ಭೋಪಾಲ್ ಅನಿಲ ದುರಂತ - ನಾಳೆಗೆ ೨೫ ವರ್ಷ

ಭೋಪಾಲ್ ಅನಿಲ ದುರಂತ - ನಾಳೆಗೆ ೨೫ ವರ್ಷ

ನಾಳೆಗೆ ಅಂದರೆ ೩ನೇ ಡಿಸೆಂಬರ್ ೨೦೦೯ ಕ್ಕೆ ಭೋಪಾಲ್ ಅನಿಲ ದುರಂತ ಸಂಭವಿಸಿ ೨೫ ವರ್ಷ ಕಳೆಯುತ್ತವೆ. ಅದರ ಪ್ರಯುಕ್ತ ದುರ್ಘಟನೆಗೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಆವರಣದೊಳಗೆ ಏಳು ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶವಂತೆ! ನಮ್ಮ ಬಂಧುಗಳನ್ನು ಕೊಂದು ಹಾಕಿದ ಆವರಣ ಹೇಗಿದೆ ಎಂದು ನೋಡಲು ಸುವರ್ಣಾವಕಾಶ!


ಅನಿಲ ದುರಂತ ನಡೆದದ್ದು ೨ನೇ ತಾರೀಖು ಡಿಸೆಂಬರ್ ೧೯೮೪ ಮಧ್ಯರಾತ್ರಿ. ದುರಂತದ ರುವಾರಿ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್. ಯೂನಿಯನ್ ಕಾರ್ಬೈಡ್ ಒಂದು ಬಹುರಾಷ್ಟ್ರೀಯ, ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರ ತಯಾರಿಕ ಕಾರ್ಖಾನೆ. ಇದನ್ನು ೧೯೬೯ರಲ್ಲಿ ಭೋಪಾಲ್ ಹತ್ತಿರ ಸ್ಥಾಪಿಸಲಾಗಿತ್ತು.


ಸಾವಿರಾರು ಅಮಾಯಕರನ್ನು ಕೊಂದ ಘಟನೆಗೆ ಮುಖ್ಯ ಕಾರಣ ಕಾರ್ಖಾನೆಯಲ್ಲಿ ಕೀಟನಾಶಕ ಹಾಗೂ ಗೊಬ್ಬರವನ್ನು ತಯಾರಿಸಲು ಬಳಸುತ್ತಿದ್ದ ಮಿಥೇಲ್ ಐಸೋಸೈನೇಟ್ ಮತ್ತು ಲೀಥೆಲ್ ಎಂಬ ವಿಷಅನಿಲ ಸೋರಿಕೆ. (ಆದರೆ ಕೆಲವು ಮಾಹಿತಿಯ ಪ್ರಕಾರ ಉದ್ದೇಶಪೂರ್ವಕವಾಗಿಯೇ ಕೃತ್ಯ ನಡೆಸಲಾಗಿತ್ತು). ವಿಷಾನಿಲ ಎಷ್ಟರ ಮಟ್ಟಿಗೆ ಹಾನಿಮಾಡಿತೆಂದರೆ,


ನೋಡನೋಡುತ್ತಿದ್ದಂತೆ ವಿಷಾನಿಲ ಹರಡುತ್ತಿದ್ದಂತೆ ಜನ ಸಾಮೂಹಿಕವಾಗಿ ಏಕಾಏಕಿ ಜೋರಾಗಿ ಕೆಮ್ಮತೊಡಗಿದರು. ಗಂಟಲೊಳಗೆ ಬೆಂಕಿ ಕೆಂಡ ತುರುಕಿದ ಉರಿ. ಕಣ್ಣೊಳಗೆ ನೂರು ಕೆಂಪು ಮೆಣಸಿನ ಕಾಯಿ ಅರೆದು ಕುಟ್ಟಿದ ಯಾತನೆ. ಒಂದೇಮನೆ ನೋವು, ಉರಿ ಎಂದು ಅರಚುತ್ತಾ ಮನೆಯ ಹೊರಗೋಡಿ ಬರುವಷ್ಟರಲ್ಲಿ ಉಸಿರುಗಟ್ಟಿ ಸತ್ತರು. ಮುದುಕರು ಹಾಸಿಗೆಯಲ್ಲೇ ಮಡಿದರು. ಗರ್ಭಿಣಿಯರಿಗೆ ಇದ್ದಲ್ಲಿಯೇ ಗರ್ಭಪಾತವಾಯಿತು. ಆಸ್ಪತ್ರೆಯಲ್ಲಿ ಹುಟ್ಟಿದ ನೂರಾರು ನವಜಾತ ಶಿಶುಗಳು ತೊಟ್ಟಿಲಲ್ಲೇ ಅಸು ನೀಗಿದವು. ವಿಷಾನಿಲ ಯಾವ ಯಾವ ಮನೆಗೆ ಕಾಲಿಟ್ಟಿತೋ ಅಲ್ಲೆಲ್ಲ ಹೆಣಗಳು! ದಾರಿಯಲ್ಲಿ ಹೋಗುವವರು, ಬೀದಿಬದಿಯಲ್ಲಿ ಮಲಗಿದವರು, ಕಣ್ಣುಗಳನ್ನು ತೆರೆಯುವುದರೊಳಗೆ ಶಾಶ್ವತವಾಗಿ ಕಣ್ಮುಚ್ಚಿದ್ದರು. ಸಾವಿರಾರು ಮಂದಿ ದಿಕ್ಕಾಪಾಲಾಗಿ ಓಡಿದರು. ದಿಗ್ಭ್ರಮೆಯಲ್ಲಿ ಅನೇಕರಿಗೆ ಎತ್ತ ಕಡೆ ಓಡಬೇಕೆಂಬುದೇ ತಿಳಿಯಲಿಲ್ಲ. ಬಹುತೇಕರು ಅನಿಲ ಸೋರಿಕೆಯಾಗುತ್ತಿದ್ದ ಕಡೆಗೇ ಓಡತೊಡಗಿದರು. ಧಾವಂತದಲ್ಲಿ ಕಾಲ್ತುಳಿತಕ್ಕೊಳಗಾಗಿ ಸತ್ತರು, ಗಾಯಗೊಂಡರು. ಬೆಳಗ್ಗೆ ಹೊತ್ತಿಗೆ ಸುಮಾರು ಭೋಪಾಲದ ಸುಮಾರು ೨೦ ಸಾವಿರ ಜನರು ಶವವಾಗಿದ್ದರು. ಕನಿಷ್ಠ ಒಂದು ಲಕ್ಷ ಜನರು ಅಸ್ವಸ್ಥರಾದರು. ವಿಷಾನಿಲ ಸೇವಿಸಿದವರಿಗೆಲ್ಲ ರಕ್ತವಾಂತಿಯಾಗಿ ರಸ್ತೆಗಳಲ್ಲೆಲ್ಲ ನೆತ್ತರು ಹರಿಯುತ್ತಿತ್ತಂತೆ! ಡ್ರೈನೇಜ್ ನಲ್ಲಿಯೂ ಕೆಂಪು ಬಣ್ಣ ಹರಡಿಕೊಂಡಿತ್ತಂತೆ. ಮರುದಿನ ಗಾಯಗೊಂಡವರಿಗೆ ವಿಷಾನಿಲ ಪರಿಣಾಮಕ್ಕೊಳಗಾದವರಿಗೆ ಚಿಕಿತ್ಸೆ ಕೊಡಲು ವೈದ್ಯರೇ ಇರಲಿಲ್ಲ. ಏಕೆಂದರೆ ಅವರೂ ಬಲಿಯಾಗಿ ಹೋಗಿದ್ದರು! ಹೆಣ ಸಾಗಿಸುವವರು ಇರಲಿಲ್ಲ. ದಾರಿಯಲ್ಲೆಲ್ಲ ರಕ್ತ ಕಕ್ಕಿಕೊಂಡು ಬಿದ್ದಿದ್ದ ಶವಗಳ ರಾಶಿ! ಇವಿಷ್ಟು ಮೊದಲನೆಯ ದಿನದ ಪರಿಣಾಮ. ಅಲ್ಲಿಯ ಜನರು ಇಂದಿಗೂ ತಿಂಗಳಿಗೆ -೧೦ ಜನರು ಸಾವಿನ ಬಾಗಿಲನ್ನು ಮುಟ್ಟುತ್ತಾರೆ. ಕಳೆದ ಇಪ್ಪತ್ತೈದು ವರ್ಷದಿಂದ ಅದೆಷ್ಟು ಜನ ಸತ್ತಿದ್ದಾರೋ ದೇವರಿಗೆ ಗೊತ್ತು. ಈಗಲೂ ಅಲ್ಲಿಯ ಜನರು ಅಸ್ತಮಾ, ಅಲರ್ಜಿ, ಶ್ವಾಸಕೋಶ, ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳಿಂದ ನರಳುತ್ತಿದ್ದಾರೆ. ಹುಟ್ಟುವ ಮಕ್ಕಳು ಅಂಗವಿಕಲರಾಗಿಯೋ, ಉಸಿರಾಟ ಸಂಬಂಧಿ ಕಾಯಿಲೆಗಳೊಂದಿಗೋ ಹುಟ್ಟುತ್ತಿದ್ದಾರೆ!


ಈ ಸಂಸ್ಥೆಯ ಮಾಲೀಕ ಮುಖ್ಯಸ್ಥ (CEO) ವಾರೆನ್ ಆಂಡರ್ಸನ್ ಈ ಘಟನೆ ನಡೆದ ೩-೪ ದಿನದಲ್ಲೆ ಅರೆಸ್ಟ್ ಆದರೂ ಕೂಡ ಡಿಸೆಂಬರ್ ೮, ೧೯೮೪ ರಂದು ಬಿಡುಗಡೆಯಾದರು. ಕೆಲ ಮಾಹಿತಿಯು, ತಲೆಮರೆಸಿಕೊಂಡಿದ್ದಾರೆಂದು ಹೇಳುತ್ತವೆ. ತಲೆಮರೆಸಿಕೊಂಡಿದ್ದಾರೆನ್ನುವುದಕ್ಕಿಂತ ನಮ್ಮ ಆಗಿನ ಘನ ಸರ್ಕಾರವು ಅವನನ್ನು ಅಮೆರಿಕಾಕ್ಕೆ ಕಳುಹಿದರು. ನಂತರ ಸಂಧಾನವಾಗಿ ೪೭೦ ಕೋಟಿ ರೂಪಾಯಿಯನ್ನು ಪರಿಹಾರವಾಗಿ ಪಡೆಯಲಾಯಿತು. ಈ ಹಣ ಇನ್ನೂ ಸಂತ್ರಸ್ತರನ್ನು ತಲುಪಿಲ್ಲ. ಪರಿಹಾರಕ್ಕಾಗಿ ಹೋರಾಟ ನಡೆದಿದೆ. ಸಂಸ್ಥೆಯ ಮುಖ್ಯಸ್ಥನನ್ನು ಅಪರಾಧಿ ಹಾಗೂ ಕೊಲೆಪಾತಕ ಎಂದು ನ್ಯಾಯಾಲಯವು ಘೋಷಣೆ ಮಾಡಿದ್ದರೂ ಅವನನ್ನು ಬಂಧಿಸುವ ಧೈರ್ಯವನ್ನು ನಮ್ಮ ಸರ್ಕಾರ ಮಾಡಿಲ್ಲ. ಅಮೇರಿಕ ಸರಕಾರದ ಹಿತವಾದ ರಕ್ಷಣೆಯಲ್ಲಿ ಸುಖವಾಗಿದ್ದಾರೆ ಅಪರಾಧಿಗಳು. ಅಪರಾಧಿಗಳನ್ನು ಹಿಡಿದರೆ ಎಲ್ಲಿ ಒಳಕ್ಕೆ ಹರಿದುಬರುವ ಬಂಡವಾಳ ತಪ್ಪುತ್ತದೆಯೋ ಎಂದು ಹೆದರಿಕೆ ನಮ್ಮನ್ನು ಆಳುವವರಿಗೆ!


ಪರಿಸರಕ್ಕೆ ದುರಂತದಿಂದ ಉಂಟಾದ ಹಾನಿ ಕಡಿಮೆಯೇನಲ್ಲ. ಸುತ್ತಮುತ್ತಲಿನ ಬಡಾವಣೆಗಳಲ್ಲಿ ರಾಸಾಯನಿಕ ತ್ಯಾಜ್ಯಗಳಿಂದಾಗಿ ಅಂತರ್ಜಲ ಕಲುಷಿತಗೊಂಡಿದೆ ಎಂಬುದನ್ನು ಅಲ್ಲಿನ ಸಂಸ್ಥೆಗಳು ಹಾಗೂ ಜಿಲ್ಲಾಡಳಿತ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ವಾಯು ಉಸಿರಾಡಲು ಅಯೋಗ್ಯವಾಗಿ ದಶಕಗಳೇ ಕಳೆದು ಹೋದವು! ಮಣ್ಣಿನಲ್ಲಿ ಅದೆಷ್ಟು ವಿಷ ಸೇರಿದೆಯೋ ಬಲ್ಲವರಾರು? ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆಯುವ ತರಕಾರಿಗಳಲ್ಲಿ ವಿಷ ಸೇರಿರುವ ಬಗ್ಗೆ ಅಧ್ಯಯನ ವರದಿಗಳು ತಿಳಿಸುತ್ತವೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ವ್ಯವಧಾನ ಯಾರಿಗಿದೆ? ಎಷ್ಟೆಂದರೂ ಜೀವನ ಎಂದರೆ ಅತ್ಯಂತ ಕಡಿಮೆ ಬೆಲೆಯದಲ್ಲವೇ ಭವ್ಯ ಭಾರತ ದೇಶದಲ್ಲಿ? ಯಾರು ಯಾರನ್ನು ಯಾವಾಗ ಬೇಕಾದರೂ ಕೊಂದು ಹಾಕಬಹುದು, ಅದರಲ್ಲೂ ಸಾಮೂಹಿಕವಾಗಿ ಕೊಂದರೆ ಬೆಲೆ ಹೆಚ್ಚು!

Rating
No votes yet

Comments