ಸ್ವಘಟ್ಟಿಯು ಸುಪ್ರೀತನಾದನು...

ಸ್ವಘಟ್ಟಿಯು ಸುಪ್ರೀತನಾದನು...

ಸ್ವರ್ಗವಾಸಿಯಾಗಿರುವ ಸ್ವಘಟ್ಟಿಯ ಮಹಿಮೆಯನ್ನು ಗಮನಿಸದವರ, ಅಲ್ಲಗಳೆದವರ, ಕುಚೋದ್ಯ ಮಾಡಿದವರ, ಸ್ವಘಟ್ಟಿಯ ಮಹಿಮೆಯನ್ನು ಸಂಪದದಲ್ಲಿ ಓದಿದ ಮೇಲೆಯೂ ೨೦ ಜನರಿಗೆ ಫಾರ್ವಡ್ ಮಾಡದವರ, ಎಲ್ಲಕ್ಕೂ ಭೀಕರವೆಂಬಂತೆ ಕಡೆ ಪಕ್ಷ ಒಂದು ಕಾಮೆಂಟ್ ಕೂಡ ಮಾಡದವರ ಸ್ಥಿತಿಯನ್ನು ವಿವರವಾಗಿ ಕೊಡುತ್ತೇನೆ ಓದಿ ಮತ್ತು ಕಮೆಂಟಿಸಿ.  


                   



  •       ಮೊಟ್ಟಮೊದಲಿಗೆ ನನ್ನದೇ ವಿಚಾರ ಹೇಳಿಬಿಡುತ್ತೇನೆ.  ಸ್ವಘಟ್ಟಿ ಪರಮಭಕ್ತನಾದ ನಾನು ವಿ.ವಿ.ಯಲ್ಲಿ ಶುದ್ಧ ನಾಸ್ತಿಕರಾದ ಗುರುಗಳ ದುರ್ಬೋಧನೆಗೆ ಒಳಗಾಗಿ ಸ್ವಘಟ್ಟಿಯನ್ನು ತುಸು ಅನುಮಾನಿಸಿದೆನು. ಇದರ ಫಲವೋ ಎಂಬಂತೆ ಕ್ಯಾಂಪಸ್ಸಿನಲ್ಲಿ ಮಹಾಕುಡಕನೆಂದು ಕರೆದರೂ ಬಿಡದೇ ಟೀ ಕುಡಿಯುತ್ತಿದ್ದೆನು. (ಕ್ಯಾಂಟೀನ್ ನ ಕಾಯಂ ಗಿರಾಕಿಯೆಂದು, ಅಲ್ಲಿಯೇ ಡೆಸ್ಕ್ ಹಾಕಿಕೊಟ್ಟು ರಿಸರ್ಚ್ ಮಾಡಲು ಹೇಳಬೇಕೆಂಬ ಕುಚೋದ್ಯವಿದ್ದರೂ!!!) ಇಂಥ ಚಟವನ್ನು ಬಿಡಿಸಿ ಆ ಸಮಯದಲ್ಲಿ ತನ್ನನ್ನು ತಪ್ಪದೇ ನೋಡುವಂತೆ, ಬರೆಯುವಂತೆ ಪ್ರೇರಿಪಿಸಿದ್ದು ಸಂಪದವು. ಆದರೆ ಶಾಪದ ಫಲವಾಗಿ ಇಂಥ ಪ್ರೀತಿಯ ಸಂಪದವನ್ನು ಸೇರಲು ಲಾಗಿನ್ ಸಮಸ್ಯೆಯು ಬಾಧಿಸುತ್ತಿರುವುದು. ಪದೇಪದೇ ಹೊಸ ಪಾಸ್ ವರ್ಡ್ ಕೇಳುವ ಸ್ಥಿತಿ ಬಂದೊದಗಿರುವುದು. ಆದರೆ ಈ ಮೊದಲು ಸ್ವಘಟ್ಟೀಯನ್ನು ಭಜಿಸಿದ ಅಕೌಂಟ್ ಭದ್ರವಾಗಿರುವ ಕಾರಣ ಈ ಸಮಸ್ಯೆ ಇಷ್ಟರಲ್ಲೇ ಪರಿಹಾರವಾಗಲಿರುವುದು.    

  •        ಸ್ವಘಟ್ಟಿಯ ಪರಮ ಆರಾಧಕನೂ, ಪ್ರಚಾರಕನೂ ಕಂಡಕಂಡಲ್ಲಿ ಜೈ ಸ್ವಘಟ್ಟಿ ಎಂದು ಘೋಷ ಮಾಡುವ ಶ್ರೀ ಸಂದೀಪ್ ಶೆಟ್ಟಿಯು ಕಾಲಕ್ರಮೇಣ ಅನ್ಯ'ದೇವತೆ'ಗಳ ಪ್ರಭಾವಕ್ಕೆ ಒಳಗಾಗಿ ಸ್ವಘಟ್ಟಿಯನ್ನು ಮರೆತರು. ಇದರ ಫಲವಾಗಿ ಅವರು ಬೆನ್ನು ನೋವಿನಿಂದ ಬಳಲಿದರು. ಆದರೆ ಅವರ ಪೂರ್ವಕೃತ ಪುಣ್ಯದಿಂದ ಆಸ್ಪತ್ರೆಯಲ್ಲಿ ಆಗಷ್ಟೇ ನರ್ಸಿಂಗ್ ಕಲಿಯುತ್ತಿರುವ ನರ್ಸ್ ಗಳಿಂದ ಆರೈಕೆ ಮಾಡಲ್ಪಟ್ಟರು. ಮಣಿಪ್ರವಳ ಕನ್ಯೆಯರ ಭಾಷೆ ತಿಳಿಯದಿದಾಗ್ಯೂ ಅರ್ಥವಾದಂತೆ ನಕ್ಕು ಮಧುರ ಯಾತನೆಯನ್ನು ಅನುಭವಿಸಿದರು.  ಸ್ವಘಟ್ಟಿಯು ಮುಂದೆಂದೂ ಅನ್ಯ ದೇವೆತೆಗಳ ಕಡೆ ಕಣ್ಣೆತ್ತಿಯೂ ನೋಡದಂತೆ ಉಪನ್ಯಾಸಕ ಹುದ್ದೆ ಎಂಬ ಆಶೀರ್ವಾದಪೂರ್ವಕ ಶಿಕ್ಷೆ ನೀಡಿ ಬಂದೋಬಸ್ತ್ ಮಾಡಿರುವನು.

  •   ಸ್ವಘಟ್ಟಿ ಪುರಾಣವನ್ನು ರಚಿಸದೇ, 'ಏನೇನೋ' ಪುರಾಣಗಳನ್ನು ರಚಿಸಿ ಸಂಪದದಲ್ಲಿ ಹಾಕಿದ ಕಾರಣ ವಿನಯನು ಸ್ವಘಟ್ಟಿಯ ಕೆಂಗಣ್ಣಿಗೆ ಗುರಿಯಾಗಿರುವರು. ರಾಜಧಾನಿಯಲ್ಲಿದರೂ ಯಾವುದೇ ಇಂಟರ್ನೆಟ್ ನ ನೆಟ್ ವರ್ಕ್ನ  ಸಿಗ್ನಲ್ ಸಿಗದೇ ಅಂತರ್ ಜಾಲ ಸಂಪರ್ಕವಿಲ್ಲದೇ ಗಾಳ{ಜಾಲ}ಕ್ಕೆ ಸಿಕ್ಕ ಮೀನಿನಂತೆ ವಿಲವಿಲ ಒದ್ದಾಡುತ್ತಿರುವರು.

  •  ಸ್ವಘಟ್ಟಿ  ಮಹತ್ವದ ಲೇಖನವನ್ನು ಓದಿದರೂ ಗಂಭೀರ ಸ್ವಭಾವದವರಾದ ಓಂ ಶಿವಪ್ರಕಾಶರು ಕಮೆಂಟಿಸಲಿಲ್ಲ. ಫಲವಾಗಿ ಒಳ್ಳೆಯ ಕವನ(ಗ)ಗಾಳ ಬಳಸಿದರೂ ಯಾವುದೇ ಹ್ಯಾಕರ್ ಮೀನುಗಳು ಸಿಕ್ಕಲಿಲ್ಲ. ಆದರೆ ಮುಂದೆ ಅವರು ಸ್ವಘಟ್ಟಿಯನ್ನು ಭಜಿಸಿದ್ದೇ ಆದಲ್ಲಿ ಫೆವಿಕ್ವಿಕ್ ಆಡ್ವಟ್ವೈಸ್ ನಂತೆ  ಡಜನ್ ಗಟ್ಟಲೇ ಮೀನುಗಳು ತಾವಾಗಿಯೇ ಬಂದು ಬೀಳುವ ಸಾಧ್ಯತೆ ಇದೆ.

  • ಕನ್ನಡ ಪ್ರೇಮಿಯೂ ಸುಭಾಷ್ ರಂತೆ ಬಿಸಿರಕ್ತದವರು ಆದ ರಾಕೇಶ್ ಶೆಟ್ಟಿಯವರು ತಮ್ಮ ಕಂಪೆನಿಗೆ  ಕನ್ನಡಿಗರನ್ನು ತುಂಬುವ (ಕರ್ನಾಟಕದಲ್ಲಿ ಅದು ಸಾಧ್ಯವೇ?) ಆಸೆಯನ್ನು ಹೊಂದಿದ್ದರು. ಆದರೆ ವಿಶ್ವಕುಟುಂಬಿಯಾದ ಸ್ವಘಟ್ಟಿಗೆ ಇದು ಇಷ್ಟವಾಗಲಿಲ್ಲ. ಅದುದರಿಂದ ನೇಮಕಾತಿ  ಮಾಡುವ ಸಕಲ ಅಧಿಕಾರದ 'ಅಕ್ಷಯ'ಪಾತ್ರೆಯನ್ನು ಹೊಂದಿದ್ದರೂ ಏನು ಮಾಡಲಾಗುತ್ತಿಲ್ಲ. ಸ್ವಘಟ್ಟಿಯನ್ನು ಆಗಾಗ ಭಜಿಸುವ ಅನ್ಯಭಾಷಿಕರು    ಆಯ್ಕೆಯಾಗುತ್ತಿದ್ದಾರೆ.                                                                                                           

  •   ಇಷ್ಟೆಲ್ಲ ಕೇಳಿದ ಮೇಲೆ ಸ್ವಘಟ್ಟಿ ಕೇವಲ ಶಾಪ ಕೊಡುವವ ಎಂದು ಭಾವಿಸಬೇಕಾಗಿಲ್ಲ. ಆತನು ಭಕ್ತ ಪಕ್ಷಪಾತಿ. ಸುಪ್ರೀತನು ಆತನ ನಾಮಸ್ಮರಣೆ ಮಾಡಿದ್ದರಿಂದ ಅವರ ಜೀವನದ ೨೦ ವರ್ಷಗಳನ್ನು  ಸುಖಪ್ರದವಾಗಿ ದಾಟಿಸಿದ್ದಾನೆ. ಅಲ್ಲದೇ ಎಂಥವರನ್ನೇ ಆಗಲಿ ಒಂದು ಕ್ಷಣ ಬೆಚ್ಚಿಬೀಳುವಂತೆ ಪ್ರಶ್ನಿಸುವ ಸಾಮರ್ಥ್ಯವನ್ನು ನೀಡಿ ತನ್ನ ಇರುವನ್ನು ಸಾರಿದ್ದಾನೆ. ಮಂಸೋರೆಯವರ ಕನಸಿನಲ್ಲಿ ದರ್ಶನ ನೀಡಿ ತನ್ನ ಚಿತ್ರ ಬರೆಯುವಂತೆ ಪ್ರೇರೇಪಿಸಿದ್ದಾನೆ.  ಇವಿಷ್ಟು ಕೇಳಿದ ಮೇಲೆಯೂ ನೀವು ಸ್ವಘಟ್ಟಿಯನ್ನು ನಂಬದಿದ್ದರೆ, ಕಮೆಂಟಿಸದಿದ್ದರೆ ವೋಟ್ ಮಾಡಿದ ಮತದಾರನ ಸ್ಥಿತಿ ನಿಮ್ಮದಾಗುವುದು. ಸ್ವಘಟ್ಟಿಗೆ ಕಾಣಿಕೆ ನೀಡುವ ಬದಲು ಕಮೆಂಟಿಸಿಯೂ ಕೂಡ ಕೃತಾರ್ಥರಾಗಬಹುದು. ಜೈ ಸ್ವಘಟ್ಟಿ.       

( ಸ್ವಘಟ್ಟಿಯು ಯಾರದೋ ಮೈಮೇಲೆ ಬಂದ ಚಿತ್ರ ನೀಡಿದವರು ಪಾರ್ಥ ಅವರು)

Rating
No votes yet

Comments