ಬಡತನದ ಸುಖ ಅಂದ್ರೆ....

ಬಡತನದ ಸುಖ ಅಂದ್ರೆ....

ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಇದು ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ. ನನ್ನ ಸಂಬಂಧಿಕರೊಬ್ಬರ ಮದುವೆಗೆ ಹೋಗ್ಬೇಕಾದರೆ ಯಾವ ಡ್ರೆಸ್ ಹಾಕಿಕೊಳ್ಳಲಿ? ಎಂದು ಕನ್್ಫ್ಯೂಸ್ ಆಗಿ ಕುಳಿತುಕೊಂಡಿರುವಾಗ ಅಪ್ಪ ಹೇಳಿದ ಮಾತುಗಳಿವು. ನಿಜ, ಈವಾಗ ನಾವು ಈ ಎಲ್ಲಾ ಸುಖಗಳನ್ನು ಅನುಭವಿಸಬೇಕಾದರೆ ನಮ್ಮ ಅಪ್ಪ ಅಮ್ಮ ಎಷ್ಟು ಕಷ್ಟ ಪಟ್ಟಿರಬೇಕು ಅಲ್ವಾ? ನನ್ನ ಅಪ್ಪ ನಗರದಲ್ಲಿ ಓದಿ ಬೆಳೆದವರು. ಆದರೆ ಮನೆಯಲ್ಲಿ ಬಡತನ. ಅಪ್ಪ ಹೇಳುವಂತೆ ಆ ಬಡತನದಲ್ಲೂ ಒಂದು ಸುಖವಿತ್ತು. ನಮ್ಮಜ್ಜಿಗೆ 6 ಜನ ಮಕ್ಕಳು. ತುಂಬು ಸಂಸಾರ. ಕೂಲಿ ಕೆಲಸ ಮಾಡಿಯೇ ಸಂಸಾರ ಸಾಗಬೇಕಾಗಿತ್ತು. ಬೆಳಗ್ಗೆ ತಿಂಡಿ ಅಂದರೆ ಅವಲಕ್ಕಿ, ಕೆಲವೊಮ್ಮೆ ಉಪ್ಪಿಟ್ಟು ಹೀಗೆ ಬಜಿಲ್- ಸಜ್ಜಿಗೆ ಕಾಂಬಿನೇಷನ್. ಇದು ವಾರದಲ್ಲಿ ಎರಡು ದಿನ ಅಷ್ಟೇ. ಬಾಕಿ ಉಳಿದ ದಿನಗಳಲ್ಲಿ ಗಂಜಿ. ಏನಾದರೂ ಹಬ್ಬ ಬಂದರೆ ಮಾತ್ರ ಕಡುಬು, ಕೊಟ್ಟಿಗೆ ಮಾಡುತ್ತಿದ್ದರಂತೆ. ಊಟಕ್ಕೆ ಸಾಂಬಾರ್ ಇಲ್ಲದಿದ್ದರೆ ಮೀನು ಸಾರು. ಕೆಲವೊಮ್ಮೆ ಏನೂ ಇಲ್ಲದಿದ್ದರೆ ಗಂಜಿ ಜೊತೆ ಉಪ್ಪು- ಮೆಣಸು, ಗಾಂಧಾರಿ ಮೆಣಸು ಹಿಚುಕಿ ಗಂಜಿ ಊಟ ಮಾಡುವುದಂದರೆ ಎಷ್ಟು ರುಚಿ!


ಮನೆಯಲ್ಲಿ ಹಣದ ತಾಪತ್ರಯ ಬೇರೆ. ಅದಕ್ಕಾಗಿಯೇ ನನ್ನ ದೊಡ್ಡಪ್ಪನವರು ಓದನ್ನು ಅರ್ಧಕ್ಕೆ ನಿಲ್ಲಿಸಿ ಇನ್ನು ನೀನು ಕಲಿ ಎಂದು ಅಪ್ಪನಿಗೆ ಸಹಾಯ ಮಾಡಿದರಂತೆ. ಹತ್ತಿರದಲ್ಲೇ ಸರಕಾರಿ ಶಾಲೆಯಿರುವುದರಿಂದ ಕಲಿಕೆಗೇನು ತೊಂದರೆಯಾಗಲಿಲ್ಲ. ಶಾಲಾ ಯುನಿಫಾರಂ ಕೂಡಾ ಅಷ್ಟೇ. ವರ್ಷಕ್ಕೊಂದು ಯುನಿಫಾರಂ ಹೊಲಿಸುತ್ತಿದ್ದರಂತೆ. ಅದನ್ನು ಅಷ್ಟು ಜಾಗರೂಕತೆಯಿಂದ ಇಟ್ಟುಕೊಳ್ಳಬೇಕು. ಅಂಗಿ ಚಡ್ಡಿ ಹೊಲಿಸಲು ಟೈಲರ್ ಬಳಿಗೆ ಹೋದಾಗ ಅಜ್ಜಿ " ಚಡ್ಡಿ ಸ್ವಲ್ಪ ಉದ್ದ ಇರಲಿ, ಅಂಗಿ ಕೂಡಾ ಸ್ವಲ್ಪ ದೊಡ್ಡದಾಗಿ ಹೊಲಿಸಿ" ಎನ್ನುತ್ತಿದ್ದರಂತೆ. ಯಾಕೆಂದರೆ ಮುಂದಿನ ವರ್ಷವೂ ಅದನ್ನೇ ಹಾಕ್ಬೇಕಲ್ಲಾ. ಇದರೊಂದಿಗೆ ಇನ್ನೊಂದು ಜೊತೆ ಬಣ್ಣದ ಚಡ್ಡಿ ಅಂಗಿ. ಅದನ್ನು ಏನಾದರೂ ಸಮಾರಂಭ ಇದ್ದರೆ ಮಾತ್ರ ಹಾಕಬೇಕಾಗುತ್ತಿತ್ತು. ಹೀಗೆ ದೊಗಳೆ ಅಂಗಿಯನ್ನು ಹಾಕಿಕೊಂಡು ಅಪ್ಪ ಶಾಲೆಗೆ ಹೋಗುತ್ತಿದ್ದರಂತೆ. ಆವಾಗ ಇಂದಿನಂತೆ ಯಾರೂ ನಮ್ಮನ್ನು ಗೇಲಿ ಮಾಡಲ್ಲ... ಎಲ್ಲರೂ ಬಡತನದಿಂದ ಬಂದವರೇ.ಈ ಕಾರಣದಿಂದಲೇ ಎಲ್ಲರೂ ಪರಸ್ಪರ ಅನ್ಯೋನ್ಯತೆಯಿಂದ ಇರುತ್ತಿದ್ದರು. ಮಾತ್ರವಲ್ಲದೆ ಆ ಇನ್ನೊಂದು ಜತೆ ಬಣ್ಣದ ಬಟ್ಟೆಗಳನ್ನು ದೊಡ್ಡದಾದ ಪೆಟ್ಟಿಗೆಯೊಂದರಲ್ಲಿ ಭಾರೀ ಜಾಗರೂಕತೆಯಿಂದ ಇದನ್ನು ಇರಿಸಲಾಗುತ್ತಿತ್ತು. ಆಗಾಗ ಈ ಪೆಟ್ಟಿಗೆಯನ್ನು ತೆರೆಯುವಂತೆ ಕೂಡಾ ಇರಲಿಲ್ಲ. ಶಾಲೆಯಿಂದ ಬಂದ ಕೂಡಲೇ ಯುನಿಫಾರಂ ತೆಗೆದು ಒಗೆದು ಒಣಗಲು ಹಾಕಬೇಕು.. ಬೆಳಗ್ಗೆಯಾಗುವಷ್ಟರ ಹೊತ್ತಿಗೆ ಅದು ಒಣಗಿರುತ್ತದೆ. ಅದನ್ನೇ ಮತ್ತೆ ಹಾಕಿಕೊಂಡು ಹೋಗಬೇಕು. ಜೊತೆಗೆ ಖಾಕಿ ಚೀಲ, ದೊಡ್ಡ ಅಲ್ಯುಮಿನಿಯಂ ಬುತ್ತಿ. ಆ ಬುತ್ತಿಯಲ್ಲಿ ಇರುತ್ತಿದ್ದದ್ದು, ಗಂಜಿ, ಉಪ್ಪಿನ ಕಾಯಿ ಇಲ್ಲದಿದ್ದರೆ ತೆಂಗಿನ ಕಾಯಿಯ ಚಟ್ನಿ.


ಮದುವೆಗೆ ಹೋಗುವುದಾದರೆ ಇನ್ನೊಂದು ಉಡುಪನ್ನು ತೊಟ್ಟು ಕೊಳ್ಳಬೇಕು. ಇನ್ನೇನು ಕಲೆ ಮಾಡಿಕೊಳ್ಬಾದ್ರು, ಪಾಯಸ ತಿನ್ನುವಾಗ ತುಂಬಾ ಜಾಗ್ರತೆಯಿಂದ ತಿನ್ನು, ಅಂಗಿಯಲ್ಲಿ ಬೀಳಿಸಿಕೊಂಡ್ರೆ ಇನ್ನು ಮುಂದೆ ನಿನ್ನನ್ನು ಯಾವ ಮದ್ವೆಗೂ ನಿನ್ನನ್ನು ಕರ್ಕೊಂಡು ಹೋಗಲ್ಲ ಎಂದು ಅಮ್ಮ ಮೊದಲೇ ತಾಕೀತು ನೀಡಿದ್ದರಿಂದ ಮದುವೆಗೆ ಹೋದರೂ ಎಲ್ಲಿ ಅಂಗಿಗೆ ಕಲೆಯಾಗಿ ಬಿಡುತ್ತದೋ ಎಂಬ ಟೆನ್ಶನ್ ಇರುತ್ತಿತ್ತಂತೆ. ಇನ್ನೂ ಕೆಲವು ಮಕ್ಕಳಂತೂ ಅದೇ ಶಾಲಾ ಯುನಿಫಾರಂನಲ್ಲಿ ಮದ್ವೆಗೆ ಬಂದಿರುತ್ತಾರೆ. ಆವಾಗ ಸದ್ಯ ತಾನು ಬೇರೆ ಬಣ್ಣದ ಉಡುಪನ್ನು ತೊಟ್ಟಿದ್ದೇನಲ್ಲಾ ಎಂಬ ಸಮಾಧಾನ ಮನಸ್ಸಿನಲ್ಲಿ....


ಮಳೆಗಾಲವಾದರೆ ಎಲ್ಲೋ ತೆಂಗಿನಕಾಯಿ ಬಿದ್ದು ಮುರಿದ ಹೆಂಚಿನೆಡೆಯಿಂದ ಮಳೆ ನೀರು ಒಳಗೆ ಬರುತ್ತಿತ್ತು. ಆವಾಗ ನೀರು ಬೀಳುವಲ್ಲಿಗೆ ಚೊಂಬು, ತಪಲೆ ಇಡಬೇಕಾಗುತ್ತಿತ್ತು. ಮಳೆ ಬಂದರೆ ಯುನಿಫಾರಂನ್ನು ಹೊರಗೆ ಒಣಗಿಸಲಂತೂ ಸಾಧ್ಯವಿಲ್ಲ. ಆವಾಗ ಅಡುಗೆ ಮನೆಯಲ್ಲೇ ಬಟ್ಟೆ ಒಣಗಿಸಬೇಕು. ಅಂದರೆ ಮೂರು ಕಲ್ಲಿನ ಒಲೆ, ಕಟ್ಟಿಗೆಯಿಂದ ಒಲೆ ಉರಿಸಲಾಗುತ್ತಿತ್ತು. ಈ ಒಲೆಯ ಶಾಖಕ್ಕೇ ಬಟ್ಟೆಗಳನ್ನು ಒಣಗಿಸಬೇಕು. ಹೀಗೆ ಬಟ್ಟೆಗಳು ಅರ್ಧಂಬರ್ಧ ಒಣಗಿರುವುದರಿಂದ ನೀರ ಕಲೆಗಳೂ ಬೀಳುವುದರೊಂದಿಗೆ ಹೊಗೆಯ ನಾತವೂ ಬರುತ್ತಿತ್ತು. ಆದರೆ ಇದ್ಯಾವುದೂ ಲೆಕ್ಕಕ್ಕಿರಲಿಲ್ಲ.


ಆ ಬಾಲ್ಯದ ಬಡತನದಲ್ಲೂ ಒಂದು ಸುಖ ಇದೆ. ಹೊಟ್ಟೆ ಹಸಿದು ಉಣ್ಣುವ ಆ ಊಟ, ಸುಸ್ತಾಗಿ ಬಂದು ಚಾಪೆಯಲ್ಲಿ ಬಂದು ಮಲಗಿದಾಗ ಬರುವ ನಿದ್ದೆ ಇದ್ಯಾವುದೂ ಇನ್ನು ಮರಳಿ ಬರಲ್ಲ. ಎಲ್ಲರೂ ಮನೆಯಲ್ಲಿರುವ ಒಂದು ದಿನ ಎಲ್ಲರೂ ಸೇರಿ ಒಟ್ಟಿಗೆ ಊಟ ಮಾಡುವುದು ಎಲ್ಲಾ ದುಃಖಗಳನ್ನು ಮರೆಸುವಂತಿತ್ತು. ಆದರೆ ಈಗ, ಮನೆಯ ಸದಸ್ಯರಿಗೆ ಪರಸ್ಪರ ಮಾತನಾಡಿಕೊಳ್ಳುವಷ್ಟು ಕೂಡಾ ಪುರುಸೋತ್ತಿಲ್ಲ. ಕಾಲ ಬದಲಾಗಿದೆ, ಸೌಕರ್ಯಗಳು ಜಾಸ್ತಿಯಾಗಿವೆ ಆದರೆ ಕೊರತೆಯಿರುವುದು ಸುಖಕ್ಕೆ. ಎಷ್ಟೇ ಸಿಕ್ಕಿದರೂ ನಾವು ತೃಪ್ತರಲ್ಲ. ಆದರೆ ಬಡತನ ನಮಗೆ ತೃಪ್ತಿಯನ್ನು ತಂದು ಕೊಟ್ಟಿತ್ತು. ಆ ಬಡತನ ಇನ್ನೊಬ್ಬರ ನೋವನ್ನು ಅರಿತುಕೊಳ್ಳುವ ಮನಸ್ಸನ್ನು ಮತ್ತು ಪ್ರೀತಿಸುವ ಹೃದಯವನ್ನು ಕೊಟ್ಟಿತ್ತು. ಹೀಗೆ ಅಪ್ಪ ಹಳೆಯ ಕಾಲದ ನೆನಪುಗಳನ್ನು ಮೆಲುಕು ಹಾಕುತ್ತಿರುವಂತೆ ಅದನ್ನು ನಾನು ನನ್ನ ಮನಸ್ಸಲ್ಲೇ 'ಸೇವ್್' ಮಾಡಿಕೊಳ್ಳುತ್ತಿದ್ದೆ.

Rating
No votes yet

Comments