ಅಂತಿಂಥಾ ಗಂಡು...ನೀನೇನಾ?
ದೋಸೆಯನ್ನು ಕಾವಲಿಯಿಂದ ತೆಗಿಬೇಕಾದರೆ ಎಲ್ಲಾ ಪುಡಿ ಪುಡಿ, ಚಪಾತಿಯ ಆಕೃತಿ ಆಸ್ಟ್ರೇಲಿಯಾ ಅಥವಾ ಶ್ರೀಲಂಕಾದ ಭೂಪಟದಂತಿರುತ್ತದೆ. ನಂಗೇ ಇಡೀ ದೋಸೆ ಬೇಕು, ರೌಂಡ್ ಆಗಿರುವ ಚಪಾತಿ ಬೇಕು ಅಂತಾ ಕೇಳಿದರೆ ತಿನ್ನುವಾಗ ಹೊಟ್ಟೆಯೊಳಗೆ ಅದೇ ಶೇಪ್್ನಲ್ಲಿ ಹೋಗುತ್ತದೇನೋ ಎಂದು ಅಪ್ಪನ ಪ್ರಶ್ನೆ. ಹೌದು ಅಪ್ಪ ಅಡುಗೆ ಮಾಡುವುದೆಂದರೆ ಹೀಗೇನೆ. ಅಮ್ಮನಿಗೆ ಸೌಖ್ಯವಿಲ್ಲದೇ ಇದ್ದಾಗ ಅಥವಾ ಅಮ್ಮ ಅಲ್ಲದೇ ಇರುವಾಗ ಅಪ್ಪನೇ ಅಮ್ಮನ ಸ್ಥಾನವನ್ನು ವಹಿಸಿಕೊಳ್ಳಬೇಕಾಗುತ್ತದೆ. ಅಡುಗೆ ಮನೆಯಲ್ಲಿ ತಿಂಡಿ ತಯಾರು ಮಾಡಬೇಕು, ಜಡೆ ಹೆಣೆದು ಕೊಡಬೇಕು, ಟಿಫಿನ್ ಬಾಕ್ಸ್ ತುಂಬಿಸಿಕೊಡಬೇಕು ಹೀಗೆ ಎಲ್ಲದಕ್ಕೂ ಅಪ್ಪನೇ ಬೇಕು. ಅಪ್ಪ ಅಡುಗೆ ಮಾಡುತ್ತಿದ್ದರೆ ಪಾತ್ರೆಗಳ ಸದ್ದು ಗಟ್ಟಿಯಾಗಿ ಕೇಳಿಸುತ್ತದೆ, ದೋಸೆ ಕಾವಲಿಯಿಂದ ಏಳುವುದೇ ಇಲ್ಲ, ಚಟ್ನಿಗೆ ಉಪ್ಪು ಜಾಸ್ತಿ, ಹೆಣೆದ ಜಡೆ ಹೇಗೋ ಇರುತ್ತದೆ... ಅದ್ರೂ ಅಪ್ಪ ಎಲ್ಲವನ್ನೂ ಮಾಡುತ್ತಾನೆ. ಆವಾಗ ಅಪ್ಪನಲ್ಲಿ ಅಮ್ಮ ಜಾಗೃತವಾಗುತ್ತಾಳೆ. ಅಮ್ಮ ಮಾಡಿದಂತೆ ಎಲ್ಲವೂ ಮಾಡಬೇಕೆಂದು ಹಠ ಹಿಡಿಯುವ ಮಕ್ಕಳ ನಡುವೆ ಮುದ್ದಿನ ಅಪ್ಪ 'ಅಮ್ಮ'ನಾಗುತ್ತಾನೆ.
"ಇಲ್ಲಿ ನೋಡಮ್ಮಾ... ಎಷ್ಟು ಚಿಕ್ಕ ಟೀ ಶರ್ಟ್ ಹಾಕಿಕೊಂಡಿದ್ದಾಳೆ, ಅದೂ ಅಲ್ಲದೆ ಅದರ ಮೇಲಿನ ಬರಹ ನೋಡಿದ್ದೀಯಾ?" ಕಾಲೇಜಿಗೆ ಹೊರಡುವ ತಂಗಿಯನ್ನು ನೋಡಿ ಅಣ್ಣ ಅಮ್ಮನಿಗೆ ಈ ರೀತಿ ವರದಿ ಒಪ್ಪಿಸುತ್ತಾನೆ. ನೀನು ಕಾಲೇಜಿನಿಂದ ಬರಬೇಕಾದರೆ ಆದ್ಯಾವ ಹುಡುಗ ನಿನ್ನ ಜೊತೆ ನಡೆದುಕೊಂಡು ಬರುತ್ತಿದ್ದ? ಯಾರಲ್ಲಿ ಅಷ್ಟೊಂದು ಹೊತ್ತು ಫೋನ್್ನಲ್ಲಿ ಮಾತನಾಡುತ್ತಿದ್ದಿ? ಅಲ್ಲಿಯವರೆಗೆ ಫೋನ್್ನಲ್ಲಿ ಹರಟೆ ಹೊಡೆಯುತ್ತಿದ್ದ ತಂಗಿ ಅಣ್ಣ ಬಂದಾಕ್ಷಣ ಪಕ್ಕನೆ ಫೋನ್ ಇಟ್ಟು ಬಿಟ್ಟರೆ ತಂಗಿ ಮೇಲೆ ಸಂದೇಹ ಪಡದ ಇರುವ ಅಣ್ಣಂದಿರು ಇರುತ್ತಾರಾ? ಎಷ್ಟೇ ಮುದ್ದು ಮಾಡುವ ಅಣ್ಣನಾಗಿರಲಿ ಅವನ ತಂಗಿ ಮೇಲೆ ಒಂದು ಕಣ್ಣು ಇದ್ದೇ ಇರುತ್ತದೆ. ಅವಳು ಎಲ್ಲಿಯೂ ದಾರಿ ತಪ್ಪಿ ಹೋಗಬಾರದು ಎಂಬ ಉದ್ದೇಶದಿಂದಲೇ ಹಿತ ನುಡಿಯುವ, ಕೆಲವೊಮ್ಮೆ ಬೈಯ್ಯುವ 'ಹಿಟ್ಲರ್ ಬ್ರದರ್್' , ತನ್ನ ಸಹೋದರಿಯ ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾನೆ. ಮುತ್ತು ನೀಡಿ ಮುದ್ದಿಸದಿದ್ದರೂ ತನ್ನ ತಂಗಿಗೆ ಆತ ಎಂದೂ ರಕ್ಷಕನಾಗಿ ಸದಾ ಇರುತ್ತಾನೆ. ಅಣ್ಣ ಅಂದ್ರೆ ಹಾಗೇನೇ...
ಸೀರಿಯಸ್ಸಾಗಿ ಕುಳಿತುಕೊಂಡಿರುವಾಗ ಹಿಂದಿನಿಂದ ಜಡೆ ಎಳೆಯುವುದು, ಟಿವಿ ರಿಮೋಟ್್ಗಾಗಿ ಕಿತ್ತಾಡುವುದು, ಅಕ್ಕ ಸುಮ್ಮನೆ ಜಗಳಾಡ್ತಾಳೆ ಅಂತಾ ಅಮ್ಮನಲ್ಲಿ ಸುಮ್ ಸುಮ್ನೇ ದೂರು ಹೇಳುವುದು ಹೀಗೆಲ್ಲಾ ತುಂಟಾಟಿಕೆ ಮಾಡುವ ತಮ್ಮ ಇಲ್ಲದೇ ಇದ್ದರೆ ಲೈಫೇ ಬೋರು ಬೋರು. ಮನೆಯಲ್ಲಿ ತಮ್ಮನ ತುಂಟಾಟಿಕೆಗೆ ತಲೆಬಾಗದಿರುವವರು ಯಾರು ಹೇಳಿ? ತಮ್ಮ ಮತ್ತು ತುಂಟಾಟಿಕೆ ಅಂದರೆ ಮೇಡ್ ಫಾರ್ ಈಚ್ ಅದರ್ ಅಂತಾನೇ ಹೇಳ್ಬಹುದು. ನಂಗೂ ತುಂಟಾಟಿಕೆ ಮಾಡಲು ಒಬ್ಬ ಪುಟ್ಟ ತಮ್ಮ ಬೇಕು ಎಂದು ಬಯಸದ ಹೆಣ್ಮಕ್ಕಳು ಇರಲಾರರು ಅಲ್ಲವೇ?
ಮಕ್ಕಳಾಟ ಮುಗಿದು ಇನ್ನೇನು ಯೌವನ ಮೈಗೆ ತಾಕುತ್ತಿದ್ದಂತೆ ಮನಸ್ಸಲ್ಲಿ ಏನೋ ಪುಳಕ. ನನಗೂ ಒಬ್ಬ ಗೆಳೆಯ ಬೇಕು.. ಎಂದು ಹಾಡುವ ಹುಚ್ಚು ಹದಿಹರೆಯದ ವಯಸ್ಸಿನಲ್ಲಿ ಚಿಗುರು ಮೀಸೆಯ ಹುಡುಗನೊಬ್ಬ ಪ್ರೀತಿಯ ನಿವೇದನೆ ಮಾಡುತ್ತಾನೆ. ನಾನು ಈಗ ಪ್ರೀತಿಯಲ್ಲಿ ಬೀಳಬೇಕು...., ಪ್ರೀತಿ ಅಂದ್ರೆ ಹಾಗೇನಾ...ಹೀಗೇನಾ... ಎಂದು ಟಿವಿ, ಸಿನಿಮಾದಲ್ಲಿ ಮಾತ್ರ ನೋಡಿ ಅನುಭವವಿರುವ ಹುಡುಗಿ ಮೊದಲ ಬಾರಿಗೆ ತನ್ನ ಜೀವನದಲ್ಲಿ ಹುಡುಗನೊಬ್ಬನಿಗೆ ಮನಸೋಲುತ್ತಾಳೆ. ಆಮೇಲೆ ಪ್ರೀತಿ...ಕನಸು...ನೆನಪು.....ತನ್ನ ಜೀವನದಲ್ಲಿ ಪ್ರೀತಿಯ ಸೆಲೆಯಾಗಿ ಬಂದ ಹುಡುಗ ಪ್ರೀತಿಸಲು ಕಲಿಸಿಕೊಟ್ಟಿರುತ್ತಾನೆ. ಪ್ರೀತಿಯ ಮಧುರಾನುಭವವನ್ನು ಅವಳಿಗೆ ಕೊಡಮಾಡಿದವನೂ ಅವನೇ....ಆ ಪ್ರಿಯಕರನನ್ನು ಮರೆಯಲೆಂತು?
ಇನ್ನೇನು ಮಗಳು ವಯಸ್ಸಿಗೆ ಬಂದಿದ್ದಾಳೆ. ಒಳ್ಳೆಯ ಸಂಬಂಧ ನೋಡಿ ಮಗಳನ್ನು ಮದುವೆ ಮಾಡಿಕೊಡಬೇಕೆಂದು ಕುಟುಂಬದವರ ಹಂಬಲ. ಹಾಗೆಯೇ ಒಳ್ಳೆಯ ಸಂಬಂಧ ಸಿಕ್ಕಿ ಬಿಡುತ್ತದೆ. ಇನ್ನು ಮದುವೆ. ಅವ ತಾಳಿ ಕಟ್ಟಿದ ಕೂಡಲೇ ನಾನು ಅವನ ಮಡದಿ. ಇನ್ಮೇಲೆ ತವರು ಮನೆಯನ್ನು ಬಿಟ್ಟು ಅವನೊಂದಿಗೆ ಸಂಸಾರ ನಡೆಸಬೇಕು. ಈವರೆಗೂ ನೋಡಿರದ ಪರಿಚಯವಿರದ ಆ ವ್ಯಕ್ತಿ ಮದುವೆಯಾದ ಕೂಡಲೇ 'ನನ್ನವನು'. ಈ ಇಬ್ಬರು ವ್ಯಕ್ತಿಗಳ ಅನ್ಯೋನ್ಯ ಪ್ರೀತಿ, ವಿಶ್ವಾಸದಿಂದ ಹೊಸ ಕುಟುಂಬವೊಂದು ಅಲ್ಲಿ ರಚಿತವಾಗುತ್ತದೆ. ಆ ಮೇಲೆ ನಮ್ಮ ಯಜಮಾನ್ರು...ನಮ್ಮ ಮನೆ, ನಮ್ಮ ಸಂಸಾರ...
ಹೆಣ್ಣು ಗಂಡು ನಡುವಿನ ಸಂಬಂಧವೇ ಅಂತಹದ್ದು. ಇವರಿಬ್ಬರೂ ಒಂದೇ ನಾಣ್ಯದ ಮುಖಗಳಂತೆ. ಹೆಣ್ಣಿನ ಜೀವನದಲ್ಲಿ ಗಂಡು ಅಪ್ಪನಾಗಿ, ಅಣ್ಣನಾಗಿ, ತಮ್ಮನಾಗಿ, ಪ್ರಿಯತಮನಾಗಿ, ಗಂಡನಾಗಿ ಹೀಗೆ ಎಲ್ಲಾ ಮಜಲುಗಳಲ್ಲಿ ಜೊತೆಗಿರುತ್ತಾನೆ. ಗಂಡಿನ ನೆರಳಾಗಿ ಹೆಣ್ಣು ಹೇಗೋ, ಹೆಣ್ಣಿನ ಹೆಜ್ಜೆ ಹೆಜ್ಜೆಯಲ್ಲೂ ಗಂಡಿನ ಸಾಮಿಪ್ಯವಿರುತ್ತದೆ. ಇವತ್ತು ಗಂಡಸರ ದಿನ. ಹೆಣ್ಣಿನ ಜೀವನದಲ್ಲಿ ಮಹತ್ತರ ಪಾತ್ರ ವಹಿಸುವ, ಜೀವನಕ್ಕೆ ಹೊಸ ತಿರುವು ನೀಡುವ ಎಲ್ಲಾ ಗಂಡಸರಿಗೆ ಅಕ್ಕರೆಯಿಂದ ಥ್ಯಾಂಕ್ಸ್ ಹೇಳೋಣ... ಹ್ಯಾಪಿ ಮೆನ್ಸ್ ಡೇ....
Comments
ಉ: ಅಂತಿಂಥಾ ಗಂಡು...ನೀನೇನಾ?
ಉ: ಅಂತಿಂಥಾ ಗಂಡು...ನೀನೇನಾ?
In reply to ಉ: ಅಂತಿಂಥಾ ಗಂಡು...ನೀನೇನಾ? by Chikku123
ಉ: ಅಂತಿಂಥಾ ಗಂಡು...ನೀನೇನಾ?
ಉ: ಅಂತಿಂಥಾ ಗಂಡು...ನೀನೇನಾ?
ಉ: ಅಂತಿಂಥಾ ಗಂಡು...ನೀನೇನಾ?
ಉ: ಅಂತಿಂಥಾ ಗಂಡು...ನೀನೇನಾ?
ಉ: ಅಂತಿಂಥಾ ಗಂಡು...ನೀನೇನಾ?
ಉ: ಅಂತಿಂಥಾ ಗಂಡು...ನೀನೇನಾ?
ಉ: ಅಂತಿಂಥಾ ಗಂಡು...ನೀನೇನಾ?
In reply to ಉ: ಅಂತಿಂಥಾ ಗಂಡು...ನೀನೇನಾ? by manjunath s reddy
ಉ: ಅಂತಿಂಥಾ ಗಂಡು...ನೀನೇನಾ?
In reply to ಉ: ಅಂತಿಂಥಾ ಗಂಡು...ನೀನೇನಾ? by kavinagaraj
ಉ: ಅಂತಿಂಥಾ ಗಂಡು...ನೀನೇನಾ?
ಹ್ಯಾಪಿ ಮೆನ್ಸ್ ಡೇ :)
ಉ: ಅಂತಿಂಥಾ ಗಂಡು...ನೀನೇನಾ?
In reply to ಉ: ಅಂತಿಂಥಾ ಗಂಡು...ನೀನೇನಾ? by venkatb83
ಉ: ಅಂತಿಂಥಾ ಗಂಡು...ನೀನೇನಾ?