ಚಾರ್ ಧಾಮ್ ಪ್ರವಾಸ- ಕೇದಾರನಾಥ್ - ೨

ಚಾರ್ ಧಾಮ್ ಪ್ರವಾಸ- ಕೇದಾರನಾಥ್ - ೨

ಕೇದಾರೇಶ್ವರನ ದೇವಸ್ಥಾನ ಹಿಮಾಲಯದಲ್ಲೇ ಅತಿ ಪ್ರಾಚೀನವಾದ ಮತ್ತು ಅತಿ ದೊಡ್ಡದಾದ, ಹಾಗೂ ಸುಂದರವಾದದ್ದು. ಇದನ್ನು ಒಂದೇ ಸಮನಾಗಿ ಕತ್ತರಿಸಿದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಕಟ್ಟಡದ ಮೇಲ್ಛಾವಣಿಯಾಗಿ ಹಾಕಿರುವ ಕಲ್ಲಿನ ದೊಡ್ಡ ದೊಡ್ಡ ಚಪ್ಪಡಿಗಳು ದೇವಸ್ಥಾನದ ಹೊರಗಿನ ಚಾವಡಿಯನ್ನು ಪೂರ್ತಿಯಾಗಿ ಮುಚ್ಚುತ್ತದೆ. ದೇವಸ್ಥಾನದ ಒಳಹೊಕ್ಕ ಒಡನೆ, ನಾವು ಪ್ರದಕ್ಷಿಣೆಯಂತೆ ಎಡಪಕ್ಕದಿಂದ ನಡೆದಾಗ, ಆಯುಧದಾರಿಗಳಾಗಿರುವ, ಪಾಂಡವರ ವಿಗ್ರಹಗಳನ್ನು ಒಂದೊಂದಾಗಿ ನೋಡುತ್ತೇವೆ. ಕುಂತಿಯ ವಿಗ್ರಹ ಕೂಡ ಇದೆ. ನಡುವೆ ಈಶ್ವರನ ಎದುರಿಗೆ ನಂದಿ ಇದ್ದಾನೆ. ಈಶ್ವರನಿಗಾಗಿ ಮಂಟಪ, ಗರ್ಭಗುಡಿಯಲ್ಲಿದೆ, ಇದರ ಮಧ್ಯದಲ್ಲಿ ದೊಡ್ಡದಾದ ಗ್ರಾನೈಟ್ ಕಲ್ಲು, ಎತ್ತಿನ ಹಿಂಭಾಗ ಎಂದು ನಂಬಲಾಗುವ, ಭೀಮ ಹಿಡಿದಿಟ್ಟನೆಂದು ಹೇಳಲ್ಪಡುವ ಮತ್ತು ಕೇದಾರೇಶ್ವರನೆಂದು ಪೂಜಿಸಲ್ಪಡುವ ಬಂಡೆ.

ಇದಕ್ಕೆ ಅಲಂಕಾರಿಕವಾಗಿ, ಐದು ಮುಖದ ಈಶ್ವರನ ಮುಖವಾಡ (ಪಂಚ ಕೇದಾರವೆಂದು ಕರೆಯಲ್ಪಡುವ) ಹಾಕಿರುತ್ತಾರೆ. ಇದಕ್ಕೆ ಪೂರಕವಾಗಿ, ಮಹಾಭಾರತದ ಕಥೆ ಹೀಗೆ ಹೇಳತ್ತೆ...ಗುಪ್ತಕಾಶಿಯಿಂದ ತಪ್ಪಿಸಿಕೊಂಡ ಈಶ್ವರ ಕೇದಾರದ ಕಡೆ ಹೊರಟು ಹೋಗುತ್ತಾನೆ, ಆದರೆ ಬೆಂಬಿಡದ ಪಾಂಡವರೂ ಹೋದಾಗ, ಅಲ್ಲಿ ಮೇಯುತ್ತಿದ್ದ, ಎತ್ತುಗಳಲ್ಲಿ ಒಂದಾಗಿ ಶಿವ ಬೆರೆತು ಹೋಗುತ್ತಾನೆ. ಈಶ್ವರನ ಪತ್ತೆ ಹಚ್ಚಲು ಪಾಂಡವರು ಒಂದು ಉಪಾಯ ಮಾಡುತ್ತಾರೆ, ಭೀಮನನ್ನು ಒಂದು ದಿಕ್ಕಿನಲ್ಲಿ ಅಡ್ಡ ಗೋಡೆಯಂತೆ ನಿಲ್ಲಿಸಿಬಿಟ್ಟು, ಉಳಿದವರು ಎಲ್ಲಾ ದಿಕ್ಕುಗಳಿಂದಲೂ, ಎತ್ತುಗಳನ್ನು ಓಡಿಸತೊಡಗುತ್ತಾರೆ, ಆಗ ಆ ಎತ್ತುಗಳೆಲ್ಲಾ, ಭೀಮನ ಕಾಲಿನ ಕೆಳಗೆ ನುಸುಳಿಕೊಂಡು ಹೋಗಬೇಕಾಗತ್ತೆ. ಪರಮೇಶ್ವರನಾದ ಎತ್ತು, ಹಾಗೆ ಹೋಗಲಾಗದೆ ಉಳಿದಾಗ, ಶಿವನನ್ನು ಹಿಡಿಯಬಹುದೆಂದು ಕೊಂಡಿರುತ್ತಾರೆ. ಆದರೆ ಈಶ್ವರ ಭೀಮನ ಹತ್ತಿರವೂ ಹೋಗದೆ, ಭೂಮಿಯಲ್ಲಿ ತಲೆ ಹುದುಗಿಸ ತೊಡಗುತ್ತಾನೆ, ಇದನ್ನು ಕಂಡು ಓಡಿ ಬಂದ ಭೀಮ ಹಿಂದುಗಡೆಯಿಂದ ಈಶ್ವರನನ್ನು ಹಿಡಿದು ಎಳೆಯುತ್ತಾನೆ. ಆಗ ಅವನ ಕೈಯಲ್ಲಿ ಉಳಿದ ಎತ್ತಿನ ಹಿಂಭಾಗವೇ, ಈ ಕೇದಾರೇಶ್ವರನೆಂದು ಪೂಜಿಸಲ್ಪಡುತ್ತಾನೆ............ ಈಶ್ವರನ ದರ್ಶನದ ನಂತರ ಬಂದು ನಾವು ನಂದಿಯ ಪ್ರದಕ್ಷಿಣೆ ಮಾಡಿ, ಹೊರಗೆ ಬಂದೆವು. ಪ್ರಾಕಾರದಲ್ಲೇ ಇರುವ ಅನ್ನಪೂರ್ಣ, ನವದುರ್ಗ ದೇವಸ್ಥಾನಗಳನ್ನೂ ನೋಡಿದೆವು. ಹೊರಗಡೆ ಇರುವ ಗಣೇಶ ಮತ್ತು ನಂದಿ ಕೂಡ ಸುಂದರವಾಗೇ ಇದೆ. ದೇವಸ್ಥಾನದ ಪ್ರಾಕಾರದಲ್ಲಿ ೨೫ - ೩೦ ಜನ ನಾಗಾಸಾಧುಗಳು ಎಂತಹುದೋ ಹೋಮ ಮಾಡುತ್ತಾ ಕುಳಿತಿದ್ದರು. ಮೈಗೆಲ್ಲಾ ಬೂದಿ, ಕೇಸರಿ ಬಳಿದುಕೊಂಡು, ಬರಿಯ ಕೌಪೀನದಲ್ಲಿ ನವಿಲಿನ ಗರಿಯ ಛಾಮರದಂತಹುದೇನನ್ನೋ ಕೈಯಲ್ಲಿ ಹಿಡಿದುಕೊಂಡಿದ್ದ ಅವರು ಸ್ವಲ್ಪ ಭಯ ಹುಟ್ಟಿಸುವಂತಿದ್ದರು. ಅಲ್ಲಿಗೆ ಬರುವ ಎಲ್ಲಾ ಯಾತ್ರಿಕರನ್ನೂ ಕರೆದು ನವಿಲುಗರಿಯಿಂದ ತಲೆ ಮೇಲೆ ರಪ್ಪೆಂದು ಬಾರಿಸಿ (ಅದವರ ಆಶೀರ್ವಾದದ ರೀತಿ) ದುಡ್ಡು ಕೇಳುತ್ತಿದ್ದರು. ಇಲ್ಲಿ ಬರಿಯ ಸ್ವದೇಶೀಯರಲ್ಲದೆ, ವಿದೇಶೀಯರೂ ಕೂಡ ಬೆರಳೆಣಿಕೆಯಷ್ಟಿದ್ದರು. ನಾವು ಮೇಲೆ ಬರುವಾಗ, ಸೇತುವೆಯ ಹತ್ತಿರ, ಒಬ್ಬ ತೇಜೋಮಯನಾದ ಬಿಳಿಯ ಅಂಚಿನ ಪಂಚೆ, ಬಿಳಿಯ ಸ್ವೆಟರ್, ಮೇಲೆ ಬಿಳಿಯ ಧೋತ್ರ ಹೊದ್ದು, ಉದ್ದ ಕೂದಲು, ಗಡ್ಡ, ಮೀಸೆಯ ಹೊತ್ತಿದ್ದ ತರುಣನನ್ನು ನೋಡಿದ್ದೆವು. ಈಗ ದೇವಸ್ಥಾನದ ಹೊರಗೆ ಬಂದು ನೋಡಿದರೆ, ಆ ತರುಣ ಲಕ್ಷಣವಾಗಿ ಪದ್ಮಾಸನ ಹಾಕಿ ಕುಳಿತು ಧ್ಯಾನಸ್ಥನಾಗಿದ್ದ. ಪಕ್ಕದಲ್ಲೇ ಕುಳಿತು ಭಿಕ್ಷೆ ಬೇಡುತ್ತಿದ್ದವನಾಗಲೀ, ಯಾತ್ರಿಕರಾಗಲೀ, ಅವನ ತನ್ಮಯತೆಯನ್ನು ಕೆಡಿಸಲು ಅಶಕ್ಯರಾಗಿದ್ದರು.

ಶ್ರೀ ಆದಿ ಶಂಕರಾಚಾರ್ಯರು ಕೇದಾರದಲ್ಲೇ, ಐಕ್ಯರಾದರೆಂಬ ಪ್ರತೀತಿ ಇದೆ. ದೇವಸ್ಥಾನದ ಹಿಂಭಾಗದಲ್ಲಿ, ಶ್ರೀ ಶಂಕರಾಚಾರ್ಯರ ಸಮಾಧಿ ಇದೆಯೆಂದು ಕೇಳಿದೆವು, ಆದರೆ ಎಲ್ಲಿ ಎಂದು ನಮಗೆ ಗೊತ್ತಾಗಲಿಲ್ಲ. ಇಲ್ಲಿಂದ ಮತ್ತೆ ೫ ಕಿ ಮೀ ನಷ್ಟು ಮುಂದೆ ಹೋದರೆ, ಅವರು ತಪಸ್ಸು ಮಾಡಿದ ಗುಹೆ ಇದೆಯೆಂದು ಹೇಳಿದರು. ನಾವು ದೇವಾಲಯದ ಕಳಸ ದರ್ಶನ ಮಾಡಿ, ಚಿತ್ರಗಳನ್ನು ತೆಗೆದುಕೊಂಡು, ಕೆಳಗಿಳಿದು, ಚಪ್ಪಲಿಗಳನ್ನು ಬಿಟ್ಟಿದ್ದ ಅಂಗಡಿಯ ಹತ್ತಿರ ಬಂದೆವು. ನೆನೆದಿದ್ದ ನಾವು ಗಡ ಗಡ, ನಮ್ಮ ಹಲ್ಲುಗಳು ಕಟ ಕಟನೆಂದು ಜಂಟಿಯಾಗಿ ಸಂಗೀತ ಆರಂಭಿಸಿ ಬಿಟ್ಟಿದ್ದವು. ಅಷ್ಟು ಹೊತ್ತಿಗಾಗಲೇ ಚೆನ್ನಾಗಿ ಕತ್ತಲಾಗಿ ೬.೩೦ ಆಗಿ ಹೋಗಿತ್ತು. ಮತ್ತೆ ವಾಪಸ್ಸು ಇಳಿಯುವ ತ್ರಾಣ / ಧೈರ್ಯವಿಲ್ಲದ ನಾವು ಅಲ್ಲೇ ರಾತ್ರಿ ಇರಲು ಒಂದು ವ್ಯವಸ್ಥೆ ಮಾಡಿಕೊಂಡೆವು. ಬಿಸಿ ರೊಟ್ಟಿ, ಧಾಲ್ ತಿಂದು ಬಿಸಿ ನೀರು ಕುಡಿದು, ಬಂದು ಮಲಗಿದರೆ, ಹಾಸಿಗೆ, ಹೊದೆಯುವ ರಜಾಯಿ ಎಲ್ಲವೂ ಮಂಜುಗಡ್ಡೆಗಳಾಗಿದ್ದವು. ನಾವು ಹಾಕಿದ್ದ ಎಲ್ಲಾ ಉಣ್ಣೆಯ ಬಟ್ಟೆಗಳ ಸಮೇತ, ಹಾಗೇ ಉರುಳಿ, ನಿದ್ದೆ ಮಾಡಿದೆವು. ಒಂದು ಪಕ್ಕದಿಂದ ಇನ್ನೊಂದು ಪಕ್ಕ ತಿರುಗಿದರೆ, ಮಂಜಿನ ಮೇಲೆ ಮೈಯಿಟ್ಟಂತಿತ್ತು. ಆ ದಿನ ಬಹುಶ: ಅಲ್ಲಿಯ ಹವಾಮಾನ ೩ - ೪ ಡಿಗ್ರಿಯಿತ್ತು. ಬೆಳಗಿನ ಜಾವ ೪ ಘಂಟೆಗೇ ಬಿಸಿನೀರಿಗಾಗಿ ಹೋಟೆಲಿನ ಹುಡುಗ ದಬ ದಬಾಂತ ಬಾಗಿಲು ತಟ್ಟಿದಾಗ, ಯಾರಿಗೂ ಏಳುವ ತ್ರಾಣ, ಮನಸು ಎರಡೂ ಇರಲಿಲ್ಲ. ಆದರೂ ಎದ್ದು ಬಾಗಿಲು ತೆಗೆದು, ೧ ಬಕೆಟ್ ಬಿಸಿ ನೀರಿಗೆ ೩೦ ರೂ ಕೊಟ್ಟು, ಕೊಂಡು, ಮುಖ ತೊಳೆದು, ಮತ್ತೆ ತಯಾರಾಗಿ ನಾವು ಕೆಳಗಿಳಿಯಲು ಶುರು ಮಾಡಿದೆವು. ಆಗಿನ್ನೂ ೫ ಘಂಟೆಯ ಮುಂಜಾವು, ಆದರೆ ಸೂರ್ಯದೇವ ತನ್ನ ದರ್ಶನ ಕೊಡದಿದ್ದರೂ, ಬೆಳಕಂತೂ ಸಾಕಷ್ಟು ಇತ್ತು. ಸುಮಾರು ೧ ೧/೨ ಕಿ ಮೀ ಸರಸರ ನಡೆದ ನಂತರ, ಬಿಸಿ ಬಿಸಿ ಚಹಾ ಕುಡಿದು, ಬಿಸ್ಕತ್ತು ತಿಂದು ಮತ್ತೆ ಓಡುತ್ತಾ ಇಳಿದೆವು. ಸುಮಾರು ೭.೪೫ರ ಹೊತ್ತಿಗೆ, ನಾವು ರಾಮಬಾರ ಅಂದರೆ ಅರ್ಧ ದಾರಿ ೭ ಕಿ.ಮೀನಷ್ಟು ಇಳಿದಾಗಿತ್ತು. ಮತ್ತೆ ನಿನ್ನೆ ಊಟ ಮಾಡಿದ ಅದೇ ಅನ್ನಪೂರ್ಣ ಭೋಜನಾಲಯದಲ್ಲಿ ರೊಟ್ಟಿ, ನೂಡಲ್ಸ್ ತಿಂದು, ಚಹಾ ಕುಡಿದು, ಹೊರಟು ೧/೨ ಕಿ ಮೀ ನಡೆಯುವಷ್ಟರಲ್ಲಾಗಲೇ ನಮಗೆ ತ್ರಾಣವಿಲ್ಲದಂತಾಗಿತ್ತು. ಅಲ್ಲಿಂದ ಪ್ರತಿ ಹೆಜ್ಜೆಯೂ, ತ್ರಾಸದಾಯಕವೇ ಆಗಿತ್ತು. ಹತ್ತುವಾಗ ಮಾಡಿದಂತೆ ಮತ್ತೆ ಕಂಡ ಎಲ್ಲಾ ಆಸನಗಳ ಉಪಯೋಗ ಹಾಗೂ ಜಲಜೀರದ ಪಾನೀಯ ನಮ್ಮ ಹುರುಪನ್ನು ಅಲ್ಪ ಸ್ವಲ್ಪ ಏರಿಸುತ್ತಿತ್ತು. ಬೆಳಗಿನ ಸೂರ್ಯ ಪ್ರಖರನಾಗೇ ಇದ್ದನಾದ್ದರಿಂದ, ಸೆಕೆ ಶುರುವಾಗಿತ್ತು. ನಾವು ತೊಟ್ಟಿದ್ದ ಉಣ್ಣೆಯ ಉಡುಪುಗಳನ್ನು ಒಂದೊಂದಾಗಿ, ತೆಗೆಯಲಾರಂಭಿಸಿದ್ದೆವು. ಸಾಲದ್ದಕ್ಕೆ, ನಾನೂ, ನನ್ನತ್ತಿಗೆ ಇಬ್ಬರೂ... ’ಒಂದೊಂದಾಗೀ ಜಾರಿದರೆ..’ ಎಂದು ಕೆಟ್ಟದಾಗಿ, ಜೋರಾಗಿ ಹಾಡುತ್ತಾ, ನಗುತ್ತಾ ಬರುತ್ತಿದ್ದಾಗ, ನಮ್ಮ ಕನ್ನಡ ಕೇಳಿ, ಒಂದು ಸಂಸಾರ, ಆಂಟೀ.. ಹೇಗಿತ್ತು... ಹತ್ತಿದ್ದು.. ಕಷ್ಟನಾ ಎಂದು ಮಾತನಾಡಿಸಿದರು. ಅವರಿನ್ನೂ ೪ ಕಿ ಮೀ ಹತ್ತಿದ್ದರಷ್ಟೆ ! ಅವರನ್ನು ಹುರಿದುಂಬಿಸಿ, ನಾವು ಕೆಳಗಿಳಿದೆವು. ನಮಗೆ ಹತ್ತುವಾಗಲೂ ಕೂಡ ಹಲವಾರು ಕನ್ನಡಿಗರು ಸಿಕ್ಕಿದ್ದರು. ದೂರದ ಕೇದಾರದಲ್ಲಿ ನಮ್ಮ ಕನ್ನಡ ಕೇಳಿ ತುಂಬಾ ಸಂತೋಷವಾಗಿತ್ತು. ನಾವು ಕಂಡ, ಕಾಣದ, ಕೇಳಿದ, ಕೇಳದ ಎಲ್ಲಾ ದೇವರುಗಳನ್ನೂ ಕರೆಯುತ್ತಾ, ಗೌರಿ ಕುಂಡದವರೆಗೆ ಬಂದು ತಲುಪಿದಾಗ ಜಗತ್ತೇ ಗೆದ್ದಷ್ಟು ಸಂತೋಷ, ಸಮಾಧಾನ ಸಿಕ್ಕಿತ್ತು. ಆದರೆ ಗೌರಿ ಕುಂಡದಿಂದ ವಾಹನ ನಿಲುಗಡೆಯ ತನಕ ಇಳಿಯುವಷ್ಟರಲ್ಲಿ ನಮ್ಮ ತಲೆಯೇ ಕೆಟ್ಟು ಹೋದ ಅನುಭವವಾಗಿತ್ತು. ನಮ್ಮ ಇನೋವ ಗಾಡಿ ಕಂಡಾಗ, ಅತ್ಯಂತ ಖುಷಿಯಾಗಿತ್ತು. ಅಬ್ಬಾ....! ಎನ್ನುತ್ತಾ ಎಲ್ಲರೂ ಹತ್ತಿ ಕುಳಿತೆವು. ನಮ್ಮತ್ತೆಯವರು ಇಡೀ ರಾತ್ರಿ ನಮ್ಮ ವಾಹನ ಚಾಲಕ ಪೂರನ್ ಸಿಂಗ್ ನ ರಕ್ಷಣೆಯಲ್ಲಿ, ಗಾಡಿಯಲ್ಲಿ ಕುಳಿತೇ ಕಳೆದಿದ್ದರು. ಕೇದಾರದ ಬೆಟ್ಟ ಹತ್ತುವ ಆಸೆ ಇದ್ದವರು, ಆರೋಗ್ಯ ಕಾಪಾಡಿಕೊಂಡು, ಸಧೃಡರಾಗಿ ಇರಬೇಕು. ಸ್ವಲ್ಪ ವಯಸ್ಸಾದವರೂ, ಮಕ್ಕಳೊಂದಿಗರೂ, ನಡೆಯುವ ಅಭ್ಯಾಸ ಇಲ್ಲದವರೂ, ಈ ಪ್ರಯತ್ನ ಮಾಡದಿರುವುದೇ ಉತ್ತಮ. ಉತ್ತಮ ದರ್ಜೆಯ ಶೂ ಇಲ್ಲದೇ ನಡೆಯುವುದು ತುಂಬಾ ಕಷ್ಟ. ಆದರೆ ಕೆಲವು ಮಹಾರಾಷ್ಟ್ರದ ಮಹಿಳೆಯರು, ಛಳಿಯಲ್ಲಿ ನಡುಗುತ್ತಾ ಹವಾಯಿ ಚಪ್ಪಲಿಗಳಲ್ಲಿ ಹತ್ತುತ್ತಿದ್ದರು. ನಂಬಲಸಾಧ್ಯವಾಗಿತ್ತು.........!!! ೫೦೦೦ ರೂ ಕೊಟ್ಟು ಡೋಲಿ ತೆಗೆದುಕೊಂಡರೆ, ರಸ್ತೆಯಲ್ಲಿ ಅವರಿಗೆ ಚಹ, ನೀರು, ಊಟ ಎಲ್ಲಾ ನಾವು ಕೊಡಿಸಬೇಕಾಗುತ್ತದೆ. ರಾತ್ರಿ ಅಲ್ಲೇ ಉಳಿದರೆ, ನಾವು ಅವರಿಗೂ ಏನಾದರೂ ವ್ಯವಸ್ಥೆ ಮಾಡಿಕೊಡ ಬೇಕಾಗುತ್ತದೆ. ಇದಕ್ಕೆಲ್ಲಾ ನಾವು ಕಡಿಮೆಯೆಂದರೆ ಮತ್ತೊಂದು ಸಾವಿರ ಆದರೂ ಇಟ್ಟುಕೊಂಡಿರಬೇಕು. ಹತ್ತಲು ಆಗದವರು, ಬೇಕಾದರೆ ಮುಂಚೆಯೇ ಅಂತರ್ಜಾಲದ ಮೂಲಕ ಹೆಲಿಕಾಪ್ಟರ್ನಲ್ಲಿ ಜಾಗ ಕಾದಿರಿಸಿಕೊಳ್ಳಬಹುದು. ಆದರೆ ಹೆಲಿಪ್ಯಾಡ್ ನಿಂದ ಕೂಡ ಸುಮಾರು ೧ ಕಿ ಮೀ ನಷ್ಟು ದೂರ ದೇವಸ್ಥಾನಕ್ಕೆ ನಡೆಯಬೇಕಾಗುವುದು. ನಾವು ಏರಿದ ದಿನ ಮಧ್ಯಾನ್ಹ ೩ ಘಂಟೆಗೇ ಬೆಳಕು ಕಮ್ಮಿಯಾಗಿ ಹೆಲಿಕಾಪ್ಟರ್ ಸಂಚಾರ ಸ್ಥಗಿತಗೊಂಡಿತ್ತು. ನಾವು ಇಳಿದು ಬರುವ ಹೊತ್ತಿಗಾಗಲೇ ೧ ಘಂಟೆಯಾಗಿತ್ತಾದ್ದರಿಂದ ನೆಟ್ಟಗೆ ’ವಿಶ್ವನಾಥ್’ ಹೋಟೆಲ್ ತಲುಪಿ, ಲಗ್ಗೇಜು ಎತ್ತಿಕೊಂಡು, ಚೌವಾನ್ ಭೋಜನಾಲಯದಲ್ಲಿ ರೊಟ್ಟಿ ತಿಂದು, ’ಪೀಪಲ್ಕೋಟಿ’ ಎನ್ನುವ ಜಾಗಕ್ಕೆ ಹೊರಟೆವು. ನಾವು ಕತ್ತಲಾಗುವ ಮುನ್ನ ಅಲ್ಲಿಗೆ ತಲುಪಿಕೊಳ್ಳಬೇಕಾಗಿತ್ತು. ಮುಂದುವರೆಯುವುದು................................ http://www.sampada.net/blog/shamala/25/06/2009/21939

Rating
No votes yet

Comments