ಕಣಿವೆಯಲ್ಲಿ ಯುವಜೋಡಿಯ ಮಾರಣಹೋಮ!
ಕಣಿವೆಪುರ, ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ರಸ್ತೆಯಲ್ಲಿ ನಂದಿ ಬೆಟ್ಟದ ತಿರುವಿಗಿಂತ ಸ್ವಲ್ಪ ಮುಂಚೆ ಸಿಗುತ್ತದೆ. ಘಂಟೆಗೊಂದರಂತೆ ಓಡಾಡುವ ಖಾಸಗಿ/ಸರ್ಕಾರಿ ಬಸ್ಸುಗಳನ್ನು ಬಿಟ್ಟರೆ ಆ ರಸ್ತೆ ಬಹುತೇಕ ನಿರ್ಜನವಾಗಿರುತ್ತದೆ. ವಾರಾಂತ್ಯದಲ್ಲಿ ಮೋಜು ಮಾಡಲು ನಂದಿ ಬೆಟ್ಟಕ್ಕೆ ಹೋಗಲು ಬೈಕುಗಳಲ್ಲಿ ಬರುವ ಯುವ ಪ್ರೇಮಿಗಳು ಕಣಿವೆಪುರದ ಕೆಲವು ನಿರುದ್ಯೋಗಿ ಯುವಕರಿಗೆ ಚಿನ್ನದ ಗಣಿಗಳಾಗಿದ್ದರು. ಕೆಲವರು ಅವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಮಾಡಿ ಹಣ ಸಂಪಾದಿಸಿದರೆ, ಮತ್ತೆ ಕೆಲವರು ಬಲ ಪ್ರದರ್ಶನ ಮಾಡಿ, ಅವರಿಂದ ಹಣ ದೋಚುತ್ತಿದ್ದರು. ಕದ್ದು ಮುಚ್ಚಿ ಪ್ರಣಯ ಸಲ್ಲಾಪ ನಡೆಸಲು ಬರುತ್ತಿದ್ದವರು ವಿಧಿಯಿಲ್ಲದೆ ಅವರಿಗೆ ತಮ್ಮಲ್ಲಿದ್ದುದೆಲ್ಲವನ್ನೂ ನೀಡಿ, ಕೈ ಮುಗಿದು ಹೋಗುತ್ತಿದ್ದರು. ಹೀಗೆ ದೋಚುತ್ತಿದ್ದ ಗುಂಪಿನ ಮುಖ್ಯಸ್ಥನಾಗಿದ್ದ ದೊಣ್ಣೆ ನಾಗ, ಕಾಕತಾಳೀಯವಾಗಿ ಈ ಕಾರ್ಖಾನೆಯ ನೌಕರನಾಗಿದ್ದುದಲ್ಲದೆ, ಕಾರ್ಮಿಕ ಮುಖಂಡನೂ ಆಗಿದ್ದ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ನೀಲಗಿರಿ ಮರಗಳು ಇವರ ದರೋಡೆ ಕಾರ್ಯಕ್ಕೆ ಸಹಕಾರಿಯಾಗಿದ್ದವು. ಕೆಲವೊಮ್ಮೆ ಸುಂದರ ಹೆಣ್ಣುಗಳು ಇವರ ಗುಂಪಿನ ಕೈಗೆ ಸಿಕ್ಕಿ ಅತ್ಯಾಚಾರಕ್ಕೂ ಒಳಗಾಗಿದ್ದರು. ಆದರೆ ಯಾರ ಬಳಿಯೂ ಹೇಳಿಕೊಳ್ಳಲಾಗದೆ ಬೆಂಗಳೂರಿನ ದಾರಿ ಹಿಡಿಯುತ್ತಿದ್ದರು. ಅದರಲ್ಲಿ ಒಮ್ಮೆ ಒಬ್ಬ ಯುವತಿಯನ್ನು ಮಾನಭಂಗ ಮಾಡಿದ ನಂತರ, ತುಂಬಾ ಪ್ರತಿಭಟಿಸಿದ್ದರಿಂದ ಸಿಟ್ಟಿಗೆದ್ದು, ದೊಡ್ಡದೊಂದು ಕಲ್ಲನ್ನು ಅವಳ ತಲೆಯ ಮೇಲೆ ಎತ್ತಿ ಹಾಕಿ ಕೊಂದು ಬಿಟ್ಟಿದ್ದರು. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಕೆಲವು ದರೋಡೆ ಹಾಗೂ ಕೊಲೆ ಪ್ರಕರಣಗಳ ಬಗ್ಗೆ ದೂರುಗಳೂ ಸಹ ದಾಖಲಾಗಿದ್ದವು. ಆ ದೂರುಗಳ ಹಿನ್ನೆಲೆಯಲ್ಲಿ ಅಲ್ಲಿ ಪತ್ತೇದಾರಿಕೆ ನಡೆಸಲು ಬಂದ ಪೊಲೀಸ್ ಇಲಾಖೆಯ ಪತ್ತೇದಾರ ಕದಿರೇಗೌಡ ನಮ್ಮ ಸಹಾಯ ಯಾಚಿಸಿದರು. ಹೀಗೊಮ್ಮೆ ನಡೆದ ಘಟನೆಯಲ್ಲಿ ನಾನು ಸಾಕ್ಷಿಯಾಗಿ, ಕೊನೆಗೆ ಈ ಗುಂಪಿನ ದಮನವಾಗಿತ್ತು.
ಅಂದು ಶನಿವಾರ, ಸಂಜೆ ಆರು ಘಂಟೆಯ ಆಸುಪಾಸಿನಲ್ಲಿ ಕದಿರೇಗೌಡ ಮತ್ತವರ ತಂಡದೊಂದಿಗೆ ನಂದಿಬೆಟ್ಟದ ತಿರುವಿನಲ್ಲಿ ಎಳನೀರು ಮಾರುತ್ತಿದ್ದ ಜಯಣ್ಣನ ಅಂಗಡಿಯ ಹತ್ತಿರ ಕುಳಿತು ಕಾಯುತ್ತಿದ್ದೆವು. ನಮ್ಮ ಮುಂದೆ ಹಲವಾರು ಬೈಕುಗಳಲ್ಲಿ ಯುವ ಜೋಡಿಗಳು ಜುಮ್ಮೆಂದು ಜೋರಾಗಿ ನಂದಿಬೆಟ್ಟದ ಕಡೆಗೆ ಸಾಗುತ್ತಿದ್ದರು. ಅವರ ವಾರಾಂತ್ಯದ ಮೋಜು ಆರಂಭವಾಗಿತ್ತು, ಆದರೆ ಅದೇ ಸಮಯದಲ್ಲಿ ಯುವ ಜೋಡಿಯೊಂದರ ಜೀವನದ ಅಂತಿಮ ಕ್ಷಣಗಣನೆಯೂ ಆರಂಭವಾಗಿತ್ತು! ಕಣಿವೆಪುರದ ಹತ್ತಿರದಲ್ಲಿದ್ದ ಬೆಟ್ಟವೊಂದರ ತಪ್ಪಲಿನ ಸುಂದರ ಹಿನ್ನೆಲೆಯಲ್ಲಿ ಫೋಟೋ ತೆಗೆದುಕೊಳ್ಳುವ ಆಸೆಯಿಂದ ಬೈಕಿನಲ್ಲಿ ಬಂದ ಯುವ ಜೋಡಿಯೊಂದು ಮುಖ್ಯ ರಸ್ತೆಯಿಂದ ಪಕ್ಕಕ್ಕೆ ತಿರುಗಿ, ಆ ಬೆಟ್ಟದ ತಪ್ಪಲಿಗೆ ಕಾಲುದಾರಿಯಲ್ಲಿ ಬೈಕಿನಲ್ಲಿ ಹೋಗಿದ್ದಾರೆ, ಇದನ್ನು ಗಮನಿಸಿದ ಸುಮಾರು ಐದಾರು ಜನರಿದ್ದ ಕಳ್ಳರ ಗುಂಪು ಸದ್ದಿಲ್ಲದೆ ಅವರನ್ನು ಹಿಂಬಾಲಿಸಿ, ತಮ್ಮದೇ ಆದ ಮಾದಕ ಲೋಕದಲ್ಲಿ ಮೈ ಮರೆತು ವಿಹರಿಸುತ್ತಿದ್ದ ಆ ಪ್ರೇಮಿಗಳ ಮೇಲೆ ಧಾಳಿ ಮಾಡಿದ್ದಾರೆ, ಅವರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ದೋಚಿದ ನಂತರ ಆ ಸುಂದರ ಯುವತಿಯ ಅರೆನಗ್ನ ಉಡುಪಿನಿಂದ ಉತ್ತೇಜಿತರಾಗಿ ಅವಳನ್ನು ಎಳೆದುಕೊಂಡು ಹೋಗಿದ್ದಾರೆ. ಪ್ರತಿಭಟಿಸಿದ ಯುವಕನನ್ನು ಚೆನ್ನಾಗಿ ಚಚ್ಚಿ, ಹತ್ತಿರದ ನೀಲಗಿರಿ ಮರಕ್ಕೆ ಕಟ್ಟಿ ಹಾಕಿದ್ದಾರೆ.
ಸುಮಾರು ಒಂದು ಘಂಟೆಯವರೆಗೂ ಕಾದ ನಮಗೆ ಯಾವುದೇ ಸಂದೇಹವೂ ಬರಲಿಲ್ಲ. ನಮ್ಮ ರಕ್ಷಕ ಪಡೆಯ ಯುವಕ, ಕಣಿವೆಪುರದ ಬಂಡಿನಾಗರಾಜನನ್ನು ಕಾರ್ಖಾನೆಗೂ, ನಂದಿಬೆಟ್ಟದ ತಿರುವಿಗೂ ಮಧ್ಯದಲ್ಲಿ ಒಂದಿಬ್ಬರು ಹುಡುಗರೊಂದಿಗೆ ಓಡಾಡಿಕೊಂಡಿದ್ದು, ಏನಾದರೂ ಅಸಹಜ ಘಟನೆಗಳು, ವ್ಯಕ್ತಿಗಳು ಕಂಡರೆ ತಕ್ಷಣ ತಿಳಿಸುವಂತೆ ತಾಕೀತು ಮಾಡಿದ್ದೆವು. ಆ ಜೋಡಿ ಬೆಟ್ಟದ ಕಡೆಗೆ ಹೋಗಿದ್ದು, ನಂತರ ಐದಾರು ಜನರ ಗುಂಪು ಮಬ್ಬುಗತ್ತಲೆಯಲ್ಲಿ ಆ ಕಡೆಗೆ ಹೋಗಿದ್ದನ್ನು ಗಮನಿಸಿದ ಇವನು ತಕ್ಷಣ ನಮಗೆ ಸುದ್ಧಿ ತಿಳಿಸಲು ತನ್ನ ಸೈಕಲನಲ್ಲಿ ಧಾವಿಸಿದ್ದ. ಸುದ್ಧಿ ತಿಳಿಯುತ್ತಿದ್ದಂತೆ ಕದಿರೇಗೌಡರ ಜೀಪಿನಲ್ಲಿ ಆ ಬೆಟ್ಟದ ಕಡೆಗೆ ಧಾವಿಸಿದೆವು. ಕಾಲುದಾರಿಯ ಹತ್ತಿರ ಜೀಪು ನಿಲ್ಲಿಸಿ, ಕೈಯಲ್ಲಿ ಟಾರ್ಚು ಹಾಗೂ ದೊಣ್ಣೆಗಳನ್ನು ಹಿಡಿದು ನಮ್ಮ ಎಂಟು ಜನರ ತಂಡ ಆ ಜೋಡಿಯ ಹಾಗೂ ಕಳ್ಳರ ಹುಡುಕಾಟದಲ್ಲಿ ಹೊರಟೆವು. ಕದಿರೇಗೌಡರ ಸರ್ವಿಸ್ ರಿವಾಲ್ವರ್ ನಮ್ಮ ಮೇಲೆ ಆಕ್ರಮಣ ಮಾಡಿದರೆ ಅವರ ಎದೆ ಸೀಳಲು ಸಿದ್ಧವಾಗಿತ್ತು. ಹಾಗೆ ಹುಡುಕುತ್ತಾ ಸುಮಾರು ದೂರ ಬಂದೆವು, ಎಲ್ಲಿಯೂ ಅವರ ಸುಳಿವಿಲ್ಲ, ಅದಾಗಲೇ ಕತ್ತಲಾಗಿತ್ತು, ಹುಳು, ಕೀಟಗಳ ಜಿಯ್ಯೆನ್ನುವ ಸದ್ದು, ಅಲ್ಲಲ್ಲಿ ಕೆಲವು ಹಕ್ಕಿಗಳ ಕಿಚಪಿಚ ಸದ್ದು ಬಿಟ್ಟರೆ ಮಾನವರ ಇರುವಿಕೆಯ ಯಾವ ಶಬ್ಧವೂ ನಮಗೆ ಕೇಳಿಸುತ್ತಿರಲಿಲ್ಲ. ದಟ್ಟವಾಗಿ ಬೆಳೆದಿದ್ದ ನೀಲಗಿರಿ ಮರಗಳ ನಡುವೆ ಸರಸರ ಸದ್ದಿನೊಂದಿಗೆ ನಾವು ಮುಂದುವರೆಯುತ್ತಿದ್ದೆವು, ತೀರಾ ಬೆಟ್ಟದ ಬುಡಕ್ಕೆ ಬಂದಾಗ ನಮ್ಮ ಗುಂಪಿನಲ್ಲಿದ್ದ ಕಣಿವೆಪುರದ ಯುವಕನೊಬ್ಬ ಬೆಟ್ಟದ ಆ ಕಡೆಯ ಬುಡದಲ್ಲಿ ಒಂದು ಗವಿ ಇರುವುದಾಗಿಯೂ, ಅಲ್ಲಿ ಕೆಲವರು ಆಗಾಗ ಓಡಾಡುವುದನ್ನು ತಾನು ನೋಡಿರುವುದಾಗಿಯೂ ಪಿಸುಗುಟ್ಟಿದ. ಈಗ ನಮ್ಮ ಪಯಣ ಆ ಗವಿಯ ಕಡೆಗೆ ಸಾಗಿತು. ಕೆಲವು ಕ್ಷಣಗಳಲ್ಲಿಯೇ ಅದಾಗಲೇ ಆವರಿಸಿಕೊಂಡಿದ್ದ ಗಾಢ ಅಂಧಕಾರದಲ್ಲಿ ನಮ್ಮ ಗುಂಪು ಆ ಗವಿಯ ಬಾಗಿಲಲ್ಲಿ ನಿಂತಿತ್ತು.
ಎಲ್ಲರನ್ನೂ ಒಮ್ಮೆ ಎಚ್ಚರಿಸಿದ ಕದಿರೇಗೌಡರು ತಮ್ಮ ಸರ್ವಿಸ್ ರಿವಾಲ್ವರನ್ನು ಕೈಯಲ್ಲಿ ಸನ್ನದ್ಧವಾಗಿ ಹಿಡಿದು ಮುಂದೆ ಸಾಗಿದರು, ಅವರ ಹಿಂದೆ ಒಬ್ಬೊಬ್ಬರಾಗಿ ಗವಿಯನ್ನು ಪ್ರವೇಶಿಸಿದೆವು. ಸ್ವಲ್ಪ ದೂರದಲ್ಲಿದ್ದ ಜಗುಲಿಯಂತಹ ದೊಡ್ಡ ಕಲ್ಲೊಂದರ ಮೇಲೆ ಮಾನವಾಕೃತಿಯೊಂದು ಬಿದ್ದಿರುವುದನ್ನು ಕಂಡು, ಒಮ್ಮೆಗೇ ಟಾರ್ಚ್ ಬೆಳಗಿಸಿದರೆ, ಆ ಬೆಳಕಿನಲ್ಲಿ ನಾವೆಲ್ಲ ಸ್ತಂಭೀಭೂತರಾಗಿ ನಿಂತೆವು. ಅಲ್ಲಿ ಬಿದ್ದಿದ್ದದ್ದು ಸುಂದರ ಯುವತಿಯೊಬ್ಬಳ ನಗ್ನ ದೇಹ! ತನ್ನ ಅಂತಿಮ ಕ್ಷಣಗಳಲ್ಲಿ ಸಾಕಷ್ಟು ಹೋರಾಟ ನಡೆಸಿದ್ದರ ಕುರುಹಾಗಿ ಅಲ್ಲಲ್ಲಿ ಬಿದ್ದಿದ್ದ ಬಟ್ಟೆಯ ತುಂಡುಗಳು, ಸಾಕಷ್ಟು ಜನರ ಹೆಜ್ಜೆ ಗುರುತುಗಳು ಎದ್ದು ಕಾಣುತ್ತಿದ್ದವು. ಒಮ್ಮೆ ದೇಹವನ್ನು ಪರೀಕ್ಷಿಸಿದ ಕದಿರೇಗೌಡರು ಆಕೆ ಯಾವಾಗಲೋ ಪ್ರಾಣ ತ್ಯಜಿಸಿರುವುದನ್ನು ಧೃಡ ಪಡಿಸಿದರು. ಈಗ ಹಂತಕರ ಪತ್ತೆಗೆ ಅಣಿಯಾದೆವು, ಹಾಗೆಯೇ ಇನ್ನಷ್ಟು ಒಳ ಸರಿದಾಗ, ಅಲ್ಲಿ ಇಬ್ಬರು ಸಾಕಷ್ಟು ಮಧ್ಯ ಸೇವಿಸಿ, ಯಾವುದರ ಪರಿವೆಯೂ ಇಲ್ಲದೆ ಪವಡಿಸಿರುವುದು ಕಂಡುಬಂತು. ಅಲ್ಲಿ ಬಿದ್ದಿದ್ದ ಮಧ್ಯದ ಬಾಟಲಿಗಳು, ಸಿಗರೇಟು ತುಂಡುಗಳು, ಸತ್ತಿದ್ದ ಯುವತಿಯ ಸುಂದರ ಕೈ ಬ್ಯಾಗು, ಅವರು ನಡೆಸಿದ್ದ ಘೋರ ಕೃತ್ಯಕ್ಕೆ ಸಾಕ್ಷಿಗಳಾಗಿದ್ದವು. ಹೀಗೆ ನಾವು ಹಿಂಬಾಲಿಸಿ ಬರುವ ಕಲ್ಪನೆಯೂ ಇಲ್ಲದ ಅವರು ಸಾಕಷ್ಟು ಕುಡಿದು ಎಚ್ಚರ ತಪ್ಪಿದ್ದರು. ಅಲ್ಲಿದ್ದ ನೀರಿನ ಬಾಟಲಿಯಿಂದ ಇಬ್ಬರ ಮುಖಕ್ಕು ನೀರನ್ನೆರಚಿ, ಎಚ್ಚರಾದ ಇಬ್ಬರನ್ನೂ ಸುಪರ್ದಿಗೆ ತೆಗೆದುಕೊಂಡೆವು. ಆ ಹುಡುಗಿ ಯಾರು, ಅವಳ ಜೊತೆ ಬಂದ ಯುವಕನೆಲ್ಲಿ, ಅವರ ಗುಂಪಿನ ಇತರ ಸದಸ್ಯರೆಲ್ಲಿ, ಎಂದು ಹತ್ತಾರು ಪ್ರಶ್ನೆಗಳಿಗೆ ನಶೆಯಲ್ಲಿದ್ದ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ. ಅವರಿಬ್ಬರನ್ನು ಹೊರಗೆ ಕರೆತಂದು, ಒಮ್ಮೆ ಸರಿಯಾಗಿ ತದುಕಿದಾಗ ಒಬ್ಬ ಬೆಟ್ಟದ ಆ ಕಡೆಗೆ ಕೈ ತೋರಿಸುತ್ತಾ, ಆ ಹುಡುಗ ಅಲ್ಲಿದ್ದಾನೆಂದು ತೊದಲಿದ, ಅವನನ್ನೂ ಎಳೆದುಕೊಂಡು ನಾವು ಅತ್ತ ನಡೆದೆವು. ಅನತಿ ದೂರದಲ್ಲಿ ನೀಲಗಿರಿ ಮರಕ್ಕೆ ಕಟ್ಟಿ ಹಾಕಿದ್ದ ಯುವಕನನ್ನು ಕಂಡು ಟಾರ್ಚಿನ ಬೆಳಕಿನಲ್ಲಿ ಅತ್ತ ಓಡಿದ ನಾವು ಕಂಡಿದ್ದು, ಅದ್ಯಾವಾಗಲೋ ಇಹಲೋಕ ಯಾತ್ರೆ ಮುಗಿಸಿದ್ದ ಇಪ್ಪತ್ತರ ಹರೆಯದ ಯುವಕನ ದೇಹ. ಅವನ ಬಾಯಿಂದ ರಕ್ತ ಸುರಿದಿತ್ತು, ಇವರ ಮಾರಣಾಂತಿಕ ಹೊಡೆತಗಳಿಗೆ ತಾಳದೆ ಅವನ ತಲೆ ಸೀಳಿ ಬಿಟ್ಟಿತ್ತು. ವಾರಾಂತ್ಯದ ಮೋಜಿಗೆ ಬಂದ ಯುವ ಪ್ರೇಮಿಗಳ ಕಥೆ ಮುಗಿದು ಹೋಗಿತ್ತು!!
ಅಲ್ಲಿಂದ ಅವರಿಬ್ಬರನ್ನು ಎಳೆ ತಂದ ನಮಗೆ ಉಳಿದವರ ಸುಳಿವು ಸಿಗಲಿಲ್ಲ. ಚಿಕ್ಕಬಳ್ಳಾಪುರ ಠಾಣೆಗೆ ಆಂಬುಲೆನ್ಸ್ ಹಾಗೂ ಹೆಚ್ಚಿನ ಸಿಬ್ಬಂದಿಗಾಗಿ ತಮ್ಮ ವೈರ್ ಲೆಸ್ ನಿಂದ ಮಾಹಿತಿ ರವಾನಿಸಿದ ಕದಿರೇಗೌಡರು ಸಿಗರೇಟು ಹಚ್ಚಿ, ನಡೆದ ಘಟನೆಯ ಬಗ್ಗೆ ಮಾತಾಡುತ್ತಿದ್ದರು. ಅರ್ಧ ಘಂಟೆಯೊಳಗೆ ಹಾಜರಾದ ಇನ್ಸ್ಪೆಕ್ಟರ್ ರೆಡ್ಡಿ ಮತ್ತವರ ತಂಡ ಶವಗಳ ಪಂಚನಾಮೆ ಮುಗಿಸಿ, ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಸಿಕ್ಕಿ ಬಿದ್ದ ಕಳ್ಳರಿಬ್ಬರನ್ನು ಚೆನ್ನಾಗಿ "ಏರೋಪ್ಲೇನ್" ಎತ್ತಲಾಗಿ ಎಲ್ಲರ ಬಣ್ಣ ಬಯಲಾಗಿ, ದೊಣ್ಣೆ ನಾಗನ ಸಹಿತ ಎಲ್ಲರನ್ನೂ ಬಂಧಿಸಿ, ಸುಮಾರು ಎಂಟು ದರೋಡೆ ಹಾಗೂ ಎರಡು ಕೊಲೆ ಪ್ರಕರಣಗಳು ಬಗೆ ಹರಿದಿದ್ದವು. ಕಣಿವೆಪುರದ ಕಳ್ಳರ ತಂಡದ ನಿರ್ಮೂಲನೆಯಾಗಿತ್ತು. ನಮ್ಮ ಸಮಯೋಚಿತ ಸಹಾಯ, ಸಹಕಾರಗಳನ್ನು ಕೊಂಡಾಡಿದ ಪೊಲೀಸರು, ಆ ಕಾರ್ಖಾನೆಯಲ್ಲಿ ನಡೆಯುತ್ತಿದ್ದ ವಿಚಿತ್ರ ಸನ್ನಿವೇಶಗಳನ್ನು ಕೊನೆಗಾಣಿಸಲು ಸಂಪೂರ್ಣ ಸಹಾಯ ನೀಡುವುದಾಗಿ ಭರವಸೆಯಿತ್ತರು.
ಮುಂದೆ,,,,,,,,
Comments
ಉ: ಕಣಿವೆಯಲ್ಲಿ ಯುವಜೋಡಿಯ ಮಾರಣಹೋಮ!
In reply to ಉ: ಕಣಿವೆಯಲ್ಲಿ ಯುವಜೋಡಿಯ ಮಾರಣಹೋಮ! by somayaji
ಉ: ಕಣಿವೆಯಲ್ಲಿ ಯುವಜೋಡಿಯ ಮಾರಣಹೋಮ!