ಇನ್ನೂ ಕುಸಿಯುವ ಮುನ್ನ ವಿವೇಕ ಹೇಳಿ

ಇನ್ನೂ ಕುಸಿಯುವ ಮುನ್ನ ವಿವೇಕ ಹೇಳಿ

ಕಳೆದ ನಾಲ್ಕು ದಶಕಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಜೋಡಿಸಿಕೊಂಡಿದ್ದ ನನಗೆ ಈಗೇಕೋ ಏನೂ ಬೇಡವೆಂಬ ನಿರ್ಲಿಪ್ತ ಭಾವ.ಯಾವ ವಿಚಾರ ನನಗೆ ಒಂದು ದಿಕ್ಕು ತೋರಿಸಿತ್ತೋ, ಯಾವುದರಲ್ಲಿ ನನ್ನ ಜೀವನದ ಬಹುಪಾಲು ಸಮಯ ಹಾಸುಹೊಕ್ಕಿತ್ತೋ, ಯಾವ ವಿಚಾರಧಾರೆ ನನಗೆ ಸ್ಪೂರ್ತಿಯಸೆಲೆಯಾಗಿತ್ತೋ, ಅದೇ ಕುಸಿಯುತ್ತಿರುವ ಭಾವ. ಅದೇ ವಿಚಾರದಲ್ಲಿ ಇನ್ನೂ ತಮ್ಮನ್ನು ಸರ್ವಸಮರ್ಪಣೆ ಮಾಡಿಕೊಂಡಿರುವ ಹಿರಿಯರಲ್ಲಿ ನನ್ನ ಮನದಾಳದ ನೋವು ಹೇಳಿಕೊಂಡರೆ ಸಿಕ್ಕ ಉತ್ತರ " ಚಟುವಟಿಕೆಗಳಿಂದ ದೂರವಾದಾಗ ಸಹಜವಾಗಿ ಹಾಗೆನ್ನಿಸುತ್ತೆ. ಅಂತಾದ್ದೇನೂ ಆಗಬಾರದ್ದು ಆಗಿಹೋಗಿಲ್ಲ, ನೀನು ದೂರವಿದ್ದು ನೋಡುತ್ತಿದ್ದೀಯ. ಅದಕ್ಕೇ ಹಾಗೆ ಕಾಣುತ್ತೆ"................
ಅರೇ, ನಾನು ಕಾಣುತ್ತಿರುವ ದೃಶ್ಯಗಳೆಲ್ಲಾ ಸುಳ್ಳೇ? ಯಾವ ಸಭೆ ಸಮಾರಂಭಗಳು ಶಿಸ್ತಿಗೆ ಹೆಸರಾಗಿತ್ತೋ, ಯಾವ ಕಾರ್ಯಕರ್ತರು ಹಗಲಿರುಳು ನಿದ್ರೆಗೆಟ್ಟು, ಹೊಟ್ಟೆಗೆ ಅನ್ನವಿಲ್ಲದೆ ದೇಶದ ಹೆಸರಲ್ಲಿ, ಸಮಾಜದ ಹೆಸರಲ್ಲಿ ದುಡಿದು ಸಂಘಟನೆ ಕಟ್ಟಿದರೋ, ಅದೇ ಸಂಘಟನೆಯಾ ಇದು? ಪ್ರೀತಿ, ವಾತ್ಸಲ್ಯ, ಮಮಕಾರ ಎಲ್ಲಾ ಎಲ್ಲಿ ಹೋಯ್ತು? " ವ್ಯಕ್ತಿ ನಿರ್ಮಾಣದ" ಹೆಸರಲ್ಲಿ ವಿವೇಕಾನಂದ ರಾಮಕೃಷ್ಣರ ಆದರ್ಶಗಳನ್ನು ಕಣ್ಮುಂದೆ ಇಟ್ಟುಕೊಂಡು ರಾಷ್ಟ್ರಭಕ್ತ ಪಡೆಯನ್ನು ಕಟ್ಟುವುದರಲ್ಲಿ ಪ್ರಪಂಚಕ್ಕೇ ಸರಿ ಸಾಟಿ ಇಲ್ಲವೆಂಬ ಕೀರ್ತಿಗೆ ಭಾಜನವಾಗಿದ್ದ ಸಂಘಟನೆ ಎಲ್ಲಿ ಹೋಯ್ತು? ನಮ್ಮಂತ ಸಹಸ್ರಾರು ಕಾರ್ಯಕರ್ತರಿಗೆ ದೇಶಭಕ್ತಿಯ ಬೀಜಬಿತ್ತಿ, ಸಾಮಾಜಿಕ ಕಳಕಳಿಯ ಪರಿಚಯ ಮಾಡಿಸಿ ತಮ್ಮ ಜೀವನವನ್ನು ತಾಯಿ ಭಾರತಿಯ ಚರಣಕ್ಕೆ ಸಮರ್ಪಿಸಿ ಜೀವಿತದ ಕೊನೆಯ ಗಳಿಗೆಯಲ್ಲಿರುವ ನನ್ನ ಅಣ್ಣಂದಿರೇ, ಇನ್ನೂ ಕುಸಿಯುವ ಮುನ್ನ ವಿವೇಕ ಹೇಳಿ.

Rating
No votes yet

Comments