ಅಮ್ಮಾ ನಿನ್ನ ತೋಳಿನಲ್ಲಿ....

ಅಮ್ಮಾ ನಿನ್ನ ತೋಳಿನಲ್ಲಿ....

ಬರುವ ಶುಕ್ರವಾರ ನಡೆಯಲಿರುವ ಲಗ್ನದ ಕಾರ್ಯಕ್ಕೆ ಪತ್ರಿಕೆ ಹಂಚಲು ಹೋಗಿದ್ದ ಕಲ್ಲಪ್ಪನವರಿಗೆ ಕಣ್ಣಿಗೆ ಬಿದ್ದಿತ್ತು ಆ ಪತ್ರ. ಅದೂ ತನ್ನ ಮಗನ ಕೊಠಡಿಯ ಮೇಜಿನ ಮೇಲೆ. ರೂಮು ಇಡೀ ಒಪ್ಪವಾಗಿ ಜೋಡಿಸಲ್ಪಟ್ಟಿತ್ತು. ಆ ಮೇಜಿನ ತುದಿಯಲ್ಲಿ ಮಗ ತನ್ನಮ್ಮನೊಂದಿಗೆ ಒರಚ್ಚಾಗಿ ಕಂಬಕ್ಕೊರಗಿ ಇಳಿಸಿಕೊಂಡ ಮುದ್ದಾದ ಭಾವಚಿತ್ರ. ಅದರ ಪಕ್ಕಕ್ಕೇ ಅಮ್ಮನ ಗೆಜ್ಜೆಯ ತುಣುಕೊಂದಕ್ಕೆ ಜರೀ ಅಂಚಿನ ಬಟ್ಟೆಯೊಂದನ್ನು ಸೇರಿಸಿ ಮಾಡಿದ ಬೀಗದ ಕೈಗೊಂಚಲು.ಗೋಡೆಯ ಮೇಲೆ ಅಮ್ಮನದೊಂದು ದೊಡ್ಡ ಪೋಸ್ಟರು. ಅಲ್ಲೆಲ್ಲೋ ಮೂಲೆಯಲ್ಲಿ ಅವಳದ್ದೇ ಬಳೆಗಳ ತುಕ್ಕುಹಿಡಿದ ಸ್ಟ್ಯಾಂಡು. ಕನ್ನಡಿಯ ಮೇಲಿದ್ದ ಅಮ್ಮನ ಹಳೆಯ ಬಿಂದಿ.ರೂಮಿನೊಳಗೆ ಕಾಲಿಟ್ಟ ಯಾರು ಬೇಕಾದರೂ ಹೇಳಬಹುದಿತ್ತು ಇದು ’ಅಮ್ಮನ ಮಗನ ರೂಮು’ ಅಂತ. 'ಆರ್ಯ' ಅಂತ ಕರೆದಿದ್ದಳು ಅವನಮ್ಮ ಅವನನ್ನ. ಎಲ್ಲಾ ಅಮ್ಮನದೇ ಪಡಿಯಚ್ಚು. ನಕ್ಕಾಗ ಗುಳಿ ಬೀಳುವ ಕೆನ್ನೆ. ಕಿರಿದಾಗುವ ಸಣ್ಣ ಕಣ್ಣು. ಗಂಡುಮಕ್ಕಳು ಅಮ್ಮನನ್ನು ಹೋಲಿದರೆ ಅದೃಷ್ಟ ಅಂತೆ ಎಲ್ಲರ ಬಳಿಯೂ ಹೇಳಿಕೊಂಡು ತಿರುಗಿದ್ದಳು. ಮಗನನ್ನ ಮುದ್ದಾಡಿ ಬೆಳೆಸಿದ್ದಳು. ಇನ್ಯಾರು ನೀಡದ ಪ್ರೀತಿಯನ್ನು ನೀಡಿ ಅವನನ್ನು ದೊಡ್ಡವನನ್ನಾಗಿ ಮಾಡಿದ್ದಳು. ಏನು ಅದೃಷ್ಟವೋ ಏನೋ ಅವನು ಹುಟ್ಟಿದ ಹದಿಮೂರು ವರ್ಷಕ್ಕೆ ಗರ್ಭಕೋಶದ ಕ್ಯಾನ್ಸರಿಗೆ ಬಲಿಯಾಗಿ ಪ್ರಾಣ ತೆತ್ತಳು. ಆಗಿನ್ನೂ ದನಿ ಒಡೆಯುವ ವಯಸಿನಾರಂಭ ಅವನದು. ಅಮ್ಮನನ್ನು ಅದೆಷ್ಟು ಹಚ್ಚಿಕೊಂಡಿದ್ದ ಎಂದರೆ ಅವಳು ಸತ್ತ ದಿನ , ಅಮ್ಮ ಆಸ್ಪತ್ರೆಯಲ್ಲಿ ತನ್ನ ಕೊನೇ ಘಳಿಗೆಗಳಲ್ಲಿ ಮಗನನ್ನು ನೆನೆಸುತ್ತಿದ್ದರೆ, ಇವನು ಹತ್ತಿರದ ಗುಡ್ಡದಲ್ಲಿ ಆಂಜನೇಯನಿಗೆ ಗುಡ್ಡೆ ಕರ್ಪೂರ ಬೆಳಗಿಸಿ ಜೀವದಾನ ಬೇಡುತ್ತಿದ್ದ. ಅಮ್ಮನ ಪ್ರಾಣಪಕ್ಷಿ ಹಾರಿಹೋದಾಗ ಗುಡ್ಡದಲ್ಲಿವನು ಎಚ್ಚರ ತಪ್ಪಿ ಬಿದ್ದಿದ್ದ. ಪರಿಚಯಸ್ಥರು ಇವನನ್ನು ಮನೆಗೆ ತಂದು ಬಿಟ್ಟಿದ್ದರು.ಶವವಾಗಿ ಮಲಗಿದ್ದ ಅಮ್ಮನ ಪಾದದ ಬಳಿ ಸ್ಥಾಪಿತನಾಗಿಬಿಟ್ಟ.ಮೂರು ರಾತ್ರಿ ಮೂರು ಹಗಲು ರೂಮಿನಿಂದ ಹೊರಬರಲೇ ಇಲ್ಲ. ಎಲ್ಲಿ ಕುಳಿತರೂ ಅವಳದ್ದೇ ಧ್ಯಾನ. ಅವಳದ್ದೇ ಕನಸು. ಅವಳದ್ದೇ ದನಿ ಮನೆಯೊಳಗೆಲ್ಲಾ ಮಾರ್ದನಿಸಿದಂತೆ. ಅವಳ ನೆನಪಲ್ಲೇ ಇದ್ದವನಿಗೆ ಅವಳ ಆಸೆಯನ್ನು ಪೂರೈಸಬೇಕೆಂಬುದೊಂದು ಕನಸಿತ್ತು. ಇವನಿಲ್ಲೇ ಇದ್ದರೆ ಹುಚ್ಚು ಹಿಡಿದೀತೆಂದೆಣಿಸಿದ ಅವನಪ್ಪ ಪಿ.ಯು.ಸಿ. ಗೆ ಹಾಸ್ಟೆಲ್ ಸೇರಿಸಿದ್ರು. ಅಮ್ಮನ ಆಸೆಯಂತೆಯೇ ಪಿ.ಯು.ಸಿ.ಯನ್ನು ಚೆನ್ನಾಗಿಯೇ ಓದಿ ಪಾಸು ಮಾಡಿದ್ದ. ಅಮ್ಮನ ಮೇಲಿನ ಪ್ರೀತಿ ಬದುಕಿನ ಛಲವಾಗಿ ಅವನನ್ನ ರೂಪಿಸಿತ್ತು. ಪಿ.ಯು.ಸಿ.ಯ ನಂತರ ಮುಂದೇನು ? ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಉತ್ತರ ಕರ್ನಾಟಕದ ಕಾಲೆಜೊಂದರಲ್ಲಿ ಇಂಜಿನಿಯರಿಂಗ್ ಪದವಿಗೆ ಸೀಟು ಸಿಕ್ಕಿತ್ತು. ಮತ್ತಿನ್ನೇನು ಅವನ ಬದುಕು ಅರ್ಧ ರೂಪಿತವಾಯಿತು ಅಂದಿರಾ ? ಸಮಸ್ಯೆ ಅದಲ್ಲ. ಆ ದಿನ ಹಾಸ್ಟೆಲಿನಿಂದ ಬಂದವನಿಗೆ ಮನೆಯಲ್ಲೇನೋ ಬದಲಾದಂತೆ ತೋರುತ್ತಿತ್ತು. ಇಷ್ಟೂ ದಿನ ರಂಗಮ್ಮಜ್ಜಿಯೇ ನಮ್ಮನ್ನೆಲ್ಲಾ ಅಂದರೆ ಅಪ್ಪನನ್ನ , ನನ್ನನ್ನ ನೋಡಿಕೊಳ್ಳುತ್ತಿದ್ದಳು. ಅಪ್ಪನಿಗೆ ಅವಳು ದೂರದ ಸಂಬಂಧಿಯೇ. ನಾನು ಹಾಸ್ಟೆಲ್ ಸೇರಿದ ನಂತರ ಅಪ್ಪನ ಒಂಟಿತನವನ್ನು ನೋಡಲಾಗದೇ ಅಜ್ಜಿ ಈ ರೀತಿ ಮಾಡಿದ್ದಾಳೆ. ಮತ್ತೆ ಓದಿನತ್ತ ಮನಸು ಕೊಟ್ಟವನಿಗೆ ಪರೀಕ್ಷೆಗಳೆಲ್ಲಾ ಮುಗಿದು ಮನೆಗೆ ಬಂದಾಗಲೇ ಪೂರ್ತಿ ವಿಷಯ ಗೊತ್ತಾಗಿದ್ದು.
..... ಮೇಜಿನ ಮೇಲಿದ್ದ ಪತ್ರವನ್ನು ಬಿಡಿಸಿದ ಕಲ್ಲಪ್ಪನವರು ಅದರ ಮೇಲೆ ಕಣ್ಣು ಹಾಯಿಸತೊಡಗಿದರು. ಪತ್ರವನ್ನು ಓದುತ್ತಿದ್ದಂತೆಯೇ ಅವರ ಮುಖದ ಮೇಲಿನ ಭಾವನೆಗಳು ಬದಲಾಗುತ್ತಾ ಹೋದವು. ಓದುತ್ತಾ ಓದುತ್ತಾ ಅವರ ಕಣ್ಣುಗಳಲ್ಲಿ ಅವರಿಗರಿವಿಲ್ಲದಂತೆಯೇ ದುಃಖ ಧುಮ್ಮಿಕ್ಕತೊಡಗಿತು. ಮಗ ಆರ್ಯ, ತೀರಿಕೊಂಡ ತನ್ನಮ್ಮನನ್ನು ಉದ್ದೇಶಿಸಿ ಆ ಪತ್ರ ಬರೆದಿದ್ದ.
" ಅಮ್ಮಾ .... ನೀನೆಂದರೆ ನೀನೇ.. ನಿನ್ನನ್ನು ಬಿಟ್ಟರೆ ಜಗತ್ತಿನಲ್ಲಿ ಆ ಸ್ಥಾನ ತುಂಬಬಲ್ಲವರು ಯಾರೂ ಇಲ್ಲ. ಐದು ವರ್ಷಗಳಾದರೂ ನಿನ್ನ ಕೊನೆಯ ನಗುವನ್ನು ಕೂಡಾ ನನ್ನ ಮನಸು ಮರೆತಿಲ್ಲ. ನಿನ್ನ ಮಾತುಗಳನ್ನು ಕನಸು ಕನವರಿಸುವುದನ್ನು ಬಿಟ್ಟಿಲ್ಲ. ನಿನ್ನ ಗೆಜ್ಜೆಯ ದನಿಯಾದಾಗಲೆಲ್ಲಾ ನೀನೇ ಬಂದ ಹಾಗೆ ಬಂದ ಹಾಗೆ ಕಲ್ಪಿಸಿಕೊಳ್ಳುವುದನ್ನು ನನ್ನ ಆಸೆ ಕಳೆದುಕೊಂಡಿಲ್ಲ. ಮೇಜಿನ ಮೇಲೆ , ಗೋಡೆಯ ಮೇಲೆ ....ಅಮ್ಮಾ ... ನೀನು ನಕ್ಕಾಗಲೆಲ್ಲಾ ನಾನೂ ನಕ್ಕಿದ್ದೇನೆ. ಸುಮ್ಮ ಸುಮ್ಮನೆ ನಿನ್ನ ನೆನೆದು ಅತ್ತಿದ್ದೇನೆ. ಬಾಗಿಲಿಗೆ ಸಿಕ್ಕಿಸಿದ ನಿನ್ನ ಸೆರಗಿನಂಚಿನಲ್ಲೇ ಕಣ್ಣನೀರನ್ನು ಒರೆಸಿದ್ದೇನೆ. ಮತ್ತೊಮ್ಮೆ ನೀನು ಹುಟ್ಟಿಬರಲೇ ಬೇಕೆಂದು ನನ್ನ ಮನಸಿಗೆ ಹೇಳಿ ದೇವರಿಗೆ ಅರ್ಜಿ ಬರೆಸಿದ್ದೇನೆ. ನನ್ನ ಮನವಿ ಮರೆತು ಅಲ್ಲೆಲ್ಲೋ ಭಕ್ತರೆದುರು ಹೋಗಿ ನಿಂತ ದೇವರುಗಳನ್ನೂ ಕರೆಸಿದ್ದೇನೆ. ಅಮ್ಮಾ .. ಮೊನ್ನೆ ಮೊನ್ನೆಯಷ್ಟೇ ನಿನಗಾಗಿ ಅಜ್ಜಿಗೆ ಹೇಳಿ ಹೊಸ ಸೀರೆ ತರಿಸಿದ್ದೇನೆ. ಅದನ್ನೇ ದಿಟ್ಟಿಸಿ ನೋಡುತ್ತಾ ಆನಂದಬಿಂದು ಹರಿಸಿದ್ದೇನೆ. ಇಡೀ ಮನೆಯಲ್ಲೆಲ್ಲೂ ನೀನು ಸತ್ತಿದ್ದೀ ಅನ್ನುವುದಕ್ಕೆ ಪುರಾವೆ ಸಿಕ್ಕದ ಹಾಗೆ ಮರೆಸಿದ್ದೇನೆ. .ಹೇಳಮ್ಮಾ ಇಷ್ಟೆಲ್ಲಾ ಆದ ಮೇಲೆಯೂ ನಿನ್ನಂಥ ಬಂಗಾರದಂಥವಳ ಸ್ಥಾನದಲ್ಲಿ ನಾನು ಬೇರೆ ಯಾರನ್ನೋ ಹೇಗೆ ಕಲ್ಪಿಸಿಕೊಳ್ಳಲಿ? ನನ್ನ ಮನಸಲ್ಲಿ ನೀನೆಂದೂ ಸತ್ತಿಲ್ಲ. ನೀನು ಬಂದೇ ಬರುವೆ ಅನ್ನುವ ಆಸೆ ಬತ್ತಿಲ್ಲ. ಹಾಗಿರುವಾಗ ನಾಳೆ ಬರುವವಳನ್ನು ನಿನ್ನ ಜಾಗದಲ್ಲಿ ಊಹಿಸಲೂ ಸಾಧ್ಯವಿಲ್ಲ. ಅವಳು ಅಪ್ಪನಿಗೆ ಹೆಂಡತಿಯಾಗಬಹುದು. ನನಗೆ ಅಮ್ಮನಲ್ಲ. ಆ ನನ್ನಪ್ಪನ ಹೆಂಡತಿ ನನ್ನೀ ಮುದ್ದು ಅಮ್ಮನ ಸೀರೆ, ಒಡವೆಗಳಲ್ಲೆಲ್ಲಾ ಮೈತೂರಿಸಿ ಕಿಸಕ್ಕನೆ ನಕ್ಕಾಗ ಆಗುವ ಕಡುದುಃಖವನ್ನು ಅದು ಹೇಗೆ ಸಹಿಸಲಿ ? ಹೇಳಮ್ಮಾ ನಿನ್ನನ್ನೇ ಧ್ಯಾನಿಸಿ , ಆರಾಧಿಸಿ, ನೀನಿತ್ತ ಕೈತುತ್ತ ಸವಿಗನಸಲ್ಲೇ ಬೆಳೆಯುತ್ತಿರುವ ನನ್ನ ಮನಸನ್ನು ಹೇಗೆ ಬದಲಾಯಿಸಲಿ ? ಶಿವಪಾರ್ವತಿಯರಂತಿದ್ದ ನೀವಿಬ್ಬರೂ ನನ್ನ ಕಣ್ಣಲ್ಲಿ ಹಾಗೇ ಉಳಿಯಲಿ . ಆಕೆ ಬಂದರೆ ಅವಳು ಗಂಗೆಯೇ ಹೊರತು ಪಾರ್ವತಿಯ ಸ್ಥಾನದಲ್ಲಿರಲು ಸಾಧ್ಯವೇ ಇಲ್ಲ. ರಂಗಮ್ಮಜ್ಜಿಯ ಮಾತಿಗೆ ಕಿವಿಗೊಟ್ಟ ಅಪ್ಪ ನನ್ನ ಒಪ್ಪಿಗೆಯನ್ನೂ ಬಯಸದೆ ಈ ಮದುವೆಯನ್ನು ಗೊತ್ತುಮಾಡಿಕೊಂಡಿದ್ದಾರೆ. ಅವರಿಗೆ ಗೊತ್ತು ! ನಾನ್ಯಾವತ್ತೂ ನನ್ನಮ್ಮನನ್ನ ಮರೆತಿಲ್ಲ ಅಂತ. ಪ್ರತೀ ಸಲ ಮನೆಯೊಳಗೆ ಬರುವಾಗಲೂ ಅಮ್ಮಾ ಅಂತ ಒಂದು ಕೂಗು ಹಾಕಿಯೇ ಬರುತ್ತಿದ್ದಿದ್ದು. ಕಾಲೇಜಿನಲ್ಲಿ ನಡೆದದ್ದೆಲ್ಲವನ್ನೂ ನಿನಗೆ (ನಿನ್ನ ಭಾವಚಿತ್ರಕ್ಕೆ) ಒಪ್ಪಿಸಿ ಬಾಗಿಲಂಚಲ್ಲಿದ್ದ ನಿನ್ನ ಸೆರಗನ್ನೊಮ್ಮೆ ಕಿರುಬೆರಳಿಗೆ ಸುತ್ತಿ ನಂತರವೇ ನನ್ನ ಮುಂದಿನ ಕೆಲಸ. ನೀನು ಪ್ರತೀ ಬಾರಿ "ಓದು ಬಂಗಾರ" ಅಂದಾಗಲೂ ನಾನು ನೀ ಹೇಳಿದ್ದಕ್ಕಿಂತ ಹೆಚ್ಚೇ ಓದಿದ್ದೇನೆ. ನಿನ್ನಾಸೆಯಂತೆ ಪಾಸು ಮಾಡಿದ್ದೇನೆ. ಹೇಳಮ್ಮಾ ನಿನಗೋಸ್ಕರ ಇಷ್ಟೆಲ್ಲಾ ಮಾಡಿ ಹೇಗಮ್ಮಾ ನಿನ್ನನ್ನು ಮರೆತುಬಿಡಲಿ ? ಅಪ್ಪನದ್ದೂ ತಪ್ಪೋ ಸರಿಯೋ ತಿಳಿದಿಲ್ಲ. ಇಲ್ಲದವಳನ್ನು ಇದ್ದವಳೆಂದು ಭಾವಿಸಿ ನಿನ್ನೊಡನಾಡುವ ನನ್ನನ್ನು ಹುಚ್ಚನೆಂದೇ ಅಂದುಕೊಂಡಿದ್ದಾರೇನೋ ಅವರು. ಅಮ್ಮಾ.... ನಿನಗಾಗಿ ನಾನು ಏನಾದರೂ ಅನ್ನಿಸಿಕೊಳ್ಳುತ್ತೇನೆ. ನನ್ನನ್ನು ಬಿಟ್ಟು ನೀನು ಹೋಗುವುದನ್ನು ಮಾತ್ರ ಸಹಿಸಲಾರೆ. ನಿನ್ನ ಗೆಜ್ಜೆಯ ಸದ್ದು ಈ ಮನೆಯಲ್ಲಿ ಲೀನವಾಗುವುದನ್ನು ನೆನೆಸಲಾರೆ. ಅದಕ್ಕೇ... ಅಮ್ಮಾ ನಾನು ಈ ಮನೆಯಿಂದ ದೂರ ಹೋಗಬೇಕೆಂದು ತೀರ್ಮಾನಿಸಿದ್ದೇನೆ. ಅದು ನಿನ್ನೆಡೆಗೋ... ಎಲ್ಲಿಗೋ ತಿಳಿಯದು. ಆದರೆ ದೂರ.. ಬಹುದೂರ.... ಕಣ್ಣಿಗೆ ಕಾಣದಷ್ಟು ದೂರ ನಾನು ಹೊರಟುಬಿಡಬೇಕು. ನೀನಿರುವ ಈ ಮನೆಯನ್ನು ಇನ್ನಾರಿಗೋ ಒಪ್ಪಿಸಿ ಹೋಗುತ್ತಿದ್ದೇನೆ ಅಮ್ಮಾ.. ನನ್ನನ್ನು ಕ್ಷಮಿಸಿಬಿಡು. ಸಾಧ್ಯವಾದರೆ ಒಂದೇ ಒಂದು ಬಾರಿ ’ಕಂದಾ’ ಎಂದು ಅಪ್ಪಿಕೋ ಅಮ್ಮಾ .. ನಾನಿನ್ನ ಮಡಿಲಲ್ಲಿ ಮಗುವಾಗಿಬಿಡುತ್ತೇನೆ. ನಿನ್ನ ತೋಳಿನಲ್ಲಿ ಚಿರನಿದ್ರೆಗೈಯುತ್ತೇನೆ. ನಿನ್ನ ಕಣ್ಣೀರನ್ನು.. ಆನಂದದ ಬಾಷ್ಪವನ್ನು ಮುತ್ತಿಟ್ಟು ಮೆಲ್ಲ ಹೀರುತ್ತೇನೆ. ಅಮ್ಮಾ... ಒಂದು ಬಾರಿ ನನ್ನನ್ನು ಕರೆಯಮ್ಮಾ... ನಿನ್ನ ತೋಳುಗಳಲ್ಲಿ ಬಂಧಿಸು...
ನಿನ್ನ ಮುದ್ದು ಆರ್ಯ...

ಜೋರಾದ ಎದೆಬಡಿತ , ಒಣಗಿದ ನಾಲಿಗೆ, ಕುಗ್ಗಿಹೋದ ಮನಸಿನೊಂದಿಗೆ ಅಲ್ಲೇ ಕುಸಿದು ಕುಳಿತರು ಕಲ್ಲಪ್ಪ. ಕೈಲಿದ್ದ ಪತ್ರಿಕೆಗಳು ನೆಲದ ಮೇಲೆ ಹರವಿಬಿದ್ದವು. ಮನೆಯ ತುಂಬ ಅವಳು ನಕ್ಕಂತಾಯಿತು. ನನ್ನ ಮಗನೆದುರು ನೀವು ಸೊತುಬಿಟ್ಟಿರಿ ಅಂತ ಹಂಗಿಸಿದ ಹಾಗಾಯಿತು. ಧಡಕ್ಕನೆ ಎದ್ದವರೇ ಆರ್ಯನನ್ನು ಅರಸುತ್ತಾ ಹೊರಗೆ ಓಡಿದರು. !

Rating
No votes yet

Comments