ಕರ್ನಾಟಕ ರಕ್ಷಣಾ ವೇದಿಕೆ ರಾಜಕೀಯ ಹೋರಾಟಕ್ಕೆ - ನಾರಾಯಣ ಗೌಡರ ನುಡಿಗಳು

Submitted by Chetan.Jeeral on Wed, 11/18/2009 - 21:44

ನಮಸ್ಕಾರ ಗೆಳೆಯರೆ,

ಕಳೆದ ತಿಂಗಳಿನಿಂದ ನಡೆದ ರಾಜಕೀಯ ದೊಂಬರಾಟ ನೋಡಿದ ಯಾರಿಗೆ ಆಗಲಿ ರಾಜಕೀಯದ ಬಗ್ಗೆ ಕೀಳು ಭಾವನೆ ಬಂದಿರಲಿಕ್ಕೂ ಸಾಕು. ನಿಜ ಇವತ್ತು ರಾಜಕೀಯ ಯಾವುದೇ ಸಿದ್ಧಾಂತದ ಮೇಲೆ ನಡೆಯುತ್ತಿಲ್ಲ. ಆಳುವವರ ಬೇಜವಾಬ್ದಾರಿತನ, ನಾಡಿಗರ ಬಗ್ಗೆ ದಿವ್ಯ ನಿರ್ಲಕ್ಷ್ಯ, ಸ್ವಹಿತಾಸಕ್ತಿ ಹೀಗೆ ತಮ್ಮ ಪ್ರಪಂಚದಲ್ಲೇ ಮುಳುಗಿ ಹೋಗಿರುವ ಇವರಿಗೆ ಕರ್ನಾಟಕದ ಬಗ್ಗೆ, ಕನ್ನಡಿಗರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದವರ ತರಹ ವರ್ತಿಸಿದ್ದಾರೆ....

ಆದರೆ ಕಳೆದ ಹತ್ತು ವರ್ಷಗಳಿಂದ ನಾಡು, ನುಡಿ ಹಾಗು ನಾಡಿಗರ ಬಗ್ಗೆ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆ ಒಂದು ರಾಜಕೀಯ ಪಕ್ಷವಾಗಿ ಹೊರಹೊಮ್ಮುವುದಾಗಿ ತಿಳಿಸಿದೆ, ಇದು ನಿಜಕ್ಕೂ ಸಂತೋಷದ ವಿಷಯ. ಕರ್ನಾಟಕ ರಕ್ಷಣಾ ವೇದಿಕೆಯಾ ಈ ಕ್ರಮ ನಿಜಕ್ಕೂ ಸ್ವಾಗತಾರ್ಹ. ಕರ್ನಾಟಕದಲ್ಲಿ ಕನ್ನಡಿಗರದ್ದೇ ಆದ ಒಂದು ನಿಜವಾದ ಪ್ರಾದೇಶಿಕ ಪಕ್ಷದ ಅವಶ್ಯಕತೆಯನ್ನು ಕರವೇ ಪೂರೈಸುತ್ತಿದೆ. ಶ್ರೀ ನಾರಾಯಣ ಗೌಡರು ತಮ್ಮ ಅಧ್ಯಕ್ಷರ ಲೇಖನಿಯ ಕೆಲವು ಮಾತುಗಳನ್ನು ಇಲ್ಲಿ ಹಾಕುತ್ತಿದ್ದೇನೆ.
---------------------------------------------------------------------------------------
ನಾಡು ನುಡಿಗೆ ಧಕ್ಕೆಯಾಗುವಂತಹ ಬೆಳವಣಿಗೆಗಳನ್ನು ಪ್ರತಿಭಟಿಸುವ, ಅವುಗಳ ಸದ್ದಡಗಿಸುವ ಮಹತ್ವದ ಬೇಲಿ ಹಾಕುವ ಕೆಲಸ ಒಂದೆಡೆಯಾದರೆ, ನಾಳೆಗಳನ್ನು ಕಟ್ಟಿಕೊಡುವ ನಾಡನ್ನು ಸಮೃದ್ಧತೆಯತ್ತ ಕೊಂಡೊಯ್ಯುವ ಕೆಲಸ ಮತ್ತೊಂದು. ನಮ್ಮ ಹೋರಾಟಗಳು ಎಷ್ಟೇ ಪರಿಣಾಮಕಾರಿಯಾಗಿದ್ದರೂ ಅವುಗಳ ಮೂಲ ಉದ್ದೇಶವಾದ “ಆಳುವವರನ್ನು ತಿದ್ದುವ, ಜನರಲ್ಲಿ ಜಾಗೃತಿ ಮೂಡಿಸುವ” ಕೆಲಸಗಳಷ್ಟೇ ನಮ್ಮ ನಾಡನ್ನು ಏಳಿಗೆಯೆಡೆಗೆ ಕೊಂಡಯ್ಯಲು ಸಾಲದ್ದಾಗಿವೆ. ಇಂದು ಹೋರಾಟಗಳಿಗೂ ಮಿತಿಯೆಂಬುದಿದ್ದು ‘ನಾಡಿನ ಒಳಿತು’ ಆ ಮಿತಿಯನ್ನು ದಾಟದೆ ಸಾಧ್ಯವಿಲ್ಲವಾಗಿದೆ. ನಾಡಿನ ಸಮಸ್ಯೆಗಳ ಬುತ್ತಿಯ ಚೀಲ ತೆರೆದಷ್ಟೂ ಮುಗಿಯದಾಗಿದೆ. ಇದಕ್ಕೆಲ್ಲಾ ಮೂಲಕಾರಣ ನಮ್ಮ ನಾಡಲ್ಲಿ ಇಂದು ರಾಜಕಾರಣ ನಡೆಸುತ್ತಿರುವ ರಾಜಕೀಯ ಪಕ್ಷಗಳೇ ಆಗಿವೆ. ಇಲ್ಲೂ ಕೂಡಾ ಎರಡು ಸಮಸ್ಯೆಗಳಿವೆ. ಮೊದಲನೆಯದಾಗಿ, ಪ್ರಾಮಾಣಿಕವಾಗಿ ನಾಡಿನ ಪರವಾಗಿ ದನಿಯೆತ್ತಬಲ್ಲ ಜನಪ್ರತಿನಿಧಿಗಳ ಕೊರತೆ. ಇಂದಿನ ಕರ್ನಾಟಕದ ಯಾವ ರಾಜಕಾರಣಿಯೂ ಸಮರ್ಥವಾಗಿ ರಾಜ್ಯದ ಪರವಾಗಿ ಕೇಂದ್ರದಲ್ಲಾಗಲೀ, ವಿಧಾನಸೌಧದಲ್ಲಾಗಲೀ ದನಿಯೆತ್ತುತ್ತಿರುವುದು ವಿರಳವಾಗಿದೆ. ಎರಡನೆಯದಾಗಿ ನಾಡಿನ ರಾಜಕೀಯ ಪಕ್ಷಗಳ ಸಿದ್ಧಾಂತವೇ ಕರ್ನಾಟಕದ ಕೇಂದ್ರಿತವಾಗಿಲ್ಲ. ಯಾವ ರಾಜಕೀಯ ಪಕ್ಷಕ್ಕೂ ನಮ್ಮ ನಾಡಿನ ಹಿತವೇ ಪರಮ ಗುರಿಯಾಗಿಲ್ಲ. ಇವುಗಳ ಜುಟ್ಟು ದೆಹಲಿಯ ಹೈಕಮಾಂಡಿನ ಕೈಯ್ಯಲ್ಲಿದೆ. ಆ ಕಾರಣದಿಂದಲೇ ಇವು ನಮ್ಮ ನಾಡಿನ ಸಮಸ್ಯೆಗಳನ್ನು ಬಗೆಹರಿಸಲಾರವು. ನಮ್ಮ ಪರವಾಗಿ ದನಿಯೆತ್ತಿ ನಿಲ್ಲಲಾರವು. ಕರ್ನಾಟಕದಲ್ಲಿ ಕನ್ನಡಪರವಾಗಿ ಜಾರಿಯಾಗಬೇಕಾದ ಅದೆಷ್ಟೊ ವರದಿಗಳು ಜಾರಿಯಾಗದಿರುವುದು ಇಂತಹಾ ರಾಜಕೀಯ ಪಕ್ಷಗಳಿಂದಲೇ. ಕೆಲಸದ ಹಕ್ಕನ್ನು ಪ್ರತಿಪಾದಿಸಿದ ಸರೋಜಿನಿ ಮಹಿಷಿ ವರದಿ, ಅಸಮಾನತೆಯನ್ನು ಅಳಿಸುವ ಉದ್ದೇಶದ ನಂಜುಂಡಪ್ಪ ವರದಿ, ಗಡಿ ನಾಡಿಗೆ ಅನ್ವಯಿಸುವ ಅನೇಕ ವರದಿಗಳು, ಶಿಕ್ಷಣ - ಆಡಳಿತ ಸುಧಾರಣಾ ಕ್ರಮಗಳು, ನಾಡಿನ ಸಂಪನ್ಮೂಲ ಕಾಪಾಡುವ ನೀತಿಗಳು... ಇವ್ಯಾವುದನ್ನೂ ಜಾರಿಗೆ ತರಲಾಗದೆ ಇರಲು ಇರುವ ಮುಖ್ಯ ಕಾರಣವೇ ಈ ನಮ್ಮ ನಾಡಿನ ರಾಜಕೀಯ ಪಕ್ಷಗಳು ಕರ್ನಾಟಕದ ಕೇಂದ್ರಿತವಾಗಿಲ್ಲದೇ ಇರುವುದು. ನಮ್ಮ ನಾಡಿನಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿಸುವ ದಿಟ್ಟ ಪ್ರಾಮಾಣಿಕ ಕ್ರಮಕ್ಕೆ ಇವೆಂದಿಗೂ ಮುಂದಾಗಲಾರವೇನೋ ಅನ್ನಿಸುವಂತಿದೆ ಇಂದಿನ ಪರಿಸ್ಥಿತಿ.

ಪೂರ್ಣ ಲೇಖನವನ್ನು ಈ ಕೆಳಗಿನ ಕೊಂಡಿಯಲ್ಲಿ ಓದಿ

http://www.karnatakarakshanavedike.org/modes/view/122/adhyakshara-nudi-…

Comments