ಇವರ ಮೌನ ಕನ್ನಡಕ್ಕೆ ಒಳಿತು ...

ಇವರ ಮೌನ ಕನ್ನಡಕ್ಕೆ ಒಳಿತು ...

ಶಾಲೆಯಲ್ಲಿ ಹಾಡಿದ ಹಾದು ಈಗ ನೆನಪಿನಂಗಳದಲ್ಲಿ ಹಾಗೆ ಕಾಣಿಸಿಕೊಂಡಿತು. ಅದರ ಮೊದಲನೇ ಸಾಲು ಹೀಗಿದೆ - "ನುಡಿದರೆ ಮುತ್ತಿನ ಹಾರದಂತಿರಬೇಕು". ಇದರಲ್ಲಿ ಯಾರಿಗೂ ಅರ್ಥವಾಗದ, ವಿಶ್ಲೇಷಿಸಲಾಗದ, ಗಾಢವಾದ, ನಿಗೂಢವಾದ ಅರ್ಥವೇನೂ ಇಲ್ಲ. ಮುತ್ತಿನ ಹರಳು ನೋಡಲು ಸರಳ ಹಾಗೂ ಸೌಮ್ಯ. ಅಂತೆಯೇ ಕೇಳುವವರಿಗೂ ನಮ್ಮ ಮಾತು, ಅದರ ಪದಗಳು ಇರಬೇಕು ಎಂಬ ಅರ್ಥ ಅದರಲ್ಲಿದೆ.

ನಾವು ಬೆಳೆಸಿದಂತೆ ಭಾಷೆ ಮತ್ತು ಸಂಸ್ಕೃತಿ ಬೆಳೆಯುತ್ತವೆ. ಕುವೆಂಪುರವರನ್ನು ಶಬ್ದ ಟಂಕಸಾಲಿಯೆಂದು, ಬೇಂದ್ರೆಯವರನ್ನು ಶಬ್ದ ಗಾರುಡಿಗರೆಂದು ಕರೆಯುತ್ತೇವೆ. ಭಾಷೆಯ ಸೊಗಡನ್ನು ಪಸರಿಸಿದ ಮಹಾತ್ಮರಲ್ಲಿ ಅವರು ಇಬ್ಬರು. ವಿಶ್ವ ಲಿಪಿಗಳ ರಾಣಿ ಕನ್ನಡ ಎಂದು ಓದಿದ ನೆನಪು. ಹಲವು ಸಾವಿರ ವರ್ಷಗಳ ಪರಂಪರೆಯ ಭಾಷೆ ಹಾಗು ಸಂಸ್ಕೃತಿ ನಮ್ಮದು. ಉಳಿಸಿ ಬೆಳೆಸುವ ನೊಗಭಾರ ನಮ್ಮ ಮೇಲಿದೆ.

ಹೀಗಿರುವಾಗ, ನಮ್ಮ ಮಹಾನಗರಿಯಲ್ಲಿ ಈ ದಿನಗಳಲ್ಲಿ ಬಳಕೆಯಲ್ಲಿರುವ ಮಹಾ(ದುರ್)ಜನರ, ಅವಿವೇಕಿ ಯುವಜನರ ಕನ್ನಡ ಕೇಳಿ ಬಹಳ ವಿಷಾದವಾಗುತ್ತದೆ. ಸ್ವಾಮಿ, ಅಯ್ಯಾ, ಗೆಳೆಯ ಎಂಬ ಪ್ರಣಾಮಗಳು ಹೋದವು. ಈಗೇನಿದ್ದರೂ ಮಚ್ಚಾ, ಮಗ, ಸಿಸ್ಯರ ಕಾಲ. ಬೇಕಿತ್ತೆ ನಮಗಿದು? ಒಂದೆಡೆ ತನ್ನ ಸಾಮಾಜಿಕ ಜವಾಬ್ದಾರಿಯನ್ನು ತೊರೆದು ಮಚ್ಚು, ಲಾಂಗು, ದುರ್ಭಷೆ, ಅರೆನಗ್ನ ಸಂಸ್ಕೃತಿಯನ್ನು ಸಾರುತ್ತಿರುವ ಸಿನಿಮಾ,ಧಾರಾವಾಹಿ,ಜಾಹಿರಾತು ಮಾಧ್ಯಮಗಳು. ಇನ್ನೊಂದೆಡೆ ಅದನ್ನು ಸ್ವೀಕರಿಸುತ್ತಿರುವ ಮತಿಗೇಡಿ ಯುವಜನರು. ಇದಕ್ಕೆ ಕಾರಣ ನಮಲ್ಲಿರುವ ಸ್ವಂತ ಬುದ್ದಿಯ ಕೊರತೆ. ಪ್ರಜಾಪ್ರಭುತ್ವದಲ್ಲಿ ತಿಳಿಸಿ ಹೇಳುವವರೂ ಇಲ್ಲ. ಬಡಿದು ಹೇಳುವವರೂ ಇಲ್ಲ. ಇನ್ನು ಬುದ್ದಿ ಹೇಗೆ ವಿಕಸನಗೊಳ್ಳಬೇಕು ಹೇಳಿ.

ಇತ್ತೀಚಿನ ಸಿನಿಮಾ ಮಾಧ್ಯಮದಲ್ಲಿ ಸಾಮಾಜಿಕ, ಭಾಷಿಕ, ನೈತಿಕ ಮೌಲ್ಯಗಳನ್ನು ಕಳೆದುಕೊಂಡ ಜನರೇ ತುಂಬಿದ್ದಾರೆ ಎಂದು ಹೇಳಿದರೆ ಉತ್ಪ್ರೇಕ್ಷೆ ಆಗಲಾರದು. ಇಂತಹ ಮಾತೃಭಾಷಾನಾಶಕ ಮಾಧ್ಯಮಗಳನ್ನು ಬಹಿಷ್ಕರಿಸುವುದೇ ಲೇಸು. ಇತ್ತೀಚೆಗೆ ಸಿದ್ದಲಿಂಗಯ್ಯರವರು ರೇಡಿಯೋ ಚಾನಲ್ ಗಳ ವಿರುದ್ಧ ಭಾಷೆಯ ದುರ್ಬಳಕೆಯ ಕಾರಣವಾಗಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಅದನ್ನು ಸಿನಿಮಾ ಮಾಧ್ಯಮಕ್ಕೆ, ಜಾಹಿರಾತುಗಳಿಗೆ ವಿಸ್ತರಿಸ ಬೇಕಿತ್ತು. ನಮ್ಮ ಮಾನ್ಯ ಮುಖ್ಯಮಂತ್ರಿಗಳೂ ಸಿನಿಮಾ ಹಿನ್ನೆಲೆಯುಳ್ಳವರಲ್ಲವೆ. ಅವರು ಸ್ವಲ್ಪ ನೀತಿ ಪಾಠ ಹೇಳಲಿ.

ಇಂಥ ಮಾಧ್ಯಮದವರು ಕನ್ನಡವನ್ನು ಬೆಳೆಸದಿದ್ದರೂ ಪರವಾಗಿಲ್ಲ. ಇರುವಷ್ಟನ್ನು ಹಾಳು ಮಾಡದಿದ್ದರೆ ಸಾಕು ಕಣ್ರಿ. ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆ ಎಂದಾದರೂ ತಪ್ಪಾದೀತೇ? ಇವರುಗಳು ಮಾತನಾಡದಿದ್ದರೆ ಕನ್ನಡ ಉಳಿಯುತ್ತದೆ ಸ್ವಾಮಿ ....

ಇಂತೀ,

ಅನುಪ್ ಮಲೆನಾಡು

"ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು"

Rating
No votes yet

Comments