ಲಾಸ್ಟ್ ಬೆಂಚ್ ಲೀಲೆ...

ಲಾಸ್ಟ್ ಬೆಂಚ್ ಲೀಲೆ...

ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್ ಬೆಂಚ್್ನಲ್ಲೇ ಕುಳಿತದ್ದು. ಏನಿದ್ದರೂ ಕ್ಲಾಸಿನಲ್ಲಿ ಫಸ್ಟ್ ಬೆಂಚ್ ಸ್ಟೂಡೆಂಟ್ ಅಂತಾ ಹೇಳಿಕೊಳ್ಳುವುದರಲ್ಲಿ ಏನೋ ಒಂದು ರೀತಿ ಹೆಮ್ಮೆ. ಫಸ್ಟ್ ಬೆಂಚ್ ಅಂದರೆ ವಿಐಪಿಗಳ ಸೀಟು, ಅಲ್ಲಿ ಕುಳಿತುಕೊಳ್ಳುವವರೆಲ್ಲಾ ಬುದ್ಧಿವಂತರು, ಲಾಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವವರೆಲ್ಲರೂ ದಡ್ಡರು ಎಂಬುದು ಅಂಬೋಣ. ಅದಕ್ಕಾಗಿಯೇ ವಿದ್ಯಾರ್ಥಿ ದೆಸೆಯಲ್ಲಿ ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವುದೆಂದರೆ ಏನೋ ಸಾಧನೆ ಮಾಡಿದಂತೆ. ಜೊತೆಗೆ ಹೆತ್ತವರಿಗೂ ತಮ್ಮ ಮಕ್ಕಳು ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂದು ಹೇಳಲು ಹೆಮ್ಮೆಯ ವಿಷಯವೇ. ಫಸ್ಟ್ ಬೆಂಚಿನಲ್ಲಿ ಕುಳಿತುಕೊಳ್ಳುವವರೆಲ್ಲಾ ಜಾಣರು, ಅವರು ನಗುವುದು ಕಡಿಮೆ ಎಂದೆಲ್ಲಾ ಲಾಸ್ಟ್ ಬೆಂಚ್್ನವರು ಕಿರಿಕ್ ಮಾಡುತ್ತಾರೆ. ಅದು ನಿಜವೂ ಹೌದು.


ನಾನೇನು ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ, ಆದ್ರೆ ಪ್ಲಸ್ ಟು ವರೆಗೆ ಫಸ್ಟ್ ಬೆಂಚ್್ನಲ್ಲಿ ಕುಳಿತು ಪಾಠ ಕೇಳುವುದು ಬೋರು ಬೋರು ಎನಿಸಿತ್ತು. ಕಾಲೇಜಿಗೆ ಕಾಲಿಟ್ಟ ಮೇಲೆ ಏನೋ ಸಮಾಧಾನ. ಇನ್ಮುಂದೆ ಯಾರು ನೀನು ಈ ಬೆಂಚ್್ನಲ್ಲೇ ಕುಳಿತುಕೊಳ್ಳಬೇಕೆಂದು ಹೇಳಲ್ಲ. ನಮ್ಮದು ಇಂಜಿನಿಯರಿಂಗ್ ಕಾಲೇಜು, 40 ಮಂದಿಯಿರುವ ಒಂದು ಕ್ಲಾಸು ರೂಮಿನಲ್ಲಿ ಹಿಂದಿನ ಬೆಂಚ್್ನಲ್ಲಿ ಕುಳಿತುಕೊಳ್ಳುವುದೆಂದರೆ ಅದರ ಮಜವೇ ಬೇರೆ. ಆವಾಗಲೇ ಗೊತ್ತಾದದ್ದು ಲಾಸ್ಟ್ ಬೆಂಚ್ ಫ್ರೀಡಂ ಅಂದ್ರೆ ಏನೂಂತ. ಈ ವರೆಗೆ ಅಚ್ಚರಿಯ ಕೂಪವಾಗಿದ್ದ ಲಾಸ್ಟ್ ಬೆಂಚ್್ನಲ್ಲಿ ನಾನು ನನ್ನ ಗೆಳತಿಯರಾದ ಶಿಮ್, ಶಾಮ್ (ಶಿಮ್ನಾ ಮತ್ತು ಶಮೀಮಾ ಹೆಸರನ್ನು ಶಾರ್ಟ್ ಮಾಡಿ) ಜೊತೆಯಾಗಿ ಕುಳಿತು ಮಾಡಿದ ತರ್ಲೆಗಳಿಗೆ ಲೆಕ್ಕವೇ ಇರಲ್ಲ. ನಮ್ಮ ಕ್ಲಾಸಿನಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಒಟ್ಟಿಗೆ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳಬಹುದಾಗಿತ್ತು ಮಾತ್ರವಲ್ಲದೆ ಒಂದೊಂದು ದಿನ, ಅಲ್ಲದಿದ್ದರೆ ಒಂದೊಂದು ಪಿರಿಯಡ್್ನಲ್ಲಿ ತಮ್ಮ ಜಾಗ ಬದಲಿಸಿ ಎಲ್ಲಿ ಬೇಕಾದರೂ ಕುಳಿತುಕೊಳ್ಳುವ ಸ್ವಾತಂತ್ರ್ಯವಿರುತ್ತಿತ್ತು. ಆದರೆ ನಾವು ಮೂವರು ಎಂದೂ ಆ ಲಾಸ್ಟ್ ಬೆಂಚ್ ಬಿಟ್ಟು ಬೇರೆ ಎಲ್ಲಿಗೂ ಹೋಗಲ್ಲ. ಲಾಸ್ಟ್ ಬೆಂಚ್ ಅಂದರೆ ಶಿಮ್, ಶಾಮ್, ರ್ಯಾಶ್ (ನನ್ನ ಹೆಸರು)ರ ಅಪ್ಪನ ಸೊತ್ತು ಅದಕ್ಕೆ ಅವರು ಅದನ್ನು ಬಿಟ್ಟು ಕದಲಲ್ಲ ಎಂದು ಇತರ ವಿದ್ಯಾರ್ಥಿಗಳು ನಮ್ಮನ್ನು ತಮಾಷೆ ಮಾಡುತ್ತಿದ್ದರು.

ಲಾಸ್ಟ್ ಬೆಂಚ್್ಗೆ ಒಂದು ಅಸಾಧಾರಣ ಶಕ್ತಿಯಿದೆ ಎಂದು ಅರಿವಾದದ್ದು ಅಲ್ಲಿ ಕುಳಿತಾಗಲೇ. ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವಂತೆ ಮುಖ ಗಂಟಿಕ್ಕಿ ಕುಳಿತುಕೊಳ್ಳಬೇಕಾಗಿಲ್ಲ. ಏನಾದರೂ ಸೈಡ್ ಬ್ಯುಸಿನೆಸ್ (ಏನೂಂತಾ ಮಾತ್ರ ಕೇಳ್ಬೇಡಿ) ಮಾಡಬೇಕಾದರೆ ಭಯ ಪಡಬೇಕಾಗಿಲ್ಲ. ಪಾಠ ಬೋರು ಎಂದೆನಿಸಿದರೆ ನೋಟ್ ಬುಕ್್ನ ಕೊನೆಯ ಪೇಜಲ್ಲಿ ಏನಾದರೂ ಗೀಚ ಬಹುದು. ನೋಟ್ ಬುಕ್ ಸಿಕ್ಕದಿದ್ದರೆ ಡೆಸ್ಕೇ ನಮ್ಮ ಡ್ರಾಯಿಂಗ್ ಬೋರ್ಡು. ನಿದ್ದೆ ಬಂದರೂ ಆರಾಮವಾಗಿ ನಿದ್ದೆ ಮಾಡಬಹುದು. ಆದರೂ ಕೆಲವು ಟೀಚರ್್ಗಳು ಲಾಸ್ಟ್ ಬೆಂಚಿನ ಮೇಲೆ ಕಣ್ಣು ನೆಟ್ಟಿರುತ್ತಾರೆ. ನಮ್ಮೊಬ್ಬರು ಇಕಾನಾಮಿಕ್ಸ್ ಟೀಚರ್ ಇದ್ರು, ಅವರಂತೂ ನಮ್ಮ ಲಾಸ್ಟ್ ಬೆಂಚ್್ನಲ್ಲಿರುವ (ನಾವು)ತ್ರಿಮೂರ್ತಿಗಳನ್ನೇ ನೋಡಿಕೊಂಡು ಪಾಠ ಮಾಡುತ್ತಿದ್ದರು. ಅವರ ಕಣ್ಣು ತಪ್ಪಿಸಿ ನಮ್ಮಲ್ಲಿ ಯಾರಾದರೂ ಒಬ್ಬರು ಏನಾದರೂ ತರ್ಲೆ ಮಾಡಿದ್ರೆ ಸಾಕು, 'ಲಾಸ್ಟ್ ಬೆಂಚ್ ಗರ್ಲ್ಸ್ ಸ್ಟಾಂಡಪ್್' ಅಂತಾ ಹೇಳ್ತಿದ್ರು. ಆವಾಗ ನಾವು ತ್ರಿಮೂರ್ತಿಗಳು ಎದ್ದು ನಿಲ್ಲುತ್ತಿದ್ದೆವು. ಮತ್ತೆ ನಾವು ಎದ್ದು ನಿಂತುಕೊಂಡಿರುವುದನ್ನು ನೋಡಿ ಅವರಿಗೂ ಕಿರಿಕಿರಿ ಆದಾಗ 'ಯು ಕ್ಯಾನ್ ಸಿಟ್್' ಅಂತಾ ಹೇಳುತ್ತಿದ್ದರು. ಇನ್ನು ಕೆಲವು ಟೀಚರ್್ಗಳು ಮೆಲ್ಲ ಮಾತಾಡುವವರು. ಅದಕ್ಕಾಗಿ ಕಿವಿಯರಳಿಸಿ ಪಾಠ ಕೇಳ್ಬೇಕು ಎಂಬ ಒಂದು ವಿಷ್ಯ ಬಿಟ್ರೆ ಬೇರೇನೂ ತೊಂದರೆಯಿರಲ್ಲ. ಮಾತ್ರವಲ್ಲದೆ ಟೀಚರ್ ಬೋರ್ಡಿನತ್ತ ತಿರುಗಿದರೆ ಕಿಸಕ್ಕನೆ ನಗುವ, ಕಿಟಿಕಿಯ ಮೂಲಕ ಹೊರಗೆ ಏನೆಲ್ಲಾ ನಡೆಯುತ್ತಿದೆ ಎಂಬೆಲ್ಲಾ ವಿಷಯಗಳನ್ನು ನೋಡುವ ಭಾಗ್ಯ ದಕ್ಕಿರುವುದೇ ನಮಗೆ. ಇನ್ನೂ ಕೆಲವು ಟೀಚರ್್ಗಳು ತರ್ಲೆ ಮಾಡಿದರೆ ಹುಡುಗರ ಜೊತೆ ಅವರ ಬೆಂಚ್್ನಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಿದ್ದರು. ಅಲ್ಲಿ ಕುಳಿತರೇನು? ಇಲ್ಲಿ ಕುಳಿತರೇನು? ಹುಟ್ಟು ಗುಣ ಬೆಟ್ಟ ಹತ್ತಿದರೂ ಬಿಡದು ಎಂಬಂತೆ ಅಲ್ಲಿ ಡೀಸೆಂಟಾಗಿ ಕುಳಿತಿರುವ ಹುಡುಗರನ್ನೂ ತರ್ಲೆ ಮಾಡಿ ಅವರಿಗೂ ತರ್ಲೆ ಎಂಬ ಬಿರುದು ಬರುವಂತೆ ಮಾಡುತ್ತಿದ್ದೆವು. ಆಮೇಲೆ ಇನ್ನು ಈ ತ್ರಿಮೂರ್ತಿಗಳಿಂದಾಗಿ ಇಡೀ ಕ್ಲಾಸೇ ತರ್ಲೆ ಆಗುವುದು ಬೇಡ ಎಂದು ತದನಂತರ ಯಾವ ಟೀಚರ್ ಕೂಡಾ ಈ ಪ್ರಯೋಗಕ್ಕೆ ಮುಂದಾಗಿಲ್ಲ.


ಕ್ಲಾಸಿನ ಹಿಂದಿನ ಬೆಂಚಿನಲ್ಲಿ ಕುಳಿತಿದ್ದರೂ ನಾವು ಕಲಿಕೆಯಲ್ಲಿ ದಡ್ಡರೆನಿಸಿಕೊಂಡಿಲ್ಲ. ಈ ಕಾಲೇಜು ಲೈಫ್ ಮತ್ತೆಂದೂ ಸಿಗಲ್ಲ ಅದನ್ನು ಆದಷ್ಟು ಎಂಜಾಯ್ ಮಾಡಬೇಕು ಜೊತೆಗೆ ಕಲಿಕೆಯೂ ಮುಖ್ಯ ಆದ ಕಾರಣ ಎರಡನ್ನೂ ಸರಿತೂಗಿಸಿಕೊಂಡು ಹೋಗಬೇಕು ಎಂಬುದು ನಮ್ಮ ಯೋಜನೆಯಾಗಿತ್ತು. ನಾನಂತೂ ನನಗೆ ಬೋರು ಎಂದೆನಿಸಿದ ವಿಷಯಗಳನ್ನು ಪಾಠ ಮಾಡುತ್ತಿದ್ದರೆ ಕವಿತೆ ಕವನ ಏನಾದರೂ ಗೀಚುತ್ತಲೇ ಇರುತ್ತಿದ್ದೆ. ಇಲ್ಲವಾದರೆ ಕಣ್ಣು ತೆರೆದೇ ಯಾವುದೋ ಸ್ವಪ್ನ ಲೋಕದಲ್ಲಿ ವಿಹರಿಸುತ್ತಿದ್ದೆ. ಹಾಗೆ ಬರೆದ ಕವನಗಳೆಷ್ಟೋ ನಂತರ ಉತ್ತಮ ಪಡಿಸಿ ಕಾಲೇಜು ಭಿತ್ತಿಪತ್ರಿಕೆಯಲ್ಲಿ ಸ್ಥಾನ ಕಂಡುಕೊಂಡಿತ್ತು. ಆನಿಮೇಷನ್ ಕ್ಲಾಸಿನಲ್ಲಿ ಕನಸು ಕಾಣುತ್ತಾ ಬರೆದ ಆ ಕಥೆ ವರ್ಷ ಕಳೆದು ಪ್ರಕಟವಾದಾಗ ಜನರ ಮೆಚ್ಚುಗೆಯನ್ನು ಗಳಿಸಿತ್ತು. ಅದಿರಲಿ ಬಿಡಿ, ಇನ್ನು ಕ್ಲಾಸಿಗೆ ಟೀಚರ್ ಬರದೇ ಇರುವ ಸಂದರ್ಭ ಬಂದರೆ ಹೆಚ್ಚಿನ ವಿದ್ಯಾರ್ಥಿಗಳು ಆ ಸಬ್ಜೆಕ್ಟ್್ನ ಬಗ್ಗೆ ಚರ್ಚೆ ನಡೆಸುವುದೋ, ಓದುವುದೋ ಮಾಡುತ್ತಿದ್ದರು. ಆದರೆ ನಾವುಗಳು ಅಂತಾಕ್ಷರಿ ಆಡುತ್ತಾ ಇಲ್ಲವಾದರೆ ಸಿನಿಮಾ ಕಥೆಯೊಂದನ್ನು ಹೆಣೆಯುತ್ತಿದ್ದೆವು. ಅದು ಅಂತಿಂಥಾ ಡಬ್ಬಾ ಸಿನಿಮಾ ಕಥೆಯಲ್ಲ, ನಮ್ಮ ಚಿತ್ರದಲ್ಲಿ ಶಾರುಖ್, ಹೃತಿಕ್, ಮಮ್ಮುಟ್ಟಿ, ಮೋಹನ್್ಲಾಲ್ ಮೊದಲಾದವರೇ ಹೀರೋಗಳು, ನಾವೇ ಹೀರೋಯಿನ್್ಗಳು. ನಾವೇ ಪ್ರೊಡ್ಯೂಸರ್್ಗಳು, ಡೈರೆಕ್ಟರ್್ಗಳು ಎಲ್ಲಾ. ಇಂತಹಾ ಕ್ರಿಯೇಟಿವಿಟಿ ಐಡಿಯಾಗಳು ಹೊಳೆಯಬೇಕಾದರೆ ಲಾಸ್ಟ್ ಬೆಂಚೇ ಸೂಕ್ತವಾದ ಸ್ಥಳ. ನಾವು ತರ್ಲೆಗಳೆಂದು ನಮ್ಮನ್ನು ಯಾರೂ ದೂರುತ್ತಿರಲಿಲ್ಲ. ನಾವು ಮೂವರೂ  ಕ್ಲಾಸು ಬಂಕ್ ಮಾಡಿದ ದಿನ ಕ್ಲಾಸು ಭಣ ಭಣ ಅಂತಾ ಅನಿಸುತ್ತೆ, ಎಲ್ಲವೂ ಬೋರು ಬೋರು ಎಂದು ಕ್ಲಾಸಿನ ಬುದ್ಧಿಜೀವಿಗಳು ಹೇಳಿದ್ದು ನಮಗೆ ಸಿಕ್ಕಿದ ಕಾಂಪ್ಲಿಮೆಂಟು.


 ಅಂದ ಹಾಗೆ ನಾವು ಲಾಸ್ಟ್್ಬೆಂಚ್ ಮೆಂಬರ್ಸ್ ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ಈವಾಗ ಎಂಜಾಯ್ ಮಾಡಿ ಇಂಟರ್್ನಲ್ ಪರೀಕ್ಷೆ ಬಂದಾಗ ತಿಳಿಯುತ್ತೆ ಈ ಎಂಜಾಯ್್ಮೆಂಟಿನ ರಿಸಲ್ಟ್ ಎಂದು ಕೆಲವು ಟೀಚರ್್ಗಳು ಬೈಯ್ಯುತ್ತಿದ್ದರು. ಪರೀಕ್ಷೆ ಬಂದಾಗ ನಾವು ಹೇಗೋ ಕಷ್ಟ ಪಟ್ಟು ಕಲಿತು ನಮ್ಮ ಸ್ಥಾನ (ಮಾನ)ಉಳಿಸುತ್ತಿದ್ದೆವು. ಇದು ಮಾತ್ರವಲ್ಲದೆ ರಾಶಿ ರಾಶಿ ಅಸೈನ್್ಮೆಂಟ್್ಗಳು ಬೇರೆ. ಟೀಚರ್್ಗಳು ಏನೇ ಕೆಲಸ ಹೇಳಿದರೂ ಸರಿಯಾದ ಸಮಯಕ್ಕೆ ಅದನ್ನು ಮಾಡಿ ಮುಗಿಸುತ್ತಿದ್ದರಿಂದ ಸದ್ಯ ನಮ್ಮ ತರ್ಲೆಗಳ ಬಗ್ಗೆ ಮನೆಗೆ ದೂರು ಹೋಗುತ್ತಿರಲಿಲ್ಲ.. ನಾವು ಬಚಾವ್!. ಮೊದ ಮೊದಲು ನಾವು ಕ್ಲಾಸಿನಲ್ಲಿ ತರ್ಲೆ ಮಾಡಿದಾಗ ಸಿಕ್ಕಿ ಬಿದ್ದರೆ ಟೀಚರ್ ಮೊದಲು ಕೇಳುವ ಪ್ರಶ್ನೆ "ನೀನು ಮೆರಿಟ್ ಸೀಟಾ ಅಥವಾ ಪೇಮೆಂಟ್ ಸೀಟಾ? "ಮೆರಿಟ್ ಸೀಟ್ ಅಂದಾಗ 'ಓಕೆ ಸರಿ ಚೆನ್ನಾಗಿ ಕಲಿ' ಎಂದು ಹೇಳುತ್ತಾರೆ, ಪೇಮೆಂಟ್ ಅಂದ ಕೂಡಲೇ ನಿನಗೇನು ತಲೆ ಕೆಟ್ಟಿದಾ? ನಿನ್ನ ಅಪ್ಪ ಅಮ್ಮ ಅಷ್ಟೊಂದು ಹಣ ಖರ್ಚು ಮಾಡುವುದು ಸುಮ್ಮನೇನಾ? ಅಂತಾ ಬಾಯ್ತುಂಬ ಉಪದೇಶ ನೀಡುತ್ತಾರೆ. ಅಂತಿಮ ವರ್ಷ ತಲುಪಿದಾಗ ನಾವು ಏನು ಮಾಡಿದರೂ ಟೀಚರ್್ಗಳು ಯಾರೂ ಬೇಡ ಎನ್ನುತ್ತಿರಲಿಲ್ಲ. ಆದರೆ ಪ್ರೊಜೆಕ್ಟು, ಸೆಮಿನಾರು ಹೇಗೆ ಬ್ಯುಸಿಯಾಗಿರುವಾಗ ಹೆಚ್ಚಿನ ತುಂಟತನಗಳಿಗೆ ಸಮಯವೂ ಸಾಕಾಗುತ್ತಿರಲಿಲ್ಲ. ಅಂತೂ ಒಟ್ಟಿನಲ್ಲಿ ಆ ನಾಲ್ಕು ವರ್ಷಗಳು ಹೇಗೆ ಮುಗಿದವು ಅಂತಾ ಗೊತ್ತೇ ಆಗಲಿಲ್ಲ. ಕೊನೆಗೆ ಫೇರ್್ವೆಲ್ ಪಾರ್ಟಿ ಮುಗಿದು ಹಿಂತಿರುಗುವಾಗ ನಮ್ಮ ವಿಭಾಗದ ಮುಖ್ಯಸ್ಥರು ನಮ್ಮನ್ನು ಕರೆದು ಮಾತನಾಡಿಸಿ ನಿಮ್ಮ ಕ್ಲಾಸಿನ ಬಗ್ಗೆ ಚಿಂತಿಸುವಾಗ ಮೊದಲು ನನ್ನ ಮನಸ್ಸಲ್ಲಿ ಸುಳಿಯುವ ಚಿತ್ರ ನಿಮ್ಮದೇ 'Last bench Crakers...You Naughty Girls 'ಎಂದು ಹೇಳಿದಾಗ ಅದೆಷ್ಟು ಸಂತೋಷವಾಗಿತ್ತು ಗೊತ್ತಾ?

Rating
No votes yet

Comments