಸ್ನೋ ಮ್ಯಾನ್

ಆಟಕ್ಕೊಬ್ಬ ಜೊತೆಗಾರ

(ಚಳಿಗಾಲದ ದೃಶ್ಯ ನಮ್ಮಲ್ಲಿಂದ ನೂರೈವತ್ತಕ್ಕೂ ಹೆಚ್ಚು ಮೈಲಿ ದೂರದ್ದು. ಉಳಿದದ್ದೆಲ್ಲ ಮನೆಯ ಹತ್ತಿರವೇ. ಎಲ್ಲ ಚಿತ್ರಗಳನ್ನೂ ನಾನೇ ತೆಗೆದಿದ್ದು.)

-ಹಂಸಾನಂದಿ

Rating
No votes yet

Comments