ಕಾಳರಾತ್ರಿಯಲ್ಲಿ ಬಂದ ಕುಂಟು ಭಾಗ್ಯ!

ಕಾಳರಾತ್ರಿಯಲ್ಲಿ ಬಂದ ಕುಂಟು ಭಾಗ್ಯ!

ಜನರೇಟರ್ ರೂಮ್ ಈಗ ಆ ಕಾರ್ಖಾನೆಯ ಎಲ್ಲಾ ವಿಚಿತ್ರ ಆಗು ಹೋಗುಗಳಿಗೆ ಕೇಂದ್ರ ಬಿಂದುವಾಗತೊಡಗಿತ್ತು.  ಹಾಗೆ ಜಯವಂತನೊಡನೆ ಅಲ್ಲಿಗೆ ಬಂದ ನನಗೆ ಅಲ್ಲಿ ರಾತ್ರಿ ಪಾಳಿಯಲ್ಲಿರಬೇಕಾಗಿದ್ದ ಬಂಡಿ ನಾಗರಾಜ ಕಾಣಿಸಲಿಲ್ಲ.  ಅಲ್ಲಿ ಬಿದ್ದಿದ್ದ ಖಾಲಿ ಕುರ್ಚಿಯನ್ನೊಮ್ಮೆ ನೋಡಿ, ಹಾಗೇ ಸುತ್ತ ಮುತ್ತ ನೋಡುತ್ತಿದ್ದಾಗ, ದೂರದಲ್ಲಿ ಎದೆಯೆತ್ತರ ಬೆಳೆದಿದ್ದ ಹುಲ್ಲಿನ ನಡುವೆ ಏನೋ ಸರಿದಾಡಿದಂತೆ ಕಂಡಿತು, ಮತ್ತೊಮ್ಮೆ ನೋಡಿದೆ, ಹೌದು, ಆ ಜಾಗದಲ್ಲಿ ಮಾತ್ರ ಹುಲ್ಲು ಅಲುಗಾಡುತ್ತಿದೆ! ಜಯವಂತನತ್ತ ನೋಡಿದರೆ ಅವನಾಗಲೇ ಭಯದಿಂದ ಕಾಲಿಗೆ ಬುದ್ಧಿ ಹೇಳುವ ಅವಸರದಲ್ಲಿದ್ದ.  ಅವನಿಗೆ ಧೈರ್ಯ ತುಂಬಿ ಅಲ್ಲಿ ಅದೇನಾಗುತ್ತಿದೆ, ನೋಡಲೇ ಬೇಕೆಂಬ ಹುಂಬ ಧೈರ್ಯದಿಂದ ಅತ್ತ ನಿಶ್ಯಬ್ಧವಾಗಿ ಹೆಜ್ಜೆ ಹಾಕಿದೆ.  ಹತ್ತಿರ ಹೋದಂತೆಲ್ಲಾ ನನ್ನಲ್ಲಿ ಕುತೂಹಲ ಹೆಚ್ಚಾಗುತ್ತಿತ್ತು, ಕೊನೆಗೂ ಆ ಸ್ಥಳ ತಲುಪಿ, ನನ್ನ ಕೈಲಿದ್ದ ಟಾರ್ಚಿನ ಬೆಳಕಿನಲ್ಲಿ ಅಲ್ಲಿನ ದೃಶ್ಯ ನೋಡಿದಾಗ ಸ್ತಂಭೀಭೂತನಾಗಿ ನಿಂತು ಬಿಟ್ಟೆ.  ಜನರೇಟರ್ ರೂಮಿನ ಬಳಿ ಇರಬೇಕಾಗಿದ್ದ ಬಂಡಿ ನಾಗರಾಜ, ಅಲ್ಲಿ  ಮೂರ್ಛೆ ರೋಗ ಬಂದವರಂತೆ ಕೈ ಕಾಲು ಒದರುತ್ತಾ ಬಿದ್ದಿದ್ದ.  ಜಯವಂತನನ್ನು ಓಡಿಸಿ, ನೀರು ತರಿಸಿ ಅವನ ಮುಖದ ಮೇಲೆ ಚಿಮುಕಿಸಿದಾಗ ಆ ಭಯಂಕರ ಒದರಾಟ ನಿಲ್ಲಿಸಿ, ವಾಸ್ತವಕ್ಕೆ ಬಂದವನು ಕಣ್ಣು ಬಿಟ್ಟು ಒಮ್ಮೆ ಸುತ್ತಲೂ ನೋಡಿ, ಆ ಟಾರ್ಚಿನ ಬೆಳಕಿನಲ್ಲಿ ನಮ್ಮನ್ನು ಗುರುತಿಸದೆ, ಒಮ್ಮೆಗೇ ಎದ್ದು ಜೋರಾಗಿ ಚೀತ್ಕರಿಸಿ, ಕಾರ್ಖಾನೆಯ ಮುಖ್ಯ ದ್ವಾರದ ಕಡೆಗೆ ಓಡತೊಡಗಿದ.   ಕಣಿವೆಪುರದಿಂದ ಬರುತ್ತಿದ್ದ ಅವನು ಸಾಕಷ್ಟು ಧೈರ್ಯವಂತನೆಂದೇ ಹೆಸರಾಗಿದ್ದ, ಆದರೆ ಆ ಪರಿಸ್ಥಿತಿಯಲ್ಲಿ ಅವನು ಹಾಗೆ ಹೆದರಿ ಓಡಲು ಕಾರಣವೇನೆಂದು ಅರ್ಥವೇ ಆಗಲಿಲ್ಲ.  ಅದೇ ಸಮಯಕ್ಕೆ ಜಯವಂತ ನಡುಗುವ ಧ್ವನಿಯಲ್ಲಿ ಪಿಸುಗುಟ್ಟಿದ, " ಸಾರ್, ಇದು ದೆವ್ವದ ಕಾಟ, ಈಗಲೂ ನಿಮಗೆ ನಂಬಿಕೆ ಬರುತ್ತಿಲ್ಲವೇ ?  ಬನ್ನಿ ಮೊದಲು ಇಲ್ಲಿಂದ ಹೋಗೋಣ" ಎಂದು ನನ್ನ ಕೈ ಹಿಡಿದು ಬಹುತೇಕ ನನ್ನನ್ನು ಎಳೆದುಕೊಂಡೇ ಮುಖ್ಯದ್ವಾರದಲ್ಲಿದ್ದ ಭದ್ರತಾ ಕಛೇರಿಗೆ ಕರೆದು ತಂದ.

ಅಲ್ಲಿ ಸುಧಾರಿಸಿಕೊಂಡು ಕುಳಿತಿದ್ದ ಬಂಡಿ ನಾಗರಾಜನನ್ನು " ಅದೇನಾಯಿತೋ ನಿನಗೆ, ಏಕೆ ಅಲ್ಲಿ ಬಿದ್ದಿದ್ದೆ, ಮತ್ತೆ ಎದ್ದವನು ನಮ್ಮನ್ನು ನೋಡಿ ಯಾಕೆ ಹಾಗೆ ಓಡಿದೆ?" ಎಂದು ಪ್ರಶ್ನಿಸಿದರೆ, ದೀರ್ಘವಾದ ನಿಟ್ಟುಸಿರೊಂದನ್ನು ಹೊರಚೆಲ್ಲಿದ ಅವನು ನಡೆದ್ದದ್ದನ್ನು ವಿವರಿಸಿದ: ಎಂಟು ಘಂಟೆಗೆ ರಾತ್ರಿ ಪಾಳಿಗೆ ಬಂದವನು ಜನರೇಟರ್ ರೂಮಿನಲ್ಲಿ ಕುಳಿತು ಆರಾಮಾಗಿ ಊಟ ಮಾಡಿ, ಅಣ್ಣಾವ್ರ ಸಿನಿಮಾದ ಹಾಡೊಂದನ್ನು ಗುನುಗಿಕೊಳ್ಳುತ್ತಾ ಒಂದರ ಹಿಂದೊಂದು ಗಣೇಶ ಬೀಡಿ ಸೇದುತ್ತಾ ಕಾಲ ಕಳೆದಿದ್ದಾನೆ, ನಾನು ಜಯವಂತನೊಡನೆ ಅಲ್ಲಿಗೆ ಹೋಗುವ ಸ್ವಲ್ಪ ಸಮಯದ ಮುಂಚೆ, ಕಣಿವೆಪುರದ ಕಂತ್ರಿರಾಮನ ಮಗಳು ಕುಂಟು ಭಾಗ್ಯ ಅಲ್ಲಿಗೆ ಬಂದಳಂತೆ, ಕಾರ್ಖಾನೆಯ ಆವರಣದಲ್ಲಿ ಯಥೇಚ್ಚವಾಗಿ ಬೆಳೆದಿದ್ದ ಹುಲ್ಲನ್ನು ಕೊಯ್ದು ದನಕರುಗಳಿಗೆ ಮೇವಿಗಾಗಿ ಕೊಂಡೊಯ್ಯುತ್ತಿದ್ದ ಕಣಿವೆಪುರದ ಹೆಂಗಸರ ಗುಂಪಿನಲ್ಲಿ ಬರುತ್ತಿದ್ದ, ಸ್ವಲ್ಪ ಕಾಲು ಕುಂಟಾಗಿದ್ದ ಭಾಗ್ಯ, ಸೂಜಿಗಲ್ಲಿನಂತೆ ಕಾರ್ಖಾನೆಯ ಕಾರ್ಮಿಕರನ್ನು ಸೆಳೆಯುತ್ತಿದ್ದಳು.  ಕಾಲೊಂದು ಐಬಾಗಿದ್ದುದರಿಂದಲೂ, ಸಾರಾಯಿಯ ದಾಸನಾಗಿದ್ದ ಕಂತ್ರಿರಾಮನ ಬಡತನ ಹಾಗೂ ಉದಾಸೀನದಿಂದಲೂ ಮದುವೆಯಾಗದೆ ಉಳಿದಿದ್ದ ಅವಳ ಸುತ್ತ ಬಹಳ ರಮ್ಯವಾದ ಕಥೆಗಳು ಹಬ್ಬಿಕೊಂಡಿದ್ದವು.  ಆದರೆ ಆ ಅರ್ಧರಾತ್ರಿಯಲ್ಲಿ ಅವಳು ಕಾರ್ಖಾನೆಯ ಆವರಣಕ್ಕೆ ಬಂದಿದ್ದು ಹೇಗೆ?

ಅದಾಗಲೇ ಊಟ ಮುಗಿಸಿ ಒಂದು ಸಣ್ಣ ನಿದಿರೆಯ ಗುಂಗಿನಲ್ಲಿದ್ದ ಬಂಡಿ ನಾಗರಾಜನಿಗೆ ಎಲೆ ಅಡಿಕೆಯ ವೀಳ್ಯ ನೀಡಿ, ರಸಭರಿತ ಮಾತನಾಡಿ, ಜನರೇಟರ್ ರೂಮಿನ ಹಿಂದಿದ್ದ ಹುಲ್ಲು ಹಾಸಿಗೆಗೆ ಆಹ್ವಾನಿಸಿದಳಂತೆ!  ಅವಳ ಹಿಂದೆ ಕೋಲೆ ಬಸವನಂತೆ ಹೆಜ್ಜೆ ಹಾಕಿದ ಅವನಿಗೆ ಆ ಹುಲ್ಲು ಹಾಸಿಗೆಯ ಹತ್ತಿರ ಹೋಗುತ್ತಿದ್ದಂತೆ ಕುಂಟು ಭಾಗ್ಯ ಮಾಯವಾಗಿದ್ದಾಳೆ, ಅದೆಲ್ಲಿ ಹೋದಳು ಎಂದು ಹಿಂತಿರುಗಿ ನೋಡಿದರೆ ಬಿಳಿ ಸೀರೆಯುಟ್ಟ ಹೆಣ್ಣೊಬ್ಬಳು ತನ್ನಿಬ್ಬರು ಮಕ್ಕಳೊಂದಿಗೆ ಅವನ ಹಿಂದೆ ನಗುತ್ತಾ ನಿಂತಿದ್ದಳಂತೆ!  "ಅಮ್ಮಾ, ಇವುನ್ನ ಬಿಡ್ಬೇಡ, ಕೊಂದ್ಬಿಡು" ಅಂತ ಆ ಮಕ್ಕಳು ಚಪ್ಪಾಳೆ ತಟ್ಟುತ್ತಾ ಕುಣಿಯತೊಡಗಿದರಂತೆ.  ಅಲ್ಲಿಂದ ಓಡಲು ಯತ್ನಿಸಿದ ಬಂಡಿ ನಾಗರಾಜ, ಆ ಹೆಣ್ಣಿನ ಕೈಗಳಲ್ಲಿ ಸಿಕ್ಕಿ, ಅವಳು ಇವನ ಕುತ್ತಿಗೆ ಹಿಸುಕಿ ಇನ್ನೇನು ಅವನ ಕಥೆ ಮುಗಿಯಿತು ಅನ್ನುವ ಸಮಯದಲ್ಲಿ ಅಲ್ಲಿಗೆ ನನ್ನ ಪ್ರವೇಶವಾಗಿತ್ತು.  ನನ್ನನ್ನು ಕಂಡೊಡನೆ ಅವಳು, ಅವಳ ಮಕ್ಕಳು ಬಂಡಿ ನಾಗರಾಜನನ್ನು ಬಿಟ್ಟು ಓಡಿದರಂತೆ, ನಾವು ಮುಖಕ್ಕೆ ನೀರು ಚಿಮುಕಿಸಿ ಎಚ್ಚರಿಸಿದಾಗ ಅವನಿನ್ನೂ ಅದೇ ಗುಂಗಿನಲ್ಲಿದ್ದುದರಿಂದ ಭಯಭೀತನಾಗಿ ಅಲ್ಲಿಂದ ಓಡಿದನಂತೆ!   ಈ ಕಥೆ ಕೇಳಿ ನನಗೆ ಏನು ಮಾಡಬೇಕೆಂದು ತೋಚಲಿಲ್ಲ, ಕಾಲೇಜಿನಲ್ಲಿ ಓದುವಾಗ ಮನ:ಶಾಸ್ತ್ರವನ್ನೋದಿ, ಇಂತಹ ಹಲವಾರು ಸಮಸ್ಯೆಗಳನ್ನು ಬಗೆಹರಿಸಿ, ಸಾಕಷ್ಟು ಮನೋರೋಗಿಗಳನ್ನು ಬೆಂಗಳೂರಿನ ಮನೋರೋಗ ಆಸ್ಪತ್ರೆಗೆ ಕಳುಹಿಸಿ, ವೈದ್ಯರಿಂದ ಚಿಕಿತ್ಸೆ ಮಾಡಿಸಿ, ಅವರು ಗುಣಮುಖವಾಗಲು ಸಹಾಯ ಮಾಡಿದ್ದ ನನಗೆ ಇಲ್ಲಿನ ಆಗು ಹೋಗುಗಳು ತುಂಬಾ ವಿಚಿತ್ರವಾಗಿ ಕಾಣತೊಡಗಿದವು.  ನಿಜವಾಗಲೂ ಅಲ್ಲಿ ದೆವ್ವವಿದೆಯೇ ? ಅಥವಾ ಆ ಜನಗಳ ಮನೋವಿಕಾರಗಳೇ ?  ಇದೊಂದು ಯಕ್ಷಪ್ರಶ್ನೆಯಾಗಿ ನನ್ನ ಮುಂದೆ ನಿಂತಿತ್ತು.  ಸಿಗರೇಟಿನ ಪ್ಯಾಕು ಖಾಲಿಯಾಯಿತೇ ಹೊರತು ಮನದಲ್ಲಿ ಎದ್ದ ನೂರಾರು ಪ್ರಶ್ನೆಗಳಿಗೆ ಉತ್ತರ ಮಾತ್ರ ಮರೀಚಿಕೆಯಾಗಿತ್ತು!

Rating
No votes yet

Comments