ಪಬ್ಲಿಕ್ ಮೆಮೊರಿ ಈಸ್ ಶಾರ್ಟ್

ಪಬ್ಲಿಕ್ ಮೆಮೊರಿ ಈಸ್ ಶಾರ್ಟ್

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದು ಏಳನೇ ದಶಕದಲ್ಲಿ ನಾವಿದ್ದೇವೆ. ಬ್ರಿಟಿಶರ ಆಡಳಿತವನ್ನು ದೇಶ ಕಂಡಿದೆ. ರಾಜ ಮಹಾರಾಜರ ಆಡಳಿತವನ್ನೂ ಕಂಡಿದೆ.ನಾವೀಗ ನಿಜವಾದ ಪ್ರಜಾಪ್ರಭುತ್ವದಲ್ಲಿದ್ದೇವೆ. ಇಲ್ಲಿ ಪ್ರಜೆಯೇ ಪ್ರಭು. ತತ್ವ ಚೆನ್ನಾಗಿಯೇ ಇದೆ.ನಮ್ಮದು ನಿಜವಾದ ಪ್ರಜಾ ತಂತ್ರ ವ್ಯವಸ್ಥೆ.
ಆರು ದಶಕಗಳಲ್ಲಿ ನಮ್ಮ ದೇಶದ ಅಭಿವೃದ್ಧಿಯ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕುಗ್ರಾಮಗಳಿಗೆ ವಿದ್ಯುತ್, ದೂರವಾಣಿ, ಮನೆಬಾಗಿಲಿಗೆ ನಲ್ಲಿ ನೀರು ತಲುಪಿದೆ. ರಸ್ತೆಗಳಾಗಿವೆ.ಗುಡಿಸಿಲಿನ ಜಾಗದಲ್ಲಿ ಮಹಲುಗಳು ಎದ್ದು ನಿಂತಿವೆ. ಆಸ್ಪತ್ರೆಗಳು, ಶಾಲೆಗಳು, ಕೈಗಾರಿಕೆಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಣುತ್ತವೆ. ದೇಶಕ್ಕೆ ಸ್ವಾತಂತ್ರ್ಯ ಬಾರದಿದ್ದರೆ ಈ ಕೆಲಸಗಳು ಆಗುತ್ತಿರಲಿಲ್ಲವೇ? ಪ್ರಶ್ನೆ ಹಾಕಿಕೊಂಡರೆ, ಕಾಲಕ್ಕೆ ತಕ್ಕಂತೆ ಬದಲಾವಣೆಗಳಾಗುತ್ತಿತ್ತು ಎನಿಸದೆ ಇರದು. ಇರಲಿ, ಈ ಬರಹದ ಉದ್ಧೇಶ ಅಭಿವೃದ್ಧಿಯ ವಿಚಾರವಲ್ಲ. ನಮ್ಮ ಪ್ರಕೃತಿಯ ನಾಶದ ವಿಚಾರವೂ ಅಲ್ಲ. ಆದರೆ.........
ಬ್ರಿಟಿಶರ ಕಾಲದಲ್ಲಿ ದೇಶವನ್ನು ಆಳುವ ಅರಸರ ಸಂಖ್ಯೆ ಎಷ್ಟಿತ್ತು? ಈಗ ನಮ್ಮನ್ನಾಳುವವರ ಸಂಖ್ಯೆ ಎಷ್ಟು ? ಎಂದು ಯೋಚಿಸಿದಾಗ ............
ಬ್ರಿಟಿಶರಾಗಲೀ, ರಾಜ ಮಹಾರಾಜರಾಗಲೀ ಬೆರಳೆಣಿಕೆಯಲ್ಲಿದ್ದು ಅವರು ರಾಜರು, ಪ್ರಜೆಗಳು ಗುಲಾಮರು. ಕೆಲವರದ್ದು ಮಾತ್ರ ವೈಭೋಗದ ಜೀವನ.ಅವರು ನಮ್ಮನ್ನಾಳುವ ಅರಸರು.
ಇಂದು ಪ್ರಜಾ ಪ್ರಭುತ್ವದಲ್ಲಿ...?
ಹೌದು....ಲಾಲ್ ಬಹದ್ದುರ್ ಶಾಸ್ತ್ರಿಯವರಂತಹ ಪ್ರಧಾನ ಮಂತ್ರಿ, ವಿಶ್ವೇಶ್ವರಯ್ಯ ನವರಂತಹ ಅಧಿಕಾರಿಗಳ ಸಾಲಿಗೆ ಸೇರಿದವರೆಷ್ಟು ಮಂದಿ? ಅವರ ಸರಳ ಜೀವನ, ಸಚ್ಚಾರಿತ್ರ್ಯ, ಸಜ್ಜನಿಕೆ..........
ಅವರ ಸಾಲಿಗೆ ಸೇರಿದವರ ಸಂಖ್ಯೆ ಕ್ಷೀಣಿಸುತ್ತಾ ಬಂದು ಈಗ ಶೂನ್ಯ ಸ್ಥಿತಿ ತಲುಪಿದ್ದಾಗಿದೆ. ಅದರಲ್ಲೂ ಎಲೆಮರೆ ಕಾಯಿಯಂತೆ ಒಬ್ಬಿಬ್ಬರಿದ್ದರೆ ತಾಯಿ ಭಾರತಿಯೇ ಧನ್ಯಳು.
ಸ್ವಾತಂತ್ರ್ಯೋತ್ತರ ಅರು ದಶಕಗಳ ನಮ್ಮ ಅನುಭವವೇನು? ಅನುಭವ ಹೇಳುವವರೇ ಇಲ್ಲ. ಕೇಳುವ ಮನಸ್ಸೂ ಇಲ್ಲ. ಒಂದು ವಿಚಾರವನ್ನು ಯಾರೂ ಕೇಳುವ ಗೋಜಿಗೇ ಹೋಗುವುದಿಲ್ಲ. ನಾವೇ ಚುನಾಯಿಸಿರುವ ಶಾಸಕರು, ಲೋಕಸಭಾ ಸದಸ್ಯರಲ್ಲಿ ಬಹುಪಾಲು ಮಂದಿ ಕೊಟ್ಯಾದೀಶರು. ಹಲವರಂತೂ ಸಾವಿರ ಸಾವಿರ ಕೋಟಿ ಆಸ್ತಿಯ ಒಡೆಯರು.ಇವರಿಗೆಲ್ಲಾ ಎಲ್ಲಿಂದ ಬಂತು ಈ ಅಸ್ತಿ? ಯಾವುದೇ ಪಕ್ಷಗಳು ಈ ಅಪವಾದಕ್ಕೆ ಹೊರತಗಿಲ್ಲ.ಒಬ್ಬಿಬ್ಬರು ಆಳುತ್ತಿದ್ದ ಜಾಗದಲ್ಲಿ ಈಗ ಸಾವಿರಾರು ಮಂದಿ ಅರಸರು!! ಒಂದೆರಡು ದಶಕಗಳಮುಂಚೆ ಬೆರಳೆಣಿಕೆಯ ಪ್ರಾಮಾಣಿಕ ರಾಜಕಾರಣಿಗಳನ್ನು ಕಾಣಬಹುದಿತ್ತು. ಬ್ರಷ್ಟರ ಮಧ್ಯೆ ಇಂತಹ ಕೆಲವರನ್ನು ದೇಶದ ಜನರು ದೇವರ ಸಮಾನ ಕಂಡಿದ್ದರು. ಬರಬರುತ್ತಾ ಈ ಕೆಲವರೂ ಇಲ್ಲವಾದರು. ಇಡೀ ರಾಜಕಾರಣ ಒಂದು ಹೊಲಸು ಮನೆಯಾಯ್ತು. ದುಡ್ದಿದ್ದವ ರಾಜಕಾರಣ ಮಾಡಬಹುದು. ಗೆದ್ದು ಮತ್ತೆ ಸಂಪಾದಿಸ ಬಹುದು.ಕೋಟಿ ಕೋಟಿ ಲೂಟಿ ಹೊಡೆಯಬಹುದು, ಎಂಬ ಸಮಾನ್ಯ ಅಭಿಪ್ರಾಯಕ್ಕೆ ಜನರು ಬಂದು ನಿಂತಿದ್ದಾರೆ.
ರಾಜಕಾರಣಕ್ಕೆ ಇಳಿಯುವ ಮುಂಚೆ ಈಗ್ಗೆ ಮೂರು ನಾಲ್ಕು ದಶಕಗಳಲ್ಲಿ ಮೋಟಾರ್ ಬೈಕ್ ಹೊಂದಿರದ ಈ ನಮ್ಮ ದೇಶಸೇವಕರು ಈಗ ಸಾವಿರ ಸಾವಿರ ಕೋಟಿ ಆಸ್ತಿಯ ಒಡೆಯರು. ಇದಕ್ಕೆ ಪಕ್ಷಬೇಧವಿಲ್ಲ. ಅವರಿವರ ಮೇಲೆ ಪತ್ರಿಕೆಗಳಲ್ಲಿ , ಮಾಧ್ಯಮಗಳಲ್ಲಿ ಆಪಾದನೆಯ ಸುರಿಮಳೆ ಗೈಯ್ಯುವವರು ಒಂದು ದಿನ ಮತ್ತೆ ಅಕ್ಕಪಕ್ಕ ಕುಳಿತು ಸ್ನೇಹಿತರಾಗಿ ಬಿಡುವುದನ್ನು ದೇಶವು ಕಣ್ಮುಚ್ಚಿ ನೋಡುತ್ತದೆ. ಅದಕ್ಕೇ ಹೇಳುವರು ಪಬ್ಲಿಕ್ ಮೆಮೊರಿ ಈಸ್ ಶಾರ್ಟ್.

 

ಈಗ ಇಡೀ ದೇಶವು ಅಭಿವೃದ್ಧಿಯ ಜಪವನ್ನು ಮಾಡುತ್ತದೆ. ಅಂದರೆ ಅಭಿವೃದ್ಧಿಗಾಗಿ ಹೊರದೇಶಗಳಿಂದ ಕೋಟಿ ಕೋಟಿರೂಪಾಯಿ ಸಾಲತಂದು ಇಲ್ಲಿ ರಸ್ತೆ, ನೀರು, ವಿದ್ಯುತ್, ಎಲ್ಲಾ ಅಭಿವೃದ್ಧಿ ಯ ಮಾತು ಕೇಳುತ್ತದೆ. ಅಭಿವೃದ್ಧಿ ಎಷ್ಟು ಪಾಲುಆಗುತ್ತದೋ ಗೊತ್ತಿಲ್ಲ ನಮ್ಮ ರಾಜಕಾರಣಿಗಳು/ಅಧಿಕಾರಿಗಳಂತೂ ಅಭಿವೃದ್ಧಿಯಾಗುತ್ತಾರೆ. ಇಂದಿಗೂ ಹರುಕುಬಟ್ಟೆಯುಟ್ಟು  ಕೂಲಿಮಾಡುವವ, ಕೆಸರು ಗದ್ದೆಯಂತಹ ರಸ್ತೆಗಳು, ಒಂದುಕೊಡ ನೀರಿಗಾಗಿ ಕೊಡಗಳನ್ನು ಹೊತ್ತು ಸಾಲಗಟ್ಟಿ ನಿಲ್ಲುವ ಹೆಂಗಸರು, ಈ ಎಲ್ಲಾ ದೃಶ್ಯಗಳು ಕಾಣುತ್ತಲೇ ಇರುತ್ತವೆ. ಅಭಿವೃದ್ಧಿಯ ಹೆಸರು ಚಾಲ್ತಿಯಲ್ಲಿರುತ್ತದೆ. ಇಂತಹಾ ಚಿಂತನೆಗೆ "ಅಯ್ಯೋ ಪೆದ್ದೇ ನಿನಗೇನೂ ಬೇರೆ ಕೆಲಸವಿಲ್ವಾ?" ಎನ್ನುವವರು ಬಹಳ ಮಂದಿ.

 

 

 

Rating
No votes yet

Comments