ಹೀಗೂ ಆಗುವುದು ಉಂಟೆ ??

ಹೀಗೂ ಆಗುವುದು ಉಂಟೆ ??

  ಬಕ್ರೀದ್ ಹಬ್ಬ ಹಾಗೂ ಯುಎಇ ರಾಷ್ಟ್ರೀಯ ದಿನದ ಅಂಗವಾಗಿ ಸಿಗಲಿದ್ದ ಸುಮಾರು ಹತ್ತು ದಿನಗಳ ರಜೆಗೆ ಅರ್ಜಿ ಗುಜರಾಯಿಸಿ, ಎಂಡಿಯವರಿಗೆ ಸಾಕಷ್ಟು ಬೆಣ್ಣೆ ಹೊಡೆದು ಅದನ್ನು ಗಿಟ್ಟಿಸುವಲ್ಲಿ ಸಫಲನಾಗಿದ್ದೆ. ಬುಧವಾರ, ವಾರಾಂತ್ಯದ ಕೆಲಸಗಳನ್ನೆಲ್ಲಾ ತರಾತುರಿಯಲ್ಲಿ ಮುಗಿಸಿದೆ. ಅದಾಗಲೇ ತಡವಾಗಿ ಬಿಟ್ಟಿತ್ತು, ಆತುರಾತುರವಾಗಿ ನನ್ನ ಕಾರನ್ನು ಪಾರ್ಕಿಂಗ್ನಲ್ಲಿ ಹಾಕಿ, ಟ್ಯಾಕ್ಸಿ ಹಿಡ್ಕೊಂಡು, ಆ ಪಾಕಿಸ್ತಾನಿ ಟ್ಯಾಕ್ಸಿ ಡ್ರೈವರ್ ಕೇಳಿದ ಅನಾವಶ್ಯಕ ಪ್ರಶ್ನೆಗಳಿಗೆಲ್ಲಾ ಅನ್ಯ ಮನಸ್ಕನಾಗೇ ಉತ್ತರಿಸುತ್ತಾ, ಟರ್ಮಿನಲ್-೩ಗೆ ಬಂದು ಎಲ್ಲಾ ಅಗತ್ಯ ಕ್ರಮಗಳನ್ನು ಮುಗಿಸಿ, ಡ್ಯೂಟಿಫ್ರೀಯಲ್ಲಿ ಹಾಗೇ ಅಡ್ಡಾಡಿ, ಮೂರು ಲೀಟರ್ನ "ಬ್ಲಾಕ್ ಲೇಬಲ್" ಖರೀದಿಸಿ, ಓಡುತ್ತಲೇ ಗೇಟ್ ನಂಬರ್ ೨೩ರಲ್ಲಿ ಬರುವಷ್ಟರಲ್ಲಿ ಎಲ್ಲಾ ಪ್ರಯಾಣಿಕರೂ ವಿಮಾನದ ಒಳಹೊಕ್ಕು, ಕೊನೆಯದಾಗಿ ಬರಲಿದ್ದ ನನಗಾಗಿಯೇ ಕಾಯುತ್ತಿದ್ದರು.  ನಾನು ಆ ಭರ್ಜರಿ ಬೋಯಿಂಗ್ ವಿಮಾನದೊಳ ಸೇರಿದ್ದೇ, ಕಪ್ಪು ಸುಂದರಿ ಗಗನಸಖಿ ಬಾಗಿಲು ಮುಚ್ಚಿ, ಹೊರಡಲು ಕ್ಯಾಪ್ಟನ್ಗೆ ಸಿಗ್ನಲ್ ಕೊಟ್ಟೇ ಬಿಟ್ಟಳು. ಬೆಳಗಿನ ಜಾವದ ಮೂರೂವರೆಯ ಸಮಯಕ್ಕೆ ಸರಿಯಾಗಿ ದುಬೈ ಬಿಟ್ಟಿತು ನಮ್ಮ ವಿಮಾನ. 

ಮೊದಲೇ ಬುಕ್ ಮಾಡಿದ್ದ ಕಿಟಕಿ ಪಕ್ಕದ ನನ್ನ ನೆಚ್ಚಿನ ಏಳನೇ ನಂಬರ್ ಸೀಟಿನಲ್ಲಿ ಆಸೀನನಾಗಿ ವಿಮಾನ ಮೇಲೇರುವಾಗಿನ ದುಬೈನ ಸುಂದರ ದೃಶ್ಯವನ್ನು ನೋಡುತ್ತಾ ಹಾಗೇ ಕಣ್ಮುಚ್ಚಿದೆ. ಗಗನಸಖಿ/ಸಖರಿಬ್ಬರೂ ತಮ್ಮ ತಳ್ಳುಗಾಡಿಯೊಡನೆ ಬಂದು ನನ್ನನ್ನು ತಿವಿದು ಎಚ್ಚರಿಸಿದಾಗ, ಗಡಬಡಿಸಿ ಕಣ್ಬಿಟ್ಟೆ.  ಸುಂದರ ಇಥಿಯೋಪಿಯನ್ ಗಗನಸಖಿ ತಣ್ಣಗಿನ ಸೋಡಾ ಹಾಕಿ ಕೊಟ್ಟ ಸ್ಕಾಚ್ ಕುಡಿದು, ಈ ಹತ್ತು ದಿನಗಳಲ್ಲಿ, ನನ್ನ ಐಟೆನ್ ಕಾರಿನಲ್ಲಿ ಸಕುಟುಂಬ ಸಮೇತ, ಹಾಸನಕ್ಕೆ ಹೋಗಬೇಕು, ಅಲ್ಲಿ ನಮ್ಮ ಸಂಪದದ ಗೆಳೆಯ ಹರಿಹರಪುರ ಶ್ರೀಧರ್ ಅವರನ್ನು ಭೇಟಿಯಾಗಬೇಕು, ಅಲ್ಲಿಂದ ಚನ್ನರಾಯಪಟ್ಟಣದಲ್ಲಿ ತಮ್ಮ ಶಿವಿ ಕಟ್ಟಿಸಿದ ಹೊಸಮನೆಗೆ ಹೋಗಬೇಕು, ಅಲ್ಲಿಂದ ಹೊಳೇನರಸೀಪುರಕ್ಕೆ ಹೋಗಿ, ಇನ್ನೊಬ್ಬ ತಮ್ಮ ಆನಂದ ಕಟ್ಟಿಸುತ್ತಿರುವ ಹೊಸ ಮನೆಯ ವಿನ್ಯಾಸ ನೋಡಬೇಕು, ಅವರ ಪುಟ್ಟ ಮಕ್ಕಳೊಂದಿಗೆ ನನ್ನ ನೆಚ್ಚಿನ ಹೇಮಾವತಿಯ ದಡದಲ್ಲಿ ನಾಲ್ಕಾರು ಘಂಟೆ ಕುಳಿತು ನೀರಲ್ಲಿ ಆಡುತ್ತಾ, ಕಾಲ ಕಳೆಯಬೇಕು ಎಂದೆಲ್ಲಾ ಯೋಚಿಸುತ್ತಾ ನಿದ್ದೆಗಿಳಿದೆ.  ನಾಲ್ಕು ಘಂಟೆ ಗಾಳಿಯಲ್ಲಿ ಓಡಿದ ನಮ್ಮ ಬೋಯಿಂಗು ಬೆಂಗಳೂರಿನಲ್ಲಿ ಇಳಿಯುವ ಸಮಯ ಬಂದಾಗ, ಮತ್ತದೇ ಕಪ್ಪು ಸುಂದರಿ ಬಂದು ತಿವಿದು ಎಚ್ಚರಿಸಿ ಸೀಟ್ ಸರಿ ಮಾಡಿಕೊಳ್ಳಿ ಎಂದಾಗ ಎದ್ದು ಸರಿಯಾಗಿ ಕುಳಿತು ಕಿಟಕಿಯಿಂದ ಬೆಳಗಿನ ನಮ್ಮ "ಗಾರ್ಡನ್ ಸಿಟಿಯ" ಅಂದ ಸವಿಯುತ್ತಾ ಕೆಳಗಿಳಿಯುವ ಸಮಯವನ್ನೇ ಕಾಯುತ್ತಿದ್ದೆ. ಅಂತೂ ವಿಮಾನ ಕೆಳಗಿಳಿಯಿತು, ಬಾಗಿಲು ತೆರೆಯಿತು, ಹೊರ ಬಂದೆ, ಆಹಾ! ಆ ಬೆಂಗಳೂರಿನ ತಂಗಾಳಿ, ಕೋಟಿ ಕೊಟ್ಟರೂ ಸಿಗದು, ಆ ಮರಳುಗಾಡಿನಲ್ಲಿ.  ಹಾಗೇ ನಿಲ್ದಾಣದೊಳಕ್ಕೆ ಬಂದರೆ ಸಿಡುಕುಮೂತಿಯ ವಲಸೆ ಅಧಿಕಾರಿಯ ಮುಂದೆ ನಿಂತು, ಅವನು ನನ್ನನ್ನು ಅಡಿಯಿಂದ ಮುಡಿಯವರೆಗೂ, ನಾನೇನಾದರೂ ಉಗ್ರಗಾಮಿಯೇನೋ ಅನ್ನುವಂತೆ ನೋಡುತ್ತಿದ್ದ ನೋಟ ಕಂಡು, ಸಿಟ್ಟು ಬಂದರೂ ತಡೆದುಕೊಂಡು, ಅವನು ಮುದ್ರೆ ಒತ್ತಿ ಕೊಟ್ಟ ನನ್ನ ಪಾಸ್ಪೋರ್ಟನ್ನು ಭದ್ರವಾಗಿ ಕಿಸೆಯಲ್ಲಿರಿಸಿ, ಬ್ಯಾಗೇಜ್ ಕೌಂಟರಿನಲ್ಲಿ ಅರ್ಧ ಘಂಟೆ ಕಾದು, ತಿಣುಕಾಡುತ್ತಾ ಬಂದ ನನ್ನ ಸೂಟ್ಕೇಸನ್ನೆತ್ತಿಕೊಂಡರೆ, ಅದರ ಮೇಲೆ ದೊಡ್ಡದಾಗಿ ಸೀಮೆಸುಣ್ಣದಲ್ಲಿ ಹಾಕಿದ್ದ ಎಕ್ಸ್ ಮಾರ್ಕ್ ಕಣ್ಣಿಗಪ್ಪಳಿಸಿತು!  ಅಲ್ಲಿಂದ ಮುಂದೆ ಬಂದರೆ ಕಸ್ಟಮ್ಸ್ ಅಧಿಕಾರಿಯೊಬ್ಬ ನನ್ನನ್ನು  ಹಿಡಿದು ’ಸೂಟ್ಕೇಸಿನಲ್ಲೇನಿದೆ, ನೀವದೇನೋ ತರಬಾರದ್ದ ತಂದಿದ್ದೀರಿ, ಅದಕ್ಕೇ ನಮ್ಮವರು ಎಕ್ಸ್ ಮಾರ್ಕ್ ಹಾಕಿದ್ದಾರ” ಅಂತ ಪೀಕತೊಡಗಿದ.  ಸಮಾಧಾನವಾಗಿ ಅವನಿಗೆ ಅದರಲ್ಲಿ ಚಾಕಲೇಟ್, ಪರ್ಫ್ಯೂಮ್ಸ್ ಬಿಟ್ಟರೆ ಬೇರೇನೂ ಇಲ್ಲ ಅಂತ ತಿಳಿ ಹೇಳಿದೆ, ಓಕೆ ಓಕೆ ಅಂತಲೇ ನನ್ನನ್ನು ಹೋಗ ಕೊಟ್ಟವನಿಗೊಂದು ಥ್ಯಾಂಕ್ಸ್ ಹೇಳಿ ಹೊರಬಂದೆ.

ಬೆಳಗಿನ ಒಂಭತ್ತು ಘಂಟೆಯ ಎಳೆ ಬಿಸಿಲಿನಲ್ಲಿ ಹೊರಗೆ ಸಾಲಾಗಿ ಕಾಯುತ್ತಿದ್ದ ಮೇರು ಟ್ಯಾಕ್ಸಿಯೊಂದನ್ನು ಹತ್ತಿ ಸೀದಾ ನಂದಿನಿ ಲೇ ಐಟಿಗೆ ನಡೆಯಪ್ಪಾ ಅಂದು ಕಣ್ಮುಚ್ಚಿದೆ.  ೪೫ ಕಿಲೋಮೀಟರ್ ಕ್ರಮಿಸಲು ಆ ಭಯಂಕರ ಟ್ರಾಫಿಕ್ಕಿನಲ್ಲಿ ಮುಕ್ಕಾಲು ಘಂಟೆ ತೆಗೆದುಕೊಂಡ ಪುಣ್ಯಾತ್ಮ ರಿಂಗ್ ರೋಡಿನಲ್ಲಿ ಅಣ್ಣಾವ್ರ ಸಮಾಧಿ ದಾಟಿ ಮುಂದೆ ಬಂದು ನಮ್ಮ ಮನೆಯ ತಿರುವಿನಲ್ಲಿ ನಿಲ್ಲಿಸಿಬಿಟ್ಟ.  ಯಾಕೆ, ಏನಾಯ್ತು ಅಂತ ಹೊರಗೆ ನೋಡಿದರೆ ಸಾಲಾಗಿ ಕಲ್ಲುಗಳನ್ನಿಟ್ಟು ರಸ್ತೆ ಮುಚ್ಚಿ ಬಿಟ್ಟಿದ್ದರು. ಇಲ್ಲಿಂದ ಮುಂದೆ ಕಾರು ಹೋಗೋಲ್ಲ ಸಾರ್ ಅಂದವನಿಗೆ ಹಣ ಕೊಟ್ಟು, ರಸ್ತೆ ಮುಚ್ಚಿದವರನ್ನು ಮನದಲ್ಲೇ ಶಪಿಸುತ್ತಾ, ನನ್ನ ಲ್ಯಾಪ್ ಟಾಪ್ ಬ್ಯಾಗನ್ನು ಹೆಗಲಿಗೇರಿಸಿ, ಸೂಟ್ಕೇಸನ್ನು ಇನ್ನೊಂದು ಕೈಯಲ್ಲಿ ಎಳೆಯುತ್ತಾ ಮನೆಯೆಡೆಗೆ ನಡೆದೆ. 

ಅನತಿ ದೂರದಿಂದಲೇ ಜೋರಾಗಿ ಢೋಲು ಬಾರಿಸುತ್ತಿದ್ದ ಸದ್ದು ಕೇಳಿಸುತ್ತಿತ್ತು, ಅರೆರೆ, ಇದೇನಿದು, ನಮ್ಮ ಮನೆಯ ಮುಂದೆ ಸಾಕಷ್ಟು ಜನ ಸೇರಿದ್ದಾರೆ, ಮನೆಯ ಮುಂದೆ ಬೆಂಕಿ ಬೇರೆ ಉರಿಯುತ್ತಿದೆ, ರಸ್ತೆಗೆ ಹಾಕಿದ್ದ ಶಾಮಿಯಾನಾದಡಿ ನನ್ನ ತಮ್ಮ, ಮೈದ, ಬಂಧು ಬಳಗ ಹಾಗು ಪರಿಚಯದವರೆಲ್ಲಾ ಕುಳಿತಿದ್ದಾರೆ, ಯಾರಿಗೆ ಏನಾಯ್ತು, ಒಂದು ಕ್ಷಣ ಎದೆ ಧಸಕ್ಕೆಂದಿತು!  ಹಾಗೆಯೇ ಮುಂದೆ ಬಂದವನು ಅಲ್ಲೇ ನಿಂತಿದ್ದ ಲಾರಿ ಬೆಟ್ಟೇಗೌಡರ ಮಗ ನಾಗಣ್ಣನನ್ನು ನೋಡಿ, "ಏನು ನಾಗಣ್ಣ, ಇದೇನಿದು, ಏನಾಯ್ತು"? ಅಂತ ಆತಂಕದಿಂದ ಕೇಳಿದೆ.  ಆದರೆ ಆ ಮನುಷ್ಯ ತನಗೇನೂ ಕೇಳಿಸಲೇ ಇಲ್ಲವೇನೋ ಎಂಬಂತೆ ಸುಮ್ಮನೆ ಆಕಾಶ ನೋಡುತ್ತಾ ನಿಂತಿದ್ದ.  ಅಲ್ಲಿಂದ ಮುಂದೆ ಬಂದರೆ, ಆ ಢೋಲಿನವರು ಲಯಬದ್ಧವಾಗಿ ಬಾರಿಸುತ್ತಿದ್ದ ಸಂಗೀತಕ್ಕೆ ತಕ್ಕಂತೆ ಅದಾಗಲೇ ಮೂರ್ನಾಲ್ಕು ಪೆಗ್ ಏರಿಸಿದ್ದ ನಮ್ಮ ಕುಟುಂಬದ ”ಮೂವರು ಬಾಂಡ್ಲಿಗಳು’ ಚಂದು, ದೊರೆಸ್ವಾಮಿ, ಕೃಷ್ಣೇಗೌಡ, ಮೈ ಮರೆತು ಕುಣಿಯುತ್ತಿದ್ದರು, ಅವರನ್ನು ನಿಲ್ಲಿಸಿ ’ಏಯ್, ಯಾಕ್ರೋ ಕುಣೀತಿದೀರಾ, ಏನೋ ಆಯ್ತು ನಿಮ್ಗೆ, ಏನಿದೆಲ್ಲ” ಅಂತ ಜೋರಾಗಿ ಅರಚಿದರೂ ನನ್ನ ಮಾತೇ ಕೇಳಿಸದಂತೆ ಅವರ ಪಾಡಿಗವರು ಕುಣಿಯುತ್ತಲೇ ಇದ್ದರು. ತಲೆ ಕೆಟ್ಟು ಅಲ್ಲಿಂದ ಮುಂದೆ ಬಂದರೆ ನನ್ನ ನೆಚ್ಚಿನ ಟಾಮಿ, ಯಾವಾಗಲೂ ನನ್ನನ್ನು ನೋಡಿ ಓಡಿ ಬಂದು, ನನ್ನ ಭುಜಗಳ ಮೇಲೆ ಕಾಲು ಹಾಕಿ ಮುಖವೆಲ್ಲಾ ನೆಕ್ಕುತ್ತಿದ್ದವನು, ದು:ಖವೇ ಮಡುಗಟ್ಟಿದಂತೆ ಮುಖ ಮಾಡಿಕೊಂಡು ಗೇಟಿನ ಹತ್ತಿರ ಬಾಲ ಮುದುರಿಕೊಂಡು ಮಲಗಿದ್ದ.  ’ಟಾಮಿ, ಬಾರೋ ಇಲ್ಲ” ಅಂತ ಕರೆದರೂ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ.  ಎಲ್ಲವೂ ನನಗೆ ಬಹಳ ಆಶ್ಚರ್ಯಕರವಾಗಿ ಕಾಣುತ್ತಿತ್ತು.

ಒಂದೊಂದೇ ಮೆಟ್ಟಿಲು ಹತ್ತುತ್ತಾ, ಎರಡನೇ ಮಹಡಿಯಲ್ಲಿದ್ದ ನಮ್ಮ ಮನೆಯ ಬಾಗಿಲಿಗೆ ಬಂದೆ, ಸೂಟ್ಕೇಸನ್ನು ಅಲ್ಲೇ ಬಿಟ್ಟು, ಶೂ ಕಳಚಿ, ಒಳಗೆ ಅಡಿಯಿಟ್ಟೆ.  ಹಾಲಿನ ತುಂಬಾ ಹೆಂಗಸರು ತುಂಬಿದ್ದರು, ಅವರ ಆಕ್ರಂದನದ ಧ್ವನಿಯಲ್ಲಿ ಬೇರೆ ಏನೂ ಕೇಳಿಸುತ್ತಿರಲಿಲ್ಲ.  ಅಳುವುದರಲ್ಲೇ ಎಂಗೇಜ್ ಆಗಿದ್ದ ಅವರ್ಯಾರೂ ನನ್ನ ಆಗಮನವನ್ನು ಗಮನಿಸಲೇ ಇಲ್ಲ.  ಒಳಗೆ ಹೆಜ್ಜೆಯಿಟ್ಟರೆ, ನಡು ಮಧ್ಯ ಹಾಲಿನಲ್ಲಿ, ಒಂದು ದೊಡ್ಡ ಹೂವಿನ ರಾಶಿಯೇ ಬಿದ್ದಿತ್ತು, ತಲೆಯ ಹಿಂಭಾಗ ದೀಪ ಉರಿಯುತ್ತಿತ್ತು, ನನ್ನ ಪ್ರಾಣ ಸಖಿ ಕಲಾ, ಮಗ ವಿಷ್ಣು, ಮಗಳು ಗೌತಮಿ, ಅವಳ ಸ್ನೇಹಿತೆ ಸಂಧ್ಯ, ತಂಗಿ ವೀಣಾ, ನನ್ನ ಪ್ರೀತಿಯ ಚಿಕ್ಕಮ್ಮ, ಇನ್ನೂ ಹಲವರು ಕಣ್ಣೀರು ಸುರಿಸುತ್ತಾ ಕುಳಿತಿದ್ದರು.  ಏನಾಗಿದೆ ಇವರಿಗೆಲ್ಲಾ, ನಾನು ಬಂದಿದ್ದನ್ನು ನೋಡಿಯೂ ನೋಡದಂತೆ ಗೋಳಾಡುತ್ತಿದ್ದಾರಲ್ಲಾ?  ಇದು ಯಾರು ಹೂವಿನ ರಾಶಿಯ ಮಧ್ಯೆ ಮಲಗಿರುವುದು? ಎಂದು ಬಗ್ಗಿ ನೋಡಿದೆ.  ಒಂದು ಕ್ಷಣ ನನ್ನ ಕಣ್ಣನ್ನೇ ನಾನು ನಂಬದಾದೆ, ಅದು, ಅಲ್ಲಿ ಹೂವಿನ ರಾಶಿಯ ಮಧ್ಯೆ ಮಲಗಿರುವುದು ನಾನೇ!!  ಬಾಯಿ ತುಂಬಾ ಅಕ್ಕಿ ತುಂಬಿ, ಹಣೆಯ ತುಂಬಾ ದೊಡ್ಡದಾಗಿ ವಿಭೂತಿ ಬಳಿದು, ಹರಿಶಿನ ಕುಂಕುಮ ಎಲ್ಲಾ ಹಚ್ಚಿ, ಹೂವುಗಳಿಂದ ಆ ನನ್ನ ದೇಹವನ್ನು ಮುಚ್ಚಿ ಬಿಟ್ಟಿದ್ದರು.  ಇದು ಹೇಗೆ ಸಾಧ್ಯ, ಅರೆ, ಈಗ ತಾನೇ ದುಬೈನಿಂದ ವಿಮಾನದಲ್ಲಿ ಬಂದಿಳಿದು ಮನೆಗೆ ಬರುತ್ತಿದ್ದೇನೆ, ಆದರೆ ಇಲ್ಲಿ ಇವರೆಲ್ಲಾ ನನ್ನ ಸಾವಿಗೆ ಕಂಬನಿ ಸುರಿಸುತ್ತಿದ್ದಾರೆ, ಅದು ಯಾರ ದೇಹ? ಜೊತೆಗೆ ನಾನು ಅಲ್ಲಿರುವುದನ್ನು ಯಾರೂ ಗಮನಿಸುತ್ತಲೇ ಇಲ್ಲ.  ಇದು ಹೇಗೆ ಸಾಧ್ಯ??   ಅಸಾಧ್ಯವಾದ ತಲೆನೋವು ಬಂದು ತಲೆ ಹಿಡಿದು ಹಾಗೆ ಕುಸಿದು ಕುಳಿತೆ.

ಢಮ್ಮನೆ ಮಂಚದಿಂದ ಕೆಳಗೆ ಬಿದ್ದ ನಾನು, ನಿಧಾನವಾಗಿ ಸಾವರಿಸಿಕೊಂಡು ಕಣ್ಣು ಬಿಟ್ಟರೆ, ಅರೆ, ನಾನು ಇಲ್ಲೆ ಇದ್ದೇನೆ, ದುಬೈನಲ್ಲಿ, ಕರಾಮಾದಲ್ಲಿ, ನನ್ನ ರೂಮಿನಲ್ಲಿ!  ನನ್ನ ರೂಂಮೇಟ್ ಜೋಸೆಫ್ ನನ್ನೆದುರಿನ ಅವನ ಮಂಚದಲ್ಲಿ ಆರಾಮಾಗಿ ಮಲಗಿ ಗೊರಕೆ ಹೊಡೆಯುತ್ತಿದ್ದಾನೆ.  ನನ್ನನ್ನು ಒಮ್ಮೆ ಚಿವುಟಿಕೊಂಡೆ, ನೋವಾಯಿತು.  ಓಹೋ! ನಾನಿನ್ನೂ ಬದುಕಿದ್ದೇನೆ.  ಹಾಗಾದರೆ ಇಷ್ಟೊತ್ತು ನೋಡಿದ್ದು,,,,,, ಕನಸು!  ಹೀಗೂ ಕನಸು ಬೀಳುವುದುಂಟೇ?  ಇದೆಂಥಾ ವಿಚಿತ್ರ ಕನಸು!

Rating
No votes yet

Comments